ಬಹಳ ದಿನಗಳಿಂದ ನನ್ನ ಮನದಲ್ಲೇ ಹುದುಗಿರುವ ನನ್ನ ಕಥೆಯನ್ನು ಅಲ್ಲಲ್ಲ ಪ್ರಮ ಕಥೆಯನ್ನು ನಿಮಗೆ ಹೇಳಲಿದ್ದೇನೆ.ಪ್ರೇ, ಪ್ರೀತಿ ಎಂದು ಯಾವ ಹುಡುಗಿಯ ಬೆನ್ನು ಹತ್ತದೆ ನನ್ನ ಪಾಡಿಗೆ ನಾನಿದ್ದರೂ ಈ ಪ್ರೇಮವೆಂಬುದು ನನ್ನನ್ನು ಕಾಡಿದ್ದು ಸುಳ್ಳಲ್ಲ.ಕೊಂಚ ದಿನಗಳ ಕಾಲವಾದರೂ ನನ್ನನ್ನು ಪ್ರೇಮಿಯಾಗಿಸಿ ಕಾಡಿತ್ತು ಈ ಪ್ರೀತಿ ಎಂಬ ಮಾಯೆ. ಆದರೆ
ನಾನಿಗ ಅಂದಿನ ಚೆಲುವ ಚೆನ್ನಿಗನೇನೂ ಅಲ್ಲ. ಬಾಲ್ಡಿಯಾಗಿ ಹತ್ತು ವಸಂತಗಳು ಕಳೆದಿವೆ. ಮೂಗಿನ ಮೇಲೆ ಕನ್ನಡಕ ಹತ್ತಿ ಕುಳಿತಿದೆ. ಕೆನ್ನೆಗಳಲ್ಲಿ ಅಷ್ಟು ಸುಕ್ಕುಗಳಿಲ್ಲವಾದರೂ ಹುಡುಗ ಎನ್ನಲಾದೀತೆ? ನನಗೀಗ ನಲವತ್ತೆಂಟು ವರುಷ. ಆದರೂ ಇನ್ನೂ ಸ್ಮಾರ್ಟ್ ಆಗಿ ಕಾಣುತ್ತೇನೆಂದು ನನ್ನ ಆಫೀಸಿನವರ ಗೆಳೆಯರ ಅಂಬೋಣ. ಇದು ಯಾಕೆ ನೆನಪಾಯಿತೆಂದರೆ ಮೊನ್ನೆ ಪ್ರೇಮಿಗಳ ದಿನದಂದು ನನ್ನ ಮಗನ ಪರದಾಟ ನೋಡಿ ನನಗೆ ಇದ್ದಕ್ಕಿದ್ದಂತೆ ನನಗೆ ಆ ದಿನಗಳು ನೆನಪಾದವು. ಒಮ್ಮೊಮ್ಮೆ ನಮಗೇ ತಿಳಿಯದೆ ಏನೇನೆಲ್ಲಾ ನಡೆದು ಹೋಗುತ್ತದೆಂದರೆ ನಮ್ಮ ಅರಿವಿಗೆ ಬಾರದಂತೆ ನಾವು ಫೂಲ್ ಆಗಿರುತ್ತೇವೆ. ಅದು ಅರಿವಾಗುವ ವೇಳೆಗೆ ಪ್ರೇಮದಲ್ಲಿ ಏನೇನೆಲ್ಲಾ ನಡೆದುಹೋಗುತ್ತದೆ ಗೊತ್ತೇ?. ನಾನು ಇಲ್ಲಿ ಕಥೆ ಹೇಳುತ್ತೇನೆಂದು ನೀವಂದುಕೊಂಡರೆ ಅದು ನಿಮ್ಮದೇ ತಪ್ಪು. ಬಹುಷಃ ನಿಮ್ಮಲ್ಲೂ ಇಂತಹ ಪ್ರಸಂಗವೇನಾದರೂ ನಡೆದಿದ್ದರೆ ಅದು ನನ್ನ ತಪ್ಪಲ್ಲ. ಇದೇನಪ್ಪಾ ಇದೂ, ವಿಷಯ ಎಲ್ಲಿಂದ ಎಲ್ಲಿಗೋ ಹೋಗುತ್ತಿದೆಯಲ್ಲಾ ಎಂದುಕೊಳ್ಳಬೇಡಿ. ಒಂದೊಂದು ಸಾರಿ ವಿಷಯವನ್ನು ತಿರುಚೀ ಮುರುಚೀ ಹೇಳ ಬೇಕಾಗುತ್ತೆ. ಇಲ್ಲೂ ಹಾಗೇ ಆಗಿದ್ದು .ಇದರಲ್ಲಿ ಪರೋಕ್ಷವಾಗಿ ನಾನೂ ನನ್ನ ಪ್ರೇಮ ಸೇರಿ ಹೋಗಿದ್ದೇವೆ. ಇದೆಲ್ಲಾ ನಡೆದು ಬಹಳ ದಿನವಾಗಿತ್ತಾದರೂ , ನನ್ನ ಚಿತ್ತದಿಂದಾಚೆಗೆ ಸರಿದು ಹೋಗಿದ್ದರೂ ಈಗ ಈ ಪ್ರೇಮಿಗಳ ದಿನದ ಸಂದರ್ಭದಲ್ಲಿ ಒಮ್ಮೆಲೇ ಧುತ್ತೆಂದು ನನ್ನೆದುರಿಗೆ ಪ್ರತ್ಯಕ್ಷವಾಗಿದೆ. ಈಗ ಮಾತ್ರ ನಮಗೆ ಹಿಂದಿನ ಆ ಮರೆತ ಕ್ಷಣಗಳು ನೆನಪಾಗುತ್ತವೆ. ಗತದಲ್ಲಿ ಸಂಭವಿಸಿದ್ದು ಇಲ್ಲವೆನ್ನಲು ಸಾಧ್ಯವಿಲ್ಲ ಅಲ್ಲವೇ?. ನನಗೂ ಅಷ್ಟೇ ಎಂದೋ ಕಂಡ ಒಂದು ಸುಂದರ ಕನಸು ಇದ್ದಕ್ಕಿದ್ದಂತೆ ನನ್ನ ಮುಂದೆ ಅನಾವರಣಗೊಳ್ಳುತ್ತಾ ಹೋಗುತ್ತಿರುವಂತೆ ಅನ್ನಿಸುತ್ತಿದೆ. "ಮಂದಾರವರಳಿ ಕಂಪು ಸೂಸಿ ಮೈ ಮನ ಪುಳಕ ಗೊಳಿಸುತ್ತಿದೆ. ಮಂದಾನಿಲ ಸುಳಿ ಸುಳಿದು ಸುತ್ತಿ ತಬ್ಬುವಂತೆ ಭಾವನೆಗಳ ಭಂಡಾರದ ಬಾಗಿಲು ತಂತಾನೆ ತೆರೆದುಕೊಳ್ಳುತ್ತಾ ಹೋಗುತ್ತಿದೆ. ಈಗ ನಾನು ನಿಮಗೆ ನನ್ನ ಮನದಾಳದಲ್ಲಿ ಹೆಪ್ಪುಗಟ್ಟಿ ಹೋಗಿದ್ದ ವಿಷಯವನ್ನು ನಾ ನಿಮಗೆ ತಿಳಿಸದಿರಲಾಗುವುದಿಲ್ಲ. ಇದುವರೆವಿಗೂ ಯಾರಲ್ಲೂ ಅಂದರೆ ನನ್ನ ಹೆಂಡತಿಗೂ ತಿಳಿಸಿಲ್ಲವಾದ ಒಂದು ಘಟನೆಯನ್ನಿ, ಇಲ್ಲಾ ಪ್ರಕರಣವೆನ್ನಿ, ಈಗ ನಿಮ್ಮ ಮುಂದೆ ತೆರೆದಿಡಲಿದ್ದೇನೆ. ನಲ್ಮೆಯ ಓದುಗರೆ ಕೆಲವೊಂದು ವಿಷಯವನ್ನು ನಿಮ್ಮ ಬಳಿ ಬಿಚ್ಚಿಕೊಳ್ಳುವಷ್ಟು ಸುಲಭವಾಗಿ ಬೇರೆ ಯಾರಲ್ಲೂ ಹೇಳಿಕೊಳ್ಳಲಾಗುವುದಿಲ್ಲ. ಅಷ್ಟೇಕೆ? ನನ್ನ ಅರ್ಧಾಂಗಿ ಎನಿಸಿಕೊಂಡ ನನ್ನವಳ ಬಳಿಯಲ್ಲೂ ಹೇಳಿಕೊಳ್ಳಲಾಗಿಲ್ಲ. ಮೊದಲೇ ನನ್ನಂತಹ ಇಂಟಲಿಜಂಟ್ ಪುರುಷನನ್ನು ಮಾತು ಮಾತಿಗೆ ಮೊದ್ದು, ಪೆದ್ದು, ಬೋಳೇನಾಥ ಎಂದೆಲ್ಲಾ ಅಂದು ಹಂಗಿಸುವಳು ಈ ವಿಷಯ ತಿಳಿದರೆ ಬಿಟ್ಟಾಳೆಯೇ ತನ್ನ ಮಗನಿಗೂ ಹೇಳಿ ಅವನು ನನ್ನತ್ತ ಆಗಾಗ ವ್ಯಂಗ್ಯ ನಗುವನ್ನೂ ನೋಟವನ್ನೂ ಎಸೆಯುವುದನ್ನು ಹೇಗೆ ಸಹಿಸಲಿ ಹೇಳಿ? ಹೀಗಾಗಿ ಆ ವಿಷಯ ನನ್ನ ಮನದಾಳದಲ್ಲೇ ಸ್ಥಿರವಾಗುಳಿದು ಬಿಟ್ಟಿದೆ. ಆದರಿದು ನಡೆದದ್ದು ಮಾತ್ರ ನನ್ನ ಕಣ್ಣ ಮುಂದೆಯೇ. ಹಾಂ, ಇಲ್ಲಿ ಒಬ್ಬ ಹೆಣ್ಣಿನ ಗೆಜ್ಜೆಯ ನಾದವಿದೆಯನ್ನುವಿರಾದರೆ ಹೌದು. ಅವಳಿಂದ ಹೊರಹೊಮ್ಮಿ ಸೂಸುವ ಗಂಧ ನಿಮ್ಮ ಮೂಗಿಗಡರುತ್ತಿದೆ ಎನನ್ನುವಿರಾದರೆ ಸ್ಚೈ. ಅವಳುಟ್ಟಿದ್ದ ಸೀರೆಯ ಸೆರಗಿನ ನವಿರು ನಿಮ್ಮನ್ನು ಸವರಿಕೊಂಡು ಹೋಯಿತೆನ್ನುವಿರಾದರೂ ಸತ್ಯ. .ಓ ಇಲ್ಲಿ ಒಬ್ಬ ಭಗ್ನ ಪ್ರೇಮಿಯ ಕಥೆ ಇದೆಯನನ್ನುವಿರಾದರೆ ಖಂಡಿತವಾಗಿಯೂ ಹËದು. ಅವಳ ಹೆಸರು ಏನಿರಬಹುದೆಂಬ ಶೆಂಕೆ ನಿಮಗೆ ಬೇಡ. ಅವಳಿಗೊಂದು ಸುಂದರವಾದ ಹೆಸರನ್ನು ನನ್ನಂತರಾಳದಲ್ಲಿ ಇದುವರೆವಿಗೂ ಭದ್ರವಾಗಿ ಕುಳಿತಿರುವ ಅವಳಿಗೆ ನಾನಾವತ್ತೋ ಇಟ್ಟಾಗಿದೆ." ಮೃದುಲ" ಚಂದವಾಗಿದೆಯಲ್ಲವೇ?
ಹೆಸರು.. ಅಂತಹ ಸುಕೋಮಲೆಗೆ ಆ ಹೆಸರು ಅನ್ವರ್ಥಕ ಎಂದು ನನ್ನ ನಂಬಿಕೆ. ಎತ್ತರದ ನಿಲುವಿನ, ಬಿಳಿದೋಳಿನ ಶಿಲಾಬಾಲಿಕೆ ಉದ್ದ ಜೆಡೆಯ ನೀಳವೇಣಿ, ಕೆಂಡಸಂಪಿಗೆಯ ಮೂಗವಳು, ಕೆಂದುಟಿಗಳ ಚೆಲುವೆ. ಒಟ್ಟಾರೆ ಸುರ ಸುಂದರಿ ಎನ್ನಲಡ್ಡಿಯಿಲ್ಲ. ನಾನೇ ಏನು? ನೀವೂ ಇದೆ ಸರಿಯನ್ನುವಿರಿ. ನನಗನ್ನಿಸುತ್ತೆ ಸುತ್ತೂ ಬಳಸು ಬಹಳಯಿತೆಂದು ಬೇಸರ ಬೇಡ. ನನ್ನ ನೆನಪಿನಾಳಕ್ಕೆ ಜಾರಿ ಅಲ್ಲಿರುವ ಅವಳ ನೆನಪುಗಳನ್ನು ಮೊಗೆ ಮೊಗೆದು ನಿಮ್ಮ ಮುಂದೆ ತರಬೇಕಾಗಿದೆ. ಇದು ತೊಂಭತ್ತರ ದಶಕದ ಮಾತು. ನಾನಾಗ ಕಾಲೇಜಿನ ಮೆಟ್ಟಲನ್ನು ಹತ್ತಿ ಕೊನೆಯ ವರ್ಷದಲ್ಲಿದ್ದವ. ಕಣ್ಣ ತುಂಬಾ ನೂರೆಂಟು ಕನಸುಗಳನ್ನು ಹೊತ್ತು ಕಾಲೇಜಿನ ಪುಂಡ ಭಂಡ ದಾದಾಗಿರಿಯ ಗ್ಯಾಂಗಿನಲ್ಲಿ ಒಬ್ಬ. ನಮಗೆ ಸರಿ ಸಾಟಿ ಯಾರಿಲ್ಲ ಎನ್ನುವಂಥವರ ಜಾತಿಗೇ ಸೇರಿದವ. ನೋಡದಾ ಸಿನಿಮಾಗಳಿಲ್ಲ.
