ಭಯ ತಂದ ಅಸಹಾಯಕತೆ..

ತಂಪಾದ ಗಾಳಿ, ಓಡುತ್ತಿರುವ ಮರ-ಗಿಡ ದಾರಿ. ಏಕಾಂಗಿ ಪಯಣ. ಜೊತೆಗೆ ಕಿವಿಗೆ ಇಂಪಾಗುವ ಹಾಡು. ಇವೆಲ್ಲದರ ಜೊತೆ ಜೊತೆಗೆ ನಾನೂ ವೇಗವಾಗಿ ಹೋಗುತ್ತಾ ಇದ್ದೇನೆ. ಇದು ಯಾವುದೇ ಜನಜಂಗುಳಿಯ ನಗರ ಪ್ರದೇಶ ಅಂತೂ ಖಂಡಿತ ಅಲ್ಲ. ಜನರಿಲ್ಲದ, ಮನೆಗಳೇ ಕಾಣಸಿಗದ ಹಾದಿ. ಕತ್ತಲು ಆಗಲೇ ಆವರಿಸಿ, ಬೆಳಕನ್ನು ತನ್ನೊಳಗೇ ಬಂಧಿಸಿಟ್ಟಿದೆ. ಸುತ್ತಲೂ ಕತ್ತಲು...

ಗಾಳಿಯಲ್ಲಿ ತೇಲುತ್ತಿರುವ ಅನುಭವ. ಅಂದರೆ ಕಾರು ಚಲಾಯಿಸುವ ಕಾರ್ಯದಲ್ಲಿ ಮಗ್ನನಾಗಿದ್ದೆ ಎಂದರ್ಥ. ಅದೊಂದು ಹೊಂಡ-ಗುಂಡಿ ತುಂಬಿರುವ ರಸ್ತೆ. ಸ್ವಲ್ಪ ಉತ್ತಮವಾದ ಡಾಂಬರ್ ಹಾದಿ, ನಂತರ ಮಧ್ಯೆ ಮಧ್ಯೆ ರೋಡ್ ಅನ್ನುವುದು ಮರೆಯಾಗಿ, ಹೊಂಡ ಗುಂಡಿಗಳು ಉದಯಿಸಿ ಬಹಳ ವರ್ಷಗಳೇ ಆಗಿದ್ದವು.

ಸುಮಾರು ಹದಿನೆಂಟು ಕಿ.ಮಿ.ನ ಆ ದಾರಿಯಲ್ಲಿ, ನಾನು ನನ್ನ ಲೋಕದಲ್ಲಿ ತೇಲುತ್ತಾ, ಪಯಣಿಸುತ್ತಾ ಇದ್ದೇನೆ. ಮನೆಗೆ ಬಂದಿದ್ದ ಅಜ್ಜ, ಅಂದರೆ ಅಮ್ಮನ ಅಪ್ಪನನ್ನು ಅವರ ಊರಿಗೆ ಬಿಡುವ ಸಲುವಾಗಿ, ಸಂಜೆ ಸುಮಾರು 6 ರ ಹೊತ್ತಿಗೆ ಮನೆಯಿಂದ ಇದೇ ದಾರಿಯಲ್ಲಿ ಹೊರಟಿದ್ದೆ. ಅಜ್ಜನನ್ನು ಊರಿಗೆ ಬಿಟ್ಟು ಅಲ್ಲಿಂದ ಹೊರಡುವುದು ಸ್ವಲ್ಪ ತಡವಾಯಿತು. ಸ್ವಲ್ಪ ಅಲ್ಲ, ತುಂಬಾನೆ. ಅದಾಗಲೇ ಮನೆಯಿಂದ ಕಾಲ್ ಮಾಡಿ, ಇವತ್ತು ಬೇಡ ನಾಳೆ ಬೆಳಗ್ಗೆ ಬಾ ಎಂದು ತಂದೆ ಬೈದು ಹೇಳಿದ್ದರು. ನಾನೂ ಒಪ್ಪಿಕೊಂಡಿದ್ದೆ.

