ಪ್ರೀತಿಯೆಂದರೆ-18

ವೈಟ್ ಚೂಡಿ ಧರಿಸಿ ಹ್ಯಾಂಡ್ ಬ್ಯಾಗ್ ಹಿಡಿದು ಕನ್ನಡಿಯಲ್ಲೊಮ್ಮೆ ನೋಡಿಕೊಂಡು "ಅದೆಲ್ಲಿಗ್ ಕರ್ಕೊಂಡ್ ಹೋಗ್ತಿದಾನೋ ಏನೋ.. ಒಂದೂ ನೆಟ್ಟಗ್ ಹೇಳಲ್ಲ" ಎಂದು ಗೊಣಗಿಕೊಳ್ಳಲೂ ವಿವೇಕ್ ಬಾಗಿಲು ತಟ್ಟಲೂ ಸರಿಹೋಗುತ್ತದೆ.
ವಿ: ಏನೋ ಅಂದಂಗಿತ್ತು??
ಅ: ಏನಿಲ್ಲ..
ವಿ: ಏನೋಮ್ಮಾ.. ನಾವು ದಡ್ಡರು. ಏನೋ ಮಾಡಿ.
ಅ: ಹೌದೌದು.. ಭಾರಿ ದಡ್ಡರು. ಏನೂ ಗೊತ್ತಾಗಲ್ಲ (ಮುಖ ತಿರುಗಿಸುತ್ತಾ)
ವಿ: ನಿಜ ಅನಿ.. (ಮುಗ್ಧನ ಹಾಗೆ ನಟಿಸುತ್ತಾ..)
ಅ: 4 ವರ್ಷದಿಂದ ನೋಡಿದೀನಿ ನಿನ್ನ ಆಯ್ತಾ.. ನಮ್ ದೇವರ ಸತ್ಯ ನಮಗ್ ಗೊತ್ತು!!!!
ವಿ: ಹಾ..!! ನಾನು.. ನಿನ್ ನಿನಗೆ ದೇವರಾ....!!!! wow.. thats very cute"
ಅ: ಕೋಪದಲ್ಲಿ ಅವನನ್ನೇ ದಿಟ್ಟಿಸಿ.... ಹೋಗೋಣಾ??
ವಿ: ಸರಿ ಬಾ ಹೋಗೋಣ.. "ಅಂದ್ ಹಾಗೇ looking pretty in white" ಯಾವ್ದುಕ್ಕೂ ಒಂದ್ಸಾರಿ ದೃಷ್ಟಿ ತೆಗೆದ್ ಬಿಡ್ತೀನಿ ಇರು ಎಂದು ನಟಿಗೆ ಮುರಿಯುತ್ತಾನೆ.

ಅ: ನಿಂದು ಅತಿ ಅನ್ನಿಸ್ಲಿಲ್ವಾ??
ವಿ: ಏನ್ ಅತಿ..?? ಆಚೆ ಹೋಗ್ತಾ ಇದೀವಂತೆ.. ಯಾರ್ಯಾರ್ ಕಣ್ಣೋ ಬಿದ್ದು ನಮ್ ಹುಡ್ಗಿಗೆ ದೃಷ್ಟಿ ಆಗಿ ಏನಾದ್ರೂ ಹೆಚ್ಚು-ಕಮ್ಮಿ ಆಗ್ಬಿಟ್ರೇ.... ಅದಕ್ಕೇ ಯಾವ್ದುಕ್ಕೂ ಇರ್ಲಿ ಅಂತ.....
ಅ: ದೃಷ್ಟಿ ತೆಗೆದೆ..
ಎನ್ನುತ್ತಲೇ ಇಬ್ಬರೂ ನಗಲು ಶುರು ಮಾಡುತ್ತಾರೆ. ತಕ್ಷಣ ತನ್ನನ್ನು ಸಂಭಾಳಿಸಿಕೊಂಡ ಅನಿ.. ಸರ್ಸರಿ.. ನಡಿ ಎಂದು
ರೂಮ್ ಲಾಕ್ ಮಾಡಿ ವಿವೇಕ್ ನ ಜೊತೆ ಹೊರಡುತ್ತಾಳೆ.

