ಮಕ್ಕಳಿರಲವ್ವ ಮನೆತುಂಬ ಅನ್ನೋ ಮಾತು ಒಂದು ಕಾಲದಲ್ಲಿತ್ತು. ಆದರೆ ಈಗ ಇರೋ ಒಂದು ಮಗುವಿಗೆ ಸಮಯ ನೀಡಲಾಗುತ್ತಿಲ್ಲ ಅನ್ನೋದು ಸರ್ವೆ ಸಾಮಾನ್ಯವಾದ ಮಂತ್ರ ಘೋಷವಾಗಿದೆ. "ಬೆಳೆಯುವ ಸಿರಿ ಮೊಳಕೆಯಲ್ಲಿಯೇ" ಅನ್ನೋ ಹಾಗೆ ಪೋಷಕರು ಯಾವ ರೀತಿ ಸಂಸ್ಕಾರವನ್ನ ನೀಡುತ್ತೇವೆಯೋ ಅದರ ಪ್ರತಿಯಾಗಿ ಬಿಂಬ ಗೋಚರವಾಗುತ್ತದೆ.

ಇಂದಿನ ಯಾಂತ್ರಿಕ ಯುಗದಲ್ಲಿ ತಂದೆ-ತಾಯಿ ಇಬ್ಬರೂ ಕೆಲಸ ಮಾಡೋದು ಅನಿವಾರ್ಯ. ಹಾಗಂತ "ದುಡಿಮೆಗಾಗಿಯೇ ಜೀವನವಲ್ಲ, ಜೀವನಕ್ಕಾಗಿ ದುಡಿಮೆ" ಅನ್ನೋ ಅಂಶವನ್ನು ಗಮನದಲ್ಲಿಟ್ಟುಕೊಂಡರೆ ಎಷ್ಟೋ ಅವಘಡಗಳನ್ನು ತಪ್ಪಿಸಬಹುದು ಅನ್ನೋದು ನನ್ನ ಭಾವನೆ.
ಕಾಲಕ್ಕೆ ತಕ್ಕಂತೆ ಬದಲಾಗಬೇಕು ನಿಜ ಆದರೆ, ಎಷ್ಟರಮಟ್ಟಿಗೆ ಬದಲಾವಣೆ ಬೇಕು ಎನ್ನುವ ನಿರ್ಧಾರ ನಮ್ಮದಾಗಿದ್ದರೆ ಒಳ್ಳೆಯದು.

ಹಿಂದಿನ ಕಾಲದಲ್ಲಿ ಅಂದರೆ ನಮ್ಮ ಕಾಲದವರೆಗೂ ಮಕ್ಕಳಿಗೆ ಸಾಕಷ್ಟು ದೈಹಿಕ ಚಟುವಟಿಕೆಗಳು ಇದ್ದವು. ಮೈದಾನದಲ್ಲಿ ನಿರ್ಭಯವಾಗಿ ಆಟವಾಡಲು ಅವಕಾಶ ಇತ್ತು. ಆದರೆ ಈ ಕಾಲದ ಮಕ್ಕಳಿಗೆ ಅಷ್ಟು ಅದೃಷ್ಟ ಇಲ್ಲ ಬಿಡಿ. ಒಂದು ವೇಳೆ ಆಟವಾಡಲು ಬಿಟ್ಟರು ಅದರಿಂದ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಂತೆಯೆ ಮಕ್ಕಳನ್ನು ಕದ್ದು ಅವರನ್ನು ಭಿಕ್ಷಾಟನೆಯಂಥಹ ದಂಧೆಗೆ ಬಿಡವವರ ಗುಂಪು ಒಂದಾದರೆ , ಎಳೆ ಮಕ್ಕಳಿಗೆ ದೈಹಿಕ ಹಿಂಸೆ ಮಾಡಿ ಅಟ್ಟಹಾಸ ಮೆರೆಯುವವರು ಇಂಥಹ ಜನರ ಮಧ್ಯೆ ನಮ್ಮ ಮಕ್ಕಳನ್ನ ಬಹಳ ಎಚ್ಚರದಿಂದ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಅದಕ್ಕೆ ತಕ್ಕಂತೆ ಇಂದಿನ ಯಾಂತ್ರಿಕ ಯುಗ. ಫಾಸ್ಟ್ ಲೈಫ್. ಎಲ್ಲವೂ ಇನ್‌ಸ್ಟಂಟ್ ಆಗಿ ಸಿಕ್ಕಿದರೆ ತುಂಬಾ ಸಂತೋಷ ಅಂತ ಬದುಕೋ ಕಾಲ. ಅದಕ್ಕೆ ತಕ್ಕಂತೆ ಕೈಯಲ್ಲೊಂದು ಮೊಬೈಲ್ ಇದ್ದರೆ ಸಾಕು ಪ್ರಪಂಚವೇ ತಲೆ ಕೆಳಗಾದರೂ ತಿಳಿಯದಂಥಹ ಮಂಪರು ಸ್ಥಿತಿ ಅವರದಾಗಿರುತ್ತದೆ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಅಂತ ಒಂದು ಮಾತು ಇದೆ ಹಾಗಿದೆ ನಮ್ಮ ಸ್ಥಿತಿ. ಇದಕ್ಕೆ ಕಾರಣ ಪೋಷಕರಾದ ನಾವುಗಳೇ ಹೊರತು ಇನ್ಯಾರು ಅಲ್ಲ.
ಮಗುವಿಗೆ ಯಾರು ಜೊತೆ ಇಲ್ಲ ಮೊಬೈಲ್ ಇದ್ರೆ ಆಟವಾಡಿಕೊಳ್ಳತ್ತೆ ಮಗುವಿಗೆ ಟೈಮ್ ಪಾಸ್ ಆಗುತ್ತೆ ಅನ್ನುವವರಿಗೆಲ್ಲ ಒಂದು ಕಿವಿಮಾತು. ನಮ್ಮ ಮಗುವಿಗೆ ಇಂಟರ್‌ನೆಟ್ ಲಿ ಬ್ರೌಸಿಂಗ್ ಮಾಡೋಕೆ ಗೊತ್ತು ನಾವು ಯಾರು ಹೇಳಿಕೊಟ್ಟಿಲ್ಲ ಅಂತ ಚಿಕ್ಕ ಮಕ್ಕಳ ತಾಯಂದಿರು ಎದೆಯುಬ್ಬಿಸಿ ಹೇಳುತ್ತಾರೆ.

