ಮಳೆ

ತರಗತಿ ಮುಗಿದ ಕೂಡಲೆ ಕನ್ನಡ ವಿಭಾಗದಿಂದ ಮಹೇಶ ಮನೆಯ ಕಡೆ ಹೆಜ್ಜೆ ಇಕ್ಕಲಾರಂಭಿಸಿದ. ರೌಂಡ್ ಕ್ಯಾಂಟೀನ್ ಬಳಿ ಬರುವುದಕ್ಕೂ ಹನಿ ಪಟಪಟ ಉದುರಿ ಮಳೆ ಶುರುವಾಯಿತು. ರೌಂಡ್ ಕ್ಯಾಂಟೀನ್ಗೆ ಒಮ್ಮೆಯೂ ಕಾಲಿಡದ ಮಹೇಶ ಮಳೆರಾಯನಿಂದ ತಪ್ಪಿಸಿಕೊಳ್ಳಲು ವಿಧಿಯಿಲ್ಲದೆ ಅಂದು ಅನಿವಾರ್ಯವಾಗಿ ಅಲ್ಲಿಗೆ ಕಾಲಿಡಲೇಬೇಕಾಯಿತು. ಅವನಿಗೇನೂ ಆ ಕ್ಯಾಂಟೀನ್ ಮೇಲೇನೂ ದ್ವೇಷವಿರಲಿಲ್ಲ. ತನ್ನ ಪರಿಸ್ಥಿತಿಯೇ ಹಾಗೆ ಇದ್ದಿತ್ತು. ಜೇಬಿನಲ್ಲಿ ದುಡ್ಡಾದರೂ ಎಲ್ಲಿ ಬರಬೇಕು ತಮ್ಮಂತಹವರ ಜೇಬಿನಲ್ಲಿ? ತಮ್ಮ ಮನೆಯಲ್ಲಿ ಯಾರಿದ್ದಾರೆ ಅಷ್ಟು ಓದಿರುವವರು? ಸಾವಿರ ಗಟ್ಟಲೆ ಪಗಾರವ ಪಡೆವವರು? ಕೆಲ ತಿಂಗಳುಗಳ ಹಿಂದಿನ ನೆನಪಿಗೆ ಜಾರಿದನು.. ಪದವಿ ಮುಗಿಸಿ ಆಗತಾನೆ ಯೂನಿವರ್ಸಿಟಿಗೆ ಕಾಲಿಟ್ಟಾಗ ಮಹೇಶನಿಗೆ ಹೊಸದೊಂದು ಲೋಕಕ್ಕೆ ಬಂದಂತಾಗಿತ್ತು.. ಅಬ್ಬಾ! ಎಷ್ಟೆಷ್ಟು ಎತ್ತರ ನಿಂತಿದ್ದವು ಒಂದೊಂದು ಡಿಪಾರ್ಟ್‍ಮೆಂಟಿನ ಬಂಗಲೆಯಂಥ ಕಟ್ಟಡಗಳು..! ಗುಂಪಾಗಿ ಬೆಳೆದು ದಷ್ಟಪುಷ್ಟವಾಗಿ ಕೊಬ್ಬಿ ಹೂಗಳನ್ನರಳಿಸಿಕೊಂಡು, ಬೇರುಗಳನ್ನು ಹಿಡಿದಿಟ್ಟುಕೊಂಡು ತಾಯಿಯಂತೆ ಸಲಹುತ್ತಿರುವ ಭೂಮಿತಾಯಿಗೊಂದಿಷ್ಟು ಹೂಗಳನ್ನು ಚೆಲ್ಲಿ ಗಾಂಭೀರ್ಯದಿಂದ ನಿಂತಿರುವ ಮರಗಳು.. ತಮಗೆ ಇದೇ ಪ್ರಶಸ್ತ ಸ್ಥಳ ಎಂದು ಗೂಡುಕಟ್ಟಿ ಕ್ಷಣ ಕ್ಷಣಕ್ಕೂ ಚಿಲಿಪಿಲಿ ನಾದ ಉಂಟುಮಾಡಿ, ಮರದ ಕೆಳಗೆ ಕೂತಿರುವವರಿಗೆ ಕಿವಿಗಳನ್ನು ಧನ್ಯಮಾಡುತ್ತಿದ್ದ ಹಕ್ಕಿಗಳು. ಯಾರ ಹಂಗು, ಜಾತಿ ಮತದ ಚುಂಗೇ ಇರದೆ ಕೈ ಕೈ ಹಿಡಿದು, ಹೆಗಲ ಮೇಲೆ ಕೈ ಹಾಕಿಕೊಂಡೇ ಮಾತನಾಡುವ ಹುಡುಗ ಹುಡುಗಿಯರು, ಸೂಟು ಬೂಟು ಧರಿಸಿದ ಪ್ರೊಫೆಸರುಗಳು ಇವರನ್ನೆಲ್ಲ ಕಂಡಾಗ ಮಹೇಶನಿಗೆ ತಾನಿರುವುದು ಭೂಮಿಯಲ್ಲೋ ಅಥವಾ ಮತ್ತೊಂದು ಗ್ರಹದಲ್ಲೋ ಎನಿಸುತ್ತಿತ್ತು. ಆ ಕ್ಷಣ ಇದಕ್ಕಿದ್ದಂತೆಯೇ ನಗು ಪಳಾರನೆ ಬಂದುಬಿಡುತ್ತಿತ್ತು. ತಡೆಯಲಾಗುತ್ತಿರಲಿಲ್ಲ, ಕಿಸಕ್ಕನೆ ನಕ್ಕನೆಂದರೆ ಬಾಯಲ್ಲಿರುವ ಮೂವತ್ತೆರಡು ಹಲ್ಲುಗಳು ಹಾಗೂ ಎಕ್ಸ್ಟ್ರಾ ಎರಡಲ್ಲುಗಳೂ ಇಣುಕಿಬಿಡುತ್ತಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ಮಹೇಶನಿಗೆ ಹೆಚ್ಚು ಗಮನಸೆಳೆದದ್ದು ಅದೇ ತಾನೀಗ ಮಳೆಯಿಂದ ಆಶ್ರಯ ಪಡೆಯುತ್ತಿರುವ ರೌಂಡ್ ಕ್ಯಾಂಟೀನು. "ಇದೇನಪ್ಪ ಹಿಂಗ್ ಕಟ್ಟವ್ರಲ್ಲ ಈ ಹೋಟ್ಲ..ನಮ್ಮೂರಲ್ಲಿ ಗೌರಮ್ಮ ಕೈಗಾಡಿಲೇ ಇಟ್ಟವ್ಳೆ ಹೋಟ್ಲ.. ಹತ್ರೂಪಾಯ್ ಕೊಟ್ರೆ ಆಹ! ಎಂಥ ಇಡ್ಲಿ ಕೊಡ್ತಳೆ.. ಮಲ್ಗೆ ಹೂನಂಗಿರೋ ಇಡ್ಲಿಯ ಕಾಯ್ ಚಟ್ನೆ ಜೊತೆಲ್ ಬಾಯ್ಗೆ ಮಡೀಕಂಡ್ರೆ ಸ್ವರ್ಗ.. ಅದೇ ಇಂದ್ರ ಚಂದ್ರ ಅನ್ಕಂಡ್ರೆ ಇದ್ಯಾವ್ದಪ್ಪ ಹಿಂಗದೆ ಹೋಟ್ಲು.. ಅದೂಬೇರೆ ಹೆಸರಿಗೆ ತಕ್ಕಂಗೆ ರವುಂಡಾಗೇ ಕಟ್ಟವ್ರಲ್ಲ" ಅಂದು ಉದ್ಗಾರ ತೆಗೆದಿದ್ದ. ಹೊರಗಿನಿಂದಲೇ ಅದರ ಭವ್ಯತೆ ನೋಡಿದವನಿಗೆ ಅಲ್ಲಿನ ರೇಟೂ ಹಂಗೇ ಇರಬೇಕೆಂದು ಅಂದೇ ಅದರ ಆಸೆ ತೊರೆದಿದ್ದ. ಇದ್ದದ್ದರಲ್ಲೇ ಹೊಂದಿಕೊಂಡು ಬಾಳುವ ಗುಣ ಮಹೇಶನದ್ದು. ಅದಕ್ಕಾಗಿಯೇ ಅವರವ್ವನಿಗೂ ಮಹೇಶನೆಂದರೆ ಜೀವ. ತನ್ನ ಗಂಡ ಕುಡಿದೂ ಕುಡಿದೂ ಸತ್ತು ದಿಕ್ಕೇ ತೋಚದಂತೆ ಕೂತಿರುವಾಗ ಹನ್ನೆರಡು ವರುಷದ ಮಹೇಶ ರೋಡಿನ ಕೆಲಸಕ್ಕೆ ಹೋಗಿ ಅವ್ವನ ಕೈಗೆ ಮೂವತ್ತು ರೂಪಾಯಿ ತುರುಕಿದ್ದ. ಅವ್ವ ಕಣ್ಣೀರಾಗಿ ಮಗನನ್ನು ಅಪ್ಪಿಕೊಂಡು ಮನಸ್ಸೋಇಚ್ಚೆ ಅತ್ತುಬಿಟ್ಟಿದ್ದಳು. ಅದರ ಮಾರನೇ ದಿನದಿಂದಲೇ ತಾನು ಗಂಧದಕಡ್ಡಿ ಫ್ಯಾಕ್ಟರಿಗೆ ಸೇರಿ ಬಂದ ದುಡ್ಡಿನಲ್ಲಿ ಮಗನನ್ನು ಓದಿಸತೊಡಗಿದಳು.

ಮಹೇಶ ತಾಯಿಗೆ ತಕ್ಕಮಗ. ಅವಳನ್ನೆಂದೂ ನೋಯಿಸಿರಲಿಲ್ಲ. ಅವನಿಗೆ ಅವ್ವನೇ ಸರ್ವಸ್ವ.. ಲಂಕೇಶರ ಅವ್ವ ಕವಿತೆ ಓದುವಾಗಲೆಲ್ಲ ಮಹೇಶನ ಕಣ್ಣಲ್ಲಿ ನೀರಿನ ಪ್ರವಾಹ.. ತಾನೂ ಕವಿತೆಕಟ್ಟಲು ಪ್ರಯತ್ನಿಸುತ್ತಿದ್ದ. ಕವಿತೆ ಬಂದಾಗ ಗೀಚುವುದು, ಅದನ್ನೆಲ್ಲ ಒಂದೆಡೆ ಇಡುವುದು. ಯಾವುದೇ ಬಿಳಿ ಕಾಗದ ಸಿಕ್ಕರೆ ಮಹೇಶನಿಗೆ ಜೆಪಿ ನಗರದಲ್ಲಿ ಅರವತ್ತು ನಲವತ್ತು ಸೈಟೇ ಸಿಕ್ಕಿತೇನೋ ಎನ್ನುವಷ್ಟು ಖುಷಿ.. ಚಿಕ್ಕ ಬಸ್ ಟಿಕೇಟು ಸಿಕ್ಕರೆ ನಾಲ್ಕು ಸಾಲು. ಮದುವೆಯ ಕರೆಯೋಲೆ ಬಂದರೆ ನಲವತ್ತು ಸಾಲು ಬರೆಯುತ್ತಿದ್ದನು.. ಅದನ್ನು ಬೇರೆಯವರಿಗೆ ತೋರಿಸಲು ಅವನಿಗೆ ಸಂಕೋಚ ಮನದಲ್ಲೇನೋ ಅಳುಕು.. ಇದೊಂದೇ ಅಲ್ಲ ಮಹೇಶನಿಗೆ ಮೊದಲಿಂದಲೂ ಹಿಂಜರಿಕೆ ಸ್ವಭಾವ. ಅದನ್ನು ಸಂಪೂರ್ಣವಾಗಿ ಡಿಗ್ರಿ ಕಾಲೇಜಿನಲ್ಲಿದ್ದ ಕಾಳಚನ್ನೇಗೌಡ ಹೋಗಲಾಡಿಸಿದ್ದರು. ಒಂದು ರೀತಿಯಲ್ಲಿ ಕವಿತೆ ಬರೆಯಲು ಅವರೇ ಸ್ಫೂರ್ತಿ. ಜಾತೀಯತೆ ಮರೆತು ಅಂತರ್ಜಾತಿ ವಿವಾಹವಾಗಿದ್ದ ಕಾಳಚನ್ನೇಗೌಡರೇ ಮಹೇಶನ ಅಂತರಂಗದ ಗುರು.. ತಾನೂ ಅವರಂತೆಯೇ ಬದುಕಬೇಕೆಂದು ಕನಸುಕಂಡಿದ್ದವನು..