ಬದಲಾವಣೆ

ಕಾರಿನಲ್ಲಿ ಆಫೀಸಿಗೆ ಹೊರಟಿದ್ದೇನೆ. ಮನೆಯ ಮುಂದೆ, ಸುಮಾರು ಹನ್ನೆರಡು ಹದಿಮೂರರ ಹುಡುಗಿಯೊಬ್ಬಳು, ನಗುತ್ತಾ “ಅಂಕಲ್, ಬಾಯ್…” ಎನ್ನುತ್ತಾ ಕೈ ಬೀಸಿ ಹೋಗುತ್ತಾಳೆ

ಅಂದು, ೨೬.೧೧.೨೦೦೭ ಸಾಯಂಕಾಲ.

ಮನೆಯ ಮುಂದೆ ನನ್ನ ಹೊಸ ಫೋರ್ಡ್ ಫಿಯೇಸ್ಟಾ ನಿಂತಿದೆ. ನನ್ನ ಹೆಂಡತಿ, ಮಕ್ಕಳು ಮತ್ತು ಪಕ್ಕದ ಮನೆಯವರು ನಿಂತು ನಗುತ್ತಾ ಮಾತನಾಡುತ್ತಾ ಹೊಸ ಕಾರ್ ನೋಡುತ್ತಾ ನಿಂತಿದ್ದೇವೆ. ಭಟ್ಟರೊಬ್ಬರು ಪೂಜೆ ಮಾಡುತ್ತಿದ್ದಾರೆ. ದಾರಿ ಹೋಕರು ಕೆಲವರು ನಗುತ್ತಾ, ಕಾರು ನೋಡಿ ಮುಂದೆ ಹೋಗುತ್ತಿದ್ದರು. ರಸ್ತೆಯ ಮತ್ತೊಂದು ಬದಿಯಲ್ಲಿ ಒಂದು ಪುಟ್ಟ ಹುಡುಗಿ ನಿಂತು ನೋಡುತ್ತಿದ್ದಾಳೆ. ಆಕೆಯನ್ನು ಈ ಹಿಂದೆಯೂ ನೋಡಿದ್ದೆ. ಮನೆಯ ಮುಂದಿನ ಪಾರ್ಕ್ ನಲ್ಲಿ ಕೆಲವೊಮ್ಮೆ ತನ್ನಷ್ಟಕ್ಕೇ ಆಡುತ್ತಿರುತ್ತಾಳೆ. ಪ್ರಾಯಶಃ ಹತ್ತಿರದ ಗುಡಿಸಲಲ್ಲಿ (ಸ್ಲಂನಲ್ಲಿ) ಇರುವವಳು.

ಪೂಜೆ ಮುಗಿಯಿತು. ಎಲ್ಲರಿಗೂ ನನ್ನ ಹೆಂಡತಿ ಪೇಡಾ ಕೊಟ್ಟಳು. ನನ್ನ ಮಗಳು, ಆ ಐದಾರು ವರ್ಷದ ಪುಟ್ಟ ಹುಡುಗಿಯನ್ನು ಕರೆಯುತ್ತಾಳೆ. ಆಕೆಗೆ ಮಗಳು ಪೇಡಾ ಕೊಡುತ್ತಾಳೆ. ಮಗು ಕೈ ಮುಂದೆ ಮಾಡುತ್ತದೆ. ಕೊಳಕು ಕೈ. ನಾನು, ಮನೆಯ ಹೊರಗೆ ಇರುವ ನಳದಲ್ಲಿ, ಆಕೆಗೆ ಕೈ ತೊಳೆಯಲು ಹೇಳುತ್ತೇನೆ. ಕೈ ತೊಳೆದು, ತನ್ನ ಕೊಳಕು ಲಂಗದಲ್ಲಿ ಕೈ ಒರೆಸುತ್ತಾ ಕೈ ಮುಂದೆ ನೀಡುತ್ತಾಳೆ. ಮಗಳು ಆಕೆಗೆ ಪೇಡಾ ಕೊಡುತ್ತಾಳೆ. ಮಗು ಅದನ್ನು ತಿನ್ನದೆ, ಕಿಸೆಯಲ್ಲಿ ಇಟ್ಟುಕೊಳ್ಳುತ್ತಾಳೆ. ನನ್ನ ಹೆಂಡತಿ ಅದನ್ನು ತಿನ್ನಲು ಹೇಳುತ್ತಾಳೆ.

ಮಗು, “ಮನೆಯಲ್ಲಿ ಪಾಪು ಇದೆ. ಅದಕ್ಕೂ ಕೊಡುತ್ತೇನೆ” ಅನ್ನುತ್ತದೆ. ನಾನು ಆ ಮಗು ಹೇಳಿದ ಮಾತನ್ನು ಅರಗಿಸುವ ಮೊದಲು, ನನ್ನ ಹೆಂಡತಿಯ ಕಣ್ಣಂಚಿನಲ್ಲಿ ನೀರು.

