**********************************************************************************************************************************

ಅವಳು ಮಲಗಿದ್ದ ಕೋಣೆಯ ಬಾಗಿಲು ಮೆಲ್ಲನೆ ತೆರೆಯುತ್ತಿದ್ದಂತೆ ವಾಸ್ತವಕ್ಕೆ ಬಂದ ಆಕಾಂಕ್ಷಾ ಮಲಗಿದ್ದಲ್ಲಿಂದಲೇ ತಲೆಯೆತ್ತಿ ನೋಡಿದಳು. ಬಾಗಿಲ ಬಳಿ ಜೈರಾಮ್ ನಿಂತಿದ್ದರು. ಅವರನ್ನು ಕಂಡೊಡನೆಯೇ ಅವರಿಗೆ ಹೇಗೆ ಮುಖ ತೋರಿಸುವುದೆಂಬ ಚಿಂತೆಗೆ ಬಿದ್ದವಳು ಧಿಡಗ್ಗನೇ ಎದ್ದು ಕುಳಿತುಕೊಳ್ಳುವಷ್ಟರಲ್ಲಿ, ಜೈರಾಮ್ ಅವಳತ್ತ ಹೆಜ್ಜೆ ಮುಂದಿಟ್ಟಿದ್ದರು. ಅವರು ಹತ್ತಿರವಾಗುವ ಹೊತ್ತಿಗೆ ಎದ್ದು ನಿಂತವಳೇ, ಮಿಂಚಿನ ವೇಗದಲ್ಲಿ ಅವರ ಪಾದಗಳಿಗೆರಗಿದಳು. ಅವಳ ಅನಿರೀಕ್ಷಿತ ವರ್ತನೆಯಿಂದ ತಬ್ಬಿಬ್ಬಾದ ಜೈರಾಮ್ ತಕ್ಷಣವೇ ಸಾವರಿಸಿಕೊಂಡು, ಅವಳನ್ನು ಎರಡೂ ಕೈಗಳಿಂದ ಬಾಚಿ ಮೇಲೆಬ್ಬಿಸಿ "ಇದೇನು ಮಾಡುತ್ತಿರುವೆ ಮಗಳೇ?" ಎನ್ನುತ್ತಾ ಅವಳ ಕೆನ್ನೆ ತಟ್ಟಿದರು.
"ಮಾವ, ನಿಮ್ಮ ಕ್ಷಮೆಗೂ ನಾನು ಅರ್ಹಳಲ್ಲ..." ಎನ್ನುವಷ್ಟರಲ್ಲಿ ಅವಳ ಗಂಟಲು ಕಟ್ಟಿ ಬಂದು, ತುಂಬಾ ಹೊತ್ತಿನಿಂದ ನಿಂತಿದ್ದ ಕಣ್ಣೀರಿನ ವರ್ಷಧಾರೆ ಮತ್ತೆ ಆರಂಭವಾಯಿತು. "ಹುಚ್ಚು ಹುಡುಗಿ.. ಏನೇನೋ ಮಾತನಾಡಬೇಡ..." ಅವಳ ಕೆನ್ನೆಗೆ ಮೃದುವಾಗಿ ತಟ್ಟಿದವರು, ಅವಳನ್ನು ಮಂಚದ ಮೇಲೆ ಕೂರಿಸಿ ತಾನು ಅವಳ ಪಕ್ಕದಲ್ಲಿ ಕುಳಿತುಕೊಂಡರು. ಆಕಾಂಕ್ಷಾ ಬಿಕ್ಕಿ ಬಿಕ್ಕಿ ಅಳುತ್ತಲೇ ಇದ್ದಳು. "ಮೊದಲು ಅಳು ನಿಲ್ಲಿಸಿ ಹೇಗಿದ್ದೀಯಾ ಹೇಳು..." ಪ್ರೀತಿಯಿಂದ ಗದರಿದವರೇ ಅವಳ ತಲೆಯನ್ನು ತನ್ನ ಹೆಗಲಿಗೆ ತೆಗೆದುಕೊಂಡರು.

"ಚೆನ್ನಾಗಿದ್ದೀನಿ ಮಾವ. ನಾನು ಅದೇನೇ ಅನರ್ಥಕ ಕೆಲಸಗಳನ್ನು ಮಾಡಿದರೂ ಅಭಿ,ಅಮ್ಮ ,ನೀವು ಸೇರಿಕೊಂಡು ನನ್ನನ್ನು ಇನ್ನೂ ಮಗುವಿನಂತೆ ಪ್ರೀತಿಸುತ್ತಿರುವಾಗ, ನೋಡಿಕೊಳ್ಳುತ್ತಿರುವಾಗ ಚೆನ್ನಾಗಿರದಿರಲು ಹೇಗೆ ಸಾಧ್ಯ?" ಕಟ್ಟೆಯೊಡೆದು ಬರುತ್ತಿದ್ದ ಅಳುವನ್ನು ಅಲ್ಲಲ್ಲಿ ತಡೆಹಿಡಿಯಲು ಪ್ರಯತ್ನಿಸುತ್ತಾ, ಸೋಲುತ್ತಾ ವಾಕ್ಯ ಪೂರ್ಣಗೊಳಿಸಿದಳು ಆಕಾಂಕ್ಷಾ.

