ಮುಪ್ಪು

ಪ್ರತಿಯೊಂದು ಜೀವಿಗೂ ಕೂಡ ಮುಪ್ಪಾವರಿಸುವುದು ಸ್ವಾಭಾವಿಕ ಪ್ರಕ್ರಿಯೆ. ಪ್ರಕೃತಿದತ್ತ ನಿಯಮ. ಒಟ್ಟಾರೆ ಆ ಕಾಲಘಟ್ಟ ಜೀವನ ಕ್ರಮಿಸಿದ ಹೆಗ್ಗುರುತು. ಮನುಷ್ಯನನ್ನು ಹೊರತುಪಡಿಸಿ ಉಳಿದೆಲ್ಲಾ ಜೀವಿಗಳು ತಮ್ಮ ಕೊನೆಯಗಾಲದಲ್ಲಿ ಪರಸ್ಪರ ನೆರವಾಗುತ್ತವೆ ಅಲ್ಲದೆ ಸಹಕಾರಿಯಾಗುತ್ತವೆ ಎಂಬ ಅಂಶ ಮಾನವ ಜಾತಿಯನ್ನೆ ಅಣಕಿಸುವಂತೆ ಜೀವಿಸುತ್ತವೆ. ಆದರೆ ನರನು ಮಾತ್ರ ಅಪವಾದದಂತೆ ಬದುಕುತ್ತಾನಲ್ಲ? ಹಾಗಾದರೆ ಮುಪ್ಪು ಶಾಪವೋ?ವರವೋ? ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ. ಕ್ರಿಸ್ತಪೂರ್ವದಲ್ಲಿದ್ದ ಬುದ್ಧನೀಗ ಧೃವತಾರೆಯಾಗಿ ಬೆಳಕಾಗಬಲ್ಲ!! ಲೌಕಿಕನಾದ ಸಿದ್ದಾರ್ಥನನ್ನು 'ಬುದ್ಧ'ನನ್ನಾಗಿ ಮಾಡುವಲ್ಲಿ 'ಮುಪ್ಪು' ಮಹೋನ್ನತಿಯ ಬೋಧಿಸತ್ವವಾಗಿದೆ ಎಂದರೂ ಚ್ಯುತಿ ಉಂಟಾಗಲಾರದು!! ಆತನಿಗೆ ಅದರರಿವು ಪ್ರಾಯದಲ್ಲೇ ತಿಳುವಳಿಕೆಯಂಟಾಗಿ ಜನರ ತೊಳಲಾಟದ ಬಿಡುಗಡೆಗಾಗಿ ಬೆಳಕಾದ. ಬಸವಣ್ಣನಿಗೂ ಬುದ್ಧನ ಮುಪ್ಪಿನ ತಿಳಿವು ಪ್ರೇರಣೆಯಾದಂತಿದೆ ಈ ವಚನ- "ನರೆ ಕನ್ನೆಗೆ,ತೆರೆಗಲ್ಲಕೆ,ಶರೀರ ಗೂಡುವೊಗದ ಮುನ್ನ,/ ಹಲ್ಲು ಹೋಗಿ, ಬೆನ್ನುಬಾಗಿ, ಅನ್ಯರಿಗೆ ಹಂಗಾಗದ ಮುನ್ನ,/ ಕಾಲ ಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ,/ ಮುಪ್ಪಿಂದೊಪ್ಪವಳಿಯದ ಮುನ್ನ,/ ಮೃತ್ಯು ಮುಟ್ಟದ ಮುನ್ನ ಪೂಜಿಸು ಕೂಡಲಸಂಗಮನ." ಇಲ್ಲಿ 'ಪೂಜಿಸು' ಎನ್ನುವುದು 'ಸಾಧಿಸು' ಅಂಥ ಅಂದುಕೊಂಡರೆ, ಸಾಧಿತವಲ್ಲದ ಮುಪ್ಪು ಶಾಪವಾಗಿಯೂ, ಸಾಧನೆಯ ಮುಪ್ಪು ವರವಾಗಿಯೂ ಕಂಡಿರಬೇಕು. ಮುದಿತನದ ಮುಪ್ಪು ಯುವಜನತೆಗೆ ಗರಡಿಮನೆಯಿದ್ದಂತೆ!!!! ಅದರಲ್ಲಿ ಅನುಕಂಪಿತವುಂಟಾಗುವಂತೆ ಪಳಗಿಸಬೇಕಿದೆ.

