ಭಾರತದಲ್ಲಿರುವ ಅತ್ಯಂತ ರಮಣೀಯವಾದ 25 ರೈಲು ಮಾರ್ಗಗಳು

ಭಾರತೀಯ ರೈಲ್ವೆಯು ಪ್ರತಿನಿತ್ಯ 30 ಮಿಲಿಯನ್ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದೆ. ಭಾರತದ 65,000 ಕಿ.ಮೀ ವಿಸ್ತೀರ್ಣವನ್ನು ಜೊತೆಗೂಡಿಸುತ್ತಿದೆ. ಸಾಲದೆಂಬಂತೆ ಭಾರತದ ಉದ್ದಗಲಗಳನ್ನು ಬೆಸೆದು, ಮತ್ಯಾರಿಂದಲೂ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಅದರ ಹೃದಯವನ್ನು ಸ್ಪರ್ಶಿಸುತ್ತಿದೆ. ಸಾರಿಗೆ ವಿಚಾರದಲ್ಲಂತೂ ಭಾರತೀಯ ಜನಸಾಮಾನ್ಯರ ಪಾಲಿಗೆ ಭಾರತೀಯ ರೈಲ್ವೆಯು ನಿಜಕ್ಕೂ "ಬಡವರ ಬಾದಾಮಿ"ಯೇ ಹೌದು. ಭಾರತದಾದ್ಯಂತ ಸಂಚರಿಸಲು `ದಿ ಬೆಸ್ಟ್' ಮಾರ್ಗ ಕೂಡಾ ಇದಾಗಿದೆ. ಅಲ್ಲದೆ, ರೈಲ್ವೆಗಾಗಿಯೇ ಪ್ರತ್ಯೇಕ ರಾಜ್ಯ ಬಜೆಟನ್ನು ಹೊಂದಿರುವ ಅಪರೂಪದ ದೇಶ ಎನ್ನುವ ಹಿರಿಮೆಯ ಗರಿಯನ್ನು ತಾಯ್ನಾಡಿನ ಮುಡಿಗೇರಿಸಿದೆ. ಬಸ್ಸು, ಕಾರು, ವಿಮಾನ, ಹಡಗಿನ ಪ್ರಯಾಣಕ್ಕಿಂತಲೂ ವಿಭಿನ್ನವಾದ ಪ್ರಯಾಣದ ಅನುಭವವನ್ನು ಚುಕುಬುಕು ರೈಲು ಕಟ್ಟಿಕೊಡುತ್ತದೆ. ಸಿರಿವಂತರು, ಬಡವರು, ಮಧ್ಯಮ ವರ್ಗದವರನ್ನೆಲ್ಲರನ್ನೂ ಒಂದೆಡೆ ಕಲೆಯುವಂತೆ ಮಾಡುವ, ಅಪರಿಚಿತರನ್ನು ಪರಿಚಿತರನ್ನಾಗಿಸಿ ಸಂಬಂಧಿಗಳಲ್ಲದವರ ಸಂಬಂಧಗಳ ಕೊಂಡಿಯನ್ನು ಬೆಸೆಯುವ, ಎಲ್ಲರ ಜೇಬಿನ ಬಜೆಟ್‍ಗೂ ಸರಿಹೊಂದುವ, ಪ್ರಕೃತಿಯ ಒಡಲ ನರನಾಡಿಗಳಲ್ಲಿ ಸಂಚರಿಸಿ ಸುಂದರ ಭಾರತದ ದರ್ಶನ ಮಾಡಿಸುವ... ರೈಲು ಪ್ರಯಾಣವು ಬದುಕಿನ ಬಗೆಬಗೆಯ ಪಾಠಗಳಿಗೆ ವಸ್ತುವಾಗುತ್ತದೆ. ಈ ಎಲ್ಲಾ ವಿಶೇಷಗಳಿಗೆ ಸಾಕ್ಷಿಯಾಗಿರುವ ಭಾರತದ ಅತ್ಯಂತ ರಮಣೀಯವಾದ ರೈಲು ಮಾರ್ಗಗಳನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದೆಯೇ? ಹಾಗಾದರೆ, ಇಲ್ಲಿದೆ ನೋಡಿ ಆ ಬಗ್ಗೆ ಮಾಹಿತಿ...

1. ಕಾಶ್ಮೀರ ರೈಲ್ವೆ (ಜಮ್ಮು - ಉಧಮ್‍ಪುರ್) ಭಾರತದಲ್ಲಿ ಅತ್ಯಂತ ಸವಾಲಿನ ಎಂಜಿನಿಯರಿಂಗ್ ಯೋಜನೆಗಳಲ್ಲಿ ಕಾಶ್ಮೀರ ರೈಲ್ವೆಯು ಕೂಡಾ ಒಂದು. ಶೀತ ಮತ್ತು ಉಷ್ಣ ಈ ಎರಡೂ ವಿಪರೀತಗಳೊಂದಿಗೆ ಪ್ರತಿಕೂಲವಾದ ಭೂಪ್ರದೇಶವನ್ನು ಹೊಂದಿರುವುದರಿಂದಾಗಿ ಮತ್ತು ಆಗಿಂದಾಗ್ಗೆ ಬದಲಾಗುವ ಅಲ್ಲಿನ ರಾಜಕೀಯ ಸನ್ನಿವೇಶಗಳಿಂದಾಗಿ ಇತರೆ ಎಲ್ಲಾ ಭಾರತೀಯ ರೈಲು ಮಾರ್ಗಗಳಿಗೆ ಹೋಲಿಸಿದರೆ ಕಾಶ್ಮೀರ ರೈಲ್ವೆಯು ಹೆಚ್ಚು ರೋಮಾಂಚನಾಕಾರಿ ಎನ್ನಿಸುತ್ತದೆ. 20 ಪ್ರಮುಖ ಸುರಂಗ ಮಾರ್ಗಗಳನ್ನು ಹಾಗೂ 158 ಸೇತುವೆಗಳನ್ನು ಹೊಂದಿರುವ ಈ ಮಾರ್ಗವು ಸುಂದರ ಶಿವಾಲಿಕ್ ಪರ್ವತ ಶ್ರೇಣಿಗಳ ಸುತ್ತಮುತ್ತಲಿನ ನದಿಗಳು ಮತ್ತು ಕಣಿವೆಗಳ ಭವ್ಯ ನೋಟವನ್ನು ದರ್ಶನ ಮಾಡಿಸುತ್ತದೆ.

