ದೇವರಿಗೊಂದು ಪತ್ರ

ಸಕಲ ಚರಾಚರ ಜೀವಿಗಳಿಗೆ ಜನ್ಮಕೊಟ್ಟು, ಈ ಸೃಷ್ಟಿಯ ಹರಿಕಾರನಾದ ಸದ್ಗುಣ ಸಂಪನ್ನ, ಸರ್ವಾಂತರಯಾಮಿ, ಸರ್ವಜ್ಞನಾದ ಸೃಷ್ಟಿಕರ್ತನಿಗೆ ಈ ಹುಲುಮಾನವಳಾದ ನನ್ನ ಸಾವಿರ ಸಾವಿರ ಪ್ರಣಾಮಗಳು.

ದೇವ, ಈ ಭೂಮಂಡಲದಲ್ಲಿ ನನ್ನನು ನೂರಾರು ದ್ವಂದ್ವ, ಪ್ರಶ್ನೆ, ಸಂದೇಹ, ಕುತೂಹಲಗಳು ಕಾಡುತ್ತಿವೆ. ನಿನ್ನಿಂದ ಮಾತ್ರ ಇದಕ್ಕೆ ಉತ್ತರ ಸಿಗುವುದೆಂದು ನನ್ನ ನಂಬಿಕೆ. ಈ ಭೂಲೋಕದಲ್ಲಿ ದಿನಕ್ಕೊಂದು ನೀತಿ, ದುರಾಡಳಿತ, ಕಿತ್ತುತಿನ್ನುವ ಬಡತನ, ಹಣವಂತರ ದರ್ಪ, ದೌರ್ಜನ್ಯ,ಭ್ರಷ್ಟಾಚಾರ,ಅನ್ಯಾಯ, ಭಯೋತ್ಪಾದನೆ, ಭ್ರೂಣ ಹತ್ಯೆ, ಮಹಿಳೆಯರ ಮೇಲೆ ದಿನೇ ದಿನೇ ನಡೆಯುವ ವಿವರಿಸಲಾಗದ ದೌರ್ಜನ್ಯ.... ಒಂದೋ ಎರಡೋ ಒಟ್ಟಾರೇ ಸಜ್ಜನರನ್ನು ಹುಡುಕುವುದು ಕಷ್ಟಸಾಧ್ಯದ ವಿಚಾರವಾಗಿ ಹೋಗಿದೆ. ಈ ಭೂಮಿಯೇ ಒಂದು ನರಕವಾಗಿ ಹೋಗಿದೆ ಎಂದರೆ ತಪ್ಪಿಲ್ಲಬಿಡು. ನನ್ನ ಪೂರ್ವಜನ್ಮದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಈ ಭೂಮಿಯಲ್ಲಿ ನನ್ನ ಜನ್ಮವಾಯಿತೋ ಎಂಬಂತೆ ನೋವಿನಲ್ಲಿ ದಿನೇ ದಿನೇ ಕ್ರಶಳಾಗುತ್ತಿದ್ದೇನೆ.

ನಿನ್ನ ಸೃಷ್ಟಿ ಅದೆಷ್ಟು ವಿಚಿತ್ರ ನೋಡು. ಎಲ್ಲರ ದೇಹದಲ್ಲೂ ಹರಿಯುವುದು ಒಂದೇ ರಕ್ತವಾದರೂ ಅದರಲ್ಲಿ ಅದೆಷ್ಟು ಭಿನ್ನಮತ. ನೂರಾರು ಮತ- ಧರ್ಮವನ್ನು ಸೃಷ್ಟಿಸಿದವನು ಮನುಜನೇ. ಒಬ್ಬರ ಮೇಲೊಬ್ಬರಿಗೆ ದ್ವೇಷದ ಕಿಚ್ಚು ಹಚ್ಚಿಸಿದವನು ಅವನೇ. ಅದೆನೋ ಅನ್ನುತ್ತಾರಲ್ಲ ಮಗುವನ್ನು ಚಿವುಟಿ ಮತ್ತೆ ತೊಟ್ಟಿಲು ತೂಗಿದಂತೆ. ಇವೆಲ್ಲ ದೇವರೆ ನಿನ್ನ ಚಿತ್ತಕ್ಕೆ ತಿಳಿಯದೆ ಇರುವುದೆನಲ್ಲ .