ಬೈಕ್ ಮೇಲೆ ಹೊರಟ ಇವರಿಬ್ಬರ ಸವಾರಿ ಸುಂದರವಾದ ಮನೆಯೊಂದನ್ನು ತಲುಪುತ್ತೆ. ಪೋರ್ಟಿಕೋ ನಲ್ಲಿ ಬೈಕ್ ಪಾರ್ಕ್ ಮಾಡಿ "ಬಾ ಅನಿ.. " ಎನ್ನುತ್ತಾನೆ. "ಎಲ್ಲಿಗ್ ಕರ್ಕೊಂಡ್ ಬಂದಿದ್ದೀಯಾ.. ಯಾರ್ ಮನೆ ಇದು" ಎಂಬ ಅನಿ ಪ್ರಶ್ನೆಗೆ ಏನೂ ಉತ್ತರ ಕೊಡದೆ ಮೌನವಾಗಿ ಮುಂದೆ ನಡೆದವನ ಹಿಂದೆಯೇ ಬರುತ್ತಾಳೆ ಅನಿ ಒಂದರ ಹಿಂದೆ ಒಂದು ಎಂಬಂತೆ ಪ್ರಶ್ನೆಗಳನ್ನು ಕೇಳುತ್ತಾ.. ಒಳಗೆ ಬಂದವನೇ.. ಮಾಮ್.. ಮಾಮ್.. ಬಾನಿ.. ಎಲ್ಲಿದ್ದೀರಾ ಇಬ್ರೂ.. ಬೇಗ ಬನ್ನಿ ಎಂದಾಗ ವಿವೇಕ್ ನ ಅಪ್ಪ "ಈ ಡ್ಯಾಡ್ ನ ಮರ್ತ್ ಬಿಟ್ಟಾ ಮಗ್ನೇ.. ಇವತ್ತು ಸಂಡೇ ಕಣೋ.. ಬ್ಯಾಂಕ್ ರಜೆ.. ನಿಮ್ಮಪ್ಪ ಮನೇಲೇ ಇರ್ತಾನೆ" ಎಂದು ಕೇಳುತ್ತಲೇ ನ್ಯೂಸ್ ಪೇಪರ್ ಪಕ್ಕಕ್ಕಿಟ್ಟು ಕನ್ನಡಕ ಸರಿಮಾಡಿಕೊಂಡು ನೋಡಿದ ವಿವೇಕ್ ನ ಅಪ್ಪ, ಸುಪುತ್ರ ಒಂದು ಹುಡುಗಿಯನ್ನು ಮನೆಗೆ ಕರೆ ತಂದಿರುವುದು ಕಾಣಿಸುತ್ತಲೇ.. "ಓ.. ಅನಿಕಾ.. ಬಾಮ್ಮ ಬಾ.. ಕೂತ್ಕೋ.." ಎಂದ ತಕ್ಷಣ ಅನಿ ಗೆ ಶಾಕ್ ಆಗುತ್ತದೆ!! ಏನೂ ಮಾತಾಡದೆ ಟೆನ್ಷನ್ ನಲ್ಲಿದ್ದ ಅನಿಯನ್ನು ನೋಡಿ "ವಿವೇಕ್ ಎಲ್ಲಾ ಹೇಳಿದಾನಮ್ಮ" ಎನ್ನುತ್ತಲೇ ಕಿಚನ್ ನಿಂದ ಬಂದ ವಿವೇಕ್ ನ ಅಮ್ಮ "ಬಾಮ್ಮ ... ಕೂತ್ಕೋ.. ಯಾಕೆ ನಿಂತ್ಬಿಟ್ಟೆ" ಎಂದು ಅವಳ ಕೈ ಹಿಡಿದು ಸೋಫಾ ಮೇಲೆ ಕೂರಿಸಿ "ಇರಮ್ಮ ಕಾಫಿ ಮಾಡ್ಕೊಂಡ್ ಬರ್ತೀನಿ" ಎಂದು ಕಿಚನ್ ಗೆ ಹೋಗುತ್ತಲೇ.. ಬಾನಿ.. ಬಾನಿ.. ಬೇಗ ಬಂದು ಯಾರ್ ಬಂದಿದಾರೋ ನೋಡು ಎನ್ನುತ್ತಾರೆ.

