ಟಿಕ್ ,ಟಿಕ್ .ಟಿಕ್ ... ಗಡಿಯಾರದ ಮಿಡಿತ ಕೇಳಿಸುತ್ತಿದೆ .ಏಳುಗಂಟೆಯ ಸಮಯ . ಯಾರೋ ಬಂದು ಬಾಗಿಲು ತಟ್ಟಿದ ಸದ್ದು . ಕಲ್ಯಾಣಿ ಸಡಗರದಿಂದ ಓಡಿಹೋಗಿ ಬಾಗಿಲು ತೆಗೆಯುತ್ತಾಳೆ . ತಣ್ಣನೆಯ ಗಾಳಿ ಮುಖಕ್ಕೆ ರಾಚುತ್ತದೆ . ಕಣ್ಣುಗಳು ಸುತ್ತಲೂ ಅವಲೋಕಿಸುತ್ತದೆ . ಕತ್ತಲು ಆವರಿಸಿಕೊಳ್ಳುತ್ತಿದೆ . ಮತ್ತೆ ಬೇಸರದಿಂದ ಬಾಗಿಲು ಮುಚ್ಚಿ ಒಳಗೆ ನಡೆಯುತ್ತಾಳೆ .

ಚಿತ್ರಕಲಾ ಶಾಲೆಯಲ್ಲಿ ಅವನನ್ನು ಮೊದಲು ಭೇಟಿಯಾಗಿದ್ದು . ಅದ್ಬುತ ಕಲಾವಿದ . ಕೆಲವೇ ರೇಖೆಗಳಲ್ಲಿ ಅದ್ಬುತ ಚಿತ್ರಗಳನ್ನು ರೂಪಿಸುತ್ತಿದ್ದ . ಒಂದು ವರ್ಷ ಅದೇ ಕಾಲೇಜಿನಲ್ಲಿ ಇದ್ದರೂ ಅವನದು ಹೆಚ್ಚು ಮಾತಿಲ್ಲ . ನೋಡಲು ಗಂಭೀರವಾಗಿ ಕಾಣುತ್ತಿದ್ದ . ಆದರೆ ಅವನು ನಕ್ಕರೆ ಹೃದಯವೇ ಬಿಚ್ಚಿ ನಗುವಂತೆ ಅನಿಸುತ್ತಿತ್ತು . ಸ್ವಲ್ಪ ಕೆದರಿದ ಕೂದಲು . ನೋಡಲು ತುಂಬಾ ಸುಂದರನೇನು ಅಲ್ಲ . ಸಂಕೋಚ ಹೆಚ್ಚು .

ಒಂದು ವರ್ಷದ "ಚಿತ್ರ ಕಲಾ " ಕೋರ್ಸ್ ಮುಗಿದಿತ್ತು . ವಿದ್ಯಾರ್ಥಿಗಳ ಚಿತ್ರಗಳನ್ನು ಪ್ರದರ್ಶಿಸಲು ಒಂದು ಸಮಾರಂಭ ಏರ್ಪಾಡಾಗಿತ್ತು . ಅದರಲ್ಲಿ ಅವನ "ವರ್ಣಶ್ರೀ " ಚಿತ್ರಕ್ಕೆ ಪ್ರಥಮ ಬಹುಮಾನ ಬಂದಿತ್ತು . ಅಂದು ಗೆಳತಿ ನಳಿನಿ ಪ್ರದರ್ಶನಕ್ಕೆ ಬಂದು ಆ ಚಿತ್ರ ನೋಡಿ " ಈ ಚಿತ್ರ ನೋಡಿದರೆ ನಿನ್ನ ಚಿತ್ರ ತರಾನೇ ಇದೆ . ಅದೇ ಕಣ್ಣುಗಳು . ಅದೇ ಲಾವಣ್ಯ , ನೋಡು ಆ ಬಳುಕಿದ ಸೊಂಟ ಎಷ್ಟು ಸೊಗಸಾಗಿದೆ ." ತುಂಟ ನಗೆಯಿಂದ ಹೇಳಿದಳು . ಕಲ್ಯಾಣಿ ದಿಟ್ಟಿಸಿ ನೋಡಿದಳು . ಹೌದು ,ತಾನು ಸಿಂಗರಿಸಿಕೊಂಡು ಅದೇ ಭಂಗಿಯಲ್ಲಿ ಕನ್ನಡಿಯಮುಂದೆ ನಿಂತಂತಿದೆ . ಅವನು ಮನಸಿನಲ್ಲಿ ಆವರಿಸಿಕೊಂಡ .

