ಆ ಮಧುರ ಕ್ಷಣ ನನ್ನ ಜೀವನದಲ್ಲಿ ಸದಾ ನೆನಪಿನಲ್ಲಿರುವ ರಸಪಾಕವಾಯಿತು. ನಾನು, ಪ್ರೇಮ ಆ ಸುಂದರ ರಾತ್ರಿಯಲ್ಲಿ ಒಂದಾದೆವು. ನನಗೆ ಎಲ್ಲಿಯೂ ಪ್ರತಿರೋಧಿಸದೇ ನನ್ನೊಂದಿಗೆ ಕೈಜೋಡಿಸಿದ ಆ ಕ್ಷಣವನ್ನು ನಾನು ಜೀವ ಮಾನದಲ್ಲಿ ಮರೆಯಲಾಗದು.

ಹಿಂದೆಂದೂ ಅನುಭವಿಸದ ಆ ಸುಖಕ್ಕೆ, ಆ ಅಪ್ಪುಗೆಯ ಬಿಸಿಗೆ, ಸಿಂಚನದ ಸಿಹಿಗೆ ನಾನು ಕರಗಿ ನೀರಾದೆ. ಆ ರಾತ್ರಿ ನಮ್ಮ ಜೀವನದಲ್ಲಿ ಎಂದು ಮರೆಯಲಾಗದ ಮಧುರ ರಾತ್ರಿಯಾಯಿತು.

ಬೆಳಿಗ್ಗೆ ಎದ್ದಾಗ ಪಕ್ಕದಲ್ಲಿ ಪ್ರೇಮಳಿರಲಿಲ್ಲ. ಅವಳನ್ನು ಹುಡುಕಿಕೊಂಡು ಅಡುಗೆಮನೆಯತ್ತ ಹೋದೆ. ಆಗಲೇ ತಲೆ ಸ್ನಾನಮಾಡಿ ದೇವರ ಪೂಜೆಯಲ್ಲಿ ನಿರತಳಾಗಿದ್ದಳು. ನನ್ನ ನೋಡುತಲಿ ತಲೆ ತಗ್ಗಿಸಿ ನಾಚಿಕೆಯಿಂದ ಒಳನಡೆದಳು. ಅವಳನ್ನು ಹಿಂಬಾಲಿಸಿಕೊಂಡು ಬಂದು ಹಿಂದಿನಿಂದ ಜೋರಾಗಿ ತಬ್ಬಿಕೊಂಡೆ.

"ನೋಡು ನಾಚಿಕೊಳ್ಳಲು ಏನು ಇಲ್ಲ, ನಾವಿಬ್ಬರು ಗಂಡ - ಹೆಂಡತಿ ತಾನೇ?, ನಾವು ಯಾವತ್ತಿದ್ದರೂ ಒಂದೇ ಜೀವ ಎರಡು ದೇಹದಂತಿರಬೇಕು. ಎಲ್ಲೂ ಮುಚ್ಚುಮರೆ, ದುಃಖ, ನೋವುಗಳು ನಮ್ಮ ನಡುವಿರಬಾರದು. ನಮ್ಮ ಈ ಪ್ರೀತಿ ಹೀಗೆ ನೂರ್ಕಾಲ ಬಾಳಬೇಕು ತಿಳಿಯಿತಾ ಪುಟ್ಟಿ", ಎಂದು ಅವಳ ಮೊಗವನ್ನು ಬೊಗಸೆಯಲ್ಲಿ ಇಟ್ಟುಕೊಂಡು ಕೆನ್ನೆಗೊಂದು ಸಿಹಿ ಮುತ್ತು ಕೊಟ್ಟೆ.

"ಇದೇ ಪ್ರೀತಿ, ಅಕ್ಕರೆ, ಸ್ನೇಹ, ನಂಬಿಕೆಗಳು ನಮ್ಮ ನಡುವೆ ಸದಾ ಇರಲಪ್ಪ. ಏಳೇಳು ಜನ್ಮಕ್ಕೂ, ಪ್ರೇಮಳೇ ನನ್ನ ಹೆಂಡತಿಯಾಗಿ ಬರಲಪ್ಪ. ಈ ಬಂಧ ನಮ್ಮ ನಡುವೆ ಸದಾ ಅನುಬಂಧವಾಗಿರಲಿ", ಎಂದು ಮನದಲ್ಲಿ ಅಂದುಕೊಳ್ಳುತ್ತಾ ಯಾರ ಕಾಕದೃಪ್ಟಿಯೂ ನಮ್ಮ ಮೇಲೆ ಬೀಳದಿರಲಪ್ಪ ಎನ್ನುತ್ತಾ ಟಚ್ ವುಡ್ ಎಂದುಕೊಂಡೆ.