ಜೈರಾಮ್ ರ ಕೈ ಅವಳ ತಲೆಯನ್ನು, ಹಣೆಯನ್ನು ಪ್ರೀತಿಯಿಂದ ಸವರಿತು. ನಂತರ ಅವಳ ಕೈ ಹಿಡುಕೊಂಡವರೇ "ನೋಡಮ್ಮಾ ಮಗಳೇ, ನಡೆದು ಹೋದ ಘಟನೆಗಳ ಬಗ್ಗೆ ಕೊರಗುತ್ತಾ ಕೂರುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದು ನಮ್ಮನ್ನು ಮತ್ತಷ್ಟು ಅಧೀರರನ್ನಾಗಿಸುತ್ತದೆ, ಬಲಹೀನರನ್ನಾಗಿಸುತ್ತದೆಯೇ ಹೊರತು ಬೇರಿನ್ನೇನೂ ಪ್ರಯೋಜನ ತಂದು ಕೊಡಲಾರದು. ಬದುಕಿನಲ್ಲಿ ಎಲ್ಲರೂ ಒಂದಲ್ಲ ಒಂದು ತಪ್ಪು ಮಾಡಿಯೇ ಇರುತ್ತಾರೆ. ಆದರೆ ಮಾಡಿದ ತಪ್ಪಿಗೆ ಮನಸಾರೆ ಪಶ್ಚತ್ತಾಪ ಪಟ್ಟು, ಆ ತಪ್ಪನ್ನು ತಿದ್ದಿಕೊಂಡು, ಸರಿಯಾದ ಹಾದಿಯಲ್ಲಿ ನಡೆಯುವವರು ನಿಜವಾದ ಅರ್ಥದಲ್ಲಿ ಮನುಷ್ಯರೆನಿಸಿಕೊಳ್ಳುತ್ತಾರೆ. ನಿನ್ನೊಳಗಿನ ಪಶ್ಚಾತ್ತಾಪದ ಕುಡಿ ಎಷ್ಟಿದೆ ಎನ್ನುವುದನ್ನು ನೀನು ವಿವರಿಸಬೇಕಾಗಿಲ್ಲ. ನಿನ್ನ ಮಾತು, ನಿನ್ನ ಕಣ್ಣು, ನಿನ್ನ ಕಣ್ಣೀರುಗಳೇ ಅದನ್ನು ಹೇಳುತ್ತಿವೆ. ಅಂದರೆ ನೀನು ಮಾಡಿದ ತಪ್ಪುಗಳಿಗೆ ಕ್ಷಮೆಯಿದೆ ಎಂದರ್ಥ. ನನ್ನ ಮುದ್ದು ಮಹಾಲಕ್ಷ್ಮಿ ನೀನು. ಅಳುತ್ತಾ, ಬೇಸರಿಸುತ್ತಾ ಕುಳಿತರೆ ಹೇಗೆ? ಹೊಸದೊಂದು ಬದುಕು ನಿನ್ನ ಕಣ್ಣೆದುರು ತೋಳು ತೆರೆದು ನಿಂತಿದೆ, ಅಪ್ಪಿಕೊಂಡು ಬಿಡು. ನನ್ನ ಮಗಳು ಇನ್ನು ಅದೆಷ್ಟು ಚೆನ್ನಾಗಿ ಬದುಕುತ್ತಾಳೆ ಎನ್ನುವುದು ಅದಾಗಲೇ ನನ್ನ ಕಣ್ಣುಗಳಿಗೆ ಕಾಣುತ್ತಿವೆ. ಧೈರ್ಯವಾಗಿರು...." ಎಂದರು. ಅವರ ಪ್ರೀತಿಯ, ಸ್ಫೂರ್ತಿಯ, ಸಕಾರಾತ್ಮಕ ಮಾತುಗಳಿಂದ ಅವಳಲ್ಲೊಂದು ಹೊಸ ಚೈತನ್ಯ ಸೃಷ್ಟಿಯಾಯಿತು. ಮರುಕ್ಷಣವೇ ಅವರನ್ನು ಬಿಗಿದಪ್ಪಿದವಳ ಕಣ್ಣುಗಳಲ್ಲಿ ಆನಂದ ಭಾಷ್ಪ. ಅವಳ ಕಣ್ಣುಗಳನ್ನು ನೋಡಿ ಜೈರಾಮ್ ರ ಕಣ್ಣುಗಳಲ್ಲೂ ನೀರು ಹನಿಯಾಡಿದರೆ, ಅವರಿಬ್ಬರನ್ನು ಬಾಗಿಲ ಮರೆಯಲ್ಲಿ ನಿಂತು ನೋಡುತ್ತಿದ್ದ ಅಭಿಯೂ ಕಣ್ಣೊರೆಸಿಕೊಂಡಿದ್ದ.

