ಸೋತು ಗೆದ್ದವನು

ನಾನು ಸೂರನ್ನು ದಿಟ್ಟಿಸಿ ನೋಡುತ್ತಾ ಮಲಗಿದ್ದೆ. ನನ್ನ ಚಿತ್ತಪರದೆಯ ಮೇಲೆ ಹಳೆಯ ನೆನಪುಗಳ ಚಿತ್ರಗಳು ಮೂಡಲಾರಂಭಿಸಿದವು. ಅಂದು ಸಿ ಇ ಟಿ ಯಲ್ಲಿ ೧೦೦ನೇ ಸ್ಥಾನ ಪಡೆದು ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗಕ್ಕೆ ಸೇರ್ಪಡೆಯಾಗಿದ್ದೆ. ಬುದ್ದಿವಂತ ಪ್ರತಿಭಾವಂತ ಎಂಬ ಮೆಚ್ಚಿಗೆಯ ಮಾತುಗಳು ಕೇಳಿ ಜೀವನದ ದೊಡ್ಡಸಾಧನೆ ಮಾಡಿದಂತೆ ಅನಿಸಿತ್ತು. ಕಾಲೇಜಿನಲ್ಲೂ ಪ್ರತಿ ಪರೀಕ್ಷೆಯಲ್ಲೂ ನನ್ನದೇ ಮೇಲುಗೈ. ಕ್ಯಾಂಪಸ್ ಇಂಟರ್ವ್ಯೂನಲ್ಲಿ ಒಳ್ಳೆಯ ಕೆಲಸವೂ ಸಿಕ್ಕಿತ್ತು. ಎಲ್ಲರೂ ನನ್ನ ಉನ್ನತಿಯ ಬಗ್ಗೆ ಮಾತಾಡುವವರೇ

ಕೆಲಸಕ್ಕೆ ಸೇರಿ ನಾಲ್ಕು ತಿಂಗಳಿನಲ್ಲಿ ಹೋಂಡಾಸಿಟಿ ಕೊಂಡು ಕೊಂಡಿದ್ದೆ. ಹತ್ತಾರು ಬ್ಯಾಂಕುಗಳು ನನಗೆ ಲೋನ್, ಕ್ರೆಡಿಟ್ ಕಾರ್ಡ್ ಕೊಡಲು ಮುಂದಾಗಿದ್ದವು. ನನ್ನ ಇಚ್ಛೆಯ ಸಾಫ್ಟ್ವೇರ್ ಕೆಲಸ ಮನಸಿಗೆ ಒಗ್ಗಿತ್ತು.

ಹೀಗೆ ಎರಡು ವರ್ಷ ಕಳೆಯುವಷ್ಟರಲ್ಲಿ ಕಂಪನಿಯಲ್ಲಿ ಬಹಳಷ್ಟು ಬದಲಾವಣೆಗಳು ಆಗಿದ್ದವು . ಕಂಪನಿ ಯ ಶೇರ್ ವ್ಯಾಲ್ಯೂ ಗಗನಕ್ಕೆ ಮುಟ್ಟಿತ್ತು. ಅಂದು ನಡೆದ ಘಟನೆ ಎಂದಿಗೂ ಮರೆಯಲಾಗದು. ಶೇರ್ ವ್ಯವಹಾರದಲ್ಲಿ ಅವ್ಯವಹಾರ ನಡೆದಿತ್ತೆಂದು ಕಂಪನಿಯ ಎಲ್ಲ ವ್ಯವಹಾರಗಳು ಸ್ಥಗಿತವಾಗಿತ್ತು.