2. ಸ್ನೋ ಸೋಜರ್ನ್ (ಖಾಝಿಗುಂಡ್ - ಶ್ರೀನಗರ್ - ಬಾರಾಮುಲ್ಲಾ) ಇದು ಕಾಶ್ಮೀರ ರೈಲ್ವೆಯ ಒಂದು ಭಾಗ. ಆದರೆ ಜಮ್ಮು ಮತ್ತು ಖಾಝಿಗುಂಡ್ ನಡುವಿನ ವಿಭಾಗದಲ್ಲಿ ಸದ್ಯ ಕಾಮಗಾರಿಯು ಪ್ರಗತಿಯಲ್ಲಿರುವುದರಿಂದ ಇದನ್ನು ಪ್ರತ್ಯೇಕ ಪ್ರಯಾಣ ಮಾರ್ಗವಾಗಿ ನೋಡಬೇಕಾಗಿದೆ. ಈ ಕಾಮಗಾರಿಯು ಪೂರ್ಣಗೊಂಡ ಬಳಿಕ ಇದು ಮತ್ತೆ ಬೃಹತ್ ಕಾಶ್ಮೀರ ರೈಲ್ವೆಯ ಒಂದು ಭಾಗವಾಗಿ ಜಮ್ಮುವಿನಿಂದ ಬಾರಾಮುಲ್ಲಾಕ್ಕೆ ಸಂಪರ್ಕವನ್ನು ಬೆಸೆಯುತ್ತದೆ. ಕಾಶ್ಮೀರ ಕಣಿವೆಗಳ ಮೂಲಕ ಆದು ಹೋಗುವ ಈ ಮಾರ್ಗದ ಪ್ರಯಾಣವು ದೂರದ ಹಿಮಾವೃತ ಶಿಖರಗಳು ಮತ್ತು ಚಿನಾರ್ ಮರಗಳ ಮೋಹಕ ದೃಶ್ಯವನ್ನು ಕಣ್ಣಿಗೆ ಕಟ್ಟಿಕೊಡುತ್ತದೆ. ಈ ಮಾರ್ಗದಲ್ಲಿ ಚಳಿಗಾಲದ ಸಂದರ್ಭದಲ್ಲಿ ಪ್ರಯಾಣ ಮಾಡಿದರಂತೂ ಸಕಲವೂ ಹಿಮಮಯವಾಗಿರುವ ಭವ್ಯ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಸದ್ಯ ಈ ಮಾರ್ಗದಲ್ಲಿ ಕಾಯ್ದಿರಿಸದ ಒಂದೇ ಒಂದು ಡೆಮು ರೈಲು ಸಂಚರಿಸುತ್ತಿದೆ.

3. ಕಾಂಗ್ರಾ ವ್ಯಾಲಿ ಒಡಿಸ್ಸಿ (ಪಠಾನ್ಕೋಟ್ - ಕಾಂಗ್ರಾ - ಪಾಲಂಪುರ್ - ಜೋಗಿಂದರ್‍ನಗರ್) ಕಾಂಗ್ರಾ ವ್ಯಾಲಿ ರೈಲ್ವೆಯು ಹಿಮಾಚಲ ಪ್ರದೇಶದಲ್ಲಿನ ಹಿಮಾಲಯದ ತಪ್ಪಲಿನ ಪ್ರದೇಶಕ್ಕೆ ಸೇರುತ್ತದೆ. ಪಂಜಾಬ್‍ನ ಪಠಾನ್ಕೋಟ್‍ನಿಂದ ಪ್ರಾರಂಭವಾಗುವ ಈ ಮಾರ್ಗದ ಪ್ರಯಾಣವು ಅಡ್ಡಾದಿಡ್ಡಿಯಾದ ಹಲವಾರು ಕಣಿವೆಗಳು ಮತ್ತು ನದಿಗಳ ಮೂಲಕ ಸಾಗಿ, 164 ಕಿ.ಮೀ. ಅಂತರದ ಹಿಮಾಚಲ ಪ್ರದೇಶದಲ್ಲಿನ ಜೋಗಿಂದರ್‍ನಗರವನ್ನು ತಲುಪುತ್ತದೆ. ಸುಮಾರು 10 ಗಂಟೆಗಳ ಅವಧಿಯ ಈ ಭಾರೀ ಪ್ರಯಾಣವು ದಣಿದ ಆತ್ಮದ ದಣಿವಾರಿಸಲೆಂಬಂತೆ ಅಲ್ಲಲ್ಲಿ ಪ್ರಯಾಣಿಕರ ಕಣ್ಗಳಿಗೆ ಸುಂದರ ಪರಿಸರದ ಮನೋಹರ ದೃಶ್ಯದ ರಸದೌತಣವನ್ನು ಉಣಬಡಿಸುತ್ತದೆ. ಅದರಲ್ಲೂ ಹಿಮಾವೃತ ಧೌಲಾಧರ್ ಬೆಟ್ಟಗಳನ್ನು ನೋಡುವುದೇ ಇಲ್ಲಿ ಒಂದು ಚೆಂದ. ಸದ್ಯ ಈ ಮಾರ್ಗದಲ್ಲಿ ಒಂದೇ ಒಂದು ಕಾಯ್ದಿರಿಸದ ಕಾಂಗ್ರಾ ವ್ಯಾಲಿ ಪ್ಯಾಸೆಂಜರ್ ರೈಲು ಮಾತ್ರ ಸಂಚರಿಸುತ್ತಿದೆ.

4. ಕೊಂಕಣ ರೈಲ್ವೆ (ರತ್ನಗಿರಿ - ಮದಗೋನ್ - ಹೊನ್ನಾವರ - ಮಂಗಳೂರು) ವಿಸ್ಮಯ ಎನಿಸುವ ಹಸಿರು, ಮೋಹಕ ಜಲಾಶಯಗಳು, ಬೆರಗುಗೊಳಿಸುವ ತಿರುವುಗಳಿಂದ ಕೂಡಿದ ರಸ್ತೆಗಳು, ಜೊತೆಗೆ ಕೈ ಬೀಸಿ ಕರೆಯುವ ಭವ್ಯವಾದ ಸಹ್ಯಾದ್ರಿ ವನಗಳ ಸೊಬಗೆಲ್ಲವೂ ಒಟ್ಟಿಗೇ ಮಿಳಿತವಾಗಿ ಈ ಮಾರ್ಗವನ್ನು ಆಕರ್ಷಕಗೊಳಿಸಿವೆ. ಭೂಕುಸಿತ ಪ್ರವೃತ್ತಿಯುಳ್ಳ ಸಂಕೀರ್ಣವಾದ ಈ ಸಡಿಲ ಭೂಪ್ರದೇಶವನ್ನು ಬಹಳ ಎಚ್ಚರಿಕೆಯಿಂದ ಪರಿಶೀಲಿಸಿ, ಅಪಾಯರಹಿತ ರೀತಿಯಲ್ಲಿ ಕೊಂಕಣ ರೈಲ್ವೆಯ ನಿರ್ಮಾಣಕ್ಕೆ ಕಾರಣರಾದ ಈ ದೇಶದ ಇಂಜಿನಿಯರುಗಳ ಶ್ರಮ ಇಲ್ಲಿ ನಿಜಕ್ಕೂ ಸ್ತುತ್ಯಾರ್ಹವಾದುದು.

