ಸ್ಫೂರ್ತಿಅಸಮಾಧಾನವೆಂಬುದು ನನ್ನ ಮನಸ್ಸಿನಲ್ಲಿ ಆಳವಾಗಿ ಕುಳಿತುಬಿಟ್ಟಿತ್ತು. ನಾನು ಯಾವ ಇಷ್ಟ ಕಾರ್ಯವನ್ನು ಮಾಡಲು ಹೊರಟರೂ ಆಸ್ಥೆಯಿಂದ ಪರಿಪೂರ್ಣವಾಗಿಸಲು ವಿಫಲವಾಗುತ್ತಿದ್ದೆ. ಮನೆಯ ವಾತಾವರಣವೂ ನನ್ನನ್ನು ಕುಗ್ಗಿಸಿತ್ತು. ಉಸಿರು ಗಟ್ಟಿಸಿತ್ತು. ಮನಸ್ಸಿನ ಶಾಂತಿಯ ಹುಡುಕಾಟದಲ್ಲಿ ನಾನು ಹಿಡಿದದ್ದು ನನ್ನ ಊರಿನ ಹಾದಿ. ಶಾಂತವಾದ ವಾತಾವರಣ ಮತ್ತು ನಿಷ್ಕಲ್ಮಷ ಮನವುಳ್ಳ ಊರಿನ ಮಂದಿ. ಇವೆರಡೂ ನನ್ನ ಮನಸ್ಸನ್ನು ತಿಳಿಗೊಳಿಸಿತ್ತು. ಮುಂಜಾವಿನ ಕೋಳಿಯ ಕೂಗಿಗೆ ಕಣ್ತೆರೆದೆ. ಹಾಗೆಯೇ ಅಜ್ಜ ಮರೆತುಹೇಗಿದ್ದ ಹಾಲಿನ ಪಾತ್ರೆಯನ್ನು ಕೊಟ್ಟು ಬಾ ಎಂದು ದೊಡ್ಡಮ್ಮ ಕಳುಹಿಸಿದರು. ದಾರಿಯಲ್ಲೊಬ್ಬ ಮಹಿಳೆ ಇಟ್ಟಿಗೆ ಜೋಡಿಸಿ ಗೋಡೆ ಕಟ್ಟುವ ಕಾರ್ಯದಲ್ಲಿ ತೊಡಗಿದ್ದರು. ಆಕೆಯನ್ನು ಕಂಡಾಗ ಒಂದು ರೀತಿ ಕಸಿವಿಸಿ. ಮಾತನಾಡಿಸಯೇಬಿಟ್ಟೆ. ನೀವ್ಯಾಕೆ ಇದನ್ನು ಒಬ್ಬರೇ ಕಟ್ಟುತ್ತಿದ್ದಿರಾ..? ನಿಮ್ಮ ಸಹಾಯಕ್ಕೆ ಯಾರೂ ಇಲ್ಲವೇ.?? ಆಕೆ ನೀಡಿದ ಉತ್ತರ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ.

''ಮಗ, ಇದು ನನ್ನದೇ ಮನೆ, ದಿನಾ ಒಂದು ಒಂದು ಗೋಡೆ ಕಟ್ಟುದ್ರೂ ಸಾಕು. ಬೇಗನೆ ನನ್ನ ಮನೆಯಲ್ಲಿ ನಾನು ಇರಬಹುದು. ಇಟ್ಟಿಗೆ ಸಾಮಾನುಗಳನ್ನು ಹೊಂದಿಸಲು ಒಂದು ವರ್ಷ ಬೇಕಾಯ್ತು. ಇನ್ನು ಕೂಲಿಯವರಿಗೆಲ್ಲಾ ಕೊಡಕ್ಕೆ ನನ್ನ ಹತ್ತಿರ ಕಾಸು ಎಲ್ಲಿಂದ ತಾನೇ ಬರಬೇಕು..? ಸರಿ ಮಗ,ನನ್ನ ಹತ್ತಿರ ಜಾಸ್ತಿ ಹೊತ್ತಿಲ್ಲ. ಆಮೇಕೆ ಗೌಡ್ರ ಮನೆಗೆ ಹೋಗಿ ಮನೆ ಕೆಲಸ ಮಾಡಬೇಕು'' ಅಂತ ಹೇಳಿ ಮತ್ತೆ ತನ್ನ ಕೆಲಸವನ್ನು ಮುಂದುವರೆಸಿದರು. ಯಾರೋ ಹೆಂಗಸು ಹೇಳಿದ ಮಾತನ್ನು ನಾನು ಯಾಕೆ ಇಲ್ಲಿ ವ್ಯಕ್ತ ಪಡಿಸ್ತಿದ್ದೀನಿ ಅಂತ ನಿಮಗೆ ಅನ್ನಿಸಬಹುದು. ಆದ್ರೆ, ಆ ಹೆಂಗಸಿನ ಮಾತುಗಳು ನಾನು ಯೋಚಿಸುವ ವಿಧವನ್ನೇ ಬದಲಿಸಿಬಿಟ್ಟಿತು.

ಹೇಗೆ ಅಂತ ಚಿಂತಿಸುತ್ತಿರುವಿರಾ..? ಅಂತಹ ವಯಸ್ಸಿನಲ್ಲಿ ಆಕೆಯಲ್ಲಿದ್ದ ಸಾಧಿಸಬೇಕೆಂಬ ಹುಮ್ಮಸ್ಸು ನಿಜವಾಗಲು ನನಗೆ ಸ್ಪೂರ್ತಿ. ಪ್ರತಿ ದಿನ ಒಂದೊಂದು ಗೋಡೆ ಕಟ್ಟಿದರೆ, ಮುಂದೆ ಭವಿಷ್ಯದಲ್ಲಿ ಒಂದು ದಿನ ಅದು ಮನೆಯಾಗುತ್ತದೆ ಎಂಬ ಮಾತು ನನ್ನ ಅಂತರಾಳವನ್ನು ತಾಕಿತು. ಪ್ರತಿ ನಿತ್ಯ ಶ್ರಮ ಪಟ್ಟರೆ, ಅದರ ಫಲವನ್ನು ಒಂದು ದಿನ ನಾವು ಕಂಡೇ ಕಾಣುತ್ತೇವೆ. ಛಲವೆಂಬುದು ಅಷ್ಟು ಸುಲಭವಾಗಿ ಲಭ್ಯವಿದ್ದಿದ್ದರೆ ಗೆಲುವಿನ ಸಂತಸಕ್ಕೆ ಬೆಲೆಯೇ ಇರುತಿರಲಿಲ್ಲವೇನೋ.

ಈ ಘಟನೆ ನಡೆದು ಮೂರು ವರ್ಷಗಳೇ ಆಗಿವೆ. ನನ್ನ ಯಾವುದೇ ಕಾರ್ಯದಲ್ಲಿ ಫಲ ದೊರೆತಾಗ, ಮೊದಲು ನೆನೆಯುವುದು ಆ ಹೆಂಗಸನ್ನು. ಇಂದಿಗೂ ಆಕೆ ನನಗೆ ಆದರ್ಶ..!!


kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.