ಇಳಿ ಸಂಜೆಯ ಹೊತ್ತು ರವಿ ಆಗಸದಿಂದ ಕೆಂಬಣ್ಣವನ್ನು ಸೂಸಿ ಮರೆಯಾಗಲು ಪ್ರಯತ್ನಿಸುತ್ತಿದ್ದ. ಹಕ್ಕಿಗಳು ತಮ್ಮ ತಮ್ಮ ಗೂಡುಗಳನ್ನು ಸೇರಲು ಹೊರಟಿದ್ದವು. ಆಫೀಸೀನ ಕೆಲಸ ಮುಗಿಸಿ ಮನೆಗೆ ಬಂದ 'ಶಿಕ್ಷಾ'ಳ ಮುಖದಲ್ಲಿ ಮಂದಹಾಸವಿತ್ತು. ಅದಕ್ಕೆ ಕಾರಣವೂ ಇತ್ತು. ಸುಮಾರು ಒಂದುವರೆ ವರ್ಷದಿಂದ ಮಾತು ಬಿಟ್ಟಿದ್ದ ಆಕಾಶ್ ಇಂದು ಶಿಕ್ಷಾಳ ಜೊತೆ ಇಂದು ಮಾತನಾಡಿದ್ದು ಅತಿಯಾದ ಸಂತಸವನ್ನು ನೀಡಿತ್ತು. ಈ ಸಂತಸದ ಭಾವವನ್ನು ಹೊತ್ತ ಶಿಕ್ಷಾ, ಅಂದು ಆಫೀಸಿನಿಂದ ಬಂದವಳೇ ಯಾರೊಂದಿಗೂ ಮಾತನಾಡದೇ ಮುಖದಲ್ಲಿ ಮುಗುಳ್ನಗೆಯನ್ನು ತುಂಬಿಕೊಂಡು ತುಟಿಯಂಚಿನಲಿ ನಗುವನ್ನು ಚೆಲ್ಲುತಾ ತನ್ನ ರೂಮನ್ನು ಸೇರಿಕೊಂಡಳು. ಹಾಗೇ ಸ್ವಲ್ಪ ಹೊತ್ತು ಕನ್ನಡಿಯ ಮುಂದೆ ನಿಂತುಕೊಂಡಳು. ತನ್ನ ಮುಂಗುರುಳನ್ನು ಹಿಂದಕ್ಕೆ ಸರಿಸಿಕೊಂಡು ತನ್ನ ಚಂದಿರನಂತಹ ಸುಂದರ ಮುಖವನ್ನೊಮ್ಮೆ ನೋಡಿಕೊಂಡಳು. ಶಿಕ್ಷಾ ನಿಜಕ್ಕೂ ಸೌಂದರ್ಯದ ಖನಿ..ರೇಶಿಮೆಯಂತಹ ಬಳುಕುವ ಅವಳ ಸುಂದರ ಶರೀರ ಕನ್ನಡಿಯೊಳಗೆ ಯಾವುದೋ ಶಿಲಾ ಬಾಲಿಕೆಯನ್ನು ನಿಲ್ಲಿಸಿದಂತೆ ಕಾಣುತ್ತಿತ್ತು. ಇಂತಹ ಸುಂದರ ಹುಡುಗಿಯನ್ನು ನೋಡಿದ ಕೂಡಲೇ ಆಕಾಶ್ ನ ಮನಸಲ್ಲೂ ಸಹ ಪ್ರೀತಿಯ ಚಿಗುರು ಮೊಳಕೆಯೊಡೆದಿತ್ತು. ಆ ಪ್ರೀತಿ ಚಿಗುರೊಡೆದಿದ್ದು ಇಂದು ನಿನ್ನಯಲ್ಲ. ಒಂದುವರೆ ವರ್ಷದ ಹಿಂದೆ. ಅದು ನಡೆದಿದ್ದು ಆಕಾಶ್ ಮೊದಲ ಸಲ ಶಿಕ್ಷಾಳನ್ನು ಕಂಡಾಗ..

ಒಂದುವರೆ ವರ್ಷದ ಹಿಂದೆ ಆಕಾಶ್ 'ಶಿಕ್ಷಾ' ಕೆಲಸ ಮಾಡುವ ಕಂಪನಿಯಲ್ಲೇ ಹೊಸದಾಗಿ ಕಂಪನಿಗೆ ಸೇರಿಕೊಂಡಿದ್ದನು. 'ಶಿಕ್ಷಾ'ಳಂತಹ ಸುಂದರ ಹುಡುಗಿಯನ್ನು ಮೊದಲ ಸಲ ನೋಡಿ ಬೆರಗಾಗಿದ್ದ. ಬಿಳಿ ಚೂಡಿದಾರ್ ಹಾರಿಕೊಂಡು ತನ್ನ ರೇಷಿಮೆಯಂತಹ ಕೂದಲುಗಳನ್ನು ಹಾರಾಡಿಸಿಕೊಂಡು ಅಂದು ಮೊದಲ ಸಲ ಆಕಾಶ್ ನ ಮುಂದೆ ಕಾಣಿಸಿಕೊಂಡಿದ್ದಳು. ಅವಳ ಸೌಂದರ್ಯ ನೋಡಿದ ಕೂಡಲೇ ಆಕಾಶ್ ಮದುವೆಯಾದರೆ ಇಂತಹ ಹುಡುಗಿಯನ್ನೇ ಆಗುವುದಾಗಿ ನಿರ್ಧರಿಸಿ ಬಿಟ್ಟಿದ್ದ. ಆತ ಕೆಲಸಕ್ಕೆ ಸೇರಿ ಇನ್ನೂ ಒಂದು ತಿಂಗಳೂ ಸಹ ಆಗಿರಲಿಲ್ಲ. ತನ್ನ ಪ್ರೇಮ ನಿವೇದನೆಯನ್ನು ಶಿಕ್ಷಾಳ ಬಳಿ ಹೇಳಿಕೊಂಡೇ ಬಿಟ್ಟ. ಆಗ 'ಶಿಕ್ಷಾ' ಮಾತ್ರ ಅವನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ.

"ನನಗೆ ನನ್ನ ಫ್ಯಾಮಿಲಿ ಮುಖ್ಯ, ಅಪ್ಪ ಅಮ್ಮನ ಮನಸ್ಸನ್ನು ನೋಯಿಸಿ ಪ್ರೀತಿಗೆ ಶರಣಾಗಲಾರೆ. ಪ್ರೀತಿ ಮಾಡಿ ಮದುವೆಯಾಗುವುದು ನನಗಿಷ್ಟವಿಲ್ಲ. ಜನ್ಮ ನೀಡಿದ ಅಪ್ಪ ಅಮ್ಮಂದಿರು ಮಗಳ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡಿರುತ್ತಾರೆ. ಕಷ್ಟ ಪಟ್ಟು ಓದಿಸಿ ಈ ಹಂತಕ್ಕೆ ನಮ್ಮನ್ನು ತಂದು ನಿಲ್ಲಿಸಿದ್ದಾರೆ. ಯಾರೋ ಒಬ್ಬ ಬಂದು, ನೀನು ಚನ್ನಾಗಿದ್ದೀಯಾ ನಿನ್ನನ್ನು ಮದುವೆಯಾಗುತ್ತೇನೆ ಎಂದ ಕೂಡಲೇ ಮದುವೆಯಾಗಿ ಬಿಡೋದಾ..? ನನಗೆ ನನ್ನನ್ನು ಸಾಕಿ ಬೆಳೆಸಿದ ನನ್ನ ಅಪ್ಪ ಅಮ್ಮ ನನಗೆ ಮುಖ್ಯ. ನನಗೆ ನನ್ನ ಕುಟುಂಬ ಮುಖ್ಯ ಎಂದಿಗೂ ಅವರ ಮನಸ್ಸನ್ನು ನೋಯಿಸಲಾರೆ."

ಶಿಕ್ಷಾ ಇಷ್ಟು ಹೇಳಿ ಸುಮ್ಮನಾಗಿದ್ದರೆ ಏನೂ ಆಗುತ್ತಿರಲಿಲ್ಲ. ಅಥವಾ ಆಕಾಶ್ ನ ಪ್ರೇಮ ನಿವೇದನೆಯನ್ನು ನಯವಾಗಿಯೇ ತಿರಸ್ಕರಿಸಿದ್ದರೂ ಆ ಕತೆ ಅಲ್ಲಿಗೇ ಮುಗಿದು ಹೋಗಿ ಬಿಡುತ್ತಿತ್ತು. ಆದರೆ ಆಕಾಶ್ ತನ್ನ ಬಳಿ ಹೇಳಿಕೊಂಡಿದ್ದ ಪ್ರೇಮ ನಿವೇದನೆಯನ್ನು ಶಿಕ್ಷಾ ಮನೆಯವರ ಮುಂದೆ ಹೇಳಿ ರಾದ್ಧಾಂತ ಮಾಡಿದಳು. ಇದರಿಂದ ಕೋಪಗೊಂಡ ಶಿಕ್ಷಾಳ ಅಣ್ಣಾ ಕಂಪನಿಗೆ ಬಂದು ಆಕಾಶ್ ಗೆ ಒಂದೆರಡೇಟು ಭಾರಿಸಿ ಹೋಗಿದ್ದ. ಅಷ್ಟೇ ಅಲ್ಲದೇ ಶಿಕ್ಷಾಳ ಅಮ್ಮ ಆಕಾಶ್ ಗೆ ಫೋನ್ ಮಾಡಿ ಮನ ಬಂದಂತೆ ಬಯ್ದಿದ್ದಳು. ಕಂಪನಿಯ ಬಾಸ್ ಆಕಾಶ್ ನನ್ನು ಕ್ಯಾಬಿನ್ ಗೆ ಕರೆದು ಸರಿಯಾಗಿ ಉಗಿದಿದ್ದ..

ಒಂದುವರೆ ವರ್ಷದ ಹಿಂದಿನ ಈ ಘಟನೆಯನ್ನು ನೆನಪಿಸಿಕೊಂಡ ಶಿಕ್ಷಾಳಿಗೆ ತಾನು ತಪ್ಪು ಮಾಡಿದ್ದೇನೆ ಎಂಬ ಭಾವ ಕಾಡಲಾರಂಬಿತು. ಕಂಪನಿಯಲ್ಲಿ ಆಕಾಶ್ ನ ನಡೆ ನುಡಿ ಎಲ್ಲವನ್ನು ಗಮನಿಸಿದ ಶಿಕ್ಷಾಳಿಗೆ ಆಕಾಶ್ ಮೇಲೆ ಯಾಕೋ ಮೃದು ಭಾವ ಮೂಡಲಾರಂಬಿಸಿತು. ಛೆ..!! ಎಂತಹ ಸುಸಂಸ್ಕೃತ ನಡೆಯವನು. ನಾನು ಹೀಗೆ ಮಾಡಬಾರದಿತ್ತು. ಎಂದು ಮನಸೊಳಗೆ ದುಃಖಿಸಿದಳು. ತನ್ನ ಮನೆಯ ಪರಿಸ್ಥಿತಿಯನ್ನೂ ಒಮ್ಮೆ ನೆನಪಿಸಿಕೊಂಡಳು. ಒಂದುವರೆ ವರ್ಷದ ಹಿಂದೆ ನಂದನವನದಂತೆ ಇದ್ದ ಮನೆಯ ಸ್ಥಿತಿ ಈಗಿಲ್ಲ. ಅಪ್ಪ ಅಮ್ಮ ಎಲ್ಲರೂ ಇದ್ದ ಆ ಸಮಯದಲ್ಲಿ ಪ್ರೀತಿಗೇನೂ ಕಡಿಮೆಯಿರಲಿಲ್ಲ. ತಂದೆ ತಾಯಿಯ ಮುದ್ದು ಮಗಳಾಗಿ ಬೆಳೆದ 'ಶಿಕ್ಷಾ' ಮನೆಯಲ್ಲಿ ಎಲ್ಲರ ಪ್ರೀತಿಯೂ ಸಿಕ್ಕಿತ್ತು. ಮನೆಯಲ್ಲೇ ಚಿಕ್ಕ ಮಗಳಾಗಿ ಹುಟ್ಟಿದ ಇವಳನ್ನು ಕಂಡರೆ ಎಲ್ಲರಿಗೂ ಪ್ರೀತಿ. ಇಂತಹ ಸಮಯದಲ್ಲಿ ಆಕಾಶ್ ನಂತ ಅಪರಿಚಿತ ಹುಡುಗನೊಬ್ಬ ಬಂದು 'ಶಿಕ್ಷಾ'ಳ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡರೆ ಹೇಗೆ...? ಮನೆಯಲ್ಲೇ ಪ್ರೀತಿಯೆಂಬ ಸಾಗರದಲ್ಲಿ ಮಿಂದ ಹುಡುಗಿಗೆ ಆಕಾಶ್ ನ ಪ್ರೇಮ ನಿವೇದನೆ ಯಾವ ದೃಷ್ಠಿಯಿಂದಲೂ ರುಚಿಸಲೇ ಇಲ್ಲ..

ಆದರೆ ಈಗ ಶಿಕ್ಷಾಳ ಮನೆಯ ಪರಿಸ್ಥಿತಿ ಸಂಪೂರ್ಣ ಭಿನ್ನ. ಕಾಲವೆಂಬ ಸುಳಿಯಲಿ ಸಿಕ್ಕಿದ ಆಕೆಯ ಮನೆಯ ಪರಿಸ್ಥಿತಿಯನ್ನು ನೆನೆದು ಶಿಕ್ಷಾಳ ಮನಸ್ಸು ತಲ್ಲಣಿಸಿತು. ಮನಸ್ಸು ದುಃಖದಲ್ಲಿ ಮುಳುಗಿ ಏನೇನೋ ಯೋಚಿಸಲಾರಂಬಿಸಿತು..

ಇಷ್ಟೆಲ್ಲಾ ಯೋಚನೆ ಮಾಡಿದ ಶಿಕ್ಷಾಳ ಕಣ್ಣುಗಳು ಹನಿಗೂಡಿದವು. ಅನಾಥ ಪ್ರಜ್ಞೆ ಕಾಡಲಾರಂಬಿಸಿತು. ಮನದಲ್ಲಿ ಮದುವೆಯ ಆಸೆ ಮೂಡಿದರೂ ಮನೆಯಲ್ಲಿ ಹೇಳಿಕೊಳ್ಳಲಾರದಂತಹ ಭಾವ. ಇಬ್ಬರು ಅಣ್ಣಂದಿರು ಇದ್ದರೂ ತಂಗಿಯನ್ನು ಸರಿಯಾದ ದಡ ಸೇರಿಸಬೇಕೆಂಬ ಜವಬ್ದಾರಿಯಿಲ್ಲದವರು. ಅಣ್ಣಂದಿರು ಇದ್ದರೇನು ತಂದೆ ತಾಯಿಯ ಸ್ಥಾನ ತುಂಬ ಬಲ್ಲರೇ...!! ಆಕಾಶ್ ನ ಪ್ರೀತಿಯನ್ನು ಮತ್ತೆ ಪಡೆಯಲು ಸಾಧ್ಯವೇ...?