ಅವರಿಂದಲೇ ಕವಿಗೋಷ್ಠಿಯ ಗೀಳು ಹತ್ತಿದ್ದು. ಮೈಸೂರಿನಲ್ಲಿ ಎಲ್ಲಿ ಕವಿಗೋಷ್ಠಿ ಇದ್ದರೂ ಅದನ್ನು ತಪ್ಪಿಸದೆ ಮೇಷ್ಟ್ರು ಹೇಳುತ್ತಿದ್ದರು. ಮಹೇಶ ಕವಿತೆಗಳ ಬರೆದುಕೊಂಡು ಮೇಷ್ಟ್ರೆದುರು ತಿದ್ದಿಸಿಕೊಳ್ಳಲು ದೈನ್ಯವಾಗಿ ನಿಂತುಕೊಳ್ಳುತ್ತಿದ್ದನು. ಮೇಷ್ಟ್ರು ತಿದ್ದಿಕೊಟ್ಟರೆಂದರೆ ಸಾಕು ಕವಿಗೋಷ್ಠಿಗೆ ಹಾಜರ್.. ಮೀಸೆ ಚಿಗುರುವ ವಯಸ್ಸಲ್ಲಿ ಪ್ರೇಮ, ಪ್ರೀತಿ ಮತ್ತೊಂದೋ ಬರೆಯದೆ ಗಂಭೀರವಾಗಿ ಸಮಾಜದ ಅಂಕುಡೊಂಕುಗಳನ್ನು, ಅನಿಷ್ಟ ವ್ಯವಸ್ಥೆಯನ್ನು ಕುರಿತು ಬರೆಯುತ್ತಿದ್ದ ಮಹೇಶನ ಕವಿತೆಗಳೆಂದರೆ ಎಲ್ಲರಿಗೂ ಇಷ್ಟವಾಗುತ್ತಿದ್ದವು. ಕವಿಗೋಷ್ಠಿ ಮುಗಿದಮೇಲೆ ಹಿರಿಯರು ಬೆನ್ನುತಟ್ಟುತ್ತಿದ್ದರೆ ಮಹೇಶನಿಗೆ ಆಕಾಶದಲ್ಲಿ ಹಕ್ಕಿಯಂತೆ ಹಾರಾಡಿದ ಅನುಭವ.. ಪ್ರತಿ ಕಾರ್ಯಕ್ರಮದಲ್ಲೂ ಇವನ ಕವಿತೆಗಳ ಮೆಚ್ಚಿಕೊಂಡು ನಾಲ್ಕೋ ಐದೋ ಹುಡುಗಿಯರಂತೂ ಕೈ ಕುಲುಕಲೇ ಬೇಕು. ಅಷ್ಟು ಪ್ರಸಿದ್ಧಿಯಾಗಿದ್ದ ಮಹೇಶ. ಆದರೆ ಒಂದು ಕೊರಗು ಇದ್ದಿತ್ತು ತನ್ನ ಕವಿತೆಗಳನ್ನು ಇನ್ನೂ ಸಂಕಲನ ಮಾಡಿಲ್ಲವಲ್ಲ ಎಂದು. ಅದು ಅವನ ಮಹದಾಸೆಯೂ ಆಗಿತ್ತು. ಡಿಗ್ರಿಯಲ್ಲೇ ತನ್ನ ಒಂದು ಸಂಕಲನ ತರಬೇಕು ಎಂದುಕೊಂಡಿದ್ದವನಿಗೆ ಅಲ್ಲಿದ್ದಾಗಲಂತೂ ಸಾಧ್ಯವಾಗಲೇ ಇಲ್ಲ. ಮೇಷ್ಟ್ರೂ ದೂರದೂರಿಗೆ ವರ್ಗವಾದಾಗ ಅನಾಥನಂತಾದ ಮಹೇಶ.

