ಜೀವನದಲ್ಲಿ ಒಂದು ಕೆಲಸ ಇರಬೇಕು. ಕೆಲಸಕ್ಕೆ ತಕ್ಕ ಸಂಬಳ ಇರಬೇಕು. ಜೀವನ ಸಂಗಾತಿ ಜೊತೆ ಹಾಯಾಗಿ ಕಾಲಕಳೆಯಬೇಕು. ಒಟ್ಟಿನಲ್ಲಿ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುತ್ತಾ ಜನರಿಂದ ಭೇಷ್ ಅನ್ನಿಸಿಕೊಳ್ಳಬೇಕು ಅಂಥ ಎಲ್ಲರಿಗೂ ಅನ್ನಿಸುತ್ತೆ! ಆದರೆ ನಮ್ಮ ನಡುವೆ ಇರುವ ಅದೆಷ್ಟೋ ಜನರು ಕಠಿಣ ಕೆಲಸಗಳನ್ನು ಮಾಡುತ್ತಿದ್ದಾರೆ. ಎರಡು ಹೊತ್ತಿನ ಊಟಕ್ಕಾಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗುವ ಸೂಚನೆಗಳು ಕಂಡು ಬರುತ್ತಿವೆ. ಇದರ ಬೆನ್ನಲ್ಲೇ ವಯಸ್ಸಾದ ಹಿರಿಯರು ತಮ್ಮ ಮಕ್ಕಳು ಮನೆಯಿಂದ ಹಾಕಿದಾಗ ಅವರಿಗೆ ಈ ಜಗತ್ತೇ ಬೇಡವೆಂದು ಅನ್ನಿಸುತ್ತದೆ..!

ಮೊನ್ನೆ ವರದಿ ಮಾಡಲು ಹುಬ್ಬಳ್ಳಿಯ ಗಲ್ಲಿಯೊಂದರಲ್ಲಿ ಹಾಗೆ ಸಂಚರಿಸುತ್ತಿದ್ದೆ. ರಸ್ತೆಯ ಸಂಧಿಯಲ್ಲಿ ವಯಸ್ಸಾದ ಮುದುಕರೊಬ್ಬರು ತಮ್ಮ ಹೆಗಲಿಗೆ ಕೈ ಗಾಡಿ ಕಟ್ಟಿಕೊಂಡಿದ್ದರು. ಆ ಗಾಡಿಯಲ್ಲಿ ಕಿರಾಣಿ ಅಂಗಡಿಯ ಸಾಮಾನುಗಳನ್ನು ಹೇರಲಾಗಿತ್ತು. ಒಂದೆಡೆಯಿಂದ ಹಾಗೆ ಕಣ್ಣು ಹಾಯಿಸಿದೆ. ಸುಮಾರು ಹತ್ತಕ್ಕಿಂತ ಹೆಚ್ಚಿನ ಮೂಟೆಗಳು ಆ ಗಾಡಿಯಲ್ಲಿದ್ದವು. ಆ ವಯಸ್ಸಾದ ಮುದುಕ ಒಂದೇ ಸಮನೆ ಏದುಸಿರು ಬಿಡುತ್ತಾ ಗಾಡಿಯನ್ನು ಎಳೆಯುತ್ತಿದ್ದರು. ಆ ದೃಶ್ಯವನ್ನು ಯಾಕಾದರೂ ನೋಡಿದೆ ಎಂಬ ಮರುಕ ಭಾವನೆ ನನ್ನಲ್ಲಿ ಹುಟ್ಟಿತ್ತು.