ನೂರಾರು ಧರ್ಮಕ್ಕೆ ಸಾವಿರಾರು ದೇವರು‌, ಬೇರೆ ಬೇರೆ ಧರ್ಮಗ್ರಂಥಗಳು‌. ಆದರೆ ಅವು ಸಾರುವ ಸಂದೇಶ ಮಾತ್ರ ಒಂದೇ ಆಗಿದ್ದರೂ ಜಾತಿಧರ್ಮದ ಹೆಸರಿನಲ್ಲಿ ದಿನೇ ದಿನೇ ಕತ್ತಿಚೂರಿ ತಪ್ಪಿಲ್ಲ‌. ಈ ವಿಚಿತ್ರ ಸೃಷ್ಟಿಗೆ ನಾವು ಕೇವಲ ಪಾತ್ರಧಾರಿಗಳು. ನೀ ಆಡಿಸಿದಂತೆ ಆಡುವವರು ನಾವು. ನಿನ್ನಲ್ಲವೇ ಇದಕ್ಕೆಲ್ಲ ಸೂತ್ರಧಾರಿ.

ದೇವನೊಬ್ಬನೇ ನಾಮಹಲವು ಎನ್ನುವುದನ್ನು ವಾದಿಸುವವರು ಒಂದು ಕಡೆ, ನಿನ್ನ ಅಸ್ಥಿತ್ವವೇ ಸುಳ್ಳು, ನೀ ಇಲ್ಲವೇ ಇಲ್ಲವೆಂದು ಮೊಂಡುವಾದ ಮಾಡುವ ನಾಸ್ತಿಕ ವರ್ಗ ಇನ್ನೊಂದು ಕಡೆ. ಎಷ್ಟು ವಿಚಿತ್ರ ನೋಡು, ನಿನ್ನ ಇಲ್ಲವೆಂದು ತೆಗಳುವವರ ಕೈಹಿಡಿಯುವಿ, ನಿನ್ನ ಭಕ್ತಿ ಭಾವದಿಂದ ಪೂಜಿಸುವ ಅದೆಷ್ಟೋ ಭಕ್ತ ಸಂಕುಲಕ್ಕೆ ನೀ ನೀಡುವಿ ಅಗ್ನಿಪರೀಕ್ಷೆ. ಕೈ ಹಿಡಿದು ನಡೆಸುವವನು ನೀನೇ, ನಡುನೀರಿನಲ್ಲಿ ಕೈಬಿಟ್ಟು ಜೀವನದ ಹೊಸ ಪಾಠ ಕಲಿಸುವವನು ನೀನೇ. ಇದೆಲ್ಲ ನಿನ್ನ ಮಾಯಜಾಲವೋ ಇಲ್ಲ ಭಕ್ತನ ಪರೀಕ್ಷೆಯೋ, ನಾ ಬೇರೆ ಕಾಣೆ.

ಒಂದೇ ತಾಯಿಯ ರಕ್ತಮಾಂಸಗಳನ್ನು ಹಂಚಿ ಹುಟ್ಟಿದ ಒಡಹುಟ್ಟಿದವರ ನಡುವೆ ಅದೆಷ್ಟೋ ಭಿನ್ನಮತ, ದ್ವೇಷದ ಜ್ವಾಲಾಗ್ನಿ . ಆಸ್ತಿ, ಹಣಕ್ಕೆ ಅಣ್ಣ-ತಮ್ಮರ ನಡುವೆ ದಾಯಾದಿ ಮತ್ಸರ.

ಹುಟ್ಟು ನಿಶ್ಚಿತ, ಸಾವು ಖಚಿತವಿದ್ದರೂ ಜೀವನದ ತುಂಬೆಲ್ಲ ಬರೇ ಗೋಳು, ನೋವು, ಸಂಕಟದ ಸುಳಿ. ಇವುಗಳ ನಡುವೆ ಸುಖದ ಸಿಂಚನವಾಗುವುದಾದರು ಎಂದೋ.

ನಿನ್ನ ಹೆಸರಿನಲ್ಲಿ ಖಾವಿ ತೊಟ್ಟು ಅನಾಚಾರದ ಕೆಲಸ ಮಾಡುವವರನ್ನು ದಂಡಿಸು. ಅವರಿಗೆ ಅರಿಷಟ್ ವೈರಿಗಳನ್ನು ನಿಗ್ರಹಿಸುವ ಪಾಠಕಲಿಸು.

