ಅರೆಕ್ಷಣ

ಅವಳೆಂದರೆ ಕಪ್ಪು ಹುಡುಗನಿಗೆ ಸೋತು ಹೋಗುವಷ್ಟು ಪ್ರೀತಿ, ಜಗತ್ತಿನ ಎಲ್ಲಾ ಭಾಷೆಗಿಂತಲೂ ಮಧುರವಾದ ಹಾಗೂ ತುಸು ಹೆಚ್ಚೇ ಕಣ್ಣಿನ ಭಾಷೆ, ಅದರ ಬಾಯಿಗೆ ತುಟಿಯಾಗಿದ್ದ, ಯೂ ಟರ್ನ್ ರಸ್ತೆಯಂತೆ ಸದಾ ವಾರೆ ನೋಟದಲ್ಲಿ ಗೆಲುವು ಕಾಣುತ್ತಿದ್ದ.. ಮಣಿಗಂಟಿನ ಮೇಲಿರುವ ಕಾಲ್ಗೆಜ್ಜೆಯ ನೋಡಿಯೇ ಗಂಟೆಗಟ್ಟಲೆ ಹಿಮಾಲಯ ತಪಸ್ವಿಯಂತೆ ಪ್ರಖರವಾಗಿ ಚಿಂತಿಸಿದ್ದ ನನ್ನವಳಾದಾಗ ಬದಲಿ ಗೆಜ್ಜೆಯ ಮಾಡುವ ಕೈಗಳನ್ನು ಖುದ್ದಾಗಿ ಕೈ ಕುಲುಕಿ ಮಾತಾಡಿಸಿ ತಯಾರಿಸಬೇಕೆಂದು. ಪೆದ್ದು ಮುದ್ದು ಹುಡುಗಿ, ಇವನಿಗಿಂತ ಎರಡು ಕೆಳಗಿನ ದರ್ಜೆಯಲ್ಲಿ ಓದುವವಳು, ತುಂಬಾ ಗಾಳಗಳೂ ಬಿದ್ದರೂ ಅಂಡಮಾನಿನ ಮೀನುಗಳಂತೆ ತಪ್ಪಿಸಿಕೊಳ್ಳುತ್ತಿದ್ದವಳು.....

ಯಾರದೋ ಸಾವಿನ ಸುದ್ಧಿಗೆ ಕಾಲೇಜಿನ ಬಾಗಿಲುಗಳಿಗೂ ಅರ್ಧ ದಿನದ ತೆರೆಯುವಿಕೆ ಸಾಕಾಗಿತ್ತು, ತುಟಿಗಚ್ಚುವ ಸಿಗರೇಟಿನ ಪರಿಮಳದ ಎಡೆಯಲ್ಲಿ ಧ್ಯಾನಸಕ್ತ ಮುನಿಯಂತೆ ಕೂತಿದ್ದವ ತಟ್ಟನೇ ತನ್ನ ಭಾವಿ ಒಡತಿಯ ಆಶ್ಚರ್ಯಕರ ಒಳಬರುವಿಕೆಯಿಂದ ಗಲಿಬಿಲಿಗೊಂಡಿದ್ದ.. ಹಳ್ಳ ಹಳ್ಳ ಸೇರಿ ನಂದಿಯಾದಂತೆ ಓಝೋನು ಪರದೆ ಸೀಳಲು ಕಳುಹಿಸುವ ಸೈನಿಕರ ಮಧ್ಯೆ ಕಾರ್ಮೋಡ ಕವಿದ ಆಕಾಶದಂತಿದ್ದ ಆ ಕ್ಷಣಕ್ಕೆ ಹೊಗೆಗಳು ಮಲಯ ಮಾರುತದಂತೆ ಭಾಸವಾಗಿ ಕಪ್ಪು ಹುಡುಗ ಬಿಳಿಯಂತೆ ತೋರುತ್ತಿದ್ದ... ಬಂದವಳೇ "ಏನೋ ಮಾತಾಡಬೇಕು, ನಿಮಿಷ ವ್ಯಯಿಸಬಹುದೇ!?" ಮರು ಪ್ರಶ್ನಿಸದೇ ರಾಜಭಟನಂತೆ ಗಂಭೀರ ಹಾಗೂ ಮರ್ಯಾದಿಯ ಹೆಜ್ಜೆಗಳನಿಡಲು ಅಣಿಯಾದ...

