ಮತ್ತೆ ನಿನ್ನ ಪ್ರೀತಿಯಲ್ಲಿ ಕಳೆದು ಹೋಗಬೇಕಾಗಿದೆ. ಪ್ರೀತಿ ಎಲ್ಲಿ ಹೇಗೆ ಹುಟ್ಟುತ್ತೋ ತಿಳಿಯಲಿಲ್ಲ ಆದರೆ ನನಗಂತೂ ಪ್ರೀತಿ ಆಗಿಹೋಗಿದೆ. ನಾನವನನ್ನ ತುಂಬಾ ಇಷ್ಟ ಪಡ್ತೇನೆ.ಅವನು ಒಂದಿನ ಕಣ್ಣ ಮುಂದೆ ಕಾಣದಿದ್ರೆ ಜೀವಾನೇ ಹೊರಟೋದ ಹಾಗನ್ಸುತ್ತೆ.ಅಂತ ನನ್ನ ಗೆಳತಿ ಹೇಳುತ್ತಾ ಅಳುವಾಗ ನನಗೆ ಏನಪ್ಪಾ ಈ ಥರದ ಹುಚ್ಚಾ... ಮಾಡೋಕೇನೂ ಕೆಲಸ ಇಲ್ಲದೋರ ಕಥೇನೆ ಇದು.. ಸುಮ್ನೆ ಇರೋಕಾಗದೇ ಇಲ್ಲದ ರಗಳೆ ಮೈಮೇಲೆ ಎಳ್ಕೊಳ್ಳೋದ್ಯಾಕೆ ಅಂತ ಮನಸ್ಸಲ್ಲೇ ಅಂದುಕೊಳ್ತಿದ್ದೆ. ಅಂದು ನೀನು ನನ್ನ ಕಣ್ಣಿಗೆ ಕಾಣುವವರೆಗೆ.. ಏನೋ ಒಂದು ರೀತಿಯ ಆಕರ್ಷಣೆ ಇತ್ತು ನಿನ್ನ ಆ ಹೋಲಪು ಕಂಗಳಲ್ಲಿ.. ತುಂಬಾ ಹಳೆಯ ಪರಿಚಯ ಎನ್ನುವಂತಹ ಭಾವನೆ.. ನಿನ್ನ ಆ ಮುದ್ದು ಮುಖವನ್ನೇ ನೋಡುತ್ತಿರಬೇಕು ಎನ್ನುವಂತಹ ವಿಪರೀತವಾದ ಮನಸಿನ ತೊಳಲಾಟ.. ಅಲ್ಲಿಯವರೆಗೆ ನನ್ನ ಸ್ನೇಹಿತೆ ಹೇಳುತ್ತಿದ್ದಮಾತುಗಳನ್ನೆಲ್ಲಾ ಕೇಳಿ ನಿನ್ಗೆ ಕಂಪ್ಲೀಟ್ ಹುಚ್ಚು ಮಾರಾಯ್ತಿ.. ಇದೆಲ್ಲಾ ನಿಜ ಜೀವನದಲ್ಲಿ ಸಾಧ್ಯಾನಾ..? ಪ್ರೀತಿ ಅಂತೆ ಅದೂ ಮೊದಲ ನೋಟಕ್ಕೆ ನಿಂದ್ಯಾಕೋ ಅತೀ ಆಯ್ತು ಅಂತ ತಮಾಶೆ ಮಾಡ್ತಿದ್ದವಳಿಗೆ ಆ ಅನುಭವ ಇಷ್ಟು ಬೇಗ ಆಗುತ್ತೆ ಅಂತ ಪುಟ್ಟ ಕಲ್ಪನೆಯೇ ಇರಲಿಲ್ಲ.