ದೇಶದ ಹಣ ಕಬಳಿಸಿ ಜೈಲಿಗೆ ಹೋದ ರಾಜಕಾರಣೆಯನ್ನು ಜಾಮೀನು ಕೊಟ್ಟು ಬಿಡಿಸಿ , ಹಾರ- ತುರಾಯಿಯೊಂದಿಗೆ ಸನ್ಮಾನಿಸುವ ವರ್ಗೊಂದು ಕಡೆಯಾದರೆ, ನ್ಯಾಯಕ್ಕಾಗಿ , ಸುಭದ್ರತೆಗಾಗಿ ಹೋರಾಡುವ ಜನ ಇನ್ನೊಂದು ಕಡೆ. ಭ್ರಷ್ಟಾಚಾರಿಯ ಮನದಲ್ಲೊಂದು ಒಳೆತನದ ಎಳೆಯನ್ನು ನೀ ಮೂಡಿಸಿದ್ದರೆ ದೇಶ ಎಷ್ಟೋ ಅಭಿವೃದ್ಧಿ ಹೊಂದುತ್ತಿತ್ತಲ್ಲವೇ?.

ದ್ವೇಷದ ಕಿಚ್ಚು ಹೊತ್ತಿಸಿ ಶಾಂತಿಯ ಮಂತ್ರ ಬೋಧಿಸುವ ಕಪಟಿಗಳ ಹೆಡೆಮುರಿ ಕಟ್ಟಲು ನೀನು ಅವತಾರವೆತ್ತಿ ಬಾ ದೇವರೆ.
ತನ್ನ ಮನೆಯ ಹೆಣ್ಣು 'ಗೃಹಲಕ್ಷ್ಮೀ' ಎಂದು ಪೂಜಿಸುವ ಜನ, ಪರಸ್ತ್ರೀಯನ್ನು ದೇವತೆಯಲ್ಲದಿದ್ದರೂ ಮಾನವತೆಯ ಅರ್ಥದಲ್ಲಿ ನೋಡದಿರುವುದೇಕೆ?

ಬಡವ ಬಡವನಾಗಿ, ಸಿರಿವಂತ ಸಿರಿವಂತನಾಗಿಯೇ ಬಾಳುವುದು ಸರಿಯೇ? .ಕಷ್ಟಪಟ್ಟು ಬೆವರುಸುರಿಸಿ ದುಡಿದ ರೈತನಿಗೆ ಒಪ್ಪತ್ತು ಊಟ. ಎಸಿ ರೂಮಿನಲ್ಲಿ ನಿದ್ರೆಮಾಡಿ ಬಡವರ ರಕ್ತ ಹೀರುವ ಸಿರಿವಂತಗೆ ಒಬ್ಬಟ್ಟು ಊಟ.

ಹೆಣ್ಣು ತಾಯಿಯಾಗಿ ,ಮಗಳಾಗಿ, ಸೊಸೆಯಾಗಿ, ಹೆಂಡತಿಯಾಗಿ ....ವಿವಿಧ ರೂಪದಲ್ಲಿ ಗಂಡಿನ ಮನೆ-ಮನಗಳನ್ನು ತುಂಬಿದರೂ, ಏನು ತಪ್ಪು ಮಾಡದ ಆ ಹೆಣ್ಣು ಭ್ರೂಣಕ್ಕೇಕೆ ಗರ್ಭಪಾತದ ಶಿಕ್ಷೆ.

ದೇಶ ಸೇವೆಯೇ ಈಶ ಸೇವೆಯೆಂದು ಪ್ರಾಣದ ಹಂಗುತೊರೆದು ದೇಶ ರಕ್ಷಿಸುವ ಸೈನಿಕನಿಗಿಲ್ಲ ಬಿರುದು ಬಹುಮಾನ. ಅವರೇ ನಿಜ ಅರ್ಥದ ದೇಶ ರಕ್ಷಕರು.
ದೇಶದ ಬೊಕ್ಕಸಕ್ಕೆ ಕೈ ಹಾಕಿ ಹಣವ ಲೂಟಿಮಾಡುವ ಹಗಲು ದರೋಡೆಕೋರ ಭ್ರಷ್ಟನಿಗೆ ಸುತ್ತಮುತ್ತೆಲ್ಲ ಅಂಗರಕ್ಷಕರು. ಇದು ಯಾವೂರಿನ ನ್ಯಾಯ. ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ. ನೀನೇ ಸೃಷ್ಟಿಸಿದ ಈ ಎರಡು ಜೀವಗಳಲ್ಲಿ ಅಜಗಜಾಂತರ ವ್ಯತ್ಯಾಸ. ಈ ಚಿದಂಬರ ರಹಸ್ಯ ಬೇಧಿಸಲು ನಿನ್ನ ಸಹಾಯಬೇಕು.