ಸೋಫಾ ಮೇಲೆ ಕೂತ ಅನಿಗೆ "ಏನಿದು ವಿಚಿತ್ರ!! ಇವರಪ್ಪ ಅಮ್ಮಂಗೆ ನಾನು ಮೊದಲೇ ಗೊತ್ತಾ.. ಆದ್ರೆ ನಾನ್ಯಾವತ್ತೂ ಇವರ ಮನೆಗೆ ಬಂದಿಲ್ಲ.. ಅದ್ರಲ್ಲೂ ಇವ್ರಮ್ಮ ವಿವೇಕ್ ಎಲ್ಲಾ ಹೇಳಿದಾನೆ ಅಂತಿದಾರೆ.. ಏನ್ ಹೇಳಿದಾನೆ!!!!" ಎಂದು ದುಪ್ಪಟ್ಟಾದ ತುದಿ ಹಿಡಿದು ತೋರು ಬೆರಳಿಗೆ ಸುತ್ತುತ್ತಿರುತ್ತಾಳೆ. ಮೆಟ್ಟಿಲಿಳಿದು ಬಂದ ಹುಡುಗಿ ಅನಿಯನ್ನು ನೋಡುತ್ತಲೇ.. "ಓಹ್..  ಹಾಯ್.. .ಚೆನ್ನಾಗಿದ್ದೀರಾ.. ನಾನು ಭಾವನಾ ಅಂತ.. ಇಲ್ ನಿಂತಿದಾನಲ್ಲ ಇವನ್ ತಂಗಿ" ಎಂದು ವಿವೇಕ್ ನ ಕಡೆ ತೋರಿಸುತ್ತಾಳೆ. ವಿವೇಕ್ ಮುಗುಳ್ನಗುತ್ತಾನೆ. ಅಷ್ಟರಲ್ಲೇ ವಿವೇಕ್ ನ ಅಮ್ಮ ಬಂದು ಕಾಫಿ ಕಪ್ ನ್ನು ಅನಿಯ ಕೈಗಿತ್ತು ಅವಳ ಪಕ್ಕವೇ ಕೂರುತ್ತಾರೆ ಹಾಗೂ ಭಾವನಾ ಮತ್ತು ವಿವೇಕ್ ಗೆ ಕೂರಲು ಹೇಳುತ್ತಾರೆ. ತಲೆತಗ್ಗಿಸಿ ಕಾಫಿ ಕುಡಿಯುತ್ತಿದ್ದ ಅನಿಯನ್ನು ನೋಡಿ "ಲಕ್ಷಣವಾಗಿದೀಯಮ್ಮ.." ಎಂದು ಹೇಳಿ ಭಾವನಾ ಗೆ ಮನೆ ತೋರಿಸಲು ಹೇಳುತ್ತಾರೆ. ಬನ್ನಿ ಎಂದು ಅನಿಯನ್ನು ಕರೆದುಕೊಂಡು ಮೆಟ್ಟಿಲೇರಿ ತನ್ನ ರೂಮ್ ಗೆ ಕರೆತರುತ್ತಾಳೆ. ಸುಮ್ಮನೇ ಇದ್ದ ಅನಿಯನ್ನು ನೋಡಿ "ಹ್ಮ್.. ನನಗ್ ಗೊತ್ತು.. ನೀವ್ ಏನ್ ಯೋಚನೆ ಮಾಡ್ತಿದ್ದೀರಾ ಅಂತ.. ವಿವೇಕ್ ನಿಮ್ಮನ್ನ ತುಂಬಾ ಇಷ್ಟ ಪಡ್ತಾನೆ.. ಆದ್ರೆ ಆ ಗೂಬೆಗೇ ಅದು ಅರ್ಥ ಆಗಿರ್ಲಿಲ್ಲ. ನೀವು ಈ ಊರು ಬಿಟ್ಟು ಹೋದ ಮೇಲೆ ಅವನನ್ನ ನೋಡೋಕೇ ಆಗ್ಲಿಲ್ಲ. ಯಾವಾಗ್ಲೂ ಒಂಥರಾ ಇರೋನು.. ತರ್ಲೆ ಮಾಡ್ಕೊಂಡ್ ಯಾವಾಗ್ಲೂ ನಗಾಡ್ತಾ ಬಿಂದಾಸ್ ಆಗಿ ಇದ್ದೋನು, ಏನೋ ಕಳ್ಕೊಂಡಿದೀನಿ ಅನ್ನೋ ತರ ಇರೋನು. ಕೇಳಿದ್ರೆ ಏನೂ ಹೇಳ್ತಿರ್ಲಿಲ್ಲ.. ಅಮ್ಮನ ಬಲವಂತಕ್ಕೆ ಊಟ ತಿಂಡಿ ಮಾಡಿದ ಶಾಸ್ತ್ರ ಮಾಡೋನು. ಇವ್ನು ಹೀಗ್ ಇರೋಕ್ ಏನ್ ಕಾರಣ ಅಂತ ಏನಾದ್ರೂ ಮಾಡಿ ಕಂಡು ಹಿಡೀಬೇಕು ಅಂತ ಡಿಸೈಡ್ ಮಾಡಿದೆ. ಒಂದಿನ ಅವನ ಫೋನ್ ಪಾಸ್ವರ್ಡ್ ತಿಳ್ಕೊಂಡು ಮೊಬೈಲ್ ಅನ್ಲಾಕ್ ಮಾಡಿ ನೋಡಿದೆ. ನಿಮ್ಮದೇ ಫೋಟೋ ಹಾಕಿದ್ದ ಸ್ಕ್ರೀನ್ ಗೆ. ಸ್ವಲ್ಪ ಆಶ್ಚರ್ಯ ಆಯ್ತು. ಹಾಗೇ ಗ್ಯಾಲರಿಗೆ ಹೋಗಿ ನೋಡಿದ್ರೆ ನಿಮ್ಮದೇ ಲೆಕ್ಕವಿಲ್ಲದಷ್ಟು ಫೋಟೋಗಳು. ಆಗ ಡೌಟ್ ಬಂದು ಒಂದ್ಸಾರಿ, ಲೋ.. ನಿನ್ಗೇ ಕಾಲ್ ಬರ್ತಿದೆ ಕಣೋ.. ಯಾರೋ ಮಿಸ್.