“ವಸಂತ ಬರೆದನು ಒಲವಿನ ಓಲೆ, ಚಿಗುರಿದ ಎಲೆ.. ಎಲೆ.. ಮೇಲೆ, ಪಂಚಮದಲ್ಲಿ ಹಾಡಿತು ಕೋಗಿಲೆ.., ಪ್ರೀತಿಗೆ ಓರ್ವಳೆ ನಲ್ಲೇ... ಪ್ರೇಮಿಗೆ ಓರ್ವಳೆ ನಲ್ಲೇ..” ಎಂದು ಬೆಸುಗೆ ಚಿತ್ರದ ಗೀತೆಯನ್ನ ತನ್ನ ಸುಮಧುರ ಕೋಗಿಲೆ ಕಂಠದಿಂದ ಹಾಡುತ್ತ, ಗಿಡಗಳಿಗೆ ನೀರಾಯಿಸುತ್ತಿದ್ದಳು ಈ ಓರ್ವ ಚೆಲುವೆ... ಅನಾಥಾಶ್ರಮದಲ್ಲಿ ಬೆಳೆದ ಇವಳಿಗೆ ತಾನೆ ಬೆಳೆಸಿದ ಗಿಡಗಳೇ ಈಕೆಯ ಸರ್ವಸ್ವವಾಗಿದ್ದವು. ಅವುಗಳೊಂದಿಗೆ ಮಾತಿಗಿಳಿಯುತ್ತಿದ್ದಳು ಈ ಮಾತಿನ ಮಲ್ಲಿ... ಇವತ್ತು ಹಾಗೆ ಮೈ ಮರೆತು ಮರ-ಗಿಡಗಳ ತಂಗಾಳಿಯಲ್ಲಿ ತಂಗಾಳಿಯಾಗಿ ಬೆರೆತು ಹೋಗಿದ್ದಳು.

“ಯೇ.. ಜ್ಯೋತಿ.. ಎಲ್ಲಿದ್ದೀಯ..? ಇನ್ನು ಮುಗಿದಿಲ್ವೇನು ನಿನ್ನವರ ಜೊತೆ ಮಾತಾಡಿದ್ದು..? ಮಕ್ಕಳು ನಿಂಗೋಸ್ಕರ ಕಾಯ್ತಿದ್ದಾರೆ.?” ಅನಾಥಾಶ್ರಮದ ವಾರ್ಡನ್ ಮಾತುಗಳು ತಂಗಾಳಿಯಲ್ಲಿ ಕುಣಿದಾಡುತ್ತಿದ್ದ ಅವಳ ನಿರ್ಮಲ ಮನಸ್ಸಿಗೆ ಕಡಿವಾಣ ಹಾಕಿತು..

“ಹಾ... ಬಂದೆ ಮೇಡಂ... ಬಂದೆ” ಎಂದು ಕೂಗಿಕೊಳ್ಳುತ್ತಾ ಮಕ್ಕಳ ಬಳಿ ಓಡಿದಳು.

“ಗಿಡಗಳಿಗೆ ನೀರು ಹಾಕಿ ಬರೋಕೆ ಎಷ್ಟೊತ್ತು ಜ್ಯೋತಿ..? ಪ್ರತಿಸಲ ಹೀಗ್ಮಾಡಿದ್ರೆ ಹೇಗೆ..? ಮಕ್ಕಳು ಶಾಲೆಗೆ ಹೋಗೋಕೆ ಹೊತ್ತಾಗಲ್ವೇನು..? ಸರಿ ಬೇಗ ಹೊರಡು” ಎಂದ್ರು ವಾರ್ಡನ್ ಕಮಲಮ್ಮ.