ಕೇವಲ ಒಂದು ನೇರ ನೋಟ ನನ್ನೆಲ್ಲಾ ಸಿದ್ಧಾಂತಗಳನ್ನು ಅಡಿಮೇಲು ಮಾಡಿಬಿಡಬಹುದು ಅನ್ನೋ ಕಲ್ಪನೆಯೂ ನನಗೆ ಬಂದಿರಲಿಲ್ಲ..ಅದೂ ನಿನ್ನ ನೋಡುವವರೆಗೆ.. ಮತ್ತೆ ನೋಡದಿರಲು ಸಾಧ್ಯವೇ ಇಲ್ಲ ಎನ್ನುವಷ್ಟು ನಿನ್ನ ಕಣ್ಣೋಟ ಮೋಡಿ ಮಾಡಿಯಾಗಿತ್ತು.. ಮತ್ತೆ ಆ ಚುರುಕುನೋಟವನ್ನು ಕಾಣಲು ಏನೆಲ್ಲಾ ಪರದಾಟಗಳು..ಗೆಳತಿಯ ಪ್ರೀತಿಯನ್ನ ಪರಿಹಾಸ್ಯ ಮಾಡ್ತಾ ಇದ್ದ ನಾನು ಅದರದ್ದೇ ಮಾಯೆಗೆ ಬೀಳ್ಬೋದು ಅನ್ನೋ ಯೋಚನೆಯೇ ಇರಲಿಲ್ಲ.. ನೀನೇನು ಕಮ್ಮಿ ಇರಲಿಲ್ಲ ಮಾತಾನಾಡದಿದ್ದರೂ ಕಣ್ಣಲ್ಲೇ ಗುರಾಯಿಸುತ್ತಾ.. ನನ್ನನ್ನೇ ದಂಗುಬಡಿಸುವ ನಿನ್ನ ಆ ಹೋಳಪು ನೋಟ ಕಣ್ಣಿಂದ ಇನ್ನೂ ಮಾಸಿಲ್ಲ.. ಮನದಲ್ಲಿನ್ನ ಹಸಿರಾಗಿದೆ..
ಅದ್ಹೇಗೆ ಪರಿಚಯ ಮಾಡಿಕೊಳ್ಳಲಿ ಎಂಬಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕಣ್ಣಲ್ಲೇ ಮಾತುಗಳು ವಿನಿಮಯವಾಗಿದ್ದವು.ನೀನು ಮಾತನಾಡಿಸಲಿ ಎಂದು ನಾನಿದ್ದರೆ.. ನಾನು ಮಾತನಾಡಿಸಲಿ ಎಂದು ನೀನು ಕಾದಂತಿತ್ತು.. ಕೊನೆಗೂ ಮಾತನಾಡಿಸುವ ಧೈರ್ಯ ಮಾಡಿದ್ದಂತೂ ನೀನೇ.. ಆಗ ನನ್ನ ಡಿಗ್ರಿಯ ಕೊನೆಯ ದಿನಗಳು.. ಸೆಂಡಫ್ ಮತ್ತುಳಿದ ಕಾರ್ಯಕ್ರಮಗಳೆಲ್ಲಾ ಮುಗಿಯುತ್ತಾ ಬಂದಿದ್ದವು.. ಅದೊಂದು ದಿನ ಬಸ್‍ನಲ್ಲಿ ಕುಳಿತಿದ್ದ ನೀನು ಬಂದು ನಿಂತ ನನಗೆ ಕೇಇಯೇ ಬಿಟ್ಟಿದ್ದೆ.. ಎಕ್ಸಾಂ ಆಯ್ತೇನ್ರೀ.. ಅಂತ..ನನಗೋ ಹೇಳಿಕೊಳ್ಳಲಾಗದ ಖುಷಿ.. ಮನಸ್ಸು.. ಮತ್ತೆ ನಾಲಿಗೆ ನನ್ನ ಮೆದುಳಿನ ಹಿಡಿತದಿಂದ ತಪ್ಪಿಸಿಕೊಂಡಿತ್ತು.. ವರ್ಷದಿಂದ ಮಾತನಾಡೇ ಇಲ್ಲ ಎಂಬಂತೆ ನಿನ್ನೊಡನೆ ಮಾತಿಗಿಳಿದಿದ್ದೆ.
ನೀನು ಮಾತಾಡಿದ್ದೇ ಸಾಕು ಎನ್ನುವಂತೆ ಮಾತಾಡಲು ಶುರು ಮಾಡಿದ್ದೆ.. ಯಾರು ನನ್ನ ನೋಡ್ತಿದ್ರೂ ನನಗದರ ಪರಿವಿರಲಿಲ್ಲ.. ನನ್ನ ಪ್ರಪಂಚದಲ್ಲಿ ನೀನೊಬ್ಬನೇ ಸಾಕಾಗಿ ಹೋಗಿತ್ತು. ಮಾತನಾಡಿದ್ದು ಕೇವಲ 10 ನಿಮಿಷಗಳಾದರೂ 10 ವರ್ಷದಿಂದ ಹಪಹಪಿಸುತ್ತಿದ್ದಂತೆ ಮಾತನಾಡಿದ್ದೆ.. ಅಂದಿನಿಂದ ಇಂದಿನವರೆಗೂ ಗೆಳೆತನ ಮುಂದುವರಿದರೂ ಮನದೊಳಗಿನ ಭಾವನೆಗಳನ್ನು ಮಾತ್ರ ಬಿಚ್ಚಿಟ್ಟಿರಲಿಲ್ಲ.
