ವಿಧಿ ಬರಹ ಎಂಥಾ ಘೋರ...!!!

ಒಂದೂರಲ್ಲಿ ಶ್ರೀಮಂತಿಕೆಯ ಕುಟುಂಬವೊಂದಿತ್ತು.ಅದೆಷ್ಟು ಶ್ರೀಮಂತಿಕೆ ಎಂದರೆ ನೊಡುವವರೆಲ್ಲಾ ಗಾಬರಿಯಾಗವಷ್ಟು,ಎಲ್ಲಿಯಾದರೂ ನಾಲ್ಕೈದು ಜನ ಕೂಡಿ ಮಾತಾಡುವಾಗ ಶ್ರೀಮಂತಿಕೆಯ ವಿಷಯ ಏನಾದರೂ ಬಂದರೆ ಈ ಕುಟುಂಬದ ಶ್ರೀಮಂತಿಕೆ ವಿಷಯ ಮಾತನಾಡದೆ ಇರಲಾರದಷ್ಟು ಶ್ರೀಮಂತಿಕೆ.! "ದೇವರು ಕೊಟ್ಟು ಮರೆತಿದ್ದಾನೆ" ಅಂತರಾಲ್ಲ, ಅಷ್ಟು ಶ್ರೀಮಂತಿಕೆ! ಈ ಸಿರಿವಂತ ದಂಪತಿಗೆ ಒಂದೇ ಒಂದು ಮುದ್ದಾದ ಮಗಳಿದ್ದಳು.ಹೆಸರು ಶ್ರೀದೇವಿ ಅಂತ. ಪ್ರೀತಿಯಿಂದ ಎಲ್ಲರೂ ಅವಳನ್ನು "ಸಿರಿ" ಅಂತ ಕರೆಯುತಿದ್ದರು.ಈ ಮುದ್ದಾದ ಮಗು ಮಾತಾಡುತಿದ್ದ ತೊದಲು ನುಡಿಗಳನ್ನು ಕೇಳಿ ಮನೆ ಮಂದಿಯೆಲ್ಲ ಖುಷಿಯಾಗುತಿದ್ದರು. ಮಾಡುತ್ತಿದ್ದ ತರಲೆ ನೊಡಿ ಮನೆ ಮಂದಿಗೆಲ್ಲ ಸಮಯ ಹೋಗುವುದೇ ಗೊತ್ತಾಗುತ್ತಿರಲಿಲ್ಲ ಅಷ್ಟು ತರ್ಲೆ ಮಾಡುತ್ತಿದ್ದಳು.! ಹೀಗೆ ತರ್ಲೆ, ತಮಾಷೆ ಮಾಡುತ್ತ ಮಾಡುತ್ತ ವರ್ಷಗಳು ಉರುಳಿದ್ದೇ ತಿಳಿಯಲಿಲ್ಲ.ಸಿರಿ ಈಗ ಶಾಲೆಗೆ ಹೊಗುತಿದ್ದಾಳೆ.ಅವಳಿರುವ ಹಳ್ಳಿಯಲ್ಲಿ ಶಾಲೆ ಇರದ ಕಾರಣ, ಹಳ್ಳಿಯಿಂದ ಐದಾರು ಕಿಲೋಮೀಟರ್ ಅಂತರದಿಲ್ಲಿರುವ ಪಟ್ಟಣಕ್ಕೆ ಕಾರಿನಲ್ಲಿ ಶಾಲೆಗೆ ಹೋಗಿ ಬರುತ್ತಿರುತ್ತಾಳೆ.

ಈಕೆ ಶಾಲೆಗೆ ಹೋಗಿ ಬರಲೆಂದೇ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಿಶೇಷ ಕಾರು! ಅದನ್ನು ಓಡಿಸಲು ಒಬ್ಬ ಚಾಲಕ ಮೀಸಲು.! ಈಕೆ ಶಾಲೆಗೆ ಹೋಗುವಾಗ ರಸ್ತೆಯಲ್ಲಿ ಅಷ್ಟೇನೂ ಸ್ಥಿತಿವಂತರಲ್ಲದ ಸಹಪಾಠಿಗಳು ನಡೆದುಕೊಂಡು ಹೋಗತ್ತಿದ್ದರೆ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದಳು! ಈಕೆಗೆ ತಾನು ಕೋಟ್ಯಾಧೀಶರ ಮಗಳು ಎಂಬ ಗರ್ವ ಎಳ್ಳಷ್ಟೂ ಇಲ್ಲ.! ಬಹಳ ಬುದ್ದಿವಂತೆ.ಓದಿನಲ್ಲಿ ಇಡೀ ಶಾಲೆಗೇ ಪ್ರಥಮ.ಗುಣದಲ್ಲಿ ಶ್ರೀಗಂಧ, ಮಾತಿನಲ್ಲಿ ಮಲ್ಲಿಗೆಯಷ್ಟು ಮೃದು.ಕರುಣಾಮಯಿ,ಸೌಮ್ಯ ಸ್ವಭಾವದವಳು,ಭೂಮಿ ತಾಯಿಯಷ್ಟು ತಾಳ್ಮೆ ಉಳ್ಳವಳು,ದೈವ ಭಕ್ತೆ.....ಈಕೆಯ ಸೌಂದರ್ಯದ ಬಗ್ಗೆ ಪದಗಳಲ್ಲಿ ವರ್ಣಿಸಲು ಅಸಾಧ್ಯ ಬಿಡಿ...!!!!ಈಕೆಯನ್ನು ಸೃಷ್ಟಿಸಿದ ದಿನ ಬೇರೆ ಯಾರನ್ನೂ ಸೃಷ್ಟಿಸದೇ,ಸೃಷ್ಟಿಕರ್ತ ಈಕೆಯ ಸೃಷ್ಟಿಯಲ್ಲೇ ತಲ್ಲಿನನಾಗಿ ಸೃಷ್ಟಿಮಾಡಿದ್ದನೆನೋ ಎನ್ನುವಷ್ಟರಮಟ್ಟಿಗೆ ಈಕೆಯ ಚೆಲುವು.!!ಸುತ್ತ ಹತ್ತಳ್ಳಿಯಲ್ಲಿ 'ಸಿರಿ'ಯ ಸೌಂದರ್ಯವನ್ನು ಮೀರಿಸುವ ಮತ್ತೊಬ್ಬ ಚೆಲುವೆ ಇರಲಿಲ್ಲ.ಥೇಟ್ 'ಬೇಲೂರ ಶಿಲಾಬಾಲಿಕೆಯಂತೆ ಕಡೆದಿದ್ದ ಆ ಸೃಷ್ಟಿಕರ್ತ.! ಸ್ವತಃ 'ಬಾನಚಂದ್ರಮ' ನಾಚುವಷ್ಟು 'ಸ್ಫುರದ್ರೂಪಿ ಚೆಲುವೆ'. ಸಹಾಯ ಮಾಡುವದರಲ್ಲಿ "ಶ್ರೀರಾಮನ ಬಂಟ ಶ್ರೀ ಹನುಮಂತನಂತೆ"ಸದಾ ಸಿದ್ದಳು.ತನ್ನ ಸಹಪಾಠಿಗಳು ಯಾರೇ ತೊಂದರೆಯಲ್ಲಿದ್ದರೂ ತನ್ನ ಕೈಲಾದ ಸಹಾಯ ಮಾಡುತಿದ್ದಳು.

ಈಕೆ ಎಂದರೆ ಶಾಲೆಯ 'ಶಿಕ್ಷಕ ವೃಂದಕ್ಕೂ, ಹಾಗೂ ಸಹಪಾಠಿಗಳಿಗೆ ಅಚ್ಚು-ಮೆಚ್ಚು.!!ಮುಂದೆ 'ಸಿರಿ' ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಯಲ್ಲಿ ಇಡೀ ಜಿಲ್ಲೆಗೆ ಪ್ರಥಮಸ್ಥಾನ ಬರುತ್ತಾಳೆ. 'ಸಿರಿ'ಯ ಅಪ್ಪ,ಅಮ್ಮನ ಖುಷಿಗೆ ಪಾರವೇ ಇಲ್ಲ.!! ಊರ "ಹನುಮಂತ"ನ ದೇವಸ್ಥಾನಕ್ಕೆ ಹೋಗಿ,ದೇವರಿಗೆ ಕೈ ಮುಗಿದು,ಪೂಜೆ ಮಾಡಿಸಿ,ದೇವರಿಗೆ ಕೃತಜ್ಞತೆ ಸಲ್ಲಿಸಿ,ನಮ್ಮ ಮಗಳು ಇದೇ ರೀತಿ ಮುಂದೆ ಕೂಡ ಓದುವಂತೆ ಹರಸು "ಹನುಮ" ಎಂದು ಬೇಡಿಕೊಂಡು ತೆಂಗಿನ ಕಾಯಿಯ ಮೂಡುಪು ಕಟ್ಟಿ ಇಡೀ ಊರಿಗೆ ಸಿಹಿ ಹಂಚಿ ಸಂಭ್ರಮಪಡುತ್ತಾರೆ.ಮುಂದೆ ಸಿರಿ,ತಮ್ಮ ಹಳ್ಳಿಯಿಂದ ಸರಿಸುಮಾರು 350 ಕಿ.ಮೀ ಬಹುದೂರವಿರುವ ಪ್ರತಿಷ್ಠಿತ ಕಾಲೇಜಿನಲ್ಲಿ ಪಿ.ಯು.ಸಿ ಹಾಗೂ ಇಂಜಿನಿಯರಿಂಗ್ ನಲ್ಲಿ ಅಪ್ಪ, ಅಮ್ಮ "ಶ್ರೀ ಹನುಮಂತ"ದೇವರ ಬಳಿ ಬೇಡಿಕೊಂಡಂತೆ ಚೆನ್ನಾಗಿ ಓದಿ ಇಡೀ ರಾಜ್ಯಕ್ಕೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುತ್ತಾಳೆ. ತಮ್ಮ ಬೇಡಿಕೆ ಇಡೇರಿಸಿದ್ದ ಊರ ದೇವರು "ಹನುಮಂತನ" ಗುಡಿಗೆ ಹೋಗಿ,ದೇವರ ಗುಡಿಯ ಗಂಟೆಗ ಕಟ್ಟಿದ್ದ ಮುಡಪನ್ನು ಬಿಚ್ಚಿ,ಪೂಜೆ ಮಾಡಿಸಿ,ಕಾಣಿಕೆ ಸಲ್ಲಿಸಿ,ಊರ ಜನರಿಗೆ ಸಿಹಿ ಹಂಚಿ ಸಂಭ್ರಮಿಸುತ್ತಾರೆ.

