ಪ್ರಮಥಿನಿ

ಅಂದು ಬಾನುವಾರ ಸಾಯಂಕಾಲ ಸ್ನೇಹಿತ ಸುನಿಲನೊಡನೆ ಅವೆನ್ಯೂ ರಸ್ತೆಯ ಇನ್ನೊಂದು ತುದಿಯಲ್ಲಿ ಓಡಾಡುತ್ತಿದ್ದೆ. ನಮಗೆ ಏನು ಬೇಕೂಂತ ಅಲ್ಲ ಸುಮ್ಮನೆ ಕುತೂಹಲ ಏನಾದರು ಕಣ್ಣಿಗೆ ಬಿದ್ದೀತ ಫುಟ್ಪಾತ್ ವ್ಯಾಪಾರಿಗಳ ಹತ್ತಿರ ಅಂತ.
ಸುನಿಲ ಯಾವುದೋ ಚೀನ ಮೇಡ್ ಹೇರ್ ಡ್ರೈಯರ್ ಅಂತ ವ್ಯಾಪಾರ ನಡೆಸಿದ್ದ, ನಾನು ಸುಖಾಸುಮ್ಮನೆ ಸುತ್ತಲು ನೋಡುತ್ತಿದ್ದೆ.ಆ ವ್ಯಾಪಾರಿಯ ಹಿಂದೆ ಗೋಡೆಗೆ ತಗಲಿದಂತೆ ನಿಲ್ಲಿಸಿದ್ದ ಮರದ ಅಲ್ಮೇರ ನನ್ನನ್ನು ಸೆಳೆಯಿತು.
"ಏನಪ್ಪ ಅದು ಮಾರಟಕ್ಕೇನ" ಅಂದೆ.
ಆ ಗಡ್ಡದ ಸಾಬಿಯ ಕಣ್ಣಿನಲ್ಲಿ ಎಂತದೊ ಬೆಳಕು ಕಂಡಿತು.
"ಬನ್ನಿ ಸಾರ ಹತ್ರ ಬಂದು ನೋಡಿ" ಅಂದವನೆ ಅದರ ವರ್ಣನೆ ಪ್ರಾರಂಬಿಸಿದ.
ಸುಮಾರು ಐದು ಅಡಿ ಇದ್ದ ಅಲ್ಮೇರ ಮುಂದಿನಿಂದ ನೋಡಲು ಆಕರ್ಷಕವಾಗಿತ್ತು. ಅದರ ಬಾಗಿಲ ಮೇಲಿನ ಕಾರ್ವಿಂಗ್ಸ್ ಕೆತ್ತನೆಗಳು, ಎರಡು ಬಾಗಿಲ ಮೇಲಿದ್ದ ಹಂಸ ಆಕರ್ಷಕವಾಗಿದ್ದು. ಬಾಗಿಲು ತೆರೆದಾಗ ಹಂಸಗಳು ಬೇರೆ ಬೇರೆಯಾಗುತ್ತಿದ್ದವು. ಒಳಬಾಗದಲ್ಲಿ ಎಡಬಲ ಬಾಗಗಳಿದ್ದು ಸಾಕಷ್ಟು ಜಾಗವಿತ್ತು. ಕೆಳಬಾಗದಲ್ಲಿ ಎಳೆಯುವ ಡ್ರಾಯರ್ ರೀತಿಯಿದ್ದು ನನ್ನನ್ನು ಸಾಕಷ್ಟು ಆಕರ್ಷಿಸಿತು. ಸುನಿಲ ನನ್ನನ್ನೆ ಕೆಕ್ಕರಿಸಿ ನೋಡುತ್ತಿದ್ದ.

ನಾನು ಇರಲಾರದೆ ಎಷ್ಟಪ್ಪ ಅಂತ ಪ್ರಶ್ನಿಸಿದೆ. ಮುಗಿಯಿತು, ಅ ಸಾಬಿ ಹೇಗೊ ನನ್ನನ್ನು ಮಾತಿನಲ್ಲಿ ಕಟ್ಟಿ ಹಾಕಿ ವ್ಯಾಪಾರ ಮುಗಿಸಿದ್ದ. ಪರ್ಸ್ ತೆಗೆದು ನೋಡಿ ಸಾಲದಕ್ಕೆ ಸುನಿಲನನ್ನ ಕೇಳಿದೆ
"ಒಂದು ಸಾವಿರವಿದ್ದರೆ ಕೊಟ್ಟಿರೊ" ಅಂತ.

"ನಿನಗೆ ಬುದ್ದಿ ಇಲ್ಲ ಈ ಮರದ ಹಳೆಯ ಬೀರು ಏನಕ್ಕೆ ಮನೆಗೆ ಕಸ" ಅಂತ ರೇಗಾಡಿದ.
ನಾನು ಹೋಗಲಿ ಇಲ್ಲೆ ನಿಂತಿರು ಏಟಿಎಮ್ ಗೆ ಹೋಗಿ ಬರುತ್ತೇನೆ ಅಂತ ಹೊರಟೆ,
"ಇದಕ್ಕೇನು ಕಡಿಮೆಇಲ್ಲ" ಅಂತ ಗೊಣಗುತ್ತ ಸಾವಿರ ತೆಗೆದುಕೊಟ್ಟ.

"ಮನೆ ಎಲ್ಲಿ ಸಾರ್" ಅಂದ ಸಾಬಿ,
ಇಲ್ಲೆ ಹನುಮಂತನಗರ ಎಂದೆ.
"ನಮ್ಮವರೆ ಇದ್ದಾರೆ ಸಾರ್ ಟೆಂಪೊದವರು ಕರೀಲ ಒಂದುಮುನ್ನೂರು ಕೊಟ್ಬಿಡಿ ಸಾಕು" ಅಂದ.
ಸುನಿಲ ಇದು ಬೇರೆ ದಂಡ ಅಂತ ಗೊಣಗುತ್ತಿದ್ದ. ಹೇಗೊ ಸುನಿಲನ ಬೈಕಿನಲ್ಲಿ ಹೊರಟೆ ಹಿಂದೆ ಟೆಂಪೊದಲ್ಲಿ ನನ್ನ ಅಲ್ಮೇರದ ಮೆರವಣಿಗೆ. ಬಾಗಿಲು ತೆರೆದು ಹೊರಬಂದ ಅಮ್ಮ ಅಶ್ಚರ್ಯ ಹಾಗು ಗಾಬರಿಯಿಂದ ಕಣ್ಣು ಕಣ್ಣು ಬಿಟ್ಟರು.