ಅಂದು ಅವನು ಮನೆಗೆ ಬಂದಿದ್ದ . ಅದೇ ಸಮಯ . ನಳಿನಿ ಹೊರಗೆ ಹೋಗಿದ್ದಳು . ಮಾತನಾಡುತ್ತಾ ಕುಳಿತಾಗ ಅವನು ಸ್ವಲ್ಪ ಭಾವ ಪರವಶನಾಗಿ ಕಲ್ಯಾಣಿ ಕೈಹಿಡಿದ . ಕಲ್ಯಾಣಿ ಅವನ ಮುಖ ನೋಡಿದಳು . ಕಣ್ಣಿನಲ್ಲಿದ್ದ ಸಾವಿರ ಬೇಡಿಕೆಗಳು . ಇನ್ನು ಸಾಧ್ಯವಿಲ್ಲ ,ಇಲ್ಲೇ ಕರಗಿ ಹೋಗುತ್ತೇನೆ ಎನ್ನಿಸಿ ಕೈ ಬಿಡಿಸಿಕೊಂಡು ಅಡುಗೆ ಮನೆಗೆ ಓಡಿದಳು .

ಕೈ ಬಿಡಿಸಿಕೊಂಡು ಹೋದವಳ ನೋಡುತ್ತಿದ್ದ . ಅದೇಕೋ ಅವಳು ತನ್ನ ಜೀವನದಿಂದ ದೂರ ಸರಿದಂತೆ ಅವನಿಗೆ ಅನ್ನಿಸಿತು.


ಕಲ್ಯಾಣಿ ಕಾಫಿ ಹಿಡಿದು ಬಂದಳು . ಅವನೇಕೋ ಸಪ್ಪಗಿದ್ದ . ಕಾಫಿ ಕುಡಿಯುತ್ತಾ ಅವಳನ್ನೇ ದಿಟ್ಟಿಸಿದ . ಅವನ ಕಣ್ಣಲ್ಲಿ ನೂರು ಪ್ರಶ್ನೆಗಳಿದ್ದವು . ತಕ್ಷಣ ತಲೆ ತಗ್ಗಿಸಿಕೊಂಡು ಹೊರ ಹೊರಟ . ಕಲ್ಯಾಣಿ ಬಾಗಿಲಿಗೆ ಬಂದು ಕೈಬೀಸಿದರೂ ಅವನು ಅದನ್ನು ಗಮನಿಸುವ ಸ್ಥಿತಿಯಲ್ಲಿ ಇರಲಿಲ್ಲ .

"ರಾಜೀವ ಇವತ್ತು ಮನೆಗೆ ಬಂದಿದ್ದ " ಕಲ್ಯಾಣಿ ನಳಿನಿಗೆ ಹೇಳಿದಳು . ನಳಿನಿ " ಏನಂತೆ ರಾಜಕುಮಾರ , ಏನಾದರೂ ಹೇಳಿದನೇ ? , ಬರಿಯ ಕಣ್ಣಲೇ ಮಾತಾಡುತ್ತಾನೆ ಅಲ್ವ . ನೀನು ಅವನನ್ನು ಹೆದರಿಸಬೇಡ ಪಾಪ "ನಕ್ಕಳು . "ಕಣ್ಣು ಮುಚ್ಚಾಲೆ ಎಷ್ಟು ದಿನ . ಹೋಗಲಿ ನೀನೇ ಅವನ ಕೊರಳಿಗೆ ಹಾರ ಹಾಕಿಬಿಡು " ಮತ್ತೆ ಹೇಳುತ್ತಾ ಜೋರಾಗಿ ನಕ್ಕಳು