ಆಕಾಶ್ ಒಬ್ಬ ಸುಸಂಸ್ಕೃತ ಹುಡುಗ. ಎಲ್ಲರೊಡನೆ ಬೆರೆತು ಮಾತನಾಡುವ ಗುಣದವನು. ನೋಡಲು ಅಷ್ಟೇ ಹ್ಯಾಂಡ್ ಸಮ್ ಆಗಿ ಕಾಣತ್ತಿದ್ದನು. ಜಿಮ್ಮಿನಲ್ಲಿ ಹುರಿಗೊಳಿಸಿದ ದೇಹ. ಅಗಲವಾದ ಎದೆ. ಉದ್ದವಾಗಿ ಕಣ್ಣಿನವರೆಗೂ ಇಳಿಬಿದ್ದಿರುವ ತಲೆಗೂದಲೂ. ಜೊತೆಗೆ ಅವನ ಚೆಲ್ಲು ಚೆಲ್ಲು ಹಾಸ್ಯ ಮಾತುಗಳು ಎಂಥವರನ್ನೂ ಸಹ ಮೋಡಿ ಮಾಡಿ ಬಿಡುತ್ತಿತ್ತು. ಆತ ಯಾರಿಂದ ಮಾತನಾಡುವುದನ್ನು ಕಲಿತನೋ ಏನೋ..!! ಆತನ ಮಾತಲ್ಲಿ ಅದೆಂತದೋ ಆಕರ್ಷಣೆ..! ಆತ ಯಾಕೋ ಇಂದು ನನ್ನನ್ನು ಮತ್ತೆ ಕಾಡಲಾರಂಬಿಸಿದ್ದಾನೆ ಎಂದು ಶಿಕ್ಷಾಳ ಮನಸು ಹೇಳುತ್ತಿತ್ತು. ನನಗೇನಾದರೂ ಆತನ ಮೇಲೆ ಪ್ರೇಮಾನುರಾಗವಾಯಿತೋ ಏನೋ ಎಂದು ಶಿಕ್ಷಾಳ ಮನಸ್ಸಿನಲ್ಲಿ ಒಲವಿವಿನ ಭಾವ ಮೂಡಲಾರಂಬಿಸಿತು. ಆ ಆಕಾಶ್ ಎಂಬ ಹುಡುಗನ ಮುದ್ದು ಮುಖ ಶಿಕ್ಷಾಳ ಮನಸ್ಸನ್ನು ಹೊಕ್ಕು ಪದೇ ಪದೇ ಕೊಲ್ಲುತ್ತಲೇ ಇತ್ತು. ಹೇಗಾದರೂ ಮಾಡಿ ಆಕಾಶ್ ಬಳಿ ಕ್ಷಮೆ ಕೇಳಿ ನನ್ನ ಪ್ರೀತಿಯನ್ನು ಅವನ ಬಳಿ ಹೇಳಿಕೊಳ್ಳಲೇ ಬೇಕು ಎಂದು ಶಿಕ್ಷಾ ಮನಸ್ಸಿನಲ್ಲಿಯೇ ನಿರ್ಧರಿಸಿಕೊಂಡಳು...

ಅಂದು ಬೆಳಗ್ಗೆ ಶಿಕ್ಷಾ ಎಂದಿನಂತೆ ರೆಡಿಯಾಲಿಲ್ಲ. ಹೊಸದಾದ ಕನಕಾಂಬರ ಬಣ್ಣದ ಡ್ರೆಸ್ ಹಾಕಿಕೊಂಡಳು. ಅದಕ್ಕೊಪ್ಪುವ ಬಳೆ, ಬಿಂದಿ, ಎಲ್ಲವನ್ನೂ ಧರಿಸಿಕೊಂಡು ಅಪ್ಸರೆಯ ರೂಪವನ್ನು ಧರಿಸಿದಳು. ಆಕಾಶ್ ನನ್ನು ಇಂದು ಕಾಫಿ ಡೇ ನಲ್ಲಿ ಬೇಟಿಯಾಗಿ ತನ್ನ ಪ್ರೀತಿಯನ್ನು ಹೇಳಿಕೊಳ್ಳಲೇ ಬೇಕೆಂದು ನಿರ್ಧರಿಸಿದಳು. ಮೊದಲೇ ಫೋನ್ ಮಾಡಿ ಕರೆದಂತೆ ಆಕಾಶ್ ಶಿಕ್ಷಾಗಾಗಿ ಕಾಯುತ್ತಿದ್ದನು. ಶಿಕ್ಷಾ ಬಂದು ಕುಳಿತ ಕೂಡಲೇ ತಾನೇ ಕಾಫಿಯನ್ನು ಆರ್ಡರ್ ಮಾಡಿದನು. ಶಿಕ್ಷಾಳೇ ಮಾತು ಪ್ರಾರಂಭಿಸಿದಳು..

"ಮೊದಲು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಒಂದು ವರೆ ವರ್ಷದ ಹಿಂದೆ ನೀವು ಪ್ರಪೋಸ್ ಮಾಡಿದಾಗ ನಾನು ಹಾಗೆ ಮಾಡಬಾರದಿತ್ತು. ನಮ್ಮಣ್ಣ ರೌಡಿಗಳನ್ನು ಕಳುಹಿಸಿ ನಿಮ್ಮನ್ನು ಹೆದರಿಸಿದ್ದು. ಅಮ್ಮಆಡಿದ ಮಾತುಗಳು...ಇವಕ್ಕೆಲ್ಲಾ ನಾನೇ ಕಾರಣ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡು"

ಶಿಕ್ಷಾ ಬೇಡಿಕೊಂಡಳು.

"ಇರಲಿ ಬಿಡಿ, ನನಗೂ ಆ ಘಟನೆ ಮರೆತು ಹೋಗಿದೆ. ಯಾವುದನ್ನೂ ಮನಸ್ಸಿನಲ್ಲಿಟ್ಟುಕೊಂಡಿಲ್ಲ. ಆಗ ನಿಮ್ಮನ್ನು ಮೊದಲ ಸಲ ನೋಡಿದಾಗ ನನಗೆ ಹಾಗೆನ್ನಿಸಿತು. ನಾನೇ ಸ್ವಲ್ಪ ಅವಸರ ಪಟ್ಟೆ. ನನ್ನದೂ ತಪ್ಪಿದೆ.."

ಆಕಾಶ್ ನಗುತ್ತಲೇ ಹೇಳಿದ..

"ನಾನು ಒಂದು ವಿಷಯ ಕೇಳಬಹುದಾ..? ನಿಮಗೆ ಬೇಜಾರಾಗಲ್ಲ ಎಂದರೆ ಕೇಳುತ್ತೇನೆ.."

ಶಿಕ್ಷಾ ತಡವರಿಸುತ್ತಲೇ ಕೇಳಿದಳು.

"ಹೇಳಿ ಪರವಾಗಿಲ್ಲ... ಬೇಜಾರಾಗುವ ಮಾತೇಕೆ"

ಆಕಾಶ್ ಶಾಂತ ಚಿತ್ತನಾಗಿಯೇ ಹೇಳಿದ..

"ನಾನು.. ನಿಮ್ಮನ್ನು ಮದುವೆಯಾಗಬೇಕೆಂದು ನಿರ್ಧರಿಸಿರುವೆ. ನೀವು ನನಗೆ ಒಪ್ಪಿಗೆಯಾಗಿರುವಿರಿ. ಹಿಂದಿನ ಘಟನೆಯಲ್ಲವನ್ನೂ ಮರೆತು ನನ್ನ ಪ್ರೀತಿಯನ್ನು ಸ್ವಿಕರಿಸಿ. ಇದೊಂದೇ ನನ್ನ ಬೇಡಿಕೆ"

ಶಿಕ್ಷಾ ಹಾಗೆ ಹೇಳುವಾಗ ಮುಖದಲ್ಲಿ ನಾಚಿಕೆಯ ಛಾಯೆ ಮೂಡಿ ಮರೆಯಾಯಿತು..

"ಇಲ್ಲ ಶಿಕ್ಷಾ ನೀನು ಹೇಳಿದಂತೆ ನಮಗೆಲ್ಲಾ ನಮ್ಮ ಕುಟುಂಬ ಮುಖ್ಯ. ಹೆತ್ತು ಹೊತ್ತು ಬೆಳಸಿದ ನಮ್ಮ ತಂದೆ ತಾಯಿಗಳು ನಮ್ಮ ಬಗ್ಗೆ ಕನಸು ಕಟ್ಟಿಕೊಂಡಿರುತ್ತಾರೆ. ಹಾಗೆಯೇ ನಮ್ಮ ಮದುವೆಯ ಬಗ್ಗೆಯೂ ಕೂಡ. ನಾವು ಬೆಳೆಸಿದ ಮಗ ನಮ್ಮ ಮಾತು ಮೀರುವುದಿಲ್ಲ ಎಂಬ ಅಪಾರ ನಂಬಿಕೆ ಭರವಸೆ ಅವರಿಗಿರುತ್ತದೆ. ಹಾಗಿರುವಾಗ ಅವರ ಮನ ನೋಯಿಸಿ ನಾನೇ ಹುಡುಗಿಯನ್ನು ಆರಿಸಿಕೊಂಡರೆ ಹೇಗೆ. ಇಷ್ಟು ವರ್ಷ ಪ್ರೀತಿಯಿಂದ ಬೆಳಸಿದ ತಂದೆ ತಾಯಿಯರ ಮನ ನೋಯಿಸುವುದು ಯಾವ ನ್ಯಾಯ..? ಅಂದು ನೀನು ಆಡಿದ ಈ ಮಾತುಗಳು ನಿಜ ಶಿಕ್ಷಾ, ಆ ಮಾತುಗಳು ನನ್ನ ಕಣ್ಣು ತೆರೆಸಿತು. ನಾನು ಮನೆಯಲ್ಲಿ ಬೆಳೆದದ್ದು ಪೊರ್ಕಿಯಂತೆ. ಕಾಲೇಜಿನಲ್ಲೂ ಅಷ್ಟೆ, ಹುಡುಗಿಯರನ್ನು ತಮಾಷೆಗಾಗಿ ಪ್ರಪೋಸ್ ಮಾಡುತ್ತಿದ್ದೆ. ನನ್ನ ಹುಡುಗಾಟಿಕೆಯ ಗುಣ ಮೊದಲೇ ತಿಳಿದಿದ್ದ ಅವರೆಲ್ಲಾ ಮೊದಲು ಕೆಲಸ ಹುಡ್ಕೋ ಆಮೇಲೆ ನಮ್ಮಪ್ಪನ್ನ ಕೇಳು ಮದುವೆಯಾಗ್ತೀನಿ ಎಂದು ಅಷ್ಟೇ ನೇರವಾಗಿ ಉತ್ತರಿಸಿ ಸುಮ್ಮನಾಗಿಬಿಡುತ್ತಿದ್ದರು. ಓದು ಮುಗಿದ ಮೇಲೆ ಕೆಲಸ ಸಿಕ್ತು. ಅದೂ ನೀನು ಕೆಲಸ ಮಾಡುವ ಕಂಪನಿಯಲ್ಲಿ. ಆದರೆ ನನ್ನಲ್ಲಿ ಹುಡುಗಾಟಿಕೆ ಬುದ್ದಿ ಇನ್ನೂ ಹೋಗಿರಲಿಲ್ಲ. ಆಗ ನೀವು ಸಿಕ್ಕಿದ್ದು, ನಿಮ್ಮನ್ನು ಪ್ರಪೋಸ್ ಮಾಡಿದ್ದು. ಇಷ್ಟೆಲ್ಲಾ ರಾದ್ಧಾಂತವಾಗಿದ್ದು. ಆ ವಿಷಯ ಇರಲಿ ಬಿಡಿ. ಈಗ ನನಗೆ ಕೆಲವು ಕೌಟುಂಬಿಕ ಜವಬ್ದಾರಿ ಹೆಚ್ಚಾಗಿವೆ. ಮದುವೆಯಾಗುವ ತಂಗಿ ಇದ್ದಾಳೆ. ಅವಳನ್ನು ದಡ ಸೇರಿಸುವ ಜವಾಬ್ದಾರಿಯೂ ನನ್ನದೆ. ನಾನು ನನ್ನ ತಂಗಿಯನ್ನು ಯಾರನ್ನಾದರೂ ಇಷ್ಟಪಟ್ಟರೆ ಹೇಳಮ್ಮ ಮದುವೆ ಮಾಡಿಸಿ ಬಿಡುತ್ತೇನೆ ಎಂದು ಕೇಳಿದೆ ಅದಕ್ಕೆ ಅವಳು ನಿನ್ನಂತಹ ಅಣ್ಣ, ಜೊತೆಗೆ ಕೇಳಿದ್ದನ್ನೆಲ್ಲಾ ಕೊಡಿಸುವ ತಂದೆ ತಾಯಿ ಇರುವಾಗ ನಾನೇಕೆ ಬೇರೆಯವರ ಪ್ರೀತಿಯನ್ನು ಅರಸಿ ಹೋಗಲಿ ಎಂದು ಹೇಳಿದಳು. ಆ ಮಾತು ನನ್ನ ಮನಸ್ಸು ಚುಚ್ಚಿತು. ಆ ತಂಗಿರುವ ಬುದ್ಧಿಯೂ ನನಗೆ ಇಲ್ಲ ಎಂದೆನಿಸಿದ್ದು ಸುಳ್ಳಲ್ಲ. ನನ್ನ ತಂಗಿಯೂ ನಿನ್ನಂತೆ ಕೌಟುಂಬಿಕ ಮೌಲ್ಯಗಳನ್ನು ತಿಳಿದು ಬೆಳೆದವಳು. ನಾನು ಇಷ್ಟೆಲ್ಲಾ ಬದಲಾಗಲು ನೀನು ಮತ್ತು ನನ್ನ ತಂಗಿಯೇ ಕಾರಣ. ನಮಗೆ ನಮ್ಮ ಕುಟುಂಬ ಮುಖ್ಯವಾಗಬೇಕು.."

ಆಕಾಶ್ ಹಾಗೆ ಹೇಳಿದಾಗ ಶಿಕ್ಷಾಳ ಮುಖದಲ್ಲಿ ಬೇಸರ ಕಾಣಿಸಿಕೊಂಡಿತು..

"ಇಲ್ಲ ನೀವು ಅಂದು ನಾನು ಹೇಳಿದ ಮಾತುಗಳನ್ನೇ ಹೇಳುತ್ತಿದ್ದೀರಿ. ಬಹುಷಃ ಅಂದು ನಾನು ಆಡಿದ ಮಾತುಗಳನ್ನೇ ನನಗೆ ಬಡ್ಡಿ ಸಮೇತ ಹಿಂದಿರುಗಿಸುತ್ತಿದ್ದೀರಿ ಎಂದೆನಿಸುತ್ತದೆ. ಮತ್ತೊಮ್ಮೆ ಕೇಳುತ್ತಿರುವೆ ನನ್ನ ಮೇಲೆ ಕೋಪ ವಿದ್ದರೆ ಕ್ಷಮಿಸಿ ಬಿಡಿ.."

"ಇಲ್ಲಾ ಶಿಕ್ಷಾ, ನೀನು ಹಾಗೇಕೆ ಯೋಚಿಸುತ್ತಿರುವೆ, ನಿನ್ನ ವಿಚಾರ ಧಾರೆಗಳು, ಮೌಲ್ಯಗಳು ಸರಿಯಾಗಿಯೇ ಇವೆ. ನಿನ್ನಿಂದಲೇ ನಾನು ಬದಲಾದದ್ದು. ಕುಟುಂಬದ ಪ್ರೀತಿ ತಿಳಿದದ್ದು.."

ಆಕಾಶ್ ಹಾಗೆ ಹೇಳುವಾಗ ಶಿಕ್ಷಾಳ ಕಣ್ಣುಗಳು ತಂಬಿ ಬಂದವು...

"ನಾನು ಆಡಿದ ಮಾತುಗಳು ಒಂದುವರೆ ವರ್ಷದ ಹಿಂದೆ ಸರಿಯಾಗಿಯೇ ಇತ್ತು. ಆದರೆ ನಮ್ಮನೆಯ ಸ್ಥಿತಿ ಇಂದು ಸಂಪೂರ್ಣ ಬದಲಾಗಿದೆ. ಈಗ ಮನೆಯಲ್ಲಿ ದುಡಿಯುತ್ತಿರುವುದು ನಾನೊಬ್ಬಳೇ. ನನಗೆ ನನ್ನ ಮಂದಿನ ಜೀವನದ ಬಗ್ಗೆ ಚಿಂತೆಯಾಗುತ್ತಿದೆ. ಎರಡನೇ ಅಣ್ಣ ಸ್ವಲ್ಪ ಸೋಮಾರಿ. ಮದುವೆಯಾದನಂತರ ಅವನು ಕೆಲಸ ಕಳೆದುಕೊಂಡ. ಅಪ್ಪ ಮಾಡಿದ ಆಸ್ತಿ ಇದೆ. ಮನೆ ಬಾಡಿಗೆ ಬರುತ್ತೆ. ಆದರೆ ಜೀವನಕ್ಕೆ ಅಷ್ಟೇ ಸಾಕಾಗೊಲ್ಲ. ಸೋಮಾರಿಯಂತೆ ಅಲೆಯುತ್ತಿರುವ ಅಣ್ಣನಿಗೆ ದುಡಿಯುವಂತೆ ಬುದ್ಧಿ ಹೇಳಿ ನನಗೂ ಸಾಕಾಯಿತು. ಅಮ್ಮ ಒಂದು ವರ್ಷದ ಹಿಂದೆ ಸತ್ತು ಹೋದಳು. ಅಪ್ಪ ಸಹ ಬರೀ ಹದಿನೈದೇ ದಿನಕ್ಕೆ ಅಮ್ಮನ ಹಿಂದೆಯೇ ಹೊರಟು ಹೋದರು. ಅಮ್ಮ ಸಾಯುವಾಗ ನನ್ನ ಮದುವೆಯ ಜವಾಬ್ದಾರಿಯನ್ನು ಅಣ್ಣನಿಗೆ ವಹಿಸಿ ಕಣ್ಣು ಮುಚ್ಚಿಕೊಂಡಳು. ಈಗ ನನಗೂ ಮದುವೆ ವಯಸ್ಸು ಮೀರುತಿದೆ. ಸ್ನೇಹಿತರ ಸಂಬಂದಿಕರೆಲ್ಲಾ ಅಣ್ಣನಿಗೆ ಬಂದು ಬುದ್ಧಿ ಹೇಳಿದರು. ಅಣ್ಣ ಮಾತ್ರ ಇನ್ನೂ ಮೂರು ವರ್ಷ ಮದುವೆ ಮಾಡಿಸಲಿಕ್ಕೆ ಬೇಡ ಎನ್ನುತ್ತಿದ್ದಾನೆ. ತನ್ನ ತಂಗಿಯನ್ನು ಬೇಗ ಮದುವೆ ಮಾಡಿ ಕೊಟ್ಟರೆ ತಂಗಿಯ ಜೊತೆ ತಿಂಗಳ ಸಂಬಳವೂ ಮನೆ ಬಿಟ್ಟು ಹೋಗುತ್ತದೆ ಎಂಬ ಭಯ ಅವನಿಗೆ. ಇರುವ ಇಷ್ಟು ಜನಗಳ ಮಧ್ಯೆ ನಾನು ಮದುವೆ ಮಾಡಿ ಕಳುಹಿಸಿ ಎಂದು ಯಾರನ್ನು ಕೇಳುವುದು. ನನ್ನ ಆಸೆಯನ್ನು ಅರ್ಥ ಮಾಡಿಕೊಳ್ಳುವ ಒಂದು ಒಳ್ಳೆಯ ಮನಸ್ಸೂ ಸಹ ಮನೆಯಲ್ಲಿ ಇಲ್ಲ. ಇನ್ನೊಬ್ಬ ಹಿರಿಯ ಅಣ್ಣ ಮದುವೆಯಾಗಿ ಹೆಂಡತಿಯೊಂದಿಗೆ ದೂರದ ದೆಹಲಿಯಲ್ಲಿ ವಾಸವಾಗಿರುನು. ಆತ ಇದ್ದರೂ ಮನೆಯ ಕಷ್ಟಕ್ಕೆ ಬಾರದವನು. ನನಗೂ ಒಂದು ಮನಸಿದೆ, ನನಗೆ ನನ್ನದೇ ಆದ ಜೀವನವಿದೆ, ನನಗೂ ಆಸೆ ಆಕಾಂಕ್ಷೆಗಳಿವೆಯೆಂದು ಯಾರ ಬಳಿ ಹೇಳಿಕೊಳ್ಳಲಿ. ಆದ ಕಾರಣ ಈಗ ಮದುವೆಯ ಬಗ್ಗೆ ನಾನೇ ಒಂದು ಒಂದು ನಿರ್ಧಾರಕ್ಕೆ ಬಂದಿರುವೆ"

ಶಿಕ್ಷಾ ಭಾರವಾದ ಮನಸಿನಿಂದಲೇ ಹೇಳಿಕೊಂಡಳು.

"ಅಂದರೆ ನಿನ್ನ ಕುಟುಂಬದಲ್ಲಿ ಎಲ್ಲವೂ ಸರಿಯಿದ್ದರೆ. ನಿನಗೆ ನಿನ್ನ ಕುಟುಂಬ ಬಹು ಮುಖ್ಯವಾಗುತ್ತಿತ್ತು. ನಿನ್ನ ಕುಟುಂಬದಲ್ಲಿ ನೀನು ನಿರೀಕ್ಷಿಸಲಾಗದ ಘಟನೆಗಳು ನಡೆದದ್ದರಿಂದ ನೀನು ನಿನ್ನ ಮದುವೆಯ ನಿರ್ಧಾರವನ್ನು ಬದಲಿಸಿದ್ದೀಯಾ..ನಿನ್ನ ಮದುವೆಯ ವಿಷಯದಿಂದ ಕುಟುಂಬವನ್ನು ದೂರ ಇಡಲು ಬಯಸುತ್ತಿರುವೆ. ಆದರೆ ನನ್ನ ಕುಟುಂಬದಲ್ಲಿ ಹಾಗಿಲ್ಲವಲ್ಲ. ನಾನೇಕೆ ನನ್ನ ಕುಟುಂಬವನ್ನು ಹೊರಗಿಟ್ಟು ಪ್ರೇಮ ವಿವಾಹವನ್ನು ಒಪ್ಪಿಕೊಳ್ಳಲಿ. ನಾನೇಕೆ ನನ್ನ ತಂದೆ ತಾಯಿಯ ಮನಸ್ಸನ್ನು ನೋಯಿಸಲಿ, ನನಗೆ ನನ್ನ ಕುಟುಂಬವೇ ಮುಖ್ಯ ಶಿಕ್ಷಾ.."

"ನಾನೆಲ್ಲಿ ಓಡಿ ಹೋಗಿ ಮದುವೆಯಾಗೋಣ ಎಂದೆ ಆಕಾಶ್.. ನಿನ್ನ ಕುಟುಂಬವನ್ನು ಒಪ್ಪಿಸು. ಹಿರಿಯರ ಸಮ್ಮುಖದಲ್ಲೇ ಮದುವೆಯಾಗೋಣ.."