" ಇದೇಲಿಂದ ತಂದೆಯೊ ನನ್ನ ತಲೆಗೆ ಮನೆಲೀರೋದು ಸಾಲದ?"
ಅಮ್ಮನ ಅಲಾಪಕ್ಕೆ ಉತ್ತರ ಕೊಡದೆ ಟೆಂಪೋದವರ ಸಹಾಯದಿಂದ ಅಲ್ಮೇರವನ್ನು ಮೇಲಿನ ನನ್ನ ರೂಮಿಗೆ ಸಾಗಿಸಿ ಜಾಗ ಮಾಡಿಟ್ಟು ಅವರಿಬ್ಬರಿಗೆ ದುಡ್ಡು ಕೊಟ್ಟು ಕಳಿಸುವವವರೆಗು ಹಾಳು ಸುನಿಲ ಅಮ್ಮನ ಕೋಪಕ್ಕೆ ಒಗ್ಗರಣೆ ಮೆಣಾಸಿನಕಾಯಿ ಹಾಕುತ್ತ ಕುಳಿತ್ತಿದ್ದು ಅವನು ಹೊರಟ.
ಒಬ್ಬನೆ ನೆಮ್ಮದಿಯಾಗಿ ರೂಮು ಸೇರಿದೆ, ಏಕೊ ಈ ಅಲ್ಮೇರ ಹೊಸದಾಗಿ ನನ್ನ ರೂಮಿಗೆ ಬಂತು ಅಂತ ಅನ್ನಿಸಲೇ ಇಲ್ಲ , ಎಷ್ಟೊ ದಿನದಿಂದ ರೂಮಿನಲ್ಲಿಯೆ ಇರುವಂತೆ ಹೊಂದಿಕೊಂಡಿತ್ತು. ಬಟ್ಟೆಯೊಂದನ್ನು ಹಿಡಿದು ಬಾಗಿಲು ಹಿಡಿಯನ್ನೆಲ್ಲ ಒರೆಸಿ ಒಳಗೆ ಸ್ವಚ್ಚ ಮಾಡೋಣ ಅಂತ ಬಾಗಿಲು ತೆರೆದು ಸ್ವಚ್ಚ ಮಾಡಿ ಕೆಳಗಿನ ಖಾನೆಗಳನ್ನು ಒರೆಸೋಣ ಅಂತ ನೆಲದ ಮೇಲೆ ಕುಳಿತು ಬಲಖಾನೆಯನ್ನು ಒಳಗೆಲ್ಲ ಒರೆಸಿದೆ.
ಒಳಗೆ ಕೈಯಾಡಿಸುವಾಗ ಎಂತದೊ ಬೋಲ್ಟ್ ತರದ್ದು ಕೈಗೆ ತಗಲಿತು. ಬಗ್ಗಿ ನೋಡಲು ಕಣ್ಣಿಗೆ ಕಾಣದು. ಹಾಗೆ ಕೈ ಆಡಿಸಿ ಬೋಲ್ಟ್ ತೆಗೆದು ಖಾನೆಯನ್ನು ಮತ್ತಷ್ಟು ಹೊರಗೆಳೆದೆ. ಅದರಲ್ಲಿ ಒಳಬಾಗಕ್ಕೆ ಇನ್ನೊಂದು ವಿಭಾಗ.

ಅದರಲ್ಲಿ ನೀಲಿ ಬಣ್ಣದ ಸಾಮಾನ್ಯವಾಗಿ ಒಡವೆಗಳನ್ನಿಡುವ ಅಯಾತಾಕಾರದ ವೆಲ್ವೆಟ್ ಪರ್ಸ್ ಒಂದು ಕಾಣಿಸಿತು!


ಆಶ್ಚರ್ಯಪಡುತ್ತ ಅದರ ಜಿಪ್ಪನ್ನು ಕಷ್ಟಪಡುತ್ತ ತೆಗೆದೆ ಒಳಗೆ ಎರೆಡೆರಡು ಬಳೆಗಳು ಖಂಡೀತ ಬಂಗಾರದ್ದೆ ಅದರಲ್ಲಿ ಕೂಡಿಸಿದ್ದ ಹರಳುಗಳು ಅದನ್ನು ಆಕರ್ಷಕವಾಗಿಸಿದ್ದವು.

ಇದಾಯಿತು ಆಶ್ಚರ್ಯ ಎನ್ನುತ್ತ ಎಡಖಾನೆಯನ್ನು ನೋಡೋಣವೆನ್ನುತ್ತ ಒಳಗೆ ಕೈಯಾಡಿಸಲು ಅಲ್ಲಿಯೂ ಒಂದು ಒಳಖಾನೆಯಿರುವುದು ಪತ್ತೆಯಾಗಿ ಬೋಲ್ಟ್ ತೆಗೆದು ಎಳೆದೆ. ಬಿಳಿಯ ಬಟ್ಟೆಯ ಒಂದು ಚೀಲ ಅದರ ಬಾಯನ್ನು ಬಿಳಿಯ ದಾರದಿಂದ ಕಟ್ಟಾಲಾಗಿತ್ತು. ಅದನ್ನು ಬಿಚ್ಚಿ ಅದರಲ್ಲಿರುವದನ್ನು ನೆಲದ ಮೇಲೆ ಸುರಿದೆ. ಸರ ಬಳೆಗಳು ನೆಕ್ಲೇಸ್ ಉಂಗುರಗಳು ಎಂತದೋ ಹಳೆಯಕಾಲದ ಒಡವೆಗಳು.
ನಾನು ಭ್ರಾಂತನಾಗಿ ಕುಳಿತೆ!
ಸ್ವಲ್ಪ ಸುದಾರಿಸಿಕೊಂಡು ಗಟ್ಟಿಯಾಗಿಯೆ ಕೂಗಿದೆ
"ಅಮ್ಮ ಅಮ್ಮ"

ಏಕೊ ನನ್ನ ದ್ವನಿ ನಡುಗುತ್ತಿತ್ತು.
ಏನೊ ಅದು ಅಂತ ಕೂಗಾಡುತ್ತಲೆ ಮೇಲೆ ಬಂದ ಅಮ್ಮ ನನ್ನ ಎದುರಿಗೆ ಕಣ್ಣರಳಿಸಿ ನಿಂತುಬಿಟ್ಟರು.
"ಎಲ್ಲಿತ್ತೊ ಇದೆಲ್ಲ" ಅಂದರು ಅವರಿಗೆ ಎಂತದೋ ಅಪನಂಬಿಕೆ.
ಅವರಿಗೆ ವಿಷಯವೆಲ್ಲ ತಿಳಿಸಿದೆ ನನ್ನ ಎದುರಿಗೆ ಕುಳಿತ ಅವರು ಎಲ್ಲ ತೆಗೆದು ನೋಡಿ
"ಎಲ್ಲ ಚಿನ್ನದ್ದು ಅನ್ನಿಸುತ್ತೆ ಕಣೊ ಎಷ್ಟಾಗಬಹುದು ಯಾರದು ಇರಬಹುದು?" ಅಂದರು.