ಎರಡು ನಿಮಿಷಗಳ ಕಾಲ ಅವರನ್ನು ನೋಡಿದೆ. ಬಡಕಲು ದೇಹ, ನೀಳಗಣ್ಣುಗಳು, ಕುರುಚಲು ಕೂದಲು, ನೋಡಲು ಬಹಳ ವಿಕಾರವಾಗಿ ಕಾಣುತ್ತಿದ್ದರು. ಅವರು ಧರಿಸಿದ ಬಟ್ಟೆಗಳನ್ನು ನೋಡಿದರೆ ಸುತ್ತಲೂ ಹರಿದು ಹೋಗಿ, ತುಂಬಾ ಕೊಳಕಾಗಿ ಕಾಣುತ್ತಿತ್ತು. ಇಂತಹ ಜನರು ನಮ್ಮ ನಡುವೆ ಇನ್ನೂ ಇದ್ದಾರಾ ಎಂಬ ಪ್ರಶ್ನೆ ಮೂಡಿದ್ದಂತೂ ನಿಜ. ಅಷ್ಟರಮಟ್ಟಿಗೆ ಅವರ ಸೊರಗಿ ಸುಣ್ಣವಾಗಿದ್ದರು. ಏನು ಇವರ ಕಥೆಯಂದು ಹಿಂಬಾಸುತ್ತಾ ಹೋದೆ. ಸರಿ ಸುಮಾರು ಒಂದು ಕಿಮೀ ತನಕ ನಾನು ನಡೆದೆ. ಅವರು ಸಾಮಾನು ಕೊಡುವ ಕಿರಾಣಿ ಅಂಗಡಿ ಬರಲಿಲ್ಲ. ಇನ್ನು ಸ್ವಲ್ಪ ದೂರ ಇರಬಹುದು ಎಂದುಕೊಂಡು ಹೆಜ್ಜೆ ಹಾಕಿದೆ. ಸದ್ಯ ಒಂದು ಅಂಗಡಿಯ ಮುಂದೆ ಗಾಡಿಯನ್ನು ನಿಲ್ಲಿಸಿದರು. ಅಂಗಡಿ ಮಾಲೀಕರೊಬ್ಬರು ಬಂದು ಅಂಗಡಿಯ ಸಾಮಾನುಗಳನ್ನು ಇಳಿಸಿ ಎಂದರು. ಮುದುಕ ಅಂಗಡಿಯ ಸಾಮಾನುಗಳನ್ನು ಒಂದೊಂದಾಗಿ ಗಾಡಿ ಇಳಿಸಿ, ಅಂಗಡಿಯೊಳಗೆ ಇಡಲು ಮುಂದಾದರು. ಅಶಕ್ತರಾಗಿದ್ದ ಮುದುಕ ಆ ಮೂಟೆಗಳನ್ನು ಎತ್ತಲು ಸಾಕಷ್ಟು ಪರದಾಡುತ್ತಿದ್ದರು. ಈ ವೇಳೆಯಲ್ಲಿ ಅವರು ಅನಾಯಾಸವಾಗಿ ಬಳಲಿ ಬೆಂಡಾಗುತ್ತಿದ್ದರು. ಈ ನಡುವೆಯೇ ಅವರಿಗೆ ಬಾಯಾರಿಕೆಯಿಂದ ಗಂಟಲು ಒಣಗಿದ ಹಾಗೆ ಕಾಣುತ್ತಿತ್ತು. ಆದರೂ ಸಹ ಮುದುಕ ತಮ್ಮ ಕಾಯಕದಲ್ಲಿ ನಿರತರಾಗಿ ಬಿಟ್ಟಿದ್ದರು. ಅಂಗಡಿಯ ಮಾಲೀಕ ಮುಂದೆ ಬಂದರು. ಆ ನಂತರ ತಮ್ಮ ಜೇಬಿನಿಂದ ಇಪ್ಪತ್ತು ರೂಪಾಯಿ ನೋಟು ತೆಗೆದು ಕೊಟ್ಟರು. ಆ ಇಪ್ಪತ್ತು ರೂಪಾಯಿ ನೋಟುನ್ನು ಆ ಮುದುಕ ಪೀಳಿ ಪಿಳಿ ಕಣ್ಣು ಮಿಟುಕಿಸಿ ನೋಡ ತೊಡಗಿದರು!