"ಅದು ಹಾಗಾಗಲೂ ಸಾಧ್ಯವಿಲ್ಲ ಶಿಕ್ಷಾ... ನೀನು ಅಂದು ನನ್ನ ಪ್ರೀತಿಯನ್ನು ಒಪ್ಪಿಕೊಳ್ಳದಿದ್ದರೂ ನನಗೆ ಬೇಜಾರಾಗುತ್ತಿರಲಿಲ್ಲ. ನನಗೆ ನನ್ನ ಕುಟುಂಬ ಮುಖ್ಯ ಅನ್ನೋ ನೆಪದಲ್ಲಿ ನೀನು ನಿಮ್ಮಣ್ಣನಿಂದ ರೌಡಿಗಳನ್ನು ಕಳುಹಿಸಿದೆ. ನಿಮ್ಮ ತಾಯಿಯಿಂದ ಬೈಯ್ಯಿಸಿದೆ. ಅಂದು ಬಾಸ್ ನಿಂದ ಮುಖಕ್ಕೆ ಮಂಗಳಾರತಿಯೂ ಆಯಿತು. ಯಾವ ಕುಟುಂಬದ ಮೌಲ್ಯಗಳು ಪ್ರೀತಿಯನ್ನು ಧಿಕ್ಕರಿಸಿ ಕೆಟ್ಟದಾಗಿ ವರ್ತಿಸು ಎಂದು ಹೇಳಿಲ್ಲ. ಅಷ್ಟಕ್ಕೂ ನಾಳೆ ನಾನು ತಂದೆ ತಾಯಿಯ ಜೊತೆಯಲ್ಲಿ ಹುಡುಗಿಯನ್ನು ನೋಡಲಿಕ್ಕೆ ಹೊರಟಿದ್ದೇನೆ. ಇಂತಹ ಸಂದರ್ಭದಲ್ಲಿ ನಾನು ನಿನ್ನ ಮಾತು ಕಟ್ಟಿಕೊಂಡು ನಾನು ನನ್ನ ತಂದೆ ತಾಯಿಯ ಮನಸ್ಸನ್ನು ನೋಯಿಸಲಾರೆ. ಸರಿ ನಾನು ಬರುತ್ತೇನೆ. ಸ್ನೇಹಿತರಾಗಿ ಇರೋಣ... Bye... "

ಆಕಾಶ್ ಹಾಗೆ ಹೇಳಿ ಹೊರಟು ಹೋದನು..

ಶಿಕ್ಷಾಳ ಕಣ್ಣಿನಿಂದ ಹನಿಗಳು ಜಾರಿದವು. ತನ್ನ ಮನೆಯ ಪರಿಸ್ಥಿಯನ್ನು ನೆನಪಿಸಿಕೊಂಡು ಗದ್ಘದಿತಳಾದಳು. ಅಂದು ಪೂರ್ತಿದಿನ ಅವಳ ಮನಸು ನೋವಿನಿಂದಲೇ ಕೂಡಿತ್ತು. ಕಛೇರಿಯಲ್ಲಿ ಕೆಲಸ ಮಾಡುವಾಗಲೂ ಆಕಾಶ್ ಕಡೆ ಮಾತನಾಡಲು ಹೋಗಲಿಲ್ಲ .