ನಾನು ಹೇಗೆ ಹೇಳಕ್ಕೆ ಆಗುತ್ತೆ ಆ ಸಾಬಿ ಎಲ್ಲಿಂದ ತಂದನೋ ನನಗೆ ಮಾರಿದನೊ ತಿಳಿಯದು. ಇದನ್ನು ರೀಪೇರಿ ಮಾಡಿದವನಾಗಲಿ ಪಾಲೀಶ್ ಮಾಡಿದವನಾಗಲಿ ಇದನ್ನು ಗಮನಿಸಿಲ್ಲ ಈಗ ಏನು ಮಾಡೋದು ಅಂತ ತಿಳಿದಿಲ್ಲ. ತಕ್ಷಣಕ್ಕೆ ನೆನಪಿಗೆ ಬಂದವನು ನನ್ನ ಸುನಿಲನೆ ಅವನಿಗೆ ಪುನಃ ಮೊಬೈಲ್ ಮಾಡಿ ತಕ್ಷಣ ಬಾ ಅಂದೆ. ಅವನು ರಾತ್ರಿ ಆಯಿತಲ್ಲೊ ಎಂಥದು ನಿನ್ನ ಕಥೆ ಎಂದ. ನಾನು ಅವನಿಗೆ ಅದನೆಲ್ಲ ಫೋನಿನಲ್ಲಿ ತಿಳಿಸಲಾಗದು ತಕ್ಷಣ ಬಾ ಎಂದೆ.
ಸುನಿಲ ಬರುವ ತನಕ ಏನು?

ನೀಲಿಯ ಪರ್ಸ್ ತೆಗೆದು ನೋಡಿದೆ ಅದರಲ್ಲಿ ಒಂದು ಕವರ್ , ಮೇಲೆ ಮುದ್ದಾದ ಅಕ್ಷರಗಳಲ್ಲಿ ದತ್ತಾತ್ರೇಯನಿಗೆ ಎಂದು ಬರೆಯಲಾಗಿದ್ದು ಕೆಳ ಎಡಬಾಗದಲ್ಲಿ "ಪ್ರಮಥಿನಿ" ಎಂದಿತು. ಕವರ್ ತೆಗೆದು ನೋಡಿದೆ ಒಳಗೆ ತಿಳಿಕೆಂಪು ಕಾಗದದ ಮೇಲೆ ಬರೆದ ಪತ್ರ. ಪ್ರಿಯ ದತ್ತಾ ಎಂದು ಆರಂಬವಾಗಿತ್ತು. ಮೇಲೆ ತಾರೀಖು ನಮೂದಿಸಲಾಗಿದ್ದು 27-ಮಾರ್ಚಿ-1987 ಎಂದಿತ್ತು. ಅಂದರೆ ಸರಿಸುಮಾರು 23 ವರ್ಷಗಳ ಹಿಂದೆ ಬರೆದ ಪತ್ರ. ಏಕೋ ಪತ್ರ ನಿಧಾನವಾಗಿ ಓದಬೇಕೆನಿಸಿತು. ಸುನಿಲ ಬಂದು ಹೋಗಲಿ ನಂತರ ನೋಡೋಣ ಎನ್ನುತ್ತ ತೆಗೆದಿಟ್ಟೆ.

ಸುನಿಲನ ಬೈಕಿನ ಶಬ್ದ ಕೇಳಿಬಂತು ಅಮ್ಮ ಬಾಗಿಲು ತೆರೆದಳೇನೊ ಅವನು ಸೀದಾ ಮೇಲೆ ಬಂದ.
’ಎಂತದೋ ಅದು ನಿನ್ನದು" ಎನ್ನುತ್ತ ಒಳಬಂದವನು ನನ್ನೆದುರು ಹರಡಿರುವದನ್ನು ನೋಡುತ್ತಲೆ ಗಂಭೀರನಾಗುತ್ತ ಎದುರು ಕುಳಿತ. "
ನಾನು ಅವನಿಗೆ ಪುನಃ ಮೊದಲಿನಿಂದ ಎಲ್ಲ ತಿಳಿಸಿದೆ. ಅವನು ನನ್ನ ಸ್ನೇಹಿತನಾದರು ನನ್ನಂತೆ ಮಧ್ಯಮವರ್ಗದವನಲ್ಲ ಅವರಪ್ಪನಿಗೆ ಕಿಲಾರಿರಸ್ತೆಯಲ್ಲೊಂದು, ಜಯನಗರದಲ್ಲೊಂದು ಅಂತ ಚಿನ್ನದ ಅಂಗಡಿಯ ಮಳಿಗೆಯೆ ಉಂಟು. ನಿಧಾನವಾಗಿ ಒಂದೊಂದೆ ಒಡವಗಳನ್ನು ಬೇರೆ ಬೇರೆಯಾಗಿ ಎತ್ತಿಟ್ಟ, ಕೆಲವನ್ನು ಹಿಡಿದು ನೋಡಿದ. ಸ್ವಲ್ಪ ಹೊತ್ತು ಬಿಟ್ಟು ಹೇಳಿದ

"ಮಗನೆ ನೀನು ಅದೃಷ್ಟವಂತ ಹಳೆಯ ಅಲ್ಮೇರ ಅಂತ ಹೇಳಿ ಇಷ್ಟೆಲ್ಲ ಹೊಡೆದುಬಿಟ್ಟೆ. ಈಗ ಕೇಳು ನನ್ನ ಅನುಭವದಲ್ಲಿ ಹೇಳುವದಾದರೆ ಇದರ ಒಟ್ಟು ಬೆಲೆ ಅರವತ್ತು ಲಕ್ಷಕಿಂತ ಹೆಚ್ಚು. ನಮ್ಮ ಅಂಗಡಿಗೆ ತಂದು ಬೆಲೆ ಕಟ್ಟಿಸಿದರೆ ಈಗಿನ ರೇಟಿನಲ್ಲಿ ಇನ್ನು ಹೆಚ್ಚು ಬರಬಹುದು. ನೀನು ನೀತಿವಂತ ಅಂತ ನನಗೆ ತಿಳಿದಿದೆ. ಇನ್ನು ನೀನು ಪೋಲಿಸು ಅದು ಇದು ಅಂತ ಹೋಗದೆ ಗಂಭೀರವಾಗಿ ಇದನ್ನು ನಿನ್ನ ಹತ್ತಿರ ಉಳಿಸಿಕೊ. ನಿನ್ನ ಮುಂದಿನ ಜೀವನ ಸುಖಮಯವಾಗುತ್ತೆ ಈ ವಿಷಯ ಯಾರಲ್ಲೂ ಚರ್ಚಿಸ ಬೇಡ"
ಅಂದವನು ಅಮ್ಮನತ್ತ ತಿರುಗಿ
"ನೀವು ಅಷ್ಟೆ ಅಮ್ಮ ಇದು ಗುಟ್ಟಾಗಿರಲಿ" ಎಂದವನು,
ನಾಳೆ ಪುನಃ ಸಿಗ್ತೀನಿ ಅಂತ ಹೊರಟೆಬಿಟ್ಟ.
ರಾತ್ರಿ ಏಕೊ ಸರಿಯಾಗಿ ಊಟ ಸೇರದು. ಮನಸಿನಲ್ಲಿ ಎಂತದೊ ತುಮಲ. ಹೇಗೊ ಊಟ ಮುಗಿಸಿ ರೂಮು ಸೇರಿದೆ. ಪತ್ರವನ್ನು ತೆಗೆದು ಗಮನಿಸಿದೆ. ಅದು ಪ್ರಮಥಿನಿ ಎಂಬಾಕೆ ದತ್ತತ್ರೇಯ ಎಂಬುವರಿಗೆ ಬರೆದ ಪತ್ರ. ಆಕೆಯ ಮನಸ್ಥಿತಿ ಅರ್ಥವಾಗುವಂತಿರಲಿಲ್ಲ. ಅದೂ ಸರಿಸುಮಾರು 23 ವರ್ಷಗಳ ಹಿಂದಿನದು. ಅದರಲ್ಲಿ ಬರೆದಿತ್ತು.