ಮುಪ್ಪು ಎಂದರೆ- ಮರಳಿ ಮಣ್ಣಿಗೆ ಹೋಗುವ ಕಾಲವಲ್ಲ! ಅರಳು-ಮರಳಿನ ಕಾಲವಲ್ಲ! ಮರಳಿ ಅರಳುವ ಕಾಲ!! ಏಕೆಂದರೆ, ಅದೊಂದು ರೀತಿಯಲ್ಲಿ 'ಅರಿವಿನ ಉಪ್ಪು'!! ತಿಳಿವಿನ ಸೊಪ್ಪಿದಂತೆ!! ಇದನ್ನರಿಯದ ಈ ಯುಗ ಮುದುಕರೆಂದರೆ- ತಿರಸ್ಕಾರ, ಆಲಸ್ಯ, ಸಿಡಿಮಿಡಿ, ಕೋಪತಾಪ, ರೋಷಗಳು; ಒಂದರ್ಥದಲ್ಲಿ ಹಳೆಯ ರೇಡಿಯೋ, ಬಿಬಿಸಿ ನ್ಯೂಸ್, ಸುಗಮ ಸಂಗೀತ, ವಟಗಟ್ಟುವ ಕಪ್ಪೆ ಎಂದೆಲ್ಲಾ ಅರ್ಥೈಸಿಕೊಂಡಿದ್ದೇವೆ. ಆದರೆ ನಿಜವಾದ ಸತ್ವ ಅರಿತವರಿಗಷ್ಟೇ ಗೊತ್ತು. ಅಜ್ಜ ಅಜ್ಜಿಯರ ತೋಳ ತೆಕ್ಕೆಗಳಲ್ಲಿ ಸಿಗುವ ರಸಾಯನವೇ ಬೇರೆ. ಹಗಲಲ್ಲಿ ದನ ಇಲ್ಲ ಕುರಿ ಕಾಯಲೋ ಹೋದಾಗ, ಇಲ್ಲ ಕೂಲಿ ಕೆಲಸಕ್ಕೆ ಹೋದಾಗ,ಅಲ್ಲಿ ಸಿಗುವ ಅಲಸಂಧಿ, ನೆಲಗಡಲೆ, ಹೆಸರುಕಾಯಿ, ಎಳೆಯದಾದ ಸಜ್ಜೆಯತೆನೆ, ಜೋಳದತೆನೆ, ಕಾರೆಹಣ್ಣು, ಕೌಳೆಹಣ್ಣು - ಹೀಗೆ ನಾನಾ ಜಾತಿಯ ನಿಸರ್ಗ ಫಲಗಳನ್ನು ಕದ್ದು ಉಡಿಗಿಟ್ಟುಕೊಂಡು ತಂದು ಮೊಮ್ಮಕ್ಕಳಿಗೆ ಕೊಡುವ ಅಕ್ಕರೆ ಮರೆಯಲಾದೀತೆ? ಸಂಜೆ ಇಲ್ಲವೆ ರಾತ್ರಿಯ ಹೊತ್ತಲ್ಲಿ ತೊಡೆಯ ಮೇಲೇರಿಸಿಕೊಂಡು ನಿರೂಪಿಸುವ ಮಾಯಲೋಕದ ಕಿನ್ನರ ಕತೆಗಳು; ನೀತಿ ಉಪದೇಶಗಳು; ಬಯಲಾಟದಲ್ಲಿ ಅಭಿನಯಿಸಿದ ಪುರಾಣ ಪಾತ್ರದ ಮಾತುಗಳು; ಈಗ ಎಲ್ಲವೂ ಮಾಯ!! 'ಎಲ್ಲಿ ಹೋಗ್ಯಾವೋ ಆ ಕಾಲ?' ನಮ್ಮೊಳಗೀಗದು ಅನುಕಂಪನವಾಗದೆ ಭೂಕಂಪನವಾಗುತ್ತಿದೆ.