“ಬನ್ನಿ ಮಕ್ಳಾ ಹೋಗೋಣ.. ಹೊತ್ತಾಗುತ್ತೆ’’ ಎಂದು ತನ್ನ ಸೊಂಟಕ್ಕೆ ಎತ್ತಿ ಕಟ್ಟಿದ್ದ ಸೀರೆ ನೆರಿಗೆಯನ್ನ ಇಳಿಬಿಟ್ಟು, ಸ್ವಲ್ಪ ಕೆದರಿದ್ದ ಕೂದಲನ್ನ ತನ್ನ ಎರಡು ಕೈಗಳಿಂದ ಓರಣವಾಗಿ ಮಾಡಿಕೊಂಡು ಮಕ್ಕಳೊಂದಿಗೆ ಶಾಲೆ ಕಡೆ ನಡೆದಳು. ಮಕ್ಕಳ ಜೊತೆ ಮಾತಾಡುತ್ತ ಶಾಲೆ ತಲುಪಿದಳು.

ಹಿಂದು ಮುಂದಿಲ್ಲದ ಜ್ಯೋತಿ ಕದ್ದು ಬಸುರಾಗಿ, ಕಸದ ತೊಟ್ಟಿಯಲ್ಲಿ ಸಿಕ್ಕ ಪಾಪಾದ ಹೆಣ್ಣು ಮಗು. ಒಳ್ಳೆಯ ಆದರ್ಶಗಳನ್ನ ಮೈಗೂಡಿಸಿಕೊಂಡ ಜ್ಯೋತಿ ಬಿ.ಎನಲ್ಲಿ ಪದವಿ ಹೊಂದಿದ್ದಳು. 23 ದಾಟಿದ ಜ್ಯೋತಿಗೆ, ಒಳ್ಳೆಯ ವರನನ್ನ ನೋಡಿ ಮದುವೆ ಮಾಡುವ ಹಂಬಲ ಕಮಲಮ್ಮನದು.

ಜ್ಯೋತಿಯದ್ದು ಸಾಧಾರಣ ಚೆಲುವು. ಆದ್ರೆ ದೇಹ ಮೈಮಾಟವಂತು ಯಾರೊ ಶಿಲ್ಪಿ ತನ್ನ ಹಸ್ತದಿಂದ ಕೆತ್ತನೆ ಮಾಡಿದಂತಿತ್ತು. ಅನಾಥಾಶ್ರಮದ ಲೆಕ್ಕ ಪುಸ್ತಕಗಳನ್ನ ನೋಡಿಕೊಳ್ಳುವುದು, ಮಕ್ಕಳಿಗೆ ಮನೆಪಾಠ ಹೇಳಿಕೊಡುವುದು ಇವಳ ಕೆಲಸವಾಗಿತ್ತು.

ಮಕ್ಕಳನ್ನ ಬಿಟ್ಟು ಬರುತ್ತಿದ್ದಾಗ ಅಕಸ್ಮಾತಾಗಿ ಪಾರ್ಕ್‍ನಲ್ಲಿದ್ದ ಒಂದು ಜೋಡಿ ಕಾಣಿಸಿತು. ಅವರ ವರ್ತನೆ ಪ್ರಶಾಂತವಾಗಿದ್ದ ಅವಳ ಮನಸ್ಸಿನಾಳದಲ್ಲಿ ಅವಿತುಕೊಂಡಿದ್ದ ಭಾವನೆಗಳನ್ನ ಬಡಿದೇಳುವಂತೆ ಮಾಡಿತು... ತನಗೂ ಸಂಗಾತಿ ಬೇಕೆಂಬ ಬಯಕೆ ಇವಳಲ್ಲಿ ಇಣುಕಿ ಮಾಯವಾಯಿತು. “ಛೆ.. ಛೆ.. ಗೊತ್ತು ಗುರಿ, ಇಲ್ಲದ ನನ್ನಂತ ಬೀದಿ ಬಿಕಾರಿಯನ್ನ ಯಾರು ಕೈ ಹಿಡಿತಾರೆ..? ನಮ್ಮಂತ ಅಬ್ಬೇಪಾರಿಗಳನ್ನ ಪುಂಡ ಪೋಕರಿಗಳಷ್ಟೇ ಕೈ ಹಿಡಿಬೇಕೆಂದು” ಯೋಚಿಸುತ್ತಿರುವಾಗ ಸುತ್ತಲಿನ ಚಿತ್ರಣ ಮಾಯವಾಗಿ ಕತ್ತಲಾವರಿಸಿತು.