5. ಗೋವಾ ರೈಲ್ವೆ (ವಾಸ್ಕೋ ಡ ಗಾಮ - ಲೋಂಡಾ) ಗೋವಾ ತನ್ನ ಪ್ರಾಚೀನ ಕಡಲ ತೀರಗಳಿಗೆ ಪ್ರಖ್ಯಾತವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಗೋವಾದ ಮತ್ತೊಂದು ಮಗ್ಗುಲಾದ ಗೋವಾ ರೈಲು ಮಾರ್ಗದ ಪರಿಚಯ ಬಹುಶಃ ಸಾಕಷ್ಟು ಜನರಿಗೆ ಗೊತ್ತಿರಲಾರದು. ಸಮೃದ್ಧ ಹಸಿರಿನಿಂದ ಕಂಗೊಳಿಸುವ ಹಳ್ಳಿಗಳು, ದಟ್ಟ ಅರಣ್ಯಗಳು ಮತ್ತು ಹೇರಳ ಜಲಪಾತಗಳು ಗೋವಾದ ಈ ಮತ್ತೊಂದು ಮಗ್ಗುಲನ್ನು ರೂಪಿಸಿವೆ. ವಾಸ್ಕೋದಿಂದ ಹೊರಡುವ ರೈಲು ನಿಮ್ಮನ್ನು ಪ್ರಶಾಂತ ಕಡಲತೀರಗಳಿಂದ ಪ್ರಾರಂಭಿಸಿ, ವಕ್ರವಕ್ರವಾದ ತಿರುವುಗಳಲ್ಲಿ ಸುತ್ತಾಡಿಸಿ, ಪಶ್ಚಿಮ ಘಟ್ಟದ ಪರ್ವತಗಳ ಮೂಲಕ ಸಾಗಿ, ಭಾರತದ ಅತಿ ಎತ್ತರದ ಮತ್ತು ಸೊಗಸಾದ ಜಲಪಾತಗಳಲ್ಲಿ ಒಂದಾದ ದೂಧ್ ಸಾಗರ್ ಜಲಪಾತವನ್ನು ದರ್ಶನ ಮಾಡಿಸಿ, ನಿಮ್ಮನ್ನು ಉಸಿರು ಎಳೆದುಕೊಳ್ಳುವಂತೆ ಮಾಡುತ್ತದೆ.

6. ನೀಲಗಿರಿ ಮೌಂಟೇನ್ ರೈಲ್ವೆ (ಮೆಟುಪಾಳ್ಯಂ - ಉದಕಮಂಡಲಮ್) ನೀವು ಮಿಸ್ ಮಾಡಿಕೊಳ್ಳಬಾರದ ಮತ್ತೊಂದು ರೈಲು ಪ್ರಯಾಣವೆಂದರೆ 110 ವರ್ಷಗಳಿಂದ ಕಾರ್ಯನಿರತವಾಗಿರುವ ನೀಲಗಿರಿ ಮೌಂಟೇನ್ ರೈಲ್ವೆ. ನಾಲ್ಕೂವರೆ ತಾಸುಗಳಲ್ಲಿ 46 ಕಿ.ಮೀ ಅಂತರದ ಊಟಿಯನ್ನು ತಲುಪುವ ಉಗಿಬಂಡಿಯು ಬಾಗುತ್ತಾ, ಬಳುಕುತ್ತಾ, ಬಂಡೆಗಲ್ಲುಗಳ ಮೂಲಕ ಸಾಗಿ, ತಿರುವುಗಳಲ್ಲಿ ಸುತ್ತುಸುತ್ತಾಡಿ, ಅಡ್ಡಾದಿಡ್ಡಿಯಾದ ಹಸಿರುಮಯ ವಿಶಾಲ ಟೀ ಎಸ್ಟೇಟುಗಳ ಬದಿಯಲ್ಲಿ ನಿಧಾನವಾಗಿ ಚಲಿಸಿ ನಿಮ್ಮ ಕಣ್ಣುಗಳನ್ನು ತಂಪಾಗಿಸುತ್ತವೆ. ಮತ್ತೊಂದು ವಿಶೇಷವೆಂದರೆ, ಉಗಿ ಯಂತ್ರದ ಪರಿಚಿತ ಚುಕುಬುಕು ಚಫಿಂಗ್ ಧ್ವನಿಯು ನಮ್ಮನ್ನು ಒಂದು ಶತಮಾನದಷ್ಟು ಹಿಂದಕ್ಕೆ ಕರೆದೋಯ್ದು, ಬ್ರಿಟಿಷ್ ರಾಜ್ ಪರಂಪರೆಯನ್ನು ನೆನಪಿಸುತ್ತದೆ.

7. ಹಿಮಾಲಯನ್ ಕ್ವೀನ್ (ಕಾಲ್ಕ - ಶಿಮ್ಲಾ) ಕಾಲ್ಕ ಮತ್ತು ಶಿಮ್ಲಾದ ನಡುವೆ ಸಂಚರಿಸುತ್ತಿರುವ, ರೆಗ್ಯುಲರ್ ಪ್ರಯಾಣಿಕರಿಗೆ ಚಿರಪರಿಚಿತವಾಗಿರುವ ಭಾರತದ ಏಕಮಾತ್ರ ಪಾರಂಪರಿಕ ಮೌಂಟೇನ್ ರೈಲ್ವೆಯಾಗಿರುವ `ಹಿಮಾಲಯನ್ ಕ್ವೀನ್' ಗಿನ್ನಿಸ್ ವಿಶ್ವ ದಾಖಲೆ ಪುಸ್ತಕದಲ್ಲಿಯೂ ನಮಗೆ ಕಾಣಸಿಗುತ್ತದೆ. 1903ರಲ್ಲಿ 96 ಕಿ.ಮೀ. ಅಂತರದಲ್ಲಿ ಎತ್ತರದ ಕಡಿದಾದ ಹಾದಿಯಲ್ಲಿ ಈ ರೈಲು ಮಾರ್ಗವನ್ನು ನಿರ್ಮಿಸಲಾಗಿದೆ. 102 ಸುರಂಗಗಳು ಮತ್ತು 864 ಸೇತುವೆಗಳ ಮೂಲಕ ಆದು ಹೋಗಬೇಕಾದ ಈ ಮಾರ್ಗವು ಎರಡೂ ಬದಿಯಲ್ಲೂ ಚಿತ್ರಸದೃಶ ಶಿವಾಲಿಕ್ ಬೆಟ್ಟಗಳಿಂದ ಸುತ್ತುವರೆಯಲ್ಪಟ್ಟಿದೆ. ಈ ಮಾರ್ಗದಲ್ಲಿ ಬೆಳಗಿನ ಜಾವ ಪ್ರಯಾಣ ಮಾಡಿದರಂತೂ ಓಕ್, ಪೈನ್ ಮತ್ತು ಮೇಪಲ್ ಮರಗಳ ರಮಣೀಯ ನೋಟವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ತಾಜಾ ಗಾಳಿಯನ್ನು ಸೇವಿಸಿ, ಲೈಫ್ ಟೈಮ್ ಜರ್ನಿಯ ಅನುಭವ ಪಡೆಯಬಹುದು.