ಓದಿನಲ್ಲಿ ಸಿರಿ ಮಾಡಿದ ಸಾಧನೆಯಿಂದ ಇಡೀ ರಾಜ್ಯಕ್ಕೇ ಆ ಹಳ್ಳಿಯ ಹೆಸರು ಚಿರಪರಿಚಿತವಾಗುತ್ತೆ.!! ಈಗ ಸಿರಿ ಕೇವಲ ಸಿರಿವಂತ ದಂಪತಿಗಳಿಗೆ ಮಾತ್ರ ಮಗಳಲ್ಲ...!!! ಇಡೀ ಊರಿಗೆ ಮನೆಯ ಮಗಳು...!!!ಈಕೆ ಓದುವ ಎಲ್ಲ ಮಕ್ಕಳಿಗೆ ಮಾದರಿಯಾಗಿಬಿಡುತ್ತಾಳೆ...'ಸಿರಿ'ಯ ಸಾಧನೆಯನ್ನು ಮೆಚ್ಚಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸುತ್ತವೆ...'ಸಿರಿ'ಅಂತಿಮ ವರ್ಷ Engineering ಓದುತಿರುವಾಗಲೇ campus interview ನಡೆದಿರುತ್ತೆ ಆ interviewನ ಫಲಿತಾಂಶ ಬರುತ್ತೆ.'ಸಿರಿ'ಯೂ ಆಯ್ಕೆಯಾಗಿರುತ್ತಾಳೆ.ಇತ್ತ ಈಕೆಯ ಪ್ರತಿಭೆಯನ್ನು ಮೆಚ್ಚಿ ಹಲವಾರು ಪ್ರತಿಷ್ಟಿತ ಕಂಪನಿಗಳು ನಾ ಮುಂದು, ತಾ ಮುಂದು ಎಂದು ಕೆಲಸಕ್ಕೆ ನೇಮಕ ಮಾಡಿಕೊಳ್ಳಲು ಮುಂದೆ ಬರುತ್ತವೆಯಾದರೂ, ಇದ್ದೊಬ್ಬ ಮಗಳನ್ನು ಕೆಲಸಕ್ಕೆ ಕಳುಹಿಸಲು 'ಸಿರಿ'ಯ ಅಪ್ಪ,ಅಮ್ಮ ಸುತಾರಂ ಒಪ್ಪುವುದಿಲ್ಲ...ಯಾಕೆಂದರೆ...?ಅಷ್ಟಕ್ಕೂ ಅವರಿಗೆ ತಮ್ಮ ಮಗಳು ದುಡಿಯಬೇಕು, ನಮ್ಮ ಜೀವನ ಸಾಗಬೇಕು, ಎಂಬ ಪ್ರಮೆಯವೇ ಇರುದಿಲ್ಲ...ಇವರೇ ಸಾಕಷ್ಟು ಜನರಿಗೆ ಹೊಲ, ಮನೆಯಲ್ಲಿ ಕೆಲಸ ಮಾಡಲೆಂದೇ ಕೂಲಿ, ನಾಲಿಗಳನ್ನು ಇಟ್ಟುಕೊಂಡು ಸಂಬಳ ಕೊಡುತ್ತಿರುತ್ತಾರೆ.....!!! ಅಂಥದರಲ್ಲಿ ಇದ್ದೊಬ್ಬ ಮಗಳನ್ನು ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಕಳಿಸುತ್ತಾರೆಯೇ....? ಇವರು ಮಗಳನ್ನು ಕೇವಲ ತಮ್ಮ ಮನೆತನದ ಪ್ರತಿಷ್ಠೆಗಾಗಿ ಓದಿಸಿರುತ್ತಾರೆ...! ಈಗ 'ಸಿರಿ'ಯಳ ಅಪ್ಪ, ಅಮ್ಮನಿಗೆ ಉಳಿದಿರೋ ಒಂದೇ ಒಂದು ಜವಾಬ್ದಾರಿ ಅದು ಮಗಳ ಮದುವೆ...

ಅಪ್ಪ, ಅಮ್ಮ ಮದುವೆ ವಿಚಾರ ಮಾತಾಡಿದಾಗಲೆಲ್ಲ 'ಸಿರಿ'ಯಳಿಗೆ ಅಪ್ಪ, ಅಮ್ಮನನ್ನ ಬಿಟ್ಟು ಹೇಗೆ ಇರುವುದಪ್ಪ ಎಂಬ ಚಿಂತೆ, ಭಯ.. ಇನ್ನೊಂದು ಕಡೆ ಖುಷಿ...!ಹದಿಹರೆಯದ ವಯಸ್ಸಿಗೆ ಬಂದ, ಎಲ್ಲ ಹುಡುಗಿಯರಿಗೆ ಕನಸುಗಳಿರುವಂತೆ ಈಕೆಗೂ ಸಾಕಷ್ಟು ಕನಸುಗಳಿರುತ್ತವೆ...ನಾ ಮದುವೆ ಆಗುವ ಹುಡುಗ ಹಾಗಿರಬೇಕು, ಹೀಗರಿಬೇಕು ಎಂದು... ಅವನು ನನ್ನ ಭಾವನೆಗಳಿಗೆ ಬೆಲೆ ಕೊಡಬೇಕು, ನನ್ನ ನೋವಿಗೆ ಸ್ಪಂದಿಸಬೇಕು,ನಾ ಸಿನಿಮಾಕ್ಕೆ ಕರದರೆ ತಕ್ಷಣವೇ ಒಪ್ಪಿಕೊಂಡು ಬರಬೇಕು.. ಇತ್ಯಾದಿ.... ಇತ್ಯಾದಿ....ಈಕೆ ಕಾಲೇಜಲ್ಲಿ B.E ಓದುತ್ತೀರುವಾಗಲೇ ಹಲವಾರು ಹುಡುಗರು ಈಕೆಯ ಒಳ್ಳೆಯ ಗುಣಕ್ಕೆ, ಸೌಂದರ್ಯಕ್ಕೆ ಮಾರುಹೋಗಿ Prapose ಮಾಡಿದ್ದರೂ ಆಕೆ ನಿರಾಕರಿಸಿರುತ್ತಾಳೆ....ಕಾರಣ ಆಕೆ ಕನಸು ಕಂಡ ಎಲ್ಲ ಕನಸುಗಳನ್ನು ನನಸು ಮಾಡುವ,ಮನ ಮೆಚ್ಚಿದ ಹುಡುಗ ಇರುತ್ತಾನೆ... ಅವನು ಬೇರೆ ಯಾರೂ ಅಲ್ಲ....ಆಕೆಯ ಅಮ್ಮನ ತಮ್ಮ ಅಂದರೆ ಸೋದರ ಮಾವ...!!!ಈಕೆಗೆ ಒಟ್ಟು ಮೂವರು ಸೋದರ ಮಾವಂದಿರು.ಇದರಲ್ಲಿ ಇಬ್ಬರು ಬಲು ಚೆಲುವರು,ಇಬ್ಬರೂ BE ಮುಗಿಸಿ. ಅದೇ ಊರಿನ ಸುಪ್ರಸಿದ್ದ ಕಂಪನಿಯಲ್ಲಿ ಕೆಲಸ ಸಿಕ್ಕಿ ರುತ್ತೆ.ಕೈ ತುಂಬಾ ಸಂಬಳ ಕೂಡ ಸಿಗುತ್ತಿರುತ್ತೆ. ಇವರು'ಸಿರಿ'ಯನ್ನು ಮದುವೆ ಆಗಲು ತುದಿಗಾಲಿನಲ್ಲಿ ನಿಂತಿರುತ್ತಾರೆ.ಆದರೆ ಅವರಿಬ್ಬರಲ್ಲಿ ಯಾರೊಬ್ಬರನ್ನೂ ಮದುವೆ ಆಗುವ ಆಸೆಯಾಗಲಿ,'ಸಿರಿ'ಗೆ ಇರಲ್ಲ...!! ಆಕೆಯ ಅಪ್ಪ, ಅಮ್ಮನಿಗೂ ಅಷ್ಟೇ ಅವರೆಂದರೆ ಎಳ್ಳಷ್ಟೂ ಇಷ್ಟವಿರಲ್ಲ. ಆದರೇ ಅಷ್ಟೇನೂ ಓದಿರದ, ಅಷ್ಟೇನೂ ಅಂದ-ಚಂದವಿರದ ಆತನೆಂದರೇ 'ಸಿರಿ'ಯಳಿಗೂ, ಆಕೆಯ ಅಪ್ಪ, ಅಮ್ಮನಿಗೂ ಬಲು ಪ್ರೀತಿ, ಬಲು ನಂಬಿಕೆ, ಬಲು ಅಚ್ಚುಮೆಚ್ಚು..

ಅವರಿಬ್ಬರಷ್ಟು ಓದಿರದಿದ್ದರೂ Business ಮಾಡಿ ಕೋಟ್ಯಂತರ ರೂಪಾಯಿಗಳಿಸಿ, ಮನೆಯ ಎಲ್ಲ ಖರ್ಚು ವೆಚ್ಚವನ್ನು ನೋಡಿ ಕೊಂಡು, ತಂದೆ, ತಾಯಿಯನ್ನು ಪ್ರೀತಿಯಿಂದ ಸಾಕಿದ್ದ ಹಾಗೂ ಮನೆಗೆ ಯಾರೇ ಬಂಧು ಬಳಗ ಬರಲಿ ಅವರನ್ನು ಪ್ರೀತಿಯಿಂದ ಮಾತಾಡಿಸಿ, ಅವರ ಕಷ್ಟ, ಸುಖ, ಯೋಗಕ್ಷೇಮ ವಿಚಾರಿಸಿ ಅವರು ಕಷ್ಟ ಅಂತ ಹೇಳಿಕೊಂಡರೆ ತನ್ನ ಕೈಲಾದ ಸಹಾಯ ಮಾಡುತಿದ್ದ. ಗುಣವಂತ, ಕರುಣಾಮಯಿ, ದಾನ ಮಾಡುವದರಲ್ಲಿ "ಕಲಿಯುಗದ ಕರ್ಣ" ಎಂದೇ ಪ್ರಸಿದ್ಧ. ಈತನ ಅಂತರ್ ಸೌಂದರ್ಯವನ್ನು ಮೆಚ್ಚಿ, ಆತನಿಗೆ ಮನಸೋತು ಬಿಟ್ಟಿರುತ್ತಾರೆ.. ಆತನಿಗೂ 'ಸಿರಿ' ಎಂದರೆ ಪ್ರಾಣ.... ಬಹು ಪ್ರೀತಿ, ಬಹು ಇಷ್ಟ....!!! ಇನ್ನಿಬ್ಬರದ್ದು ಬಾಹ್ಯ ಸೌಂದರ್ಯ ಮಾತ್ರ ಚೆನ್ನಾಗಿತ್ತು. ಉಳಿದಿದ್ದೆಲ್ಲ ಆತನ ಗುಣಗಳಿಗೆ ತದ್ವಿರುದ್ಧ...!!! ಈತ ಭತ್ತದ ಸಗಟು ವ್ಯಾಪಾರ ಮಾಡುತಿರುತ್ತಾನೆ. ಈತನಿಗೆ ಸೇರಿದ 20 ಮಳಿಗೆವುಳ್ಳ ಕಟ್ಟಡ ಇರುತ್ತೆ. ಬಾಡಿಗೆಗೆ ಕೊಟ್ಟಿರುತ್ತಾನೆ. ಈ ಕಟ್ಟಡಕ್ಕೆ ಹೊಂದಿಕೊಂಡಂತೆ ಬೃಹತ್ ಉಗ್ರಾಣವೊಂದಿರುತ್ತೆ, ಇದರಲ್ಲಿ ಖರೀದಿ ಮಾಡಿದ ಭತ್ತವನ್ನು ಸಂಗ್ರಹಿಸಿ ಒಳ್ಳೆ ಬೆಲೆ ಬಂದಾಗ ಮಾರುತ್ತಿರುತ್ತಾನೆ ಹಾಗೂ Real Estate ದಂಧೆ ಕೂಡ ಮಾಡುತ್ತಿರುತ್ತಾನೆ...!!! ಎರಡೂ ಮನೆಯವರು ಕೂಡಿ ಮದುವೆಗೆ ಒಳ್ಳೆಯ ಮುಹೂರ್ತ ಇಟ್ಟು ಕೊಡಲು ಮನೆಯ ಸ್ವಾಮಿಗಳನ್ನು ಕೇಳುತ್ತಾರೆ..ಸ್ವಾಮಿ ಗಳು ಒಳ್ಳೆ ಮುಹೂರ್ತ ಇಟ್ಟುಕೊಡುತ್ತಾರೆ.