ಮತ್ತೆ ಗಾಡಿಯನ್ನು ಎಳೆಯಲು ಮುಂದಾದರು. ಯಾಕೆಂದರೆ ಗಾಡಿಯಲ್ಲಿ ಇನ್ನೂ ಸ್ವಲ್ಪ ವಸ್ತುಗಳು ಇದ್ದವು. ಅವನ್ನು ಬೇರೆ ಅಂಗಡಿಗೆ ಸಲ್ಲಿಸಬೇಕಾದ ಹಿನ್ನಲೆಯಲ್ಲಿ ಗಾಡಿಯನ್ನು ಎಳೆಯಲು ಮುಂದಾಗುತ್ತಿದ್ದರು. ನಾನು ಅವರು ಹೊರಟಿದ್ದ ಹಾದಿಯನ್ನು ಕ್ರಮಿಸಲು ಮುಂದಾದೆ. ಈ ನಡುವೆ ಅವಾಂತರ ಒಂದು ನಡೆದೆ ಹೋಯಿತು. ಒಬ್ಬ ಆಟೋ ಚಾಲಕ ಅವಸರವಾಗಿ ಬಂದು ಮುದುಕನ ಗಾಡಿಗೆ ಡಿಕ್ಕಿ ಹೊಡೆದು ಬಿಟ್ಟ! ಅಷ್ಟರಲ್ಲಿ ಅಕ್ಕಪಕ್ಕದ ಜನರು ಸೇರಿ ಮುದುಕನನ್ನು ಬೈಯಲು ಮುಂದಾದರು. ಆಟೋ ಡ್ರೈವರ್ ಆ ಮುದಕನಿಗೆ ಬೈದು ಮತ್ತೆ ಆಟೋ ಏರಿ ಅವಸರದಿಂದ ಹೊರಟು ಹೋದ. ನಿಜವಾಗಿಯೂ ತಪ್ಪು ಆಟೋದವನು ಮಾಡಿದ್ದರೂ ಸಹ ಆ ಮುದುಕ ಎಲ್ಲರಿಂದಲೂ ಬೈಯಿಸಿಕೊಂಡರು. ಯಾಕೆಂದರೆ ಬಲಿಷ್ಟವಾಗಿದ್ದ ಆಟೋ ಡ್ರೈವರ್. ಅದರೆ ಮುದುಕ ಮಾತ್ರ ಬಡಕಲು ಹಾಗೂ ಅಶಕ್ತಿಯಿಂದ ಕೂಡಿದವರು. ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವ ಗುಣ ಅವರಲ್ಲಿತ್ತು. ಸ್ವಲ್ಪ ಏಟುಗಳು ಬಿದ್ದಿದ್ದರು ಸಹ ಏನು ಆಗಿಲ್ಲ ಎಂದುಕೊಂಡು ಸುಮ್ಮನಾಗಿದ್ದರು. ಅಂತಹ ವ್ಯಕ್ತಿತ್ವವನ್ನು ಅವರಲ್ಲಿ ಕಂಡೆ.