"ನೀವು ನನಗಾಗಿ ಕೊಟ್ಟ ಈ ಬಳೆಗಳನ್ನು ಧರಿಸಲು ನಿಮ್ಮ ಬರುವಿಕೆಗಾಗಿ ಅನಂತಕಾಲದಿಂದ ಕಾಯುತ್ತಿದ್ದೇನೆ. ಆದರೆ ನೀವೇಕೆ ಬರುತ್ತಿಲ್ಲ. ನನಗಾದರೊ ಬರುವ ವಸಂತಕ್ಕೆ 26 ತುಂಬಿತು. ದತ್ತಾ ನಾನೇನು ಅಮೃತ ಕುಡಿದವಳೆ ಭೂಮಿಯ ಕಡೆಯ ದಿನದವರೆಗು ಕಾಯಲು.ನೀವೇಕೆ ಬರುತ್ತಿಲ್ಲ ನನಗೆ ಈ ಬಳೆಗಳನ್ನು ತೊಡಿಸಲು. ನನಗೆ ಕಾಯಲು ಇನ್ನು ಹೆಚ್ಚು ಸಹನೆ ಇದೆ ಎಂದು ಅನ್ನಿಸುತ್ತಿಲ್ಲ, ನಾನೆ ಬರಲ ನೀವಿರುವ ಕಡೆಗೆ" ಈ ರೀತಿ ಕಲ್ಪನ ಲೋಕದಲ್ಲಿ ಬರೆದಿರುವ ಪತ್ರ.

ಲೆಕ್ಕ ಹಾಕಿ ನೋಡಿದರೆ ಈ ಪ್ರಮಥಿನಿಗೆ ಈಗ 48 ವರ್ಷಗಳಾದರು ದಾಟಿರಬೇಕು ಅನ್ನಿಸಿತು. ಎಲ್ಲಿದಾಳೊ ಅಂತ ಕುತೂಹಲ. ಅವರಿಬ್ಬರ ಮದುವೆ ಆಗಿರಬಹುದ. ತಿರುವಿಸಿ ನೋಡಿದೆ. ಹುರ್ರಾ ಪತ್ರದ ಹಿಂಬಾಗದಲ್ಲಿ ಸ್ವಷ್ಟವಾಗಿ ವಿಳಾಸವಿದೆ. ಬಸವನಗುಡಿಯ ಒಂದು ರಸ್ತೆಯಲ್ಲಿರುವ ಮನೆ ಹುಡುಕಲು ಕಷ್ಟವೇನು ಆಗದು. ತಕ್ಷಣ ಸುನಿಲನಿಗೆ ಕಾಲ್ ಮಾಡಿದೆ. ರಾತ್ರಿ ಹನ್ನೊಂದು ದಾಟಿತ್ತು. "ಏನು" ಅನ್ನುವಾಗ ಅವನ ದ್ವನಿಯಲ್ಲಿ ಎಂತದೋ ಅಸಹನೆ. ವಿಷಯ ತಿಳಿಸಿದೆ.
ಅವನು "ನಿನಗೆ ಹುಚ್ಚು ಹಿಡಿದೆದೆ ನಿಯತ್ತಿನ ಹುಚ್ಚು ಅಂದ" .
ನಾನೇನು ಹೇಳದೆ ನಾಳೆ ಸಂಜೆ ಆರು ಘಂಟೆ ಸಂಜೆಗೆ ರಾಮಕೃಷ್ಣಾಶ್ರಮದ ಹತ್ತಿರ ಸಿಗಲು ತಿಳಿಸಿದೆ.

ಪ್ರಮಥಿನಿಯ ಜಾಡು ಹಿಡಿಯುತ್ತಾ.....
ಸಂಜೆ ಆರಕ್ಕೆ ನಾನು ಕಾಯುತ್ತಿರುವಂತೆ ಸುನಿಲ ಹಾಜರಾಗಿದ್ದ. ಗಂಭೀರವಾಗಿಯೆ ಏನು ಎಂದ. ಅವನ ಕೈಗೆ ಪತ್ರ ಕೊಟ್ಟೆ. ಎಲ್ಲ ಓದಿದ ಏನು ಮಾಡಬೇಕೆಂದು ತಮ್ಮ ಇಚ್ಚೆ ಎಂದ ವ್ಯಂಗವಾಗಿ. ನಾನೇನು ತಲೆಕೆಡಸಿಕೊಳ್ಳದೆ ಆ ಅಡ್ರೆಸ್ ಹುಡುಕೋದು ಅಂದೆ. ಅವನಿಗು ಕುತೂಹಲ ಮೂಡಿತೇನೊ ಸರಿ ನಡಿ ಅಂತ ಹೊರಟ. ಹೆಚ್ಚೇನು ಕಷ್ಟವಾಗಲಿಲ್ಲ ಅರ್ದಗಂಟೆಯಲ್ಲಿ ಅಪತ್ರದಲ್ಲಿದ್ದ ವಿಳಾಸದ ಮುಂದೆ ನಿಂತಿದ್ದೆವು. ಆದರೆ ಏನು ಉಪಯೋಗವಿರಲಿಲ್ಲ. ಅ ಜಾಗದಲ್ಲಿ ಯಾವುದೇ ಮನೆಯಿರದೆ. ಇದ್ದ ಮನೆಯನ್ನು ಕೆಡವಿ ನೆಲಸಮಗೊಳಿಸಲಾಗಿತ್ತು. ದಿಕ್ಕುಕಾಣದೆ ನಿಂತೆ.
ಅಷ್ಟರಲ್ಲಿ ಪಕ್ಕದ ಮನೆಯಿಂದ ವಯಸ್ಕನೊಬ್ಬ ಹೊರಬಂದು ಮನೆಮುಂದೆ ನಿಂತಿದ್ದ ಕಾರಿನಲ್ಲಿ ಹತ್ತಿ ಕುಳಿತ, ನಂತರ ಅವನ ಪತ್ನಿಯಿರಬೇಕು ಆಕೆ ಈಚೆ ಬಂದಳು. ಅವಳ ಹಿಂದೆಯೆ ಒಬ್ಬ ಯುವತಿ ಹೊರಬರದೆ ಬಾಗಿಲಲ್ಲಿ ನಮ್ಮತ್ತ ನೋಡುತ್ತ ನಿಂತಳು. ಹೊರಬಂದ ಹೆಂಗಸು ಅನುಮಾನಸ್ಪದವಾಗಿ ನಿಂತಿದ್ದ ನಮ್ಮತ್ತ ನೋಡಿ ವಿಚಾರಿಸಿದರು,