ಆಡದಾ ಆಟಗಳಿಲ್ಲಾ. ಸುತ್ತದಾ ಬೀದಿಗಳಿಲ್ಲ. ಛೇಡಿಸದಾ ಹುಡುಗಿಯರಿಲ್ಲ. ಬಂಕು ಹೊಡೆಯದ ಕ್ಲಾಸುಗಳಿಲ್ಲ., ಹೆಸರಿಡದ ಮೇಡಮ್ಮು ಗಳಿಲ್ಲ. ರೈಡ್ ಹೊಡೆಯದ ಬೈಕು, ಸ್ಕೂಟರ್‍ಗಳಿಲ್ಲ. ಎಂಬ ದೊಡ್ಡ ನನ್ನಾಟದ ಲೀಸ್ಟ್ ನಿಮಗೊಪ್ಪಿಸಿದ ಮೇಲಷ್ಟೇ ನಾ ನಿಡಿದಾದ ನಿಟ್ಟುಸಿರು ಬಿಡಲು ಸಾಧ್ಯ. ಕೆಮಿಷ್ಟ್ರಿ ನಮಗೆ ನಿಜಕ್ಕೂ ಕಷ್ಟಾರಿ. ಫಿಜಿಕ್ಸ್ ಪಾಸಾಗಬೇಕಿದ್ದರೆ ಆಗಬೇಕು ಮ್ಯಾಜಿಕ್. ಮ್ಯಾತ್ಸ್ ಮಾತ್ರಾ ಬೆಷ್ಟ್. ಅದಕ್ಕೇ ನಾವು ಸದಾ ಕ್ಲಾಸಲ್ಲಿ ಫಸ್ಟ್. ಹೀಗಾಗಿ ಜೀವನವೆಂಬ ಪರೀಕ್ಷೆಯಲ್ಲಿ ನಾವು ಸೆಲೆಕ್ಟ್. ಆಗ ನಾವೇನೆ ಆಟವಾಡಿದ್ದರೂ ಈಗ ಮಾತ್ರ ನಮ್ಮ ಮಕ್ಕಳಿಗೆ ಕೊರಿತೀವಿ ದಿನಕ್ಕೊಂದು ಹೊಸಾ ಸಬ್ಜೆಕ್ಟ್ಸ್. ಬಿಡಿ ಅದೆಲ್ಲಾ ಯಾಕೀಗ? ಇದು ನಡೆದದ್ದು ನಾನು ಫೈನಲ್ ಇಯರ್ ನಲ್ಲಿದ್ದಾಗ. ಆಗ ನಾವಾಡಿದ್ದೇ ಆಟ. ಜೂನಿಯರ್ಸ್ ಗಳಿಗೆ ನಮ್ಮನ್ನು ಪ್ರಶ್ನಿಸುವ ಹಕ್ಕನ್ನು ನಾವೆಂದೂ ಕೊಟ್ಟಿರಲಿಲ್ಲ. ಓರಿಯಂಟೇಷನ್ ಹೆಸರಲ್ಲಿ ಅಲ್ಪ ಸ್ವಲ್ಪ ಕೆಣಕಾಟ ಅಷ್ಟೇ. ಆಗಷ್ಟೇ ನಮ್ಮ ಮೋಜು ಮಸ್ತಿಗೆ ರಂಗೇರುತ್ತಿದ್ದುದು. ನಂತರ ನಾವ್ಯಾರೋ ಅವರ್ಯಾರೋ. ಅಂದು ನ್ಯೂ ಕಮ್ಮರ್ಸ್ ಗಳಿಗಾಗಿ ವೆಲ್ ಕಮ್ ಪಾರ್ಟಿ ಇತ್ತು. ಹುಡುಗ ಹುಡುಗಿಯರೆಲ್ಲರೂ ಸಾಂಪ್ರದಾಯಿಕ ಉಡುಪಿನಲ್ಲಿ ನೆರೆದಿದ್ದರು. ಅಂದು ಅವರಿಗೆ ಬರಲೀ ಬಿಡಲೀ ಹಾಕಿದ ಹಾಡಿಗೆ ಸರಿಯಾಗಿ ಹೆಜ್ಜೆ ಹಾಕಲೇ ಬೇಕಿತ್ತು. ಯಾರೂ ಇಲ್ಲವೆನ್ನದೆ ಹಾಡಿಗೆ ಹೆಜ್ಜೆ ಹಾಕುತ್ತಲೇ ಇದ್ದರು. ಆದರೆ ಒಂದು ಮೂಲೆಯಲ್ಲಿ ಕುಳಿತು ತಲೇ ಬಗ್ಗಿಸಿಕೊಂಡು ಏನನ್ನೋ ಬರೆಯುತ್ತಿದ್ದ ಒಬ್ಬ ಹುಡುಗಿಯ ಮೇಲೆ ನಮ್ಮ ನಾಯಕ
ನಾದ ಸುಧೀಂದ್ರನ ಕಣ್ಣುಬಿದ್ದಿತ್ತು. ಅವಳೇಕೆ ಕುಣಿಯುತ್ತಿಲ್ಲಾ ಎಂದು ತಿಳಿಯಲು ಅವಳ ಬಳಿಗೆ ನಾವೆಲ್ಲಾ ಒಟ್ಟಿಗೇ ಹೋಗಿ ಅವಳ ಮುಂದೆ ನಿಂತಾಗ ಗಾಬರಿಗೊಂಡವಳು ತಲೆಯತ್ತಿದಾಗವಳ ಕೆಂಪಾದ ಕಣ್ಣುಗಳು ಅವಳು ತುಂಬಾ ಅತ್ತಿದ್ದಳೆಂದು ಸಾರಿ ಹೇಳೀದ್ದವೂ. ಅವಳನ್ನು ಸುಧಿ ಏನು ಬರೆಯುತ್ತಿರುವೆಯಂದು ಕೇಳಿದಾಗ ಏನೊಂದೂ ನುಡಿಯದೆ ಮೌನವಾಗಿ ತಾನು ಬರೆದ ಹಾಳೆಯನ್ನು ಅವನ ಕೈಗಿತ್ತಿದ್ದಳು. ಅದರಲ್ಲವಳು ನೂರು ಬಾರಿ ನನಗೆ ಡ್ಯಾನ್ಸ್ ಬರುವುದಿಲ್ಲಾ ಅದಕ್ಕಾಗಿ ನಾನು ಇಂಪೋಜೀಷನ್ ಬರೆಯುತ್ತಿರುವೆನೆಂದು ಬರೆದಿದ್ದಳು. ನಾವೆಲ್ಲಾ ಈ ರೀತಿ ಬರೆಯಲು