ಶನಿವಾರ ಬಂದರೆ ಅಮ್ಮನ ಫೋನು . "ಕಲ್ಯಾಣಿ ನಾಳೆ ಬರ್ತಾ ಇದೆಯಲ್ಲ .ಬೆಳಗ್ಗೆ ಸತೀಶ್ ಬಂದ . ಒಂದೇ ಸಮನೆ ಹಠ ನಿನ್ನ ನೋಡಬೇಕು .ಮೂರು ವರ್ಷ ಆಗಿತ್ತಲ್ಲ ಅವನು ಬಾರತಕ್ಕೆ ಬಂದು .ಹೊರಡುವ ಮುನ್ನ ಫೋನ್ಮಾಡು .ಸತೀಶ ಬಸ್ ಸ್ಟಾಂಡ್ ಗೆ ಬರ್ತಾನೆ " . ಕಲ್ಯಾಣಿ ಸರಿ ಎಂದಳು .ಕಲ್ಯಾಣಿ “ಬೆಳಗ್ಗೆ ಮೊದಲ ಬಸ್ ಗೆ ಹೋಗಬೇಕು“ ನಳಿನಿಗೆ ಹೇಳಿದಳು .

ಬಸ್ ಸ್ಟಾಂಡ್ ನಲ್ಲಿ ಸತೀಶ ಕಾಯುತ್ತಿದ್ದ .ಬಸ್ ಬಂದೊಡನೆ ಹುಡುಗನಂತೆ ಬಸ್ ಹತ್ತಿದ . ಕಲ್ಯಾಣಿಯನ್ನು ನೋಡಿ ಕಣ್ಣರಳಿಸಿ ನಕ್ಕ . ಅವಳ ಸಣ್ಣ ಬ್ಯಾಗ್ ಹಿಡಿದು ಬಂದ .ತಲೆಯ ತುಂಬಾ ಕಪ್ಪನೆಯ ಕೂದಲು .ಶಿಸ್ತಾಗಿ ಬಾಚಿಕೊಂಡಿದ್ದ .ಸಾದಾರಣ ಟಿ ಶರ್ಟ್ ಧರಿಸಿದ್ದ .ಕಲ್ಯಾಣಿ ಕಣ್ಣೆತ್ತಿ ನೋಡಿದಳು . "ತುಂಬಾ ಚನ್ನಾಗಿದ್ದಾನೆ .ಮೂರು ವರ್ಷದಲ್ಲಿ ಅದೆಷ್ಟು ಬದಲಾವಣೆ " . ಸತೀಶ್" ಕನಸು ಕಾಣುತ್ತಾ ಇಲ್ಲೇ ನಿಲ್ಲಬೇಡ ನಡಿ ,ನಡಿ " ಅವಸರ ಮಾಡಿದ . ಇವನು ಅಮ್ಮನಂತೆಯೇ .ಮುಖಲಕ್ಷಣ ,ಮಾತು ,ಮಾತಿಗೂ ಜೋರಾದನಗು . ಎಷ್ಟಾದರೂ ಅವಳ ತಮ್ಮನಲ್ಲವೇ .

ಮನೆ ಮುಟ್ಟಿದೊಡನೆ "ಅಕ್ಕ ನಿನ್ನ ಮಗಳನ್ನು ಜೋಪಾನವಾಗಿ ಕರೆದುಕೊಂಡು ಬಂದಿದ್ದೀನಿ ,ಕಾಫಿಕೊಡು " ಜೋರಾಗಿ ನಕ್ಕ . ಅಮ್ಮ "ಏನು ಡಾಕ್ಟರ್ ಓದಿದ್ದೀಯೋ .ಇನ್ನೂ ಹುಡುಗು ಬುದ್ದಿ .ಅಮೇರಿಕಾದಲ್ಲೂ ಹೀಗೆ ರೋಗಿಗಳ ಜೊತೆ ಇರ್ತೀಯ ? . ನಿನಗೆ ಮದುವೆಯಾದರೆ ಬುದ್ದಿ ಬರತ್ತೋ ಏನೋ ." ಅಮ್ಮನು ಅವನಂತೆ ಗಟ್ಟಿಯಾಗಿ ನಕ್ಕಳು. ನಗಲು ಏನಿದೆ ಇದರಲ್ಲಿ .ಕಲ್ಯಾಣಿ ಯೋಚಿಸಿದಳು .