ಕಂಪನಿಯ ಲೇ ಆಫ್ ನಲ್ಲಿ ನಾನು ಕೆಲಸ ಕಳೆದು ಕೊಂಡಿದ್ದೆ. ನನ್ನಂತೆ ೬೦೦ ಜನರ ಸ್ಥಿತಿಯು ಅದೇ ಆಗಿತ್ತು. ಮೂರು ತಿಂಗಳು ಕೆಲಸವಿಲ್ಲದೇ ಕಳೆಯಬೇಕಾಯಿತು. ನನ್ನ ಸೇವಿಂಗ್ಸ್ ನಲ್ಲಿದ್ದ ಸ್ವಲ್ಪ ಹಣ ಕರಗಿ ಹೋಗಿತ್ತು. ಊರಲ್ಲಿರುವ ಮನೆಯ ನವೀಕರಣಕ್ಕೆ ನನ್ನ ಬಹುಭಾಗ ಹಣ ಸೋರಿಹೋಗಿತ್ತು. ಕಾರಿನ ಸಾಲಕ್ಕೆ ಬ್ಯಾಂಕಿನಿಂದ ಪದೇ ಪದೇ ಒತ್ತಾಯ ಬರುತ್ತಿತ್ತು. ಅದಾದ ಕೆಲವೇ ದಿನಗಳಲ್ಲಿ ಕಾರು ಸಾಲ ನೀಡಿದ್ದ ಬ್ಯಾಂಕಿನ ವಶವಾಯಿತು. ಇದ್ದ ಬದ್ದ ಹಣವನ್ನು ಬ್ಯಾಂಕಿನವರು ಜಮಾ ಮಾಡಿಕೊಂಡರು.

ಅಂದು ಊಟಕ್ಕೆ ಹೋಟೆಲ್ ಗೆ ಹೋಗಿದ್ದೆ. ಆ ಹುಡುಗಿ ನನ್ನನ್ನು ನೋಡಿ ನಕ್ಕಳು. ಯಾರದು? ಎಲ್ಲೋ ನೋಡಿದ್ದೇನೆ ಅನಿಸಿತು. ನಾನೆಂದೂ ಹುಡುಗಿಯರ ಬಗ್ಗೆ ತಲೆ ಕೆಡಿಸಿಕೊಂಡವನಲ್ಲ. ನಾನು ನನ್ನ ಓದು ಪ್ರಾಜೆಕ್ಟ್ ವರ್ಕ್ ನಲ್ಲೇ ಮುಳುಗಿರುತ್ತಿದ್ದೆ. ಬಫೆ ಊಟ ಮುಗಿಸಿ ಕ್ಯಾಶ್ ಕೌಂಟರ್ನಲ್ಲಿ ನನ್ನ ಕ್ರೆಡಿಟ್ ಕಾರ್ಡ್ ಕೊಟ್ಟೆ. ಒಂದು, ಎರಡು, ಮೂರೂ ಎಲ್ಲ ಕಾರ್ಡ್ ಗಳು ಬ್ಲಾಕ್ ಆಗಿದ್ದವು. ಜೇಬಿನಲ್ಲಿ ಕೇವಲ ೧೦೦ ರೂಪಾಯಿ ಇತ್ತು. ಅವಮಾನದಿಂದ ತಲೆ ತಗ್ಗಿಸುವಂತೆ ಆಯಿತು. ಎಲ್ಲ ಬ್ಯಾಂಕ್ ಗಳ ಮೇಲೆ ವಿಪರೀತ ಕೋಪ ಬಂತು. ಒಂದು ಕೆಲಸ ಕಳೆದು ಕೊಂಡರೆ ಜೀವನವೇ ಮುಗಿಯಿತೇ? ಒಳ್ಳೆಯ ಓದು, ಬುದ್ದಿವಂತಿಗೆ ದೊಡ್ಡ ಆಸ್ತಿಯಲ್ಲವೇ. ಮನಸ್ಸು ಕುದಿಯಿತು.

