"ಏನೋ ಮೋಹನ್, ಸಿನಿಮಾ ಹೀರೋ ತರಹ ರೆಡಿಯಾಗಿದ್ದೀಯಾ? ನಿನ್ನ ನೋಡಿದ ಕೂಡಲೇ ನಿಮ್ಮ ಹುಡುಗಿ ಪುಲ್ ಪಿಧಾ ಆಗಿಬಿಡುತ್ತಾಳೆ ಬಿಡು. ಆದರೂ ನಿನ್ನ ಮೆಚ್ಚಿ ಕೊಳ್ಳಬೇಕು ಕಣೋ, ಹಳ್ಳಿ ಹುಡುಗಿಯನ್ನು ಮದುವೆಯಾಗ್ತಾ ಇದ್ದೀಯಾ. ಒಳ್ಳೆದಾಗಲಿ ಕಣೋ" ಎಂದು ನನ್ನ ಫ್ರೆಂಡ್ಸ್ ಎಲ್ಲಾ ನನ್ನ ಹೊಗಳಿ ಮಾತಾಡುತ್ತಿದ್ದರೆ, ನನ್ನ ನೋವು ನನಗೆ. ನನ್ನ ಮನದ ಮಾತನ್ನು ನಾನು ಯಾರಿಗೆ ಹೇಳೋದು. ಎಲ್ಲರಿಗೂ ಅವರದ್ದೆ ಆಸೆ ಆಕಾಂಕ್ಷೆಗಳು. ನನ್ನ ಮಾತ್ರ ಯಾರು ಕೇಳೋರಿಲ್ಲ. ಅವರಾಡುವ ಮಾತಿಗೆ ಜಸ್ಟ್ ಮುಗುಳು ನಕ್ಕು ಸುಮ್ಮಗಾದೆ.

ಅಮ್ಮ ಬಂದು 'ರೆಡಿಯಾದ್ಯಾ ಮೋಹನ್? ಬೇಗ ಕಣೋ, ಹೆಣ್ಣಿನ ಮನೆಯವರು ಕೂಡ ನಮ್ಮ ಮನೆಯ ಮೆಹಂದಿಗೆ ಬರುತ್ತಾರೆ. ಹುಡುಗಿಯ ತಂದೆ ನಮ್ಮಣ್ಣನೇ ಇರಬಹುದು. ಆದರೂ ನಾವು ಮಾಡುವ ಮರ್ಯಾದೆ, ಆತಿಥ್ಯ, ಊಟ ಉಪಚಾರ ಇವು ನಮ್ಮ ಪ್ರತಿಷ್ಠೆಯ ಪ್ರಶ್ನೆ ತಾನೇ. ಮೆಹಂದಿ ಪ್ರೋಗ್ರಾಮ್‌ ಸರಿಯಾಗಿ ಸಂಜೆ ಏಳಕ್ಕೆ ಶುರುಮಾಡೋಣ. ಅದಕ್ಕಿಂತ ಮುಂಚೆ ಮನೆಯಲ್ಲಿ ಮಾಡಬೇಕಾದ ಪೂಜಾ ಶಾಸ್ತ್ರ ಮಾಡಬೇಕು. ನೀನು ಕೂಡಲೇ ರೆಡಿಯಾಗು, ನೆಂಟರಿಷ್ಟರೆಲ್ಲ ಬರುತ್ತಾ ಇದ್ದಾರೆ " ಎಂದು ಅಮ್ಮ ಹೇಳಿ ಹೋದಳು.
ನಮ್ಮ ಮನೆಯವರೆಲ್ಲ ಸಂಭ್ರಮದಿಂದ ಓಡಾಡುತ್ತಿದ್ದರೆ ನನ್ನ ನೋವು ದೇವರಿಗೆ ಪ್ರೀತಿ. ಏಕೋ ಏನೋ ನನ್ನ ಮನ ಈ ಮದುವೆಗೆ ಸಮ್ಮತಿ ಸೂಚಿಸುತ್ತಿಲ್ಲ.