ಮದುವೆಗೆ ಎಲ್ಲ ಸಿದ್ಧತೆಗಳು ಭರದಿಂದ ಸಾಗಿರುತ್ತೆ. ಕೋಟ್ಯಾಧೀಶರ ಮಗಳ ಮದುವೆ ಅಂದರೆ ಸುಮ್ನೆನಾ...??? ಸಿರಿ ಮದುವೆಯ ಜೊತೆಗೆ 1೦೦ ಸಾಮೂಹಿಕ ಮದುವೆಗಳು ಅಂದರೆ ಒಟ್ಟು 101 ಮದುವೆಗಳನ್ನು ಮಾಡಿಕೊಡುತ್ತಿರುತ್ತಾನೆ 'ಸಿರಿ'ಯಳ ಅಪ್ಪ....!!! ಎರಡು ಕುಟುಂಬದವರೂ ಕೂಡಿ ಮದುವೆಗೆ ಬೇಕಾದ ವಸ್ರ್ತಾಭರಣಗಳನ್ನು, ಮಾಂಗಲ್ಯಗಳನ್ನು ಕೊಂಡುಕೊಳ್ಳುತ್ತಾರೆ...ಮದುವೆಗೆ ಇನ್ನೂ ಕೇವಲ ಒಂದು ವಾರ ಬಾಕಿ..ಲಗ್ನ ಪತ್ರಿಕೆ ಹಂಚಿಕೆ ನಡೆದಿರುತ್ತೆ...ಮನೆಯಲ್ಲಿ,ಊರ ಜನರು ಮಾತ್ರವಲ್ಲದೇ,ಸುತ್ತ ಹಳ್ಳಿಗಳ ಜನರೆಲ್ಲರೂ ಕೂಡಿ ಮರದಿಂದ ಕೇರೀ ಅಕ್ಕಿ, ಬೇಳೆ ಸ್ವಚ್ಛ ಮಾಡುತ್ತಿದ್ದಾರೆ.. ಮನೆಯ ಪಕ್ಕದ ಬಯಲು ಜಾಗದಲ್ಲಿ ಮದುವೆ ದಿನ ಊಟಕ್ಕೆ ಊಣಬಡಿಸಲು ಬೇಕಾದ ಸಿಹಿ-ತಿಂಡಿಗಳ ತಯಾರಿ, ಖಾರ ಬೂಂದಿ ತಯಾರಿ ಭರದಿಂದ ಸಾಗಿರುತ್ತೆ..ಒಟ್ಟಿನಲ್ಲಿ'ಸಿರಿ'ಯಾಳ ಮನೆ "ಗೀಜುಗನ" ಗೂಡಿನಂತಾಗಿರುತ್ತೆ... ಎಷ್ಟೇ ಆಗಲಿ 'ಸಿರಿ' ಕೇವಲ ಸಿರಿವಂತ ದಂಪತಿಗೆ ಮಾತ್ರ ಮಗಳಲ್ಲದೇ, ಊರ ಜನರ "ಮನೆ ಮಗಳಲ್ಲವೇ....."??? ಇತ್ತ ಊರ ಹೊರಗೆ ಇರುವ ತಮ್ಮ ಹೊಲದಲ್ಲೇ ಮದುವೆಗೆ ಬಂದ ಜನಕ್ಕೆ ಕುಳಿತುಕೊಳ್ಳಲು ಬೃಹತ್ ಪೆಂಡಾಲ್ ಹಾಕುತ್ತಿರುತ್ತಾರೆ, ಇನ್ನೊಂದು ಕಡೆ ವಿಶಾಲವಾದ ವೇದಿಕೆಯ ತಯಾರಿ ನಡೆದಿರುತ್ತೆ... ಮತ್ತೊಂದು ಕಡೆ ಊಟ ಮಾಡಲು, ಮಗದೊಂದು ಕಡೆ ಕೈ, ತಟ್ಟೆ, ತೊಳೆಯುವ ವ್ಯವಸ್ಥೆ... ಒಟ್ಟಿನಲ್ಲಿ ಮದುವೆಯ ಎಲ್ಲಾ ಸಿದ್ಧತೆಗಳು ವ್ಯವಸ್ಥಿತವಾಗಿ ಸಾಗಿರುತ್ತವೆ.... ಈ ಎಲ್ಲ ಸಿದ್ಧತೆಗಳನ್ನು ಖುದ್ದು 'ಸಿರಿ' ಅಪ್ಪನೇ ಮುಂದೆ ನಿಂತು ಮಾಡಿಸುತ್ತಿರುತ್ತಾನೆ...!!!

ಮಗಳ ಮದುವೆಗೆ ಹಾಗೂ ಸಾಮೂಹಿಕ ಮದುವೆಗಳಿಗೆ ಬರುವ, ಬಂಧು ಬಳಗದವರಿಗಾಗಲಿ, ಗಣ್ಯರಿಗಾಗಲಿ, ಸಾರ್ವಜನಿಕರಿಗಾಗಲಿ ಯಾರಿಗೂ ತೊಂದರೆಯಾಗದಿರಲಿ ಎಂಬ ಸದ್ದುದ್ದೇಶದಿಂದ...!!! ಸದಾಶಯದಿಂದ...!!!!ಮದುವೆಗೆ ಕೇವಲ ಒಂದೇ ದಿನ ಬಾಕಿ...!!! ಊರಿನ "ಹೃದಯ"ದಂತೆ ಇರುವ ಊರ 'ಮಧ್ಯ'ದಲ್ಲಿರುವ 'ಸಿರಿ'ಯಾಳ ಮನೆಗೆ, ಮನೆಯಿಂದ, ಮದುವೆ ನಡೆಯುವ ಸ್ಥಳಕ್ಕೆ ಹೊಗುವ ದಾರಿಗೆ,ಊರ "ಹನುಮಂತ" ದೇವರ ದೇವಾಲಯಕ್ಕೆ, "ಶಿವ"ದೇವಾಲಯಕ್ಕೆ ಹಾಗೂ ಊರಿಗೆ ಸಂಪರ್ಕ ಕೊಡುವ, ಕೂಡಿಸುವ ಎಲ್ಲಾ ರಸ್ತೆಗಳ ಅಕ್ಕ-ಪಕ್ಕ ಸರಿ ಸುಮಾರು ಎರಡು ಕಿಲೋಮೀಟರ್ ವರೆಗೂ ವಿದ್ಯುತ್ ದೀಪಲಂಕಾರ.! ತುಂಬು ಹುಣ್ಣಿಮೆ ಚಂದ್ರ ಹಾಲು ಚೆಲ್ಲಿದ ಬೆಳಕಿನಂತೆ ಹೊನಲು ಬೆಳಕಿನಲ್ಲಿ ಕಂಗೊಳಿಸುತ್ತಿದೆ ಸಿರಿಯ ಊರು. ನೋಡಲು ಎರಡೂ 'ಕಣ್ಣುಗಳು'ಸಾಲದು.....!!!ಊರಲ್ಲಿ ಹಬ್ಬದ ವಾತಾವರಣ..ರಾತ್ರಿ ಬೆಳಗಾದರೆ "ಮಾಂಗಲ್ಯಧಾರಣೆ...!!!" ಎಲ್ಲಿ ನೊಡಿದರೂ ಜನವೋ ಜನ...!!! "ಮಾಂಗಲ್ಯಧಾರಣೆ"ನಡೆಯುವ ಬೃಹತ್ ವೇದಿಕೆ ಹೂವುಗಳಿಂದ, ತಳೀರು, ತೋರಣಗಳಿಂದ ಕಂಗೊಳಿಸುತ್ತಿದೆ.. ಮದುವೆಗೆ ಬಂದ ಜನ ತಿಂಡಿ ತಿಂದು ಮುಹೂರ್ತಕ್ಕಾಗಿ ಕಾತರದಿಂದ ಕಾಯುತಿದ್ದಾರೆ...ಮದುವೆಗೆ ಸ್ವಾಮಿ ಗಳ,ಗಣ್ಯಾತೀಗಣ್ಯರ ಆಗಮನ ಅವರನ್ನು ಸ್ವಾಗತಿಸುತ್ತಿರುವ 'ಸಿರಿ'ಯಳ ಅಪ್ಪ ಹಾಗೂ ಸಂಬಂಧಿಕರು...ಇತ್ತ ಕ್ಷಣ ಕ್ಷಣಕ್ಕೂ ಹತ್ತಿರ ವಾಗತ್ತಿರುವ ಮುಹೂರ್ತ ಸಮಯ... ವೇದಿಕೆ ಮೇಲೆ ಸಪ್ತಪದಿ ತುಳಿಯಲಿರುವ ಎಲ್ಲಾ ನವಜೋಡಿಗಳು ನವ ಉಡುಗೆ ತೊಡುಗೆಗಳನ್ನು ಉಟ್ಟು,ಕೈಯಲ್ಲಿ ಮಂಗಳಸೂತ್ರವನ್ನು ಹಿಡಿದು ತಯರಾಗಿ ಕುಳಿತಿದ್ದಾರೆ.. ಮಂತ್ರಗಳ ಘೋಷಣೆ ಮೊಳುಗುತ್ತಿದೆ... ಮದುವೆಗೆ ಬಂದ ಎಲ್ಲರೀಗೂ ಅಕ್ಷತೆಕಾಳುಗಳನ್ನು ಹಂಚಲಾಗಿತ್ತು...!!!! ಗಟ್ಟಿಮೇಳ, ಗಟ್ಟಿಮೇಳ ಅನ್ನುತಲೆ ವಾದ್ಯಗಳು ಮೊಳುಗುತ್ತವೆ.