ಸಂತಸದಿಂದ ಹೇಳಿ ಆದರೆ ಅದರಿಂದಾಗೋ ತೊಂದರೆ ಇದೆಯಲ್ಲ ಅದನ್ನ ತಿಳಿಯೋ ಪ್ರಯತ್ನ ಮಾಡಿ. ಎಂಡ್ರೋಯ್ಡ್ ಮೊಬೈಲ್ ಬಳಕೆ ಹೆಚ್ಚಾದಂತೆ ಮಗುವಿನ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮಗಳಾಗತ್ತೆ.

ಬದಲಾಗಿ ಸಾದ್ಯವಾದಷ್ಟು ಮಗುವಿನ ಜೊತೆಯಲ್ಲಿದ್ದು ಆಟ-ಪಾಠಗಳೆಡೆಗೆ ಸೆಳೆಯುವ ಕಲೆ ನಮ್ಮದಾಗಬೇಕು.
3 ರಿಂದ 5 ವರ್ಷದೊಳಗಿನ ಮಕ್ಕಳಿಗಂತು ಮೊಬೈಲ್ ಗೀಳಿನಿಂದಾಗಿ ಮುದ್ದು-ಮುದ್ದಾದ ಮಾತು ಕೂಡ ಮರೆತಂತಿದೆ. ಇದರಿಂದಾಗಿ ಮಗು ಎಲ್ಲರ ಜೊತೆ ಬೆರೆಯುವುದು ಕಷ್ಟಸಾಧ್ಯ. ಎಷ್ಟೋ ಬಾರಿ ಮುದ್ದು ಕಂದಮ್ಮಂದಿರಿಗೆ ಕೌನ್ಸಿಲಿಂಗ್ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೊ ಹಾಗಾಗಿದೆ.
ಇನ್ನು ಶಾಲಾ-ಕಾಲೇಜಿನ ಮಕ್ಕಳಂತು ಮಾರಕ ಜಾಲತಾಣಗಳಿಗೆ ಸಿಕ್ಕಿ ಒದ್ದಾಡುತ್ತಿದ್ದಾರೆ. ಅರಿಯದ ಮನಸ್ಸಿಗೆ ಎಳೆ ವಯಸ್ಸಿಗೇ ಬೇಡದ ವಿಚಾರವನ್ನ ತಿಳಿದುಕೊಂಡು ಮಾಡಬಾರದ ಕೆಲಸ ಮಾಡಿ, ಜೀವನ ಹಾಳು ಮಾಡಿಕೊಂಡ ಉದಾಹರಣೆಗಳು ಕಣ್ಣಿಗೆ ಕಟ್ಟುವಂತೆ ಇದೆ.
ಯಾವುದು ಒಳ್ಳೆಯದು, ಯಾವುದರಿಂದ ಕೆಡುಕಾಗಬಹುದು ಅನ್ನೋದನ್ನು ತಿಳಿಸೋದು ನಮ್ಮ ಕರ್ತವ್ಯ.