ಸಿಕ್ಕ ಸಿಕ್ಕವರೆಲ್ಲ ಅವನ ಕವಿತೆಗಳನ್ನು ಮೆಚ್ಚಿಕೊಳ್ಳುತ್ತಿದ್ದರೆ ವಿನಃ ಸಂಕಲನ ಮಾಡಿಸಲು ಕೇಳಿದರೆ ಯಾರೂ ಮುಂದೆ ಬರುತ್ತಿರಲಿಲ್ಲ. ಯಾರನ್ನೋ ಕೇಳಿದಾಗ ಮೂವತ್ತು ಸಾವಿರ ರೂಪಾಯಿ ಖರ್ಚಾಗುವುದೆಂದಿದ್ದರು.. ಮತ್ತೆ ಕೆಲವರು ಇಲ್ನೋಡಪ್ಪ ಕವನ ಸಂಕಲನ ಮಾಡೊದಂದ್ರೆ ಸುಲಭ ಅನ್ಕೊಂಡಿದ್ಯ? ಅದಕ್ಕೆ ಹಣಬಲ ಇರ್ಬೇಕು, ಇಲ್ಲಂದ್ರೆ ಜಾತಿ ಬಲ ಇರ್ಬೇಕು.. ಅದಿಲ್ಲ ಅಂದ್ರೆ ಕಷ್ಟ ಕಣಪ್ಪ ಅಂದಿದ್ದರು.. ಮಹೇಶನಿಗೆ ಆಗ ಕವನ ಸಂಕಲನದ ಆಸೆಯೇ ಹೊರಟುಹೋಗಿತ್ತು.. ಅದೂ ಅಲ್ಲದೆ ಗಂಗೋತ್ರಿಗೆ ಬಂದ ಹೊಸತರಲ್ಲಿ ಯಾರೋ ಹೇಳಿದರೆಂದು ತಮ್ಮ ವಿಭಾಗದಲ್ಲೆ ಪ್ರಸಿದ್ದರಾದವರ ಬಳಿ ಕವಿತೆಗಳನ್ನೆಲ್ಲ ಹೊತ್ತುಕೊಂಡು ಅದಕ್ಕೆ ಮುನ್ನುಡಿಯೋ, ಅಭಿಪ್ರಾಯವೋ ಬರೆದುಕೊಡಿಯೆಂದು ಅಂಗಾಲಾಚಿದರೆ ಅವರು ಮಹೇಶನನ್ನು ಮೇಲಿನಿಂದ ಕೆಳಕ್ಕೆ ನೋಡಿ ನೀವೂ ಬರೀತಿರೇನ್ರೀ.. ನೋಡ್ರೀ ನಂಗೆ ಟೈಮಿಲ್ಲ.. ಮತ್ತೆ ಮುನ್ನುಡಿ ಬೆನ್ನುಡಿ ಬರಿಯೋಕಾಗಲ್ಲ ಕಣ್ರೀ.. ಟೈಮಾದರೆ ನಾನೇ ಕರೆ ಮಾಡುವೆ ಎಂದು ಫೋನ್ ನಂಬರ್ ಪಡೆದು ಬೀರೂವಿಗೆ ಅಂಟಿಸಿಕೊಂಡು, ಕವಿತೆಗಳನ್ನು ಮುಟ್ಟೂ ನೋಡದೆ, ಬಾಗಿಲೆಡೆಗೆ ಕೈ ತೋರಿದ್ದರು ಆ ಪ್ರಸಿದ್ಧರೆನಿಸಿಕೊಂಡವರು. ಆ ಬೀರೂವಿನ ಮೇಲೆ ಇಂತಹ ಚೀಟಿಗಳೇ ತುಂಬಿಹೋಗಿದ್ದವು.. ಅದಾದಮೇಲೆ ಇವತ್ತಿನವರೆವಿಗೂ ಅವರ ಕರೆ ಬರಲೇ ಇಲ್ಲ. ನಿತ್ಯ ಕಾಲೇಜಿಗೆ ಕಾರಿನಲ್ಲಿ ಅವರು ಬಂದಿಳಿಯುವಾಗ ಮಹೇಶ ನಮಸ್ತೆ ಎರಚಿದರೆ ನಮಸ್ತೆ ಎಂದು