ನನ್ನನ್ನೇ ಗಮನಿಸುತ್ತಿದ್ದ ಆ ಹುಡುಗಿ ನನ್ನ ಹತ್ತಿರ ಬಂದಳು. ತಕ್ಷಣ ನೆನಪಾಯಿತು. ಶುಭ. ನನಗಿಂತ ಒಂದು ವರ್ಷ ಜೂನಿಯರ್. ಒಂದು ಪ್ರಾಜೆಕ್ಟ್ ವರ್ಕ್ ಗೆ ಇಬ್ಬರು ಹುಡುಗಿಯರು ನನ್ನ ಮಾರ್ಗ ದರ್ಶನಕ್ಕೆ ಬಂದಿದ್ದರು! ಹೌದು ಅವಳೇ ಶುಭ ಎಂದುಕೊಳ್ಳುತ್ತಿದ್ದೆ. ಅವಳು ಕ್ಯಾಶ್ ಕೌಂಟರ್ನಲ್ಲಿ ಹಣ ಕಟ್ಟುತ್ತಿದ್ದಳು. ನಾನು ಅವಳಿಗೆ ಧನ್ಯವಾದ ಹೇಳುತ್ತಾ "ಮಷೀನ್ ಪ್ರಾಬ್ಲಮ್ ಅನಿಸತ್ತೆ ಸ್ವಯ್ಪ್ ಆಗಲಿಲ್ಲ" ಹೇಳಿದೆ. ಅವಳ ಕಾಂಟಾಕ್ಟ್ ನಂಬರ್ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ಮತ್ತೆ ಧನ್ಯವಾದ ಹೇಳಿ ಹೊರಟೆ. ರೂಮ್ ಗೆ ಬಂದವನೇ ಕತ್ತರಿ ಹಿಡಿದು ಆ ಮೂರೂ ಕಾರ್ಡ್ ಗಳನ್ನೂ ಸಣ್ಣ ಸಣ್ಣ ಚೂರು ಮಾಡಿ ತಿರಸ್ಕಾರದಿಂದ ಕಸದ ಬುಟ್ಟಿಗೆ ಎಸೆದೆ .

ಮರು ದಿನದಿಂದ ಕೆಲಸಕ್ಕೆ ಪ್ರಯತ್ನ ತೀವ್ರಗೊಳಿಸಿದೆ. ಗೆಳೆಯ ಹರೀಶ್ ಸಹಾಯದಿಂದ ಒಂದು ಕನ್ಸಲ್ಟೆಂಟ್ ಆಫೀಸ್ ನಲ್ಲಿ ಕೆಲಸ ಸಿಕ್ಕಿತು. ಹರೀಶ್ ಕ್ಲೈಂಟ್ ಕಡೆಯಿಂದ ಕೆಲಸ ಮಾಡುತ್ತಿದ್ದ. ಸಣ್ಣ ಸಂಬಳ ಬದುಕಲು ದಾರಿ ಬೇಕಲ್ಲ ಎಂದು ಸಮಾಧಾನ ಪಟ್ಟರು ಮನದ ಮೂಲೆಯಲ್ಲಿ ದೊಡ್ಡ ನಿರಾಸೆ. ಎರಡು ಮೂರು ತಿಂಗಳು ಕಳೆದ ಮೇಲೆ ನನ್ನ ಸ್ಥಿತಿ ಸ್ವಲ್ಪ ಸುಧಾರಿಸಿತು. ಮತ್ತೆ ಮತ್ತೆ ಆ ಶುಭ ನೆನಪಿಗೆ ಬರುತ್ತಿದ್ದಳು. ಆವಳ ಸ್ನೇಹದ ನಗೆ ನನಗರಿವಿಲ್ಲದಂತೆ ಅವಳತ್ತ ಸೆಳೆಯುತ್ತಿತ್ತು. ಅವಳಿಗೆ ಊಟದ ಹಣ ಕೊಟ್ಟಿರಲಿಲ್ಲ ನೆನಪಾಗಿ ಅವಳಿಗೆ ಮೊಬೈಲ್ ಕರೆ ಮಾಡಿದ್ದೆ .