' ಹೌದು, ನಾನು ಮೋಹನ್. ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಹೇಳಿಕೊಳ್ಳುವಷ್ಟು ಶ್ರೀಮಂತಿಕೆ ಇಲ್ಲದಿದ್ದರೂ ಬದುಕಿಗೇನು ಕಮ್ಮಿ ಇಲ್ಲ. ನನಗೆ ನಾಳೆಯೇ ಮದುವೆ. ನಾನು ಮದುವೆಯಾಗುತ್ತಿರುವ ಹುಡುಗಿ ನನ್ನ ಅಮ್ಮನ ಅಣ್ಣನ ಮಗಳು ಪ್ರೇಮ. ನನಗಿಂತ ಆರು ವರ್ಷ ಚಿಕ್ಕವಳು. ನಾನು ಎಂದೂ ಕೂಡ ಅವಳನ್ನು ಮದುವೆಯಾಗುವ ಕನಸು ಕಂಡವನಲ್ಲ. ನನಗೆ ಅವಳು ಯಾವತ್ತಿದ್ದರೂ ಮಾವನ ಮಗಳು ಅಷ್ಟೇ. ನಮ್ಮಿಬ್ಬರ ಮದುವೆಯ ಬಗ್ಗೆ ದೊಡ್ಡವರು ಅವರಿಷ್ಟದ ಪ್ರಕಾರ ನಿಶ್ಚಯಿಸಿದ್ದಾರೆ. ಈ ಮದುವೆ ನನಗೆ ಸ್ವಲ್ಪವೂ ಇಷ್ಟವಿಲ್ಲ.

ನನಗೂ ಒಂದು ಆಸೆಯಿದೆ ಎಂದು ಅವರು ಭಾವಿಸಬೇಕು ತಾನೇ ? . ನನ್ನ ಮನದ ಇಷ್ಟ ಕಷ್ಟಗಳನ್ನು ದೊಡ್ಡವರಾದವರು ಕೇಳುವುದು ಅವರ ಕರ್ತವ್ಯ ತಾನೇ?. ಛೇ! , ನನ್ನ ಅಭಿಪ್ರಾಯಕ್ಕೆ ಎಳ್ಳಷ್ಟು ಬೆಲೆಯಿಲ್ಲ.'

ಮನೆಯಲ್ಲಿ ನನ್ನ ಮೆಹಂದಿ ಹಾಗೂ ಮುಹೂರ್ತದ ತಯಾರಿ ಜೋರಾಗಿಯೇ ನಡೆಯುತ್ತಿದೆ. ನಾನೋ ಅವರಿಷ್ಟದಂತೆ ಬೇಗನೇ ರೆಡಿಯಾಗಿ ನನ್ನ ರೂಮ್ನಿಂದ ಕೆಳಗೆ ಬಂದೆ.
ಅಮ್ಮನ ಸಡಗರ ನೋಡಲು ಎರಡು ಕಣ್ಣು ಸಾಲದು. ಅಪ್ಪ ಬಂದ ನೆಂಟರಿಷ್ಟರನ್ನು ಮಾತನಾಡಿಸುತ್ತಾ ನಗುತ್ತಿದ್ದರೆ, ಇತ್ತ ನನ್ನ ಕಷ್ಟವನ್ನು ಕೇಳುವವರು ಯಾರು ಇಲ್ಲ.
ನನಗೆ ಒಡಹುಟ್ಟಿದವಳು ಎಂದರೆ ಒಬ್ಬಳೆ ಒಬ್ಬಳು ಅಕ್ಕ. ಅವಳಿಗೆ ಮದುವೆಯಾಗಿ ಆಗಲೇ ಐದು ವರ್ಷವಾಗಿದೆ. ಅಕ್ಕ ಭಾವ , ಅವಳ ಮಗ ದೂರದ ಪೂನಾದಲ್ಲಿ ವಾಸವಾಗಿದ್ದಾರೆ. ಈಗ‌ ನನ್ನ ಮದುವೆಗೆಂದು ಒಂದು ತಿಂಗಳ ಹಿಂದೆಯೇ ಬಂದಿದ್ದಾಳೆ.