ನಿನಗಾರು ಹೇಳಿದರೆಂದರೆ ಅವಳು ಬೆಟ್ಟು ಮಾಡಿ ತೋರಿಸಿದ್ದು ನನ್ನತ್ತ. ನನಗೋ ಶಾಕ್" ನಾನಾವಾಗ ಹೇಳಿದೆನಪ್ಪಾ ಇವಳಿಗೆ"? ಎಂದುಕೊಂಡು ಕೇಳಿದರೆ ಹರಿವ ಕಣ್ಣೀರ ಧಾರೆ. ನನ್ನ ಗೆಳೆಯರಿಗೆ ನಾನೆಷ್ಟೇ ಬಗೆಯಲ್ಲಿ ನಾನವಳಿಗೇನೂ ಹೇಳಿಲ್ಲವೆಂದರೂ ಯಾರೂ ನಂಬುತ್ತಿಲ್ಲ. ಎಲ್ಲರ ಪ್ರಶ್ನೆ ಒಂದೆ ಯಾರವಳು? ನಿನ್ನ ಕಸಿನ್? ನಿನ್ನ ಅತ್ತೆಯ ಮಗಳು ಫ್ರೆಂಡ್ ಎಂದೆಲ್ಲಾ ನೂರು ಪ್ರಶ್ನೆ ಕೇಳಿದರೂ ಸುಮ್ಮನೆ ಪೆಕರನಂತೆ ನಿಂತಿದ್ದ ನನ್ನನ್ನು ಬಿಟ್ಟು ಅವಳಿಗೆ ಈ ಪ್ರಶ್ನೆಗಳನ್ನು ಕೇಳಿದಾಗ ಅತ್ತೆಯ ಮಗನೇ ಎಂದಾಕ್ಷಣ ಅವಳು ಹೂಂ ಅಂದು ಬಿಡಬೇಕೆ? ನನಗಿದ್ದವಳು ಒಬ್ಬಳೇ ಅತ್ತೆ ಅವಳು ನನಪ್ಪನಿಗಿಂತ ಹಿರಿಯಳು ಮೇಲಾಗಿ ಅವಳಿಗೆ ಹೆಣ್ಣು ಮಕ್ಕಳೇ ಇಲ್ಲ ಅಂಥಾದ್ದರಲ್ಲಿ ಇವಳ್ಯಾವ ಅತ್ತೆಯ ಮಗಳೆಂದು ನಾ ತಲೆ ಕೆಡಿಸಿಕೊಂಡಿದ್ದರೆ ನನ್ನ ಗೆಳೆಯರೆಲ್ಲರೂ ಓ ಎಂದು ಕಿರಿಚುತ್ತಾ ನನ್ನ ಸುತಾ ್ತತಿರುಗುತ್ತಾ ನನ್ನನ್ನು ಛೇಡಿಸತೊಡಗಿದರೂ ನಾನು ಏನೇ ಹೇಳೀದರೂ ಇವರು ನಂಬಲಾರರೆನಿಸಿ ನಾನೂ ಸುಮ್ಮನಾಗಿದ್ದೆ. ಅವಳು ಮಾಡುವುದೆಲ್ಲಾ ಮಾಡಿ "ಉಮ್ಮೇ ಮಳ್ಳಿ ಊರೆಲ್ಲಾ ಕೆಡೆಸಿತು" ಎಂಬಂತೆ ಮುಗುದೆಯಂತೆ ಕುಳಿತು ನನ್ನನ್ನೇ ನೋಡುತ್ತಿದ್ದಳು. ಅವಳುಟ್ಟಿದ್ದ ಗುಲಾಬಿ ಬಣ್ಣದ ಸೀರೆಗೆ ಅವಳ ಮೊಗವೂ ಮ್ಯಾಚ್ ಆಗಿ ಒಂದು ಕ್ಷಣ ಅವಳ ಸೌಂದರ್ಯಕ್ಕೆ ನಾನು ಫಿದಾ ಆಗಿದ್ದಂತೂ ನಿಜ. ಇಂಥ ಚೆಂದದ ಹುಡುಗಿ ತಾನಾಗೇ ಒಲಿದು ಬಂದಿರುವಾಗ ಬೇಡವೆನ್ನಲು ನಾನೇನು ಮೂರ್ಖನೇ ಎಂದು ಅವಳತ್ತ ಕುಡಿ ನೋಟ ಬೀರಲೂ ಪುಕ್ಕಲು ಮನಸಿಗೆ ಭಯವಾಗಿ ಕಡೆಗಣ್ಣಿನಿಂದ ನೋಡಿದರೆ ಅವಳು ಏನೂ ನಡೆದಿಲ್ಲವೇನೋ ಎಂಬಂತೆ ಸೀರೆಯ ಸೆರಗು ಬೀಸುತ್ತಾ ಹೈಹೀಲ್ಡ್ ಸ್ಯಾಂಡಲ್ಸ್ ಟಕ್ ಟಕ್ ಎಂದು ಸದ್ದು ಮಾಡುತ್ತಾ ಹೊರಟು ಹೋದಾಗ ನನ್ನೆದೆಯ ಮೇಲೇ ಅವಳು ನಡೆದು ಹೋದಂತ ನೋವಾಗಿತ್ತು. ಒಂದು ಕಡೆ ಅವಳ ಕಪಾಳಕ್ಕೆ ಬಾರಿಸುವ ಸಿಟ್ಟು ಬಂದರೂ ಏನೂ ಮಾಡಲಾರದವನಾಗಿದ್ದೆ. ಗೆಳೆಯರು ನನ್ನನ್ನು ಪೀಡಿಸುತ್ತಲೇ ಇದ್ದರು. "ನಿಜಾ ಹೇಳು. ಅವಳಾರು? ನನ್ನ ಸಂಬಂಧಿಯೇ? ನಿಜಕ್ಕೂ ನಿನ್ನತ್ತೆಯ ಮಗಳೇ ಲವ್ವರ್ರೇ? ಅಥವ ನಿನ್ನಾ ಅವಳಾ ಮದುವೆ ಏನಾದರೂ ಫಿಕ್ಸ್ ಆಗಿದೆಯೇ? ಕಳ್ಳ ಎಲ್ಲಾ ಒಳಗೊಳಗೇ ನಡೆಸಿದ್ದೀಯ ಇಷ್ಟು ದಿನ ಯಾವೂರಿನಲ್ಲಿದ್ಲು? ಈ ಕೊನೇ ವರ್ಷ ಇಲ್ಲಿಗ್ಯಾಕೆ ಬಂದಿದ್ದೂ ಅದೂ ಈ ಕಾಲೇಜಿಗೇ ಸೇರಿದ್ದು ನಮಗೆ ಗೊತ್ತು ನನ್ನ ಮಗ ಎಲ್ಲಾ ಒಳಗೊಳಗೆ ಮಾಡ್ಬಿಟ್ಟು ಮಳ್ಳಿ ಹಾಗೆ ಇದ್ಬಿಟ್ಟಿದ್ದಾನೆ." ಎಂಬ ಅವರ ಆ ಸಿಲ್ಲಿ ಪ್ರಶ್ನೆಗಳಿಗೇ ಉತ್ತರವಿತ್ತೆ ನನ್ನ ಬಳೀ? ನಾನೇನೂ ಹೇಳದೆ ಸುಮ್ಮನಾದಾಗ ಅವಳೂ