ಸತೀಶ ತಕ್ಷಣ ಹೇಳಿದ" ಅಕ್ಕ , ಈ ಚಂದನದ ಗೊಂಬೆಯನ್ನು ನನಗೆ ಕೊಟ್ಟುಬಿಡು . ಅಮೆರಿಕಾಗೆ ಹಾರಿಸಿಕೊಂಡು ಹೋಗ್ತೀನಿ" ಎಂದು ಕಲ್ಯಾಣಿಯ ಕಡೆ ತಿರುಗಿ ನೋಡಿದ . ಕಲ್ಯಾಣಿಗೆ ಹೊಗಳಿಕೆ ಕೇಳಿ ಮುಜುಗರವಾಯಿತು .ಅಮ್ಮ ಕಲ್ಯಾಣಿಯತ್ತ ತಿರುಗಿ "ಸರಿ ಸರಿ ಇವನು ಮಾತಿನ ಮಲ್ಲ ,ಅಂಗೈಯಲ್ಲಿ ಆಕಾಶ ತೋರ್ಸ್ತಾನೆ , ಕೈಕಾಲು ತೊಳೆದು ಊಟಕ್ಕೆ ಬಾ " ಎಂದು ಅಡುಗೆ ಮನೆಯತ್ತ ಹೆಜ್ಜೆ ಹಾಕಿದರು . ಅವರ ಹೆಜ್ಜೆಯಲ್ಲಿ ಸಂಭ್ರಮವಿತ್ತು .

ಎರಡು ಗಂಟೆ ಕಳೆಯುವಷ್ಟರಲ್ಲಿ ಕಲ್ಯಾಣಿಗೆ ಎಲ್ಲವೂ ಅರ್ಥವಾಗತೊಡಗಿತು . ಸಂಜೆ ಅಮ್ಮ ಸತೀಶ್ ಇ ಬ್ಬರೂ ಹಾಲಿನಲ್ಲಿ ಮಾತಾಡುತ್ತಿದ್ದರು .ಒಂದು ಶುಭ ವಿಚಾರ ಮಾತನಾಡಲು ಪೀಠಿಕೆ ಎಂದು ಕಲ್ಯಾಣಿಗೆ ಅನಿಸಿತು .

ಸತೀಶ್ ಕಲ್ಯಾಣಿ ಯನ್ನು ಕಂಡೊಡನೆ " ಕಲ್ಯಾಣಿ , ಅಕ್ಕನಿಗೆ ನಿನ್ನ ನನ್ನ ಮದುವೆ ಮಾಡಿಸಬೇಕೆಂದು ಆಸೆಯಿದೆ , ನನಗೂ ಅಕ್ಕನ ಬಿಟ್ಟರೆ ಯಾರು ಇಲ್ಲ . ಭಾವ ಹೋದಮೇಲೆ ನೀನು ಅಕ್ಕ ಇಬ್ಬರೇ . ಈಗ ನೀನೂ ಒಂದು ವರ್ಷ ಬೆಂಗಳೂರು ಸೇರಿದ್ದೀಯಾ . ಅಕ್ಕ ಇಲ್ಲಿ ಒಬ್ಬಳೇ .ಮದುವೆಯಾದರೆ ,ಅವಳನ್ನೂ ಕರೆದುಕೊಂಡು ಹೋಗಬಹುದು , ನಿನ್ನ ಅನಿಸಿಕೆ ಏನು ?" ಕೇಳಿದ . ಇದೇನು ,ಇಷ್ಟು ನೇರವಾಗಿ ಸ್ವಲ್ಪವೂ ಅಳುಕಿಲ್ಲದೆ ಮಾತನಾಡುತ್ತಾನೆ . "ನನ್ನ ಬೇಡ ಅಂದರೆ ಬಿಡೋನು ನಾನಲ್ಲ ,ಎತ್ತಿ ಹಾಕಿಕೊಂಡು ಹೋಗ್ತೀನಿ "ಮತ್ತೆ ನಕ್ಕ . ಅದೇನು ಭರವಸೆ ಅವನಿಗೆ . ಅಮೇರಿಕಾ ,ಡಾಕ್ಟರ್ ಎಂದ ತಕ್ಷಣ ತಾನು ಒಪ್ಪಿಕೊಳ್ಳುತ್ತೇನೆ ಎಂಬ ಜಂಬವೇ ? . ಅವನ ಮುಖ ನೋಡಿದಳು .ಅವನ ಮುಗ್ದ ಮುಖ ನೋಡಿ ತನ್ನ ಆಲೋಚನೆಗಳಿಗೆ ಅರ್ಥವಿಲ್ಲ ಅನಿಸಿತು .ಸತೀಶ್ "ಒಂದು ವಾರ ಮುಂಬೈನಲ್ಲಿ ಸೆಮಿನಾರ್ ಇದೆ . ನಂತರ ಒಂದು ವಾರದಲ್ಲಿ ಹೊರಡಬೇಕು . ನೀನು ಒಪ್ಪಿದರೆ ಒಂದು ತಿಂಗಳು ಇಲ್ಲೇ” ಮತ್ತೆ ನಕ್ಕ.