ಸಂಜೆ ಮನೆಗೆ ಹೋದಾಗ ಶಿಕ್ಷಾಳಿಗೊಂದು Surprise ಕಾದಿತ್ತು. ದೆಹಲಿಯಿಂದ ಅವರ ಹಿರಿಯ ಅಣ್ಣ ಮತ್ತು ಅತ್ತಿಗೆ ಆಗಮಿಸಿದ್ದರು. ರಾತ್ರಿ ಊಟವಾದ ಮೇಲೆ ಅಣ್ಣ ಶಿಕ್ಷಾಳನ್ನು ಕೂರಿಸಿಕೊಂಡು.
"ನೋಡಮ್ಮ ಶಿಕ್ಷಾ, ಅಪ್ಪ ಅಮ್ಮ ಸತ್ತು ಹೋದಾಗಿನಿಂದ ನಾನು ತಂದೆಯ ಸ್ಥಾನದಲ್ಲಿ ನಿಲ್ಲ ಬೇಕಾದದ್ದು ನನ್ನ ಕರ್ತವ್ಯ. ಅಪ್ಪ ಅಮ್ಮ ಇದ್ದಾಗ ನಾನು ಮನೆಯ ಕಡೆ ಅಷ್ಟಾಗಿ ಗಮನ ಕೊಡುತ್ತಿರಲಿಲ್ಲ. ದೆಹಲಿಯಿಂದ ನಾನು ಪ್ರತಿ ತಿಂಗಳು ದುಡ್ಡು ಕಳುಹಿಸಿದರು ಅಪ್ಪ ನನ್ನ ಹಣ ಮುಟ್ಟಲಿಲ್ಲ. ನೀನು ಬೆಂಗಳೂರಿಗೆ ವರ್ಗಾವಣೆಯಾಗಿ ಬರುವವರೆಗೂ ನಿನ್ನ ಹಣ ಮುಟ್ಟುವುದಿಲ್ಲ ಅನ್ನೋ ಹಠ ಅಪ್ಪನದು. ನನಗೂ ಇಲ್ಲಿಗೇ ಬಂದು ಅಪ್ಪ ಅಮ್ಮನೊಂದಿಗೆ ಇರಬೇಕೆನ್ನುವ ಆಸೆ ಇದ್ದರೂ ಅದು ನೆರವೇರಲಿಲ್ಲ ನಾನು ದೆಹಲಿಗೆ ಹೊದಾಗ ನೀನಿನ್ನು ಒಂಭತ್ತನೇ ತರಗತಿ. ಅಪ್ಪ ನನ್ನನ್ನು ಜವಬ್ದಾರಿಯಿಲ್ಲದವನು ಅಂತ ಬೈಯ್ದು ಬೈಯ್ದು ನನ್ನನ್ನು ಹಾಗೇ ಇಟ್ಟು. ಅದಿರಲಿ, ನಾನು ಕಳುಹಿಸಿದ ಆ ಹಣವೇ ಈಗ ಐದು ಲಕ್ಷದ ತನಕ ಸೇರಿದೆ. ಅದನ್ನೇ ನಿನ್ನ ಮದುವೆಗೆ ಖರ್ಚು ಮಾಡೋದು ಅಂತ ನಿರ್ಧರಿಸಿರುವೆ. ನಾಳೆ ನಿನ್ನನ್ನು ನೋಡಲು ಹುಡುಗನ ಕಡೆಯವರು ಬರುತ್ತಿದ್ದಾರೆ. ಹುಡುಗ ಇಂಜಿನಿಯರಿಂಗ್ ಓದಿದ್ದಾನೆ. ಇಲ್ಲೇ ಬೆಂಗಳೂರಿನಲ್ಲಿ ಕೆಲಸ. ಹಾಗೆ ನಿಮ್ಮಣ್ಣನಿಗೆ ಇಂದಿರಾನಗರದಲ್ಲಿ ಕೆಲಸ ಕೊಡಿಸಿರುವೆ.."
ದೆಹಲಿಯ ಅಣ್ಣ ಹಾಗೆ ಹೇಳಿದ ಕೂಡಲೇ ಶಿಕ್ಷಾಳ ಕಣ್ಣುಗಳು ಆನಂದ ಬಾಷ್ಪದಿಂದ ತುಂಬಿ ಬಂದವು. ತನಗೆ ಅಪ್ಪ ಅಮ್ಮ ಬಿಟ್ಟರೇ ಯಾರೂ ಇಲ್ಲ ಎಂದು ತಿಳಿದ ಶಿಕ್ಷಾಳಿಗೆ ತನ್ನ ಬಗ್ಗೆಯೇ ಅಸಹನೆ ಮೂಡಿತು..
"ತಗೋ ಶಿಕ್ಷಾ ಇದನ್ನು ಧರಿಸಿಕೊಂಡು ನಾಳೆ ರೆಡಿಯಾಗು. ಹುಡುಗನಿಗೆ ನೀನು ಅಪ್ಸರೆಯಂತೆ ಕಾಣಬೇಕು. ನಿನಗಾಗಿ ಅಂತಾನೇ ತಂದಿದ್ದು"
ಅತ್ತಿಗೆ ಹಾಗೆ ಹೇಳುತ್ತಾ ಬಂಗಾರದ ನೆಕ್ಲೆಸನ್ನು ಶಿಕ್ಷಾಳ ಕೈಗಿಟ್ಟಳು. ಸುಮಾರು ಐವತ್ತು ಗ್ರಾಂ ನ ದೊಡ್ಡ ಸರ. ಫಳ ಫಳ ನೆ ಕಣ್ಣು ಕೋರೈಸುವಷ್ಟು ಹೊಳೆಯುತ್ತಿತ್ತು. ಅಪ್ಪ ಅಮ್ಮಳನ್ನು ಅಣ್ಣ ಅತ್ತಿಯಲ್ಲೇ ಕಂಡಂತಾಯಿತು. ಶಿಕ್ಷಾಳ ಮನಸು ಆನಂದದಿಂದ ಕುಣಿಯಿತು. ಆದರೆ ಆಕಾಶ್ ನನ್ನು ಬಿಡಬೇಕೆ ಎಂದು ಮನಸು ತಲ್ಲಣಿತು. ಮನದಲ್ಲಿ ಮೊದಲ ಬಾರಿ ಹುಟ್ಟಿದ ಪ್ರೀತಿ ಬಲಿಯಾಯಿತಲ್ಲ ಎಂದು ದುಃಖಿಸಿದಳು.
ಬೆಳಗ್ಗೆ ಎದ್ದ ಕೂಡಲೇ ಶಿಕ್ಷಾಳಲ್ಲಿ ಅಷ್ಟೊಂದು ಸಡಗರ ಇರಲಿಲ್ಲ. ಮನಸು ಆಕಾಶ್ ನನ್ನು ನೆನೆಯುತ್ತಿತ್ತು. ಆದರೂ ಬಂಗಾರದ ಹೊಸ ನೆಕ್ಲೆಸ್ ಹೊಸ ಸೀರೆಯನ್ನು ಧರಿಸಿಕೊಂಡು ಅಪ್ಸರೆಯಂತೆ ಶೃಂಗರಿಸಿಕೊಂಡಳು. ಆಗಲೇ ಹುಡುಗನ ಕಡೆಯವರು ಬರುವ ಸಮಯವಾಗಿತ್ತು. ಹೊರಗಡೆ ಕಾರು ಬಂದು ನಿಂತ ಕೂಡಲೇ ಶಿಕ್ಷಾ ಕೋಣೆಯನ್ನು ಸೇರಿಕೊಂಡಳು. ಹುಡುಗ ನೋಡಲು ಸುಂದರವಾಗಿದ್ದನು. ತಂದೆ ತಾಯಿ ಎಲ್ಲರೂ ದೆಹಲಿಯ ಅಣ್ಣ ಅತ್ತಿಗೆಯೊಂದಿಗೆ ಕುಶಲೋಪರಿ ವಿಷಯಗಳನ್ನು ಚರ್ಚಿಸಿದರು. ನಂತರ ಹುಡುಗಿ ನೋಡುವ ಶಾಸ್ತ್ರ ನಡೆಯಿತು. ಶಿಕ್ಷಾ ಕಾಫಿಯ ತಟ್ಟೆಯನ್ನು ಹಿಡಿದುಕೊಂಡು ಬಂದಳು. ತಲೆ ನಾಚಿಗೆಯಿಂದ ಕೆಳಗೆ ನೋಡುತ್ತಿತ್ತು. ಎಲ್ಲರಿಗೂ ಕಾಫಿಯನ್ನು ಕೊಟ್ಟಳು..
"ನೋಡಮ್ಮ ಶಿಕ್ಷಾ ಹೀಗೆ ನಾಚಿಕೆಯಿಂದ ತಲೆ ತಗ್ಗಿಸಿಕೊಂಡೇ ಇದ್ದರೆ ಹೇಗೆ ಹೇಳು. ಹುಡುಗನನ್ನು ಒಮ್ಮೆ ನೋಡು. ಇಷ್ಟವಾದರೆ ನಾವು ಮುಂದಿನ ವಿಷಯ ಮಾತನಾಡಲು ಅನುಕೂಲವಾಗುತ್ತೆ"
ದೆಹಲಿಯ ಅತ್ತಿಗೆ ಹಾಗೆಂದ ಕೂಡಲೇ ಶಿಕ್ಷಾ ನಿಧಾನವಾಗಿ ತಲೆ ಎತ್ತಿಕೊಂಡು ಹುಡುಗನನ್ನೊಮ್ಮೆ ನೋಡಿದಳು..
ಶಿಕ್ಷಾಳಿಗೆ ಆಶ್ಚರ್ಯ ಕಾದಿತ್ತು. ಅದು ಅವನೇ ಆಕಾಶ್...!!!
ಅರೆ ಇವನೇಕೆ ಇಲ್ಲಿ ..! ಹೇಗೆ..! ಮನಸು ಹೇಗೆಗೋ ಯೋಚಿಸಿತು.
ಕಾಫಿ ಕೊಟ್ಟವಳೆ ಶಿಕ್ಷಾ ಮತ್ತೆ ತನ್ನ ರೂಮನ್ನು ಸೇರಿಕೊಂಡಳು...