ಜೈರಾಮ್ ಅವಳಲ್ಲಿ ತುಂಬಾ ಹೊತ್ತು ಮಾತನಾಡುತ್ತಾ ಕುಳಿತರು. ಅವರ ಪ್ರತೀ ಮಾತೂ ಅವಳೊಳಗೆ ಬತ್ತಿದ್ದ ಆತ್ಮವಿಶ್ವಾಸಕ್ಕೆ ಸಾಣೆ ಹಿಡಿಯುತ್ತಿತ್ತು. 'ತಾನು ಮಾಡಿದ ತಪ್ಪಿಗೆ, ಎಲ್ಲರೂ ತನ್ನನ್ನು ಅದೆಷ್ಟು ಹಂಗಿಸುತ್ತಾರೋ' ಎಂದುಕೊಂದಿದ್ದವಳಿಗೆ ಹೆಜ್ಜೆ ಹೆಜ್ಜೆಗೂ ಪ್ರೀತಿ ಸಿಗುತ್ತಿತ್ತು, ಹೊಸದಾಗಿ ಬದುಕು ಆರಂಭಿಸಲು ಸ್ಫೂರ್ತಿ ಸಿಗುತ್ತಿತ್ತು. ತಾನು ಇಂತಹ ಒಂದು ಸುಂದರವಾದ ಕುಟುಂಬದ ಭಾಗವಾಗಿರುವುದಕ್ಕೆ ಹೆಮ್ಮೆಯೆನಿಸಲಾರಂಭಿಸಿತ್ತು. ಜೊತೆಗೆ ಇಂತಹ ಒಳ್ಳೆಯ ಕುಟುಂಬದ ಭಾಗವಾಗಿ ಅದೆಂತಹ ಅನರ್ಥ ಕೆಲಸ ಮಾಡಿಬಿಟ್ಟೆನಲ್ಲ ಎನ್ನುವ ಕೊರಗೂ ಕೂಡ.

ಅವರಿಬ್ಬರ ಮಾತುಕತೆ ಮುಕ್ತಾಯದ ಹಂತ ತಲುಪುವ ಹೊತ್ತಿಗೆ ಹತ್ತಿರ ಬಂದ ಅಭಿ, ಜೈರಾಮ್ ರಿಗೆ ಸ್ನಾನವನ್ನು ನೆನಪಿಸಿ, ಆಕಾಂಕ್ಷಾಳನ್ನು ಅಡುಗೆ ಮನೆಗೆ ಆಹ್ವಾನಿಸಿದ. ಮಧ್ಯಾಹ್ನದ ಸರಳ, ಆದರೂ ರುಚಿರುಚಿಯಾಗಿದ್ದ ಅಭಿಯ ಅಡುಗೆಯನ್ನು ಉಂಡವಳಿಗೆ, ಅವನ ಪಾಕ ಪ್ರಾವೀಣ್ಯತೆಯ ಬಗ್ಗೆ ಒಂದು ಕುತೂಹಲ ಇದ್ದೇ ಇತ್ತು. ಹಾಗಾಗಿಯೇ ಅವನು ಕರೆದ ತಕ್ಷಣ ಅವನನ್ನು ಹಿಂಬಾಲಿಸಿದಳು. ಅಡುಗೆ ಮನೆಯಲ್ಲಾಗಲೇ ಅಭಿಯ ಮುಕ್ಕಾಲು ಭಾಗ ಕೆಲಸ ಮುಗಿದಿತ್ತು. ಅವಳಿಗಿಷ್ಟವಾದ ಅಂಜಲ್ ಮೀನು (ಕಿಂಗ್ ಫಿಶ್) ಮಸಾಲೆ ಸವರಲ್ಪಟ್ಟು ಬಾಣಲೆಗೆ ಹಾರಲು ಸಿದ್ಧವಾಗಿ ಕುಳಿತಿತ್ತು. ಯಾಕೋ ನಾಲಗೆಯ ಜೊತೆಯಲ್ಲಿ ಅವಳ ಮನಸೂ ಒದ್ದೆಯಾಯಿತು. 'ಅಭಿ ತನಗಿಷ್ಟವಾಗಿರುವ ಎಲ್ಲವನ್ನೂ ನೆನಪಲ್ಲಿಟ್ಟುಕೊಂಡು ತನ್ನ ಪಾಲಿಗೆ ಒದಗಿಸಿಕೊಡುತ್ತಿದ್ದಾನಲ್ಲ? ಇಂತಹ ಅಭಿಯನ್ನು ಅದೆಷ್ಟೋ ದಿನಗಳವರೆಗೆ ತಾನು ಮರೆತುಬಿಟ್ಟೆನಲ್ಲ?' ಅನಿಸುತ್ತಲೇ ಸಂಕಟವೊಂದು ಅವಳನ್ನು ಕಾಡಿತು. ಅವಳು ಮತ್ತೆ ಯೋಚನೆಗೆ ಬಿದ್ದಳೆನ್ನುವುದು ಖಾತ್ರಿಯಾಗುತ್ತಲೇ, "ಚಿನ್ನು, ನಾನು ಮಾಡಿದ ಅಡುಗೆಯನ್ನು ಹೇಗೋ ಸಹಿಸಿಕೊಂಡು ತಿನ್ನಬೇಕಲ್ಲ ಎಂದು ಯೋಚನೆ ಮಾಡುತ್ತಿದ್ದೀಯಾ?" ಎಂದು ಚಟಾಕಿ ಹಾರಿಸಿದ. ತಕ್ಷಣ ಸಾವರಿಸಿಕೊಂಡವಳೇ "ಅಯ್ಯೋ ಇಲ್ಲಪ್ಪಾ. ಮಧ್ಯಾಹ್ನದ ಊಟದ ರುಚಿಯೇ ಇನ್ನೂ ನಾಲಗೆಯನ್ನು ಬಿಟ್ಟಿಲ್ಲ. ನನ್ನಿಷ್ಟದ ಅಂಜಲ್ ಫ್ರೈ ಬಗ್ಗೆ ಯೋಚಿಸುತ್ತಿದ್ದೆ" ಎಂದು ಸುಳ್ಳು ಹೇಳಿದಳು. ಮುಂದುವರೆದ ಆಕಾಂಕ್ಷಾ "ಅಭಿ, ಇಲ್ಲಿದ್ದ ಅಡುಗೆಯ ಮಹಾಬಲಣ್ಣ ಈಗ ಎಲ್ಲಿದ್ದಾರೆ?" ಕೇಳಿದಳು ಮಾತು ತಿರುಗಿಸಲು.