ಸ್ವಾಮಿಗಳು "ಮಾಂಗಲ್ಯಂ ತಂತೂ ನಾನೇನಾ....ನವಜೀವನ ಹೇತುನಾ ಮಂತ್ರ...." ಪಠಿಸುತ್ತಾರೆ.. ನೆರೆದವರೆಲ್ಲಾ ಅಕ್ಷತೆ ಕಾಳುಗಳನ್ನು ಹಾಕಿ, ನವಜೀವನಕ್ಕೆ ಕಾಲಿರಿಸಿದ ನವಜೋಡಿಗಳಿಗೆ ಒಳ್ಳೆಯದಾಗಲಿ, ನೂರಾರು ವರ್ಷಗಳ ಕಾಲ ಬದುಕಿ ಬಾಳಿ ಎಂದು ಹರಿಸಿ, ಹಾರೈಸಿ. ಭೂರಿಭೋಜನ ಸವಿದು ತಮ್ಮ ತಮ್ಮ ಊರುಗಳಿಗೆ ತೆರುಳುತ್ತಾರೆ... ಕುಮಾರಿ ಸಿರಿ ಈಗ "ಶ್ರೀಮತಿ ಸಿರಿ ಪಾಟೀಲ್. "ಮದುವೆ ಆದ ಮೇಲೆ ಸಿರಿಯನ್ನು ಕಣ್ಣಾರೆ ಕಂಡವರೇ ಧನ್ಯರು...!!! ಗುಲಾಬಿ ಬಣ್ಣದ ಸೀರೆ ಉಟ್ಟಿದಾಳೆ, ಹಣೆಯಲ್ಲಿ ಸಿಂಧೂರ,ತಲೆಯಲ್ಲಿ ಮಲ್ಲಿಗೆ ಹೂವು ಮುಡಿದಿದ್ದಾಳೆ.ಕೈಗಳ ತುಂಬಾ ಹಸಿರು ಗಾಜಿನ ಬಳೆಗಳು,ಕಾಲಲ್ಲಿ ಬೆಳ್ಳಿ ಕಾಲುಂಗುರ.ಸಾಕ್ಷಾತ್ "ಲಕ್ಷ್ಮಿ" ಥರ ಕಾಣಿಸುತ್ತಿದ್ದಳು.. ಗಂಡನ ಮನೆಗೆ ಹೊರಡಲು ರೆಡಿಯಾಗಿ ನಿಂತಿದ್ದಾಳೆ.ಮನದಲ್ಲಿ ಏನೋ ತಳಮಳ,ಸಂಕಟ ದುಃಖ..ಅಪ್ಪ ಅಮ್ಮನನ್ನ ಬಿಟ್ಟು ಹೊರಟೆನಲ್ಲ ಎಂದು ಮನಸ್ಸಿನಲ್ಲಿ ಕಸಿವಿಸಿ...!!! ಈಕೆಯ ಅಪ್ಪ, ಅಮ್ಮನಿಗೆ ಮಗಳ ಮದುವೆಯನ್ನು ದಾಂ ಧೂಂ ಮಾಡಿ ಕೊಟ್ಟೆವು ಎಂಬ ಖುಷಿ ಒಂದು ಕಡೆಯಾದರೆ, ಇನ್ನೊಂದು ಕಡೆ ಗಂಡನ ಮನೆಯಲ್ಲಿ ಹೇಗೆ ಇರುತ್ತಾಳೋ ಎಂಬ ಸಂಕಟ, ದುಃಖ ತಾಳಲಾರದೆ ಅತ್ತುಬಿಡುತ್ತಾರೆ. ಕಾರು ರೆಡಿಯಾಗಿದೆ ಹೊರಡಲು ಕಾರ್ ಬಳಿ ಹೋದ ಸಿರಿ ಉಮ್ಮಳಿಸಿ ಬಂದ ದುಃಖ ತಾಳಲಾರದೆ ಅಪ್ಪ, ಅಮ್ಮನನ್ನ ತಬ್ಬಿಕೊಂಡು ಅತ್ತುಬಿಡುತ್ತಾಳೆ.. ಎಷ್ಟೇ ಸಮಧಾನ ಮಾಡಿದರೂ ಬಿಕ್ಕಿ ಬಿಕ್ಕಿ ಅಳುತಿದ್ದಾಳೆ....! "ಹಾಲೂಂಡ ತವರನ್ನು ಮಗಳೇ....ನೆನೆಯೇ....ನಿನ್ನ ಮನೆಗೆ ನೀ.... ನಡೆಯೆ....

ನೀ ನಕ್ಕರೆ ತವರಿಗೆ ಹಾಲೂ... ನೀ ಅತ್ತರೆ ನಮಗೆಲ್ಲ ಪಾಲು, ಮಗಳಾಗಿ ಸುಖವನ್ನು ತಂದೇ, ಸೊಸೆಯಾಗಿ ಸುಖಬಾಳು ಮುಂದೆ ಎಂದು ಆಶೀಸಿ ಸಮಧಾನ ಹೇಳಿ ಗಂಡನ ಮನೆಗೆ ಕಳಿಸಿಕೊಡುತ್ತಾರೆ.

ಗಂಡನ ಮನೆಯಲ್ಲಿ ಸುಖವಾಗಿ ಇರುತ್ತಾಳೆ ಸಿರಿ. ಆದರೆ ಆಗಾಗ ಇನ್ನುಳಿದ ಇಬ್ಬರು ಮಾವಂದಿರು ನಮ್ಮನ್ನು ಮದುವೆ ಆಗಲಿಲ್ಲ, ಈಕೆ ಎಂಬ ಸಿಟ್ಟು ಬೇರೆ ಬೇರೆ ಕಾರಣಗಳಿಂದ ಪ್ರದರ್ಶನ ಆಗುತಿರುತ್ತಾದರೂ ಅದರ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವುದಿಲ್ಲ. ಮದುವೆ ಆಗಿ ಎರಡು ವರ್ಷಗಳ ಅಂತರದಲ್ಲಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಮಗು ಸಿರಿಯ ಹೋಲಿಕೆ ಇರುವ ಕಾರಣ ಚೆಲುವಾಂತ ಚೆನ್ನಿಗನ ತರಹ ಇರುತ್ತಾನೆ. ಜೀವನ ತುಂಬಾ ಚೆನ್ನಾಗಿ ನಡಿಯುತ್ತಾ ಇರುತ್ತೆ. ಮಗನಿಗೆ ಆರು ವರ್ಷ ತುಂಬುತ್ತೆ ಶಾಲೆಗೆ ಸೆರಿಸುತ್ತಾರೆ. ಮಗ ಶಾಲೆಗೆ ಹೋಗಿ ಬರ್ತಾ ಇರುತ್ತಾನೆ, ಗಂಡನ Business ಯಾವುದೇ ಕುಂದು ಕೊರತೆ ಇಲ್ಲದೆ ಚೆನ್ನಾಗಿ ನಡೆಯುತ್ತ ಇರುತ್ತೆ. ತವರು ಮನೆಯಲ್ಲಿ ಇರುವಂತೆ ಸುಖವಾಗಿ ಇರುತ್ತಾಳೆ ಸಿರಿ.ಒಂದು ದಿನ ಬೆಳಗಿನ ಜಾವ ಸರಿ ಸುಮಾರು 5:30ರ ಸಮಯ ಭಾರ್ಗವ ಭೂಮಿಗೆ ಬರಲು ಹವಣಿಸುತ್ತಿರುತ್ತಾನೆ ಕೆಲವು ಜನ ಆಗಲೇ ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ ದಿನ ಪತ್ರಿಕೆ ಹಾಕುವವರು,ಹಾಲು ಹಾಕುವವರು...ಮಳೆ ಗಾಳಿ ಎದ್ದು ಜೋರಾಗಿ ಗಾಳಿ ಬೀಸುತ್ತ ಇರುತ್ತೆ. ಒಬ್ಬರ ಮುಖ ಮತ್ತೊಬ್ಬರಿಗೆ ಕಾಣದಷ್ಟು ಕೆಂಧೂಳು ಎದ್ದಿರುತ್ತೆ. ಸಿರಿ ಗಂಡನ ಒಡೆತನದ ಉಗ್ರಾಣದಲ್ಲಿ Current Short-circuit ಆಗಿ ಬೆಂಕಿ ಅತ್ತಿ ಇಡೀ ಉಗ್ರಾಣ ಹಾಗೂ complex ಗೆ ಬೆಂಕಿ ತಗುಲಿಬಿಡುತ್ತೆ.! ಇದನ್ನು ನೋಡಿದ ಜನರಲ್ಲಿ ಒಬ್ಬರು immediate ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿ ಬೆಂಕಿ ಬಿದ್ದ ವಿಷಯ ತಿಳಿಸುತ್ತಾರೆ. ತಕ್ಷಣವೇ ಬಂದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಬಹಳಷ್ಟು ಪ್ರಯತ್ನಿಸುತ್ತಾರೆ. ಬೆಂಕಿ ಉರಿಯುವುದು ಹತೋಟಿಗೆ ಬರುವುದಿಲ್ಲ.

ಬೀಸುವ ಮಳೆಗಾಳಿಯೂ 'ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ' ಬೆಂಕಿ ಹತೋಟಿಗೆ ಬರದಿರುವುದನ್ನು ಮನಗಂಡು ಇನ್ನೂ ನಾಲ್ಕು ಅಗ್ನಿ ಶಾಮಕ ವಾಹನಗಳನ್ನು ಕರೆಸಿಕೊಳ್ಳುತ್ತಾರೆ. ಅಷ್ಟರಲ್ಲಿ ಸಿರಿಯ ಗಂಡನ ಸ್ನೇಹಿತನೊಬ್ಬ ಕರೆ ಮಾಡಿ ಬೆಂಕಿ ಬಿದ್ದ ವಿಷಯ ತಿಳಿಸುತ್ತಾನೆ. ಈ ವಿಷಯ ಕೇಳಿಯೇ ಸಿರಿಯ ಗಂಡನಿಗೆ ಎದೆಗೂಡು ಒಡೆದು ಹೋದ ಅನುಭವ ಆಗುತ್ತೆ. ಅವಸರದಲ್ಲಿ ಕಾರ್ ಹಾಕಿಕೊಂಡು ಬರುತ್ತಾನೆ. ತನ್ನ ಕಣ್ಣೆದುರಲ್ಲೇ ಕೋಟಿಗಟ್ಟಲೆ ಬೆಲೆ ಬಾಳುವ ಭತ್ತ ಇರುವ ಉಗ್ರಾಣ ಹಾಗೂ complex ಉರಿಯುವುದನ್ನು ಕಂಡು, ಬೆಂಕಿಯ ನರ್ತನವನ್ನು ಕಣ್ಣಾರೆ ಕಂಡು ಮಾನಸಿಕ ಘಾಸಿಗೊಳಗಾಗಿ ಮಾನಸಿಕ ಅಸ್ವಸ್ಥನಾಗಿ ಬಿಡುತ್ತಾನೆ.!!! ಆಕಾಶದೆತ್ತರಕ್ಕೆ ಚಾಚಿದ ಬೆಂಕಿಯ ಕೆನ್ನಾಲಿಗೆಗಳು,ದಟ್ಟ ಹೊಗೆ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಶತಾಯ ಗತಾಯ ಪ್ರಯತ್ನ ಮಾಡುತ್ತಾರೆ ಆದರೂ ಎಲ್ಲ ಸುಟ್ಟು ಭಸ್ಮ ಆಗಿ ಬಿಡುತ್ತೆ...! ವಿಧಿ ತನ್ನ ಅಟ್ಟಹಾಸ ಮೆರೆದು, ಈ ಘಟನೆಯಿಂದ ಹಲವಾರು ಕುಟುಂಬಗಳು ಬೀದಿಗೆ ಬರುತ್ತವೆ...! ಈ ವಿಷಯ ತಿಳಿದು ಸಿರಿಯ ಅಪ್ಪ, ಅಮ್ಮ ಮನೆಗೆ ದಾವಿಸಿ ಅಳಿಯನಿಗೆ ಎಷ್ಟೇ ಸಮಧಾನ ಹೇಳಿದರು ಆತ ಕೇಳುವ ಸ್ಥಿತಿಯಲ್ಲಿ ಇಲ್ಲ. ದಿನದಿಂದ ದಿನಕ್ಕೆ ಅಳಿಯನ ಹುಚ್ಚಾಟ ಹೆಚ್ಚಾಗುತ್ತ ಹೋಗುತ್ತೆ. ಈ ಸ್ಥಿತಿ ಕಂಡು ಸಿರಿಯ ಉಳಿದ ಇಬ್ಬರು ಮಾವಂದಿರಗೆ ಖುಷಿಯೋ ಖುಷಿ. "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ" ಅನ್ನುವ ಸ್ಥಿತಿ. ಆದರೆ ಸಿರಿಯ ಅತ್ತೆ, ಮಾವಂದಿರಿಗೆ ಮಗನ ಸ್ಥಿತಿ ಕಂಡು ಬಹಳಷ್ಟು ಮರುಕಪಡುತ್ತಾರೆ.