ನಮ್ಮ ಅಜ್ಜಿ-ತಾತ, ಅಪ್ಪ-ಅಮ್ಮ ಇವರೆಲ್ಲರು ಕತೆ ಹೇಳುತ್ತಲೇ ನಮ್ಮನ್ನ ಅದ್ಭುತ ಲೋಕಕ್ಕೆ ಕೊಂಡೊಯ್ಯುತ್ತಿದ್ದರು.ದಿನಾ ಸಂಜೆಯಾಗುತ್ತಲೇ ಬಾಯಿಪಾಠ, ಭಜನೆ, ರಾಮಾಯಣ, ಮಹಾಭಾರತ ಇವನ್ನೇಲ್ಲ ಓದುವ, ಕಥೆ ಹೇಳುವ ಪರಿಪಾಟವಿತ್ತು. ಇದರ ಮೂಲಕವೇ ನಮಗೆ ನೈತಿಕ ಮೌಲ್ಯಗಳನ್ನ ಎಷ್ಟೋ ವಿಚಾರಗಳನ್ನ ತಿಳಿಹೇಳುತ್ತಿದ್ದರು. ಆದರೆ ಇಂದು ಆ ಸ್ಥಾನವನ್ನು ಮೊಬೈಲ್ ಆಕ್ರಮಿಸಿಕೊಂಡಿದೆ.
ಸದಾ ಗೇಮ್ಸ್ , ವಿಡಿಯೋಗಳ ಮದ್ಯೆ ಸಿಲುಕಿ ನಮ್ಮ ಮಕ್ಕಳ ಕಲ್ಪನಾ ಶಕ್ತಿಯನ್ನ ಗುರುತಿಸದೆ ಕಡೆಗಾಣಿಸ್ತಿದೀವಿ. ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಹೆಚ್ಚು ಸಮಯವನ್ನು ಮಕ್ಕಳಿಗಾಗಿ ಮೀಸಲಿಡಿ.

ಏನ್ರೀ ಇದು ಮಾತೆತ್ತಿದರೆ ಹಳೇಕಾಲದ ಅಡಗೂಲಜ್ಜಿ ಕತೆ ಹೇಳ್ತಿದೀರಾ ಈಗಿನ ಬ್ಯುಸಿ ಲೈಫ್ ಲ್ಲಿ ಇದೆಲ್ಲಾ ಯಾರ್ರೀ ಮಾಡಕಾಗತ್ತೇ ಅಂದ್ಕೋತಿದಿರಾ?? ನಮ್ಮ ಹಿರಿಯರು ನಮ್ಮನ್ನು ಬೆಳೆಸಿರೋ ರೀತಿ ನಮ್ಮನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಅದಕ್ಕಾಗಿ ನಾವು ಚಿರರುಣಿಗಳು.
ಆದರೆ ನಾವು ಪಾಲಿಸ್ಥಿರೋದೇನು?? ಅದರಂದಾಗಿ ನಮ್ಮ ಮಕ್ಕಳ ವೈಚಾರಿಕ ಮಟ್ಟ ಹೇಗಿರಬಹುದು?? ಯೋಚಿಸಿ.

ಮಕ್ಕಳು ನಮ್ಮ ಅವಶ್ಯಕತೆಗಲ್ಲ, ಪ್ರೀತಿಯ ದ್ಯೋತಕವಾಗಿ,ದಾಂಪತ್ಯದ ಕುರುಹುಗಳಾಗಬೇಕು.
ಪ್ರೀತಿ-ವಿಶ್ವಾಸದ ಎಣ್ಣೆ ಎರೆದು, ಸರಳ ಸಜ್ಜನಿಕೆಯ ಬತ್ತಿ ಹೊಸೆದು ಆಚಾರಕ್ಕೆ ಅರಸನಾಗಿ ನೀತಿಗೆ ಪ್ರಭುವಾಗಿ ಪ್ರಜ್ವಲಿಸುವ ಜ್ಯೋತಿಯಂತೆ ಬೆಳೆಸಿದಾಗಲೇ ಸಾರ್ಥಕತೆಯ ಭಾವ. ಆ ಭಾವನೆ ನಮ್ಮೆಲ್ಲರದಾಗಲಿ.

ಭಾಗ್ವತ್@ rp.
ಮಕ್ಕಳ ದಿನಾಚರಣೆಯ ಶುಭಾಶಯಗಳು.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.