ಶುಭ ಅತಿ ಮಾತುಗಾತಿ . ಮೆಲು ಧ್ವನಿ, ಮಾತು ಮಾತಿಗೂ ಚಿಕ್ಕ ಮಕ್ಕಳಂತೆ ನಗು ಅವಳು ತುಂಬಾ ಆಕರ್ಷಕವಾಗಿದ್ದಾಳೆ ಅನಿಸಿತು. ಊಟದ ಮಧ್ಯೆ ಅವಳು ತನ್ನ ಸಂಸಾರದ ವಿಚಾರವೆಲ್ಲ ಹೇಳುತ್ತಿದ್ದಳು . ಅವಳ ತಂದೆಯ ಅನಾರೋಗ್ಯ ,ಅಣ್ಣ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗಿದ್ದು , ಮನೆಯ ಎಲ್ಲ ವಿಚಾರಗಳನ್ನೂ ನಾನು ಅವಳ ಆತ್ಮೀಯ ಎಂಬಂತೆ ಹೇಳುತ್ತಿದ್ದಳು. ಕೆಲಸಕ್ಕೆ ಹತ್ತಿರವಾಗಲಿ ಅಂತ ಪಿ ಜಿ ನಲ್ಲಿ ಇರುವುದಾಗಿ ಹೇಳಿದಳು. ಒಂದು ಒಳ್ಳೆಯ ಕಂಪನಿ ಯಲ್ಲಿ ಕೆಲಸ. ಸಂಬಳವೂ ಒಳ್ಳೆಯದೇ. ದಿನವೂ ಮೈಸೂರು ರೋಡ್ ಮೆಟ್ರೋಯಿಂದ ಪ್ರಯಾಣ . ಮತ್ತೆ ಕ್ಯಾಬ್ ಹಿಡಿದು ಆಫೀಸ್ ಹೀಗೆ ತನ್ನ ದಿನಚರಿಯನ್ನು ಹೇಳಿಕೊಂಡಳು. ನನ್ನ ಬಗ್ಗೆ ಏನನ್ನೂ ಕೇಳಲಿಲ್ಲ. "ನನ್ನದೂ ಅದೇ ಮಾರ್ಗ. ನಾನು "ಹೋಂಡಾ ಸಿಟಿ"ಯನ್ನು ಮೆಟ್ರೋ ಪಾರ್ಕಿಂಗ್ ನಲ್ಲಿ ಹಾಕಿ ಹೋಗುತ್ತೇನೆ" ಎಂದು ಹೇಳಿದೆ . "ಹೋಂಡಾ ಸಿಟಿ" ಎಂದು ಸ್ವಲ್ಪ ಜೋರಾಗಿಯೇ ಹೇಳಿದೆ. ಅವಳಿಗೆ ಧನ್ಯವಾದ ತಿಳಿಸಿ ಬಿಲ್ ಪಾವತಿಸಿ ನಡೆದೆ .

