ಟಾಮಂಜರಿ, ಕಾರ್ಟೂನುಗಳನ್ನು ನೋಡದೆ ಇರುವ ಮಕ್ಕಳು ಬಹಳ ಕಡಿಮೆ. ಅದು ದೊಡ್ಡವರಿಗೂ ಇಷ್ಟವಾಗುವಂತಹ ಕಾರ್ಟೂನ್‌ಗಳು. ಮಕ್ಕಳು ಶಾಲೆ ರಜೆ ಇದ್ದರೆ ಸಾಕು ಬೆಳಿಗ್ಗೆಯಿಂದ ರಾತ್ರಿ ವರೆಗೆ ಟಿವಿ ನೋಡ್ತಾ ಇರುತ್ತಾರೆ. ಕಾರ್ಟೂನ್ ನೋಡೋದ್ರಲ್ಲಿ ದಿನ ಕಳೆಯುವುದರ ಜೊತೆಗೆ ಆಟ, ಓದುವನ್ನು ಮರೆತು ಬಿಡುತ್ತಾರೆ ಅಷ್ಟರ ಮಟ್ಟಿಗೆ ಅದು ಮಕ್ಕಳ ಮೇಲೆ ಪ್ರಭಾವ ಬೀರಿದೆ.

ಇಂದು ಮಕ್ಕಳನ್ನು ಹಿಂಸಾತ್ಮಕ ದೃಶ್ಯಗಳಿಂದ, ಸುದ್ದಿಗಳಿಂದ ರಕ್ಷಿಸುವುದು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವು ಸಮಾಜವನ್ನು ವ್ಯಾಪಿಸಿಬಿಟ್ಟಿವೆ. ಅದರಲ್ಲಿಯೂ ಚಲನಚಿತ್ರಗಳಲ್ಲಿ ಅಂತಹ ದೃಶ್ಯಗಳನ್ನು ವೈಭವೀಕರಿಸಿರುವ ರೀತಿಯಂತೂ ಮಕ್ಕಳಿಗೆ ಅಂತಹ ಹೀರೋ ಆದರ್ಶಪ್ರಾಯರಾಗಿಬಿಡುತ್ತಾರೆ! ಅಂತಹ ಪಾತ್ರಗಳನ್ನು ಮಾಡುವವರು ಮಚ್ಚು, ಲಾಂಗ್ ಹಿಡಿಯುವುದರಲ್ಲಿ ಒಂದು ಥರದ ಥ್ರಿಲ್ ಸಿಗುತ್ತೆ ಎಂದು ಸಮರ್ಥಿಸಿಕೊಂಡಾಗ, ಅಂತಹವರನ್ನು ಮಾದರಿಯಾಗಿ ಆರಿಸಿಕೊಳ್ಳಬೇಕು ಎಂದು ಯುವ ಮನಸ್ಸುಗಳಿಗೆ ಅನಿಸುವುದು ಸಹಜ.

ಮಕ್ಕಳಿಗೆ ಕೇವಲ ಟಿವಿ ನೋಡುವುದರಿಂದ ಮಾತ್ರವಲ್ಲ, ಮನೆಯಲ್ಲಿಯ ದೈಹಿಕ ಹಲ್ಲೆ, ಮಾತುಗಳ ಸಂಘರ್ಷ, ಕುಟುಂಬದ ಸದಸ್ಯರ ನಡುವಣ ಹೊಡೆದಾಟಗಳು, ಅಂತಹ ವಿಚಾರಗಳ ಚರ್ಚೆ, ಚರ್ಚೆಯ ಸಮಯದಲ್ಲಿ ಕಾಲು ಮುರಿಯುವ, ಬಡಿದುಹಾಕುವ, ಸಾಯಿಸುವ ಮಾತುಗಳು ಇವೆಲ್ಲವೂ ಅವಕ್ಕೆ ಸಾಕ್ಷಿಯಾಗುವ ಮಕ್ಕಳ ಮನಸ್ಸಿನಲ್ಲಿ ಹಿಂಸೆಯ ಚಿತ್ರಗಳನ್ನೇ ಮೂಡಿಸುತ್ತಿರುತ್ತವೆ. ಮಕ್ಕಳೇ ಇಂತಹ ಹಿಂಸೆಗೆ ಬಲಿಯಾದರಂತೂ, ಅವರ ಎಳೆಯ ಮನಸ್ಸಿನ ಮೇಲೆ ಅವುಗಳ ಪರಿಣಾಮ ತೀವ್ರವಾಗಿ ಬಿಡುವುದು.