8. ಟಾಯ್ ಟ್ರೈನ್ - ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ (ನ್ಯೂ ಜಲ್ಪೈಗುರಿ - ಡಾರ್ಜಿಲಿಂಗ್) ಭಾರತದಲ್ಲಿನ ಅತೀ ಹಳೆಯ ಮೌಂಟೇನ್ ರೈಲ್ವೆ ಎಂಬ ಹೆಗ್ಗಳಿಕೆಗೆ ಟಾಯ್ ಟ್ರೈನ್ ಪಾತ್ರವಾಗಿದೆ. 1999ರಲ್ಲಿ ಯುನೆಸ್ಕೊ ಟಾಯ್ ಟ್ರೈನನ್ನು `ವಿಶ್ವ ಪರಂಪರೆಯ ತಾಣ' ಎಂದು ಘೋಷಿಸಿದೆ. ಲೂಪ್‍ಗಳು ಈ ರೈಲ್ವೆಯ ವಿಶೇಷ ಲಕ್ಷಣವಾಗಿದ್ದು, ಅವು ಈ ಮಾರ್ಗಕ್ಕೆ ನೈಸರ್ಗಿಕವಾದ ಸುಂದರ ಮೆರಗನ್ನು ನೀಡುತ್ತವೆ. ಅದರಲ್ಲೂ ಪ್ರಖ್ಯಾತ ಬಟಾಸಿಯಾ ಲೂಪ್ ಡಾರ್ಜಿಲಿಂಗ್ ಪಟ್ಟಣದ ಮತ್ತು ಹಿಮಾವೃತ ಕಾಂಚನಜುಂಗಾದ ಬೆರಗುಗೊಳಿಸುವ ನೋಟವನ್ನು ಪ್ರಯಾಣಿಕರಿಗೆ ದಯಾಪಾಲಿಸುತ್ತದೆ. ಸುಕ್ನಾದಿಂದ ಹೊರಟ ಮೇಲೆ ರೈಲು ಮೇಪಲ್, ಚೆಸ್ಟ್ನಟ್, ಪಿಯರ್, ಚೆರ್ರಿ ಮರಗಳಿಂದ ಆವೃತವಾಗಿರುವ ಪುಟ್ಟಪುಟ್ಟ ಅರಣ್ಯಗಳನ್ನು, ಟೀ ತೋಟಗಳನ್ನು ಮತ್ತು ಟೀ ಕಾರ್ಖಾನೆಗಳನ್ನು ಒಳಗೊಂಡಿರುವ ಕೆಲವು ವಸಾಹತು ನೆಲೆಗಳನ್ನು ಮತ್ತು ಪಟ್ಟಣಗಳನ್ನು ದಾಟಿ ಹೋಗುತ್ತದೆ. ನೀವು ಈ ಭಾಗದ ಪ್ರದೇಶಗಳಲ್ಲಿ ನೆಲೆಗೊಂಡಿರುವ ಗೂರ್ಖಾ ಜನ ಸಮುದಾಯವನ್ನೂ ಕೂಡಾ ಗಮನಿಸಬಹುದು.

9. ಮಥೆರಾನ್ ಹಿಲ್ ರೈಲ್ವೆ (ನೇರಲ್ - ಮಥೆರಾನ್) ಮಥೆರಾನ್ ಪ್ರದೇಶವು ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿದೆ. ಸದಾ ಬಿಡುವೇ ಇಲ್ಲದಂತೆ ತಮ್ಮತಮ್ಮ ಕಾರ್ಯಗಳಲ್ಲಿ ಮಗ್ನರಾಗುವ ಮುಂಬೈ ಜನರಿಗೆ ಇದೊಂದು ವಾರಾಂತ್ಯದ ನೆಚ್ಚಿನ ತಾಣವಾಗಿದೆ. ಇಂದಿಗೂ ತನ್ನ ಸೊಬಗನ್ನು ಉಳಿಸಿಕೊಂಡಿರುವ ಈ ಮಾರ್ಗಕ್ಕೆ ಮೋಟಾರು ವಾಹನಗಳನ್ನು ನಿಷೇಧಿಸಲಾಗಿದೆ. ಕಾರಣ ಇಲ್ಲಿನ ಧೂಳಿನ ಮತ್ತು ಮಣ್ಣಿನ ರಸ್ತೆ. ಇಲ್ಲಿ ಏನಿದ್ದರೂ ನೀವು ಕಾಲ್ನಡಿಗೆಯಲ್ಲಿ ಸಾಗಬೇಕು ಇಲ್ಲವೆ ಕುದುರೆ ಸವಾರಿ ಕೈಗೊಳ್ಳಬೇಕು. ಮಹಾರಾಷ್ಟ್ರದ ಏಕ ಮಾತ್ರ ಪಾರಂಪರಿಕ ರೈಲ್ವೆ ಎಂದರೆ ಅದು ಮಥೆರಾನ್ ಹಿಲ್ ರೈಲ್ವೆ. ನೇರಲ್ ಮತ್ತು ಮಥೆರಾನ್ ನಡುವೆ ಸಂಪರ್ಕವನ್ನು ಬೆಸೆಯುವ ನ್ಯಾರೋ ಗೇಜ್ ರೈಲುಮಾರ್ಗವನ್ನು 1901 ಮತ್ತು 1907ರ ನಡುವೆ ಅಬ್ದುಲ್ ಹುಸೇನ್ ಅದಮ್ಜೀ ಅವರು 1600000 ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿದರು ಎನ್ನಲಾಗಿದೆ. ಈ ಮಾರ್ಗದಲ್ಲಿ ಅರಣ್ಯ ಪ್ರದೇಶದುದ್ದಕ್ಕೂ ಸಾಗುವ ರೈಲು ಸುಮಾರು ಒಂದೂವರೆ ಗಂಟೆಗಳಲ್ಲಿ 20 ಕಿ.ಮೀ. ದೂರವನ್ನು ಕ್ರಮಿಸಲಿದ್ದು, ನಿಶ್ಚಿತ ತಾಣವನ್ನು ತಲುಪುವಷ್ಟರ ವೇಳೆಗೆ ಕಣ್ಣು ಕೋರೈಸುವಂತಹ ವಿಹಂಗಮ ನೋಟವನ್ನು ನಿಮಗೆ ದರ್ಶನ ಮಾಡಿಸಿರುತ್ತದೆ.

10. ಡೂವಾರ್ಸ್ ವೋಯೆಜ್ (ಸಿಲಿಗುರಿ - ನ್ಯೂ ಮಾಲ್ - ಹಸಿಮರ - ಅಲಿಪುರದೌರ್) ಬಗೆಬಗೆಯ ವನಗಳು ಮತ್ತು ವನ್ಯಜೀವಿಗಳಿಂದ ತುಂಬಿ ತುಳುಕುತ್ತಿರುವ ದಟ್ಟವಾದ ಅರಣ್ಯಗಳು, ಸಿಕ್ಕಿಂ ಮತ್ತು ಭೂತಾನ್ ಬೆಟ್ಟಗಳಿಂದ ಕೆಳಗೆ ಮೈದುಂಬಿ ಮೊರೆದು ಹರಿಯುವ ಹೊಳೆಗಳು, ಹಚ್ಚ ಹಸಿರಿನಿಂದ ಕಂಗೊಳಿಸುವ ಸ್ವಾದಿಷ್ಟಕರ ಚಹಾ ತೋಟಗಳು, ಸುಂದರ ತೀಸ್ತಾ ನದಿ... ಈ ಎಲ್ಲವೂ ಒಟ್ಟಿಗೇ ಮಿಳಿತವಾಗಿ ಈ ಮಾರ್ಗದ ಪ್ರಯಾಣವನ್ನು ಮೋಹಕಗೊಳಿಸುತ್ತವೆ. ಇತ್ತೀಚೆಗಷ್ಟೆ ಈ ಮಾರ್ಗವನ್ನು ಬ್ರಾಡ್ ಗೇಜ್‍ಗೆ ಪರಿವರ್ತಿಸಲಾಗಿದ್ದು, ಕನಿಷ್ಟ ಮಟ್ಟದ ಟ್ರಾಫಿಕ್‍ನಿಂದ ಕೂಡಿದೆ ಎನ್ನಲಾಗಿದೆ. ಅಲ್ಲದೆ ಗಮನಾರ್ಹ ವನ್ಯಜೀವಿಧಾಮಗಳ ಮೂಲಕ ಈ ಮಾರ್ಗ ಸಾಗುತ್ತದೆ. ಆ ಪೈಕಿ ಮಹಾನಂದ ವನ್ಯಜೀವಿಧಾಮ, ಚಪ್ರಮರಿ ಅರಣ್ಯ, ಜಲ್ದಾಪಾರ ವನ್ಯಜೀವಿಧಾಮ, ಬುಕ್ಸಾ ಹುಲಿ ಧಾಮ ಇಲ್ಲಿ ಉಲ್ಲೇಖನಾರ್ಹ.