ದೀಪದ ಕೆಳಗೆ ಕತ್ತಲೆ ಎಂಬಂತೆ, ಹೆಣ್ಣು-ಹೆಣ್ಣೆನ ನಡುವೆ ದ್ವೇಷದ ಹೊಗೆ. ಅತ್ತೆ-ಸೊಸೆಯರ ನಡುವೆ ಮಾತ್ಸರ್ಯದ ಗೆರೆ. ಬಂಧು-ಬಾಂಧವರ ನಡುವೆ ದ್ವೇಷ. ನೆರೆ ಹೊರೆಯ ರಾಷ್ಟ್ರದ ನಡುವೆ ಭಯೋತ್ಪಾದನೆಯ ಅಟ್ಟಹಾಸ. ಜಾತಿಧರ್ಮದ ಹೆಸರಿನಲ್ಲಿ ದಿನೇ ದಿನೇ ಸಾವಿರಾರು ಬಲಿ. ಹಿಂದೂ ಮುಸ್ಲಿಂರ ನಡುವೆ ನೀ ಇನ್ನಾದರೂ ಹುಟ್ಟಿಸಬಾರದೆ ಸ್ನೇಹ-ಪ್ರೀತಿಯ ಚಿಲುಮೆ. ಈ ತರ್ಕಕ್ಕೆ ನಿನ್ನೊಬ್ಬನಿಂದಲೇ ಉತ್ತರ ಕೊಡಲು ಸಾಧ್ಯ.

ಕೈಕಾಲಿಲ್ಲದ ಭಿಕ್ಷುಕ ದೇವಸ್ಥಾನದ ಹೊರಗೆ ಭಿಕ್ಷೆ ಬೇಡುತ್ತಾನೆ. ಗಟ್ಟಿಮುಟ್ಟಾದ ಶ್ರೀಮಂತ ದೇವಾಲಯದ ಒಳಗೆ ಭಿಕ್ಷೆ ಬೇಡುತ್ತಾನೆ. ಶ್ರೀಮಂತ ಶ್ರೀಮಂತನಾಗಿಯೇ ಇರುತ್ತಾನೆ. ಬಡವ ಬಡವನಾಗಿಯೇ ಬಾಳುತ್ತಾನೆ. ಪ್ರಾಣಿ ಹಿಂಸೆ, ಪರಿಸರ ಮಾಲಿನ್ಯ ದಿನೇ ದಿನೇ ಹೆಚ್ಚುತ್ತಿದೆ. ಯಾರೋ ನೆಟ್ಟ ಮರ ಕಡಿದು , ಕಾಡನ್ನು ನಾಡು ಮಾಡಿ, ಶುದ್ಧ ಗಾಳಿಯಿಲ್ಲದೆ ತಾನೇ ತೊಡಿದ ಹೊಂಡಕ್ಕೆ ತಾನೇ ಬೀಳುವಂತಾಗುತ್ತಿದೆ. ಭೂಗರ್ಭದ ಅದಿರಿಗೆ ಕನ್ನ ಹಾಕಿದ್ದಾನೆ. ಅಂತರ್ಜಲವನ್ನು ಹೊರತೆಗೆದು 'ಜೀವಜಲ'ಕ್ಕೆ ಪರದಾಡುವ ಪಾಡು ಈ ಮನುಕುಲಕ್ಕೆ.

ಹೆತ್ತು ಹೊತ್ತು ಸಾಕಿ ಸಲಹಿ, ವಿದ್ಯಾವಂತರನ್ನಾಗಿಸಿದ ಹೆತ್ತವರನ್ನು ಯಾವುದೇ ಪ್ರೀತಿ,ಕರುಣೆಯಿಲ್ಲದೆ ವೃದ್ಧಾಶ್ರಮಕ್ಕೆ ದುಡುವ ಸ್ವಾರ್ಥ ಮಕ್ಕಳಿಂದ ಕೂಡಿದ ಸಮಾಜದಲ್ಲಿ ನಾವಿದ್ದೇವೆ. ನಾಯಿಕೊಡೆಯಂತೆ ತಲೆಯೆತ್ತಿರುವ ಅನಾಥಾಶ್ರಮದ ಬಗ್ಗೆ ನಾ ಏನ ಹೇಳಲಿ.