ಎಂದಿನಂತೆ ಬೇಗ ಸ್ನಾನ ಮಾಡಿ, ಬೆಳಿಗ್ಗೆಯ ತಿಂಡಿ ತಿಂದು, ಟಿಫಿನ್ ಬಾಕ್ಸ್ ತೆಗೆದುಕೊಂಡು ಆಫೀಸ್ಗೆ ಹೊರಟೆ.

ಎಂದಿಗಿಂತಲೂ ಈ ದಿನ ನಾನು ಬಹಳ ಗೆಲುವಾಗಿದ್ದೆ ಎಂದು ನಿಮಗೆ ಬಿಡಿಸಿ ಹೇಳಬೇಕಾಗಿಲ್ಲ ತಾನೇ?. ನನ್ನಷ್ಟಕ್ಕೆ ನಾನು ನಗುತ್ತಾ ಪುಟ್ಟಿಗೆ ಪ್ರೀತಿಯಿಂದ ಬಾಯ್ ಹೇಳಿ ಆಫೀಸ್ಗೆ ಹೊರಟೆ.

ಸ್ವಲ್ಪ ದೂರ ಹೋಗುವಷ್ಟರಲ್ಲಿ ಅರೇ, ನಾನು ನಿನ್ನೆ ಸ್ವಿಚ್ ಆಫ್ ಮಾಡಿಕೊಂಡ ಮೊಬೈಲನ್ನು ಇನ್ನು ಆನ್ ಮಾಡಿಲ್ಲವಲ್ಲ?, ಎನ್ನುತ್ತಾ ಆನ್ ಮಾಡಿದೆ.

"ಅರೇ ನನ್ನ ಮೊಬೈಲ್ಗೆ ಬರೋಬರಿ ಎಂಟು ಮಿಸ್ ಕಾಲ್ ಮೆಸೇಜ್ ಬಂದಿತ್ತು. ಯಾರಿರ ಬಹುದು ...?", ಎನ್ನುತ್ತಾ ಓಪನ್ ಮಾಡಿದರೆ ಎಲ್ಲವೂ ಒಂದೇ ನಂಬರ್ ಆಗಿತ್ತು.

ಸಾಲದಕ್ಕೆ ಅನ್ ನೋನ್ ನಂಬರ್ ಬೇರೆ.

ಅಯ್ಯೋ ಇದು ಖಂಡಿತವಾಗಿ ಆಫೀಸ್ದೆ ಇರಬೇಕೆಂದು ಕಾಲ್ ಮಾಡಿದೆ.

ಅತ್ತ ಕಡೆಯಿಂದ ಗಂಡಸಿನ ಸ್ವರಕ್ಕೆ ಸ್ವಲ್ಪ ನಿರಾಳನಾದೆ.

" ಹಲೋ ಯಾರು?", ಎನ್ನುತ್ತಿದ್ದಂತೆ . "ನಾನಪ್ಪ ರಾಮಚಂದ್ರ ಅಂಕಲ್, ಮೋಹಳ ಅಪ್ಪ" ಎಂದರು ಅತ್ತ ಕಡೆಯಿಂದ ಕೇಳಿಬಂತು.

"ಓಹ್ ಅಂಕಲ್ ನೀವಾ?, ಏನ್ವಿಷಯ", ಎಂದೆ ನೇರವಾಗಿ.

"ನೋಡಪ್ಪ, ನನಗೆ ನಿನ್ನೊಂದಿಗೆ ಮುಖತಾಃ ಮಾತಾಡಬೇಕು. ಯಾವಾಗ ಮನೆ ಕಡೆ ಬರುತ್ತಿ?", ಎಂದೆ ಬಿಟ್ಟರು.

ನನಗೋ ಉಗುಳು ನುಂಗಿದಂತಾಯಿತು. ಅದೇನೋ ಹೇಳುತ್ತಾರಲ್ಲ, ' ಬೀದಿಲಿ ಹೋಗೋ ಮಾರಮ್ಮ, ಮನೆ ತನಕ ಬಾರಮ್ಮ', ಎಂಬಂತಾಯಿತು. ನಾನೇ ತೋಡಿದ ಹೊಂಡಕ್ಕೆ ನಾನೇ ಬೀಳುವಂತಾಯಿತು. ಮನದಲ್ಲಿ ಏನೋ ಅವ್ಯಕ್ತ ಬೇಸರಕ್ಕೆ ನಾನೇ ಹೊಣೆ ತಾನೇ?.