ಭಯದಿಂದ ತನ್ನ ಎರಡು ಕೈಗಳನ್ನ ಆಕಡೆ ಈಕಡೆ ಕುರುಡಿಯಂತೆ ಆಡಿಸಿದಳು. ಅವಳ ಅಭಿಮುಖವಾಗಿ ಬರುತ್ತಿದ್ದ ಕಾರು ಕೂಡ ನಿಯಂತ್ರಣ ತಪ್ಪಿತು. ಕಾರಿನಲ್ಲಿದ್ದ ವ್ಯಕ್ತಿ ಜೋರಾಗಿ ಕೂಗುತ್ತಾ ಹಾರ್ನ್ ಮಾಡುತ್ತಿದ್ದ.. ಆಗಬಾರದ ಅಚಾತುರ್ಯ ನಡದೇ ಬಿಟ್ಟಿತು. ರಕ್ತದ ಮಡುವಿನಲ್ಲಿ ಬಿದ್ದವಳನ್ನ ಎತ್ತಿಕೊಂಡು ಆಸ್ಪತ್ರೆಗೆ ಸೇರಿಸಿ ಡಾಕ್ಟರ್ ಬರುವಿಕೆಗಾಗಿ ಕಾದು ಕುಳಿತ ಆತ.

“ನೋಡಿ ಮಿಸ್ಟರ್ ಆಕೆ ಪ್ರಾಣಕ್ಕೇನು ತೊಂದರೆ ಇಲ್ಲ. ಆದ್ರೆ ಆಕೆ ತನ್ನ ಎರಡು ಕಣ್ಣುಗಳನ್ನೇ ಕಳೆದುಕೊಂಡಿದ್ದಾಳೆಂದ್ರು..” ಅಸಹಾಯಕತೆಯಿಂದ ಹೇಳಿದ್ರು ವೈದ್ಯರು.. ಆಕೆಗೆ ಪ್ರಜ್ಞೆ ಬಂದಿರುವ ವಿಷಯ ತಿಳಿದು ಅವಳಲ್ಲಿಗೆ ನಡೆದರು. ಡಾಕ್ಟರ್ ಮತ್ತೊಮ್ಮೆ ಪರೀಕ್ಷಿಸಿದ ನಂತರ ಅವಳನ್ನ ಕಾಣಲು ಒಳಹೊಕ್ಕ, ಅವಳನ್ನ ನೋಡಿದ ಆತನಿಗೆ ಆಕೆ ಪ್ರಶಾಂತವಾಗಿ ಉರಿಯುತಿದ್ದ ಜ್ಯೋತಿಯಂತೆ ಕಂಡಳು. ಬೂಟಿನ ಸದ್ದಿಗೆ “ಯಾರೆಂದಳು..?”,

ಅವಳ ಸನಿಹ ಬಂದು “ದಯವಿಟ್ಟು ಈ ಪಾಪಿಯನ್ನ ಕ್ಷಮಿಸಿ” ಎಂದ ಅಳುವಿನಿಂದ.

“ಯಾಕೆ ಅಳ್ತೀರಿ ಮಿಸ್ಟರ್? ನೀವು ನಂಗೆ ಆಕ್ಸಿಡೆಂಟ್ ಮಾಡೋಕು ಮುಂಚೆ ನನ್ನ ಕಣ್ಣನ್ನ ಕಳೆದುಕೊಂಡಿದ್ದೆ. ಚಿಂತೆ ಮಾಡ್ಬೇಡಿ ನಂಗೆ ಮೊದ್ಲಿಂದ ಕಣ್ಣಿನ ಸಮಸ್ಯೆಯಿದೆ. ಭಗವಂತ ನೋಡಿ ನಮ್ಮಂತ ಬಡವರಿಗೆ ಬೇಡ ಅಂದ್ರು ಈ ಸಮಸ್ಯೆಗಳನ್ನ ಕೊಡ್ತಾನೆ.. ಎನ್ಮಾಡೋದು ಪಾಲಿಗೆ ಬಂದಿದ್ದನ್ನ ಅನುಭವಿಸಲೆ ಬೇಕು” ಎಂದಳು ನೋವಿನಿಂದ.