ಗರಗಸ ಅಂತೆ!! ಎನ್ನುತ್ತಲೇ ಕೆಳಗೆ ಕಾಫಿ ಕುಡೀತಿದ್ದವ್ನು ಎರಡೇ ನಿಮಿಷದಲ್ಲಿ ಅವನ ರೂಮ್ ಗೆ ಬಂದವ್ನೇ ಫೋನ್ ನೋಡಿ ಯಾವ್ದೇ ಕಾಲ್ ಬರದೇ ಇದ್ದದ್ದನ್ನು ನೋಡಿ ನನ್ ಕಡೆ ದುರುಗುಟ್ಠಿಕೊಂಡು ನೋಡಿದ. ನಾನೂ ನೋಡಿದೆ.. ಹಾಗೇ ಕೇಳಿದೆ ಕೂಡ ಯಾರಪ್ಪ ಅದು ನಿನ್ ಲವರ್ ತಾನೇ.. ಮೊದಲಿಗೆ ಇಲ್ಲ ಅಂತ ವಾದಿಸಿದ, ಆಮೇಲೆ ನಿಧಾನವಾಗಿ ಬಾಯ್ಬಿಟ್ಟ. ನಂತರ ನಾವೆಲ್ಲಾ ಅವನ ಸಪೋರ್ಟ್ ಗೆ ನಿಂತ್ವಿ. ನಿಮ್ಮನ್ನ ಬೇಕಾದಷ್ಟು ಕಡೆ ಹುಡುಕಿದ್ರೂ ಸಿಗ್ಲಿಲ್ಲ. ಅವನಿಗೆ ಬೇಕಾದಷ್ಟು ಪ್ರಫೋಸಲ್ ಗಳು ಬಂದ್ರೂ ಒಪ್ಲಿಲ್ಲ. ಅನಿ ನ ಕರ್ಕೊಂಡ್ ನಿಮ್ ಮುಂದೆ ನಿಲ್ಸೇ ನಿಲ್ಲಿಸ್ತೀನಿ ಒಂದಿನ ಅಂತಿದ್ದ. ನಿನ್ನೆ ರಾತ್ರಿಯಷ್ಟೇ ಕಾಲ್ ಮಾಡಿದ್ದ ನಾಳೆ ಅನಿ ನ ಕರ್ಕೊಂಡ್ ಬರ್ತೀನಿ ಅಂತ. ತುಂಬಾ ಖುಷಿಯಾಗಿದ್ದ. ನೀವಿದ್ರೆ ತುಂಬಾ ಖುಷಿಯಾಗಿರ್ತಾನೆ. ಎಂದು ಹೇಳುತ್ತಾ ರೂಮ್ ನಿಂದ ಹೊರ ಬಂದು ಹಾಲ್ ನಲ್ಲಿ ನಗುತ್ತಾ ಹರಟುತ್ತಿದ್ದ ವಿವೇಕ್ ನನ್ನು ತೋರಿಸುತ್ತಾಳೆ. ವಿವೇಕ್ ಅಲ್ಲಿಂದಲೇ ಇಬ್ಬರಿಗೂ ಹಾಯ್ ಹೇಳಿ ಒಂದ್ ನಿಮಿಷ ಬಂದೆ ಎಂದು ಸನ್ನೆ ಮಾಡಿ ತೋರಿಸಿ ಚಕಚಕನೇ ಮೆಟ್ಟಿಲೇರುತ್ತಾ ಬಂದು "ಏನೇ.. ಆಯ್ತಾ ನಿನ್ಹತ್ರ ಎಷ್ಟು ಡ್ರೆಸ್ ಗಳಿದೆ, ಎಷ್ಟು ಸೀರೆಗಳಿದಾವೆ, ಎಲ್ಲೆಲ್ ಶಾಪಿಂಗ್ ಮಾಡ್ತೀಯ ಅಂತ ಕುಯ್ದಿದ್ದು.." ಎನ್ನುತ್ತಲೇ.. "ಹೋಗೋಲೋ.. ನಿನ್ ಫ್ರೆಂಡ್ ಜೊತೆ ನೀನೇ ಮಾತಾಡ್ಕೋ" ಅಂದು ಹೊರಡುತ್ತಾಳೆ. "ಯಾಕ್ ಸುಮ್ನಿರಕ್ಕಾಗಲ್ಲ ನಿನ್ಗೆ" ಅಂದ ಅನಿಗೆ "ಓಹ್.. ಆಯ್ತು ಮೇಡಂ.. ಬನ್ನಿ" ಎಂದು ತನ್ನ ರೂಮ್ ಗೆ ಕರೆದೊಯ್ಯುತ್ತಾನೆ. ಚೇರ್ ತೋರಿಸಿ ಕೊತ್ಕೋ ಎಂದ ವಿವೇಕ್ ಕಬೋರ್ಡ್ ನಿಂದ ಒಂದು ರಟ್ಟಿನ ಬಾಕ್ಸ್ ತೆಗೆದು ಅನಿಯ ಕೈಗೆ ಕೊಡುತ್ತಾನೆ. ಏನಿದು ಎಂದ ಅನಿಗೆ "ಇದು ನಾನು ನಿನಗೋಸ್ಕರ ನಿನ್ನ ನೆನಪಲ್ಲೇ ಬರೆದ ಪತ್ರಗಳು from the day you left me alone" ಎಂದು ಕ್ಷಣ ಮೌನವಾಗಿದ್ದು.. ಟೋಟಲಿ 394 ಲೆಟರ್ಸ್ ಇವೆ. ಇವತ್ತಿಂದ್ ಬರ್ದಿಲ್ಲ. ಯಾಕಂದ್ರೆ ಇವತ್ತು ಸ್ವಲ್ಪ ಸ್ಪೆಶಲ್ ಆಗಿರುತ್ತೆ ನಾನ್ ಬರೆಯೋ ಲೆಟರ್" ಎಂದು ಕಬೋರ್ಡ್ ನಿಂದ ಇನ್ನೊಂದು ಪುಟ್ಟ ಬಾಕ್ಸ್ ತೆರೆದು ಅದರಲ್ಲಿದ್ದ ಕಾಲ್ಗೆಜ್ಜೆಯನ್ನು ತೆಗೆದು ಕೆಳಗೆ ಮಂಡಿಯೂರಿ ಕೂತು ಅವಳ ಕಾಲಿಗೆ ತೊಡಿಸುತ್ತಾನೆ. ಮೂಕವಿಸ್ಮಿತಳಾಗಿ ಅವನನ್ನೇ ನೋಡುತ್ತಿರುತ್ತಾಳೆ ಅನಿ. ನಂತರ ಅನಿಯ ಕೈಗೆ ತಾನು ಖರೀದಿಸಿದ್ದ ಕೆಂಪು ಹರಳಿನ ಹೃದಯದಾಕಾರದ ರಿಂಗ್ ನ್ನು ತೊಡಿಸಿ ಅವಳ ಕಡೆ ಮಂದಸ್ಮಿತವಾಗಿ ನೋಡುತ್ತಾನೆ. ನಂತರ ಅನಿಯ ಕೈ ಹಿಡಿದುಕೊಂಡು "ಕೊನೆವರೆಗೂ ಜೊತೆಗಿರ್ತೀಯಾ..??" ಎನ್ನುತ್ತಾನೆ. ಅನಿ ಏನೂ ಮಾತಾಡದೆ ತಲೆ ತಗ್ಗಿಸುತ್ತಾಳೆ. ತಿರುಗಿ ನೋಡು ಅನಿ ನೀನು ಕೊಟ್ಟ ನಿನ್ನ ಫೇವರಿಟ್ ಕೃಷ್ಣ ಎಂದು ಹೂಗಳಿಂದ ಅಲಂಕೃತಗೊಂಡಿದ್ದ ಕೃಷ್ಣನನ್ನು ತೋರಿಸುತ್ತಾನೆ. ನಿನ್ನ ನೆನಪಾದಾಗೆಲ್ಲ ಈ ಕೃಷ್ಣನಲ್ಲಿ ಅನಿ ಎಲ್ಲಿದ್ದಾಳೋ ಬೇಗ ಇಲ್ಲಿಗೆ ಕರೆಸಿಬಿಡಪ್ಪ ಅಂತ ಕೇಳ್ಕೊಳ್ತಿದ್ದೆ ಎಂದಾಗ ಇಬ್ಬರ ಕಣ್ಣಲ್ಲೂ ನೀರಿತ್ತು.
ಅ: ಸಾರಿ ವಿವೇಕ್..
ವಿ: ನೋ.. ನಾನು ಸಾರಿ ಕೇಳ್ಬೇಕು.
ಆ: ಅದು ಹಾಗಲ್ಲ.
ವಿ: ಇಲ್ಲ ಅನಿ. ಅದೆಲ್ಲಾ ಬಿಡು ಸಧ್ಯ ಈಗ್ಲಾದ್ರೂ ಬಂದ್ಯಲ್ಲ.. ಬಾ ಹೋಗೋಣ ಎಂದು ಇಬ್ಬರೂ ರೂಮ್ ನಿಂದ ಹೊರಬಂದು ಹಾಲ್ ಸೇರುತ್ತಾರೆ.
ಹರಿಶಿಣ ಕುಂಕುಮ ನೀಡಿ ತಾಂಬೂಲದೊಂದಿಗೆ ರೇಷ್ಮೆ ಸೀರೆ ಇಟ್ಟು ಅನಿ ಸೀರೆ ಬೇಡವೆಂದರೂ ಬಲವಂತಪಡಿಸಿ ಕೊಡುತ್ತಾರೆ. ನಂತರ ಎಲ್ಲರಿಗೂ ಬೈ ಹೇಳಿ ಇಬ್ಬರೂ ಮದುವೆ ಮಂಟಪದತ್ತ ಹೊರಡುತ್ತಾರೆ. ಬೈಕ್ ನಲ್ಲಿ ಹೋಗುತ್ತಿರಬೇಕಾದರೆ ವಿವೇಕ್ ನ ಮನೆಯಲ್ಲಿ ನಡೆದದ್ದನ್ನೇ ನೆನೆಯುತ್ತಾ ಚಿಂತಿತಳಾಗುತ್ತಾಳೆ ಅನಿ. ರಾಜ್ ಪ್ಯಾಲೆಸ್ ಗೆ ಹಿಂತಿರುಗುವಷ್ಟರಲ್ಲಿ ಸಮಯ 9.10 ಆಗಿರುತ್ತದೆ. 9.40 ರಿಂದ 10.40 ಕ್ಕೆ ಮುಹೂರ್ತ. ಬೈಕ್ ನಿಂದ ಇಳಿದೊಡನೆ ಸರಸರನೆ ತನ್ನ ರೂಮ್ ಕಡೆ ಓಡಿದವಳ ಹಿಂದೆಯೇ ಓಡುತ್ತಾನೆ ವಿವೇಕ್. ಅನಿ ನಿಂತ್ಕೊ ನಿಂತ್ಕೊ ಎಂದು ಅವಳ ಹಿಂದೆಯೇ ಬಂದು ಅವಳ ರೂಮ್ ಬಾಗಿಲ ಹತ್ತಿರ ತಡೆಯುತ್ತಾನೆ. ಏನು ಎಂಬಂತೆ ಒಂದು ಲುಕ್ ಕೊಟ್ಟವಳಿಗೆ ಲೆಟರ್ಸ್ ಮತ್ತು ಸೀರೆ ಇದ್ದ ಕವರ್ ನೀಡಿ "ಇದು ನಿನಗೆ ಅಂತ ಅಮ್ಮ ಕೊಟ್ಟಿರೋದು. ಪ್ಲೀಸ್ ಇವತ್ತು ಇದನ್ನೇ ಉಟ್ಕೋ ಎಂದಷ್ಟೇ ಹೇಳಿ ತನ್ನ ರೂಮ್ ಕಡೆ ಹೊರಡುತ್ತಾನೆ.