ಕಲ್ಯಾಣಿಗೆ ಏನೂ ಹೇಳಲು ತೋಚಲಿಲ್ಲ . ಸುಮ್ಮನೆ ನಗುಮುಖ ಮಾಡಿದಳು .

“ನಾಳೆಗೆ ಕ್ಯಾಬ್ ಬುಕ್ ಮಾಡಿದ್ದೇನೆ . ಬೆಂಗಳೂರಿನಲ್ಲಿ ಬೇಕಾದರೆ ನಿನ್ನ ಡ್ರಾಪ್ ಮಾಡ್ತೀನಿ . ನಿನ್ನ ಚಿತ್ರಕಲಾ ಕೋರ್ಸ್ ಮುಗಿತಲ್ಲ . ಪಿ ಜಿ ಯಿಂದ ನಿನ್ನ ಸಾಮಾನು ಶಿಫ್ಟ್ ಮಾಡಬೇಕು ಅಲ್ವಾ ? " ಸತೀಶ ಹೇಳಿದ.

ಕಾರಿನಲ್ಲಿ ಸಾಗುವಷ್ಟು ಸಮಯ ಸತೀಶ ಮಾತಾಡುತ್ತಿದ್ದ . ಬೆಂಗಳೂರು ನಲ್ಲಿ ಪಿ ಜಿ ತಲುಪಿದಾಗ ಕಲ್ಯಾಣಿಯೊಡನೆ ಅವನೂ ಕೆಳಗಿಳಿದ . ನಂತರ ಅವರ ಕೈ ಹಿಡಿದು ಗಂಭೀರವಾಗಿ " ಅಕ್ಕನ ಮಗಳು ಅಂತ ಸಲಿಗೆಯಿಂದ ಮಾತಾಡಿದ್ದು . ನಿನ್ನ ಅನಿಸಿಕೆ ಅಭಿಪ್ರಾಯಕ್ಕೆ ನಾನು ಹೆಚ್ಚು ಬೆಲೆ ಕೊಡೋದು "ಹೇಳಿದ . ತಕ್ಷಣ " ಅಕ್ಕನ ಬಗ್ಗೆ ಅಭಿಮಾನವಿದೆ . ಅದರ ಜೊತೆ ನನ್ನದೊಂದು ಸ್ವಾರ್ಥವೂ ಇದೆ , ನಿನ್ನಂತಹ ರೂಪವಂತೆ ನನ್ನವಳಾಗುವ ಕನಸೂ ಇದೆ " ಜೋರಾಗಿ ನಕ್ಕು ಕಾರಲ್ಲಿ ಕುಳಿತ .

ಕಲ್ಯಾಣಿ ಮನೆಯೊಳಕೆ ಬಂದಳು . ಅಲ್ಲೇ ಟೇಬಲ್ ಮೇಲೆ ಒಂದು ಲಗ್ನ ಪತ್ರಿಕೆ . ನಳಿನಿ ಹೇಳಿದಳು " ರಾಜೀವ ಬಂದಿದ್ದ , ಲಗ್ನಪತ್ರಿಕೆ ಕೊಟ್ಟು ಹೋಗಿದ್ದಾನೆ " ಕಲ್ಯಾಣಿ ಗಮನಿಸಿದಂತೆ ಕಾಣಲಿಲ್ಲ .