ನಾನು ಕೇಳಿದೆ
" ಮೇಡಮ್ ಈ ಖಾಲಿ ನಿವೇಶನದಲ್ಲಿ ಮೊದಲು ಯಾರದರು ಪ್ರಮಥಿನಿ ಎಂಬುವರು ವಾಸವಾಗಿದ್ದರಾ?" .
ಆಕೆ ಸ್ವಲ್ಪ ಕಸಿವಿಸಿಗೊಂಡರು ಖಾಲಿ ನಿವೇಶನದಲ್ಲಿ ವಾಸವಾಗಿದ್ದರ ಅಂತ ಕೇಳಿದರೆ ಆಕೆಗೆ ಏನು ಅನ್ನಿಸಬೇಕು. ಆಕೆ
"ಇಲ್ಲಪ್ಪ ಹಿಂದೆ ಒಬ್ಬರಿದ್ದರು ಅವರು ಯಾರಿಗೊ ಮನೆ ಮಾರಿ ಹೋದರು, ಈಗಿನವರು ಮನೆಯೆಲ್ಲ ಕೆಡವಿ ಹಾಗೆ ಬಿಟ್ಟಿದ್ದಾರೆ, ಗಿಡಗಂಟೆ ಬೆಳೆದು ನಮ್ಮ ಪ್ರಾಣಕ್ಕೆ ಬಂದಿದೆ" ಅಂದರು. ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಪುನಃ ಕೇಳಿದೆ

"ಸರಿ ಮೇಡಮ್ ಅವರ ಮನೆಯಲ್ಲಿ ಪ್ರಮಥಿನಿ ಅನ್ನುವರಿದ್ದರಾ?"
ಆಕೆ
"ಇಲ್ಲಪ್ಪ ನನಗೆ ನೆನಪಿರುವಂತೆ ಅದು ಇಂದಿರಮ್ಮ ಎನ್ನುವರ ಮನೆ" ಅಂದರು. ಅಷ್ಟರಲ್ಲಿ ಬಾಗಿಲಲ್ಲಿ ನಿಂತಿದ್ದ ಅವರ ಮಗಳು
"ಅಮ್ಮ ಇಂದಿರಮ್ಮ ಅವರ ಮಗಳ ಹೆಸರು ಪ್ರಮಥಿನಿ ಅಂತ ಅಲ್ವೇನಮ್ಮ" ಎಂದಳು.

"ಹೌದು ಇದ್ದಳು ಅನ್ನಿಸುತ್ತೆ ಆದರೆ ನಿನಗೇಕೆ ಬೇಕು?" ಅಂದರು ಅವರಿಗೇನೊ ಅನುಮಾನ. ನಾನು ಅವರಿಗೆ ಸೇರಬೇಕಾದ ವಸ್ತುವೊಂದು ನನಗೆ ಸಿಕ್ಕಿದೆ ಅವರ ಹೆಸರು ಬಿಟ್ಟರೆ ಏನು ತಿಳಿಯದು ಅವರ ಈಗಿನ ವಿಳಾಸ ತಿಳಿಸಿ ಅಂತ ಮನಕರಗುವಂತೆ ವಿನಂತಿಸಿದೆ. ಅವರು
"ನೋಡಪ್ಪ ಅವರು ಮನೆ ಖಾಲಿ ಮಾಡಿಯೆ ಹತ್ತುವರ್ಷದ ಮೇಲೆ ದಾಟಿತು. ಫೋನ್ ನಂಬರ್ ಕೊಟ್ಟಿದ್ದ ನೆನಪು ಈಗೆಲ್ಲಿದ್ದಾರೊ" ಎಂದರು. ಇಷ್ಟಾದರು ಉಡಾಳ ಸುನಿಲ ನನಗೇನು ಸಹಾಯ ಮಾಡದೆ ಕಂಬದಂತೆ ನಿಂತಿದ್ದ. ಬಾಗಿಲಲ್ಲಿದ ಆ ಮಗಳು ಸ್ವಲ್ಪ ಇರಿ ಎಂದು ಹೇಳಿ ಒಳಹೋಗಿ ಐದು ನಿಮಿಷದಲ್ಲಿ ಹಳೆಯ ಡೈರಿ ಹಿಡಿದು ಬಂದು ನಂಬರ್ ಬರೆದುಕೊಳ್ಳೀ ಅಂತ ಕೊಟ್ಟಳು.ಅದು ಆರು ಸಂಖ್ಯೆಯ ನಂಬರ್, ಅವರಮ್ಮ ಆಯಿತಲ್ಲ ಹೊರಡಿ ಎಂದು ಮಗಳಿಗೆ ಬಾಗಿಲು ಹಾಕುವಂತೆ ತಿಳಿಸಿ ಕಾರಿನಲ್ಲಿ ಹೊರಟರು.
ಆ ಹಳೆಯ ನಂಬರಿನಿಂದ ಹೊಸನಂಬರ್ ಹಿಡಿಯುವುದು ಕಷ್ಟವೇನಾಗಲಿಲ್ಲ. ಅವರಿಗೆ ಕಾಲ್ ಮಾಡಿದೆ. ಇಂದಿರಮ್ಮ ಎಂಬಾಕೆಯೆ ಫೋನ್ ಎತ್ತಿದರು ನಾನು ಹೇಳಿದ್ದು ಅರ್ಥವಾಗದೆ ಅವರ ಪತಿಯ ಕೈಗೆ ಫೋನ್ ವರ್ಗಾಯಿಸಿದರು. ಆತನ ಹೆಸರು ವಿನಯ ಅತ್ರೇಯ ನಾನು ಹೇಳಿದ್ದನ್ನೆಲ್ಲ ಕೇಳಿ ಮರುದಿನ ಸಾಯಂಕಾಲ ಅವರ ಮನೆಗೆ ಬರುವಂತೆ ತಿಳಿಸಿದರು.