11. ಫ್ಲೇವರ್ಸ್ ಆಫ್ ಅಸ್ಸಾಂ (ಗುವಾಹಟಿ - ಲುಂಬ್ಡಿಂಗ್ -ಸಿಲ್ಚಾರ್) ಜಟಿಂಗ ನದಿಯ ತೀರಗಳನ್ನು ಸೇರುವ ಮುನ್ನ ಸಮೃದ್ಧ ಹಸಿರಿನಿಂದ ಕಂಗೊಳಿಸುವ ಹಾಫ್ಲಾಂಗ್ ಕಣಿವೆಗಳ ಪಕ್ಕದಲ್ಲಿ ಈ ಮಾರ್ಗದ ರೈಲು ಆದು ಹೋಗುತ್ತಿದ್ದಂತೆಯೇ ನಿಮಗೆ ಅಸ್ಸಾಂನ ಸುವಾಸನೆಯು ಇಂದ್ರಿಯ ಗೋಚರಕ್ಕೆ ಬರುತ್ತದೆ. ಬಯಲು ಪ್ರದೇಶಗಳಲ್ಲಿ ಸಾಗುವ ಮುನ್ನ ಸಿಗುವಂತಹ ಬರಾಕ್ ಕಣಿವೆಯ ಚಹಾ ತೋಟಗಳನ್ನು ನೀವು ಕಣ್ತುಂಬಿಕೊಳ್ಳುವುದರ ಜೊತೆಗೆ ಆ ತೋಟಗಳಲ್ಲಿನ ಚಹಾ ಗಿಡಗಳ ಪರಿಮಳವನ್ನು ಸೇವಿಸುತ್ತಾ, ಸುಗಂಧಮಯ ಗಾಳಿಯಲ್ಲಿ ತೇಲಾಡಿದ ಅನುಭವ ಪಡೆಯಬಹುದು. ದಕ್ಷಿಣಾಭಿಮುಖವಾಗಿ ಸಾಗುವ ಈ ಟ್ರ್ಯಾಕ್ ಈಶಾನ್ಯ ಭಾರತದ ಎರಡನೇ ದೊಡ್ಡ ನಗರವಾದ ಅಗರ್ತಲಾಕ್ಕೆ ಸಂಪರ್ಕ ಬೆಸೆಯುತ್ತದೆ.

12. ಡೆಜರ್ಟ್ ಕ್ವೀನ್ (ಆಗ್ರಾ - ಗ್ವಾಲಿಯರ್) ರಾಜಸ್ಥಾನದ ಥಾರ್ ಮರುಭೂಮಿಯಲ್ಲಿನ ಎಲ್ಲಾ ಒಂಟೆ ಸಫಾರಿಗಳಿಗೂ ಜೈಸಲ್ಮರ್ ಗೇಟ್‍ವೇ ಆಗಿದೆ. ಜೈಪುರದಿಂದ ಜೈಸಲ್ಮರ್‍ಗೆ ಸಾಗುವ ರೈಲು ಪ್ರಯಾಣವು ಥಾರ್ ಮರುಭೂಮಿಯ ಬರಡುಬರಡಾದ ಬಿಸಿ ನೋಟವನ್ನು ನಿಮಗೆ ದರ್ಶನ ಮಾಡಿಸುತ್ತದೆ. ವರ್ಣರಂಜಿತ ಮಣ್ಣಿನ ಗುಡಿಸಲುಗಳು, ಸುಡುಸುಡು ಬಿಸಿಲಿನಲ್ಲಿ ಓಡುವ ಒಂಟೆಗಳ ಓಟವನ್ನು ನೀವು ಈ ಮಾರ್ಗದಲ್ಲಿ ಕಣ್ತುಂಬಿಕೊಳ್ಳಬಹುದು.

13. ಅರಕ್ಕು ವ್ಯಾಲಿ ರೈಲ್ವೆ (ವಿಶಾಖಪಟ್ಟಣ - ಅರಕ್ಕು) ಕಾಫಿ ತೋಟಗಳು ಮತ್ತು ದಟ್ಟ ಅರಣ್ಯಗಳಿಂದ ಕಂಗೊಳಿಸುವ ಅರಕ್ಕು ಕಣಿವೆಯು ನಿಸರ್ಗಪ್ರಿಯರಿಗೆ ಒಂದು ಜನಪ್ರಿಯ ಹಾಟ್‍ಸ್ಪಾಟ್ ಆಗಿದೆ. ಈಸ್ಟ್ ಇಂಡಿಯಾದ ಪ್ರಮುಖ ಬಂದರು ನಗರ ವಿಶಾಖಪಟ್ಟಣದಲ್ಲಿರುವ ಅರಕ್ಕು ವ್ಯಾಲಿ ರೈಲ್ವೆಯು ಕೋಥವಾಲಸ ಮತ್ತು ಕಿರನ್ದೂಲ್ ಬಳಿ ನೆಲೆಗೊಂಡಿದೆ. ಈ ಮಾರ್ಗದಲ್ಲೇನಾದರೂ ನೀವು ಸಂಚರಿಸಿದ್ದೇಯಾದರೆ ಖಂಡಿತವಾಗಿಯೂ ವಿಸ್ಮಿತರಾಗದೇ ಇರಲಾರಿರಿ.

14. ಮಲ್ನಾಡ್ ಮ್ಯಾಜಿಕ್ (ಹಾಸನ - ಮಂಗಳೂರು) ಅಚ್ಚ ಹಸಿರಿನ ಸಮೃದ್ಧ ಭತ್ತದ ಪೈರುಗಳಿಂದ ಕಂಗೊಳಿಸುವ ಮತ್ತು ವೀಳ್ಯದೆಲೆಯ ಬಳ್ಳಿಗಳನ್ನು ಅಬ್ಬಿಸಿದ ಸಾಲುಸಾಲು ಅಡಿಕೆ ಮರಗಳ ಹಸಿರುಮಯ ನೆಲದ ಸೊಬಗನ್ನು ನೀವು ಮಲೆನಾಡಿನ ಈ ಮಾರ್ಗದಲ್ಲಿ ಸವಿಯಬಹುದು. 57 ಸುರಂಗಗಳ ಮೂಲಕ ಆದು ಹೋಗುವ ಸಕಲೇಶಪುರ ಮತ್ತು ಸುಬ್ರಮಣ್ಯ ನಿಲ್ದಾಣಗಳ ನಡುವಿನ ಮಾರ್ಗವಂತೂ ನಿಜಕ್ಕೂ ಅಮೋಫ. ಸುತ್ತಮುತ್ತಲೂ ಮಿನುಗುತ್ತಾ, ಮೈದುಂಬಿ ಹರಿಯುವ ಜಲಪಾತಗಳನ್ನು, ಮಂಜಿನಿಂದ ಆವೃತವಾದ ಬೆರಗುಗೊಳಿಸುವ ಪರ್ವತಗಳ ರಮಣೀಯ ದೃಶ್ಯವನ್ನು ನೋಡಿ ನೀವು ಆಹ್ಲಾದಿಸಬಹುದು.