ಹೀಗೇ ಡಿಗ್ರೀ ಮುಗ್ದ್ರೂ ನಮ್ಮ ಗೆಳೆತನ ಮಾತ್ರ ಮುಗ್ದಿರಲಿಲ್ಲ. ಆಗಾಗಿನ ಕಿತ್ತಾಟ, ದೀರ್ಘಕಾಲದ ಮೌನದೊಂದಿಗೆ ಮುಂದುವರಿದಿತ್ತು. ಒಂದು ಪುಟ್ಟ ಜಗಳದ ನಂತರದ ಒಂದುಗೂಡುವಿಕೆಯ ಸಿಹಿಯಾದ ಅನುಭವ ಮತ್ತು ನೀನು ಮಾಡಿಕೊಳ್ತಿದ್ದ ರಾಜಿಗೋಸ್ಕರವೇ ಜಗಳವಾಡುತ್ತಿದ್ದೆನೇನೋ ಎಂಬ ಪ್ರಶ್ನೆ ಇನ್ನೂ ಪ್ರಶ್ನೆಯಾಗೇ ನನ್ನೊಳಗೆ ಉಳಿದುಹೋಗಿದೆ. ಅದೆಷ್ಟೋ ಬಾರಿ ನಿನ್ನೊಂದಿಗಿನ ಜಗಳದ ನಂತರ ಗಂಟೆಗಟ್ಟಲೆ ಅತ್ತದ್ದಿದೆ.. ಆಗ ಆ ಕ್ಷಣ ಕೇವಲ ನನ್ನ ಮೆಚ್ಚಿನ ತಲೆದಿಂಬಿಗೆ ಮಾತ್ರ ಅರಿವಾಗಿತ್ತು ನನ್ನೊಳಗಿನ ವೇದನೆಯ ಕ್ಷಣಗಳು.

ಕೆಲವೊಮ್ಮೆ ನೀನು ಜಗಳದ ನಂತರ ನಿನ್ನ ಸಹವಾಸವೇ ಸಾಕು ನನ್ನ ನಿನ್ನ ಗೆಳೆತನ ಸಾಕು ಅಂದಾಗಲಂತೂ ಎಂದಿಗೂ ಏನೂ ಬೇಡದ ನಾನು ದೇವರಲ್ಲಿ ಬೇಡಿಕೊಂಡಿದ್ದೆ ಇದೊಂದು ಸಾರಿ ಸರಿಯಾದರೆ ಸಾಕು ಮತ್ತೆಂದೂ ಹೀಗೆ ಮಾಡಲ್ಲಾ ಅಂತ.. ಅದ್ಯಾಕೋ ಆ ಕ್ಷಣ ದೇವ್ರಿಗೂ ನನ್ನ ಭಾವನೆ ಅರ್ಥ ಆಗ್ತಿತ್ತು ಅನ್ನೋ ಥರ ನೀನು 1 ವಾರಕ್ಕೇ ನನ್ನೊಡನೆ ಮಾತಿಗಿಳಿಯುತ್ತಿದ್ದೆ. ನಿನ್ನ ಒಂದು ಮುದ್ದು ಮುಗುಳುನಗೆಗೆ ನಾನು ಬಿದ್ದು ಹೋಗುತ್ತಿದ್ದೆ..ಮತ್ತೆ ಮಾತುಕತೆ ಜಗಳ.. ಇದ್ಯಾವತ್ತೂ ಬದಲಾದುದೇ ಇಲ್ಲ.. ನಿನಗಾರಾದ್ರೂ ಕಾಲ್ ಮಾಡಿದಾಗ ನೀನೆದ್ದು ಹೋಗಿ ಮಾತಾಡಿದಾಗಲಂತೂ ಯಾರಿರಬಹುದು? ಅಯ್ಯೋ ಗರ್ಲ್ ಫ್ರೆಂಡ್ ಯಾರಾದ್ರೂ ಇದ್ದಾರಾ? ಇದ್ರೆ ನಾನೇನ್ ಮಾಡೋದು ಅನ್ನೋ ಭಾವನೆಗಳು ತಲೆಯನ್ನು ಹಿಂಡಿ ಹಿಪ್ಪೆಯನ್ನಾಗಿ ಮಾಡ್ತಾ ಇತ್ತು..