ಶಾಲೆಯಿಂದ ಹೊರಗುಳಿದಿರುವವರ ಸಂಖ್ಯೆ ಸರಿಸುಮಾರು ಹತ್ತು ಕೋಟಿ. ಈ ಹತ್ತು ಕೋಟಿ ಮಕ್ಕಳು ಶಾಲೆಯಿಂದ ಹೊರಗೆ ಏನು ಮಾಡುತ್ತಿದ್ದಾರೆ? 5ರಿಂದ 14ರೊಳಗಿನ ಸುಮಾರು ಒಂದೂವರೆ ಕೋಟಿ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಪ್ರತಿ 8 ನಿಮಿಷಕ್ಕೊಂದು ಮಗುವಿನ ಅಪಹರಣವಾಗುತ್ತಿದೆ. ಈ ಎಲ್ಲ ಮಕ್ಕಳೂ ದೈಹಿಕ ಹಲ್ಲೆ, ಆಹಾರದ ಕೊರತೆ, ಮಲಗಲು ಸುಭದ್ರ ಜಾಗ ಇಂತಹ ಸಮಸ್ಯೆಗಳೇ ಅಲ್ಲದೆ, ಅಪಹರಣ, ಅತ್ಯಾಚಾರಗಳಿಗೂ ಗುರಿಯಾಗುತ್ತಿದ್ದಾರೆ. ಕೆಲಸವನ್ನು ಹುಡುಕಿಕೊಂಡು ನಗರಗಳಿಗೆ ವಲಸೆ ಬರುವವರ ಸಂಖ್ಯೆಯೂ ಹೆಚ್ಚಿದ್ದು ನಗರದ ವಿವಿಧ ಸಮಸ್ಯೆಗಳಿಗೆ ಮಕ್ಕಳು ಬಲಿಪಶುಗಳಾಗುತ್ತಿದ್ದಾರೆ. ಅವರ ಪಾಲಕರ ಪೈಕಿ ಅನೇಕರು ಸಂಗಾತಿಗಳನ್ನು ಬದಲಿಸುತ್ತಿರುತ್ತಾರೆ. ಹೀಗಾಗಿ ಸ್ಥಿರ ಪೋಷಕತ್ವವೂ ದೊರೆಯುತ್ತಿಲ್ಲ. ಇಂತಹ ಬಾಲ್ಯ ಪಡೆದ ಮಕ್ಕಳು ಅನಿವಾರ್ಯವಾಗಿ ಹಿಂಸಾತ್ಮಕ ಬಾಲ್ಯಕ್ಕೆ ಗುರಿಯಾಗುವವರಾದರೆ, ಅನುಕೂಲಸ್ಥರ ಮನೆಯ ಮಕ್ಕಳು ಮೇಲುಸ್ತುವಾರಿಯಿಲ್ಲದೆ ಬಳಸಲ್ಪಡುವ ವಿವಿಧ ಮಾಧ್ಯಮಗಳ ಮೂಲಕ ಹಿಂಸೆಗೆ ಸಾಕ್ಷಿಗಳಾಗುತ್ತಿದ್ದಾರೆ.

ವಿವಿಧ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರದರ್ಶನವಾಗುವ ಹಿಂಸಾತ್ಮಕ ಸುದ್ದಿ/ದೃಶ್ಯಗಳು ಭಯವನ್ನು ಹೆಚ್ಚು ಮಕ್ಕಳಿಗೆ ತಲುಪಿಸುತ್ತಿವೆ. ಇದರ ದುಷ್ಪರಿಣಾಮವನ್ನು ನಾವು ತಡೆಯಲು ಕ್ರಮ ತೆಗೆದುಕೊಳ್ಳದಿದ್ದರೆ, ಅಹಿಂಸಾ ಪರಮೋ ಧರ್ಮಃ ಎಂಬ ನುಡಿಗಟ್ಟಿನ ನಮ್ಮ ನಾಡು ಹಿಂಸಾ ಪರಮೋ ಧರ್ಮಃ ಎಂಬ ತತ್ವ ಅಳವಡಿಸಿಕೊಂಡು ಬದುಕನ್ನು ದುಸ್ತರವಾಗಿಸಿ ಬಿಡುವುದು.

ಮಕ್ಕಳ ಮೇಲಿನ ಪರಿಣಾಮ ಬೀರುವ ಅಂಶಗಳು:

* ಕೌಟುಂಬಿಕ ದೌರ್ಜನ್ಯ: ಇತರರನ್ನು ಬೆದರಿಸುವುದು, ಸತ್ಯ ಮರೆಮಾಚಲು ನಟನಾಪೂರ್ವಕ ನಡವಳಿಕೆ.

*ಶಾಲಾ ಹಿಂಸೆ: ಖಿನ್ನತೆ, ದೀರ್ಘಕಾಲ ಉಳಿಯಬಹುದಾದ ಖಿನ್ನತೆ, ಭಯಗಳು. ಇವೆರಡೂ ಕಲಿಕೆಯ ಮೇಲೂ ದುಷ್ಪರಿಣಾಮ ಉಂಟುಮಾಡಬಹುದು.