ಅವಳ ಒಂದೊಂದು ಮಾತು ಅವನ ಮನಸ್ಸನ್ನ ನಾಟಿತು. ನನ್ನನ್ನ ಬೈದು, ಹೀಯಾಳಿಸ್ತಾಳೆಂದು ಅಂದುಕೊಂಡಿದ್ರೆ, ಅದಕ್ಕೆ ತದ್ವಿರುದ್ಧವಾಗಿದ್ದಳು. ನಿಜಕ್ಕೂ ಈಕೆ ಶಾಂತಿ ಸ್ವರೂಪಿಣಿ.. ಧೈರ್ಯವಂತೆ.. ಎಂದುಕೊಂಡ. “ನಿಮ್ಮ ಹೆಸರು ವಿಳಾಸ ಕೊಟ್ರೆ ಅನುಕೂಲ ಆಗುತ್ತೆ”. ಎಂದ

ತನ್ನ ಹೆಸರು ಜ್ಯೋತಿ ಎಂದೇಳಿ, ಅನಾಥಾಶ್ರಮದ ವಿಳಾಸ ನೀಡಿದಳು. ಆಕೆ ಅನಾಥೆ ಎಂದು ತಿಳಿದಾಗ ಬೇಸರ ಪಟ್ಟುಕೊಂಡ. ಯಾಕಂದ್ರೆ ಇವನು ಕೂಡ ಅನಾಥನೆ.. ಅನಾಥರ ನೋವು ಅನಾಥರಿಗಲ್ಲದೆ ಬೇರಾರಿಗೆ ಗೊತ್ತಾಗುತ್ತೆ ಹೇಳಿ..? ಕಣ್ಣು ಕಳೆದುಕೊಂಡವಳ ಎರಡು ಕಣ್ಣಗಳಾಗಿ ತಾನೇಕೆ ಇರಬಾರದೆಂದು ನಿರ್ಧಾರ ತಳೆದಿದ್ದ.

“ಏನು ಯೋಚನೆ ಮಾಡ್ತಿದ್ದೀರ ಸರ್, ನಿಮ್ಮ ಹೆಸರು ಗೊತ್ತಾಗ್ಲಿಲ್ಲ..?”

“ಏನಿಲ್ಲ. ನನ್ನ ಹೆಸರು ಪ್ರಕಾಶ್.” ಎಂದಷ್ಟೇ ಹೇಳಿ ಹೊರ ನಡೆದ.. ವಿಷಯ ತಿಳಿದು ವಾರ್ಡನ್ ಕಮಲಮ್ಮ ಆಸ್ಪತ್ರೆಗೆ ಧಾವಿಸಿ, ಅವಳನ್ನ ತಬ್ಬಿಡಿದು ಕಣ್ಣೀರಿಟ್ಟರು.

“ಮೇಡಂ ನಿಮ್ಮ ಹತ್ರ ಸ್ವಲ್ಪ ಮಾತಾಡ್ಬೇಕಿತ್ತು ಬನ್ನಿ’’ ಎಂದು ಹೊರ ಕರೆತಂದ.