ಹೇಳುತ್ತಿದ್ದರೇ ಹೊರತು ಕವನಸಂಕಲನದ ಬಗ್ಗೆ ಮಾತೇ ಎತ್ತುತ್ತಿರಲಿಲ್ಲ. ಈ ಪ್ರಸಿದ್ಧರೆನಿಸಿಕೊಂಡವರು ಇಷ್ಟೆ. ತಾವು ಬೆಳೆಯುವುದನ್ನೇ ನೋಡುತ್ತಾರೆಯೇ ಹೊರತು ಬೆಳೆಯುವವರನ್ನು ಸಹಿಸುವುದಿಲ್ಲ. ಮಹೇಶನಿಗೆ ಅಂದು ಆದ ಅವಮಾನ ಮತ್ತೆಂದೂ ಕವಿತೆಗಳನ್ನು ಬರೆಯಲೇ ಬಾರದು, ಈಗ ಬರೆದಿರುವ ಕವಿತೆಗಳನ್ನೆಲ್ಲ ಸುಟ್ಟು ಬೂದಿ ಮಾಡಿಬಿಡಬೇಕು ಎನ್ನಿಸುವಷ್ಟರ ಮಟ್ಟಿಗೆ ಆ ಘಟನೆ ಮನಸ್ಸಿನಲ್ಲಿ ಕೊರೆಯುತ್ತಲಿತ್ತು. ಆದರೇಕೋ ಹುಚ್ಚು ಭರವಸೆ ಕವಿತೆಗಳನ್ನು ಬರೆಯುವುದನ್ನು ನಿಲ್ಲಿಸಿರಲಿಲ್ಲ.

ಮಳೆ ಇನ್ನೂ ಜೋರಾಯಿತು.. ತನ್ನ ಕ್ಲಾಸಿನವಳೇ ಆದ ಯೋಗೇಶ್ವರಿ ತನ್ನೆಡೆಗೇ ಬರುತ್ತಿರುವುದನ್ನು ಗುರುತಿಸಲು ಮಹೇಶನಿಗೇನೂ ಕಷ್ಟವಾಗಲಿಲ್ಲ. ಮಳೆಗೆ ಪೂರ ನೆನೆದು ತೊಯ್ದುಹೋಗಿದ್ದಳು.. ಚಳಿಗೆ ನಡುಗುತ್ತಾ ಒದ್ದೆ ಬಟ್ಟೆಯಲ್ಲಿ ಅಪ್ಸರೆಯಂತೆ ಕಾಣುತ್ತಿದ್ದಾಳೆ. ಧರಿಸಿದ್ದ ಬಟ್ಟೆಯಿಂದ ನೀರೂ ತೊಟ್ಟಿಕ್ಕುತ್ತಿತ್ತು.. "ಲೋ ಯಾಕೋ ಇಲ್ಲೆ ನಿಂತಿದ್ಯ ಬಾ ಟೀ ಕುಡಿಯೋಣ. ನಿನ್ಗೊಂದ್ ಗುಡ್ ನ್ಯೂಸ್ ಇದೆ ಮಾರಾಯ" ಎಂದು ನಿರ್ಭೀತಿಯಿಂದ ಅವನ ಕೈ ಹಿಡಿದೇ ಒಳಕ್ಕೆ ಕರೆದೊಯ್ದಳು. ತನ್ನನ್ನು ಕೂರಿಸಿ ತಾನೇ ಎರಡು ಕಪ್ ಟೀ ತೆಗೆದುಕೊಂಡು ಮಹೇಶನ ಮುಂದೆ ಇಟ್ಟಳು. "ನೀನ್ ಯಾವಾಗ್ಲೂ ಕೊರಗ್ತಾ ಇದ್ಯಲ್ಲೋ ಯಾರೂ ಪ್ರಕಾಶಕರಿಲ್ಲ, ಮುನ್ನುಡಿ ಬರೆಯೋರಿಲ್ಲ ಅಂತ. ನನ್ ಪರಿಚಯದವರಿಗೆ ನಿನ್ ಬಗ್ಗೆ ಹೇಳ್ದೆ.. ಅವರು ಪ್ರಸಿದ್ದ ಕವಿಯೊಬ್ಬರಿಂದ ಮುನ್ನುಡಿಯನ್ನು ಬರೆಸಿ, ಅವರೇ ಪ್ರಿಂಟ್ ಮಾಡ್ಸೋ ಭರವಸೆ ಕೊಟ್ಟಿದ್ದಾರೆ ಕಣೋ" ಎನ್ನುವುದಕ್ಕೂ ಮಹೇಶನ ಕಣ್ಣೊಳಗೆ ಸಾವಿರ ದೀವಿಗೆಗಳು ಬೆಳಗಿದವು.. "ಹೌದಾ ಯೋಗೇಶ್ವರೀ.. ನಿಜಾನ" ಎಂದನು. ಅವಳು ಕಣ್ಣಿನಲ್ಲಿ "ಹ್ಞೂ" ಎಂದಳು. ಮಳೆಯಲ್ಲಿ ನೆನೆದಿದ್ದ ಅವಳು ಅವನಿಗೆ ಆ ಕ್ಷಣವೇ ಅಪ್ಸರೆಯಂತೆ ಕಾಣಿಸಿದಳು. ಭಾವನೆಗಳಲ್ಲಿಯೇ ಆಕೆಗೆ ಕೋಟಿ ವಂದನೆಗಳನ್ನು ಹೇಳಿದನು. ಖುಷಿಗೆ ಅವಳನ್ನು ಅಪ್ಪಿಕೊಳ್ಳಬೇಕೆನಿಸಿತು. ತನ್ನದು ಅತಿಯಾಯಿತೇನೋ ಎಂದು ಕಿಟಕಿಯಾಚೆ ನೋಡಿದನು. ಮಳೆ ನಿಧಾನವಾಗಿ ಕಡಿಮೆಯಾಗುತ್ತಿತ್ತು. ನಾಳೆ ಕವನಗಳೊಂದಿಗೆ ಬರಬೇಕೆಂದೂ, ಅದನ್ನೆಲ್ಲ ತೋರಿಸಿ ತನ್ನನ್ನು ಪ್ರಕಾಶಕರಿಗೆ ಪರಿಚಯಿಸುವೆನೆಂದು ಹೇಳಿ ಯೋಗೇಶ್ವರಿ ಬಸ್ ಸ್ಯಾಂಡಿನತ್ತ ಹೆಜ್ಜೆ ಇಕ್ಕಿದಳು.

ಇಂದು ಆದ ಖುಷಿ ಮಹೇಶನ ಬದುಕಿನಲ್ಲೆಂದೂ ಆಗಿರಲಿಲ್ಲ. ಮನೆಯ ಕಡೆ ಬಿರುಸಿನ ಹೆಜ್ಜೆ ಇಕ್ಕಿದನು. ಮಳೆ ನಿಂತಿದ್ದರೂ ಮರಗಳೆಲೆಯಿಂದ ಬೀಳುವ ಹನಿಗಳು ಮಾತ್ರ ನಿಂತಿರಲಿಲ್ಲ. ಇಷ್ಟು ವರ್ಷ ಬರೆದ ಕವಿತೆಗಳೆಲ್ಲ ನಾಳೆ ಸಂಕಲನವಾಗಿ ಜನ್ಮತಾಳಿ ಎಲ್ಲರೂ ಓದುತ್ತಾರೆ. ತನ್ನನ್ನು ಗುರುತಿಸುತ್ತಾರೆ. ಈ ವಿಷಯವನ್ನು ಅವ್ವನಿಗೆ ಹೇಳಿದರೆ ಅದೆಷ್ಟು ಖುಷಿಯಾಗುತ್ತಾಳೋ ಎಂದು ನಡೆ ಜೋರು ಮಾಡಿದನು. ಗೌರಮ್ಮನ ಕೈಗಾಡಿ ಹೊಟೇಲಿನ ಬಜ್ಜಿ ಆಗಲೇ ಮೂಗಿಗೆ ಬಂದು ಬಡಿಯುತ್ತಿತ್ತು. ಅವ್ವನಿಗೊಂದು ನನಗೊಂದು ಬಜ್ಜಿ ಕೊಳ್ಳುವ ಎಂದು ಐದು ರೂಪಾಯಿಕೊಟ್ಟು