ಅಪ್ಪನ ಆ ಧ್ವನಿ

ರವಿವಾರದಲ್ಲಿ ರವಿಯು ಸಹ ಮೋಡದ ಮರೆಯಲ್ಲಿ ಹೊರಗೆ ಬಾರಲು ಮನಸ್ಸಿಲ್ಲದೆ ಮಲಗಿದ್ದ. ಆದರೆ ನಮ್ಮ ಮನೆಯಲ್ಲಿ ಎಲ್ಲರೂ ಎದ್ದು ಒಂದೆರಡು ಗಂಟೆ ಸಾಗಿದ್ದೆವು. ಪಟ್ಟಣಗಳಿಗೆ ಮಾತ್ರ ರವಿವಾರ ರಜೆ ದಿನವೆಂದು ಸೀಮಿತವಾದರೆ ಹಳ್ಳಿಗಾಡಿನವರಿಗೆ ರವಿವಾರವು ಉಳಿದೆಲ್ಲ ಬಾಕಿ ಕೆಲಸಗಳನ್ನು ಮಾಡಲು ದೊರೆತ ವಿಶೇಷ ದಿನ ಈ ರವಿವಾರ. ಸಾಮಾನ್ಯವಾಗಿ ಹಳ್ಳಿ ಪ್ರದೇಶಗಳಲ್ಲಿ ರವಿವಾರವನ್ನು ಆಲಸ್ಯದಿಂದ ಕಳೆಯದೆ, ಏನಾದರೂ ಒಂದು ಉಪಯುಕ್ತ ಕಾರ್ಯ ಮಾಡುತ್ತಾ ಸಮಯ ಕಳೆಯುವುದು ಸರ್ವೇ ಸಾಮಾನ್ಯ.

ಅದೇ ರೀತಿ ನಮ್ಮ ಮನೆಯಲ್ಲಿಯು ಸಹ ರವಿವಾರ ಬಂತೆಂದರೆ ರವಿಗಿಂತ ಮೊದಲೆ ಎದ್ದು ಮುಂದಿನ ಕಾರ್ಯಕ್ಕೆ ಅಣಿಯಾಗುತ್ತಿದ್ದುದು ಸಹಜ. ಅಂತೆಯೇ ಬೇಸಿಗೆಯ ಸಮಯದಲ್ಲಿ ಹೊಲದ ಕೆಲಸಗಳು ಇರದ ಕಾರಣ ವರ್ಷಕ್ಕಾಗುವಷ್ಟು ಸೌದೆಗಳನ್ನು ಊರ ಮುಂದಿನ ಹಳ್ಳದಲ್ಲಿ ಕಡಿದು ಸಂಗ್ರಹಿಸುತಿದ್ದೆವು. ನಮಗಿಂತ ಮೊದಲು ಅಪ್ಪ ಎಲ್ಲ ಸಿದ್ಧತೆ ಮಾಡಿಕೊಂಡು ಕೊಡಲಿ ಹೆಗಲಿಗೇರಿಸಿಕೊಂಡು ಜೊತೆಗೆ ನಮ್ಮನ್ನು ತನ್ನೊಡನೆ ಕರೆದುಕೊಂಡು ಹೊರಟ. ಆದರೆ ನಾನೋ ಒಲ್ಲದ ಮನಸ್ಸಿನಿಂದ ಗೊಣಗುತ್ತ ಅಪ್ಪನನ್ನು ಹಿಂಬಾಲಿಸಿದೆ, ಈ ಮನಸ್ಸಿನ ಹೊಯ್ದಾಟದ ನಡುವೆ ಹಳ್ಳವನ್ನು ತಲುಪಿದ್ದೆ ತಿಳಿಯಲಿಲ್ಲ.

ಅಪ್ಪ ವೃತಿಯಲ್ಲಿ ಡ್ರೈವರ್ ಕೆಲಸದವರವಾಗಿ ಬೆನ್ನುನೋವಿನ ಕೃಪೆಗೆ ಪಾತ್ರನಾಗಿದ್ದ. ತನ್ನ ನೋವಿನ ನಡುವೆಯೂ ಸಹ ಕೆಲಸವನ್ನು ಮಾಡಲು ಮುಂದೆ ಇರುತ್ತಿದ್ದ. ಬೆನ್ನು ನೋವೆಂಬ ಬೇತಾಳ ಅಪ್ಪನನ್ನು ಕಾಡುತ್ತಿರುವ ಕಾರಣ ಕೊಡಲಿ ಹಿಡಿದು ಮರ ಉರಿಳಿಸುವುದು ನನ್ನ ಪಾಲಿಗೆ ಒದಗಿತು. ಹಳ್ಳದ ಮುಳ್ಳಿನ ಕಂಟಿಯ ನಡುವೆ ಹೊಕ್ಕು ಸುತ್ತಲಿನ ಮುಳ್ಳು ಸರಿಸಿ ದಾರಿ ಮಾಡಿಕೊಳ್ಳುತ್ತಾ ಮರಕ್ಕೆ ಹತ್ತಿರವಾಗಿ ನಿಂತುಕೊಂಡು ಅತಿ ಜಾಗುರೂಕತೆಯಿಂದ ಮರ ಕಡಿಯಲು ಪ್ರಾರಂಭಸಿದೆ. ನಿರಂತರ ಕೆಲಸದಿಂದ ಮೈಮೇಲೆ ಬೆವರಿನ ಹಳ್ಳ ಹರಿದು ಕಾವಿನ ಮೂಲಕ ಕೊಡಲಿಗೆ ಇಳಿಯ ತೊಡಗಿದಾಗ ಕೊಂಚ ಸುಸ್ತಾಗಿ ಅಪ್ಪನಿಗೆ ಕೊಡಲಿ ಒದಗಿಸಿ ಪಕ್ಕಕ್ಕೆ ಸರಿದೆ.