“ಹೇಳಿ’’ ಎಂದ್ರು ಕಮಲಮ್ಮ “ಮೇಡಂ ನನ್ನ ಹೆಸರು ಪ್ರಕಾಶ್ ಎಂದು ತನ್ನ ಬಗ್ಗೆ ಹೇಳತೊಡಗಿದ. ತಾನು ಇಂಜಿನಿಯರ್ ಮುಗ್ಸಿ 5 ವರ್ಷದಿಂದ ಹೆಸರಾಂತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದು, ಕೈ ತುಂಬ ಸಂಪಾದಿಸಿ ಈಗ ನನ್ನ ಕಾಲ ಮೇಲೆ ನಾನು ನಿಂತಿದ್ದೀನಿ. ನಾನು ಕೂಡ ಒಬ್ಬ ಅನಾಥ ಹಾಗಾಗಿ ಒಬ್ಬ ಬಡ ಅನಾಥೆ ಕೈ ಹಿಡಿಬೇಕು ಅನ್ನೋದು ನನ್ನ ಉದ್ದೇಶ. ನನ್ನ ಕೈ ಹಿಡಿಯೋ ಎಲ್ಲಾ ಲಕ್ಷಣಗಳು ಜ್ಯೋತಿಯಲ್ಲಿದೆ. ಹಾಗಾಗಿ ನೀವು ದೊಡ್ಡ ಮನಸ್ಸು ಮಾಡಿದ್ರೆ ನಾನು ಜ್ಯೋತಿಯನ್ನ ಮದುವೆಯಾಗ್ತೀನಿ’’ ಎಂದು ಭಾವುಕತೆಯಿಂದ ನುಡಿದ. ಅವನ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಕಮಲಮ್ಮ ಸಮ್ಮತಿಸಿದ್ರು.

28 ವರ್ಷದ ಪ್ರಕಾಶ್ ನೋಡಿದ ಕೂಡಲೆ ಹುಡುಗಿಯರ ತಿಳಿ ಹಾಲಿನಂತಹ ಮನಸ್ಸಿನಲ್ಲಿ ಕೇಸರಿಯಂತೆ ಬೆರೆತು ಹೋಗುವಂತವನು. ಜ್ಯೋತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಳು. ಹೀಗೆ ದಿನಗಳು ಉರುಳಿದವು.

*************

ಪ್ರಕಾಶ್ ನಡವಳಿಕೆ, ಸದ್ಗುಣವಂತಿಕೆ ಜ್ಯೋತಿಗೆ ಹಿಡಿಸಿತು. ಪ್ರಕಾಶ್ ಜ್ಯೋತಿಯನ್ನ ಮನಸಾರೆ ಇಷ್ಟ ಪಡುತ್ತಿದ್ದ. ಆದ್ರೆ ತನ್ನ ಪ್ರೀತಿಯನ್ನ ವ್ಯಕ್ತಪಡಿಸಲು ಒಳ್ಳೆಯ ದಿನಕ್ಕಾಗಿ ಕಾದ.. ವಾರ್ಡನ್ ಕಮಲಮ್ಮನಿಗೆ ಜ್ಯೋತಿಗೆ ಪ್ರಕಾಶ್ ತಕ್ಕ ಜೋಡಿ ಎಂದುಕೊಂಡಿದ್ದರು. ಅವನೆಣಿಕೆಯಂತೆ ಜ್ಯೋತಿಗೆ ತನ್ನ ಪ್ರೀತಿಯನ್ನ ಹೇಳಿಕೊಳ್ಳುವ ದಿನ ಬಂದೇ ಬಿಟ್ಟಿತು.

ಅವಳನ್ನ ಹೊರಗಡೆ ಕರೆದುಕೊಂಡು ಹೋದ ಪ್ರಕಾಶ್ ತನ್ನ ಪ್ರೀತಿಯನ್ನ ಹೇಳಿಕೊಂಡಾಗ ಜ್ಯೋತಿ ನಿರಾಕರಿಸಿದಳು. “ತಾನು ಕುರುಡಿ” ಎಂದು ಬಿಕ್ಕಿದಳು.