"ಅವರಿಂದ ಅಡುಗೆ ಕಲಿತು, ಅವರಿಗೆ ಗೇಟ್ ಪಾಸ್ ಕೊಟ್ಟೆ..." ನಕ್ಕ ಅಭಿ.

"ಅವರಿಂದ ಅಡುಗೆ ಕಲಿತದ್ದೇನೋ ಒಳ್ಳೆಯ ಸಂಗತಿ. ಆದರೆ ಅವರನ್ನು ಕೆಲಸದಿಂದ ತೆಗೆಯಬೇಕಿತ್ತಾ? ಅವರ ಹೊಟ್ಟೆಗೆ ಕಲ್ಲು ಹಾಕಿದಂತಾಯಿತಲ್ಲ?" ಸಂತೋಷ ಹಾಗೂ ಬೇಸರವನ್ನು ಜೊತೆಯಾಗಿ ಪ್ರಕಟಿಸಿದಳು.

"ಇಲ್ಲವೆಂದಾದರೆ ಅವರು ನನ್ನ ತಲೆಗೆ ಚಪ್ಪಡಿ ಕಲ್ಲು ಎಳೆಯುತ್ತಿದ್ದರು..." ಈಗ ಅಭಿ ನಗಲಿಲ್ಲ.

"ಯಾಕೆ? ಏನಾಯ್ತು?" ಸಹಜ ಕುತೂಹಲದಿಂದ ಕೇಳಿದಳವಳು.

"ಮೊದ ಮೊದಲು ಸರಿಯಾಗೇ ಇದ್ದವರು, ಕ್ರಮೇಣ ಕದಿಯೋಕೆ ಆರಂಭಿಸಿದ್ರು. ನಾನು ಒಂದು ಕಣ್ಣು ಇಟ್ಟೇ ಇಟ್ಟಿದ್ದೆ. ದಿನ ಕಳೆದಂತೆ ಆ ಚಾಳಿ ಹೆಚ್ಚಾಗುತ್ತಲೇ ಅವರನ್ನು ಕಳಿಸಿಕೊಟ್ಟೆ. ಮೋಸ ಮಾಡುವವರನ್ನು ಜೊತೆಯಲ್ಲಿಟ್ಟು ಕೊಂಡು ಬದುಕುವುದು ಮೂರ್ಖತನವಲ್ಲವೇ?" ಹೇಳುವುದನ್ನು ಹೇಳಿದ ಅಭಿ, ಅವಳ ಮುಖ ನೋಡಿದ ಮೇಲೆ ತುಟಿ ಕಚ್ಚಿಕೊಂಡ. ಅಭಿಯ ಮಾತನ್ನು ತನಗೂ ಅನ್ವಯಿಸಿಕೊಂಡ ಆಕಾಂಕ್ಷಾ "ನಾನೂ ಮೋಸಗಾರ್ತಿಯಲ್ವಾ ಅಭಿ?. ನನ್ನನ್ನು ಯಾಕೆ ಇನ್ನೂ ಜೊತೆಯಾಗಿ ಇಟ್ಟುಕೊಂಡಿದ್ದೀಯಾ?" ಎಂದು ಕೇಳುವಾಗ ಅವಳ ಗಂಟಲ ಸೆರೆ ಉಬ್ಬಿ ಬಂದಿತ್ತು.

"ಚಿನ್ನು, ನೀನ್ಯಾವಾಗ ಮೋಸ ಮಾಡಿದೆ ಹೇಳು?. ಏನೇ ಇದ್ದರೂ ಎದುರಲ್ಲೇ ಹೇಳಿ ಮುಗಿಸಿದೆಯಲ್ಲಾ? ಅದನ್ನು ಯಾರೂ ಮೋಸ ಅನ್ನೋದಿಲ್ಲ. ಮೋಸ ಎಂದರೆ ಗೊತ್ತೇ ಆಗದಂತೆ ಬೆನ್ನ ಹಿಂದೆ ನಡೆಸುವ ಕ್ರಿಯೆ. ನೀನು ಖಂಡಿತಾ ಮೋಸಗಾರ್ತಿಯಲ್ಲ. ಇದನ್ನು ನಾನು ನಿನ್ನ ಸಮಾಧಾನಕ್ಕಾಗಿ ಹೇಳುತ್ತಿಲ್ಲ, ನಿಜವಾಗಿಯೂ..." ಸ್ಪಷ್ಟೀಕರಣ ನೀಡಿದವನೇ, "ಇನ್ನು ಎಲ್ಲದಕ್ಕೂ ನಿನ್ನನ್ನು ನೀನೇ ಖಂಡಿಸುವುದನ್ನು ಬಿಟ್ಟು, ಚೆನ್ನಾಗಿ ಬದುಕುವ ಬಗ್ಗೆ ಯೋಚನೆ ಮಾಡು. ನಿನ್ನೆಲ್ಲ ತಪ್ಪುಗಳೂ ತೊಳೆದು ಹೋಗುತ್ತವೆ.." ಎಂದು ಅವಳಿಗೆ ವಿಶ್ವಾಸ ತುಂಬಿದ. ಅವನ ಮಾತಿನಿಂದ ಮತ್ತೆ ಗೆಲುವಾದಳು ಆಕಾಂಕ್ಷಾ.