ದೃಶ್ಯ ಮಾಧ್ಯಮಗಳಿಂದ ಗಮನಿಸಲ್ಪಟ್ಟ ಹಿಂಸಾ ಸುದ್ದಿ/ಕಥೆಗಳಿಂದಾಗಿ ಮನೆಯಿಂದ ಹೊರ ಹೋಗಲು, ಒಂಟಿಯಾಗಿರಲು ಹೆದರಿಕೊಳ್ಳಬಹುದು. ಪದೇಪದೆ ನೆನಪು ಮರುಕಳಿಸಿ ಆತ್ಮಹತ್ಯಾ ಯೋಚನೆಗಳು ಕಾಡಬಹುದು.

*ಇವೆಲ್ಲವಕ್ಕಿಂತ ಭಯಂಕರ ಪರಿಣಾಮ ಎಂದರೆ ಹಿಂಸೆ ತಪ್ಪೇನೂ ಅಲ್ಲ ಎನ್ನುವ ಮನೋಭಾವ ಮೂಡಿಸಿ ಅವರನ್ನೂ ಹಿಂಸೆಗೆ ಪ್ರಚೋದಿಸುವುದು. ಇದು ಮಹಾ ಅಪರಾಧ.

ಮಕ್ಕಳ ಮನಸ್ಸಿನ ಮೇಲೆ ಹಿಂಸಾತ್ಮಕ ದೃಶ್ಯಗಳಿಂದ ದೂರವಿಡಲು ಪೋಷಕರು ನಿಗಾವಹಿಸಬೇಕಾದ ಅಂಶಗಳು:

*ಮಕ್ಕಳ ಮನಸ್ಸಿಗೆ ನೋವಾಗದ ರೀತಿಯಲ್ಲಿ ಅಥವಾ ಹಿಂಸಾತ್ಮಕ ದೃಶ್ಯಗಳಿಂದ ದೂರವಿಡುವುದು ಪ್ರತಿಯೊಬ್ಬ ತಂದೆ ತಾಯಿಯ ಕರ್ತವ್ಯ. ಮಕ್ಕಳನ್ನು ತಮ್ಮ ಸಮಯವನ್ನು ಆಟ, ಪಾಠದ ಕಡೆ ಹೆಚ್ಚು ಗಮನಹರಿಸುವಂತೆ ನೋಡಿಕೊಳ್ಳಿ.

*ಮಕ್ಕಳಿಗೆ ಟಿವಿ, ಮೊಬೈಲ್ ದೂರವಿರಿಸಲು ಹೆತ್ತವರು ಪ್ರಯತ್ನಿಸಿ. ಯಾಕೆಂದರೆ ಇತ್ತೀಚಿನ 1 ವರ್ಷದ ಮಕ್ಕಳಿಗೂ ಮೊಬೈಲ್ ಆಟದ ವಸ್ತುವಾಗಿದೆ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಆದಕಾರಣ ಇಂತಹ ವಸ್ತುಗಳಿಂದ ದೂರವಿರಲು ಸಹಕರಿಸಿ.

*ಕೌಟುಂಬಿಕ ದೌರ್ಜನ್ಯದಿಂದ ಮಕ್ಕಳ ಮುಗ್ದ ಮನಸ್ಸಿನ ಮೇಲೆ ಅತೀ ಹೆಚ್ಚಿನ ದುಷ್ಪಾರಿಣಾಮ ಬೀರುತ್ತದೆ. ಆದರಿಂದ ಮಕ್ಕಳ ಮುಂದೆ ಗಲಾಟೆ, ಹಿಂಸಾ ಸುದ್ದಿ, ಭಯಾನಕ ಕಥೆಗಳನ್ನು ಹೇಳುವುದನ್ನು ದೂರವಿರಿಸಿದ್ದರೆ ಮಕ್ಕಳಿಗೆ ಒಳ್ಳೆಯದು ಮಕ್ಕಳ ಹೆತ್ತವರಿಗೂ ಇದರಿಂದ ಪ್ರಯೋಜನವಾಗಬಹುದು.

ಮಕ್ಕಳಿಗೆ ಹಿಂಸೆಯಿಂದ ಮುಕ್ತವಾಗಿರುವ ಬಾಲ್ಯ ಕೊಡುವುದು ನಮ್ಮೆಲ್ಲರ ಸಾಮಾಜಿಕ, ನೈತಿಕ ಹೊಣೆ. ಇದರಲ್ಲಿ ನಾವು ವಿಫಲರಾದರೆ, ಸಮಾಜದಲ್ಲಿ ಬದುಕು ತೀರಾ ದುಸ್ತರವಾಗಿ ಬಿಡುವುದಂತೂ ಖಂಡಿತ.

ಕಾವ್ಯ ಕೊರಂಬಡ್ಕ

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.