“ಕುರುಡಿಯಾದ್ರೆ ಏನಂತೆ ಜ್ಯೋತಿ, ನಿನಗೂ ಒಂದು ಮನಸಿಲ್ವಾ ಹೇಳು. ಯಾರು ಹೇಳಿದ್ದು ನೀನು ಕುರುಡಿ ಅಂತ.? ನಿನ್ನ ಕಣ್ಣುಗಳಾಗಿ ನಾನಿರುವಾಗ ನೀನ್ ಹೇಗೆ ಕುರುಡಿಯಾಗ್ತೀಯ..? ನಿನ್ನ ಯೌವನಕ್ಕಿಂತ ನಿನ್ನಲಿರುವ ತಾಯ್ತನಕ್ಕೆ ಮರುಳಾಗಿದ್ದೀನಿ.. ನಾನು ಕೂಡ ನಿನ್ನ ಹಾಗೆ ಅನಾಥ.. ಈ ಅನಾಥನಿಗೆ ಆ ತಾಯ್ತನವನ್ನ ಧಾರೆಯೆರೆಯುತ್ತೀಯಾ..?” ಎಂದು ಮಂಡಿಯೂರಿ ಕೇಳಿದ ಪ್ರಕಾಶ್.

ಪ್ರಕಾಶ್ ಮನಸ್ಸಿನ ಮಾತುಗಳಿಗೆ ಸೋತು ಒಪ್ಪಿಕೊಂಡಳು. ರಾಯರ ಸನ್ನಿಧಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಾನು ಕುರುಡಿ ಎಂಬ ಕೀಳರಮೆ ಮಾತ್ರ ಅವಳಿಂದ ದೂರ ಸರಿದಿರಲಿಲ್ಲಿ. ಇದು ಅವಳ ದಾಂಪತ್ಯ ಸುಖದ ಮೇಲೆ ಹೆಚ್ಚು ಪ್ರಭಾವ ಬೀರಿತು. ಪ್ರಕಾಶ್ ಹತ್ತಿರವಾದಾಗಲೆಲ್ಲ ಜ್ಯೋತಿ ದೂರ ಸರಿಯುತ್ತಿದ್ದಳು.. ಅವಳ ಮನಸ್ಸನ್ನ ಎಷ್ಟೆ ಬದಲಾಯಿಸಲು ಪ್ರಯತ್ನಿಸಿದರು ವಿಫಲನಾಗುತ್ತಿದ್ದ ಆದ್ರೆ ಅವಳನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಈ ಪ್ರಾಣಕಾಂತ. ಇವರಿಬ್ಬರ ಮದುವೆಯಾಗಿ 6 ತಿಂಗಳುಗಳು ಕಳೆಯಿತು.

ಬೀದಿಯಲ್ಲಿ ಒಂದು ಮಗುವಿನ ಅಳುವಿನ ಧ್ವನಿ ಜ್ಯೋತಿಯಲ್ಲಿ ತಾಯಿಯ ಬಯಕೆಯನ್ನ ಹೆಚ್ಚಿಸಿತು. ತನ್ನ ತಪ್ಪಿನ ಅರಿವಾಗಿ ಮಾರನೆ ದಿನ ಪ್ರಕಾಶ್‍ನ ಕಾಲಿಗೆರಗಿ ಕ್ಷಮಾಪಣೆ ಕೇಳಿದಳು. ಅವಳನ್ನ ಬಳಸಿದ ಪ್ರಕಾಶ್ ಅಳಬಾರದೆಂದು ಅವಳ ಹಣೆಗೆ ಚುಂಬಿಸಿ ಇವತ್ತಿಂದ ಹೊಸ ಜೀವನ ಆರಂಭಿಸೋಣವೆಂದು ಮಡದಿಯ ಕೆನ್ನೆ ತಟ್ಟಿದ. ಹೂ, ಹಣ್ಣು, ಸ್ವೀಟ್ ತರಲು ಮಾರ್ಕೆಟ್‍ಗೆ ಹೋಗುವ ಆತುರದಲ್ಲಿ ಮನೆ ಬಾಗಿಲ್ಲನ್ನ ಹಾಕುವುದನ್ನೇ ಮರೆತ.