ರಾತ್ರಿಯ ಊಟವನ್ನು ಅಭಿ ಹಾಗೂ ಮಾವನ ಜೊತೆ ಕುಳಿತು ಮಾಡಿದ್ದು, ಅವಳ ಬದುಕಿನ ಸಂತೋಷದ ಗಳಿಗೆಗಳಲ್ಲೊಂದಾಗಿತ್ತು. ಅಭಿಯ ಅಡುಗೆ ಯಾವ ಸ್ಪೆಷಲಿಸ್ಟ್ ಕುಕ್ ಗಳಿಗಿಂತಲೂ ಕಡಿಮೆಯಿಲ್ಲ ಎಂದು ಆಕಾಂಕ್ಷಾ ಷರಾ ಬರೆದುಬಿಟ್ಟಳು. ಅದಷ್ಟೇ ಅಲ್ಲದೆ ಅಭಿ ಹಾಗೂ ಜೈರಾಮ್ ಇಬ್ಬರೂ ಯಾವ್ಯಾವತ್ತಿನದೋ ತಮಾಷೆಯ ಪ್ರಸಂಗಗಳನ್ನು ಹೊರತೆಗೆದು ಅವಳ ದುಃಖವನ್ನು ಮರೆಸಿದ್ದರು. ಒಟ್ಟಾರೆ ಹೇಳಬೇಕೆಂದರೆ, ಮನೆಯ ವಾತಾವರಣವಾಗಲೀ, ಬದುಕಾಗಲೀ ಅವಳು ಅಂದುಕೊಂಡಿದ್ದಕ್ಕಿಂತ ಬೇರೆಯೇ ಆಗಿತ್ತು.

ರಾತ್ರಿ ಮಲಗುವ ಹೊತ್ತಿಗೆ ಮಾತ್ರ ಆಕಾಂಕ್ಷಾ ಕೊಂಚ ಡಲ್ಲಾಗಿದ್ದಳು. ಅದುವರೆಗೂ ಒಂದೇ ಮಂಚದ ಮೇಲೆ ಮಲಗುತ್ತಿದ್ದ ಅಭಿ, ಅವತ್ತು ನೆಲದ ಮೇಲೆ ಹಾಸಿಗೆಯುರುಳಿಸಿದ್ದ. ಅದು ಅವಳಿಗೆ ಬೇಸರ ತಂದಿತ್ತು. ಅವನನ್ನು ತನ್ನ ಹತ್ತಿರವೇ ಮಲಗೆಂದು ಕೇಳಿಕೊಂಡಳಾದರೂ, "ಇಂತಹ ಸಮಯದಲ್ಲಿ ನೀನು ಆರಾಮವಾಗಿ ಕೈ ಕಾಲು ಸಡಿಲಬಿಟ್ಟು ಮಲಗಬೇಕು. ಅದು ಬಿಟ್ಟರೆ ಬೇರೇನೂ ಕಾರಣ ಇಲ್ಲ..." ಎಂದು ಸಮಜಾಯಿಷಿ ನೀಡಿ ಅವಳನ್ನು ಒಪ್ಪಿಸಿದ ಅಭಿ. ಅವನನ್ನು ಜಾಸ್ತಿ ಒತ್ತಾಯಪಡಿಸುವುದು ಸರಿಕಾಣದೆ ಸುಮ್ಮನಾದಳು.

ಹಾಸಿಗೆಯಲ್ಲಿ ಬಿದ್ದು ಅದೆಷ್ಟೇ ಹೊರಳಾಡಿದರೂ ಅವಳಿಗೆ ನಿದ್ದೆಯೆನ್ನುವುದು ಹತ್ತಿರಕ್ಕೂ ಸುಳಿಯಲಿಲ್ಲ. ಬೇಡ ಬೇಡವೆಂದರೂ ನೆನಪುಗಳು ಭೂತಕಾಲದ ಸುತ್ತಲೇ ಗಿರಕಿ ಹೊಡೆಯಲಾರಂಭಿಸಿದವು.