ಸಿರಿಯ ಅಪ್ಪ, ಅಮ್ಮ, ಅತ್ತೆ, ಮಾವಂದಿರು ಸುಪ್ರಸಿದ್ದ ಹುಚ್ಚಾಸ್ಪತ್ರೆಗೆ ಕರೆದು ಕೊಂಡು ಹೋಗಲು Ready ಆಗ್ತಾರೆ. ಆದರೆ ಇನ್ನುಳಿದ ಇಬ್ಬರು ಮಾವಂದಿರು ಅಪ್ಪ, ಅಮ್ಮನನ್ನ ಕಳಿಸಲು ಒಪ್ಪುವುದಿಲ್ಲ... ಸಿರಿಯ ಅಪ್ಪ, ಅಮ್ಮ ಹಾಗೂ ಸಿರಿ ಕೂಡಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ. ಡಾಕ್ಟರ್ ಕೇಳಿದ ಎಲ್ಲ ಪ್ರಶ್ನೆಗಳಿಗೆ ಇವರೇ ಉತ್ತರಿಸುತ್ತಾರೆ. ಯಾಕಂದ್ರೆ ಸಿರಿಯ ಗಂಡ ಉತ್ತರಿಸುವ ಸ್ಥಿತಿಯಲ್ಲಿ ಇರಲಿಲ್ಲ.! ಮೂರು ತಿಂಗಳಾದ್ರೂ ಸಿರಿ ಗಂಡನ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ, ಆಗ ಅವರಿವರ ಮಾತು ಕೇಳಿ ಸಿರಿಯ ಅಪ್ಪ, ಅಮ್ಮ ಎಷ್ಟು ಖರ್ಚಾದರೂ ಪರವಾಗಿಲ್ಲ ನಮ್ಮ ಅಳಿಯ ಆರಾಮವಾಗಿ ನಮ್ಮ ಮಗಳ ಬಾಳುವೆ ಚೆನ್ನಾಗಾದ್ರೆ ಸಾಕು ಅಂತ ಕಾರು, ಮನೆ, ಮಠ, ಆಸ್ತಿ ಪಾಸ್ತಿ ಮಾರಿ ದೇಶದ ಎಲ್ಲ ಸುಪ್ರಸಿದ್ದ ಆಸ್ಪತ್ರೆಗಳಲ್ಲಿ ತೋರಿಸುತ್ತಾರೆ, ಆದರೆ ಆತ ಮೊದಲಿನಂತಗಾಲು ಸಾಧ್ಯವಿಲ್ಲ.! ನಮ್ಮ ಕೈಲಾದ ಪ್ರಯತ್ನಗಳನ್ನೆಲ್ಲಾ ನಾವು ಮಾಡಿದ್ದೇವೆ ಇನ್ನೂ ನಮ್ಮ ಕೈಯಲ್ಲಿ ಏನಿಲ್ಲ, ಎಲ್ಲ ದೈವೀಚ್ಛೆ.!!! ಎಂದು ಡಾಕ್ಟರ್ ಹೇಳುತ್ತಾರೆ. ಅಳಿಯನ ಸ್ಥಿತಿ ಕಂಡು, ಮಗಳ ಗೋಳು ನೋಡಲಾಗದೆ ಸಿರಿಯ ಅಪ್ಪ, ಅಮ್ಮ ಒಂದು ತಿಂಗಳ ಅಂತರದಲ್ಲಿ ಇಬ್ಬರೂ ನೇಣು ಬಿಗಿದುಕೊಂಡು ಸಾವಿಗೆ ಶರಣಾಗುತ್ತಾರೆ...! ಇತ್ತ ಇಬ್ಬರು ಮಾವಂದಿರು ಇಷ್ಟೆಲ್ಲ ಆದರೂ ಒಂದು ದಿನ ಕೂಡ ಆಸ್ಪತ್ರೆಗೆ ಬಂದು ಅಣ್ಣನ ಆರೋಗ್ಯದ ಬಗ್ಗೆ ವಿಚಾರಿಸುವುದಿಲ್ಲ. ತಮ್ಮ ಅಪ್ಪ, ಅಮ್ಮ ಆಸ್ಪತ್ರೆಗೆ ಹೋಗಿ ಆರೋಗ್ಯದ ಬಗ್ಗೆ ವಿಚಾರಿಸಿ ಮಾತಾಡಿಸಿ ಬರಲು ಕೂಡ ಬಿಡುವುದಿಲ್ಲ.. ಸಿರಿಯ ಅಪ್ಪ, ಅಮ್ಮ ಸತ್ತಾಗ ಮಣ್ಣಿಗೂ ಬರುವುದಿಲ್ಲ ತಂದೆ, ತಾಯಿಯನ್ನು ಕೂಡ ಕಳಿಸುವುದಿಲ್ಲ... 'ಹುಟ್ಟುತ್ತ ಅಣ್ಣ ತಮ್ಮಂದಿರು,ಬೆಳೆಯುತ್ತ ದಾಯಾದಿಗಳು' ಅನ್ನುವ ಗಾದೆ ಮಾತಿನಂತೆ ಇಬ್ಬರು ದಾಯಾದಿಗಳು ಆಗಿಬಿಟ್ಟಿರುತ್ತಾರೆ.

ಸಿರಿಯನ್ನು, ಸಿರಿಯ ಗಂಡ ಹಾಗೂ ಮಗನನ್ನು ಮನೆಯಿಂದ ಹೊರ ಹಾಕಿ ಬಿಡುತ್ತಾರೆ...!!!'ಯಾರಿಗೆ ಯಾರುಂಟು...? ವಿಧಿಗೆ ಏನೂಂಟು...? ನಿಜ ಅರಿತವರಾರು...?ಸಂಬಂಧ ಎಂಬ ಅನುಬಂಧ ಬಿಡಿಸೊಕೆ ಬರದ ಪದ ಅನುಬಂಧ. ಯಾರ್ಯರ ಮೂಲ ಎಲ್ಲೆಲ್ಲದಿಯೋ?, ಕಾಲದ ಲೀಲೆಗೆ ಕೊನೆಯಲ್ಲಿ ದಿಯೋ..? ಕಾಯುವ ದೈವವೇ ಹೃದಯ ಒಡಿದರೆ ಈ ಮನುಜ ಬಾಳಿಗೆ ಎಲ್ಲಿ ನೆಲೆ? ಪ್ರೀತಿ ನೀಡುವ ವಿಧಿಯೇ ಮುನಿದರೆ ಈ ಲೋಕ ಬದುಕಿಗೆ ಎಲ್ಲಿ ಬೆಲೆ?ಸರಿ ಯಾವುದೊ?ಗುರಿ ಯಾವುದೊ?ದುಗುಡದ ಒಡಲಲ್ಲಿ ಇನ್ನೂ ಏನೇನಿದಿಯೊ?ಜೀವನ ಕಡಲಲ್ಲಿ ಇನ್ನು ಏನು ಅಡಗಿದಿಯೊ?ಎಂಬ ಹಲವಾರು ಪ್ರಶ್ನೆಗಳು ಸಿರಿಯನ್ನು ಕಾಡುತ್ತಿವೆ.ಏನು ಮಾಡುವುದು ವಿಧಿಗೆ ತಲೆ ಬಾಗಲೇಬೇಕು.ದುಃಖವನ್ನು ತಡೆದುಕೊಂಡು, ಅದೇ ಊರಲ್ಲಿ ಗಂಡ ಆಗಾಗ ಖರ್ಚಿಗೆಂತ ಕೊಟ್ಟ ದುಡ್ಡಲ್ಲೇ ಸ್ವಲ್ಪ ಸ್ವಲ್ಪ ಉಳಿಸಿ ಕೊಂಡಿರುತ್ತಾಳೆ ಹಾಗೂ ಅಪ್ಪ, ಅಮ್ಮ ತನ್ನನ್ನು ನೋಡಲು ಬಂದಾಗ ಕೊಟ್ಟ ದುಡ್ಡನ್ನು ಖರ್ಚು ಮಾಡದೇ ಹಾಗೆ ಉಳಿಸಿಕೊಂಡಿರುತ್ತಾಳೆ ಅದೇ ದುಡ್ಡಲ್ಲಿ ಬಾಡಿಗೆ ಮನೆ ಮಾಡುತ್ತಾಳೆ. ಮನೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ತರುತ್ತಾಳೆ. ಈಗ ಕೈ ಖಾಲಿ. ಮಗನ ಶಾಲೆ Fee ಕಟ್ಟಲು ದುಡ್ಡಿಲ್ಲ, ಗಂಡನನ್ನು ತೋರಿಸಲು ದುಡ್ಡಿಲ್ಲ.!!! ಬೇರೆ ದಾರಿಯಿಲ್ಲದೆ ಮನೆಗೆ ಹತ್ತಿರವಿರುವ ಕಾಲೇಜಲ್ಲಿ ಅತಿಥಿ ಉಪನ್ಯಾಸಕಿ ಆಗಿ ಕೆಲಸಕ್ಕೆ ಸೇರುತ್ತಾಳೆ. ಯಾರು ಬೇಕಾದರೂ ಹಣ, ಸಂಪತ್ತು ಕದಿಯಬಹುದು ಆದರೆ "ವಿದ್ಯೆ" ಎಂಬ ಸಂಪತ್ತನ್ನು ಯಾರಿಂದಲೂ ಕದಿಯಲು, ಕಸಿದುಕೊಳ್ಳಲು ಆಗುವುದಿಲ್ಲ ಎಂಬ ಮಾತು ಅಕ್ಷರಶಃ ನಿಜವಾಗಿತ್ತು ಸಿರಿಯ ಬಾಳಲ್ಲಿ.