ಆಕಾಶ್ ಹುಡುಗಿಯೊಂದಿಗೆ ಪರ್ಸನಲ್ ಆಗಿ ಮಾತನಾಡಬಹುದೇ ಎಂದು ಕೇಳಿಕೊಂಡು ಶಿಕ್ಷಾಳ ರೂಮ್ಗೆ ಹೋದನು. ಶಿಕ್ಷಾಳನ್ನು ಹತ್ತಿರಕ್ಕೆ ಬರ ಸೆಳೆದುಕೊಂಡನು. ದಂತದ ಬೊಂಬೆಯಂತಿದ್ದ ಶಿಕ್ಷಾ ನಾಚಿಕೆಯಿಂದ ಆಕಾಶ್ ತೋಳಿನಲ್ಲಿ ಬಂಧಿಯಾದಳು...
"ನನ್ನಗೆ ನನ್ನ ಕುಟುಂಬ ಮುಖ್ಯ ಅಂತ ಹೇಳ್ತಿರ್ತಿಯಾ ಅಲ್ವಾ... ನಿನ್ನ ತಂದೆಯ ಅಕ್ಕ ತಂಗಿಯರ ಹೆಸರು ಹೇಳು ನೋಡೋಣ, ನಿನ್ನ ಕುಟುಂಬದ ಪರಿಚಯವಾದರೂ ನಿನಗಿದೆಯಾ ಇಲ್ವಾ ನೋಡೋಣ.."
ಆಕಾಶ್ ಹಾಗೆ ಹೇಳಿದ ಕೂಡಲೇ ಶಿಕ್ಷಾ ನಾಚಿಕೆಯಿಂದಲೇ..
"ನನಗೆ ಅಷ್ಟು ತಿಳಿಯದೇ.. ಅಪ್ಪನಿಗೆ ಒಬ್ಬಳು ತಂಗಿ ಇಬ್ಬರು ತಮ್ಮಂದಿರುವರು.." ಎಂದಳು.
"ನೀನು ಹೇಳಿದ್ದು ತಪ್ಪು. ನಿಮ್ಮಪ್ಪನಿಗೆ ಅಕ್ಕ ಒಬ್ಬಳಿದ್ದಳು. ಸುಮಾರು ನಲವತ್ತು ವರ್ಷದ ಹಿಂದೆಯೇ ಅಂತರ್ಜಾತಿಯ ವಿವಾಹವಾಗಿದ್ದಳು. ಅಂದಿನಿಂದ ನಿಮ್ಮ ತಂದೆ ಅವಳನ್ನು ದೂರ ಇಟ್ಟಿದ್ದರು. ಅವಳ ಮಗನೇ ನಾನು. ಅಂದರೆ ನಿಮ್ಮತ್ತೆಯ ಮಗ. ನಿಮ್ಮ ದೆಹಲಿಯ ಅಣ್ಣ ಮಾತ್ರ ನಮ್ಮನೆಗೆ ಆಗಾಗ ಬರುತ್ತಿದ್ದರು. ಅದು ಬಿಟ್ಟರೆ ನಿಮ್ಮ ಚಿಕ್ಕ ಅಣ್ಣನಿಗೂ ಸಹ ನಮ್ಮನ್ನು ಕಂಡರೆ ಆಗುತ್ತಿರಲಿಲ್ಲ. ನಿಮ್ಮಪ್ಪ ಅಂತೂ ನಮ್ಮಮ್ಮಳನ್ನು ಕಂಡರೆ ಉರಿದು ಬೀಳುತ್ತಿದ್ದರು. ನಾನು ಹೊಸದಾಗಿ ಕಂಪನಿಗೆ ಸೇರಿಕೊಂಡಾಗ ನಾನು ನಿನಗೆ ಪ್ರಪೋಸ್ ಮಾಡಿದ್ದು ನಿಮ್ಮ ದೆಹಲಿಯ ಅಣ್ಣನ ನೀಡಿದ ಸಲಹೆಯಂತೆಯೇ. ಈ ವಿಷಯ ನೀನು ಮನೇಲಿ ಹೇಳಿದಾಗ, ಯಾರೂ ಒಂದೇ ಸಾರಿ ನನ್ನ ಮೇಲೆ ಉರಿದು ಬೀಳಲಿಲ್ಲ, ಮೊದಲು ನಾನು ಯಾರೆಂದು ತಿಳಿದುಕೊಂಡರು. ನಾನು ನಿಮ್ಮ ದೊಡ್ಡತ್ತೆಯ ಮಗ ಎಂದು ತಿಳಿದ ಮೇಲೆಯೇ ನಿಮ್ಮಣ್ಣ ರೌಡಿಗಳನ್ನು ಕಳುಹಿಸಿದ್ದು. ನಿಮ್ಮಮ್ಮ ಫೋನ್ ಮಾಡಿ ಬೈಯ್ದದ್ದು, ಇದಾವುದೂ ನಿನಗೆ ಗೊತ್ತಿಲ್ಲ,
ಆಮೇಲೆ ನಿಮ್ಮ ದೆಹಲಿಯ ಅಣ್ಣ ಮಾತ್ರ ಶಿಕ್ಷಾಳನ್ನು ಮದುವೆ ಮಾಡಿ ಕೊಟ್ಟರೆ ಅದೇ ಮನೆಗೆ ಎಂದು ಹಠಕ್ಕೆ ಬಿದ್ದರು. ಆಗಾಗ ನಿಮ್ಮಮ್ಮನ ಮೇಲೆ ಒತ್ತಡವೂ ಹೇರುತ್ತಿದ್ದರು. ನಿಮ್ಮಮ್ಮ ಸಾಯುವ ವೇಳೆಯಷ್ಟರಲ್ಲಿ ತಮ್ಮ ಮನಸು ಬದಲಾಯಿಸಿಕೊಂಡರು. ನಿನ್ನ ಮದುವೆಯ ಜವಬ್ದಾರಿಯನ್ನು ನಿಮ್ಮ ದೆಹಲಿ ಅಣ್ಣನ ಮೇಲೆ ಹಾಕಿದರು. ನಿಮ್ಮಪ್ಪ ಸಾಯುವಾಗ ನಮ್ಮಮ್ಮನ್ನು ನೋಡಬೇಕೆಂದು ಕರೆಯಿಸಿಕೊಂಡು ಮಾತನಾಡಿದರು. ಅಕ್ಕನನ್ನು ದೂರ ಇಟ್ಟಿದ್ದಕ್ಕೆ ಕ್ಷಮೆ ಕೇಳಿದರು. ಆಗ ನಿಮ್ಮಪ್ಪನ ಸಲಹೆಯಂತೆಯೇ ಈ ವಿವಾಹ ನಡೆಯುತ್ತಿರೋದು. ನಿಮ್ಮನೇಲಿ ನೀನು ತುಂಬಾ ಚಿಕ್ಕ ಹುಡುಗಿಯಾದ್ದರಿಂದ ನಿನಗೆ ಕೆಲವು ಸಂಬಂದದ ವಿಷಯಗಳನ್ನು ನಿನ್ನಿಂದ ದೂರವೇ ಇಟ್ಟಿದ್ದರು. ಎಲ್ಲವೂ ನಿಮ್ಮಣ್ಣನ ಪ್ರಯತ್ನದಿಂದಲೇ ನಡೆದಿದ್ದು ಎರಡು ಕುಟುಂಬಗಳು ಮತ್ತೆ ಬೆರೆತಿದ್ದು. ನಾನೂ ಸಹ ನಿನಗೆ ನನ್ನ ಮೇಲೆ ಪ್ರೇಮಾನುರಾಗವಾಗುವವರೆಗೆ ಕಾದಿದ್ದು. ನಾನು ಕಾದದ್ದಕ್ಕೂ ಸಾರ್ಥಕವಾಯಿತು. ನಿನ್ನೆಯ ದಿನವೇ ನನಗೆ ಗೊತ್ತಾಗಿದ್ದು ನಿನಗೆ ನನ್ನ ಮೇಲೆ ಪ್ರೀತಿಯಾಗಿದೆ ಅಂತ. ಆ ಗಿನಕ್ಕೋಸ್ಕರವೇ ನಾನು ಕಾಯುತ್ತಿದ್ದೆ. ನಿನ್ನೆ ನಾನು ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ.."
ಹಾಗೆಂದ ಕೂಡಲೇ ಶಿಕ್ಷಾ ಆಕಾಶ್ ನನ್ನು ದೂರ ತಳ್ಳಿ..
"ಅಂದ್ರೆ ನೀನು ನನ್ನನ್ನು ದುಃಖಕ್ಕೆ ತಳ್ಳಿ, ನೀನೊಬ್ಬನೆ ಅಷ್ಟೊಂದು ಸಂಭ್ರಮ ಪಟ್ಟೆಯಾ... ಈಗ ನೋಡು ಮಾಡ್ತೀನಿ.."
ಎನ್ನುತ್ತಾ ಶಿಕ್ಷಾ ಹಾಸಿಗೆಯ ಮೇಲಿನ ದಿಂಬನ್ನು ತೆಗೆದು ಕೊಂಡು ಆಕಾಶ್ ಗೆ ಹೊಡೆಯಲು ಮುಂದಾದಳು. ಆಕಾಶ್ ಕೂಡಲೇ ಮತ್ತೆ ಅವಳನ್ನು ಎಳೆದುಕೊಂಡು ಬಾಹು ಬಂದನದಲ್ಲಿ ಸಿಲುಕಿಸಿಕೊಂಡನು. ಶಿಕ್ಷಾ ನಿಜವಾದ ಪ್ರೇಮಾನುರಾಗದ ಬಂಧನದಲ್ಲಿ ಸಿಲುಕಿ ನಲುಗಿದಳು..
"ನನಗೆ ನನ್ನ ಕುಟುಂಬ ಮುಖ್ಯ... ಯಾರನ್ನೋ ಮದುವೆಯಾಗುವುದಕ್ಕಿಂತ. ಈಗ ನಾನು ನನ್ನ ಮಾವನ ಮಗಳನ್ನು ಮದುವೆಯಾಗುತ್ತಿರುವೆ. ಹಾಗಾಗಿ ನಿನ್ನೆ ಆ ಅಪರಿಚಿತ ಹುಡುಗಿಯೊಂದಿಗೆ ನಾಟಕ ಆಡಿದ್ದು"
ಆಕಾಶ್ ನಿಧಾನವಾಗಿ ಉಸುರಿದನು...

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.