***********************************************************************************************************************************

ನಮಿತ್ ನಿಂದ ದೂರಾದ ಮೇಲೆ ಆಕಾಂಕ್ಷಾ ಪೂರ್ತಿಯಾಗಿ ತನ್ನ ಹೊಸ ಕೆಲಸದಲ್ಲಿ ಮುಳುಗಿ ಹೋದಳಾದರೂ, ತಾನು ಒಬ್ಬಂಟಿ ಎನ್ನುವ ಭಾವ ಅವಳನ್ನು ಅಡಿಗಡಿಗೆ ಕಾಡುತ್ತಲೇ ಇತ್ತು. ಆದರೂ ನಮಿತ್ ನನ್ನು ನೆನೆಯಬೇಕೆಂದಾಗಲೀ, ಅವನ ಬಳಿ ವಾಪಸಾಗಬೇಕೆಂದಾಗಲೀ ಅವಳಿಗೆ ಅನಿಸುತ್ತಲೇ ಇರಲಿಲ್ಲ. ಇತ್ತ ನಮಿತ್ ನ ಕತೆಯೇ ಬೇರೆಯಾಗಿತ್ತು. ಆಕಾಂಕ್ಷಾ ಅಷ್ಟು ವೇಗವಾಗಿ ಇಂತಹ ಒಂದು ನಿರ್ಧಾರ ತೆಗೆದುಕೊಂಡು ತನ್ನಿಂದ ದೂರಾಗುತ್ತಾಳೆ ಎಂದು ಅವನು ಕನಸಿನಲ್ಲೂ ಊಹಿಸಿರಲಿಲ್ಲ. ಮೊದಲ ಪ್ರೀತಿಯಲ್ಲಿ ಪತನಗೊಂಡವನಿಗೆ ಆಕಾಂಕ್ಷಾಳ ಪ್ರೀತಿಯೂ ಅದೇ ದಾರಿ ಹಿಡಿದಿದೆ ಎನ್ನುವುದನ್ನು ಅರಗಿಸಿಕೊಳ್ಳಲಾಗುತ್ತಿರಲಿಲ್ಲ. ಆದ್ದರಿಂದಲೇ ಪದೇಪದೇ ಅವಳಿಗೆ ಕರೆ ಮಾಡಿ ಅವಳ ಮನ ಒಲಿಸಲು ಪ್ರಯತ್ನಿಸತೊಡಗಿದ್ದ ನಮಿತ್. ಅವಳು ಅವನ ನಂಬರ್ ನ್ನು ಅದಾಗಲೇ ಅಳಿಸಿ ಹಾಕಿದ್ದವಳು, ಅವನ ಕರೆಗಳಿಗಾಗಲೀ, ಮೆಸೇಜುಗಳಿಗಾಗಲೀ ಉತ್ತರಿಸುವ ಗೋಜಿಗೇ ಹೋಗುತ್ತಿರಲಿಲ್ಲ. ಫೇಸ್ ಬುಕ್ ನಲ್ಲಿ ಮಾತ್ರ ನಮಿತ್ ನನ್ನು ಅನ್ ಫ್ರೆಂಡ್ ಮಾಡದೆ ಹಾಗೆಯೇ ಉಳಿಸಿದ್ದಳು. ಅದರ ಹಿಂದೆ ಇದ್ದ ಒಂದೇ ಒಂದು ಕಾರಣವೆಂದರೆ, ಅವನನ್ನು ನೋಯಿಸುವ, ಉರಿಸುವ ಫೋಟೋ ಸ್ಟೇಟಸ್ ಗಳನ್ನು ಹಾಕಿ ಗೋಳುಹೊಯ್ದುಕೊಳ್ಳುವುದಷ್ಟೇ ಆಗಿತ್ತು. ಅದರಲ್ಲಿ ಅವಳು ಯಶಸ್ಸನ್ನೂ ಕಂಡಿದ್ದಳು. ನಮಿತ್ ಫೇಸ್ ಬುಕ್ಕಿನಲ್ಲಿ, ಮೊಬೈಲ್ ನಲ್ಲಿ 'ಈಗಲೂ ನಿನ್ನ ಪ್ರೀತಿಗಾಗಿ ಕಾಯುತ್ತಿದ್ದೇನೆ, ನಿನ್ನನ್ನು ಪ್ರೀತಿಸುತ್ತಿದ್ದೇನೆ...' ಎಂದು ಸಂದೇಶ ಕಳುಹಿಸಿದಾಗೆಲ್ಲ ವಿಚಿತ್ರ ಸಂತೋಷವೊಂದನ್ನು ಅವಳು ಅನುಭವಿಸುತ್ತಿದ್ದಳಾದರೂ, ಮತ್ತೆ ಅವನನ್ನು ಸೇರಬೇಕೆಂಬ ಬಯಕೆ ಮಾತ್ರ ಅವಳಿಗೆ ಕೊಂಚವೂ ಇರಲಿಲ್ಲ.