ಆಕೆ ಕಲಿತ "ವಿದ್ಯೆ"ಯೆ ಆಕೆಗೆ ಈ ದಿನದ ಸಂಪತ್ತು, ಅನ್ನ ಕೊಡುತ್ತ ಇದೆ. ಮನೆಯ ಸ್ಥಿತಿಯನ್ನು ವಿವರಿಸಿ ಒಂದು ತಿಂಗಳ ಮುಂಗಡ ಸಂಭಾವನೆ ಪಡೆದು ಮಗನ ಶಾಲೆ Fee ಕಟ್ಟುತ್ತಾಳೆ. ಮಗನನ್ನು ಕಷ್ಟಪಟ್ಟು ಓದಿಸುತ್ತಾಳೆ. ನನ್ನ ಮಗ ಚೆನ್ನಾಗಿ ಓದಿ ಕೆಲಸ ತಗೊಂಡ್ರೆ ನನ್ನ ಅರ್ಧ ಕಷ್ಟ ಬಗೆ ಹರಿದಂಗ ಎಂಬ ನಿರೀಕ್ಷೆ ಹಾಗೂ ಕನಸಿನೊಂದಿಗೆ ಓದಿಸುತ್ತಾಳೆ. ಮಗ ಕೂಡ ಈಕೆಯ ನಿರೀಕ್ಷೆ ಯಂತೆ Computer Science, BE ಓದಿ ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸಕ್ಕೆ ಸೇರುತ್ತಾನೆ. ಕೈ ತುಂಬಾ ಸಂಬಳ ಪಡೆಯುತ್ತಾನೆ. ರಜೆ ಹಾಕಿ ಆಗಾಗ ಮನೆಗೆ ಬಂದು ಅಪ್ಪನ ಆರೋಗ್ಯ ವಿಚಾರಿಸಿ ಖರ್ಚಿಗೆ ದುಡ್ಡು ಕೊಟ್ಟು ಹೋಗ್ತಾ ಇರುತ್ತಾನೆ, ತಾಯಿಯನ್ನು ದುಡಿಯಲು ಬಿಡಿಸಿರುತ್ತಾನೆ. ಹೀಗೆ ಕೆಲವು ವರ್ಷಗಳವರಿಗೂ ದುಡ್ಡು ಕೊಟ್ಟು ಹೋಗ್ತಾ ಇರುತ್ತಾನೆ. ಆಮೇಲೆ ಕೆಲವು ವಾರ ಊರಿಗೆ ಬರುವುದಿಲ್ಲ. ಆಗ ಸಿರಿ ಮಗನಿಗೆ call ಮಾಡುತ್ತಾಳೆ ಮಗ call Receive ಮಾಡಲ್ಲ.! ಪುಂಖಾನುಪುಂಖವಾಗಿ ಎಷ್ಟೇ ಸಾರಿ call ಮಾಡಿದರೂ ಮಗ call Receive ಮಾಡಲ್ಲ.! ಮಗನಿಗೆ ಏನಾಗಿದೆಯೋ,ಏನೋ?ಎಂದು ಸಿರಿ ದುಃಖ ತಾಳಲಾರದೆ ಅತ್ತುಬಿಡುತ್ತಾಳೆ. ನಂತರ ಮಗ ಕೆಲಸ ಮಾಡುವ ಕಂಪನಿಗೆ ಹೋಗಿ ಮಗನ ಬಗ್ಗೆ ವಿಚಾರಿಸುತ್ತಾಳೆ ನಿಮ್ಮ ಮಗ Resign ಮಾಡಿದ್ದಾರೆ ಎಂದು ಹೇಳುತ್ತಾರೆ. ಈ ಮಾತುಗಳು ಕೇಳಿ ಸಿರಿಗೆ "ಅತ್ತ ಧರೆ, ಇತ್ತ ಪುಲಿ" ಅನ್ನುವ ಸ್ಥಿತಿ ಆಗಿಬಿಡುತ್ತೆ.

ಗಂಡನಿಗೆ ತನ್ನೆಲ್ಲಾ ದುಃಖ ಹೇಳಿ ಜೋರಾಗಿ ಅತ್ತು ಸಮಾಧಾನ ಮಾಡಿಕೊಳ್ಳೊಣ ಅಂದುಕೊಂಡರೆ ಗಂಡ ಜೀವಂತ ಶವವಾಗಿಬಿಟ್ಟಿದ್ದಾನೆ. ಇದ್ದೊಬ್ಬ ಮಗನೂ ಇದ್ದರೂ ಇಲ್ಲದಂತಾಗಿದ್ದಾನೆ. ಎಲ್ಲಿ ಇದ್ದಾನೋ, ಏನೋ?ಗೊತ್ತಿಲ್ಲ.! ಮಗ ಆಗ ಬರುತ್ತಾನೆ, ಈಗ ಬರುತ್ತಾನೆ ಎಂಬ ನಿರೀಕ್ಷೆಯಲ್ಲೇ ಕಾಲ ಕಳೆಯುತ್ತಿರುತ್ತಾಳೆ.... ಸಿರಿ ಸ್ಥಿತಿ ಕಂಡು ಊರಿನ ಜನ ಮಮ್ಮಲ ಮರುಗುತ್ತಾರೆ. ಮಗನಿಗೆ ಹಿಡಿ ಶಾಪ ಹಾಕುತ್ತಾರೆ. ದಿನಗಳು ಕಳೆಂದತ್ತೆಲ್ಲ ಸಿರಿಯ ಗಂಡನ ಆರೋಗ್ಯದಲ್ಲಿ ಏರುಪೇರು ಆಗಿ ಕೋಮಾದಲ್ಲೇ ಕೊನೆ ಉಸಿರು ಎಳೆಯುತ್ತಾನೆ.! ಗಂಡ ಸತ್ತ ವಿಷಯವನ್ನು ತಿಳಿಸಲು ಮಗನಿಗೆ call ಮಾಡುತ್ತಾಳೆ switch Off ಬರುತ್ತೆ... ಕೊನೆಗೆ ವಿಧಿ ಇಲ್ಲದೆ ಗಂಡನ ಚಿತೆಗೆ ಬೆಂಕಿ ಇಡುತ್ತಾಳೆ. ಮದುವೆಯಾದ ಪ್ರತಿಯೊಬ್ಬ ಸ್ತ್ರೀಯು ಜೀವನದಲ್ಲಿ ಏನು ಕಳಕೊಂಡ್ರು ಸಹಿಸಿಕೊಳ್ಳುತ್ತಾಳೆ, ಆದರೆ ಮುತ್ತೈದೆತನವನ್ನು ಕಳೆದು ಕೊಂಡಾಗ ದುಃಖ ತಾಳಲಾರಳು. ಆಗ ಆಗುವ ನೋವು, ದುಃಖ ಆ ದೇವರೇ ಬಲ್ಲ.!!! ಈಗ ಸಿರಿಯ ಕೈಯಲ್ಲಿ ಹಸಿರು ಗಾಜಿನ ಬಳೆಗಳಿಲ್ಲ, ಹಣೆಯಲ್ಲಿ ಸಿಂಧೂರ ಇಲ್ಲ, ಕೊರಳಲ್ಲಿ ಮಾಂಗಲ್ಯ ಸರವಿಲ್ಲ, ಕಾಲಲ್ಲಿ ಬೆಳ್ಳಿ ಕಾಲುಂಗುರಗಳಿಲ್ಲ, ಮುಡಿಯಲ್ಲಿ ಹೂವಿಲ್ಲ, ಮುತ್ದೈದೆ ಎಂಬ ಸೌಭಗ್ಯವನ್ನು ಕಿತ್ತುಕೊಂಡು ವಿಧವೆ ಮಾಡಿಬಿಟ್ಟಿತು ವಿಧಿ.!

ವಿಧಿಯೂ ಸಿರಿಯ ಅಪ್ಪ, ಅಮ್ಮನನ್ನು ಈಗ ಗಂಡನನ್ನು ಕಸಿದುಕೊಂಡು ಸಿರಿಯ ಮನೆಯನ್ನು ಸ್ಮಶಾನ ಮೌನ ಮಾಡಿ ಬಿಟ್ಟಿತು.! ಸಿರಿಯ ಬಾಳು ಕಂಡು "ನಗುತೈತಿ ದೈವ ಅಲ್ಲಿ, ಅಳುತೈತಿ ಜೀವ ಇಲ್ಲಿ, ವಿಧಿ ಆಟ ಬಲ್ಲವರಾರು ಮಾನವ." ಅನ್ನುವ ರೀತಿ ಇತ್ತು. ಈಕೆಯ ಹೆಸರು ಮಾತ್ರ ಸಿರಿ ಆದರೆ ಈಕೆ ಬಾಳಲ್ಲಿ ಬರೀ ಬರ.ಬರ..ಬರ... ಸಿರಿಯ ಬಾಳಲ್ಲಿ ವಿಧಿ ಇಷ್ಟೆಲ್ಲ ಆಟ ಆಡಿದರೂ ಕೂಡ ನಾ ಮೊದಲೇ ಹೇಳಿದಂತೆ ಭೂಮಿ ತಾಯಿಯಷ್ಟು ತಾಳ್ಮೆವುಳ್ಳವಳಾಗಿರುತ್ತಾಳೆ. ಮಗ ಇವತ್ತಲ್ಲ ನಾಳೆ ಬಂದೇ ಬರುತ್ತಾನೆ ಎಂಬ ನಿರೀಕ್ಷೆಯೊಂದಿಗೆ ಶಬರಿ ಕಾದ ಹಾಗೆ ಕಾಯುತ್ತಿರುತ್ತಾಳೆ. ಈಕೆಯ ಕಷ್ಟವನ್ನು ನೋಡಲಾಗದೆ ಈಕೆಯ ಮಗನ ಆಪ್ತಮಿತ್ರನೊಬ್ಬ ಮಗನ Address ಕೊಟ್ಟು ಬಿಡುತ್ತಾನೆ. ಈಕೆಯ ಮಗ ಎಲ್ಲಿದ್ದಾನೆ? ಏನು ಮಾಡ್ತಾ ಇದ್ದಾನೆ? ಎಂಬುವುದು ಈತನಿಗೆ ಮಾತ್ರ ಗೊತ್ತಿರುತ್ತೆ. ಆದರೆ ಯಾವುದೇ ಕಾರಣಕ್ಕೂ ನನ್ನ ಮನೆಯವರಿಗೆ, ಸಂಬಂಧಿಗಳಿಗೆ ಹಾಗೂ ಊರಿನ ಜನಕ್ಕೆ ನಾನು ಇಲ್ಲಿ ಇರುವ ಬಗ್ಗೆ ತಿಳಿಸಬಾರದು ಎಂದು Promise ಮಾಡಿಸಿಕೊಂಡಿರುತ್ತಾನೆ. ಆದ ಕಾರಣ ಇವನು ಇದುವರೆಗೂ ಯಾರಿಗೂ ಹೇಳಿರುವುದಿಲ್ಲ...!! ತಂದೆ ಸತ್ತ ವಿಷಯ ಕೂಡ ಈತ ತಿಳಿಸಿರುತ್ತಾನೆ ಆದರೆ ಸಿರಿಯ ಮಗ ಬಂದಿರುವುದಿಲ್ಲ.! ಸಿರಿಯ ಬಾಳಲ್ಲಿ ಹಲವಾರು ವಸಂತಗಳ ನಂತರ "ಬೆಂಗಾಡಿನಲ್ಲಿ ತಂಗಾಳಿ ಬೀಸಿದ ಅನುಭವ" Address ನೋಡಿ ಹಾಲು ಸಕ್ಕರೆ ಕುಡಿದ ಹಾಗೆ ಆಗುತ್ತೆ. "ಕಾಣದ ಕಡಲನ್ನು ನೋಡಲು ಕವಿಯ ಮನಸ್ಸು ಹೇಗೆ ಹಂಬಲಿಸುತ್ತೊ ಹಾಗೆ ಕರುಳ ಕುಡಿಯನ್ನು ಕಾಣಲು ಸಿರಿಯ ಮನ ಹಂಬಲಿಸಿ, ತಡಮಾಡದೆ ಮಗ ಇರುವ ಊರಿಗೆ ಬಸ್ಸು ಏರಿ ಹೊರಡುತ್ತಾಳೆ.