ಅನಿರೀಕ್ಷಿತವಾಗಿ ಅಂದು ಶುಭ ಫೋನ್ ಮಾಡಿದ್ದಳು. ಒಂದು ಪ್ರಾಜೆಕ್ಟ್ ನಲ್ಲಿ ಕೋಡಿಂಗ್ ಪ್ರಾಬ್ಲಮ್ ಇದೆಯೆಂದೂ ,ನನ್ನ ಮೇಲ್ ಗೆ ವಿವರಗಳನ್ನು ಕಳಿಸಿದ್ದೇನೆ ಎಂದು ಹೇಳಿದಳು. ನನಗೆ ತುಂಬಾ ಹುಮ್ಮಸ್ಸು ಬಂತಂತಾಗಿ "ಏನೂ ಪ್ರಾಬ್ಲಮ್ ಇಲ್ಲ ನಾಳೆ ವೀಕೆಂಡ್ ನಲ್ಲಿ ಒಂದು ಗಂಟೆಯಲ್ಲಿ ಮಾಡಿ ಕಳಿಸುತ್ತೇನೆ" ಹೇಳಿದೆ . ಮೇಲ್ ಓಪನ್ ಮಾಡಿದಾಗ ತುಂಬಾ ಸರಳ ಅನಿಸಿತ್ತು . ಕೋಡಿಂಗ್ ಪ್ರಾರಂಭಿಸಿದೆ . ಬೆಳಗ್ಗೆ ಪ್ರಾರಂಭಿಸಿದ್ದು ಸಂಜೆಯವರಿಗೂ ಮುಗಿಯಲಿಲ್ಲ . ಎಲ್ಲೋ ಲಾಜಿಕ್ ತಪ್ಪಾಗುತ್ತಿತ್ತು . ಯಾಕಾದರೂ ಒಪ್ಪಿ ಕೊಂಡೆನೋ ಅನಿಸಿತ್ತು . ಮತ್ತೆ ರಾತ್ರಿ ಪ್ರಯತ್ನಿಸಿ ಎಲ್ಲ ಎರರ್ ಗಳನ್ನೂ ರಿಮೋವ್ ಮಾಡಿದಾಗ ಗಂಟೆ ರಾತ್ರಿ ೨ ಗಂಟೆಯಾಗಿತ್ತು . ತಕ್ಷಣವೇ ಶುಭಾಗೆ ಮೇಲ್ ಮಾಡಿ "ಸಿಂಪಲ್ ಕಾನ್ಸೆಪ್ಟ್" ಎಂದು ಕಳಿಸಿದೆ

ಎರಡು ದಿನದಲ್ಲಿ ನನಗೊಂದು ಅಚ್ಚರಿ ಕಾದಿತ್ತು . ಶುಭ ಹೇಳಿದಳು " ನೀನು ಕಳಿಸಿದ ಕೋಡಿಂಗ್ ಪರ್ಫೆಕ್ಟ್ ಆಗಿದೆ. ಅದನ್ನು ಒಂದು ವಾರದಿಂದ ನಮ್ಮ ಟೀಮ್ ನವರು ಮಾಡಿದ್ದ ಪ್ರಯತ್ನ ವಿಫಲವಾಗಿತ್ತು. ಯು ಆರ್ ರಿಯಲಿ ಜಿನಿಯೆಸ್, ಐ ಲೈಕ್ ಯು" ಎಂದಳು. ಆ ಮಾತನ್ನು ಕೇಳಿ ಹಿತವಾದರೂ "ಐ ಲವ್ ಯು" ಎಂದ್ದಿದ್ದರೆ ಹುಚ್ಚು ಮನಸು ಪೇಚಾಡಿತು. ನನಗೆ ನನ್ನ ಕೆಲಸ ಬಿಟ್ಟರೆ ಬೇರೆ ಹವ್ಯಾಸಗಳೇ ಇರಲಿಲ್ಲ. ಶುಭಾಳ ಪ್ರಶಂಶೆ ಕೇಳಿದ ಮೇಲೆ ಮನಸ್ಸು ಉಲ್ಲಾಸಭರಿತವಾಯಿತು .

ದಿನವೂ ಅವಳನ್ನು ಭೇಟಿಯಾಗಲು ಅವಳ ದಿನಚರಿಯನ್ನು ಹಿಂಬಾಲಿಸ ತೊಡಗಿದೆ. ಅವಳು ಹೊರಡುವ ಮೆಟ್ರೋಗೆ ಸಮಯ ಹೊಂದಿಸಿಕೊಂಡು ನನ್ನ ಆಲ್ಟೊ ಕಾರನ್ನು ದೂರದಲ್ಲಿ ನಿಲ್ಲಿಸಿ ಅವಳನ್ನು ಸೇರುತ್ತಿದ್ದೆ. ಅವಳ ಮುಂದೆ ನನ್ನ ಜೀವನದ ಸಾದನೆಗಳು ನನ್ನ ಜೀವನ ಶೈಲಿ ಹೇಳಿಕೊಂಡು ಅವಳನ್ನು ಒಲಿಸಲು ಪ್ರಯತ್ನಿಸುತ್ತಿದ್ದೆ. ನನ್ನ ಜೇವನದ ಸೋಲು ಅವಳ ಅರಿವಿಗೆ ಬರದಂತೆ ಶತ ಪ್ರಯತ್ನ ಮಾಡುತ್ತಿದ್ದೆ. ಆದರೂ ಅವಳ ಮನದ ಭಾವನೆಗಳು ಅರ್ಥವಾಗುತ್ತಿರಲಿಲ್ಲ .