ಇಲ್ಲಿಯವರೆಗೆ ಕಾಪಿಟ್ಟುಕೊಂಡು ಬಂದ ನಿನ್ನ ಸ್ನೇಹವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದು ನನಗಂತೂ ಬೇಡವಾಗಿತ್ತು. ಆಗಾಗ ಅನಿಸುವುದಿದೆ ನಾನ್ಯಾಕಿಷ್ಟು ಪೊಸೆಸಿವ್ ಆದೆ? ಇಷ್ಟಕ್ಕೂ ಫ್ರೆಂಡ್‍ಶಿಪ್ ಮಾತ್ರವಾ.. ಅಂತ ಅಲ್ಲವೆ ಅಲ್ಲ.. ಇದು ಕೇವಲ ಫ್ರೆಂಢ್ಶಿಪ್ ಆಗೋದಕ್ಕೆ ಸಾಧ್ಯ ಇಲ್ಲ ಅದಕ್ಕೂ ಹೆಚ್ಚಿನದು.
ಅದಕ್ಕೆಂದೇ ಅಂದು ಒಂದು ಧೃಢವಾದ ನಿರ್ಧಾರ ಮಾಡಿಯೇ ಬಿಟ್ಟಿದ್ದೆ ಏನಾದರೂ ಆಗಲಿ ಇವತ್ತು ನನ್ನೊಳಗಿನ ಪ್ರೀತಿಯನ್ನು ನಿನ್ನ ಜೊತೆ ಹೇಳಿಯೇ ಬಿಡೋದು ಅಂತ.. ಸಿದ್ಧವಾಗಿಯೇ ಹೇಳಿದ್ದೆ ನಿಜಕ್ಕೂ ನಿನ್ನ ನಾ ಪ್ರೀತಿಸುವೆ.. ನಿನ್ನೊಂದಿಗೆ ನನ್ನ ಜೀವನ ಕಳೆಯುವಾಸೆಯೆಂದು.ಆದರೆ ನನ್ನ ನಿರೀಕ್ಷೆ ಹುಸಿಯಾದುದೇ ಇಲ್ಲಿ.. ಏನು ಆಗಬಾರದಿತ್ತೋ ಅದೇ ಆಗಿತ್ತು ಕೇವಲ 1 ದಿನದ ವಿಳಂಬಕ್ಕೆ ನಾನಿನ್ನ ಕಳೆದುಕೊಂಡಿದ್ದೆ. ಶಾಶ್ವತವಾಗಿ ನೀನು ಇನ್ನೋರ್ವಳ ಪಾಲಾಗಿ ಹೋಗಿದ್ದೆ. ಅಲ್ಲಿಯವರೆಗೆ ನನ್ನ ಕನಸಿನರಮನೆಯ ರಾಜಕುಮಾರನಾಗಿದ್ದ ನೀನು ರೆಕ್ಕೆ ಮೂಡಿದ ಅರಗಿಣಿಯಂತೆ ಹಾರಿ ಹೋಗಿದ್ದೆ. ಮತ್ತೆ ಹಿಡಿಯಲಾರದಷ್ಟು ದೂರ.. ಕಾರಣ.. ತಿಳಿಯದು..
ನನ್ನ ಕನಸಿನ ಗೋಪುರವು ನನ್ನ ಕಣ್ಣೆದುರೇ ಕುಸಿದು ಬಿದ್ದಿತ್ತು.. ಮತ್ತೆಂದೂ ಚೇತರಿಸಿಕೊಳ್ಳಲಾಗದ ಆಘಾತವನ್ನು ನೀನು ನೀಡಿದ್ದೆ. ಪತಾಳಕ್ಕೆ ಕುಸಿದ ಅನುಭವವಿನ್ನೂ ನನ್ನೊಳಗೆ ಹಸಿ ಗಾಯವನ್ನು ಉಳಿಸಿ ಹೋಗಿದೆ. ಕಣ್ಮನ ಸೆಳೆದಿದ್ದ ಕನಸಿನ ರಾಜಕುಮಾರ ಕಣ್ಣೆದುರೇ ಬೇರೆಯವಳ ಕಣ್ಮಣಿಯಾಗಿ ಹೋಗಿದ್ದೆ. ಹೇಗಿದ್ದರೂ ಅಲ್ಲೇ ಸುಖವಾಗಿರು.. ಹೇಳದೇ ಉಳಿದ ಮನದಾಳದ ಮಾತಿದು..
ಇಂತಿ
ಪನ್ನಾ..

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.