ಮಗನ ಮನೆಗೆ ಬಂದು ಬಾಗಿಲು ಬಡಿಯುತ್ತಾಳೆ, ಆ ದಿನ ಭಾನುವಾರ ಆಗಿರುವುದರಿಂದ ಮಗನೇ ಮನೆಬಾಗಿಲು ತೇಗಿಯುತ್ತಾನೆ. ಅಮ್ಮನ ಒಣಕಲು ದೇಹ, ಹಿಂಗಿದ ಕಣ್ಣುಗಳನ್ನು ನೋಡಿ, ಅಪ್ಪ ಸತ್ತ ವಿಷಯ ಗೊತ್ತಿದ್ದರೂ ಗೊತ್ತಿಲ್ಲ ಅನ್ನುವ ರೀತಿ ಕೇಳಿ ದುಃಖ ತಾಳಲಾರದೆ ತಾಯಿಯನ್ನು ತಬ್ಬಿ ಅಳುತ್ತಾ ಅಮ್ಮಾ ಕ್ಷಮಿಸಿ ಬಿಡು, ಈ ನಿನ್ನ ಪಾಪಿ ಮಗನನ್ನು ಕ್ಷಮಿಸಿ ಬಿಡು ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಾನೆ. ಮಗ ಮಾಡಿದ ಎಲ್ಲಾ ತಪ್ಪುಗಳನ್ನು "ಮಹಾತಾಯಿ ಸಿರಿ" ಕ್ಷಮಿಸುತ್ತಾಳೆ. BE ಓದುವಾಗ ಪ್ರೀತಿಸಿದ ಹುಡುಗಿಯನ್ನು ಮದುವೆ ಆದ ವಿಷಯ ತಿಳಿಸುತ್ತಾನೆ, ಮಗು ಆದ ವಿಷಯವನ್ನು ತಿಳಿಸುತ್ತಾನೆ, ಎಲ್ಲ ಕೇಳಿ ಸೊಸೆ ಹಾಗೂ ಮುದ್ದಾದ ಮಗುವನ್ನು ನೋಡಿ ಖುಷಿ ಪಡುತೈತಿ ಜೀವ..!! ಇನ್ನು ನಾನು ಆರಾಮವಾಗಿ, ಸಾಯುವವರಿಗೂ ಮಗನ ಮನೆಯಲ್ಲಿ ಮೊಮ್ಮಗನನ್ನ ಆಡಿಸಿಕೊಂಡು ಇರಬಹುದು ಎಂದು ಮನದಲ್ಲೇ ಖುಷಿ ಪಡುತ್ತಾಳೆ, ಆಸೆ ಪಡುತ್ತಾಳೆ. ಮಗ, ಸೊಸೆ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಮೊದಮೊದಲು ನಂತರದಲ್ಲಿ ಸ್ವಲ್ಪ ಈಕೆಯ ಮಗ, ತನ್ನ ಗೆಳೆಯರು ಯಾರದ್ರು ಮನೆಗೆ ಬಂದಾಗ ಇವರು ಯಾರು ಅಂತ ಕೇಳಿದರೆ ತನ್ನ ತಾಯಿಯೆಂದು ಹೇಳಲು ಹಿಂಜರಿಯುತ್ತಿರುತ್ತಾನೆ, ಮುಜುಗರ ಪಡುತ್ತಾನೆ. ಸೊಸೆಯೂ ಅಷ್ಟೇ ಒಣಕಲು ದೇಹ ನೋಡಲು ಅಸಹ್ಯ ಕಾಣುವ ಸಿರಿಯನ್ನು ಅತ್ತೆ ಎಂದು ಹೇಳಲು ಹಿಂಜರಿಯುತ್ತಿರುತ್ತಾಳೆ. ಸಿರಿ ಮಗನ ಮನೆಗೆ ಹೋಗಿ ಸುಮಾರು ಎಂಟೊಂಭತ್ತು ತಿಂಗಳ ಆಗಿರಬಹುದು, ಮೊಮ್ಮಗುವಿನ ಹುಟ್ಟಿದಬ್ಬ ಇರುತ್ತೆ. ಮಗ ತನ್ನ ಆಪ್ತಸ್ನೇಹಿತರನ್ನು, ಸಹೋದ್ಯೋಗಿಗಳನ್ನು Birthday celebrationಗೆ ಕರೆದಿರುತ್ತಾನೆ. ಸಿರಿಗೆ ಈ ಸಂಭ್ರಮ ಕಂಡು ಖುಷಿಯೋ ಖುಷಿ. ಎಲ್ಲ ಸ್ನೇಹಿತರು ಊಟಕ್ಕೆ ಕುಳಿತಿರುತ್ತಾರೆ ಊಟ ಬಡಿಸಲು ಸಿರಿ ಬರುತ್ತಾಳೆ. ಪರಿಚಯ ಇಲ್ಲದ ಕಾರಣ ಒಂದಿಬ್ರು ಸ್ನೇಹಿತರು ಇವರ್ಯಾರು ಅಂತ ಸಹಜವಾಗಿ ಕೇಳುತ್ತಾರೆ. ಸಿರಿಯ ಮಗ ನಮ್ಮಮ್ಮ ಅಂತ ಹೇಳಲು ಅಸಹ್ಯವಾಗಿ "ಈಕೆ ನಮ್ಮ ಮನೆಯ ಆಳು...!!!" ಅಂದುಬಿಡುತ್ತಾನೆ. ಸಿರಿಯ ಮನ ಹೇಗಾಗಿರಬೇಡ? ಛೇ, ಹೊಟ್ಟೆಯಲ್ಲಿ ಹುಟ್ಟಿದ ಮಗನೇ ಹೀಗೆ ಅಂದರೆ ‌ಹೇಗೆ ಎಂದು Bedroom ಗೆ ಓಡಿ ಹೋಗಿ ದುಃಖದಿಂದ ಬಿಕ್ಕಳಿಸಿ, ಬಿಕ್ಕಳಿಸಿ ಅಳುತ್ತಾಳೆ. ಸತ್ತು ಬಿಡೋಣ ಅನಿಸುತ್ತೆ ಆದರೂ ಮಗ ಅಂದ ಮಾತನ್ನು ಸಮುದ್ರಮಂಥನದಲ್ಲಿ "ಜಗದೊಡೆಯ ಜಗದೀಶ್ವರ ವಿಷ ಕುಡಿದಾಗ ಪಾರ್ವತಿ ಬಂದು ಗಂಟಲಿಗೆ ಕೈ ಹಾಕಿ ವಿಷವು ದೇಹ ಸೇರದಂತೆ ಹೇಗೆ ತಡೆ ಹಿಡಿಯುತ್ತಾಳೋ ಹಾಗೆ ನನ್ನ ಮಗನೂ ಇವತ್ತಲ್ಲ ನಾಳೆ ಮನೆಯಾಳು ಅಂದವನು ನಮ್ಮಮ್ಮ ಅಂತ ತನ್ನೆಲ್ಲಾ ಸ್ನೇಹಿತರಿಗೆ ಹೇಳುತ್ತಾನೆ ಬಿಡು. ಅಂತ ಮನದಲ್ಲೇ ತನಗಾದ ಅವಮಾನವನ್ನು ಸಹಿಸಿ ಕೊಳ್ಳುತ್ತಾಳೆ"

ಇದೆಲ್ಲಾ ನಡೆದು ಕೆಲವು ತಿಂಗಳಲ್ಲಿ ಸಿರಿಗೆ ಜ್ವರ ಬಂದು ಆರಾಮ ಇಲ್ಲದಂತಾಗುತ್ತೆ. 'ರೋಗಿ ಬಯಸಿದ್ದು ಹಾಲು, ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ' ಅನ್ನುವ ರೀತಿ ಆಗಿಬಿಡುತ್ತೆ ಮಗ, ಸೊಸೆಗೆ, ಖುಷಿಯೊ ಖುಷಿ.! ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರುತ್ತೇನೆ ಎಂದು ಹೆಂಡತಿಗೆ ಹೇಳಿ ತಾವು ಮೊದಲೇ Planning ಮಾಡಿದಂತೆ ಸೀದಾ ವೃದ್ಧಾಶ್ರಮಕ್ಕೆ ಬಿಟ್ಟು ಬರುತ್ತಾನೆ ಮಹಾನುಭಾವ...!!! "ಮನದಲ್ಲಿ ಆಸೆಯೇ ಬೇರೆ ಬದುಕಲ್ಲಿ ನಡೆಯುವುದೆ ಬೇರೆ" ಎನ್ನುವಂತೆ ಸಿರಿ ಬಯಸಿದ್ದೇ ಬೇರೆ ಆಗಿತ್ತು ಬದುಕಲ್ಲಿ ನಡೆದಿದ್ದೇ ಬೇರೆ ಆಗಿತ್ತು. ಮಗ ಮಾಡಿದ ಈ ಕೃತ್ಯದಿಂದ ಕೊರಗುತ್ತ ಇರುತ್ತಾಳೆ. ಸಿರಿ ಮಗನ ಮನೆಯಲ್ಲಿ ಸುಖವಾಗಿ ಆರಾಮವಾಗಿ ಇರುತ್ತಾಳೆ ಎಂದು ಊರಿನ ಜನ ಭಾವಿಸಿರುತ್ತಾರೆ. ಒಂದು ದಿನ ಯಾರೋ ಒಬ್ಬರಿಂದ ಸಿರಿ ಸ್ಥಿತಿ ತಿಳಿದು ಬಾಯಿಯಿಂದ ಬಾಯಿಗೆ ಸುದ್ದಿ ಹರಡಿ, ಸುತ್ತ ಮುತ್ತಲಿನ ಹಳ್ಳಿ ಜನರಿಗೆ ಗೊತ್ತಾಗಿ ಜನರೆಲ್ಲ ತಂಡೋಪ ತಂಡವಾಗಿ ವೃದ್ಧಾಶ್ರಮಕ್ಕೆ ಬಂದು ಸಿರಿಯ ಸ್ಥಿತಿ ಕಂಡು ಕಣ್ಣೀರು ಹಾಕುತ್ತಾರೆ.! ಸಮಧಾನ ಹೇಳುತ್ತಾರೆ ಇನ್ನು ಕೆಲವು ಜನ ನಮ್ಮ ಮನೆಯಲ್ಲಿ ಇರುವಂತೆ ಬಾ ಎಂದು ಕರೆಯುತ್ತಾರೆ. ಯಾರ ಮನೆಗೂ ಹೋಗದೆ, ಸಿರಿ ಮಗನ ನೆನಪಲ್ಲಿ ವೃದ್ಧಾಶ್ರಮದಲ್ಲೇ ಪ್ರಾಣ ಬಿಡುತ್ತಾಳೆ.! ಊರಿನ ಜನ ಹಾಗೂ ವೃದ್ಧಾಶ್ರಮದವರೇ ಕೂಡಿ ಸಿರಿಯ ಕಳೇಬರವನ್ನು ಹೊತ್ತು ಸಾಗುತ್ತಾರೆ. ಅದೇ ಊರಲ್ಲಿ ಮಗ, ಸೊಸೆಯಿದ್ದರೂ ಬರುವುದಿಲ್ಲ. ಗಂಡನ ಮನೆಯಲ್ಲಿ ಅಜ್ಜ, ಅಜ್ಜಿ ಬರಲು ಬಹಳಷ್ಟು ಪ್ರಯತ್ನಿಸಿದರು ಮಕ್ಕಳು ಕಳಿಸುವುದಿಲ್ಲ ತಾವು ಕೂಡ ಬರುವುದಿಲ್ಲ.! ಇದನ್ನೆಲ್ಲ ಕಂಡು ಸಿರಿಯ ಆತ್ಮ"ಯಾರೋ ಯಾರೋ ಈ ನಾಲ್ವರು, ನನ್ನ ಹೊತ್ತು ನಡೆವ ಈ ಗುಣವಂತರು. ಬಂಧು ಬಳಗ ಅಲ್ಲ ಈ ಹೃದಯವಂತರು. ಬಂದು ಹೋಗೊ ನಡುವೆ ಸಂಬಂಧ ತಂದರು. ನಾಲ್ಕು ಹೆಗಲ ಮೇಲೆ ಈ ಬದುಕಿನ ಕೊನೆ ಯಾತ್ರೆ, ಸೃಷ್ಟಿ ಮಣ್ಣಿನಲ್ಲಿ ಮುಗಿಯುವ ಜಾತ್ರೆ." ಅನ್ನುತಿತ್ತೇನೋ ಎನ್ನುವಂತಿತ್ತು ಈ ದೃಶ್ಯ...!!!