ಆಶ್ರಯ, ಆಸರೆ ಪಡೆಯಲಾಪೇಕ್ಷಿಸುವ ಮುದಿತನವೀಗ ನಿರಾಶೆ, ಆತಂಕ, ಏಕಾಂತತೆ, ಅಭದ್ರತೆ, ನಿರಾಶ್ರಿತತೆ, ಒಂಟಿತನ, ಭರವಸೆಗಳು ಕಾಣದ ಬದುಕು ದುರ್ಭರವೆನಿಸುತ್ತಿದೆ. ಅದಕ್ಕೆ ನಿದರ್ಶನವೆಂಬಂತೆ ಹೆಚ್ಚುತ್ತಿರುವ ಅನಾಥಾಶ್ರಮಗಳು!! ಭಿಕ್ಷಾಟನೆಗಳು!! ಮನುಕುಲಕ್ಕಂಟಿದ ಕಳಂಕಗಳೇ ಸರಿ!! ಇವು ಮಾನವೀಯತೆಯು ಬೀದಿ ಪಾಲಾದ ಲಕ್ಷಣಗಳು!! ಎಂದೋ ಕೇಳಿದ ತತ್ವಪದವೊಂದು ನೆನಪಾಗುತ್ತಿದೆ- 'ಮಾತಾಡು ಮಾತಾಡು ಲಿಂಗವೇ/ ಮಾತಾಡ ಬೇಕಯ್ಯ ಲಿಂಗವೇ/ ಮಾತಾಡದಿದ್ದಾರೆ ನಾ ತಾಳಲಾರೆನಯ್ಯ ಮಾತಾಡಬೇಕಯ್ಯ ಲಿಂಗವೇ/ ಅಣ್ಣ ಅವಸರಕ್ಕಿಲ್ಲ ಲಿಂಗವೇ ತಮ್ಮ ಅವಸರಕ್ಕಿಲ್ಲ ಲಿಂಗವೇ/ ನಾ ಪಡೆದ ಮಕ್ಕಳೇ ನಮಗೆ ಇಲ್ಲಾದ ಮ್ಯಾಲೆ ಮೊಮ್ಮಕ್ಕಳೇತಕಯ್ಯ ಲಿಂಗವೇ' ತೀರ ಜಿಗುಪ್ಸೆಯ ಮಾತಿದು! ಹೆಂಡತಿ - ಮಕ್ಕಳು,ಅಣ್ಣ ತಮ್ಮ, ಬಂಧು ಬಳಗಗಳೆಲ್ಲಾ ಸಂದರ್ಭ, ಸನ್ನಿವೇಶ, ಕಷ್ಟ ನಿಷ್ಠೂರಗಳಿಗಾಗದವರೂ ಇದ್ದು ಇಲ್ಲದಂತೆಯೇ!! ಮಕ್ಕಳನ್ನು ಚೆನ್ನಾಗಿ ಬೆಳಸಿ, ಓದಿಸಿ ಇಂಜಿನಿಯರ್, ಡಾಕ್ಟರ್'ನನ್ನಾಗಿ ಮಾಡಿದ ಮೇಲೆ ಅವರು ವಿದೇಶಿವಾಸಿಗಳು!! ಇವರಿಲ್ಲಿ 'ಪರ''ದೇಶಿ'ವಾಸಿಗಳು!! ಎಲ್ಲವೂ ಅನಾಥ ಭಾವ. ಒಬ್ಬ ರೈತನಾಗಲಿ, ಕೂಲಿ ಕಾರ್ಮಿಕನಾಗಲಿ ತಮ್ಮ ಅಪ್ಪಂದಿರನ್ನ ಯಾವತ್ತು ಮನೆಯಿಂದ ಆಚೆ ಹಾಕಲ್ಲ? ವಿವೇಕವಂತರಿಗೇಕೆ ವಿವೇಚನೆಗಳಿಲ್ಲ?