ಮರುದಿನ ನಾನು ಸುನೀಲ ಅವರ ಮನೆಯನ್ನು ತಲುಪಿದಾಗ ಸಂಜೆಯೆ. ಜಯನಗರದ ಸುಸಜ್ಜಿತ ಭಾಗದಲ್ಲಿದ ವಿಶಾಲವಾದ ಜಾಗದಲ್ಲಿ ಕಟ್ಟಿದ್ದರು. ಮನೆಯ ಮುಂದಿನ ಹಸಿರು ಲಾನ್ ಅವರು ಸಾಕಷ್ಟು ಸ್ಥಿತಿವಂತರೆಂದು ತೋರಿಸುತ್ತಿತ್ತು. ಗೇಟ್ ದಾಟಿ ಒಳಹೋಗಿ ಕಾಲಿಂಗ್ ಬೆಲ್ ಒತ್ತಿದೆ. ಒಳಗಿನಿಂದ ಸಂಗೀತ ಕೇಳುತ್ತಿತ್ತು. ಸ್ವಲ್ಪ ನೀರವ ಒಳಗೆಲ್ಲೊ ಹೆಜ್ಜೆಯ ಶಬ್ದ. ನಂತರ ಬಾಗಿಲು ತೆರೆಯಿತು. ಬಾಗಿಲಲ್ಲಿ ಸರಿಸುಮಾರು ಇಪ್ಪತ್ತರ ಆಸುಪಾಸಿನ ತರುಣಿ ನಮ್ಮತ್ತ ನೋಡುತ್ತಿದ್ದಳು. ಅವಳ ಸೌಂದರ್ಯ ನೋಡುತ್ತ ನಾನು ನೀರಾಗುತ್ತಿದ್ದೆ. ಆಕೆಯ ಅಗಲ ಕಣ್ಣುಗಳಲ್ಲಿ ಕೌತುಕ. ಬೆನ್ನ ಮೇಲೆ ಹರಡಿ ನಿಂತ ಕೂದಲು ಮುಖದ ಚೆಲುವು ನನ್ನನ್ನು ಮೂಕನನ್ನಾಗಿಸಿತು. ಗಿಳಿಯಂತೆ ಉಲಿದಳು ಯಾರು ಬೇಕು ಎಂದು. ಈಗ ಎಚ್ಚೆತ್ತೆ
"ಆತ್ರೇಯರು ಇದ್ದಾರ?" ಅಂತ ಪ್ರಶ್ನಿಸಿದೆ.
ಆಕೆ ಎರಡು ಸಾರಿ "ಅಪ್ಪ ಅಪ್ಪ" ಅಂತ ಕೂಗುವಾಗ ಯಾವುದೊ ದೂರದ ದೇಗುಲದಲ್ಲಿ ಕೇಳಿದ ಗಂಟೆಯನಾದ ನನ್ನ ಕಿವಿಗಳಲ್ಲಿ ತುಂಬಿತು.
ಒಳಗಿನಿಂದ ಬಿಳಿಯ ಶುಬ್ರವಸ್ತ್ರದರಿಸಿದ ಮದ್ಯವಯಸ್ಕರೊಬ್ಬರು ಬಂದು ನೀವಾರು ಅಂದರು. ಅದಕ್ಕೆ ನಾನು
"ನಿನ್ನೆ ನಿಮಗೆ ಪೋನ್ ಮಾಡಿದ್ದೆ , ನಿಮ್ಮ ವಸ್ತುವೊಂದು ನನ್ನ ಬಳಿ ಸೇರಿದೆ ಅಂತ" ಎಂದು ತಿಳಿಸಿದೆ .
ಆತ "ಒಳಗೆ ಬನ್ನಿ " ಅಂತ ಸ್ವಾಗತಿಸಿದರು.
ಅಷ್ಟರಲ್ಲಿ ಅವರ ಮಗಳು
"ಅಪ್ಪ ನಾನು ವೀಣಾ ಮನಗೆ ಹೋಗ್ತೀನಿ ಒಂದು ಗಂಟೆಯಲ್ಲಿ ಹಿಂದಿರುಗುತ್ತೇನೆ" ಅಂತ ತಿಳಿಸಿ ಹೊರಗೆ ಹೊರಟಳು.. ನನಗೆ ಒಳಗೆಲ್ಲ ಪುಲಕ ಅವಳು ಇರಬಾರದ ಅಂತ ಹಸಿ ನಿರೀಕ್ಷೆ.
ಒಳಹೋದೆ ಆತ್ರೇಯರು ಕುತೂಹಲದಿಂದ ಕೇಳಿದರು
"ಹೇಳಿ ನನ್ನಿಂದೇನು ಆಗಬೇಕು ಅಂತ".
ಆಗ ನಾನು ತಿಳಿಸಿದೆ
"ನಿಮ್ಮ ಮನೆಯಲ್ಲಿ ಪ್ರಮಥಿನಿ ಎಂಬುವರ ಜೊತೆ ಮಾತಾಡಬೇಕಿತ್ತು".
ಅವರ ಮುಖ ಗಂಭೀರವಾಯಿತು.
"ಈಗ ಹೊರಹೋದಳಲ್ಲ ನನ್ನ ಮಗಳು ಅವಳೇ ಪ್ರಮಥಿನಿ ಅವಳ ಹತ್ತಿರ ನಿಮಗೇನು ಮಾತು?" ಅಂದರು.
ನಾನು ಕಕ್ಕಾವಿಕ್ಕಿಯಾದೆ ಇದು ಹೇಗೆ ನಾನು ನಿರೀಕ್ಷಿಸಿದ ಪ್ರಮಥಿನಿ ಸುಮಾರು 48-49 ವಯಸ್ಸಿನವಳು...... ಇವಳಾದರೊ 20-21 ಇರಬಹುದು ಅಷ್ಟೆ. ಹಾಗಾಗಿ ನಾನು ಮತ್ತೆ ಕೇಳಿದೆ
"ಇವರೊಬ್ಬರೇನಾ ಪ್ರಮಥಿನಿ ಅಂದರೆ , ಇನ್ಯಾರಾರು ಇದ್ದಾರ ಸುಮಾರು 49ರ ಪ್ರಾಯದವರು"
ಅವರು ಸ್ವಲ್ಪ ಆಶ್ಚರ್ಯಪಟ್ಟು ಏಕೆ ಎಂದರು. ಆಗ ನಾನು ಎಲ್ಲ ತಿಳಿಸಿ ನನ್ನ ಹತ್ತಿರವಿದ್ದ ಪತ್ರ ಅವರಿಗೆ ನೀಡಿದೆ. ಅವರು ಅದನ್ನು ಓದುತ್ತ ವಿಷಾದಭಾವ ತಾಳಿದರು. ನಮ್ಮನ್ನು ಒಳಗೆ ಬನ್ನಿ ಎನ್ನುತ್ತ ಒಳಗಿನ ಹಜಾರಕ್ಕೆ ಕರೆದೋಯ್ದು ಸೋಫ ತೋರಿಸಿ ಕುಳಿತುಕೊಳ್ಳಿ ಎನ್ನುತ್ತ ,
"ಕುಡಿಯಲು ಕಾಫಿ ಆದೀತ" ಎಂದರು.
ನನ್ನಲ್ಲಿ ಕುತೂಹಲ ಜಾಸ್ತಿಯಾಗುತ್ತಿತ್ತು. ಅವರು ನುಡಿದರು
"ನೀವು ಹುಡುಕುತ್ತ ಬಂದಿರುವ ಪ್ರಮಥಿನಿ ಬಹುಷಃ ನನ್ನ ಅಕ್ಕ, ಆಕೆ ಮರಣ ಹೊಂದಿ ಸುಮಾರು 22 ವರ್ಷಗಳೇ ಆದವು".

