ಕಾಶ್ಮೀರದ ಹುಡುಗಿಯ ವಿಮಾನಯಾನ

ಕಣ್ಣಳತೆಯ ದೂರದಲ್ಲಿ ಹಾರುವ ವಿಮಾನಗಳು ಎಂದಿಗೂ ಕೈಗೆಟುಕಲಾರದು. ನಾವು ಚಿಕ್ಕವರಿದ್ದಾಗ ಚಿಕ್ಕ ಕಾಗೆಯಂತೆ ದೂರದಲ್ಲೆಲ್ಲೋ ಹಾರುವ ವಿಮಾನ ಕಂಡರೆ ಇನ್ನಿಲ್ಲದ ಖುಷಿ. ಕುದುರೆ ಏರಿ ಬರುತ್ತಿದ್ದ ರಾಜಕುಮಾರ ನಮ್ಮ ಕಾಲಕ್ಕೆ ವಿಮಾನ ಏರಿ ಬರುತ್ತಾನೆ ಎಂಬಷ್ಟರ ಮಟ್ಟಿಗೆ ಬದಲಾವಣೆಯಾಗಿತ್ತು. ರಾಜರೆಲ್ಲ ವಿಮಾನದಲ್ಲೇ ಓಡಾಡೊದು ಅಂತೆಲ್ಲ ಯಾರ್ಯಾರೋ ಕತೆ ಹೇಳುತ್ತಿದ್ದರು. ನಾವು ಸಹ ಅದನ್ನೇ ನಿಜ ಅಂತ ನಂಬಿಕೊಂಡು, ವಿಮಾನ ಹಾರಿದ ಸದ್ದಾದರೆ ಸಾಕು, ಹೊರಗೋಡಿ ಬಂದು ಮೇಲೆ ಹಾರುತ್ತಿದ್ದ ರಾಜಕುಮಾರನಿಗೆ ನಮ್ಮ ಗೌರವ ಸೂಚಿಸುತ್ತಿದ್ದೆವು!. ನಮ್ಮಂತೆಯೇ ಕನಸುಕಂಗಳಿಂದ ವಿಮಾನವನ್ನು ನೋಡುತ್ತ ಟೆರೇಸ್ ಏರಿ ಕೂರುತ್ತಿದ್ದ ಹುಡುಗಿ ಆಯೆಷಾಗೆ ವಿಮಾನದಲ್ಲಿ ಬರುವ ರಾಜಕುಮಾರ ಬೇಕಾಗಿರಲಿಲ್ಲ. ತಾನೇ ಒಂದು ದಿನ ವಿಮಾನವನ್ನು ಹಾರಿಸಬೇಕು ಎಂಬ ದೊಡ್ಡ ಕನಸನ್ನು ಎದೆಯಲ್ಲೇ ಬಚ್ಚಿಟ್ಟುಕೊಂಡಿದ್ದ ಆಯೆಷಾ ಇದೀಗ ಭಾರತದ ಅತ್ಯಂತ ಕಿರಿಯ ಪೈಲಟ್!