ಪ್ರತಿ ನಿಮಿಷಕ್ಕೊಂದು ಮಹಿಳೆಯ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯ, ಹಿಂಸೆ, ಅನಾಚಾರ, ವರದಕ್ಷಿಣೆಯ ಕಿರುಕುಳ...ಸಮಾಜದ ತುಂಬೆಲ್ಲ ತಾಂಡವಾಡುತ್ತಿದೆ.

ಜಾತಿ ಪದ್ಧತಿ, ಅಸ್ಪೃಶ್ಯತೆ, ಮೇಲುಕೀಳು ಇನ್ನೂ ಸಮಾಜದಲ್ಲಿ ಕಾಣಸಿಗುತ್ತಿದೆ ಎನ್ನುವುದಕ್ಕೆ ಹಿಂಸೆಯಾಗುತ್ತಿದೆ.
ದೇವರೇ ಇನ್ನೂ ಅನೇಕ ಸಮಾಜಘಾತುಕ ಶಕ್ತಿಯ ಅಟ್ಟಹಾಸ ಮೆರೆಯುತ್ತಿದೆ.

ನಾನೋ ಕೆಲವೊಮ್ಮೆ ಕಿವಿಯಿದ್ದು ಕಿವುಡನಂತೆ, ಕಣ್ಣೆದ್ದು ಕುರುಡನಂತೆ, ಬಾಯಿಯಿದ್ದು ಮೂಕನಂತೆ ಬದುಕಿ ರೋಸಿ ಹೋಗಿದ್ದೇನೆ. ಏನೂ ಮಾಡುವುದೆಂದು ತಿಳಿಯದೆ ನಿನ್ನ ಮೊರೆ ಹೋಗಿದ್ದೇನೆ. ಇದೇ ರೀತಿ ದುಷ್ಟರ ಅಟ್ಟಹಾಸ ಮುಂದುವರಿದರೆ ಭೂಮಂಡಲ ಸರ್ವನಾಶವಾದಿತು.

ಈ ಭೂಮಂಡಲದಲ್ಲಿರುವ ಯಾವುದೇ ಚರಾಚರ ಜೀವಿಗಳಿಗೆ ಇದುವರೆಗೆ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ನೀನೇ ಸೃಷ್ಟಿಸಿದ ಈ ಭೂಮಂಡಲದಲ್ಲಿ ಉದ್ಭವವಾಗುವ ಸಾವಿರಾರು ಪ್ರಶ್ನೆಗಳಿಗೆ ನಿನ್ನಿಂದಲೇ ಉತ್ತರ ಕೊಡಲು ಸಾಧ್ಯ. ಈ ಉತ್ತರವನ್ನು ನೀನು ಯಾವುದೇ ಮಾಧ್ಯಮದ ಮೂಲಕ ತಿಳಿಸಿದರೂ ಇಡೀ ಭೂಸಂಕುಲವೇ ಉದ್ಧಾರವಾದಿತು.
ಅದಕ್ಕಾಗಿ ನೀನು ಆದಷ್ಟೂ ಬೇಗ ಅವತಾರವೆತ್ತಿ ಬಾ , ಈ ಲೋಕಕಲ್ಯಾಣ ನಿನ್ನೊಬ್ಬನಿಂದ ಮಾತ್ರ ಸಾಧ್ಯ. ನಿನ್ನ ಅವತಾರಕ್ಕಾಗಿ , ನಿನ್ನ ಲೋಕ ಕಲ್ಯಾಣಕ್ಕಾಗಿ ಕಾದು ಕೂತಿದ್ದೇವೆ. ಈ ಭೂಮಿಯು ಮತ್ತೆ ನಿನ್ನ ಪಾದ ಸ್ಪರ್ಶದಿಂದ ಸ್ವರ್ಗವಾಗುವುದಕ್ಕೆ ಎದುರು ನೋಡುತ್ತಿದ್ದೇನೆ. ಸಾವಿರ ಕೋಟಿ ಜನರ ಪರವಾಗಿ ನನ್ನ ಕೋರಿಕೆಯನ್ನು ಈಡೇರಿಸುವಿಯೆಂದು ನಿನ್ನ ನಂಬುವ ,

ಇತೀ ನಿನ್ನ ಭಕ್ತೆ...

ಶ್ರೀಮತಿ. ಶೈನಾ ಶ್ರೀನಿವಾಸ ಶೆಟ್ಟಿ.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.