ನಮ್ಮ ಮನೆಯ ದಾರಿಯಲ್ಲೇ ನನ್ನ ಆತ್ಮೀಯ ಗೆಳೆಯನ ಮನೆ ಇದೆ. ಆತ ನನ್ನನ್ನು ಅಲ್ಲಿಗೆ ಬರಲು ಆಹ್ವಾನಿಸಿದ್ದ. ಆತನ ಮಾತಿಗೆ ಕಟ್ಟುಬಿದ್ದು ಒಪ್ಪಿಕೊಂಡಿದ್ದೆ. ಸುಮಾರು 11:30 ಆಗಿತ್ತು. ಅಜ್ಜನ ಮನೆಯಿಂದ ಹೊರಟಿದ್ದೆ. ಅಜ್ಜನ ಮನೆಯಲ್ಲಿ ಅವರು ಒಬ್ಬರೇ ಇದ್ದ ಕಾರಣ, ರಾತ್ರಿ ಹೊರಡುವುದು ಬೇಡ ಎಂದು ನನ್ನನ್ನು ತಡೆಯಲು ಯಾರೂ ಇರಲಿಲ್ಲ.

ಭಯ, ದೆವ್ವ, ಭೂತ ಇದ್ಯಾವುದೂ ನನಗೆ ಆಗ ನೆನಪಿಗೆ ಬರಲೇ ಇಲ್ಲ. ಕಾಲೇಜ್ ರಜೆಯ ಕಾರಣ ಮನೆಗೆ ಬಂದಿದ್ದರಿಂದ, ತುಸು ಹೆಚ್ಚೇ ಉತ್ಸಾಹದಲ್ಲಿದ್ದೆ. ಚಂದದ ಗಾಳಿ, ಸ್ವಲ್ಪ ಚಳಿ...... ಹೀಗೆ ನಾನು ನನ್ನ ಹಾದಿಯನ್ನು ಹಿಡಿದಿದ್ದೆ.

ಇದು, ನಾನು ಈ ಹೊತ್ತಿಗೆ ತಂಗಾಳಿಯಲ್ಲಿ ವೇಗವಾಗಿ ಬರಲು ಕಾರಣ. ಸುಮಾರು ಎಂಟು ಕಿ.ಮಿ. ಬಂದಿದ್ದೇನೆ. ಇದು ಯಾವುದೇ ಕಾಡು ಆಗಿರಲಿಲ್ಲ, ಬದಲಿಗೆ ಎಲ್ಲೋ ಕೆಲವು ಕಡೆ ಒಂದೆರಡು ಮನೆ, ಅಂಗಡಿ ಮತ್ತೆ ನಂತರ ಜನರು ಕಾಣಸಿಗದ ಹಾದಿ, ಹೀಗೆ... ದಾರಿಯಲ್ಲಿ ಸಿಗುತ್ತಾ ಇದೆ. ಗೆಳೆಯನ ಮನೆಯಲ್ಲಿ ನಾಳೆ ದಿನ ಅವನ ಅಕ್ಕನ ಮದುವೆ ಸಂಭ್ರಮ. ಅವನು ಬ್ಯುಸಿ, ಜೊತೆಗೆ ನನ್ನ ಬರುವಿಕೆಗೆ ಕಾಯುತ್ತಿದ್ದ. ಕಾರಲ್ಲಿ ಜೋರಾಗಿ ಹಾಡುಗಳನ್ನ ಹಾಕಿಕೊಂಡು ಬರುತ್ತಿದ್ದ ನನಗೆ, ಒಮ್ಮೆಲೇ ಕಾರ್ ಲೈಟ್ ಆಫ್, ಏನು ಆಗುತ್ತಿದೆ ಎಂದು ತಿಳಿಯುವುದರ ಒಳಗೇ ಲೈಟ್ ಆನ್. ಮುಂದೆ ನೋಡಿದೆ, ಕಾರು ರಸ್ತೆಯ ಬದೀಯಲ್ಲಿ ಚಲಿಸುತ್ತಿದೆ. ನಾನು ಅಷ್ಟೇನು ತಲೆಕೆಡಿಸಿಕೊಳ್ಳದೇ ಮುಂದುವರಿದೆ.