ಕನಸು ಯಾರಿಗೆ ತಾನೇ ಇರೋದಿಲ್ಲ. ಬಾಲ್ಯದಲ್ಲಿ ಎಲ್ಲ ಕನಸನ್ನು ತುಂಬುವವರು ನಮ್ಮ ಪಾಲಕರೇ. ಕಾಗಕ್ಕ, ಗುಬ್ಬಕ್ಕನ ಕತೆಯಿಂದ ಶುರುವಾಗುವ ಬದುಕಿನ ಪಾಠ ದೊಡ್ಡದಾದ ಗುರಿ ಹೊಂದುವವರೆಗೆ ಬಂದು ನಿಲ್ಲುತ್ತದೆ. ಅಮ್ಮ ತನ್ನ ಮಕ್ಕಳಿಗೆ ಆಗಸದ ಚಂದಮಾಮನನ್ನು ತೋರಿಸಿ ಊಟ ಮಾಡಿಸುವುದು ಸಾಮಾನ್ಯ. ಆದರೆ, ಮೂಲತಃ ಕಾಶ್ಮೀರದವಳಾದರೂ ಮುಂಬೈನಲ್ಲಿ ಹುಟ್ಟಿ ಬೆಳೆದ ಆಯೆಷಾಳನ್ನು ಚಂದಮಾಮನಿಗಿಂತ ಹೆಚ್ಚು ಸೆಳೆಯುತ್ತಿದ್ದುದು ವಿಮಾನ. ಶಾಲೆಯಲ್ಲಿ ಮುಂದೆ ನೀವು ಏನಾಗಬೇಕು ಅಂತ ಬಯಸಿದ್ದೀರಿ? ಅಂತ ಕೇಳಿದಾಗ ಗೆಳೆಯರೆಲ್ಲ ಡಾಕ್ಟರ್, ಇಂಜಿನಿಯರ್, ಪೊಲೀಸ್ ಅಂತೆಲ್ಲ ಹೇಳುತ್ತಿದ್ದರೆ ಆಯೆಷಾ ಅಜೀಜ್ ಮಾತ್ರ ಪೈಲಟ್ ಅಂತ ಹೇಳುತ್ತಿದ್ದಳು. ಅದನ್ನು ಕೇಳಿದಾಗ ಕೆಲವರು ಹುಬ್ಬೇರಿಸಿದರೆ, ಇನ್ನು ಕೆಲವರು ಚಿಕ್ಕ ಹುಡುಗಿಗೆ ಏನೂ ಗೊತ್ತಾಗುವುದಿಲ್ಲ ಅಂತ ನಿರ್ಲಕ್ಷಿಸುತ್ತಿದ್ದರು. ಆದರೆ ಆ ಕನಸೇ ಆಯೆಷಾಳ ಮನಸಲ್ಲಿ ಹೆಮ್ಮರವಾಗಿತ್ತು. ಆ ಬೀಜವನ್ನು ಆಕೆಯ ಮನಸಲ್ಲಿ ಬಿತ್ತಿದ್ದು ಆಕೆಯ ಪಾಲಕರು.

ಅದಿನ್ನೂ ಹೈಸ್ಕೂಲ್‍ನಲ್ಲಿದ್ದ ದಿನಗಳು. ಆಟವಾಡುತ್ತ, ಫ್ರೆಂಡ್ಸ್ ಜತೆ ಸುತ್ತಾಡುತ್ತ ಇರಬೇಕಾದ ದಿನಗಳವು. ಅದೇ ತಾನೇ ಟೀನೇಜ್‍ಗೆ ಕಾಲಿಡುವ ಕಾರಣ ಜಗತ್ತೆಲ್ಲ ರಂಗುರಂಗಾಗಿ ಕಾಣುವುದು ಸಾಮಾನ್ಯ. ಇದೆಲ್ಲದರಾಚೆಗೂ ಒಂದು ಲೋಕವಿದೆ ಎಂಬುದು ಆ ವಯಸ್ಸಿನಲ್ಲಿ ಎಷ್ಟೋ ಮಕ್ಕಳಿಗೆ ಗೊತ್ತೇ ಇರುವುದಿಲ್ಲ. ಆದರೆ, ಆಯೆಷಾ ಹದಿನಾರು ವರ್ಷದವಳಾಗಿದ್ದಾಗಲೇ ಬಾಂಬೆ ಫ್ಲೈಯಿಂಗ್ ಕ್ಲಬ್‍ನಲ್ಲಿ ತರಬೇತಿ ಪಡೆಯಲಾರಂಭಿಸಿದಳು. ಹೈಸ್ಕೂಲ್ ಮುಗಿಯುತ್ತಿದ್ದಂತೆ ಸ್ಟುಡೆಂಟ್ ಪೈಲಟ್ ಲೈಸನ್ಸ್ ಕೂಡ ಪಡೆದುಕೊಂಡಳು. ವಾರಾಂತ್ಯದಲ್ಲಿ ತರಬೇತಿಯನ್ನೂ ಪಡೆಯಲಾರಂಭಿಸಿದ ಹುಡುಗಿಗೆ ದಿನದಿಂದ ದಿನಕ್ಕೆ ಗಗನದಲ್ಲಿ ಹಾರುವ ಆಸೆ ಬಲವಾಗತೊಡಗಿತು. ಅದಕ್ಕೆ ಅಪ್ಪನೂ ನೀರೆರೆಯತೊಡಗಿದರು. ಅದರ ಫಲವಾಗಿ ಕಮರ್ಷಿಯಲ್ ಪೈಲಟ್ ಲೈಸನ್ಸ್ ಪಡೆದ ಆಯೆಷಾ ದೇಶದ ಅತ್ಯಂತ ಕಿರಿಯ ಪೈಲಟ್ ಎಂಬ ಕೀರ್ತಿಗೂ ಪಾತ್ರಳಾಗಿದ್ದಾಳೆ.