ನನ್ನ ಮನಸಿಗೆ ಅಘಾತವಾಗಿತ್ತು ನಿರಾಸೆಯಿಂದ ಕೇಳಿದೆ

"ಸತ್ತು ಹೋಗಿದ್ದಾರ ? ಹೇಗೆ ಅಂತ ಕೇಳಬಹುದಾ?"
ಅವರು ಮಾತನಾಡಿದರು "ಇದೆ ನೋಡಿ ಆಶ್ಚರ್ಯ! ನನ್ನ ಅಕ್ಕ ಸತ್ತ 22 ವರ್ಷಗಳ ನಂತರ ಆಕೆಯನ್ನು ಹುಡುಕುತ್ತ ಬಂದಿರುವಿರಿ" ಎನ್ನುತ್ತ ಆಕೆಯ ಕಥೆ ತಿಳಿಸಿದರು.
ಪ್ರಮಥಿನಿ ಆಗ 20 ವಯಸ್ಸಿನ ಕನ್ಯೆ .
ಆಕೆಗೆ ಅವಳೆ ಇಷ್ಟಪಟ್ಟು ಪ್ರೀತಿಸಿದ. ಬಾಲ್ಯದಿಂದಲು ಒಡನಾಡಿದ ದತ್ತಾತ್ರೇಯನೆಂಬುವನ ಜೊತೆ ಮದುವೆ ನಿಶ್ಚಯವಾಗಿತ್ತು. ನೋಡಿದ ಹುಡುಗ ಮನೆಯಲ್ಲಿ ಎಲ್ಲರಿಗೂ ಒಪ್ಪಿಗೆಯೆ. ಹೊಸದಾಗಿ ಕೆಲಸಕ್ಕೆ ಸೇರಿದ್ದ. ಹಾಗಾಗಿ ತರಬೇತಿಗೆಂದು ಅವನ ಕಂಪನಿಯಿಂದಲೆ ಚೆನ್ನೈಗೆ ಕಳಿಸಿದ್ದರು. ಒಂದು ತಿಂಗಳ ತರಬೇತಿ ಅಲ್ಲಿಂದ ಬಂದ ನಂತರ ಮದುವೆ ಎಂದು ನಿರ್ಧರಿಸಿದ್ದರು. ಅವನು ಹೋಗುವಾಗ ಪ್ರಮಥಿನಿಗೆ ಬೆಲೆಬಾಳುವ ಬಳೆಯೊಂದನ್ನು ಉಡುಗರೆಯಾಗಿ ನೀಡಿ ಹೋಗಿದ್ದ. ಆಕೆಗೆ ಅವರ ಅಮ್ಮ ಬಿಟ್ಟು ಹೋದ ಒಡವೆಗಳೆ ಸಾಕಷ್ಟು ಇದ್ದರು. ಈ ಬಳೆಗಳ ಮೇಲೆ ಏನೊ ವ್ಯಾಮೋಹ. ಅವನೆ ಬಂದು ತೊಡಿಸುವ ತನಕ ತೊಡುವದಿಲ್ಲ ಅಂತ ಹಾಗೆ ಇಟ್ಟಿದಳು.
ಆದರೆ ವಿದಿಯ ಆಟವೆ ಬೇರೆ ಇತ್ತು. ರಜಾದಿನದಲ್ಲಿ ಮಹಾಬಲಿಪುರಂ ಸಮುದ್ರಕ್ಕೆ ಸ್ನೇಹಿತರ ಜೊತೆ ಹೋದ ದತ್ತಾತ್ರೇಯನು ಸ್ನೇಹಿತರ ಜೊತೆ ಸಂಭ್ರಮದಲ್ಲಿದ್ದಾಗ ಸಮುದ್ರದ ಪಾಲಾಗಿದ್ದ. ಅವನ ಶವ ಸಹಿತ ಸಿಗಲಿಲ್ಲ.. ವಿಷಯ ತಿಳಿದ ಪ್ರಮಥಿನಿ ಮೌನಿಯಾದಳು ಹುಚ್ಚಿಯಂತಾದ ಆಕೆ ಎಲ್ಲರ ಜೊತೆ ಮಾತು ಬಿಟ್ಟು ಒಂಟಿಯಾದಳು. ದತ್ತಾತ್ರೇಯ ಸತ್ತಿದ್ದು 1984 ರ ಉಗಾದಿಯ ದಿನದಂದು ಸರಿಯಾಗಿ ಸಂಜೆ ನಾಲ್ಕಕ್ಕೆ ಅಂತ ತಿಳಿಸಿದ ಅವರು ಸುಮ್ಮನಾದರು
ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ.
ಪುನಃ ಅವರೆ ಮುಂದುವರೆಸಿದರು