15. ಸೀ ಬ್ರಿಡ್ಜ್ ರೈಡ್ (ಮಂದಪಮ್ - ಪಂಬನ್ - ರಾಮೇಶ್ವರಂ) ತಮಿಳುನಾಡಿನಲ್ಲಿ ಪಂಬನ್ ದ್ವೀಪಕ್ಕೆ ಮಾರ್ಗ ಕಲ್ಪಿಸುವ ಮಂದಪಮ್ ಸೇತುವೆಯು ಭಾರತದ ಎರಡನೇ ಅತಿ ದೊಡ್ಡ ಸೇತುವೆಯಾಗಿದೆ. ದಕ್ಷಿಣ ವಾರಣಾಸಿಯೆಡೆಗೆ ನೀವಿನ್ನೂ ಯಾತ್ರೆ ಕೈಗೊಂಡಿಲ್ಲವಾದಲ್ಲಿ, ಮೊದಲ ಬಾರಿಗೆ ಅಲ್ಲಿಗೆ ಪ್ರಯಾಣ ಮಾಡುತ್ತಿರುವಿರಿಯಾದರೆ ಖಂಡಿತವಾಗಿಯೂ ನೀವು ಮನ್ನಾರ್ ಕೊಲ್ಲಿಯನ್ನು ದಾಟಿ ಹೋಗುವ ಈ ಮಾರ್ಗದ ರೈಲು ಪ್ರಯಾಣವನ್ನು ನಿಸ್ಸಂದೇಹವಾಗಿ ಪ್ರೀತಿಸುತ್ತೀರಿ ಮತ್ತು ಜೀವನ ಪರ್ಯಂತ ಆ ಅನುಭವದ ಸವಿಯನ್ನು ಸವಿಯುತ್ತಲೇ ಇರುತ್ತೀರಿ.

16. ವೆಸ್ಟ್ರನ್ ಘಟ್ ಸಾಂಟರ್ (ಕರ್ಜತ್ - ಲೋನವಾಲ) ಮಹಾರಾಷ್ಟ್ರದ ಕರ್ಜತನ್ನು ಆದು ಹೋಗುವ ಈ ಮಾರ್ಗದ ರೈಲು ಪಶ್ಚಿಮಘಟ್ಟಗಳ ಒಳನಾಡನ್ನು ಪ್ರವೇಶಿಸುತ್ತದೆ. ಮಾನ್ಸೂನ್ ಅವಧಿಯಲ್ಲಂತೂ ಈ ಮಾರ್ಗದ ಪ್ರಯಾಣ ತುಂಬಾ ಸೊಗಸಾಗಿರುತ್ತದೆ. ಹಲವಾರು ಹೊಳೆಗಳು, ಬಳುಕುತ್ತಾ ಧುಮುಕುವ ಜಲಪಾತಗಳು, ಹಸಿರಿನಿಂದ ಆವೃತವಾದ ಬೆಟ್ಟಗಳು ಮತ್ತು ವಿಸ್ಮಯ ಜೀವವೈವಿಧ್ಯತೆಯು ನಿಮ್ಮನ್ನು ತಮ್ಮತ್ತ ಸೆಳೆದುಕೊಳ್ಳುತ್ತವೆ. ಮಂಕಿ ಹಿಲ್‍ಗಿಂತಲೂ ಮುನ್ನ ಥಾಕುರ್‍ವಾಡಿಯ ಗ್ರಾಮಗಳ ಮೂಲಕ ರೈಲು ಆದು ಹೋಗುತ್ತದೆ. ಬಳಿಕ ಶೃಂಗಾರಮಯ ಖಂಡಾಲಾವನ್ನು ದಾಟುತ್ತಾ ಲೋನವಾಲವನ್ನು ತಲುಪುತ್ತದೆ.

17. ಚಂಬಲ್ ರೈಲ್ವೆ (ಆಗ್ರಾ - ಗ್ವಾಲಿಯರ್) ಗರಿಷ್ಠ ಪ್ರಮಾಣದ ದರೋಡೆ, ಸುಲಿಗೆ, ಕೊಲೆಗಳಿಂದಾಗಿ ದಾಖಲೆ ಮಟ್ಟದ ಕುಖ್ಯಾತಿ ಪಡೆದಿರುವ ಡಕಾಯಿತರ ನೆಲೆಯಾದ ಚಂಬಲ್ ಪ್ರದೇಶವು ದಶಕಗಳಿಂದಲೂ ಸುದ್ದಿಯಲ್ಲಿದೆ. ಆದರೆ, ಈ ಎಲ್ಲವನ್ನೂ ಮೀರಿ ಚಂಬಲ್ ಪ್ರಪಾತಗಳು ನೋಡುಗರ ಕಣ್ಣುಗಳನ್ನು ಆಕರ್ಷಿಸುತ್ತವೆ. ಕಾಲದಿಂದ ಕಾಲಕ್ಕೆ ಈ ಭೂಪ್ರದೇಶವು ತನ್ನ ಮಣ್ಣಿನ ಮಕ್ಕಳನ್ನು ಪೊರೆಯುತ್ತಲೇ ಬಂದಿದೆ. ರೈಲಿನಲ್ಲಿ ಕುಳಿತು ಈ ಮಾರ್ಗದಲ್ಲಿ ನೀವು ಸಂಚರಿಸುವಾಗ ಇಲ್ಲಿನ ಕಣಿವೆಗಳು ನಿಮ್ಮನ್ನು ವಿಸ್ಮಿತರನ್ನಾಗಿಸುತ್ತವೆ.

18. ಕೇರಳ ರೈಲ್ವೆ (ಎರ್ನಾಕುಲಮ್ - ಕೊಲ್ಲಮ್ - ಟ್ರಿವಾಂಡ್ರಮ್/ತಿರುವನಂತಪುರ) ರೈಲಿನಲ್ಲಿ ಕುಳಿತು ಎರ್ನಾಕುಲಮ್(ಕೊಚ್ಹಿನ್)ನಿಂದ ಟ್ರಿವಾಂಡ್ರಮ್‍ಗೆ ಕೊಲ್ಲಮ್ ಮಾರ್ಗದಲ್ಲಿ ಸಂಚರಿಸಿದರೆ ನೀವು ಕೇರಳಾದ ಮಾಂತ್ರಿಕ ಪ್ರಕೃತಿಯ ಸುಂದರ ಸೊಬಗನ್ನು ಸವಿಯಬಹುದು. ಇದೊಂದು ರೀತಿಯಲ್ಲಿ ನಿಮಗೆ ಹಾಲಿಡೆ ಪ್ಯಾಕೇಜ್ ಇದ್ದಂತೆ! ಮೋಡಿ ಮಾಡುವ ಹಿನ್ನೀರು, ಸುಂದರ ಸರೋವರಗಳು, ತೆಂಗಿನ ತೋಟಗಳು, ದ್ವೀಪ ಪ್ರದೇಶಗಳಲ್ಲಿನ ಸಾಂಸ್ಕøತಿಕ ಸೊಗಡಿನಿಂದ ಕೂಡಿರುವ ಗ್ರಾಮಗಳು ನಿಮ್ಮನ್ನು ತಮ್ಮತ್ತ ಕೈಬೀಸಿ ಕರೆಯುತ್ತವೆ.