ಅಂದು ಹರೀಶ್ ಜೊತೆ ಒಂದು ಪ್ರಾಜೆಕ್ಟ್ ಬಗ್ಗೆ ಫೈನಲ್ ಮಾತುಕತೆಗೆ ಅವನ ಆಫೀಸ್ ಗೆ ಹೋಗಿದ್ದೆ. ಲಂಚ್ ಟೈಮ್ ಆದ್ದರಿಂದ ಅಲ್ಲೇ ವಿಸಿಟರ್ ರೂಮ್ ನಲ್ಲಿ ಕುಳಿತಿದ್ದೆ. ಅಲ್ಲಿ ಶುಭಾಳನ್ನು ಕಂಡು ದಿಬ್ರಮೆಯಾಯಿತು. ಹರೀಶ್ ಅವಳ ಹೆಗಲ ಮೇಲೆ ಕೈ ಹಾಕಿಕೊಂಡು ಊಟ ಮುಗಿಸಿ ಬರುತ್ತಿದ್ದ. ನಾನು ಸ್ವಲ್ಪ ಮರೆಯಾಗಿದ್ದರಿಂದ ಅವರು ಗಮನಿಸಲಿಲ್ಲ ಅನ್ನಿಸಿತು. ಇವಳೇನು ಇಲ್ಲಿ? ಮನಸ್ಸು ಕಹಿಯಾಯಿತು. ನಿರ್ಲಿಪ್ತತೆಯಿಂದ ಪ್ರೆಸೆಂಟೇಷನ್ ಮುಗಿಸಿ ಹರೀಶ್ ಕೈ ಕುಲುಕಿ ಹೊರಬಂದೆ.

ಈಚೆಗೆ ಶುಭ ಸ್ವಲ್ಪ ಗಂಭೀರವಾದಂತೆ ಅನಿಸಿತು. ಇವಳಿಗೆ ನನ್ನ ಹಳೆಯ ಕಂಪನಿ ನನ್ನ ಸೋಲುಗಳು ಗೊತ್ತಾಗಿರಬೇಕು. ತನಗಿಂತ ಕಡಿಮೆ ಸಂಬಳದ ಹುಡುಗನನ್ನು ಯಾವ ಹುಡುಗಿ ಇಷ್ಟಪಡುತ್ತಾಳೆ . ಅದಕ್ಕೆ ಅವಳಿಗೆ ನನ್ನ ಮೇಲೆ ಆಸಕ್ತಿ ಕಡಿಮೆಯಾಗಿದೆ . ಮತ್ತೆ ಹರೀಶ್ ಸ್ನೇಹ ಬೇರೆ . ಮೋಡ ಮೊದಲು ಸುಮ್ಮನೆ ನನ್ನ ಫ್ಲರ್ಟ್ ಮಾಡಿದಳು . ಸೋಲುಗಳ ನಡುವೆ ಮನಸ್ಸು ಡಿಪ್ರೆಶನ್ ಗೆ ಹೋದರೆ ಭಯವಾಯಿತು .ರಾತ್ರಿಗಳು ಸುಮ್ಮನೆ ಸುರು ನೋಡುತ್ತಾ ಮಲಗುವುದು ಅಭ್ಯಾಸವಾಯಿತು