ಒಂದು 'ಬಸ್ ಸ್ಟ್ಯಾಂಡ್' ಏನೆಲ್ಲಾ ಪಾಠ ಮಾಡುತ್ತದೆ? ಅದು ಏನೆಲ್ಲಾ ಲೋಕಾನುಭವ ನೀಡುತ್ತದೆ? ಅದಕ್ಕಿರುವ ಒಳಗಣ್ಣು ಎಂಥದ್ದು? ಸೂಕ್ಷ್ಮಮತಿಗೇನೆಲ್ಲಾ ಸೆರೆಹಿಡಿಸುತ್ತೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಪ್ರಯೋಗಾತ್ಮಕ ಪಾಠಶಾಲೆ. ಒಂದು ಬಸ್ ಸ್ಟ್ಯಾಂಡ್ ಎಂದಾಕ್ಷಣ ಕೇವಲ ಜನಜಂಗುಳಿಯಲ್ಲ.ಅದು ಭಾಷೆ, ಬಣ್ಣ,ನಡೆ ನುಡಿಗಳ ಒಟ್ಟು ಮೊತ್ತ!! ಒಟ್ಟಾರೆಯಾಗಿ ಮನುಷ್ಯನ ಸ್ವಭಾವಗಳನ್ನು ಕಲಿಯುವ ಅದ್ಭುತ ಪಾಠಶಾಲೆ!! ಅದಕ್ಕೂ ಕಷ್ಟ - ಸುಖ, ನೋವು - ನಲಿವುಗಳನ್ನು ಪರಿಚಯಿಸುವ ಶಕ್ತಿಯೂ ಇದೆ.

ಮುದಿತನದ ನೆಲಕ್ಕೆ ಜೀವಧಗೆಯಾರಿಸುವ ತಾಣವೆಲ್ಲಿಹುದೋ.....?? ವೃದ್ಧ ದಂಪತಿಗಳಿಬ್ಬರು ಕುರ್ಚಿಯ ಮೇಲೆ ಕುಳಿತ್ತಿದ್ದಾರೆ. ಸಣ್ಣದಾಗಿ, ಕ್ಷೀಣದನಿಯಲ್ಲಿ ಮಾತುಕತೆ ನಡೆಯುತ್ತಿದೆ. 'ರಾತ್ರಿಯಿಂದ ಊಟ ತಿಂದಿಲ್ಲ. ಸ್ವಲ್ಪ ತಿನ್ನು' ಅಂಥ ಅಜ್ಜ ಬಲವಂತ ಮಾಡುತ್ತಿದ್ದಾನೆ. ಅಜ್ಜಿ ದುಗುಡದಲ್ಲಿ- 'ನನಗೆ ಹೊಟ್ಟೆ ತುಂಬಿಹೋಗಿದೆ. ಈ ಅನ್ನದಿಂದ ನನ್ನನ್ನ ಸಮಾಧಾನಪಡಿಸಲಾದೀತೆ? ಸಾಧ್ಯವಿಲ್ಲ! ಹೊಟ್ಟೇಲಿ ಹೊತ್ತು ಹೆತ್ತೆ. ಹೊಟ್ಟೆಗೆ ಬಟ್ಟೆಕಟ್ಟಿ ಸಾಕಿದೆ. ಯಾವ ಪುರುಷಾರ್ಥಕ್ಕಾಗಿ?' ಹತಾಶೆಯಿಂದ ಕಿಡಿಕಾರಿದಳು. ಆಗ ಅಜ್ಜನು - 'ಉತ್ತೋದು, ಬಿತ್ತೋದು ನಮ್ಮಿಚ್ಛೆ! ಬೆಳೆಯೋದು, ಬಿಡೋದು ದೈವಿಚ್ಛೆ! ಅಲ್ವೇನೆ? ಋಣವಿಲ್ಲದ ಮೇಲೆ ಹೆಣವಾದರೂ ಸರಿಯೇ? ಅನ್ನದ ಋಣವಾಗಲಿ, ಮಣ್ಣಿನ ಋಣವಾಗಲಿ ಪಡಿಬೇಕೆಂದ್ರೆ ಅದೃಷ್ಟ...