ಸಹಾ ಏನೂ ನಡೆದೇ ಇಲ್ಲವೇನೋ ಎಂಬಂತೆ ಅವಳು ಸುಮ್ಮನಾಗಿ ಬಿಟ್ಟಿದ್ದಳು. ಇದು ಸಾಲದೆಂಬಂತೆ ನಮ್ಮ ಕಾಲೇಜಿನ ಆಕಾಶವಾಣಿ ಎಂದೇ ಬಿರುದಾಂಕಿತಳಾಗಿದ್ದ ಕನಕವಲ್ಲಿ ನಮ್ಮಿಬ್ಬರ ಬಗ್ಗೆ ಅದ್ಯಾವಾಗ ಕನಸು ಕಂಡಿದ್ದಳೋ ,ಇಲ್ಲಾ ಊಹಿಸಿಕೊಂಡೇ ಹೇಳೀದ್ದಳೋ ನಾನೂ ಹಾಗೂ ಮೃದುಲ ಒಂದೇ ಊರಿನವರೆಂದೂÀ ನಮ್ಮಿಬ್ಬರ ಮದುವೆ ಫಿಕ್ಸ್ ಆಗಿದೆ ಎಂದೂ ಇಡೀ ಕಾಲೇಜಿಗೇ ಟಾಂ ಟಾಂ ಹೊಡೆದಿದ್ದಳು. ನಾನಂತೂ ನಾಚಿಕೆಯಿಂದ ಕುಗ್ಗಿ ಹೋಗಿದ್ದೆ. ಆದರೆ ಮೃದುಲ ಮಾತ್ರಾ ಇದಕ್ಕೂ ತನಗೂ ಸಂಬಂಧವೇ ಇಲ್ಲವೆಂಬಂತೆ ನಾಚಿಕೊಂಡವಳಂತೆ ನಟಿಸುತ್ತಾ ಮೌನವಾಗಿದ್ದು ದಿನಕ್ಕೊಂದು ಬಗೆಯ ಅಲಂಕಾರ ಮಾಡಿಕೊಂಡು ಬಂದು ನನ್ನೆದೆಗೆ ತನ್ನ ಕುಡಿ ನೋಟದ ಬಾಣಗಳಿಂದ ಚುಚ್ಚುತ್ತಾ ಕನಕವಲ್ಲಿಯ ಮಾತನ್ನು ನಿಜವಾಗಿಸಿದ್ದಳು. ನಾನು ಇಡೀ ದಿನ ಅವಳ ನೆನಪಲ್ಲಿ ಅವಳ ಗುಂಗಿನಲ್ಲಿ ಅವಳನ್ನು ಆರಾಧಿಸುತ್ತಾ ತಾನಾಗಿ ಒಲಿದು ಬಂದಿದ್ದ ಚೆಲುವೆಗೆ ಮನ ಸೋತು ಮೈಮರೆಯುತ್ತಿದ್ದೆ. ನಮ್ಮ ಗ್ಯಾಂಗ್ ದಾದಾಗಿರಿಯಲ್ಲಿ ಎತ್ತಿದ ಕೈ ಅವರು ಛೇಡಿಸದೆ ಬಿಟ್ಟ ಹುಡುಗಿಂiÀiರಾರೂ ಇಲ್ಲವೆನ್ನ ಬೇಕು. ಕಪ್ಪಗಿದ್ದರೇನಂತೆ ಶಿಲಾಬಾಲಿಕೆ ಕಪ್ಪು ಕಲ್ಲಿನವಳೇ ಎಂದು ಯಾರೊಬ್ಬ ಹುಡುಗಿಯನ್ನೂ ಚುಡಾಯಿಸದೆ ಬಿಡುತ್ತಿರಲಿಲ್ಲವಾದ ನಮ್ಮ ಗ್ಯಾಂಗ್ ಇವಳ ಸುದ್ದಿಗೆ ಹೋಗದೆ ಅವಳಿಗೆ ಕೊಂಚ ಗೌರವವನ್ನೇ ಕೊಟ್ಟಿದ್ದರು. ಅದಲ್ಲದೆ ಅವಳು ನನಗೆ ಮೀಸಲೆಂದು ತಿಳಿದೋ ಏನೋ ಯಾರೊಬ್ಬರೂ ಅವಳ ಸುದ್ದಿಗೆ ಹೋಗದೆ ಅವಳು ನಿರಾತಂಕಳಾಗಿದ್ದಳೆಂಬ ವಿಷಯ ನನಗೆ ತಿಳಿದಿದ್ದು ಬಲು ತಡವಾಗಿ. ನಮ್ಮ ಗ್ಯಾಂಗ್ ಲೀಡರ್ ಸುಧಿಯಿಂದಾಗಿ ನಾನೂ ಬಲು ಧೈರ್ಯವಂತನೆಂದೇ ಎಲ್ಲಾ ತಿಳಿದಿದ್ದರೇನೋ ಆದರೆ, ನಾನೆಂತಹ ಪುಕ್ಕಲ ಎಂದು ನನಗೊಬ್ಬನಿಗೇ ಗೊತ್ತಿದ್ದಿದ್ದು. ಇಡೀ ಕಾಲೇಜಿಗೇ ಮೃದುಲ ನನ್ನವಳೆಂಬ ವಿಷಯ ಜಗಜಾಹೀರಾಗಿದ್ದರೂ, ನನ್ನ ಗೆಳೆಯರು ಅವಳನ್ನೂ