19. ಟ್ರ್ಯಾವಂಕೋರ್ (ತಿರುವಾಂಕೂರು) ರೈಲ್ವೆ (ಕೊಲ್ಲಮ್ - ಪುನಲೂರ್ - ಸೆಂಗೊಟ್ಟೈ) ಟ್ರ್ಯಾವಂಕೋರ್‍ನ ಹಿಂದಿನ ಮಹಾರಾಜರು 1907ರಲ್ಲಿ ಈ ಮಾರ್ಗದ ಮೊದಲ ರೈಲಿಗೆ ಮೊದಲ ಬಾರಿಗೆ ಹಸಿರು ನಿಶಾನಿ ತೋರಿಸಿದರು ಎನ್ನಲಾಗಿದೆ. ಪುನಲೂರ್‍ನಿಂದ ಸೆಂಗೊಟ್ಟೈಗೆ ಸಂಪರ್ಕ ಬೆಸೆಯುವ ಈ ಮಾರ್ಗವು ಚೆಲುವಿನಿಂದ ಕೂಡಿದ ಕಾರ್ಡಮಮ್ ಹಿಲ್ಸನ್ನು ದಾಟಿ ಹೋಗುತ್ತದೆ. ಅಚ್ಚ ಹಸಿರಿನ ದಟ್ಟ ಪ್ರಕೃತಿ ಮತ್ತು ಅದ್ಭುತ ವಾಸ್ತುಶಿಲ್ಪಗಳಿಂದ ಕೂಡಿರುವ ಈ ಮಾರ್ಗ ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ. ಅದರಲ್ಲೂ 13 ಕಮಾನುಗಳ ಸೇತುವೆಯ ದೃಶ್ಯ ನಿಮ್ಮ ನೆನಪಿನಲ್ಲಿ ಚಿರಕಾಲ ಉಳಿಯುತ್ತದೆ.

20. ಆಂಧ್ರ ರೈಲ್ವೆ ( ಗುಂತಕಲ್ - ಗುಂಟೂರು) ಗುಂತಕಲ್ - ಗುಂಟೂರು ಮಾರ್ಗದ ಧೊನೆ ಮತ್ತು ಕುಂಬಮ್ ವಿಭಾಗದ ನಡುವೆ ಪೂರ್ವ ಘಟ್ಟಗಳ ಮೂಲಕ ಆದು ಹೋಗುವಾಗ ನಿಮಗೆ ಮನೋಹರ ದೃಶ್ಯ ಸೊಬಗು ಕಾಣಸಿಗುತ್ತದೆ. ಬಹುತೇಕ ಎಕ್ಸ್‍ಪ್ರೆಸ್ ರೈಲುಗಳು ಈ ಮಾರ್ಗದಲ್ಲಿ ರಾತ್ರಿಯ ಹೊತ್ತು ಸಂಚರಿಸುತ್ತವೆ. ಆದರೆ ಬೆಳಗಿನ ಜಾವ ಕೆಲವು ಪ್ಯಾಸೆಂಜರ್ ರೈಲುಗಳಿದ್ದು, ಈ ಮಾರ್ಗದ ಚೆಲುವನ್ನು ಕಣ್ತುಂಬಿಕೊಳ್ಳಲು ನಿಮಗೆ ನೆರವಾಗುತ್ತವೆ. ಬೇಕಿದ್ದರೆ ನೀವು ಕುಂಬಮ್ ನಿಲ್ದಾಣದಲ್ಲಿ ಇಳಿದು, ಏಷ್ಯಾದ ಅತೀ ಹಳೆಯ ಮಾನವ ನಿರ್ಮಿತ ಕುಂಬಮ್ ಸರೋವರವನ್ನು ನೋಡಿ ಬರಬಹುದು.

21. ಟ್ರೈಬಲ್ ಒರಿಸ್ಸಾ ಒಡಿಸ್ಸಿ ( ಕೋರಾಪುಟ್ - ರಾಯಗಡ) ಕೆಆರ್ ಲೈನ್ ಎಂದೇ ಖ್ಯಾತಿ ಪಡೆದಿರುವ ಕೋರಾಪುಟ್ - ರಾಯಗಡ ಮಾರ್ಗವು ಕಿರನ್ದೂಲ್ - ಕೋಥವಾಲಸ (ಕೆಕೆ) ಲೈನ್‍ಗೆ ಸೇರಿದ್ದಾಗಿದೆ. ಕೋರಾಪುಟ್ ಪ್ರದೇಶವು ಸಮುದ್ರ ಮಟ್ಟದಿಂದ ಸುಮಾರು 800 ಮೀಟರ್‍ಗಳಷ್ಟು ಎತ್ತರದಲ್ಲಿದೆ. ರಾಯಗಡದವರೆಗಿನ 200 ಮೀಟರ್ ಅಂತರದ ಬೆಟ್ಟದ ಕೆಳಗಿನ ಇಳಿಜಾರಾದ ಪ್ರಯಾಣವು ನಿಮ್ಮನ್ನು ಮೋಡಿ ಮಾಡುವಂಥದ್ದಾಗಿದೆ. ದಟ್ಟವಾದ ಅರಣ್ಯಗಳು, ಕುದುರೆ ಲಾಳಾಕೃತಿಯ ತಿರುವುಗಳು ಈ ಮಾರ್ಗದ ಸವಾರಿಯ ಮೆರುಗನ್ನು ಹೆಚ್ಚಿಸುತ್ತವೆ.

22. ಲೇಕ್ ವ್ಯೂ ಚಿಲಿಕ / ಚಿಲ್ಕ (ಭುವನೇಶ್ವರ - ಬ್ರಹ್ಮಪುರ್) ಎಡಭಾಗದಲ್ಲಿ ಚಿಲ್ಕ ಸರೋವರದ ಮತ್ತು ಬಲಭಾಗದಲ್ಲಿ ಪೂರ್ವ ಘಟ್ಟಗಳ ವೈಭವವನ್ನು ನೋಡಲು ನೀವು ಒರಿಸ್ಸಾದಲ್ಲಿ ಭುವನೇಶ್ವರದಿಂದ ಬ್ರಹ್ಮಪುರಕ್ಕೆ ಬೆಳಗಿನ ಜಾವದಂದು ಒಂದು ಸಂಚಾರ ಕೈಗೊಳ್ಳಿ. ಚಿಲಿಕ / ಚಿಲ್ಕವು ಭೂಮಿಯ ಮೇಲಿನ ಎರಡನೇ ದೊಡ್ಡ ಕಡಲ್ಕೊಳವಾಗಿದೆ. ವಲಸೆ ಬರುವ ಹಕ್ಕಿಗಳಿಗಂತು ಇದು ಸ್ವರ್ಗಮಯ ತಾಣ. ಈ ಹಕ್ಕಿಗಳನ್ನು ನೋಡುವ ಬಯಕೆ ನಿಮ್ಮದಾಗಿದ್ದಲ್ಲಿ ಹೇಗಾದರೂ ಮಾಡಿ ರೈಲಿನಲ್ಲಿನ ಕಿಟಕಿ ಬಳಿಯ ಆಸನವನ್ನು ನಿಮ್ಮದಾಗಿಸಿಕೊಳ್ಳಿ. ಅಲ್ಲದೆ, ಮರೆಯದೆ ದುರ್ಬೀನನ್ನೂ ನಿಮ್ಮ ಜೊತೆಗಿಟ್ಟಿಕೊಂಡಿರಿ.