ನಾನು ಚಿಕ್ಕವನಿದ್ದಾಗಿನಿಂದ ಪ್ರೇಮಳೊಂದಿಗೆ ಕುಣಿದು ಕುಪ್ಪಳಿಸಿ ಆಟವಾಡುತ್ತಾ ಬೆಳೆದವನು. ಬೇಸಿಗೆ ರಜೆಯಲ್ಲಿ ನಾನು ಮಾವನ ಮನೆಗೆ ಹೋಗುತ್ತಿದ್ದೆ, ಆವಾಗಿನಿಂದಲೂ ನಮ್ಮ ಮಾವ ನನ್ನನ್ನು ಅಳಿಯ ಎಂದೇ ಎಲ್ಲರಿಗೂ ಪರಿಚಯಿಸುತ್ತಿದ್ದರು. ಆವಾಗಲೆಲ್ಲ ನನಗೆ ನನ್ನ ಮಾವನಾಡುವ ಮಾತು ಖುಷಿ ಕೊಡುತ್ತಿತ್ತು. ನಾನು ನನ್ನ ಕನಸಿನ ಹುಡುಗಿಯನ್ನು ನೋಡುವುದಕ್ಕಿಂತ ಮುಂಚೆ ನನಗೆ ಪ್ರೇಮಳೇ ಸುರಸುಂದರಿಯಾಗಿ ಕಂಗೊಳಿಸುತ್ತಿದ್ದಳು. ಅವಳ ಕೈ ಹಿಡಿದು ಹೊಳೆ ದಂಡೆಗೆ ಹೋಗುವುದು, ಗದ್ದೆ ಅಂಚಿನಲ್ಲಿ ತಿರುಗುತ್ತಿದ್ದ ನೆನಪು ನನ್ನ ಸ್ಮೃತಿ ಪಟಲದಿಂದ ಇನ್ನೂ ಮಾಸಿಲ್ಲ.

ಆದರೆ ಎಂದೂ ಕೂಡ ನನಗೆ ಅವಳನ್ನು ಮದುವೆಯಾಗುವ ಆಸೆಯಿರಲಿಲ್ಲ. ಆ ವಯಸ್ಸು ತೀರಾ ಚಿಕ್ಕದು ಬಿಡಿ. ಮಾವನ ಮಗಳೆಂಬ ಸಲುಗೆ ಬಿಟ್ಟರೆ ನಮ್ಮ ನಡುವೆ ಬೇರೆ ಯಾವುದೇ ಭಾವವಿರಲಿಲ್ಲ. ಏನೋ ದೊಡ್ಡವರು ನಮ್ಮಿಬ್ಬರನ್ನು ಗಂಡ- ಹೆಂಡತಿಯೆಂದು ಕರೆದು ಖುಷಿಪಡುತ್ತಿದ್ದರು. ನನ್ನ ಮನದಲ್ಲಿ ಆ ಭಾವನೆಯಿಲ್ಲದೆ ಇದ್ದುದ್ದರಿಂದ , ಎಂದೂ ಕೂಡ ಪ್ರೇಮಳನ್ನು ಮದುವೆಯಾಗುವ ಆಲೋಚನೆಯನ್ನು ಕೂಡ ಮಾಡಿದವನಲ್ಲ ನಾನು .

ಆದರೆ ಬರೇ ಪಿಯುಸಿ ಓದಿದ ಪ್ರೇಮಳನ್ನು ನಾನೇಕೆ ಮದುವೆಯಾಗಬೇಕು ?, ಎಂದು ವಾದಿಸುತ್ತಾ ಬಂದ ನನಗೆ ಏಕಾಏಕಿ ಮದುವೆ ನಿಶ್ಚಯಿಸಿದಾಗ ಏನು ಮಾಡುವುದೆಂದು ತಿಳಿಯದಾಯಿತು. ನನ್ನ ಅಮ್ಮ ಅಪ್ಪನೆದುರಿಗೆ ವಿರೋಧಿಸಿದರೂ ನನ್ನ ಬೇಳೆ ಕಾಳು ಬೇಯಲೇ ಇಲ್ಲ.

ಮಾವನ ಮಗಳೆಂಬ ಸಲುಗೆಯಲ್ಲಿ ಅವಳಿಗೆ ಅನೇಕ ಬಾರಿ ಹೇಳಿದ್ದೆ, " ನನಗೂ ಕೂಡ ಮೋಹನನ್ನು ಮದುವೆಯಾಗಲು ಇಷ್ಟವಿಲ್ಲವೆಂದು ಹೇಳು. " ಎಂದು. ಪಾಪದ ಈ ಪ್ರೇಮ ಏನೂ ತುಟಿಬಿಚ್ಚದೆ ಇದ್ದದ್ದು ಮನೆಯವರಿಗೆ ಒಳ್ಳೆಯದೆ ಆಯಿತು. ಅವರಿಬ್ಬರಿಗೂ ಈ ಮದುವೆ ಇಷ್ಟವೇ , ಆದರೆ ನಮ್ಮೆದುರು ನಾಟಕ ಮಾಡುತ್ತಾರೆ ಎಂದು ಅವರೆಲ್ಲ ಜೋರಾಗಿ ನಕ್ಕಿದ್ದು ನನಗೆ ಈಗಲೂ ಇಲ್ಲೆ ಎಲ್ಲೋ ಕೇಳಿಸುವಂತಿದೆ.