ಬಜ್ಜಿಕೊಂಡನು. ಅಲ್ಲೇ ತಿನ್ನಬೇಕೆನಿಸಿದರೂ ಅವ್ವನೊಂದಿಗೆ ತಿನ್ನುವ ಸುಖವೇ ಬೇರೆ, ಅವಳು ಫ್ಯಾಕ್ಟರಿಯಲ್ಲಿ ಪುರಿ ಕೊಟ್ಟರೂ ತನಗೋಸ್ಕರ ಮನೆಗೆ ತರುವುದಿಲ್ಲವೇ ಎಂದು ಮನೆಗೆ ಹೋದನು. ಬಾಗಿಲು ತೆಗೆದಿತ್ತು. ಮನೆಯೊಳಕ್ಕೆ ಕಾಲಿಡಲು ಮನೆಯತುಂಬ ಮಳೆ ನೀರು ತುಂಬಿಹೋಗಿತ್ತು. ಅಯ್ಯೋ! ತಾನಿಟ್ಟಿದ್ದ ಪುಸ್ತಕ ಕವಿತೆಗಳ ಹಾಳೆಗಳು ನೀರಿನಲ್ಲಿ ನೆನೆದೇ ಹೋಗಿವೆ.. ಮಹೇಶ ಪಾತಾಳಕ್ಕೆ ಕುಸಿದುಹೋದ. ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಸುರಿಯಲಾರಂಭಿಸಿದವು. ನೆನೆದು ತೊಪ್ಪೆಯಾಗಿದ್ದ ಒಂದೊಂದೇ ಕವಿತೆ ಬರೆದಿದ್ದ ಹಾಳೆಗಳನ್ನು ನೋಡಿದನು. ಅಕ್ಷರವೆಲ್ಲ ಅಳಿಸೇ ಹೋಗಿವೆ. ಮಹೇಶನ ಎದೆ ಒಡೆದೇ ಹೋಯಿತು. ಇಷ್ಟುವರ್ಷ ಪಟ್ಟ ಶ್ರಮವೆಲ್ಲ ಇಂದು ನೀರಾಯಿತಲ್ಲ ಎನ್ನಲು ಅವ್ವ ಬಂದಳು.. ಎಲ್ಲವನ್ನೂ ನೋಡಿದವಳಿಗೆ ಅರ್ಥವಾಗದೇ ಇರಲಿಲ್ಲ. ಬಾಚಿ ತಬ್ಬಿಕೊಂಡು ಅತ್ತಳು. ಮಹೇಶನು ಮನಸ್ಸೋ ಇಚ್ಚೆ ಅತ್ತು.

ಬಜ್ಜಿ ತಂದಿದ್ದ ಪೇಪರಿನಲ್ಲಿ ಬರೆದನು.. “ಮಳೆರಾಯ ಬಂದ ನನ್ನ ಕವನಗಳೆಲ್ಲವ ತಿಂದ ಬಹುವರ್ಷದ ತಪಸ್ಸಿಗೆ ನೀರೆರಚಿದ ನನ್ನ ಕಣ್ಣೀರಗೆಡವಿದ.. ಮಳೆಗೂ ನನ್ನ ಕವಿತೆಗಳೆಂದರೆ ಹೊಟ್ಟೆಕಿಚ್ಚು ಬಡವನೊಡಲಿಗೇ ಉರಿವ ಕಿಚ್ಚು..” ಆಚೆ ಮತ್ತೆ ಮಳೆ ಜೋರಾಯಿತು. ಅವರಮನೆಯ ನಾಯಿ ಕರಿಯ ಮಹೇಶ ಎಸೆದ ಬಜ್ಜಿ ತಿನ್ನುತ್ತಿತ್ತು.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.