"ಯಾಕೋ, ಹೀಗೆಲ್ಲಾ ಮಾಡುವೇ!?" ಸರ್ವ ಸನ್ನಧ್ಧವಾಗಿ ಯುದ್ಧಕ್ಕೆ ಹೋದರೂ ಎದುರಾಳಿಯಿಂದ ಪ್ರಪ್ರಥಮವಾಗಿ ದಾಳಿಗೆ ಕೊಂಚ ಕಸಿವಿಸಿಯಾದ ಸೈನಿಕನಂತೆ ದಿಗಿಲುಗೊಂಡವ ಮೂರು ಅಡಿ ಹಿಂದಿನಿಂದಲೇ ತೊದಲ ತೊಡಗಿದ "ನಾನೇನು ಮಾಡಿದೆ..!?"

ಹಳೇ ಸಿನಿಮಾ ಹೀರೊಯಿನ್ ಥರ ಒಂದೂವರೆ ಹೆಜ್ಜೆಯನ್ನು ಮೊಟಕುಗೊಳಿಸಿ ಸರ್ವ ಸಂಪನ್ನ ಒಡಲನ್ನು ಅಳುಗಾಡಿಸದೇ ಅಯೋಮಯಗೊಳಿಸುವ ಕಣ್ಣು ಮೂಗು ಬಾಯಿ ಮಿಶ್ರಿತ ಅಂಗವೊಂದನ್ನು ಅರವತ್ತು ಡಿಗ್ರಿಯಲ್ಲಿ ವಾಲಿಸಿ ಕಿರುನಗೆಯನ್ನು ಮಕ್ಕಳು ಕಂಪೌಂಡಿನಿಂದ ಆಚೆಗೆ ಚೆಂಡು ಎಸೆಯುವ ಆಗೇ ಎಸೆದಳು.. ಮೊದಲೇ ಮೂಕ ವಿಸ್ಮಿತನಾಗಿರುವವ ಸ್ಟೀಪನ್ ಹಾಕಿಂಗ್ ಗಿಂತಲೂ ಹೆಚ್ಚಾಗಿ ಯೋಚಿಸುತ್ತಿದ್ದವ ಈ ನಗೆಯನ್ನು ನಿರೀಕ್ಷಿಸಿರಲಿಲ್ಲ... ಷೇರ್ ಮಾರ್ಕೆಟ್ಟಿನ ತಟ್ಟನೇ ಆಗುವ ಬದಲಾವಣೆಯ ಗೊಂದಲ ಕೆಲವರ ಸಂತೋಷ ಒಮ್ಮೆಲೇ ಇವನ್ನೊಬ್ಬನ ಪಾಲಾಗಿತ್ತು...

ತನಗೆ ಮಾತ್ರ ವಾರೆ ನೋಟ ನೋಡುವ ಕಲೆ ಕರಗತವಾಗಿದೆಯೆಂಬ ಗಂಡು ಜಂಭ ನೆಲಕಚ್ಚುವ ಎಲ್ಲಾ ರುಜುಗಳು ಆ ನೋಟದಲ್ಲಿತ್ತು.. ಮುಂದಿನ ಒಂಬತ್ತು ಅಡಿ ಆಷಾಢ ಮಾಸಕ್ಕೆ ಮಡದಿ ಹೋಗುವ ಕರಾಳ ಮನಸ್ಥಿತಿಯ ಬೀಳ್ಕೊಡುಗೆ ಸಮಾರಂಭವನ್ನು ನೆನಪಿಸುವಂತಿತ್ತು.. ಮೊದಲು ತುಟಿ ಮುರಿದದ್ದು ಅವಳೇ.. "ನಿದ್ದೆ ಮಾಡದೇ ತುಂಬಾ ದಿನವಾಯ್ತು, ಹೀಗೆನೇ ಆದ್ರೆ ನಾ ಹುಚ್ಚಿ ಆಗ್ಬಿಡ್ತೇನೋ ಅನ್ನೋ ಭಯ.." ಗಣಿತ ಮೇಸ್ಟ್ರ ತಲೆ ಜಿಟ್ಟುಹಿಡಿಸುವ ಸಮಸ್ಯೆಗಳು, ಕೆಮಿಸ್ಟ್ರಿ ಮಿಸ್ ನ ರಸಾಯನ ಸೂತ್ರ ಏಕಕಾಲಕ್ಕೆ ಮಂಡೆಯನ್ನು ಛೇಧಿಸಿ ಹೋದಂತೆ ಅನುಭವಾಯ್ತು ಅವನಿಗೆ.. ಸ್ವಲ್ಪ ತಡವರಿಸಿಕೊಂಡವನೇ ಯಥಾಸ್ಥಿತಿಗೆ ಬಲವಂತವಾಗಿ ಹಿಂದುರಿಗಿದ ಮೌನ ಮುರಿಯಲು ಯತ್ನಿಸಿದರೂ ಎದೆಯ ಬುಡಕ್ಕೆ ಗುಂಡು ತಗುಲಿದವನಂತೆ ಸ್ವರ ರಹಿತ ಸಂಭಾಷಣೆ ಮಾಡತೊಡಗಿದ. ಆದರೂ ಒಂದೆರಡೆಜ್ಜೆ ಅವಳಿಗಿಂತ ಹಿಂದೆಯಾದ ಕಾರಣ ಅವಳೂ ನೋಡಿಲ್ಲ ಇವನ ಮೂಕಾಭಿನಯ! ಆಗೂ ಹೀಗೂ ಸಾವರಿಸಿಕೊಂಡು ಧ್ವನಿಪೆಟ್ಟಿಗೆಯನ್ನು ಮೈಕ್ ಸೆಟ್ಟಿನವರ ಥರ ಸರಿಪಡಿಸಿ ಭಯದ ವಾತಾವರಣದಲ್ಲೇ "ನಾನೇನು ಮಾಡಿದೆ!?" ಒಂದು ಧ್ವನಿ ಹೊರಡಿಸಿದ..