ಎಲ್ಲಿ ನೋಡಿದರೂ ಜನವೋ ಜನ, ಜನ ಜಾತ್ರೆಗೆ ಬಂದಂತೆ ಬಂದಿದ್ದರು ಸಿರಿಯ ಮಣ್ಣಿಗೆ. ಯಾರ ಕಣ್ಣಲ್ಲಿ ನೋಡಿದರು ಕಣ್ಣೀರು,ಅಳುತ್ತಾ ಇದ್ದಾರೆ. ಮಣ್ಣು ಮಾಡಿ,ಮಣ್ಣಲ್ಲಿ ಮಣ್ಣಾದ ಮಹಾನ್ ಚೇತನ ಸಿರಿಯ ಆತ್ಮಕ್ಕೆ ಶಾಂತಿ ಕೋರುತ್ತಾರೆ...‌!ತಾಯಿ ಸತ್ತು ಹೆಚ್ಚು ಕಡಿಮೆ ಎರಡು ವರ್ಷದಲ್ಲಿ ಷೇರು ಮಾರ್ಕೆಟ್ ಕುಸಿತದಿಂದ Software company loss ಆಗಿ ಸಿರಿಯ ಮಗನನ್ನು ಮತ್ತು ಇತರ ಸಾವಿರಕ್ಕೂ ಹೆಚ್ಚು ಜನರನ್ನು ಕೆಲಸದಿಂದ ತೆಗೆದು ಹಾಕುತ್ತಾರೆ.! ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಈ ಹೈದನಿಗೆ ಈಗ ತಾಯಿ ನೆನಪಾಗುತ್ತಾಳೆ. ತಕ್ಷಣವೇ ಹೆಂಡತಿ, ಮಗನನ್ನು ಕರೆದುಕೊಂಡು ವೃದ್ಧಾಶ್ರಮಕ್ಕೆ ಬಂದು ತಾಯಿಯ ಬಗ್ಗೆ ವಿಚಾರಿಸುತ್ತಾನೆ, ನಡೆದಿದ್ದನ್ನೆಲ್ಲಾ ಹೇಳುತ್ತಾರೆ. ಅದೇ ಊರಲ್ಲಿ ಇದ್ದರೂ ಈತನಿಗೆ ತಾಯಿ ಸತ್ತ ವಿಷಯ ಗೊತ್ತಿರುವುದಿಲ್ಲ.! ಗೊತ್ತಿದ್ದವರೂ ಯಾರು ಕೂಡ ತಿಳಿಸಿರಲ್ಲ...!!! ತಾಯಿಯನ್ನು ನೆನಪು ಮಾಡಿಕೊಂಡು ಅಳುತ್ತಾನೆ, ಛೇ ಛೇ ನಾ ಈ ರೀತಿ ಮಾಡಬಾರದಿತ್ತೆಂದು ಪಶ್ಚಾತಾಪ ಪಡುತ್ತಾನೆ. ಮರುಗುತ್ತಾನೆ, ಕೊರಗುತ್ತಾನೆ ಆದರೆ ಏನು ಮಾಡುವುದು ಕಾಲ ಮಿಂಚಿ ಹೋಗಿದೆ... ಆ ದಿನವೇ ಒಂದೊಳ್ಳೆ ನಿರ್ಧಾರ ಮಾಡುತ್ತಾನೆ. ಶಪಥ ಮಾಡುತ್ತಾನೆ. ನನ್ನ ತಾಯಿಯಂತೆ ಯಾವೊಬ್ಬ ತಾಯಿಯೂ ಕೊರಗಿ ಕೊರಗಿ ಸಾಯಬಾರದೆಂದು...! ಒಂದು ವೃದ್ಧಾಶ್ರಮ ಕಟ್ಟಿಸಿ ವೃದ್ಧರನ್ನು ಪ್ರೀತಿಯಿಂದ ಸಾಕಬೇಕೆಂದು.‌‌‌... ಷೇರು ಮಾರ್ಕೆಟ್ ಸ್ಥಿತಿ ಸುಧಾರಿಸಿದ ಮೇಲೆ ಹಲವಾರು ಕಂಪನಿಗೆ ಅಲೆದಾಡಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ.

ಕಷ್ಟಪಟ್ಟು ದುಡಿದು ಮೊದಲು ದುಡಿದ ದುಡ್ಡು ಮತ್ತು ಈಗ ದುಡಿದ ದುಡ್ಡನ್ನು ಒಟ್ಟು ಮಾಡಿ ತಾನು ಮೊದಲು ಶಪಥ ಮಾಡಿದಂತೆ ವೃದ್ಧಾಶ್ರಮ ಕಟ್ಟಿಸಿ ಅದಕ್ಕೆ ತನ್ನ ತಾಯಿಯ ಹೆಸರು "ಸಿರಿ ಪಾಟೀಲ್ ವೃದ್ಧಾಶ್ರಮ" ಎಂದು ನಾಮಕರಣ ಮಾಡಿ, ಗಣ್ಯರ ಕೈಯಲ್ಲಿ ಉದ್ಘಾಟನೆ ಮಾಡಿಸುತ್ತಾನೆ..!! ಈಗ ಮಗನ ಕೆಲಸ ಮೆಚ್ಚಿ ಸಿರಿಯ ಆತ್ಮಕ್ಕೆ ಶಾಂತಿ ಸಿಕ್ಕಿರಬಹುದು.!!! ಹೆಂಡತಿಯನ್ನು ವೃದ್ಧಾಶ್ರಮದ ಮೇಲ್ವಿಚಾರಿಕೆಯನ್ನಾಗಿ ನೇಮಕ ಮಾಡಿ, ಒಂದಿಬ್ಬರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಾನೆ. ತಾ ಎಂದಿನಂತೆ ಅದೇ ಕಂಪನಿಗೆ ಕೆಲಸಕ್ಕೆ ಹೋಗಿ ಬರುತ್ತಾ ಇರುತ್ತಾನೆ, ಆಗಾಗ ವೃದ್ಧಾಶ್ರಮಕ್ಕೆ ಬಂದು ವೃದ್ಧರ ಆರೋಗ್ಯ ವಿಚಾರಿಸಿ, ಸಮಧಾನ ಹೇಳಿ ಹೋಗುತ್ತಿರುತ್ತಾನೆ ಹಾಗು ತನ್ನಂತೆ ತಂದೆಯನ್ನಾಗಲಿ, ತಾಯಿಯನ್ನಾಗಲಿ ವೃದ್ಧಾಶ್ರಮಕ್ಕೆ ಬಂದು ಬಿಟ್ಟು ಹೋಗಲು ಬಂದವರಿಗೆ ಬುದ್ಧಿ ಮಾತು ಹೇಳಿ ತನಗಾದ ಅನುಭವವನ್ನು ಹೇಳುತ್ತಾನೆ. ಈತನ ಮಾತಿಗೆ ಬೆಲೆ ಕೊಟ್ಟು ಹಲವಾರು ಜನ ತಮ್ಮ ತಂದೆ, ತಾಯಿಗಳನ್ನು ಮರಳಿ ಮನೆಗೆ ಕರೆದುಕೊಂಡು ಹೋಗಿ ಬಹಳ ಪ್ರೀತಿಯಿಂದ ಸಾಕುತ್ತಾರೆ...!!! ಈತನ ಕಾರ್ಯವನ್ನು ಮೆಚ್ಚಿ ಹಲವಾರು ಸಂಘ ಸಂಸ್ಥೆಗಳು, ಮಠ ಮಾನ್ಯಗಳು 'ಸಮಾಜ ಪರಿವರ್ತನೆಯ ಹರಿಕಾರ', 'ವೃದ್ಧ ಜೀವಗಳ ಆಶ್ರಯದಾತ', 'ಮಾತೃ ಹೃದಯಿ', 'ಸಹೃದಯಿ', 'ಹೃದಯವಂತ' ಹಾಗೂ 'ಹೃದಯ ಶಿವ' ಎಂಬ ಹಲವಾರು ನಾಮಕಿಂತ ಬಿರುದುಗಳನ್ನು, ಪ್ರಶಸ್ತಿ, ಫಲಕಗಳನ್ನು ನೀಡಿ ಗೌರವಿಸಿ ಸನ್ಮಾನಿಸುತ್ತವೆ. ಹಲವಾರು ವೃದ್ಧ ಜೀವಗಳು ಈತನಿಗೆ ನೀ "ಈ ಸೀಮೆಗೆ "ಶಿವ" ನೀಡಿದ ವರ, ಈ ಊರಿನ ಚಿರಶಾಂತಿಯ ದೂತ" ನೀ ನೂರಾರು ವರ್ಷ ಬದುಕಿ ಬಾಳು ಎಂದು ಹಾರೈಸುತ್ತಾರೆ...!!! "ಮನುಷ್ಯ ತಪ್ಪು ಮಾಡುವುದು ‌ಸಹಜ ಆದರೆ ಮನಸ್ಸು ಬದಲಿಸಿಕೊಂಡು ಮಾಡಿದ ತಪ್ಪನ್ನು ಅರಿತು ತಿದ್ದಿ ನಡೆದರೆ ಇಡೀ ಮಾನವ ಕುಲಕ್ಕೆ ಮಾದರಿಯಾಗಬಲ್ಲ.! ಮಹಾತ್ಮ ನಾಗಬಲ್ಲ.!! ಮಹಾದೇವನಾಗಬಲ್ಲ.!!! ಎಂಬುವುದಕ್ಕೆ "ಸಿರಿ ಪಾಟೀಲ್" ರವರ ಮಗನೇ ಸಾಕ್ಷಿ....

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.