ಅಫೀಸ್ನ ಕೆಲಸ ಮುಗಿಯುತ್ತಿದ್ದಂತೆ ವಿಧಿಯಿಲ್ಲದೆ ಅವರ ಮನೆಯ ಕದ ತಟ್ಟಿದೆ. ನನ್ನ ನೋಡುತಲಿ ಅಂಕಲ್ ಮೊಗ ಅರಳಿದಂತೂ ಸುಳ್ಳಲ್ಲ.

" ಏನ್ ಅಂಕಲ್ , ಏನೋ ಅಗತ್ಯ ಮಾತಾಡುವುದಿದೆ ಎಂದಿರಲ್ಲ , ಏನದು?", ಎಂದೆ ನೇರವಾಗಿ.

" ಅದೇನೋಡಪ್ಪ , ಮೊನ್ನೆ ಕೂಡ ನಿನಗೆ ಹೇಳಿದೆನಲ್ಲ. ನಮ್ಮ ಮೋಹಳಿಗೆ ನಿನೊಬ್ಬ ಒಳ್ಳೆಯ ಗೆಳೆಯ. ಅವಳ ಜೀವನಕ್ಕೊಂದು ಹೊಸ ಅರ್ಥಕೊಡಲು ಸಾಧ್ಯವಿರುವುದು ನಿನಗೆ ಮಾತ್ರ .

ಇವತ್ತು ನನ್ನ ಹೆಂಡತಿ ಮತ್ತು ಮೋಹ ಹೊರಗೆ ಹೋಗಿರುವುದರಿಂದ ಇದು ಸರಿಯಾದ ಸಮಯವೆಂದು ನಿನ್ನನ್ನು ಬರಹೇಳಿದೆ.ಅದಕ್ಕಾಗಿ ನಿನ್ನೆಯಿಂದ ಪೋನ್ ಮಾಡುತ್ತಿದ್ದೆ.

ನೋಡಪ್ಪ, ವಿಷಯಕ್ಕೆ ಬಂದು ಬಿಡುತ್ತೀನಿ. ನಾನು ಬ್ಯಾಂಕಿನಲ್ಲಿದ್ದಾಗ ದೊಡ್ಡ ಹುದ್ದೆಯಲ್ಲಿದ್ದೆ. ನನ್ನ ನಿವೃತ್ತಿ ವೇತನ , ನನ್ನ ಉಳಿತಾಯ ಖಾತೆ ಎಲ್ಲವೂ ಜೋರಾಗಿಯೇ ಇದೆ.

ಬೆಂಗಳೂರಿನಲ್ಲಿ ನನಗೆ ಎರಡು ಮನೆ,ಬೇಕಾದಷ್ಟು ಆಸ್ತಿ ಪಾಸ್ತಿ, .....ಒಟ್ಟಾರೆ ಐಶಾರಾಮಿ ಜೀವನಕ್ಕೆ ಏನೂ ತೊಂದರೆಯಿಲ್ಲ. ನಾನು ಮಾಡಿದ ಇಷ್ಟೊಂದು ಸಂಪತ್ತು ನಮಗೆ ಗೊತ್ತಿರುವ ಹುಡುಗ ಹಾಗೂ ನನ್ನ ಮಗಳಿಗೆ ಹೋದರೆ ನಮಗೂ ಖುಷಿಯಲ್ಲವೇ?...ಅದಕ್ಕೆ ಕೇಳುತ್ತಿದ್ದೇನೆ, ನೀವೇಕೆ ನನ್ನ ಮಗಳಿಗೊಂದು ಹೊಸ ಬಾಳುಕೊಡಬಾರದು?. " ,

ಎಂದಾಗ ನನಗೆ ಅವರ ಮಾತಿನಿಂದ ಹೇಳಿಕೊಳ್ಳುವಷ್ಟು ಆಶ್ಚರ್ಯವಾಗದಿದ್ದರೂ ಏನೋ ಮುಜುಗರ ಆದಂತಾಗಿ ಅಲ್ಲಿಂದ ಎದ್ದು ನಿಂತೆ.

ಅದು ಕೂಡ ಅವರ ಬಾಯಿಯಿಂದ ಬಂದ ಆ ಪದ...ಹೊಸ ಬಾಳು...ನನಗೆ ಏನೋ ಒಂದು ರೀತಿಯ ಕುತೂಹಲಕ್ಕೆ ಎಡೆ ಮಾಡಿದಂತಾಯಿತು.