ಸುಮಾರು ಎರಡು ತಿಂಗಳು ಶುಭ ಸಿಕ್ಕಿರಲಿಲ್ಲ . ನನ್ನ ಮೆಸೇಜ್ ಗೆ "ಬೇರೆ ಆಫೀಸ್ ನಲ್ಲಿ ಟ್ರೇನಿಂಗ ಇದೆ "ಅಂತ ಇನ್ನೊಮ್ಮೆ ತಂದೆಗೆ ಆಪರೇಷನ್ ಅಂತ ಮೆಸೇಜ್ ಮಾಡಿದ್ದಳು .

ನನ್ನ ಒಳ್ಳೆಯ ಕೆಲಸಕ್ಕೆ ಪ್ರಯತ್ನ ನಡೆದೇ ಇತ್ತು . ಮೈಕ್ರೋ ಸಾಫ್ಟ್ ನಲ್ಲಿ ಮೂರು ಇಂಟರ್ವ್ಯೂ ಮುಗಿದು ಆರ್ಡರ್ ಬಂದಾಗ ತುಂಬಾ ಖುಷಿಯಾಯಿತು. ಅಪ್ಪನಿಗೆ ಫೋನ್ನಲ್ಲಿ ಈ ವಿಷಯ ತಿಳಿಸಿದಾಗ "ಒಳ್ಳೆಯದು ಈ ವೀಕೆಂಡ್ ಊರಿಗೆ ಬಾ ನಿನ್ನ ಹತ್ತಿರ ಮುಖ್ಯವಾದ ವಿಷಯ ಮಾತಾಡುವುದಿದೆ ನಿಮ್ಮಮ್ಮನಿಗೆ ನಿನ್ನ ಮದುವೆಯದೇ ಯೋಚನೆ " ಎಂದರು

ಈ ಹೊಸ ಕೆಲಸದ ವಿಷಯ ಶುಭ ಹತ್ತಿರ ಹೇಳಬೇಕು ಅನ್ನಿಸಿತು. ಮೇಲ್ ನಲ್ಲಿ ತಿಳಿಸಿ ಸ್ವಾರಸ್ಯವನ್ನು ಕಳೆದು ಕೊಳ್ಳುವ ಮನಸಾಗಲಿಲ್ಲ. ಅನಿರೀಕ್ಷಿತವಾಗಿ ಶುಭಾಳಿಂದ ಮೇಲ್ ಬಂದಿತ್ತು. ಅವಳು ಭೇಟಿಯಾದ ತಕ್ಷಣ "ಶುಭ ನಿನಗೊಂದು ಶುಭ ಸಮಾಚಾರ ಹೇಳಬೇಕು" ಎಂದೆ . "ಅದಕ್ಕೆ ಮುಂಚೆ ನಾನು ನನ್ನ ಬದುಕಿನ ಒಂದು ನಿರ್ಣಯವನ್ನು ನಿನಗೆ ಹೇಳಬೇಕು" ಎಂದಳು . ನನಗೆ ಅಚ್ಚರಿ ಕಾದಿತ್ತು .

ಶುಭ ನಗುತ್ತಾ "ಹುಡುಗಿಯನ್ನು ಇಂಪ್ರೆಸ್ ಮಾಡಲು ಫಾಲ್ಸ್ ಸ್ಟೇಟಸ್ ಬೇಡ. ನಿನ್ನ ಸ್ವಂತಿಕೆ ನನಗೆ ಇಷ್ಟ . ನಿನ್ನ ಆಲ್ಟೊ ಕಾರ್ ನಿನ್ನ ಜೀವನ ನನಗೆ ಗೊತ್ತು . ಆದರೆ ನೀನು ನನಗೆ ಅಸಾಧಾರಣ ವ್ಯಕ್ತಿ . ನಿನ್ನ ಪ್ರೀತಿ ಪಡೆಯುವಷ್ಟು ಅದೃಷ್ಟ ನನಗಿದ್ದರೆ ಸಾಕು" ಎಂದಳು . “ಇದು ನಿನ್ನ ಜೀವನದ ಪ್ರಶ್ನೆಯಲ್ಲವೇ . ಒಂದು ವೇಳೆ ನನಗೆ ಒಳ್ಳೆಯ ಕೆಲಸ ಸಿಕ್ಕದಿದ್ದರೆ " ನನ್ನ ಮಾತು ಮುಗಿಯುವ ಮುನ್ನವೇ ಹಗುರವಾಗಿ ನನ್ನ ಬಾಯಿ ಮುಚ್ಚಿದಳು.