ಅಮ್ಮ ಬಂದು ನನ್ನ ಕರೆದು ಸಿದ್ಧಪಡಿಸಿದ ಕುರ್ಚಿಯಲ್ಲಿ ಕುಳ್ಳಿರಿಸಿ , ನೆರೆದಿದ್ದ ಮುತ್ತೈದೆಯರನ್ನು ಸೇರಿಸಿಕೊಂಡು ನನಗೆ ಅರಶಿನ ಶಾಸ್ತ್ರ ಮಾಡಿದರು. ಅರೆದು ಸಿದ್ಧಪಡಿಸಿದ ಅರಿಶಿನ, ತೆಂಗಿನ ಹಾಲಿನ ತಿಗರನ್ನು ಒಟ್ಟಿಗೆ ಸೇರಿಸಿ ನನ್ನ ಮೈತುಂಬಾ ಬಳಿದರು. ಇದ್ದೆಲ್ಲ ನನಗೆ ಹೊಸ ಅನುಭವ . ನನ್ನ ಅಕ್ಕ, ನನ್ನ ಸಂಬಂಧಿಕರೆಲ್ಲ ಮುಖ,ಕೈ,ಕಾಲಿಗೆ ಹಚ್ಚಿ ಖುಷಿಪಟ್ಟರು. ನಾನೂ ಕೂಡ ಅವರ ಖುಷಿಯಲ್ಲಿ ಭಾಗಿಯಾದೆ.

ಏನೆಲ್ಲ ಸಂಪ್ರದಾಯವಿದೆಯೋ ಎಲ್ಲವನ್ನು ಚಾಚು ತಪ್ಪದೆ ಮಾಡಿದರು. ನಂತರ ನನ್ನನ್ನು ಮನೆಯ ಹೊರಗಿನ ತುಳಸಿ ಕಟ್ಟೆಯ ಪಕ್ಕದಲ್ಲಿ ಮಣೆ ಹಾಕಿ ಕುಳ್ಳಿರಿಸಿ ನೀರುಹೊಯ್ಯವ ಶಾಸ್ತ್ರ ಮಾಡಿದರು. ಹೀಗೆ ಸಂಜೆ ಐದಕ್ಕೆ ಆರಂಭಿಸಿ ರಾತ್ರಿ ಏಳಾಗುವವರೆಗೆ ಅದು ಇದು ಶಾಸ್ತ್ರ ಎಂದು ಬಹು ಉತ್ಸಾಹದಿಂದ ಮಾಡಿದರು. ನಂತರ ನಾನು ಸ್ನಾನ ಮಾಡಿ , ಹೊಸ ಬಟ್ಟೆ ಹಾಕಿಕೊಂಡು ಬಂದೆ.

ನನ್ನ ಮುಖದ ಕಳೆ ಗುಂದಿದ್ದರೂ ಯಾರು ಕೂಡ ಅದರ ಬಗ್ಗೆ ತಲೆಕೆಡಿಸಿಕೊಂಡಂತಿರಲಿಲ್ಲ. ಪಾಪ ಮದುವೆಯ ಆಯಾಸದಲ್ಲಿ ಹೀಗಾಗಿದೆ ಎಂದು ಮರುಗುವರೇ ವಿನಹ ಯಾರಿಗೂ ನನ್ನ ಬಗ್ಗೆ ಕಾಳಜಿಯಿಲ್ಲ ಅನಿಸಿತು.