ಒಮ್ಮೆ ಅನಿಸಿತು. ಬರುವಾಗ ಸಿಕ್ಕ ಹೊಂಡ-ಗುಂಡಿಗಳು, ಹಾಗೆಯೇ ಈಗ ಸಿಗುತ್ತಿರುವ ಗುಂಡಿಗಳಿಗೂ, ಎಲ್ಲೋ ಬದಲಾದಂತೆ ಭಾಸವಾಯಿತು. ಇದೇ ವೇಳೆ ಮನಸ್ಸು ಸ್ವಲ್ಪ ಹಗುರವೆನಿಸಿತು, ಕಾರಣ ಮುಂದೆ ದೂರದಲ್ಲಿ ಯಾವುದೋ ಗಾಡಿಯ ಬೆಳಕು ನೋಡಿದೆ. ಅದು ನನ್ನ ಕಡೆಯೇ ಬರುತ್ತಿದೆ. ಇನ್ನೇನೂ ನನಗೆ ಗುದ್ದೇ ಬಿಟ್ಟಿತು ಅನ್ನುವಷ್ಟರಲ್ಲಿಯೇ ಲೈಟ್ ಆಫ್, ಆನ್.. ಮುಂದಿದ್ದ ಗಾಡಿಯೇ ಇರಲಿಲ್ಲ. ಭಯ ಅನ್ನುವುದು ನನ್ನನ್ನು ಗಾಢವಾಗಿ ಆವರಿಸಿತು. ಸ್ಟೀರಿಂಗ್ ಮೇಲಿದ್ದ ನನ್ನ ಕೈ ನಡುಗಲು ಆರಂಭಿಸಿದವು. ಒಮ್ಮೆಲೇ ಕಾರಿನ ಹಿಂಬದಿ ಸೀಟುಗಳನ್ನೆಲ್ಲಾ ನೋಡಿದೆ. ಹೇಗೋ ಒದ್ದಾಡಿ ಎಲ್ಲಾ ಗ್ಲಾಸ್ಗಳನ್ನು ಹಾಕಿ ಲಾಕ್ ಮಾಡಿದೆ. ಆದರೆ ನನ್ನ ಬದಿಯಿದ್ದ ಗ್ಲಾಸ್ ಮಾತ್ರ ಏನೇ ಮಾಡಿದರೂ ಮೇಲೆ ಬರಲೇ ಇಲ್ಲ. ಅಮ್ಮ ಹೇಳಿದ್ದ ಮಾತು ನೆನಪಾಯಿತು, "ಇಂದು ಅಮವಾಸ್ಯೆ, ರಾತ್ರಿ ಹೊರಡಬೇಡ" ಎಂದಿದ್ದರು.