ಗುರುತು, ಪರಿಚಯವೇ ಇರದಿದ್ದರೂ ರಿಕ್ವೆಸ್ಟ್ ಕಳುಹಿಸುವ, ಸ್ವೀಕರಿಸಿದ ತಕ್ಷಣವೇ ಹಾಯ್ ಅನ್ನುವ, ಆನ್ ಲೈನ್ ಗೆ ಬಂದ ಕೂಡಲೇ ಬೆಳಕಿಗೆ ಮುತ್ತಿಕ್ಕುವ ಹಾತೆಗಳಂತೆ ಮೆಸೇಜುಗಳಲ್ಲಿ ಮುಗಿಬೀಳುವ ಹುಡುಗರನ್ನು ನೋಡಿ ನೋಡಿ ಅವಳಿಗೆ ವಾಕರಿಕೆ ಬಂದಂತಾಗುತ್ತಿತ್ತು. ಯರಲ್ಲ್ಲೂ ಒಳ್ಳೆಯ ಗೆಳೆತನದ ಉದ್ದೇಶವೇ ಕಾಣುತ್ತಿರಲಿಲ್ಲ. ರಿಕ್ವೆಸ್ಟ್ ಸ್ವೀಕರಿಸಿದ ತಪ್ಪಿಗೆ, ಸಾಯಲಿ ಎಂದು ಮೆಸೇಜಿಗೆ ರಿಪ್ಲೈ ಮಾಡಿದ ಕೂಡಲೇ ಆರಂಭವಾಗಿಬಿಡುತ್ತದೆ ಫ್ಲರ್ಟಿಂಗ್ ಸೈನ್ಸ್. 'ಇಂತಹವರ ನಡುವೆ ತನಗೊಬ್ಬ ಒಳ್ಳೆಯ ಗೆಳೆಯ (ಬರಿಯ ಗೆಳೆಯನಷ್ಟೇ), ಬದುಕನ್ನು ವಿಕಸಿಸುವ ಗೆಳೆಯ ಸಿಗಬಾರದೇ?' ಎಂದು ಅವಳ ಮನಸ್ಸು ಆಸೆ ಪಡುತ್ತಿತ್ತು. ಹಾಗೆಲ್ಲ ಅನಿಸಿದಾಗಲೇ ಹಲವು ಪ್ರಶ್ನೆಗಳು ಅವಳನ್ನು ಕಾಡುತ್ತಿದ್ದವು. 'ತಾನು ಹುಡುಕುತ್ತಿರುವುದಾದರೂ ಏನನ್ನು? ತನಗೆ ಬೇಕಾಗಿರುವುದಾದರೂ ಏನು? ಶುದ್ಧ ನಿರ್ಮಲ ಪ್ರೀತಿಯೇ ಬೇಕಾಗಿದ್ದದ್ದು ಎಂದಾದರೆ ಅಭಿ ಯಾಕೆ ತನಗೆ ಇಷ್ಟವಾಗಲಿಲ್ಲ? ರೋಮಾಂಚನಗೊಳಿಸುವ ಹಸಿ ಬಿಸಿ ಪ್ರೀತಿಯೇ ಬೇಕಾಗಿತ್ತು ಎಂದರೆ ನಮಿತ್ ನ ಸಂಗ ಯಾಕೆ ಸಾಕೆನಿಸಿತು? ಅದೆಷ್ಟೋ ಬಾರಿ ಹಾಸಿಗೆ ಹಂಚಿಕೊಳ್ಳೋಣವೆನಿಸಿದರೂ ತಾನು ತಡೆದುಕೊಂಡಿದ್ದು ಹೇಗೆ? ಅಭಿಯ ನದಿಯಂತಹ ಪ್ರೀತಿ ಬೇಡವೆಂದುಕೊಂಡು, ಕದಲಿನಂತಹ ಪ್ರೀತಿಗೆ ಧುಮುಕಿದವಳಿಗೆ ಅದು ತನ್ನದಲ್ಲ ಅನಿಸಿದ್ದು ಯಾಕೆ? ತನಗೆ ನಿಜವಾಗಿಯೂ ಪ್ರೇಮಿ ಬೇಕಾಗಿದ್ದನೇ ಅಥವಾ ಗೆಳೆಯನೇ?' ಪ್ರಶ್ನಿಸಿಕೊಂಡವಳಿಗೆ, ಪರಿಶುದ್ಧ ಸ್ನೇಹವೊಂದು ತನಗೆ ತುರ್ತಾಗಿ ಬೇಕಾಗಿದೆ ಎಂದು ಬಲವಾಗಿ ಅನಿಸಿತ್ತು. ಅವಳ ಮೊರೆ ದೇವರಿಗೆ ಕೇಳಿಸಿತ್ತೋ ಏನೋ? ಅವತ್ತೊಂದು ದಿನ ಫೇಸ್ ಬುಕ್ ತೆರೆದವಳಿಗೆ ಬಂದಿತ್ತು ಅವನ ರಿಕ್ವೆಸ್ಟ್. 'ವಿಜಯ್ ಕುಮಾರ್ ನಂಜುಂಡಸ್ವಾಮಿ' ಎನ್ನುವ ರಿಕ್ವೆಸ್ಟ್ ನ್ನು ನೋಡಿದವಳು 'ಇದು ಯಾವ ಹೊಸ ತರಲೆ ಗಿರಾಕಿಯಾಗಿರಬಹುದು?' ಎಂದುಕೊಂಡೇ ಅವನ ಪ್ರೊಫೈಲ್ ತೆರೆದು ಅವನ ಬೇಸಿಕ್ ಇನ್ಫರ್ಮೇಷನ್ ನೋಡಲಾರಂಭಿಸಿದಳು. 'ವಿಜಯ್ ಕುಮಾರ್ ಬೆಂಗಳೂರಿನವನು' ಓದಿದ ಬಳಿಕ ತನಗೆ ತಾನೇ ಹೇಳಿಕೊಂಡಳು. ಸದ್ಯಕ್ಕೆ ಹಾಗೆಯೇ ಇರಲಿ ಎಂದವಳಿಗೆ ಮೆಸೇಜೊಂದು ಕಾಣಿಸಿತ್ತು. ತೆರೆದು ನೋಡಿದರೆ ಅದು ವಿಜಯ್ ಕುಮಾರ್ ನಂಜುಂಡಸ್ವಾಮಿಯದ್ದೇ ಮೆಸೇಜು. ಆಕಾಂಕ್ಷಾ ಓದಲಾರಂಭಿಸಿದಳು.