ಅದೃಷ್ಟ ಪಡ್ದಿರಬೇಕು! ಅಂಥ ಅದೃಷ್ಟ ಹಣೆಲಿಲ್ಲ ಅಷ್ಟೇ!! ಏನ್ಮಾಡೋದು? ಹಾಗಂತ ಉಪವಾಸ ಇದ್ರೆ ಪರಿಹಾರ ಸಿಗುತ್ತೇನು? ಇನ್ನು ನಾಲ್ಕ ದಿನ ಹೆಣಗಬೇಕಿದೆ. ಹೆಣಗೋಣ. ಈ ಭೂಮಿ ಮೇಲೆ ಎಲ್ಲರೂ ಮಕ್ಕಳಿರುವವರೆ ಬದುಕಿದ್ದಾರೆಯೇ? ನೋಡಿಲ್ಲಿ, ನಮ್ಮಷ್ಟೇ ವಯಸ್ಸಾದವ ಅವರಿವರ ಹತ್ರ ಬೇಡಿಕೊಂಡು ಬದುಕಲ್ವೇ? ಅಷ್ಟು ಸಾಕು ನಾವು ಉಸಿರಾಡೋಕೆ'?- ಎಂದು ನಿಟ್ಟುಸಿರಿಟ್ಟ. ಅಜ್ಜಿಯ ಕಣ್ಣುಗಳು ನೀರಾಡ ತೊಡಗಿದವು.

ಅಜ್ಜನು ನನ್ನೆಡೆಗೆ ತಿರುಗಿ, ನೋಡಪ್ಪ.... ನೀನ್ಯಾರೊ ಗೊತ್ತಿಲ್ಲ. ಪರಿಚಯವೂ ನಮಗಿಲ್ಲ. ನಮ್ಮ ಮಗನೊಂದಿಗೆ ಜಗಳವಾಡಿಕೊಂಡು ಬಂದಿದ್ದೇವೆ. ಹೆತ್ತು -ಹೊತ್ತು, ಸಾಕಿ- ಸಲುಹಿದ ಮಕ್ಕಳು ರೆಕ್ಕೆ ಬಲಿತ ಮೇಲೆ ಎಲ್ಲಿ ಹಾರಿ ಹೋಗ್ತಾವೋ ಗೊತ್ತಾಗಲ್ಲ. ಎಲ್ಲವೂ ವಿಧಿಲೀಲೆ! ನೀನು ನನ್ನ ಮಗನ ತರವೆ ಕಾಣ್ಸಿತಿದಿಯಾ. ಮಗ ಅಂದ್ರೆನೇ ಈಕೆಗೆ ಜೀವ ಸ್ವಲ್ಪ ಊಟ ತಿನ್ಲಿಕ್ಕೆ ಹೇಳು. ಮೂರು ದಿನದಿಂದ ಸುಸ್ತು, ಜ್ವರ ಬೇರೆ, ಸರಿಯಾಗಿ ನೀರೂ ಕುಡಿದಿಲ್ಲ ಎಂದ್ರೆ ಹೇಗೆ? ಮಗನಿಲ್ಲದಿದ್ರೆ ಪರ್ವಾಗಿಲ್ಲ ಆದ್ರೆ ಇವ್ಳೆ ಇಲ್ಲದಿದ್ರೆ? ನಾನು ಅನಾಥನಾಗ್ತೇನೆ. ನನ್ನನ್ನ ನೋಡ್ಕೊಳ್ಳೊರು ಯಾರು? ನಾನು-ಅವಳಿಗೆ, ಅವಳು-ನನಗೆ, ಇದೇ ನಮ್ಮ ಬಾಳ ಬಂಡಿಯ ಕಡೆಗೀಲುಗಳು! ಅವಳ ಮುಖ ನೋಡಲಾರದೆ ಭೂಮಿಗಿಳಿಯುತ್ತಿದ್ದೇನೆ. ದಯವಿಟ್ಟು ಆಕೆಗೆ ಹೇಳು, ಧೈರ್ಯ ತುಂಬು ಎಂದು ಅಜ್ಜ ಕೈ ಸೋತವರಂತೆ ಅಂಗಲಾಚಿದ!