ರೂಮ್ ಗೆ ಬಂದ ಅನಿಯ ತಲೆಯಲ್ಲಿ ಏನೇನೋ ಯೋಚನೆಗಳು. ಇದಾಗಲೇ ಒಂದಲ್ಲ ಅಂತ ಎರಡು ಬಾರಿ ನೋವನುಭವಿಸಿದ್ದೇನೆ. ಮೂರಕ್ಕೆ ಮುಕ್ತಾಯವೆಂಬಂತೆ ಆ ಕೃಷ್ಣ ನೇ ನನ್ನ ಜೀವನದಲ್ಲಿ ವಿವೇಕ್ ಮತ್ತೆ ಬರುವಂತೆ ಮಾಡಿದನೇ.. ಈ ಒಂದು ವರ್ಷದಲ್ಲಿ ವಿವೇಕ್ ಯಾರನ್ನಾದರೂ ಮದುವೆಯಾಬಹುದಿತ್ತು. ಆದರೆ ಆಗಲಿಲ್ಲ. ನನಗಾಗಿಯೇ ಕಾದಿದ್ದ ಎನ್ನುವುದಕ್ಕೆ ಇವತ್ತು ಅವನ ಮನೆಯಲ್ಲಿ ನಡೆದದ್ದೇ ಸಾಕ್ಷಿ. ಕವರ್ ನಿಂದ ರಟ್ಟಿನ ಬಾಕ್ಸ್ ತೆರೆದು ಲೆಟರ್ ನಂ.1 ನೀನು ನನ್ನ ಬಿಟ್ಟುಹೋದ ದಿನ ಎಂಬ ತಲೆ ಬರಹವಿದ್ದ ಪಿಂಕ್ ಬಣ್ಣದ ಲೆಟರ್ ನ್ನು ಒಡೆದು ಓದಲು ಪ್ರಾರಂಬಿಸುತ್ತಾಳೆ.

ನೀನು ನನ್ನ ಬಿಟ್ಟು ಹೋದ ದಿನ

ಗಂಟಲಲ್ಲಿ ಏನೋ ತಿಳಿಯದ ದುಃಖ. ಇಂದು ಅರಿವಾಗುತ್ತಿದೆ ನಾನು ಮಾಡಿದ್ದು ತಪ್ಪೆಂದು. ಕ್ಷಮೆ ಕೇಳಲು ನೀನಿಲ್ಲ ಎದುರಲ್ಲಿ. ಆದರೆ ಎಂದಾದರೂ ಬಂದೇ ಬರುತ್ತೀಯ ಎಂಬ ಆಸೆ ಕಣ್ಣಲ್ಲಿ. ಮನದಲ್ಲೀಗ ನಿನ್ನದೇ ಚಿತ್ರ, ತಲೆಯಲ್ಲೀಗ ನಿನ್ನದೇ ಚಿಂತೆ, ಹೃದಯ ಸಾಮ್ರಾಜ್ಯದಲ್ಲೀಗ ನಿನ್ನದೇ ದರ್ಬಾರು. ಒಟ್ಟಲ್ಲಿ ಹೇಳುವುದಾದರೆ ನನ್ನೊಡತಿ ನೀನು. ಗಂಟಲಿನ ಪಸೆ ಆರುತಿದೆ, ಕಣ್ಣೀರೇ ಬತ್ತಿಹೋಗಿದೆ, ನೋವಲ್ಲಿ ಜೋರಾಗಿ ಅರಚಿಬಿಡೋಣವೆನಿಸುತ್ತಿದೆ, ಮಾಡಲೇನೂ ತೋಚುತ್ತಿಲ್ಲ ನೀನಿಲ್ಲದೆ. ಬಳಿಗೆ ಬಂದರೆ ನೀ ಸಾಕೆನಗೆ ಅದುವೇ ನನ್ನ ಬದುಕಿಗೆ ಕೊಡುಗೆ. ಒಪ್ಪುತ್ತೇನೆ ತಪ್ಪೆಲ್ಲಾ ನಂದೇ, ಒಪ್ಪುವೆಯಾ ನನ್ನನ್ನು ನಿನ್ನವನೆಂದು ಇಂದೇ..
               
                          
                        ಇಂತಿ ಎಂದೆಂದಿಗೂ ನಿನ್ನವ
                                               ವಿವೇಕ್..ಪತ್ರ ಓದುತ್ತಿದ್ದಂತೆ ಕಣ್ಣೀರು ಕೆನ್ನೆಯೊಂದಿಗೆ ಮಾತಾಡಿತ್ತು. ಕಣ್ಣೊರೆಸಿಕೊಂಡು ಎದ್ದವಳೇ ವಿವೇಕ್ ನ ಅಮ್ಮ ಕೊಟ್ಟ ಸೀರೆಯನ್ನೊಮ್ಮೆ ಮುಟ್ಟಿ........???????