'ಹಲೋ ಮ್ಯಾಡಮ್, ಇವನ್ಯಾರು ಗುರುತು ಪರಿಚಯವೇ ಇಲ್ಲದವನು ನನಗೆ ರಿಕ್ವೆಸ್ಟು ಕಳುಹಿಸಿರುವುದಲ್ಲದೆ, ಮೆಸೇಜು ಬೇರೆ ಮಾಡಿದ್ದಾನೆ ಅಂತ ಕೋಪದಲ್ಲಿದ್ದೀರಾ?. ನಾನು ವಿಜಯ್ ವಿಜಯ್ ಕುಮಾರ್ ನಂಜುಂಡಸ್ವಾಮಿ. ಸ್ನೇಹಕ್ಕಾಗಿ ಹಾತೊರೆಯುವ ಸ್ನೇಹಜೀವಿ. ಗೆಳೆತನಕ್ಕೆ ಜಾತಿ, ಧರ್ಮ, ಊರು ಕೇರಿ, ದೇಶ ಭಾಷೆ, ಗಂಡು ಹೆಣ್ಣುಗಳೆಂಬ ಬೇಧ ಭಾವವಿರಬಾರದು. ಸ್ನೇಹವೆಂದರೆ ಶಕ್ತಿ, ಸ್ನೇಹವೆಂದರೆ ಬದುಕು, ಸ್ನೇಹವೆಂದರೆ ಕತ್ತಲು ಓಡಿಸುವ ಬೆಳಕು, ಸ್ನೇಹಿತರೇ ನಮ್ಮ ನಿಜವಾದ ಬಲ ಎಂದುಕೊಂಡವನು ನಾನು. ಯಾರೇ ಇಬ್ಬರು ಸ್ನೇಹಿತರೂ, ಸ್ನೇಹಿತರಾಗುವ ಮುನ್ನ ಅಪರಿಚಿತರೇ ಆಗಿರುತ್ತಾರೆ ಅಲ್ಲವೇ?. ಪರಿಶುದ್ಧ ಸ್ನೇಹದ ಹೊರತಾಗಿ ಬೇರಾವ ಕೆಟ್ಟ ಆಲೋಚನೆಯೂ ನನಗಿಲ್ಲ. ನನನ್ನಿಂದೇನಾದರೂ ತೊಂದರೆಯಾದರೆ ಬ್ಲಾಕ್ ಮಾಡುವ ಆಯ್ಕೆ ನಿಮ್ಮ ಕೈಯಲ್ಲೇ ಇರುತ್ತದೆ. ಜಸ್ಟ್ ಒಂದು ಬಟನ್ ಒತ್ತಿದರೆ ಮುಗಿಯಿತು. ಅಲ್ಲವೇ?. ಸ್ನೇಹಹಸ್ತ ಚಾಚುತ್ತೀರೆಂದು ನಂಬುತ್ತೇನೆ..'


ವಿಜಯ್ ನ ಮೆಸೇಜು ಓದಿದವಳಿಗೆ ಏನು ಮಾಡಬೇಕೆನ್ನುವುದು ತಿಳಿಯದೆ, ತುಂಬಾ ಹೊತ್ತು ಯೋಚಿಸುತ್ತಾ ಕುಳಿತವಳಿಗೆ 'ಸ್ವೀಕರಿಸಲೇ? ಬೇಡವೇ?' ಎನ್ನುವ ದ್ವಂದ್ವ ಕಾಡಲಾರಂಭಿಸಿತು. 'ಅವನು ಹೇಳಿದ ಮಾತು ನಿಜವಲ್ಲವೇ? ಯಾರೇ ಆದರೂ ಸ್ನೇಹಿತರಾಗುವ ಮೊದಲು ಅಪರಿಚಿತರೇ ಆಗಿರುತ್ತಾರೆ. ಅವನೇನಾದರೂ ದುರ್ವರ್ತನೆ ತೋರಿದರೆ,, ಅವನೇ ಅಂದ ಹಾಗೆ ಬ್ಲಾಕ್ ಮಾಡುವ ಆಯ್ಕೆ ತನ್ನ ಕೈಯಲ್ಲಿಯೇ ಇರುತ್ತದೆ.' ಎಂದುಕೊಂಡವಳೇ ಮತ್ತೆ ಯೋಚನೆಗೆ ಬಿದ್ದಳು. ಅವಳು ಯಾವುದೇ ನಿರ್ಧಾರ ತೆಗೆದುಕೊಂಡರೂ, ಬದುಕು ಬದಲಾಗುವುದರಲ್ಲಿತ್ತು.

(ಮುಂದುವರೆಯುವುದು)


kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.