"ನೀನು ತುಂಬಾ ಮೇಧಾವಿ ಎಂದುಕೊಂಡಿದ್ದೆ . ನಿನ್ನ ಬುದ್ದಿವಂತಿಕೆ ಎಲ್ಲ ಕೋಡಿಂಗ್ ನಲ್ಲಿ ಮಾತ್ರ . ಹೃದಯದ ಕೋಡಿಂಗ್ ನಲ್ಲಿ ಬಿಗ್ ಜೀರೋ " ನಗುತ್ತಾ ತೋಳಿಗೊರಗಿದಳು .

ನಾನು "ಮತ್ತೆ .... ಮತ್ತೆ ಹರೀಶ್" ಎಂದಾಗ ಅವಳಿಗೆ ನಗು ತಡೆಯಲಾಗಲಿಲ್ಲ "ಅಂದರೆ ನೀನು ಆ ದಿನ ಮರೆತಿಲ್ಲ ಅನಿಸತ್ತೆ. ದೂರದಿಂದ ನಾನು ನಿನ್ನ ನೋಡಿದೆ. ಮುಖ ತುಂಬಾ ಸಪ್ಪಗಿತ್ತು. ತಲೆ ತಗ್ಗಿಸಿ ಕೊಂಡು ಕುಳಿತಿದ್ದೆ ಈಗ ಕಾರಣ ಅರ್ಥವಾಯಿತು ನಗುತ್ತ "ಹೆಂಗಸರಿಗೆ ಜೆಲಸಿ ಅಂತಾರೆ ನೋಡು ಪೆದ್ದ ಕಣೋ ನೀನು ಅವನು ನನ್ನ ಅಣ್ಣ"

"ನಿನಗೆ ಇನ್ನೊಂದು ಷಾಕಿಂಗ್ ನ್ಯೂಸ್ ಇದೆ. ಈ ವಾರ ಊರಿಗೆ ಹೋಗು ಗೊತ್ತಾಗತ್ತೆ" ತಕ್ಷಣವೇ ಎಲ್ಲ ಅರ್ಥವಾದಂತೆ ಅನಿಸಿ ನನ್ನ ಹಿಂದೆ ಇಷ್ಟೆಲ್ಲ ನಡೆದಿದೆಯಾ ಸಂಭ್ರಮವಾಗಿ ಅವಳನ್ನು ಮೃದುವಾಗಿ ಅಪ್ಪಿಕೊಂಡೆ. ನನ್ನ ಹೊಸ ಕೆಲಸದ ಸಂಭ್ರಮ ಈಗ ಹಂಚಿ ಕೊಳ್ಳುವುದು ಬೇಡ ಅನಿಸಿತು . ಮುಂದಿನ ಭೇಟಿಯಲ್ಲಿ ಈ ಸಂತಸ ಹಂಚಿಕೊಳ್ಳಲು ಇರಲಿ ಎಂದು ಕೊಂಡು ಅವಳನ್ನು ಬೀಳ್ಕೊಂಡೆ. ಸೋಲುಗಳನ್ನು ಮೆಟ್ಟಿ ನಿಂತ "ವಿಜೇತ" ನಾನಾದೆ.


kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.