ಬಹಳ ದಿನದಿಂದ ಅವಳನ್ನ ಪಡೆಯಲು ಹೊಂಚು ಹಾಕುತ್ತಿದ್ದ ಕಿಡಿಗೇಡಿಗಳ ಗುಂಪಿಗೆ ಸುಧೀನವಾದ್ರೆ ಅವರಿಬ್ಬರ ಹೊಸ ಜೀವನಕ್ಕೆ ಅಂದು ಕಾರ್ಮೋಡ ಕವಿದಂತಾಗಿತ್ತು. ಮೆಲ್ಲನೆ ಒಳ ಪ್ರವೇಶಿಸಿದ್ರು ಆ ಘಾತುಕರು. ಹಸಿದ ರಕ್ಕಸರಂತೆ ಜ್ಯೋತಿ ಮೇಲೆರಗಿದರು. ಅವರ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ರು ಫಲಿಸಲಿಲ್ಲ. ಜ್ಯೋತಿಯ ಸೀರೆ ಸೆರಗನ್ನೆಳೆದು ವಿವಸ್ತ್ರಗೊಳಿಸಿ, ಒಬ್ಬರ ಮೇಲೊಬ್ಬರೆರಗಿ ಕಾಮ ತೃಷೆಯನ್ನ ತೀರಿಸಿಕೊಂಡರು.

“ಚಂಡಾಲರೆ ಬಿಡಿ.. ಪಾಪಿಗಳ ಬಿಡಿ..” ಎಂದು “ಪ್ರಕಾಶ್.. ಪ್ರಕಾಶ್” ಎಂದು ಚೀರಿ ಪ್ರಜ್ಞೆ ತಪ್ಪಿದಳು.

*********
ಪ್ರಕಾಶ್‍ನ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. ಮನೆಯಲ್ಲಿ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೈನಲ್ಲಿದ್ದ ಪೊಟ್ಟಣಗಳನ್ನ ಅಲ್ಲೇ ಬಿಸಾಡಿ ರೂಮಿಗೆ ಹೋದವನಿಗೆ ತನ್ನ ಬಾಳಿನ ಜ್ಯೋತಿ ಇನ್ನೇನು ಆರುವುದರಲ್ಲಿತ್ತು. ಮುದ್ದಿನ ಮಡದಿ ಸ್ಥಿತಿ ಕಂಡು “ಜ್ಯೋತಿ” ಎಂದು ಚೀರಿದ. ಬೆತ್ತಲಾಗಿ ಬಿದ್ದಿದ್ದ ಹೆಂಡತಿ ಮೇಲೆ ರಗ್ಗೊದ್ದಿಸಿ ಅಳುತ್ತ, “ಜೋತಿ ನಿನ್ನ ಪ್ರಕಾಶ್ ಇರುವಾಗ ನಿಂಗೇನು ಆಗಲ್ಲ..” ಎಂದು ಅವಳನ್ನ ಈ ಸ್ಥಿತಿಗೆ ತಂದವರ ಮೇಲೆ ರೋಷ ಕಾರಿದ.

ಜ್ಯೋತಿಯನ್ನ ಎತ್ತಿಕೊಂಡು ಆಸ್ಪತ್ರೆಗೆ ನಡೆದ. ಡಾಕ್ಟರ್ ಕಾಲಿಡಿದು ತನ್ನ ಜ್ಯೋತಿಯನ್ನ ಉಳಿಸಿಕೊಡುವಂತೆ ಅಂಗಾಲಾಚಿದ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಳು ಜ್ಯೋತಿ. ಅದೆಷ್ಟು ದೇವರಲ್ಲಿ ಹರಿಕೆ ಕಟ್ಟಿಕೊಂಡನೋ ಅವನಿಗೆ ತಿಳಿಯದು. ಜ್ಯೋತಿ ಎಂಬ ಬೆಳಕು ಸಣ್ಣದಾಗುತ್ತಿದ್ದಂತೆ ಅದರ ಪ್ರಕಾಶತೆ ಕೂಡ ಕಾಂತಿ ಹೀನವಾಗುತ್ತಿತ್ತು. ಅವಳು ದೂರದ ದಾರಿ ಹಿಡಿದರೆ ತಾನು ಕೂಡ ಎಂದು ನಿರ್ಧರಿಸಿದ್ದ ಪ್ರಕಾಶ್. ನಿಜವಾದ, ನಿಸ್ವಾರ್ಥ ಪ್ರೀತಿಗೆ ಎಳ್ಳು ನೀರು ಬಿಡುವುದಕ್ಕೆ ಆ ಭಗವಂತನಿಗೂ ಕಷ್ಟವಾಯಿತು.. ವೈದ್ಯರ ಧೀರ್ಘ ಕಾಲದ ಪ್ರಯತ್ನದಿಂದ ಜ್ಯೋತಿ ಬದುಕುಳಿದಳು. ‘ಆರುತ್ತಿದ್ದ “ಜ್ಯೋತಿ” ’ ಮತ್ತೆ ಹೊತ್ತಿಕೊಂಡಿತು. “ಪ್ರಕಾಶತೆ” ಎಲ್ಲೆಡೆ ವ್ಯಾಪಿಸಿತು.

