ಈ ಮೇಲಿನ ಸಾಲುಗಳೊಂದಿಗೆ, ಎರಡು ಪ್ರೇಮ ಪಕ್ಷಿಗಳ ಚಿತ್ರ ಬರೆದು ಕಾರ್ಡು ರೆಡಿ ಮಾಡಿ ಪೋಸ್ಟ್ ಮಾಡಲೆಂದು ಡಬ್ಬಿ ಮುಂದೆ ಬಂದು ನಿಂತಾಗ ಕೈಗಳು ಕೊಂಚ ಅದುರುತ್ತಿದ್ದವು. ಸುತ್ತ ಮುತ್ತ ಯಾರಾದರು ನೋಡುತ್ತಿರುವರಾ ಎಂದು ಕಣ್ಣಾಡಿಸಿ, ಯಾರೂ ಇಲ್ಲದ್ದನ್ನು ಖಾತರಿ ಮಾಡಿಕೊಂಡು ಡಬ್ಬಿಯೊಳಗೆ ಹಾಕುವಾಗ ಕಾರ್ಡ್ ಮೇಲೆ ಹಾಗೇ ತುಟಿಯೊತ್ತಿದ್ದೆ! ಪೋಸ್ಟ್ ಮಾಡಿಯಾದ ಮೇಲೆ ಏನು ಒಂತರ ಮನಸ್ಸಲ್ಲಿ ಭಯ, ಕಾತರ, ಚಡಪಡಿಕೆ... ಆ ದಿನವೆಲ್ಲ ಸರಿಯಾಗಿ ಊಟವೂ ಸೇರಲಿಲ್ಲ, ನಿದ್ದೆಯೂ ಸುಳಿದಿರಲಿಲ್ಲ. ಒಂದು ದಿನ ಆಯ್ತಾ, ಎರಡು, ಮೂರು... ಹತ್ತು ದಿನವಾಯ್ತು.. ಏನು ಸುದ್ದಿ ಇಲ್ಲ. ಏನರ ಕಾರ್ಡು ಅವಳ ಹಾಸ್ಟೆಲ್ ವಾರ್ಡನ್ ಕೈಗೆ ಸಿಕ್ಕು ಅವರೇನಾದರೂ ರಂಪ ಮಾಡಿರಬಹುದಾ? ಅಥ್ವಾ ನಿರುಪಮ ಸಿಟ್ಟಾಗಿ ಮಾಮನ ಹತ್ತಿರ ಏನರ ಹೇಳಿರಬಹುದಾ? ಮಾಮ ಏನರ ನಮ್ಮ ಅಮ್ಮ-ಅಪ್ಪನ ಬಳಿ ಹೇಳಿದರೆ ಏನು ಗತಿ? ಓಹ್ ಯಾಕಾದ್ರು ಬರೆದನಪ್ಪ ಈ ಪತ್ರ...? ಅಂತ ಎಲ್ಲ ವಿಚಾರ ಸುರುಳಿಗಳು ಮನದಲ್ಲೇ ಗುಂಯ್ಯ್ ಅಂತಾ ತಿರುಗುತ್ತಿದ್ದರೂ... ಎಲ್ಲೋ ಒಂದು ಮೂಲೆಯಲ್ಲಿ ಅವಳು ಸಹಾ ಒಪ್ಪಿ ಪತ್ರ ಬರೆದರೂ ಬರೆಯಬಹುದು ಎಂದು ದಿನಾ ಪೋಸ್ಟ್ ಮ್ಯಾನ್ ಬರೋದನ್ನೇ ಬಕಪಕ್ಷಿಯಂತೆ ಕಾದು ಕೂತಿದ್ದೆ. ಈಗಿನಂತೆ ಫೇಸ್ ಬುಕ್, ಟ್ವಿಟರ್, ಎಸ್ಎಮ್ಎಸ್, ಇಮೇಲ್ ಇದ್ದಿದ್ದರೆ ತಕ್ಷಣವೇ ಮೆಸೇಜ್ ಅವಳಿಗೆ ಹೋಯಿತೋ ಇಲ್ಲವೋ, ರೀಡ್ ಮಾಡಿದಳೋ ಇಲ್ವೋ? ಅಂತ ಗೊತ್ತಾಗುತ್ತಿತ್ತು. ಹದಿನೈದು ದಿನಕೊಮ್ಮೆ ನೋಡಲು ಹೋಗುತ್ತಿದ್ದ ನನಗೆ ಇಪ್ಪತ್ತು ದಿನಗಳಾದರೂ ಹೋಗಲು ಏನೋ ಹಿಂಜರಿಕೆಯಾಗಿ ಹಾಗೇ ರೂಮಲ್ಲಿ ಮೈಕ್ರೋ ಪ್ರೋಸೆಸರ್ ಬುಕ್ ನಲ್ಲಿ ಕಣ್ಣಾಕಿದ್ದರೂ, ಮನದಲ್ಲಿ ಏನೋ ಬೇರೆ ಪ್ರೋಸೆಸ್ಸ್ ನಡಿತಾ ಇತ್ತು! ಪೋಸ್ಟ್ ಅಂತಾ ಕೂಗು ಕೇಳಿ ಹೊರಗಡೆ ಬಂದಾಗ, ಪೋಸ್ಟ್ ಮ್ಯಾನ್ "ನಾಗೇಶ... ನೋಡಪಾ ದಿನ ಕೇಳ್ತಿದ್ದೆ ಅಲ್ವಾ.. ಬಂದಿದೆ ನೋಡು ಪತ್ರ ಈ ದಿನ ನಿನಗೆ" ಅಂತ ಹೇಳಿ ಕೊಟ್ಟು ಹೋದಾಗ, ಓಪನ್ ಮಾಡುವಾಗ ಆಗುತ್ತಿದ್ದ ಹೃದಯದ ಬಡಿತ ಪಕ್ಕದಲ್ಲಿ ನಿಂತಿದ್ದವರಿಗೂ ಕೇಳುವಂತಿತ್ತು. ಬರೆದಿದ್ದಳು ಅವಳು ಅದರಲ್ಲಿ... ಬಂದು ತಲುಪಿತು ನಿನ್ನ ಪತ್ರ .. ಅದ ಓದಿ, ಸುಳಿಯುತ್ತಿಲ್ಲ ನಿದ್ದೆ ಹತ್ರ .. ಗೊತ್ತಿಲ್ಲ..ಅದೇನು ಹಾಕಿರುವೆಯೋ ಮಾಟ ಮಂತ್ರ ಬುಕ್ ಓಪನ್ ಮಾಡಿದರೆ ಕಾಣುವುದು ನಿನ್ನದೇ ಚಿತ್ರ..! -ನಿನ್ನವಳು ಹುರ್ರೇ ಅಂದು ಕುಣಿದಾಡಿದ್ದೆ ಅಲ್ಲೇ ಹೊರಗಡೆ ಹುಚ್ಚನಂತೆ. ಮಾರನೆ ದಿನ ಆ ಪೋಸ್ಟ್ ಮ್ಯಾನ್ಗೆ ಒಂದು ಸ್ವೀಟ್ ಬಾಕ್ಸ್ ಕೊಟ್ಟು ಥ್ಯಾಂಕ್ಸ್ ಅಂತಾ ಹೇಳಿದ್ದಾಗ ಅವ ಹಂಗೆ ಕಣ್ಣು ಮಿಟುಕಿಸಿ ನಕ್ಕಿದ್ದ.

ಹೀಗೆ ಆರಂಭವಾದ ನಮ್ಮ ಪ್ರೀತಿ... ನಾನು ಇಂಜಿನಿಯರಿಂಗ್ ಮುಗಿಸೋದರಲ್ಲಿ ಹತ್ತು ಹಲವಾರು ಪ್ರೇಮ ಪತ್ರಗಳು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲ್ಲಗೆ ರವಾನೆ ಆಗೋದು ಇರ್ಲಿ, ಪೋಸ್ಟ್ ಮ್ಯಾನ್ಗೆ ಹೆಚ್ಚು ಕೆಲಸ ಆಗಿತ್ತು ನಮ್ಮಿಂದ! ಈಗ ಈ ಕಂಪ್ಯೂಟರ್ ಯುಗದಲ್ಲಿ... ಇಮೇಲ್, ಫೇಸ್ ಬುಕ್ ನಂತಹ ಸಾಮಾಜಿಕ ತಾಣಗಳು ಬಂದ ಮೇಲೆ ಜನ ಹೆಚ್ಚು ಹೆಚ್ಚಾಗಿ ಬರೀ ಆನ್ ಲೈನ್ ಮೆಸೇಜಿಂಗ್, ಎಸ್ಎಮ್ಎಸ್, ಚಾಟ್ನಲ್ಲೆ ತಮ್ಮ ಪ್ರೇಮ ನಿವೇದನೆ, ಪ್ರೇಮ ಸಂಭಾಷಣೆ ನಡೆಸೋದಿರಲಿ, ಪ್ರೇಮಿಗಳ ದಿನಾಚರಣೆ, ಅಮ್ಮ - ಅಪ್ಪಂದಿರ ದಿನಾಚರಣೆ, ಹಬ್ಬ ಹರಿದಿನಗಳು ಏನೇ ಬರಲಿ.. ಆನ್ ಲೈನ್ ನಲ್ಲಿ ಸಿಗೋ ರೆಡಿಮೇಡ್ ಇ-ಗ್ರೀಟಿಂಗ್ ಕಾರ್ಡ್ ಅನ್ನು ಪಟ್ ಅಂತ ಕಳಿಸೋ ಪ್ರವೃತ್ತಿ ಜಾಸ್ತಿಯಾಗಿರೋದಿಂದ್ರ ಪೋಸ್ಟ್ ಮ್ಯಾನ್ಗೆ ಕೆಲಸವೇ ಕಡಿಮೆಯಾಗಿರೋದು ಕಟು ಸತ್ಯ! ಮೊನ್ನೆ ಅಮೆರಿಕಾದಲ್ಲಿ ನ್ಯೂಸ್ ಚಾನೆಲ್ನಲ್ಲಿ, ಸುಮಾರು 400 ಪೋಸ್ಟ್ ಆಫೀಸ್ಗಳನ್ನೂ ಮುಚ್ಚುತ್ತಿರುವ, ಅದರಿಂದ ನೂರಾರು ಮಂದಿ ಕೆಲಸ ಕಳೆದುಕೊಳ್ಳುತ್ತಿರುವ ವಿಷಯ ಕೇಳಿ ಮನಸ್ಸಿಗೆ ಬೇಜಾರಾಗಿತ್ತು. ಸ್ವತಃ ಕೈಯ್ಯಾರೆ ಪ್ರೀತಿಯಿಂದ ಪತ್ರ ಬರೆದು ಹಾಕಿದರೆ ಅದರಿಂದ ಸಿಗುವ ನಲಿವು, ಪ್ರೀತಿ, ಮಜಾ.. ಇ-ಮೀಡಿಯಾದಲ್ಲಿ ಕಳಿಸಿದ್ದಕ್ಕಿಂತ ಹೆಚ್ಚು ಎಂಬ ಭಾವನೆ ನನ್ನದ್ದು. ಈಗಲೂ ಸಾಧ್ಯವಾದಾಗಲೆಲ್ಲ ಮಾತೃಭೂಮಿ ಭಾರತದಲ್ಲಿರುವ ಅಪ್ಪ-ಅಮ್ಮಗೆ ಪತ್ರ ಬರೆದು ಹಾಕುತ್ತಿರುವೆ! ನನ್ನ ಮನಕ್ಕೂ ತೃಪ್ತಿ, ಬರವಣಿಗೇನೂ ಇಂಪ್ರೂವ್ ಆಗುತ್ತೆ, ಮನೆಯವರೊಂದಿಗೆ ಪ್ರೀತಿನೂ ಜಾಸ್ತಿ ಆಗುತ್ತೆ. ಪೋಸ್ಟ್ ಮ್ಯಾನ್ಗು ಕೆಲಸ ಹೆಚ್ಚಿ ಅವರಿಗೂ ಜೀವನದಲ್ಲಿ ನೆಮ್ಮದಿ ಸಿಗುತ್ತೆ... ಅಲ್ವಾ? ನೀವು ಹಾಗೇ ಸ್ವಲ್ಪ ರೂಢಿ ಮಾಡ್ಕೊಳ್ಳಿ. ಮಡದಿ ನೀರು (ನಿರುಪಮ) ಬೇಸಿಗೆ ರಜ ಎಂದು ಮಗನೊಂದಿಗೆ ಊರಿಗೆ ಹೋಗಿದ್ದಾಳೆ... ಸರಿ... ಒಂದು ಪತ್ರ ಗೀಚಲು ಪ್ರಾರಂಭ ಮಾಡಬೇಕು ಈಗ... ಏನು ಬರೀ ಬೇಕು ಅಂತಾನೆ ಹೊಳಿತಿಲ್ಲ ತಲೆಗೆ.. ಸ್ವಲ್ಪ ಹೆಲ್ಪ್ ಮಾಡ್ತಿರಾ? ಓ ನನ್ನ ಪ್ರಿಯತಮೆ ನೀರೂ.. ನೀ ಬೇಗ ಬಂದು ನನ್ನ ಸೇರು ನೀ ಇಲ್ಲದ ಜೀವನ ಬಲು ಬೋರು.. ನೀ ಬೇಗ ಬರದಿದ್ದರೆ... ಕುಡಿಯುವೆ ಬರೀ ದಾರು!

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.