ಎಲ್ಲಾದರೂ ಕರೆದೊಯ್ಯಿ ಎಂದು ಒಬ್ಬೊಬ್ಬನೂ ಹತ್ತು ಹಲವು ಸಲಹೆಗಳನ್ನಿತ್ತಿದ್ದರೂ ನಾನು ಅವಳನ್ನು ಹೊರಗೆ ಕರೆದೊಯ್ಯುವುದು ಹಾಗಿರಲೀ ಅವಳನ್ನು ಸಂಧಿಸಿ ಮಾತನಾಡಿಸುವ ಧೈರ್ಯವೂ ನನಗಿರಲಿಲ್ಲವೆಂದು ನನಗೊಬ್ಬನಿಗೇ ತಿಳಿದ ಘೋರ ಸತ್ಯವಾಗಿತ್ತು. ಬರೆ ದೂರದಿಂದ ಮಾತ್ರ ಅವಳನ್ನು ಕಣ್ತುಂಬಾ ನೋಡಲು ಸಾಧ್ಯವಾಗುತ್ತಿತ್ತಷ್ಟೇ? ಅವಳ ದಿನಕ್ಕೊಂದು ಬಗೆಯ ಅಲಂಕಾರ ಅವಳ ಸುಂದರ ಮುಗುಳುನಗು ನನ್ನ ಮನದಾಳದ ಬಯಕೆಯನ್ನು ಬಡಿದೆಬ್ಬಿಸುತ್ತಿದ್ದರೂ ನಾನು ಅಸಹಾಯಕ ಮಾತ್ರನಾಗಿದ್ದೆ. ಆದರೆ ಅವಳು ಮಾತ್ರ ಮೌನವಾಗಿಯೇ ನನ್ನತ್ತ ಒಂದು ಸುಂದರ ನಗು ಬೀರಿ ಹೊರಟು ಹೋಗುವಾಗ ನನ್ನ ಹೃದಯ ಮೌನವಾಗಿ ರೋಧಿಸುತ್ತಿದ್ದುದು ನನಗೆ ಮಾತ್ರ ತಿಳಿದಿತ್ತು. ಅಂದರೆ ನೀವು ನಂಬಲೇ ಬೇಕು. ಅದು ಬಿಡಿ, ದಿನಗಳು ಯಾರಪ್ಪನದೂ ಅಲ್ಲವಲ್ಲ? ಅವು ನಮ್ಮ ಗಮನಕ್ಕೇ ಬಾರದಂತೆ ಸರಿದು ಹೋಗಿದ್ದವು. ವರುಷ ಕಳೆದು ನಮ್ಮ ಪರಿಕ್ಷೆಗಳೂ ಮುಗಿಯುತ್ತಿದ್ದಂತೆ ಎಲ್ಲಾ ವಿಧ್ಯಾರ್ಥಿಗಳೂ ಚದುರಿ ಹೊಗಿದ್ದರು. ನನ್ನ ಮನಸಿನ ಮೃದು ಭಾವನೆಗಳನ್ನು ತಟ್ಟಿ ಎಬ್ಬಿಸಿದ್ದ ಮೃದುಲಾ ಪಾಸಾಗಿದ್ದಳೋ, ಫೇಲಾಗಿದ್ದಳೊ ಗೊತ್ತಿಲ್ಲಾ ನಾನಂತೂ
ಮೊದಲ ದರ್ಜೆಯಲ್ಲಿ ಪಾಸಾಗಿದ್ದೆ. ಎಲ್ಲಾ ಗೆಳೆಯ ಗೆಳತಿಯರು ಒಂದೆಡೆ ಸೇರಿ ಪಾರ್ಟೀ ಮಾಡಿ ಮಜಾ ಉಡಾಯಿಸಿದಾಗಲೂ ಎಲ್ಲರಿಂದ ನನಗೆ ಬರೇ ಪ್ರಶ್ನೆಗಳ ಸುರಿಮಳೆ ಅವಳನ್ನೇಕೆ ನೀ ಕರೆತರಲಿಲ್ಲಾ? ಈಗಿನಿಂದಲೇ ಅವಳ ಮೇಲೆ ಹಕ್ಕು ಚಲಾಯಿಸಲಾರಂಭಿಸಿದೆಯೋ ಹೇಗೆ? ಎಂದೆಲ್ಲಾ ಅವರು ಕೇಳೀದಾಗ ಬರೇ ನಗುವೊಂದೇ ನನ್ನ ಉತ್ತರವಾಗಿತ್ತು. ಅವಳಿಗೂ ನನಗೂ ಯಾವ ಸಂಬಂಧವೂ ಇಲ್ಲ ಕಣ್ರೋ ಎಂದು ಕೂಗಿ ಹೇಳಬೇಕೆನ್ನಿಸಿದರೂ ಯಾಕೋ ಗಂಟಲಿಂದ
ಸ್ವರವೇ ಬಾರದೇ ಮನಸ್ಸಿಗೆ ಪಿಚ್ಚೆನಿಸಿತ್ತು. ಆದರೂ ಮನಸ್ಸು ಮೌನವಾಗಿ ರೋಧಿಸುತ್ತಲೇ ಇತ್ತು. ಪುನಃ ಅವಳನ್ನು ಮನಸೋ ಇಚ್ಚೆ ನೋಡಲಾಗುವುದಿಲ್ಲವಲ್ಲಾ ಎಂಬುದೇ ಅದರ ಅಳಲಾಗಿತ್ತು. ನಂತರದ ದಿನಗಳು ನಿರಸದಿಂದಲೇ ಕಳೆದಿದ್ದವು. ನಾನು ಬ್ಯಾಂಕಿಂಗ್ ಎಕ್ಸಾಂ ನಲ್ಲಿ ಪಾಸಾಗಿ ಹಾಸನಕ್ಕೆ ಪೋಸ್ಟಿಂಗ್ ಆಗಿ ಬಂದ ನಂತರ ಮೃದುಲಳ ನೆನಪು ನನಗೆ ಆಗಾಗ ಕಾಡಿಸಿ ಬಳಲಿಸಿ ರಾತ್ರಿಗಳ ನಿದ್ದೆ ಕೆಡಿಸಿ ಬೆಂಡಾಗಿಸಿದ್ದಂತೂ ನಿಜ. ಅವಳು ಮುಂದೆ ಓದುತ್ತಿದ್ದಾಳೆಯೋ? ಕೆಲಸದಲ್ಲಿದ್ದಾಳೆಯೋ ಎಂಬ ಒಂದು ಸಣ್ಣ ಕುತೂಹಲವೂ ನಿನಗಿರಲಿಲ್ಲವೇ? ಅದೆಂಥಹ ಲವ್ ನಿನ್ನದು? ಎಂದು