ಟಿಕ್ ,ಟಿಕ್ .ಟಿಕ್ ... ಗಡಿಯಾರದ ಮಿಡಿತ ಕೇಳಿಸುತ್ತಿದೆ .ಏಳುಗಂಟೆಯ ಸಮಯ . ಯಾರೋ ಬಂದು ಬಾಗಿಲು ತಟ್ಟಿದ ಸದ್ದು . ಕಲ್ಯಾಣಿ ಸಡಗರದಿಂದ ಓಡಿಹೋಗಿ ಬಾಗಿಲು ತೆಗೆಯುತ್ತಾಳೆ . ನೀರವ ಕತ್ತಲು . ಮಳೆ ನಿಂತು ಕೆಸರಾದ ಅಂಗಳದಲ್ಲಿ ಯಾರದೋ ಹೆಜ್ಜೆಗಳ ಗುರುತು ಕಾಣುತ್ತದೆ . ಮೆಲ್ಲನೆ ಹಿಂಬಾಲಿಸಿಕೊಂಡು ಗೇಟ್ ತೆರೆಯುತ್ತಾಳೆ . ಸುತ್ತಲೂ ನಿಶಬ್ದ . ಮತ್ತೆ ಮನೆಯೊಳಗೆ ಬಂದು ಬಾಗಿಲು ಮುಚ್ಚುತ್ತಾಳೆ .

ನಳಿನಿ ಕೇಳುತ್ತಾಳೆ " ಈವತ್ತು ನೀನು ಸಾಮಾನುಗಳನ್ನು ಶಿಫ್ಟ್ ಮಾಡ್ತೀಯಾ ?" ಮಾತಿಗೆ ಕಲ್ಯಾಣಿ "ಇಲ್ಲ ನಾಳೆ" ಎನ್ನುತ್ತಾಳೆ.

ಆ ಸಂಜೆ ಕಲ್ಯಾಣಿ ಬಾಗಿಲಿಗೊರಗಿಕೊಂಡು ಆ ಗಡಿಯಾರವನ್ನೇ ನೋಡುತ್ತಿದ್ದಳು .ಎರಡೂ ಬಾಗಿಲುಗಳು ತೆರೆದಿತ್ತು . ಮುಂಭಾಗದಲ್ಲಿ ದೀಪದ ಬೆಳಕು . ಏಳುಗಂಟೆಯ ಸಮಯ .ಟಿಕ್ ,ಟಿಕ್ .ಟಿಕ್ ... ಗಡಿಯಾರದ ಮಿಡಿತ ಕೇಳಿಸುತ್ತಿದೆ. ಕಲ್ಯಾಣಿಯ ಹೃದಯದ ಮಿಡಿತವು ಅದರೊಂಗಿದೆ ಸೇರಿತ್ತು .ನಳಿನಿ ಬಂದು ಗಂಟೆ ಒಂಬತ್ತು ಆಯಿತು ಹೇಳುತ್ತಾಳೆ . ಮತ್ತೆ ಕೇಳುತ್ತಾಳೆ " ನಿನ್ನ ಸಾಮಾನುಗಳನ್ನು ನಾಳೆ ಬೆಳಗ್ಗೆ ಶಿಫ್ಟ್ ಮಾಡುತ್ತೀಯಾ ? " . ಕಲ್ಯಾಣಿ "ಇಲ್ಲಾ ಇನ್ನು ಎರಡು ದಿನ "ಬಲವಂತದಿಂದ ನಗುತ್ತಾಳೆ .

ನಳಿನಿ ಕರುಣೆಯಿಂದ ಕಲ್ಯಾಣಿಯನ್ನೇ ನೋಡುತ್ತಾ ಮನಸಿನಲ್ಲೇ ಹೇಳಿಕೊಳ್ಳುತ್ತಾಳೆ " ಈ ಪ್ರೀತಿಯ ನಿರೀಕ್ಷಣೆ ನಿರಂತರ " .

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.