ವೀಲ್‍ಚೇರ್ ಬಾಡಿಗೆಗೆ ನೀಡುವ ಫಲ್ಗುಣಿ

ಎಲ್ಲ ಇದ್ದೂ ಯಾವುದೇ ಸಾಧನೆ ಮಾಡದವರು ಕೆಲವರಾದರೆ, ಸಾಧಿಸುವ ಮನಸಿದ್ದರೂ ಅದಕ್ಕೆ ಅನುಕೂಲಕರವಾದ ದೈಹಿಕ ಸಾಮರ್ಥ್ಯ ಇಲ್ಲದವರು ಇನ್ನೊಂದೆಡೆ. ಹಾಗೆ ಸಾಧಿಸುವ ಉತ್ಸಾಹವಿರುವ ಜೀವಕ್ಕೆ ಒಂದಷ್ಟು ಪ್ರೋತ್ಸಾಹ ತುಂಬಿದರೆ, ಅವರಿಗೆ ಅನುಕೂಲಕರವಾದ ವಾತಾವರಣ ನಿರ್ಮಿಸಿಕೊಟ್ಟರೆ ಕಿಂಚಿತ್ತಾದರೂ ಉಪಯೋಗವಾದೀತು. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆ ಫಲ್ಗುಣಿ ದೋಷಿ. ಕಾಲಿಲ್ಲದವರಿಗೆ ಕೇವಲ 1 ರೂ.ಗೆ ವೀಲ್‍ಚೇರ್ ಬಾಡಿಗೆ ನೀಡುವ ಮೂಲಕ ಅಂಗವಿಕಲರ ಬಾಳಿಗೆ ಊರುಗೋಲಾಗಿದ್ದಾರೆ!

ಗೃಹಿಣಿಯಾದ ಮಾತ್ರಕ್ಕೆ ನನ್ನ ಜೀವನವೇ ಮುಗಿದುಹೋಯಿತು. ನಾಲ್ಕು ಗೋಡೆಗಳ ನಡುವೆ ಬದುಕಬೇಕಾದ ಅನಿವಾರ್ಯತೆಗೆ ಸಿಲುಕಿಬಿಡುತ್ತೇನೆ. ನನ್ನೊಳಗಿನ ಕ್ರಿಯಾಶೀಲತೆ, ಉತ್ಸಾಹವೆಲ್ಲ ಹೀಗೇ ಇಂಗಿಹೋಗುತ್ತದೆ ಎಂದು ಕರುಬುವ ಮಹಿಳೆಯರೇ ಅಧಿಕ. ಹಾಗೇ, ಹೆಣ್ಣೆಂದರೆ ಕುಟುಂಬದ ಜವಾಬ್ದಾರಿ ಹೊತ್ತುಕೊಂಡು, ಎಲ್ಲರ ಯೋಗಕ್ಷೇಮ ನೋಡಿಕೊಂಡು ಇರಬೇಕಾದವಳು. ಆದರೆ, ಮನೆ, ಸಂಸಾರವನ್ನು ನೋಡಿಕೊಂಡು ನನ್ನ ಆಸಕ್ತಿಯ ಕ್ಷೇತ್ರದಲ್ಲೂ ಸಕ್ರಿಯಳಾಗಿರುತ್ತೇನೆ ಎಂದು ಸವಾಲೆಸೆದು ಸಮಾಜಸೇವೆಯತ್ತ ಹೆಜ್ಜೆಯಿಟ್ಟವರು ವಡೋದರಾದ ಅಕೋಟದವರಾದ ಫಲ್ಗುಣಿ ಗೃಹಿಣಿ. ಭಾರತದಲ್ಲಿನ ಬಹುತೇಕ ಅಂಗವಿಕಲರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುತ್ತಾರೆ. ವೀಲ್‍ಚೇರ್‍ಗೆ ಏನಿಲ್ಲವೆಂದರೂ ಸಾವಿರ-ಲಕ್ಷ ರೂ. ಖರ್ಚಾಗುತ್ತದೆ. ಈ ಹೊರೆಯನ್ನು ಭರಿಸುವ ಸಾಮರ್ಥ್ಯವುಳ್ಳವರು ಕೃತಕ ಕಾಲುಗಳನ್ನೇ ಹಾಕಿಸಿಕೊಳ್ಳುತ್ತಾರೆ. ಬಡವರು ವೀಲ್‍ಚೇರ್‍ಗೆ ಬೇಕಾದ ವೆಚ್ಚ ನಿಭಾಯಿಸಲಾಗದೆ ಹಾಗೇ ಉಳಿದುಬಿಡುತ್ತಾರೆ. ಆ ಕಾರಣದಿಂದಾಗಿಯೇ ಫಲ್ಗುಣಿ ದೋಷಿ 1 ರೂ.ಗೆ ವೀಲ್‍ಚೇರ್, ಕ್ರಚರ್ಸ್‍ಗಳನ್ನು ಬಾಡಿಗೆ ನೀಡುವ ಮೂಲಕ ಬಡ ಮತ್ತು ಮಧ್ಯಮ ವರ್ಗದವರ ಅಂಗವೈಕಲ್ಯಕ್ಕೆ ಪರಿಹಾರ ಕಂಡುಹಿಡಿದರು.