ತಂಗಾಳಿಯ ರಭಸ ಹೆಚ್ಚಾಯ್ತು. ತಟ್ಟನೇ ಹಾಡೂ ಕೂಡ ನಿಂತೋಯ್ತು. ಹೆದರಿ ಓಡುವಷ್ಟು ಭಯ, ಆದರೆ ಕಾರ್ ಬಿಟ್ಟು ಇಳಿಯಲು ತೋಚದೇ ಕಾರಿನ ರಭಸ ಹೆಚ್ಚಿಸಿದೆ. ರಸ್ತೆ ಪಕ್ಕದಲ್ಲಿ ಒಬ್ಬರು ನಡೆಯುವುದು ಕಂಡು, ಸ್ವಲ್ಪ ಮುಂದೆ ಹೋಗಿ ತಟ್ಟನೇ ಗಾಡಿ ನಿಲ್ಲಿಸಿದೆ. ನೋಡಿದರೆ ಆ ಮನುಷ್ಯ ಮತ್ತೆ ನನ್ನ ಮುಂದೆಯೇ ಕಂಡ. ಹೆದರಿ ಮತ್ತೆ ಪಟ್ಟನೇ ಕಾರ್ ವೇಗ ಹೆಚ್ಚಿಸಿದೆ. ಆದರೆ ಆತನೂ ನನ್ನ ಜೊತೆಯೇ ಮುಂದೆ ಮುಂದೆ ಹೋಗುತ್ತಿರುವುದನ್ನು ನೋಡುತ್ತಾ, ಹಾದಿಯಲ್ಲಿದ್ದ ಹೊಂಡ-ಗುಂಡಿಗಳನ್ನು ಲೆಕ್ಕಿಸದೇ ಮುಂದೆ ನಡೆದೆ. ನನ್ನ ಮೈಯಲ್ಲಾ ನಡುಗಿ, ತಂಗಾಳಿಯ ಅನುಭವ ಬಿಡಿ, ಉಸಿರಾಟಕ್ಕೂ ಗಾಳಿ ಇಲ್ಲದ ಹಾಗೆ ಆಯಿತು. ಕಕ್ಕಾಬಿಕ್ಕಿ ಆದೆ. ಜರ್ಜರಿತ ನಾದೆ. ಗಾಡಿ ಒಮ್ಮೆಲೆ ನಿದಾನ ನಿದಾನವಾಗಿ ನಿಂತೆಯೇ ಬಿಟ್ಟಿತು. ಕೀ ಎಷ್ಟೇ ತಿರುವುದರೂ ಸ್ಟಾರ್ಟ್ ಆಗಲೇ ಇಲ್ಲ. ನಿಂತ್ತಿದ್ದ ಹಾಡು ಜೋರಾಗಿ ಶುರುವಾಯಿತು. ನಾ ಕೇಳಿರದ ಹಾಡುಗಳು ಬರಲಾರಂಭಿಸಿದವು. ಭಯದ ನಡುವೆಯೇ ನೆನಪಾಯಿತು, ಸ್ವಿಚ್ ಅನ್ನು ಗ್ಯಾಸ್ ನಿಂದ ಪೆಟ್ರೋಲ್ ಕಡೆ ಮಾಡಿ, ಹೇಗೊ ಗಾಡಿ ಮುಂದೆ ಸಾಗಿತು. ಹಿಂದಿಂದ ಆಟೋ ಒಂದು ವೇಗವಾಗಿ ಬಂದು ನನ್ನ ವೇಗವನ್ನೇ ಮೀರಿಸಿ ಮುಂದೆ ಹೋಯಿತು. ಆ ಕೂಡಲೇ ಅದು ನನ್ನ ಕಾರ್ ಗೆ ಅಡ್ಡಲಾಗಿ, ತುಂಬಾ ನಿದಾನವಾಗಿ ಚಲಿಸತೊಡಗಿದೆ. ನನಗೆ ಏನೂ ತೋಚದೆ ಸುಮ್ಮನೆ ಚೀರುತ್ತಾ ಕಣ್ಣು ಮುಚ್ಚಿ ಕೂತೆ. ಗಾಡಿ ಅದರ ಪಾಡಿಗೆ ಮುಂದೆ ಹೋಗುತ್ತಲೇ ಇದೆ..