ನೀವು ಇಲ್ಲಿ ಒಂದು ಪ್ರಶ್ನೆ ಎತ್ತುವಿರೆಂಬುದು ನನಗೆ ತಿಳಿದಿದೆ. ಆದರೆ ನಾನು ಅದೆಷ್ಟು ಅಸಹಾಯಕನಾಗಿದ್ದೆನೆಂಬುದನ್ನೂ ನೀವಿಲ್ಲಿ ತಿಳಿದಿರಬೇಕಲ್ಲವೇ? ಅವಳ ನನ್ನ ಮದುವೆ ಸೆಟ್ಟಾಗಿದೆ ಎಂಬ ವಿಷಯ ಎಲ್ಲರಿಗೂ ತಿಳಿದದ್ದೇ. ಹಾಗಿರುವಾಗ ನಾನು ಅವಳ ಬಗ್ಗೆ ಯಾರಲ್ಲಿ ವಿಚಾರಿಸಲಿ ನೀವೇ ಹೇಳಿ? ಹಾಗಾಗಿ ಮನಸಿನರಮನೆಯಲ್ಲಿ ನನ್ನ ಮೃದುಲಾಳನ್ನು ಭದ್ರವಾಗಿ ಕೂಡಿಸಿ ಮನಸಲ್ಲೇ ಆರಾದಿಸಲು ಮಾತ್ರ ಸಾಧ್ಯವಾಗಿತ್ತು. ಇರಲಿ ಮುಂದಿನ ಇಂಟ್ರೆಸ್ಟಿಂಗ್ ವಿಷಯ ಕೇಳಿದ್ರೆ ನಿಮ್ಮ ಕಾಲ ಕೆಳಗಿನ ಭೂಮಿ ಕುಸಿಯುವುದಂತೂ ಸತ್ಯ.
ನಾನೊಬ್ಬ ಶತ ದಡ್ಡ, ಶತ ಮೂರ್ಖ, ಬಲು ದೊಡ್ಡ ಫೂಲ್, ಈಡಿಯಟ್ ಎಂದೆಲ್ಲಾ ನನಗೆ ಗೊತ್ತಾಗಿದ್ದು ಅವಳ ಮದುವೆಯಲ್ಲಿ ಅವಳನ್ನು ವರಿಸುವ ಗಂಡು ನಮ್ಮ ಮ್ಯಾತ್ಸ್ ಲೆಕ್ಚರರ್ ಕೇಶವ್ ಎಂಬುದು ತಿಳಿದು ಮನಸಿಗೆ ಬಲು ದೊಡ್ಡ ಆಘಾತವಾಗಿತ್ತು. ತಲೆ ಹಿಡಿದು ನೆಲಕ್ಕೆ ಕುಸಿದಿದ್ದೆ. ಈ ಶಾಖದ ಬಿಸಿ ನನಗೊಬ್ಬನಿಗೇ ಅಲ್ಲಾ ನಮ್ಮ ಗುಂಪಿನವರೆಲ್ಲರಿಗೂ ತಟ್ಟಿತ್ತು. ಯಾರು ಏನೇಂದು ಕೊಂಡರೋ? ಏನು ತಿಳಿದರೋ ಎಲ್ಲರ ಮೊಗದಲ್ಲೂ ಪೆಚ್ಚು ಕಳೆ. "ಮಾಯಾಂಗಿ ಎಂತಹ ನಾಟಕ ಆಡಿದ್ಲೋ ಮಾರಾಯ" ಎಂದು ಒಬ್ಬನೆಂದರೆ "ಬಲು ಕಿಲಾಡಿ ಕಣೋ ಆ ಮಾಸ್ತರು ಎಂಥಾ ಚೆನ್ನಾಗಿ ನಮ್ಮನ್ನೆಲ್ಲಾ ಫೂಲ್ ಮಾಡ್ದ. ಎಲ್ಲೋ ಅವನು ಯಾರೂ ಅವಳ ತಂಟೆಗೆ ಹೋಗದಿರಲಿ ಅಂತ ಅವನು ಮಾಡಿದ ಪ್ಲಾನ್ ಕಣ್ರೋ ಪಾಪ ಇದಕ್ಕೆಲ್ಲಾ ನಮ್ಮ ರಾಜೀವನೇ ಬೇಕಿತ್ತಾ ಪಾಪ ಅವನು ಎಷ್ಟು ಕನಸು ಕಂಡಿದ್ನೋ ಏನೋ ಅದಕ್ಕೆ ನಾವೆಲ್ಲಾ ಅವಳ ಬಗ್ಗೆ ಕೇಳಿದ್ರೆ ಏನು ಹೇಳ್ದೆ ಮಾತು ಮರೆಸತಿದ್ದ," "ಅದಿರಲಿ ನಮ್ಮಲ್ಲಿ ಯಾರನ್ನೂ ಆರಿಸಿಕೊಳ್ಳದೆ ತನ್ನ ಕ್ಲಾಸ್ನಲ್ಲಿ ಫಸ್ಟ್ ಬರುತ್ತಿದ್ದ ರಾಜೀವನೇ ಸರಿ ಅಂದ್ಕೊಂಡಿರಬೇಕು" ಅಂತೆಲ್ಲಾ ಒಬ್ಬೊಬ್ಬರು ಒಂದೊಂದು ಮಾತು ಆಡುತ್ತಿದ್ದರೆ ನನಗೆ ಬರುತ್ತಿದ್ದ ಸಿಟ್ಟಲ್ಲಿ ಒಬ್ಬೊಬ್ಬನ್ನೂ ಎಲ್ಲಕ್ಕಿಂತ ಮೊದಲು ಆ ಕೇಶವ್ ಸಾರ್ ನನ್ನು ಎ. ಕೆ. ಫಾರ್ಟಿಸೆವೆನ್ ತಗೊಂಡು ಶೂಟ್ ಮಾಡಬೇಕೆನಿಸಿದರೂ ಅಸಹಾಯಕನಾಗಿ ಬಡವನ ಕೋಪ ದವಡೆಗೆ ಮೂಲ ಎಂಬಂತೆ ಯಾರ ಮಾತೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಸದ್ಯ ಯಾರೂ ನನಗೆ ಏನೊಂದು ಪ್ರಶ್ನೆಯನ್ನೂ ಕೇಳಿರಲಿಲ್ಲ ಬಿಡಿ.