" ನೋಡಿ ಅಂಕಲ್ , ನಾನು ನಿಮ್ಮ ಮಗಳ ಸಹಪಾಠಿ ಆಗಿದ್ದೆ, ಅಷ್ಟು ಬಿಟ್ಟರೆ ನನಗೆ ಅವಳ ಮೇಲೆ ಯಾವುದೇ ಪ್ರೇಮ, ಪ್ರೀತಿಯಾಗಲಿ ಇಲ್ಲ . ಮದುವೆಯಾಗುವ ಕನಸಂತೂ ಮೊದಲೇ ಇಲ್ಲ. ಮೇಲಾಗಿ ನನಗೆ ಮದುವೆಯಾಗಿ ಆಗಲೇ ಎರಡು ವರ್ಷಗಳಾಗಿದೆ.

ನನ್ನ ಸಂಸಾರಕ್ಕೆ ಹುಳಿ ಹಿಂಡುವ ಕೆಲಸ ದಯಮಾಡಿ ಮಾಡದಿರಿ. ಯಾವುದಾದರೂ ಒಳ್ಳೆ ಹುಡುಗನನ್ನು ನೋಡಿ ಮೋಹಳಿಗೆ ಮದುವೆ ಮಾಡಿಸಿ", ಎಂದು ಕಡ್ಡಿ ಮುರಿದಂತೆ ಮಾತನಾಡಿ ಹಿಂದೆ ಮುಂದೆ ನೋಡದೆ ಅಲ್ಲಿಂದ ಎದ್ದೆ.

ದಾರಿಯುದ್ದಕ್ಕೂ ಒಂದೇ ಯೋಚನೆ ನನ್ನ ಕಿತ್ತು ತಿನ್ನತೊಡಗಿತು. ನಾನಾಗಿಯೇ ಅವರ ಸಮೀಪಕ್ಕೆ‌ ಹೋದೆ. ಈಗ ಅವರಿಂದ ಬಿಡಿಸಿಕೊಂಡು ಬರಲು ನಾನೇ ಒದ್ದಾಡುವಂತಾಗಿದೆ.

ಮೊದಮೊದಲು ಮೋಹಳಿಗಾಗಿ ಜೀವ ಹಾತೊರೆದದ್ದು ನನ್ನ ಮೊದಲ ತಪ್ಪು.

ಮದುವೆಯಾದ ಮೇಲೆ ಮತ್ತೆ ಪರಸ್ತ್ರೀಗಾಗಿ ಹಪಹಪಿಸಿದ್ದು ನನ್ನ ಎರಡನೇ ತಪ್ಪು.

ಅವರು ಕರೆದಾಗಲೆಲ್ಲ ಕೋಲೆ ಬಸವನಂತೆ ಹೋಗುವುದು ನನ್ನ ಮೂರನೇ ತಪ್ಪು....

ಒಟ್ಟಾರೆ ದಿನದಿಂದ ದಿನಕ್ಕೆ ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದೇನೆ. ಈಗಷ್ಟೇ ಸುಖಿ ಸಂಸಾರಕ್ಕೆ ಪಾದಾರ್ಪಣೆ ಮಾಡುತ್ತಿರುವ ನಾನು ಯಾವ ಕಾರಣಕ್ಕೂ ಮತ್ತೆ ಇದೇ ತಪ್ಪು ಮಾಡಬಾರದೆಂದು ಮನದಲ್ಲೇ ನಿಶ್ಚಯಿಸಿ ಮುಂದೆ ನಡೆದೆ.

************

ಈ ನಡುವೆ ಎರಡು ಬಾರಿ ಊರಿಗೆ ಹೋಗಿಬಂದೆವು. ಸಂದೀಪನ ಎಂಗೇಜ್ಮೆಂಟ್ಗೆ ನಮ್ಮ ಕುಟುಂಬ ವರ್ಗವೇ ಹೋಗಿತ್ತು. ನನ್ನ ಬಾಲ್ಯದ ಗೆಳೆಯರು, ನೆಂಟರಿಷ್ಟರೆಲ್ಲರನ್ನು ನೋಡಿ ನನಗೂ ಖುಷಿಯಾಯಿತು.

ಸಂದೀಪನ ಹುಡುಗಿಯೂ ನಮ್ಮ ಪ್ರೇಮಳಂತೆ ನಮ್ಮ ಊರಿನವಳಾಗಿದ್ದಳು. ಕಿಶೋರ ಕೂಡ ನನ್ನ ಮತ್ತು ಪ್ರೇಮಳ ಜೋಡಿ ನೋಡಿ ಮನಸಾರೆ ಶುಭಹಾರೈಸಿದ.