ಫಲ್ಗುಣಿಗೆ ಈ ಯೋಚನೆ ಹೊಳೆದದ್ದು ಅವರ ಗೆಳತಿಯ ಮನೆಯಲ್ಲಿ. ಒಮ್ಮೆ ತನ್ನ ಗೆಳೆತಿಯ ಮನೆಗೆ ಹೋಗಿದ್ದಾಗ ಅಲ್ಲಿ ಆಕೆಯ ಅಜ್ಜಿಯ ವೀಲ್‍ಚೇರ್, ವಾಕರ್ ಎಲ್ಲ ಮೂಲೆಯಲ್ಲಿ ಹಾಳುಬಿದ್ದಿದ್ದನ್ನು ನೋಡಿದರು. ಆ ಉಪಕರಣಗಳೆಲ್ಲ ಅವರಿಗೆ ಇನ್ನು ಉಪಯೋಗವಾಗದ ಕಾರಣ ಅದನ್ನು ಏನು ಮಾಡುವುದೆಂಬ ಯೋಚನೆಯಲ್ಲಿದ್ದರು. ಫಲ್ಗುಣಿಗೆ ಆಗ ಅದನ್ನೆಲ್ಲ ಮರುಬಳಕೆ (ರಿಸೈಕಲ್) ಮಾಡಬಾರದೇಕೆ? ಎಂಬ ಐಡಿಯಾ ಹೊಳೆಯಿತು. ಮನೆಯಲ್ಲಿಯೇ ಕುಳಿತು ಬೇಸರವಾಗಿದ್ದ ಕಾರಣ, ಈ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸಿದರು. ಬಳಸಿ ಮೂಲೆಗೆ ಹಾಕಿದ್ದ ವೀಲ್‍ಚೇರ್‍ಗಳನ್ನು ಸುತ್ತಮುತ್ತಲಿನ, ಪರಿಚಯದವರ ಮನೆಯಿಂದ ಸಂಗ್ರಹಿಸಿ, ಮರುಬಳಕೆ ಮಾಡಿ ಆರ್ಥೋಪೆಡಿಕ್ ಉಪಕರಣ, ವೀಲ್‍ಚೇರ್, ವಾಕರ್‍ಗಳನ್ನು ತಯಾರಿಸಿದರು. ಅದನ್ನು ತೀರಾ ಅಗತ್ಯವಿರುವ ಅಂಗವಿಕಲರಿಗೆ ತಲುಪಿಸಲು ಒಂದು ದಿನಕ್ಕೆ 1 ರೂ.ಗೆ ಬಾಡಿಗೆ ನೀಡಿ ಸಾಕಷ್ಟು ಜನರ ಬಾಳಲ್ಲಿ ಬೆಳಕಾಗಿದ್ದಾರೆ.

ಚಾಚಿತು `ಹೆಲ್ಪಿಂಗ್ ಹ್ಯಾಂಡ್':