ಆದ್ರೆ ಅವರ ಮರುಕ ಹುಟ್ಟಿಸುವ ನೋಟ ನನಗೆ ಆ ಕ್ಷಣಕ್ಕೆ ಅಲ್ಲೇ ನೇಣು ಹಾಕಿಕೊಳ್ಳಲೇ ಎನಿಸಿದ್ದು ಸುಳ್ಳಲ್ಲ. ಈ ಪ್ರಸಂಗವನ್ನು ಯಾರು ಹೇಗೆ ಅರ್ಥೈಸಿಕೊಂಡರೋ ಗೊತ್ತಿಲ್ಲ. ಬಹುಷಃ ನಮ್ಮ ಗುಂಪು ಹುಡುಗಿಯರನ್ನು ಚುಡಾ
ಇಸುವುದರಲ್ಲೀ ಪಟಾಯಿಸುವುದರಲ್ಲಿ ಉಸ್ತಾದರು. ನಾನಲ್ಲಾ ಅಷ್ಟು ಧೈರ್ಯ ನನಗೆಲ್ಲಿಯದು? ನಮ್ಮೆಲ್ಲರ ಲೀಡರೆನ್ನಿಸಿಕೊಂಡ ಸುಧೀಂದ್ರನಿಂದ ತನ್ನ ಹುಡುಗಿಯನ್ನು ಬಚಾವ್ ಮಾಡಲೆಂದು ಆ ಕಳ್ಳ ನನ್ ಮಗ ಕೇಶವ್ ಮಾಸ್ತರನ ಪ್ಲಾನಾಗಿದ್ದಿರಬಹುದೇನೋ ಎಂಬುದು ನನ್ನ ಊಹೆ ಅಷ್ಟೆ. ನೀವು ಬೇಕಾದರೇ ನಿಮ್ಮ ಕಲ್ಪನೆಗೆ ಬಂದಿದ್ದನ್ನೇ ಊಹಿಸಿಕೊಳ್ಳೀ ನಾ ಬೇಡವೆನ್ನಲಾರೆ.
ಈಗದು ನನ್ನ ಮನಸಿನೊಳಗೇ ಹುದುಗಿ ಹೋದ ವಿಷಯ. ಮೃದುಲಳಂತೆ ನನ್ನವಳೂ ಸುಕೋಮಲೆಯೂ ಅಲ್ಲಾ, ಸುರ ಸುಂದರಿಯೂ ಅಲ್ಲ. ಆದರೆ ಅವಳು ಸಹಜ ಸುಂದರಿ. ನನ್ನ ಮನದಾಳದಿಂದ ಪ್ರೀತಿಸುವ, ಕಾಳಜೀ ತೋರುವ, ನನ್ನ ಮನಸನರಿತು ನಡೆವ, ಪುಟ್ಟ ಹುಡುಗಿಯಂತೆ ಛೆಡಿಸಿ ಕಾಡುವ, ಮಳೆ ಬಂದರೆ ನನ್ನನ್ನೂ ಎಳೆದುಕೊಂಡು ಮಳೆ ನೀರಲ್ಲಿ ಆಟವಾಡುವ ಚಾಂದಿನಿ. ನನ್ನ ಅಪ್ಪ ಅಮ್ಮನನ್ನೂ ಪ್ರೀತಿಯಿಂದ ಕಾಣುವ, ಆದರಿಸುವ, ಕೊಂಕು ನುಡಿದು ಕಾಡುವ ಕೋಗಿಲೆಯ ಕಂಠದ ಚತುರೆ "ನನ್ನವಳು, ನನ್ನೆದೆಯ ಹೊನ್ನಾಡನಾಳುವಳು ಬೆಡಗೂಗೆನ್ನೇ ಚಲುವಿ ನನ್ನಾ ಹುಡುಗಿ"
ಎಂಬುದಂತು ಅಕ್ಷರ ಸಹ ಸತ್ಯ. ಆದರೂ ನನ್ನ ಮನಸಿನಾಳದ ಮೃದುಲ ಒಮ್ಮೊಮ್ಮೆ ಧುತ್ತೆಂದು ನನ್ನ ಮುಂದೆ
ನಿಲುಕದ ನಕ್ಷತ್ರವಾಗಿ ನಿಲ್ಲುವುದೂ ಅಪ್ಪಟ ಸತ್ಯವೇ ಹೌದು. ವರ್ಷಗಳ ಹಿಂದೆ ಆ ಸಲ್ಮಾನ್ ಖಾನನ "ಬಾಡೀಗಾರ್ಡ್"
ಸಿನಿಮಾ ನೋಡಿದಾಗ ನಾನು ಮನಸಿನಲ್ಲಿ ಖುಶಿ ಪಟ್ಟು ಅಂದುಕೊಂಡದ್ದಿಷ್ಟೇ, ಬರೇ ಒಂದೇ ವರುಷದ ಮಟ್ಟಿಗಾದರೂ ಸರಿ
ಒಬ್ಬ ಸುಂದರ ಹುಡುಗಿಯ ಅನಫೀಷಿಯಲ್ ಬಾಡೀಗಾರ್ಡ ನಾನಾಗಿದ್ದೆ ಎಂದು. ಇದು ನನ್ನ ಅಂಬೋಣ. ಇಂತಹ ಕೆಟ್ಟ ಅನುಭವ ನಿಮಗಾಗಿರಲು ಸಾದ್ಯವಿಲ್ಲ ಬಿಡಿ. ನೀವು ನನ್ನಂತೆ ಪುಕ್ಕಲರಲ್ಲ. ಅಂತ ಅಂದ್ಕೊಂಡಿದ್ದೀನಿ. ಏನಾದರಾಗಲಿ ನಿಮ್ಮ
ಅನಿಸಿಕೆ ಅಭಿಪ್ರಾಯಗಳನ್ನು ಖಂಡಿತವಾಗಿಯೂ ನನಗೆ ಬರೆದು ತಿಳಿಸುತ್ತೀರೆಂದು ನಾ ನಂಬಬಹುದೇ?

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.