ಸರಿಯಾಗಿ 10.10 ಕ್ಕೆ ಮದುವೆ ಮಂಟಪಕ್ಕೆ ಬಂದ ವಿವೇಕ್ ಅನಿಯನ್ನು ಎದುರು ನೋಡುತ್ತಾ ಅಲ್ಲೇ ಇದ್ದ ಚೇರ್ ಒಂದರ ಮೇಲೆ ಕೂರುತ್ತಾನೆ. ಪದೇ ಪದೇ ಗಡಿಯಾರ ನೋಡಿಕೊಂಡು ಚಡಪಡಿಸುತ್ತಾ ಅನಿ ಬರುತ್ತಾಳೇನೋ ಎಂದು ಅವಳ ರೂಮ್ ನ ಕಡೆಯೇ ಆಗಾಗ ನೋಡುತ್ತಿರುತ್ತಾನೆ.

ಸರಿಯಾಗಿ 10.25 ಕ್ಕೆ ಗೋಲ್ಡ್ ಬಣ್ಣದ ಮರೂನ್ ಬಾರ್ಡರ್ ನಲ್ಲಿ ಮೆಟ್ಟಿಲಿಳಿಯುತ್ತಾ ಬಂದ ಹುಡುಗಿಯೊಬ್ಬಳು ಮುಗುಳ್ನಗುತ್ತಾ ನಡೆದು ಬರುತ್ತಿದ್ದರೆ ಕ್ಷಣಕಾಲ ಸಮಯವೇ ಸ್ಥಬ್ಧವಾಯಿತೇನೋ ಎನ್ನುವಂತಿರುತ್ತದೆ ವಿವೇಕ್ ಗೆ. ಅವಳನ್ನೇ ನೋಡುತ್ತಾ ಹಾಗೇ ತನಗರಿವಿಲ್ಲದಂತೆ ನಗೆಯೊಂದು ಅವನ ತುಟಿಯ ಮೇಲೆ ಮೂಡಿರುತ್ತದೆ. ನಗತ್ತಾ ನಡೆದು ಬಂದವಳು ವಿವೇಕ್ ನ ಪಕ್ಕ ಬಂದು ಇಲ್ಲಿ ಕೂತ್ಕೋಬೋದಾ ಎಂದು ಅವನನ್ನೇ ನೋಡಿದಾಗ ಅವನ ನಗುವಷ್ಟೇ ಉತ್ತರವಾಗಿರುತ್ತದೆ. ಪಕ್ಕ ಕೂತ ಇಬ್ಭರೂ ನಗುನಗತ್ತಾ ಮಾತಾಡುತ್ತಿದ್ದರೆ ಅಲ್ಲಿ ಗಟ್ಟಿಮೇಳ ಗಟ್ಟಿಮೇಳ ಎಂದು ಪುರೋಹಿತರು ಕೂಗುತ್ತಿದ್ದಂತೇ ಎಲ್ಲರೂ ಎದ್ದು ನಿಂತು ಅಕ್ಷತೆ ಹಾಕುತ್ತಾರೆ. ಅಕ್ಕ-ಪಕ್ಕ ಕೂತ ಈ ಜೋಡಿಗಳ ತಲೆಯ ಮೇಲೆ ಬಿದ್ದ ಅಕ್ಷತೆ ಕಾಳುಗಳು ಅವರ ಪ್ರೀತಿಗೆ ಸಾಕ್ಷಿಯಾಗಿರುತ್ತದೆ.

ಕೊಳಲೂದುತ್ತಾ ಬಂದ ಕೃಷ್ಣ ತನ್ನ ಮೋಹನ ಮುರಳಿಯನ್ನು ಎಲ್ಲೆಡೆ ಹರಿಸಿ, ನಗುತ್ತಾ ಇಬ್ಬರನ್ನೂ ಹರಸಿ ಕಣ್ಮರೆಯಾಗುತ್ತಾನೆ.

ಇಷ್ಟಕ್ಕೂ ಅಕ್ಕ-ಪಕ್ಕ ಕೂತ ಆ ಜೋಡಿ ಬೇರಾರೂ ಅಲ್ಲ, ಮಿಸ್ಟರ್ & ಮಿಸ್ಸಸ್ ಗರಗಸ ಆಗಲು ಹೊರಟಿರುವ ವಿವೇಕ್ ಮತ್ತು ಅನಿಕಾ..

                 ::::::::::ಮುಕ್ತಾಯ::::::::::

(ನನ್ನ ಬರಹಗಳನ್ನು ಓದುತ್ತಾ ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು)

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.