ದಿನಗಳು ಯಾರಿಗೂ ಕಾಯದೆ ಉರುಳತೊಡಗಿತು. ನನ್ನ ಮತ್ತು ಪ್ರೇಮಳ ನಡುವೆ ದಿನದಿಂದ ದಿನಕ್ಕೆ ಹೊಸ ಸಂತಸದ ಅಲೆಗಳು ಮೂಡತೊಡಗಿತು. ಅಯ್ಯೋ ನನಗೆ ಹೇಳಲು ಒಂದ್ತರಹ ನಾಚಿಕೆಯಾಗುತ್ತಿದೆ. ಹೌದು, ನನ್ನ ಪ್ರೇಮಳಿಗೆ ಈಗ ಮೂರು ತಿಂಗಳು.

ಮೋಹಳ ಅಪ್ಪನೊಂದಿಗೆ ನಿಷ್ಠುರವಾಗಿ ಮಾತಾಡಿಕೊಂಡು ಬಂದ ಮೇಲೆ ಅವರ ಅಪ್ಪನ ಹಾವಳಿ ಇಲ್ಲವಾಗಿತ್ತು. ಆದರೂ ಈ‌ ಮೋಹ ಮಾತ್ರ ಆಗಾಗ ನನಗೆ ಪೋನ್ ಮಾಡುತ್ತಿದ್ದಳು. ಆದೆನೋ ಹೇಳುತ್ತಾರಲ್ಲ. ಹುಟ್ಟು ಬುದ್ಧಿ ಸುಟ್ಟರೂ ಹೋಗುವುದಿಲ್ಲ ಎಂಬಂತೆ.

ಆದರೆ ನಾನಾಗಲಿ, ಮೋಹಳಾಗಲಿ ,ಅಗತ್ಯಕ್ಕಿಂತ ಜಾಸ್ತಿ ಮಾತಾಡಿದ್ದಾಗಲಿ, ಹೊರಗಡೆ ಸುತ್ತಾಡಲು ಹೋಗಿದ್ದಾಗಲಿ ಇಲ್ಲವೇ ಇಲ್ಲ ಎನ್ನಬಹುದು.

ಈ ನಡುವೆ ಇಂದು ಮೋಹಳ ಕರೆ ಬಂದಾಗ ಅದೇ ಕುತೂಹಲದಿಂದ ಅವಳ ಕರೆಯನ್ನು ಎತ್ತಿದೆ.

" ಮೋಹನ್ , ನನಗೆ ಕೆಲವೊಂದು ವಸ್ತುಗಳನ್ನು ಶಾಪಿಂಗ್ ಮಾಡಬೇಕಿದೆ. ಅಮ್ಮನಿಗೆ ಸುತ್ತಾಡಿದರೆ ಬೇಗನೇ ಸುಸ್ತಾಗುತ್ತಾರೆ. ಪ್ಲೀಸ್ ಕಣೋ, ಬರತ್ತೀಯಾ?. ಒಬ್ಬಳೇ ಹೋಗಲು ಬೋರ್ ಕಣೋ", ಎಂದಾಗ ತಿರಸ್ಕರಿಸಲಾಗದೆ ಅವಳೊಂದಿಗೆ ಇಂದು ಶಾಪಿಂಗ್ ಗೆ ಹೋದೆ.

ನಮ್ಮಿಬ್ಬರನ್ನು ಯಾವುದೋ‌ ಒಂದು ಜೊತೆ ಕಣ್ಣುಗಳು ಹಿಂಬಾಲಿಸುತ್ತಿತ್ತು. ನಾನೋ ತಿರುಗಿ ತಿರುಗಿ ನೋಡಿದೆ. ಆದರೆ ನನ್ನ ನೋಡುತಲಿ ಅಲ್ಲಿಂದ ಮರೆಯಾಗುತ್ತಿತ್ತು. ಆದರೆ ಆ ಕಣ್ಣುಗಳು ಯಾರದೆಂದು ನನಗೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ.

**************
ಮುಂದುವರೆಯುತ್ತದೆ.....
*****************************

- ಶ್ರೀಮತಿ. ಶೈನಾ ಶ್ರೀನಿವಾಸ್ ಶೆಟ್ಟಿ.

( ಮತ್ತೆ ಮತ್ತೆ ಮೋಹಳ ಹಿಂದೆ ತಿರುಗುವ ಮೋಹನನಿಗೆ ಕಾದಿದೆಯೇ ಆಪತ್ತು?,

ಆ ಕಳ್ಳ ಕಣ್ಣುಗಳು ಯಾರದ್ದೀರಬಹುದು?,

ಪ್ರೇಮಳಿಗೆ ಮೋಹನನ ಕೃಷ್ಣಲೀಲೆಗಳು ತಿಳಿಯುತ್ತಾ?....... ನಿರೀಕ್ಷಿಸಿ...)

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.