"ನಂತರ ಪ್ರಮಥಿನಿ ಹೇಗೆ ಜೀವ ಹಿಡಿದಿದ್ದಳೊ ಏನೊ ತಿಳಿಯದು ಅವಳಲ್ಲಿ ಜೀವ ಸತ್ವ ಉಡುಗಿಹೋಗಿತ್ತು. ನಂತರ ನನಗೆ ಮದುವೆಯಾಯಿತು. ನನಗೆ ನೆನಪಿರುವಂತೆ ಅದು 1987ರ ಉಗಾದಿಯ ದಿನ ನನ್ನ ಪತ್ನಿಗೆ ಹೆರಿಗೆ ನೋವು ಪ್ರಾರಂಭವಾಯಿತು, ಕಾರಿನಲ್ಲಿ ಅವಳನ್ನು ಕರೆದುಕೊಂಡು ಆಸ್ಪತ್ರೆಗೆ ತೆರಳಿದೆ. ಮನೆಯಲ್ಲಿ ಪ್ರಮಥಿನಿ ಒಬ್ಬಳೆ ಇದ್ದಳು. ನನ್ನ ಪತ್ನಿ ಹೆಣ್ಣುಮಗುವಿಗೆ ಜನ್ಮನೀಡಿದಳು. ಮನೆಗೆ ಬರುವಾಗ ಸಾಕಷ್ಟು ತಡವಾಗಿತ್ತು. ಆದರೆ ನಾನು ಮನೆಗೆ ಬರುವಾಗ ನನ್ನ ಅಕ್ಕ ಮನೆಯಲ್ಲಿಯೆ ಸತ್ತು ಮಲಗಿದ್ದಳು. ಅವಳು ಹೇಗೆ ಸತ್ತಳು ಅಂತ ತಿಳಿಯಲೆ ಇಲ್ಲ. ಅದು ಸಹಜ ಸಾವೊ ಆತ್ಮಹತ್ಯೆಯೊ ದೇವರಿಗೆ ಗೊತ್ತು. ನಂತರ ನನ್ನ ಮಗಳಿಗೆ ನಾನು ಅತಿಯಾಗಿ ಪ್ರೀತಿಸಿದ ನನ್ನ ಅಕ್ಕನ ಹೆಸರೆ ಇಟ್ಟೆ. ನಮ್ಮ ತಂದೆಯು ನಂತರದಲ್ಲಿ ತೀರಿಕೊಂಡರು. ಏಕೊ ಆ ಮನೆ ಬೇಸರವೆನಿಸಿ ಮಾರಿದೆವು. ಈಗ ಜಯನಗರದಲ್ಲಿ ಮನೆ ಕಟ್ಟಿ ಬಂದು ನೆಲೆಸಿದ್ದೇವೆ"
ಎಂದು ಆತ್ರೇಯರು ಕಥೆ ಮುಗಿಸಿದರು.
ಒಂದು ನೀರವ ಮೌನ ಮನೆಯನ್ನು ಆಕ್ರಮಿಸಿತ್ತು. ಅಷ್ಟರಲ್ಲಿ ಅವರ ಪತ್ನಿ ಕಾಫಿ ತಂದರು. ನಾನು ಕುಡಿಯುತ್ತಿದ್ದಾಗ ಆತ್ರೇಯರು ಕೇಳಿದರು
"ನಿಮಗೇಕೆ ಈ ಕಥೆಯಲ್ಲಿ ಇಷ್ಟು ಆಸಕ್ತಿ"
ನಾನೀಗ ಕೆಲವು ಸತ್ಯಗಳನ್ನು ಹೇಳಲೆ ಬೇಕಿತ್ತು,
ಮೊದಲೆನೆಯದು ನನ್ನ ಹೆಸರು ಸಹ ದತ್ತಾತ್ರೇಯನೆಂದು (ಕ್ಷಮಿಸಿ ಓದುಗರೆ ನಿಮಗೆ ನನ್ನ ಹೆಸರೆ ತಿಳಿಸಿರಲಿಲ್ಲ), ಎರಡನೆಯದು ನಾನು ಹುಟ್ಟಿದ್ದು ಅದೆ 1984ರ ಉಗಾದಿಯಂದು, ಮಹಾಬಲೇಶ್ವರದಲ್ಲಿ ನಮ್ಮ ತಂದೆ ಹಾಗು ತಾಯಿ ಆಗ ಅಲ್ಲಿ ನೆಲೆಸಿದ್ದರು. ಆತ್ರೇಯರಿಗೆ ತಿಳಿಸಿದೆ ಪ್ರಮಥಿನಿಯ ಪತ್ರ ಓದುವಾಗ ಏಕೊ ನನಗೆ ಬರೆದಂತೆ ಭ್ರಾಂತಿಯಾಯಿತು ಎಂದು.
ಆತ್ರೇಯರು ಆಶ್ಚರ್ಯಪಟ್ಟಂತೆ ನನ್ನ ಸ್ನೇಹಿತ ಸುನಿಲನು ಮೂಕ ವಿಸ್ಮಿತನಾಗಿ ಕುಳಿತ್ತಿದ್ದ.

ನಾನು ಅವರಿಗೆ ಬರುವ ಬಾನುವಾರ ನಮ್ಮ ಮನೆಗೆ ಬಂದು ಅವರ ಒಡವೆಗಳನೆಲ್ಲ ಪಡೆಯಬೇಕೆಂದು ತಿಳಿಸಿ ಹೊರಡಲು ಅನುವಾದೆ. ಅಷ್ಟರಲ್ಲಿ ಹೊರಗೆ ಹೋಗಿದ್ದ ಅವರಮಗಳು ಪ್ರಮಥಿನಿ ಬಂದಳು.
ನನ್ನಲ್ಲಿ ಎಂತದೊ ಪುಲಕ.
ಅತ್ರೇಯರನ್ನು ಪ್ರಶ್ನಿಸಿದೆ "ಪ್ರಮಥಿನಿ ಹೇಗಿದ್ದರು ಅವರ ಫೋಟವೇನಾದರು ಇದೆಯ" ಎಂದು.
ಅವರು ನಗತ್ತ ಹೇಳಿದರು
"ಯಾವ ಫೋಟದ ಅಗತ್ಯವು ಇಲ್ಲ. ಥೇಟ್ ಇದೇ ತದ್ರೂಪು" ಎಂದು ತಮ್ಮ ಮಗಳನ್ನು ತೋರಿದರು.
ಅವಳು ನಾಚುತ್ತ ಒಳಹೋದಳು
ಮುಂದಿನ ಬಾನುವಾರ ಅವರು ಬರುವಾಗ ಹಣ್ಣು ಹೂವಿನೊಡನೆ ಬಂದರು ಒಡವೆಗಳಿಗಾಗಿಯಲ್ಲ. ತಮ್ಮ ಮಗಳನ್ನು ನನಗೆ ಕೇಳಲು. ಬೇಡ ಅನ್ನಲು ನನಗಾವ ಕಾರಣಗಳು ಇರಲಿಲ್ಲ. ಪ್ರಮಥಿನಿ ಈಗ ನನ್ನವಳು. ಮನೆಗೆ ಬರುತ್ತಲೆ ಆ ಮರದ ಬೀರುವನ್ನ ತನ್ನ ವಶಕ್ಕೆ ತೆಗೆದು ಕೊಂಡಳು.ಈಗಲು ಸುನಿಲ ತಮಾಶೆ ಮಡುತ್ತಾನೆ "ಬೀರು ಅತ್ತಿಗೆ" ಎಂದು.
ಆದರು ಕೆಲವೊಮ್ಮೆ ಗೊಂದಲ ನನ್ನನ್ನು ಕಾಡುತ್ತದೆ. ನನ್ನ ಪ್ರಮಥಿನಿ ನನ್ನ ತೋಳ ಸೆರೆಯಲ್ಲಿರುವಾಗ ಅನ್ನಿಸುತ್ತೆ ಇದು ನಾನೊ ಅಥವ 26 ವರ್ಷಗಳ ಹಿಂದೆ ಇದ್ದು ಹೋದ ದತ್ತಾತ್ರೇಯ ಪ್ರಮಥಿನಿಯರೊ ಎಂದು. ತಕ್ಷಣ ಅವಳ ಬಟ್ಟಲ ಕಂಗಳನ್ನು ನೋಡುತ್ತ ಆ ಗೊಂದಲವನ್ನು ಮರೆತುಬಿಡುತ್ತೇನೆ.

December 18, 2010 - 8:53pm

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.