ಹವ್ಯಾಸಕ್ಕಾಗಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದ ಫಲ್ಗುಣಿ ಅವರಿಗೆ ಅನೇಕ ಸ್ನೇಹಿತರು ಸಹಾಯಹಸ್ತ ಚಾಚಿದರು. ಹಾಗಾಗಿ, ಅದನ್ನೇ ಉದ್ಯಮವಾಗಿ ಯಾಕೆ ರೂಪಿಸಬಾರದು ಎಂದು ಯೋಚಿಸಿ, `ಹೆಲ್ಪಿಂಗ್ ಹ್ಯಾಂಡ್' ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿದರು. 1999ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಇದುವರೆಗೆ ಅನೇಕ ಅಂಗವಿಕಲರ ಜೀವನಕ್ಕೆ ಊರುಗೋಲಾಗಿದೆ. ಫಲ್ಗುಣಿ ಅವರ ಈ ಕಾರ್ಯವನ್ನು ಶ್ಲಾಘಿಸಿ ನೂರಾರು ಮಂದಿ ಡೊನೇಷನ್ ನೀಡಿದರು. ಅದರಿಂದ ಬಂದ ಹಣದಿಂದ ಹೆಚ್ಚೆಚ್ಚು ಉಪಕರಣಗಳನ್ನು ತಯಾರಿಸಲು ಸಾಧ್ಯವಾಯಿತು. ಇಲ್ಲಿ ವೀಲ್‍ಚೇರ್ ಮಾತ್ರವಲ್ಲದೆ, ಟ್ರಾನ್ಸ್ಪೋರ್ಟ್ ಚೇರ್, ವಾಕರ್, ಕೇನ್ಸ್, ಕಾಲು ಮತ್ತು ಕುತ್ತಿಗೆಯ ಪಟ್ಟಿಗಳು ಬಾಡಿಗೆಗೆ ಸಿಗುತ್ತವೆ. ಈ ಕುರಿತು ಅನೇಕ ಜನರಿಗೆ ಮಾಹಿತಿ ಇರಲಿಲ್ಲ. ಹಾಗಾಗಿ, ಸಂಸ್ಥೆ ಶುರುವಾಗಿ 16 ವರ್ಷಗಳಾದರೂ ಇಂದಿಗೂ ಎಷ್ಟೋ ಜನ ಈ ಕುರಿತು ಕೇಳಿಕೊಂಡು ಕರೆ ಮಾಡುತ್ತಾರೆ. ಇದುವರೆಗೆ ಸಾವಿರಕ್ಕೂ ಅಧಿಕ ಉಪಕರಣಗಳನ್ನು ಬಾಡಿಗೆಗೆ ನೀಡಲಾಗಿದೆ. ಜನರಿಗೆ ಸಹಾಯವಾಗಲಿ ಎಂಬ ಕಾರಣದಿಂದ ಮಾಡಿದ ಈ ಪ್ರಯೋಗದಿಂದ ಇತ್ತೀಚೆಗೆ ಕೊಂಚ ಲಾಭವೂ ಬರಲಾರಂಭಿಸಿದೆ. ಹವ್ಯಾಸವಾಗಿ ಬೆಳೆದ ಯೋಜನೆಯೇ ಉದ್ಯಮವಾಗಿ ಬದಲಾಗಿದೆ.

ವಡೋದರಾದ ಸುತ್ತಲಿನ ಸಾಕಷ್ಟು ಜನರ ಬಾಯಿಯಿಂದ ಬಾಯಿಗೆ ಹರಡಿ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯ ಕೆಲಸ ಜನಜನಿತವಾಗಿದೆ. ಯಾವುದೇ ಪ್ರಚಾರವಿಲ್ಲದೆ, ಉಪಯೋಗ ಪಡೆದುಕೊಂಡ ಜನರೇ ಪ್ರಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಕಾರಣದಿಂದಲೇ ಇದರಿಂದ ಅನುಕೂಲ ಪಡೆದ ಜನರು ಮತ್ತೊಬ್ಬರಿಗೆ ಸಹಾಯ ಮಾಡುತ್ತಿದ್ದಾರೆ. ಉಪಕರಣಗಳನ್ನು ನೀಡುವುದಕ್ಕಿಂತ ಮೊದಲು ಒಂದಷ್ಟು ಹಣವನ್ನು ಡೆಪಾಸಿಟ್ ರೂಪದಲ್ಲಿ ಇಟ್ಟುಕೊಳ್ಳಲಾಗುತ್ತದೆ. ನಂತರ, ದಿನಕ್ಕೆ ಒಂದು ರೂ.ನಂತೆ ಅದರಿಂದ ಹಣವನ್ನು ಕಡಿತಗೊಳಿಸಿಕೊಳ್ಳಲಾಗುತ್ತದೆ. ಉಪಕರಣವನ್ನು ಹಿಂತಿರುಗಿಸಿದ ಬಳಿಕ ಉಳಿದ ಹಣವನ್ನು ವಾಪಾಸ್ ನೀಡಲಾಗುತ್ತದೆ.

ಸ್ಥಳೀಯ ಅಸಹಾಯಕರಿಗೆ ಆದ್ಯತೆ:

`ಮೊದಲೆಲ್ಲ ಉಪಕರಣಗಳನ್ನು ಉಚಿತವಾಗಿಯೇ ನೀಡುತ್ತಿದ್ದೆವು. ಆದರೆ, ಉಚಿತವಾಗಿ ನೀಡಿದಾಗ ಜನರಿಗೆ ಅದರ ಮಹತ್ವ ಗೊತ್ತಾಗುವುದಿಲ್ಲ ಎಂದೆನಿಸಿ, ಡೆಪಾಸಿಟ್ ಇರಿಸಿಕೊಂಡು ಉಪಕರಣ ನೀಡಲಾರಂಭಿಸಿದೆ. ಇದರಿಂದ ನಮಗೂ ಇನ್ನೊಂದಿಷ್ಟು ಉಪಕರಣಗಳನ್ನು ಖರೀದಿಸಲು ಸಹಾಯವಾಗುತ್ತಿದೆ. ಒಂದುವೇಳೆ ಡೆಪಾಸಿಟ್ ಇಡಲಾಗದಿದ್ದರೂ ನಾವೇನು ಒತ್ತಾಯ ಮಾಡುವುದಿಲ್ಲ. ನಮಗೆ ನಮ್ಮ ಪ್ರಯತ್ನ ನಿಜವಾದ ಅಗತ್ಯವಿರುವವರಿಗೆ ತಲುಪಬೇಕು ಎಂಬುದೇ ವಿನಃ ಲಾಭವಲ್ಲ. ಅನೇಕ ಜನರು ತಮ್ಮ ಮನೆಯಲ್ಲಿರುವ ಬಳಸಿದ ಉಪಕರಣಗಳನ್ನು ನಮಗೆ ದಾನವಾಗಿಯೂ ನೀಡುತ್ತಿದ್ದಾರೆ. ಗುಜರಾತ್‍ನಿಂದ ಸಾಕಷ್ಟು ಜನರು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ, ನಾನಿನ್ನೂ ವಡೋದರಾಗೆ ನಮ್ಮ ವಹಿವಾಟನ್ನು ಸೀಮಿತಗೊಳಿಸಿದ್ದೇನೆ. ಏಕೆಂದರೆ, ಇಲ್ಲಾದರೆ ಒಮ್ಮೆ ಕೊಟ್ಟ ಉಪಕರಣಗಳನ್ನು ಮತ್ತೆ ವಾಪಾಸು ಕೇಳಲು ಸುಲಭವಾಗುತ್ತದೆ. ಹಾಗೇ ಸ್ಥಳೀಯ ಮಟ್ಟದಲ್ಲಿ ಈ ಬಗೆಯ ಪ್ರಯೋಗಗಳನ್ನು ಮಾಡುವುದರಿಂದ ಸ್ಥಳೀಯ ಅಸಹಾಯಕರಿಗೆ ಸಹಾಯ ಮಾಡಿದಂತಾಗುತ್ತದೆ ಎಂಬುದು ನಮ್ಮ ಉದ್ದೇಶ. ಆದರೂ ನಾವು ಕೊಟ್ಟ ಉಪಕರಣಗಳು ಯಥಾಸ್ಥಿತಿಯಲ್ಲಿ ನಮ್ಮ ಕೈಸೇರುತ್ತದೆ ಎಂದು ನಂಬುವಂತಿಲ್ಲ. ಡ್ಯಾಮೇಜ್ ಆದ ಉಪಕರಣಗಳ ನಷ್ಟವನ್ನು ನಾವೇ ಭರಿಸಬೇಕಾಗುತ್ತದೆ' ಎನ್ನುತ್ತಾರೆ ಫಲ್ಗುಣಿ.

ಎಷ್ಟೋ ಮಹಿಳೆಯರು ಮನೆಯಲ್ಲೇ ಕುಳಿತು ಯಾವ ರೀತಿಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಎಂಬ ಬಗ್ಗೆ ಯೋಚಿಸುತ್ತಿರುತ್ತಾರೆ. ಅಂಥವರು ನಮ್ಮ ಯೋಜನೆಯಿಂದ ಬೇರೆಯವರಿಗೆ ಯಾವ ರೀತಿಯ ಉಪಯೋಗವಾಗುತ್ತದೆ ಎಂಬುದನ್ನೂ ಯೋಚಿಸಿದರೆ ಹೊಸ ಐಡಿಯಾಗಳು ರೂಪುಗೊಳ್ಳುತ್ತವೆ. ಅದಕ್ಕೆ ಫಲ್ಗುಣಿ ದೋಷಿ ಉತ್ತಮ ನಿದರ್ಶನ. ಮಹಿಳೆಗೆ ಏನು ತಾನೇ ಮಾಡಲು ಸಾಧ್ಯ? ಎಂಬ ಹೀಯಾಳಿಕೆಯ ಬಾಯಿಗೆ ಬೀಗಹಾಕಿ ಸಾವಿರಕ್ಕೂ ಅಧಿಕ ಅಂಗವಿಕಲರಿಗೆ ಆಸರೆಯಾಗಿದ್ದಾರೆ ಫಲ್ಗುಣಿ ಎಂಬ ಅತಿ ಸಾಮಾನ್ಯ ಗೃಹಿಣಿ!

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.