ಅದೇ ನೋವಿನಲ್ಲಿ ಗಾಡಿಯನ್ನು ತಳ್ಳಿಕೊಂಡು ಹೊರಟರು. ಹತ್ತಿರದಲ್ಲಿ ಇದ್ದ ಅಂಗಡಿಗೆ ಸಾಮಾನುಗಳನ್ನು ಇಳಿಸಿದರು. ಅಂಗಡಿಯಾತ ಹಣ ಕೊಟ್ಟನು. ಪಕ್ಕದ ಸರ್ಕಲ್ ಬಳಿ ಗಾಡಿಯನ್ನು ನಿಲ್ಲಿಸಿದರು. ಅದರ ಪಕ್ಕದಲ್ಲಿ ಒಂದು ಸಣ್ಣ ಮನೆಯಲ್ಲಿ ಒಳ ಹೋದರು. ಅವರದೇ ಮನೆ ಇರಬಹುದು ಎಂದುಕೊಂಡೆ, ಆದರೂ ಖಚಿತ ಪಡಿಸಿಕೊಳ್ಳಲು ಅಂಗಡಿಯಲ್ಲಿ ವಿಚಾರಿಸಿದೆ. ಅವರ ಮನೆಯ ಬಳಿ ಹೋದೆ, ವಯಸ್ಸಾದ ಅಜ್ಜಿ ಹೊರಗೆ ಬಂದರು. ಏನು ಬೇಕು ಎಂದು ಕೇಳಿದರು. ಏನು ಇಲ್ಲ ಆದರೆ ಅಜ್ಜ ಅವರನ್ನು ಮಾತನಾಡಿಸಬೇಕಿತ್ತು ಅಂದೆ. ಅಜ್ಜಿ ಖುಷಿಯಿಂದ ಒಳ ನಡೆದಳು. ಮುದುಕ ಬಂದು ಏನು ಬೇಕು ಅಂದ. ಏನು ಇಲ್ಲ ನೀವು ಗಾಡಿ ತಳ್ಳಿಕೊಂಡು ಬಂದದ್ದನ್ನು ನೋಡಿ, ಹಾಗೆ ಮಾತನಾಡಿಕೊಂಡು ಹೋದರಾಯಿತು ಎಂದೆ. ಅಜ್ಜ ನೀವು ಯಾಕೆ ಈ ಕೆಲಸ ಮಾಡುತ್ತಿದ್ದೀರಾ ಎಂದೆ. ನಿಮಗೆ ಮಕ್ಕಳು, ಮೊಮ್ಮಕ್ಕಳು ಯಾರು ಇಲ್ವಾ ಅಂದೆ? ಎಲ್ಲರೂ ಇದ್ದು ಇಲ್ಲದಂತೆ ಬಾಳುತ್ತಿದ್ದೇವೆ ಅಂದರು. ನಮಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆಸ್ತಿಯ ವಿಚಾರವಾಗಿ ಇಬ್ಬರೂ ಜಗಳ ಮಾಡಿದ್ದಾರೆ. ಹೀಗಾಗಿ ನಮ್ಮನ್ನು ಮನೆಯಿಂದ ಹೊರ ಹಾಕಿದ್ದಾರೆ. ಈಗ ನಾವಿಬ್ಬರೂ ಮನೆ ಬಿಟ್ಟು ಐದಾರೂ ವರ್ಷಗಳೇ ಕಳೆದಿವೆ ಅನ್ನುತ್ತ ಕಣ್ಣೀರು ಹಾಕಿದರು. ಮುಪ್ಪಿನ ವಯಸ್ಸಿನಲ್ಲಿ ಮಕ್ಕಳು ನಮ್ಮನ್ನು ನೋಡಿಕೊಳ್ಳಲಿ ಎಂದು ಸಾಕಿದರೆ,ಹೀಗೆ ಮಾಡುತ್ತಾರೆ ಎಂದುಕೊಂಡಿರಲಿಲ್ಲ. ನಮ್ಮ ಕಥೆ ಕೇಳಿ ಏನು ಮಾಡ್ತೀರಿ ಹೊರಡಿ ಅಂದರು. ಆದರೆ ಅಜ್ಜಿಯನ್ನು ಗಮನಿಸಿದಾಗ ಮತ್ತೆ ಕೆಲಸಕ್ಕೆ ಕರೆಯಲು ಬಂದಿರಬಹುದು ಎಂದುಕೊಂಡಿದ್ದಳೋ ಏನು..!?

ತಂದೆ ತಾಯಿಗಳು ದೇವರ ಸಮಾನ.
ಆ ಜೀವಗಳಿಗೆ ಎಂದಿಗೂ ನೋವುಂಟು ಮಾಡದಿರಿ.

ಇಂತೀ ನಿಮ್ಮವ ...

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.