ಸಂಜೆ ಐದಾದರೂ ಟೀ ಸಿಗದಿರುವಾಗ ಮಕ್ಕಳು ಬೊಬ್ಬೆಗೆ ಹೌಹಾರುವ ಹಿರಿಯ ತಲೆಯವರಂತೆ ಈ ಬಾರಿ ಕೊಂಚ ಕೋಪಗೊಂಡಿದ್ದಳು! "ತಲೆಯಲ್ಲೇನಿದೆ ಮಣ್ಣು, ನೀನು ಕನಸಲ್ಲಿ ಬಂದು ಕಾಡುವುದರಿಂದ ನಂಗೆ ನಿದ್ರೆ ಬರ್ತಿಲ್ಲ ಅಂದೆ, ಐ ಥಿಂಕ್ ಐ ಆಮಾ ಇನ್ ಲವ್ ವಿಥ್ ಯೂ"...

ಪದವನ್ನು ತೊಂಬತ್ತು ಡಿಗ್ರಿಗೆ ವಾಲಿಸಿ ಸ್ಲೋ ಮೋಶನ್ ನಲ್ಲಿ ಓಡಿ ಬಂದು ಅಂಡಮಾನಿನ ಸೆಲ್'ನಂತೆ ತನ್ನ ಬಾಹುವಿನಲ್ಲೆ ಅವಳನ್ನು ಬಂದಿಸಬೇಕೆಂದು ಮನದಲ್ಲೇ ಪುಟಗಟ್ಟಲೇ ಚಿಂತಿಸತೊಡಗಿದವನಿಗೆ ಇದುವರೆಗೂ ಬರದ ಮುಗುಳ್ನಗುವೊಂದು ಎಡಭಾಗದ ಆಗ್ನೇಯ ದಿಕ್ಕಿಗೆ ಮುನ್ಸೂಚನೆಯಿಲ್ಲದೇ ಜಾರಿ ಹೋಗಿಯಾಗಿತ್ತು...

"ಬಸ್ಸಿಗೆ ಟೈಮ್ ಆಯ್ತು ಬಾರಲೋ ಹೋಗೋಣ".. ಸುಖನಿದ್ರೆಯಲ್ಲಿರುವಾಗ ಬೆಳಗಾಯ್ತು ಏಳೋ ಮೇಲೆಯಂತ ಅಮ್ಮ ಕೂಗೋಥರ ಕೇಳುತಿದ್ದವನಿಗೆ ಇನ್ನೊಬ್ಬ ಕಾಲರನ್ನು ಜಗ್ಗಿಸಿದಾಗಲೇ ಅರಿವಾಗಿದ್ದು ಸಿಗರೇಟಿನ ಘಾಟಿಗೆ ತಾನೊಂದು ಅನೂಹ್ಯ ಅಪೂರ್ವ ಅತ್ಯದ್ಭುತ ಅರೆಕ್ಷಣದ ಕನಸಿನ ನಾವಿಕನಾಗಿದ್ದೇನೆಂದು... ಈ ಬಾರಿ ಬಲಭಾಗದ ಈಶಾನ್ಯ ದಿಕ್ಕು ನೋಡಿ ನಸುನಗುವೊಂದು ಕಳೆದೋಯ್ತು...

ಕಂಡ ಕನಸು ನನಸಾಗಲೆಂದು ಗೊತ್ತಿರುವ ದೇಶದ ಎಲ್ಲಾ ದೇವರಲ್ಲಿ ವಿನಯಪೂರ್ವ ಅಹವಾಲು ಆಗಲೇ ಮಂಡಿಸಿಯಾಗಿತ್ತು..ಗೆಳೆಯರ ಸಿಗರೇಟು ಕೂಡ ಎಲ್ಲಾ ಸುಟ್ಹೋಗಿತ್ತು..!!


ಅವಿಜ್ಞಾನಿ

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.