“ಅದನ್ನು ನೀನು ತಿನ್ನು. ಪಾಪುವಿಗೆ ಬೇರೆ ಕುಡುವೆ” ಅನ್ನುತ್ತಾಳೆ ನನ್ನಾಕೆ. ಒಂದು ಕಾಗದದಲ್ಲಿ ಎರಡು ಪೇಡಾ ಆಕೆಯ ಕೈಯಲ್ಲಿ ನೀಡುತ್ತಾಳೆ. ಯಾವಾಗಲೂ ನನ್ನ ತಲೆ ತಿನ್ನುವ ಹೆಂಡತಿಯ ಇನ್ನೊಂದು ಮುಖದ ಪರಿಚಯ ಆಗುತ್ತದೆ.

“ಅಂಕಲ್, ನಾನು ಇದನ್ನು ಮುಟ್ಟಲೇ…?”

ಒಪ್ಪಿಗೆ ಕೊಡುತ್ತೇನೆ. ಆಕೆ, ಮೃದುವಾಗಿ ಕಾರನ್ನು ಸವರುತ್ತಾಳೆ. ಆಕೆಯ ಕಣ್ಣು ಮಿನುಗುತ್ತಿದೆ. ಯಾವುದೋ ಧನ್ಯತೆಯ ಭಾವ.

“ನೀನು ಶಾಲೆಗೆ ಹೋಗುತ್ತೀಯಾ?”

“ಇಲ್ಲ ಅಂಕಲ್.”

“ಯಾಕೆ?”

“ಅಪ್ಪ ಇಲ್ಲ ಅನ್ನುತ್ತೆ.”

ಅವರ ಬಡತನ ನೆನೆದು, “ನೀನು ಶಾಲೆಗೆ ಹೋಗು. ನಾನು ಹಣ ಕೊಡುತ್ತೇನೆ. ಅಪ್ಪನಿಗೆ ಹೇಳು” ಅಂದೆ.

ಮಗು ತಲೆ ಅಲ್ಲಾಡಿಸಿ ಓಡುತ್ತದೆ...

ರಾತ್ರಿ ಹೆಂಡತಿ ಪುನಹ ತಲೆ ತಿನ್ನುತ್ತಾಳೆ, ನನಗೆ ಹಣ ಹೆಚ್ಚಾಗಿದೆ, ನಾನೊಬ್ಬ ಗಾಂಧಿ…..ಅಬ್ಬಬ್ಬ ಕೊನೆ ಇಲ್ಲ.

ನನಗೋ ಸಮಾಜಕ್ಕೆ ಒಂದು ಅಳಿಲು ಸೇವೆ ಮಾಡಿದ ಭಾವನೆ.

ರಾತ್ರಿ, ಯಾರೋ ಗೇಟಿನ ಬಳಿ ಸದ್ದು ಮಾಡಿದ ಅನುಭವ. ಬಾಗಿಲು ತೆರೆದು ಹೊರ ಬರುತ್ತೇನೆ. ಒಬ್ಬ ಕುಡುಕ. ತೆಲುಗು ಮಿಶ್ರಿತ ಕನ್ನಡದಲ್ಲಿ ಏನೇನೋ ಕೆಟ್ಟ ಬೈಗಳ ಸುರಿಮಳೆ. ಅರ್ಧ ಅರ್ಥವಾಗುತ್ತದೆ. ಒಬ್ಬ ದಪ್ಪದ ಹೆಂಗಸು ಬರುತ್ತಾಳೆ. ಆತನ ಹೆಂಡತಿ ಇರಬಹುದು. ಆತನ ಕಾಲರ್ ಹಿಡಿದು, ಆತನನ್ನು ಎಳೆದುಕೊಂಡು ಹೋಗುತ್ತಾಳೆ.

ಪುನಹ ಹೆಂಡತಿಯ ಕಿರಿಕಿರಿ. “ನಿಮ್ಮ ಸಮಾಜ ಸೇವೆಗೆ ಸಿಕ್ಕ ಬಹುಮಾನ ಸಾಕೆ?” ಅನ್ನುವ ವ್ಯಂಗ್ಯ ಮಾತನ್ನು ಹೇಳುತ್ತಾಳೆ.

*

ಬೆಳಿಗ್ಗೆ. ಯಾರೋ ಕರೆ ಘಂಟೆ ಒತ್ತಿದ ಸದ್ದು. ಯಾರಪ್ಪ, ಇಷ್ಟು ಬೇಗ ಅಂದುಕೊಳ್ಳುತ್ತಾ, ಮಹಡಿಯಿಂದ ಕೆಳ ಬರುತ್ತೇನೆ. ಬಾಗಿಲು ತೆರೆದೆ. ನಿನ್ನೆ ರಾತ್ರಿ ಗಲಾಟೆ ಮಾಡಿದವ, ಆತನ ಹೆಂಡತಿಯ ಜೊತೆ. ಇಬ್ಬರೂ ಕೈ ಮುಗಿದು ನಿಂತಿದ್ದಾರೆ.

ಕುಡುಕ, “ನನ್ನದು ತಪ್ಪಾಯಿತು ಸ್ವಾಮಿ.”

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.