ಹಾರೋದು ನನ್ನ ಕನಸು:

ಸುನಿತಾ ವಿಲಿಯಮ್ಸ್ ತನ್ನ ರೋಲ್ ಮಾಡೆಲ್ ಎಂದು ಹೇಳಿಕೊಳ್ಳುವ ಆಯೆಷಾಗೆ ತಾನು ಏನಾದರೂ ಭಿನ್ನವಾದುದನ್ನು ಸಾಧಿಸಬೇಕು ಎಂಬ ಬಯಕೆ ಮೊದಲಿನಿಂದಲೂ ಇತ್ತು. `ಬಾಲ್ಯದಿಂದಲೂ ಸವಾಲುಗಳೆಂದರೆ ನನಗೆ ಹೆಚ್ಚು ಇಷ್ಟ. ಯಾರಾದರೂ ಅದನ್ನು ಮಾಡಲು ನಿನಗೆ ಆಗುವುದಿಲ್ಲ' ಅಂತ ಹೇಳಿದ್ರೆ ಯಾಕಾಗೋದಿಲ್ಲ? ಅನ್ನೋ ಪ್ರಶ್ನೆ ನನ್ನ ಕಾಡ್ತಿತ್ತು. ಯಾರೂ ಮಾಡಲಾಗದ್ದನ್ನು ನಾನು ಮಾಡಿ ತೋರಿಸಬೇಕು ಎಂಬ ಹಠ ಬರುತ್ತಿತ್ತು. ನನ್ನ ಆ ವ್ಯಕ್ತಿತ್ವದಿಂದಾಗಿಯೇ ಇಂದು ಪೈಲಟ್ ಆಗಿದ್ದೇನೆ. ಚಿಕ್ಕವರಿದ್ದಾಗ ಬೇಸಿಗೆ ರಜೆಯಲ್ಲಿ ನಮ್ಮ ಅಪ್ಪನ ಊರು ಕಾಶ್ಮೀರಕ್ಕೆ ವಿಮಾನದಲ್ಲೇ ಹೋಗುತ್ತಿದ್ದೆವು. ಅಲ್ಲಿಂದಲೇ ವಿಮಾನದ ಮೇಲಿನ ನನ್ನ ಪಯಣ ಶುರುವಾಗಿದ್ದು. ವಿಮಾನ ಮೇಲೆ ಹಾರುತ್ತಿದ್ದಂತೆ ನಾನು ಪ್ರತಿಕ್ಷಣವನ್ನೂ ಎಂಜಾಯ್ ಮಾಡ್ತಿದ್ರೆ ನನ್ನ ತಮ್ಮ ಸೀಟನ್ನು ಗಟ್ಟಿಯಾಗಿ ಹಿಡಿದುಕೊಂಡು ಕಣ್ಣುಮುಚ್ಚಿ ಕೂರುತ್ತಿದ್ದ. ಆಗೆಲ್ಲ ನಾನೂ ಒಂದು ದಿನ ಹೀಗೆ ಎತ್ತರಕ್ಕೆ ಹಾರಬೇಕು. ನನ್ನೊಂದಿಗೆ ಎಲ್ಲರನ್ನೂ ಹೊತ್ತೊಯ್ಯಬೇಕು ಎಂಬ ಆಸೆ ಹೆಚ್ಚಾಗುತ್ತಿತ್ತು ಎಂದು ಬಾಲ್ಯವನ್ನು ಮೆಲುಕು ಹಾಕುತ್ತಾರೆ ಆಯೆಷಾ ಅಜೀಜ್. ಪೈಲಟ್ ಆಗೋದು ಸುಲಭವಲ್ಲ. ಅದಕ್ಕೆ ಅತ್ಯಂತ ತಾಳ್ಮೆ, ಏಕಾಗ್ರತೆ, ಒಂದೇ ಸಲ ಎರಡು ಮೂರು ಕೆಲಸ ಮಾಡುವಂತಹ ಚುರುಕುತನ ಬೇಕಾಗುತ್ತೆ. ಹಾಗೇ, ಅತ್ಯಂತ ಕಡಿಮೆ ಅವಧಿಯಲ್ಲಿ ಮಹತ್ತರ ನಿರ್ಧಾರ ತೆಗೆದುಕೊಳ್ಳುವ ಜಾಣ್ಮೆಯೂ ಇರಬೇಕಾಗುತ್ತೆ. ಪುರುಷರೇ ಹೆಚ್ಚಾಗಿರುವ ಈ ಫೀಲ್ಡ್‍ನಲ್ಲಿ ನಾವು ಪ್ರತಿ ಬಾರಿ ತಪ್ಪು ಮಾಡಿದಾಗಲೂ ಕಾಲೆಳೆಯಲು, ನಿಂದಿಸಲು ಕಾಯುತ್ತಿರುತ್ತಾರೆ. ಅದರಿಂದಲೇ ಎಷ್ಟೋ ಹುಡುಗಿಯರ ಆತ್ಮವಿಶ್ವಾಸವೂ ಕಡಿಮೆಯಾಗುತ್ತದೆ. ಆದರೆ ನಾವು ಯ್ವಾಗಲೂ ಪಕ್ಕದವರು ಏನು ಹೇಳುತ್ತಾರೆ ಅಂತ ತಿರುಗಿ ನೋಡುವುದಕ್ಕಿಂತ ಮೇಲಿರುವ ನಮ್ಮ ಗುರಿಯತ್ತ ದೃಷ್ಟಿ ನೆಟ್ಟಿರಬೇಕು. ಆಗ ಅವರ ನಿಂದನೆಗೆ ನಮ್ಮ ಆತ್ಮವಿಶ್ವಾಸವೇ ಉತ್ತರವಾಗುತ್ತದೆ ಎಂದು ತನಗಾದ ಅನುಭವಗಳನ್ನು ಹಂಚಿಕೊಳ್ಳುವ ಆಯೆಷಾಳಿಗೀಗ 20 ವರ್ಷ.