23. ಅರಾವಳಿ ಅಡ್ವೆಂಚರ್ (ಹಿಮ್ಮತ್‍ನಗರ - ಉದಯ್ಪುರ/ಮಾವ್ಲಿ - ಮಾರ್ವಾರ್) ಅರಾವಳಿ ವ್ಯಾಪ್ತಿಯ ಮಾರ್ಗವು ರಾಜಸ್ಥಾನದ ಸುತ್ತಲೂ ಉತ್ತರದಿಂದ ದಕ್ಷಿಣಕ್ಕೆ ಸಾಗುತ್ತದೆ. ಮುಚ್ಚಿಹೋಗಿರುವ ಪುರಾತನ ಪರ್ವತವೊಂದರ ಸವೆತದ ಕಾರಣದಿಂದಾಗಿ ಇಲ್ಲಿ ಕಡಿದಾದ ಬಂಡೆಗಳ ಸಾಲು ನಿರ್ಮಾಣವಾಗಿದೆ ಎನ್ನಲಾಗಿದೆ. ಈ ಮಾರ್ಗದಲ್ಲಿ ನೀವು ಪ್ರಯಾಣವನ್ನು ಕೈಗೊಂಡರೆ ರಾಜಸ್ಥಾನದ ಇತಿಹಾಸದಲ್ಲಿ ಬಹಳ ಶ್ರೀಮಂತಿಕೆಯಿಂದ ಕೂಡಿರುವ ಈ ಬಂಡೆಗಳ ಬಗೆಗಿನ ಜಾನಪದ ಕಥೆಗಳನ್ನು ನೀವು ಅಲ್ಲಿನ ಸ್ಥಳೀಯ ನಿವಾಸಿಗಳ ಬಾಯಿಂದಲೇ ಕೇಳಿ ತಿಳಿದುಕೊಳ್ಳಬಹುದು. ಅಹಮದಾಬಾದ್‍ನಿಂದ ಉದಯ್ಪುರಕ್ಕೆ ಹೊರಡುವ ರೈಲು ಬೆಟ್ಟಗಳ ವಲಯವೊಂದನ್ನು ಆದು ಹೋಗುತ್ತದೆ. ಈ ಬೆಟ್ಟಗಳ ವಲಯವು ನಿಮಗೆ ಒಂದೊಳ್ಳೆಯ ಅನುಭವವನ್ನು ನೀಡುತ್ತದೆ. ಅರಾವಳಿಯ ಒಳಭಾಗದಲ್ಲಿ ಪ್ರಯಾಣಿಸಲು ನಿಮಗೆ ಮಾವ್ಲಿಯಿಂದ ಮಾರ್ವಾರಕ್ಕೆ ಮೀಟರ್ ಗೇಜ್ ಲೈನ್ ಕೂಡಾ ಇದೆ. ಮಾವ್ಲಿಯು ಉದಯ್ಪುರ ನಗರದಿಂದ 43 ಕಿ.ಮೀ ಅಂತರದಲ್ಲಿದೆ. ಸದ್ಯ ಮಾವ್ಲಿ ಮತ್ತು ಮಾರ್ವಾರದ ನಡುವಿನ ಗೇಜ್ ಪರಿವರ್ತನೆಯ ಸಮ್ಮತಿಗಾಗಿ ಕಾಯಲಾಗುತ್ತಿದೆ ಎನ್ನಲಾಗಿದೆ.

24. ಗಿರ್ ಸಫಾರಿ (ಜುನಗಢ್ - ದೆಲ್ವಾದ) ಗುಜರಾತಿನಲ್ಲಿ ಜುನಗಢದಿಂದ ದೆಲ್ವಾದಕ್ಕಿರುವ ಮೀಟರ್ ಗೇಜ್ ರೈಲ್ವೆಯ ಮಾರ್ಗವು ನಯನ ಮನೋಹರವಾಗಿದೆ. ಇಲ್ಲಿ ನಿಮಗೆ ಸಿಗುವ ಗಿರ್ ರಾಷ್ಟ್ರೀಯ ಉದ್ಯಾನವನವು ಹಸಿರು ವನಗಳಿಂದ ಆವೃತವಾಗಿರುವ ಬೆಟ್ಟಗಳಿಂದ ಕೂಡಿದೆ. ಈ ಮಾರ್ಗದ ಪ್ರಯಾಣವು ಅತಿ ನಿಧಾನಗತಿಯಿಂದ ಕೂಡಿದ್ದು, ಪ್ರವಾಸಿಗರು ಗಿರ್ ನಿಲ್ದಾಣದಲ್ಲಿ ಇಳಿಯುವ ಯೋಜನೆ ಹಾಕಿಕೊಂಡರೆ ಗುಜರಾತಿನ ಪಶ್ಚಿಮ ವಲಯವಾದ ಸೌರಾಷ್ಟ್ರದ ಸಂಸ್ಕøತಿಯಲ್ಲಿ ಮಿಂದು ಏಳಬಹುದು. ಸಾಸನ್ ಗಿರ್ ನಿಲ್ದಾಣದಲ್ಲಿ ರೈಲು ನಿಲುಗಡೆಯಾಗುತ್ತದೆ. ಈ ನಿಲ್ದಾಣದ ಮಾರ್ಗವು ನಿಮ್ಮನ್ನು ರಾಷ್ಟ್ರೀಯ ಉದ್ಯಾನವನದ ಪ್ರಾರಂಭಿಕ ಸ್ಥಳಕ್ಕೆ ಕರೆದೊಯ್ಯುತ್ತದೆ. ಪಶ್ಚಿಮ ಗುಜರಾತ್‍ನ ಕರಾವಳಿಯ ಮೂಲಕ ಆದು ಹೋಗುವ ಈ ರೈಲಿನಲ್ಲಿ ಕುಳಿತು ನೀವು ದಿಯು ಕಡೆಗೂ ಒಮ್ಮೆ ಕಣ್ಣಾಡಿಸಬಹುದು.

25. ಶಿಂದವಾನೆ ಮತ್ತು ಅಂಬಾಲೆ (ಪೂನಾ - ಸತಾರ) ಬರಡಾದ ಮತ್ತು ಉತ್ತುಂಗದ ಸಹ್ಯಾದ್ರಿ ಪರ್ವತಗಳಿಗೆ ಶಿಂದಾವನೆಯ ಘಟ್ಟಗಳು ಹೆಸರುವಾಸಿ. ಪರ್ವತಗಳ ಮೂಲಕ ಆಳದಲ್ಲಿ ಸಾಗುವ ಈ ಮಾರ್ಗವು ಎಲ್ಲಾ ಬದಿಯ ಬಿಡಿ ಬಂಡೆಗಳ ಮೂಲಕ ಆದು ಹೋಗುತ್ತದೆ. ಸೆಂಟ್ರಲ್ ರೈಲ್ವೇಸ್‍ನ ಪೂನಾ - ಸತಾರ ವಲಯದಲ್ಲಿ ಈ ಮಾರ್ಗವು ನೆಲೆಗೊಂಡಿದೆ.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.