ನಾನು ಹೆದರಿ ಹೆದರಿ, ನೆನಪು ಮಾಡಿಕೊಳ್ಳದ ದೇವರೇ ಇಲ್ಲ. ಇವತ್ತು ನನ್ನ ಜೀವನದ ಕೊನೆಯ ದಿನ, ಕೊನೆಯ ಪಯಣ, ಕೊನೆಯ ರಾತ್ರಿ ಅಂತೆಲ್ಲಾ ಎಂದೆನಿಸಿತು. ಮತ್ತೆ ನನ್ನ ಕಾರ್ ನ ಲೈಟ್ ಹೋಗಿದೆ. ನಾನು ಎಲ್ಲಿದ್ದೇನೆ ಅನ್ನುವುದನ್ನೂ ತಿಳಿಯಲಾರದಷ್ಟು ಕತ್ತಲು ನನ್ನ ಸುತ್ತುವರಿದಿದೆ. ನಾನು ಯಾವುದೇ ನಿರ್ಧಾರ ಮಾಡುವ ಮಾರ್ಗವೇ ಅಲ್ಲಿರಲಿಲ್ಲ. ನನ್ನ ಮುಂದೆ ಏನೇನೋ ಆಗುತ್ತಾ ಇದ್ದರೂ ನಾನು ಮಾತ್ರ ಮೂಕವಿಸ್ಮಿತ ನಾಗಿ ಹೋದೆ. ಪಕ್ಕದಲ್ಲೇ ಏನೋ ಶಬ್ದ ಕೇಳಿ ಕುಂಟು ಬಿದ್ದೆ. ನಿದಾನವಾಗಿ ತಿಳಿಯಿತು, ಇದು ನನ್ನ ಮೊಬೈಲ್ ರಿಂಗ್ ಟೋನ್ ಎಂದು. ಪಕ್ಕದ ಸೀಟ್ ನಲ್ಲಿದ್ದ ಮೊಬೈಲ್ ನೋಡಿದೆ. ಗೆಳೆಯನ ಚಿತ್ರ ಕಾಣಿಸಿತು. ಇದೇ ಸಮಯದಲ್ಲಿ ಕಾರಿನ ಲೈಟ್ ಆನ್ ಆಯಿತು. ಸುತ್ತಲೂ ನೋಡಿದೆ. ಒಂದು ಹಳ್ಳಿಯಲ್ಲಿ ಇದ್ದೇನೆ ಅನ್ನುವುದು ತಿಳಿಯಿತು. ನಾಲ್ಕೈದು ಮನೆ ಹಾಗೆಯೇ ಒಂದೆರಡು ಮುಚ್ಚಿದ ಅಂಗಡಿಗಳು ಕಂಡವು. ಮನೆಗಳೆಲ್ಲವೂ ಮನೆಯವರ ಜೊತೆಗೇ ಶಾಂತವಾಗಿ ನಿದ್ರಿಸುತ್ತಾ ಇವೆ. ನಾಯಿಗಳೆಲ್ಲವೂ ಒಂದೇ ಸಮನೆ ಕೂಗುತ್ತಾ, ನನ್ನ ಕಾರ್ ಸುತ್ತಾ ಸುತ್ತಲಾರಂಭಿಸಿದವು. ಈ ಎಲ್ಲಾ ವಿಚಿತ್ರ ಭಯಾನಕಗಳ ನಡುವೆ ನನ್ನ ಗೆಳೆಯ ಕಾಲ್ ಮಾಡಿದ್ದು ಮರೆತೇ ಹೋಯಿತು.

ಭಯದಲ್ಲಿ ಸಾಕಷ್ಟು ಬೆದರಿ, ನಡುಗಿದ್ದರಿಂದ, ಕೂಡಲೇ ನನಗರಿವಿಲ್ಲದೇ ಪಕ್ಕದ ಸೀಟ್ ಮೇಲೆಯೇ ಕುಸಿದು ಹೋದೆ........

ಎಚ್ಚರ ವೆನಿಸಿ ಕಣ್ಣು ಬಿಡುವ ಮೊದಲೇ ರಾತ್ರಿ ಆದದೆಲ್ಲಾ ನೆನೆದು ಮೈ ಜುಮ್ ಎನಿಸಿತು. ನಿದಾನವಾಗಿ ಕಣ್ಣಗಳಿಸಿ ನೋಡಿದೆ, ನನ್ನ ಕಾರ್ ಮುಂದೆ ಸಾಗಿದೆ. ಸಮಯ ನೋಡಿದೆ, ಬೆಳಗ್ಗಿನ ಜಾವ 6 ಆಗಿದೆ. ಪಕ್ಕದಲ್ಲಿ ನನ್ನ ಗೆಳೆಯ ಕಾರ್ ಸ್ಟೀರಿಂಗ್ ಹಿಡಿತು ಕೂತಿದ್ದಾನೆ. ಹಿಂಬದಿಯಲ್ಲಿ ಒಂದೆರಡು ಬೈಕ್, ಜೊತೆಗೇ ಅವನ ಕಾರ್ ಕೂಡ ಬರುತ್ತಿದೆ. ಅವನು ಮತ್ತವನ ಸ್ನೇಹಿತರು ರಾತ್ರಿ ನಾನು ಬರದೆ ಇರುವುದರ ಕಾರಣ ನನ್ನ ಅರಸಿ ಬಂದಿದ್ದರು. ಪಕ್ಕದಲ್ಲಿದ್ದ ಅವನನ್ನು ನಾನು ಏನೂ ಕೇಳಲಿಲ್ಲ. ಮನಸ್ಸಿನಲ್ಲಿ ಅವನ ನೆನೆದು, ಹಾಗೆಯೇ ನಿದ್ರೆಗೆ ಜಾರಿದೆ........

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.