ಜಾಹೀರಾತಿನಲ್ಲೂ ಛಾಪು ಮೂಡಿಸಿದಾಕೆ:

ನೋಡಲು ಎತ್ತರವಾಗಿ, ಮುದ್ದಾಗಿರುವ ಆಯೆಷಾ ಪೈಲಟ್ ಮಾತ್ರವಲ್ಲದೆ ಅನೇಕ ಜಾಹೀರಾತಿನಲ್ಲೂ ಅಭಿನಯಿಸಿದ್ದಾರೆ. ಹಿಂದಿ ಜಾಹೀರಾತುಗಳನ್ನು ನೋಡಿದವರಿಗೆ ಈಕೆಯ ಪರಿಚಯ ಇರಬಹುದು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಬಣ್ಣ ಹಚ್ಚಿದರೂ ಆ ರಂಗಿಗಿಂತ ಆಕೆಯ ಕನಸಿನ ರಂಗು ಆಯೆಷಾಳಿಗೆ ಹೆಚ್ಚು ಇಷ್ಟವಾಯಿತು. ಹಾಗಾಗಿ, ಅನೇಕ ಅವಕಾಶಗಳು ಬಂದರೂ ಅದನ್ನೆಲ್ಲ ಬದಿಗೊತ್ತಿ ತನ್ನ ಬಾಲ್ಯದ ಕನಸಿನ ಬೆನ್ನತ್ತಿದಳು.

ಎಷ್ಟೋ ಬಾರಿ ಹುಡುಗಿಯರನ್ನು ಅದರಲ್ಲೂ ಮುಸ್ಲಿಂ ಹುಡುಗಿಯರನ್ನು ಓದಿಸಲು, ಉದ್ಯೋಗಕ್ಕೆ ಕಳುಹಿಸಲೂ ಹಿಂದೇಟು ಹಾಕುವ ಇಂದಿನ ಸಮಾಜದಲ್ಲಿ ಹುಡುಗಿಯೊಬ್ಬಳ ಬಾಲ್ಯದ ಕನಸಿಗೆ ನೀರೆರೆದು ನನಸಾಗುವಂತೆ ಮಾಡಿದ ಪಾಲಕರಿಗೆ ಎಷ್ಟು ಕ್ರೆಡಿಟ್ ಸಲ್ಲುತ್ತದೋ, ತನ್ನ ಕನಸನ್ನೇ ಗುರಿಯಾಗಿಸಿಕೊಂಡು ಮುನ್ನುಗ್ಗಿದ ಆಯೆಷಾಳಿಗೂ ಅದರ ಕೀರ್ತಿ ಸಲ್ಲುತ್ತದೆ. `ಇದು ನಮ್ಮಂತ ಹುಡುಗಿಯರಿಗಲ್ಲ' ಎಂದು ಹಿಂದೆ ಸರಿಯುವ ಎಲ್ಲ ಹುಡುಗಿಯರು ನನಗೆ ಯಾಕೆ ಸಾಧ್ಯವಾಗದು? ಎಂಬ ಛಲದಿಂದ ಮುಂದೆ ಹೆಜ್ಜೆ ಇಟ್ಟರೆ ಮುಂದೊಂದು ದಿನ ನೀವೂ ಇತಿಹಾಸ ಸೃಷ್ಟಿಸಬಹುದು.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.