ಕುಳಿತ ಎರಡೇ ನಿಮಿಷದಲ್ಲಿ ಅದಾವುದೊ ಪರಿಚಿತ ಧ್ವನಿ ವಿರಮಿಸುತ್ತಿದ ನನ್ನನ್ನು ಬಡಿದೆಬ್ಬಿಸಿ "ಪಕ್ಕಕ್ಕೆ ಸರಿಯುವಂತೆ" ಸೂಚಿಸಿತ್ತು. ನಾನು ಸಹ ಏನು ಯೋಚಿಸದೆ ಆಜ್ಞೆಯಂತೆ ಕುಳಿತ ಜಾಗದಿಂದ ಪಕ್ಕಕ್ಕೆ ಚಂಗನೆ ಹಾರಿದೆ. ವಾಸ್ತವಕ್ಕೆ ಬಂದಾಗ ತಿಳಿಯಿತು ಅದು ಅಪ್ಪನ ದ್ವನಿಯೆಂದು. ಅಪ್ಪನ ಅನುಭವದ ಎರಡು ಹೊಡೆತ ಮರಕ್ಕೆ ಬೀಳುತ್ತಿದ್ದಂತೆ ಬುಡ ಸಮೇತವಾಗಿ ಮರ ನೆಲದ ಕಡೆ ವಾಲಿತು. ಅದರ ಕೆಳಗೆ ಕುಳಿತವನ ಮೇಲೆ ಬೀಳಲಿರುವ ಮರದ ಅರಿವಿರಲಿಲ್ಲಾ. ಆದ್ದರಿಂದ ಒಮ್ಮೆಲೇ ಎಚ್ಚರಿಕೆ ಗಂಟೆಯಂತೆ ಅಪ್ಪನ ಆತಂಕ ತುಂಬಿದ ಧ್ವನಿಯ ಆರ್ಥನಾದ ನನ್ನ ಕಿವಿಗೆ ರಾಚಿತ್ತು. ಗಾಬರಿಗೊಂಡ ಅಪ್ಪನ ಎರಡು ತೋಳುಗಳು ನನ್ನನ್ನು ತಬ್ಬಿಕೊಂಡು ಕಣ್ಣಲ್ಲಿ ಅಶ್ರುಧಾರೆ ತುಂಬಿ ನೀರಾಗಿ ಹರಿಯುತ್ತಿದ್ದವು. ಅಪ್ಪನ ಪ್ರೀತಿಯೇ ಅಂತಹದು ಸಿಡುಕು ಮೂತಿಯಲ್ಲಿ ಗಡಸು ಪೇಮವದು ವಿಶಾಲ ಆಲದ ಮರದಂತೆ.

ಅಂದು ಅಪ್ಪನ ಆ ಧ್ವನಿ ನನ್ನನ್ನು ಎಚ್ಚರಿಸದೆ ಹೋಗಿದ್ದರೆ ಸಾವಿನಾಲಯದ ಸದಸ್ಯನಾಗಿ ಇಂದಿಗೆ ಆರು ವರ್ಷಗಳೇ ಸಂದಿರುತ್ತಿದ್ದವು. ಎಲ್ಲವು ಮುಗಿದು ಹೋಗಿರುತ್ತಿತ್ತು . ನನ್ನ ನೆನಪು ಕೇವಲ ಗೋಡೆಗೆ ಬಡಿದ ಮೊಳೆಗೆ ತೂಗಾಡುತ್ತಿತ್ತು, ವರ್ಷಕ್ಕೊಮ್ಮೆ ನೊಂದ ಮನಸ್ಸಿನಿಂದ ಸಿಹಿ ಊಟದ ನೈವೇದ್ಯವಾಗುತ್ತಿತ್ತೆನೋ.kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.