ತಪ್ಪು ಮಾಡಿದವರು ಮನೆಯ ಪಕ್ಕದಲ್ಲಿದ್ದ ಅಂಗಡಿ ಹುಡುಗರೆಂದು ತಿಳಿದು ಅವರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿ ಶಿಕ್ಷೆಯಾಗುವಂತೆ ಮಾಡಿದ ಪ್ರಕಾಶ್. ಜ್ಯೋತಿ, ಪ್ರಕಾಶ್ ಆಗಿದ್ದನ್ನೆಲ್ಲ ಮರೆತು ಹೊಸ ಜೀವನಕ್ಕೆ ಸಾಕ್ಷಿಯಾದ್ರು. 2 ವರ್ಷಗಳಲ್ಲಿ ಜ್ಯೋತಿ ಮುದ್ದಾದ ಗಂಡು ಮಗುವಿನ ತಾಯಿಯಾದಳು.

ಕಣ್ಣಿನ ವೈದ್ಯರನ್ನ ಭೇಟಿ ಮಾಡಿದಾದ ಜ್ಯೋತಿಗೆ ಕಣ್ಣು ಬರುವ ಸಾಧ್ಯತೆ ಹೆಚ್ಚಿದೆ ಎಂದು ಗೊತ್ತಾಯಿತು. ಅದೇ ಸಮಯಕ್ಕೆ ಒಬ್ಬ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಆತನ ಕಣ್ಣುಗಳನ್ನ ದಾನವಾಗಿ ಪಡೆದ ಜ್ಯೋತಿ ಪುನಃ ಇಡಿ ಜಗತ್ತನ್ನ ನೋಡುವಂತಾದಳು. ಗಂಡ ಮಗನನ್ನ ಕಣ್ತುಂಬಿಸಿಕೊಂಡು, ಆನಂದದ ಸುಖಕರ ಜೀವನ ಸಾಗಿಸಿದ್ಲು ಜ್ಯೋತಿ.

ನಿಜವಾದ ಪ್ರೀತಿಗೆ ಆ ವಿಧಿ ಕೂಡ ಕೇಡು ಬಗೆಯಲ್ಲ ಅನ್ನೋದಕ್ಕೆ ಇದೇ ಸಾಕ್ಷಿ. ಪ್ರಕಾಶ್ ಪ್ರೀತಿಯನ್ನ ಪರೀಕ್ಷಿಸಲು ವಿಧಿಯಾಡಿದ ಆಟವಷ್ಟೆ. ಜ್ಯೋತಿ ಇಲ್ಲದಿದ್ದರೆ ಪ್ರಕಾಶತೆಯಿಲ್ಲ, ಪ್ರಕಾಶತೆ ಇಲ್ಲದಿದ್ದರೆ ಜ್ಯೋತಿ ಇಲ್ಲವೆಂದು ಜಗಕ್ಕೆ ಸಾರಿ ಹೇಳಿದ್ರು ಈ ನಿಜವಾದ ಪ್ರೇಮಿಗಳು..

****** ಮುಕ್ತಾಯ*****

ಧನ್ಯವಾದಗಳು.....

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.