ಅವರ ವಯಸ್ಸು, ವಿವೇಕ, ವಿವೇಚನೆ, ಅನುಭವದ ಮುಂದೆ ನಾನ್ಯಾವ ಲೆಕ್ಕ? ದಿಕ್ಕೆಟ್ಟು ಏನೂ ತೋಚದೆ ಹಸು ಅಗಲಿದ ಕರುವಿನಂತಾದೆ! ಅಜ್ಜನ ಕೈಲಿದ್ದ ಅನ್ನದ ಪೊಟ್ಟಣ ಬಿಚ್ಚಿ, ತುತ್ತು ಮಾಡಿ "ಅಮ್ಮಾ...." 'ಇಗೋ..... ಇದೊಂದು ತುತ್ತು ತಿನ್ನು' ಎಂದು ಬಾಯಿಗಿಟ್ಟಾಗ ಯಾವ ಪ್ರತಿರೋಧವಿಲ್ಲದೆ ತಿಂದದ್ದು ಬಹು ಅಚ್ಚರಿಯಾಯಿತು. 'ಎಲ್ಲವನ್ನು ತಿಂದಳು' - ಈ ವಿಸ್ಮಯದ ನಿಗೂಢತೆಯ ಮಂತ್ರ "ಅಮ್ಮಾ" ಎಂಬ ಪದಶಕ್ತಿಗೇ ಇರಬೇಕು!!!! ಉಳಿದೊಂದು ಪೊಟ್ಟಣವನ್ನು ಅಜ್ಜಿಯು ಅಜ್ಜನಿಗೆ ತಿನ್ನಲು ನೀಡಿದಳು. ಇಬ್ಬರು ತಿಂದರು. ದೇಹದ ದಾಹ ತೀರಿದೊಡೇನು ಮನಸ್ಸಿನ ಭಾರ ತೀರದಲ್ಲ!!! ಈ ಇಳಿ ವಯಸ್ಸಿನಲ್ಲೂ ಕರಗದ ಅನುರಾಗ, ಆಧುನಿಕರನ್ನೆ ನಾಚಿಸುವ ಅನುಬಂಧ ದಿಙ್ಮೂಡನನ್ನಾಗಿಸಿತು. ಇಂದು ಸಣ್ಣತನಗಳಿಂದಲೇ ಸಂಬಂಧಗಳು ಮುರಿದು ಬಿದ್ದಿವೆ. ಸಮರಸದ ಜೀವನ ಅಂದ್ರೆ ಇದೇ ಇರಬೇಕು. ಆ ಮೇಲೆ -'ಈಗ ಎಲ್ಲಿಗೆ ಹೊರಟಿರುವಿರಿ'? ಎಂದೆ. ಗೆಳೆಯನಿಗೆ ಪೋನ್ ಮಾಡಿದ್ದೆ 'ಅನಾಥಾಲಯ'ದ ವಿಳಾಸ ಪಡೆದು ಅಲ್ಲಿಯೇ ಉಳಿದು ಬಿಡುವ ತೀರ್ಮಾನದೊಂದಿಗೆ ಹೊರಟ್ಟಿದ್ದೇವೆ. ಬಸ್ ಬಂದ ಕೂಡಲೆ 'ಹೊಗ್ತೇವೆ' ಅಂಥ ಹೇಳಿ ಹತ್ತಿ ಹೊರಟೇ ಬಿಟ್ಟರು. ಇದು ಒಂದು ದಿನದ ಒಂದು ಸನ್ನಿವೇಶದ ಬಸ್ ಸ್ಟ್ಯಾಂಡ್ ನ ವ್ಯಥೆ ಮತ್ತು ಕತೆ. ಹೀಗೆ ದಿನ ನಿತ್ಯದ ದಿನಚರಿಯಲ್ಲಿ ಅವೆಷ್ಟು ಒಳಬೇಗುದಿಗಳೋ? ಅವೆಷ್ಟು ನಾಟಕೀಯ ಸನ್ನಿವೇಶಗಳೋ? ಅರಿತವನೆ ಬಲ್ಲ!!!!

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.