ನನ್ನ ಚಿಕ್ಕಮ್ಮನ ಮಗಳು ನನ್ನ ಎರಡು ಕೈಗಳಿಗೆ ಮೆಹಂದಿಯ ಚಿತ್ತಾರವನ್ನು ಬರೆದಳು. ಒಂದು ಕೈಗೆ ನನ್ನ ಹೆಸರು ,ಮತ್ತೊಂದು ಕೈಗೆ ಪ್ರೇಮ ಎಂದು ಹೃದಯದ ಗುರುತನ್ನು ಬರೆದು ಅದರೊಳಗೆ ಬರೆದಳು. ನನಗೆ ಅದನ್ನು ಕಂಡು ಇರಿಸು ಮುರಿಸಾಯಿತು. ಛೇ! ಪ್ರೇಮ ಎನ್ನುವ ಹೆಸರಿನ ಸ್ಥಾನದಲ್ಲಿ ನನ್ನ ಮನದ ಹುಡುಗಿಯ ಹೆಸರಿದ್ದಿದ್ದರೆ ಅದೆಷ್ಟು ಚೆಂದವಿರುತ್ತಿತ್ತು. ಮನ ಮತ್ತೊಮ್ಮೆ ಮುದುಡಿತು.

ಬಂದ ನೆಂಟರಿಷ್ಟರೆಲ್ಲ ಊಟ ಉಪಚಾರವನ್ನು ಸ್ವೀಕರಿಸಿ ಒಬ್ಬೊಬ್ಬರಾಗಿ ಹೊರಟರು. ನಾನು ಕೂಡ ಊಟವನ್ನು ಮುಗಿಸಿ ಎಲ್ಲರೊಂದಿಗೆ ಹರಟೆ ಹೊಡೆಯುತ್ತಾ ಕುಳಿತೆ. ಮನದ ತುಂಬೆಲ್ಲ ತುಂಬಿಕೊಂಡಿದ್ದ ನನ್ನ ಮನದೆನ್ನೆಯನ್ನು ಮರೆಯುವುದು ಅಷ್ಟು ಸುಲಭವಿರಲಿಲ್ಲ.

ಅಲ್ಲಿಗೆ ಬಂದ ಅಮ್ಮ, " ಬೇಗ ಮಲಗಿಕೋ ಮೋಹನ. ಬೆಳಿಗ್ಗೆ ಬೇಗ ಎದ್ದು ಮದುವೆ ಮಂಟಪಕ್ಕೆ ಹೋಗಬೇಕು . ಬೆಳಿಗ್ಗೆ 6:30ಕ್ಕೆ ರಾಹುಕಾಲ ಶುರುವಾಗುತ್ತೆ. ಅದರೊಳಗೆ ನಾವು ಮನೆಯನ್ನು ಬಿಡಬೇಕು. ರಾತ್ರಿ ಸರಿಯಾಗಿ ನಿದ್ದೆ ಮಾಡದಿದ್ದರೆ ಮುಖ ಸಪ್ಪೆಯಾಗುತ್ತದೆ. ಅದು ಅಲ್ಲದೆ ನಿನ್ನ ಮದುವೆ ಪೋಟೋವೆಲ್ಲ ಕಳೆಗುಂದುತ್ತೆ." ಎಂದಳು ಅಮ್ಮ .

ಅವಳಾಡುವ ಮಾತಿನ ಕಡೆ ನನಗೆ ಗಮನವೇ ಇರಲಿಲ್ಲ.
ಸೀಧಾ ನನ್ನ ರೂಮ್ಗೆ ಹೋದವನೇ ಬಾಗಿಲು ಹಾಕಿಕೊಂಡು ಹಾಸಿಗೆಯ ಮೇಲೆ ಒರಗಿದೆ.

ಎಲ್ಲಿಂದ ಬರಬೇಕು ನಿದ್ದೆ. ನನ್ನ ಕಾಲೇಜಿನ ಮೊದಲ ಪ್ರೇಮವನ್ನು ನಾನು ಮರೆಯಲು ಸಾಧ್ಯವೇ?. ಕಣ್ಣು ಕುಕ್ಕುವಂತಿದ್ದ ಅವಳ ಸೌಂದರ್ಯ, ಆ ನಡಿಗೆ, ವೈಯ್ಯಾರಕ್ಕೆ‌ ತಾನೇ ನಾನು ಮನ ಸೋತಿದ್ದು. ಛೇ! ನಾನು ಅವಳಿಗೆ ಅಂದೇ ಪ್ರೇಮ ನಿವೇದನೆ ಮಾಡಿದ್ದರೆ ,ಅವಳು ಇಂದು ನನ್ನವಳಾಗಿರುತ್ತಿದ್ದಳು. ನನ್ನ ಪ್ರೀತಿಯ ವಿಷಯವನ್ನು ಒಮ್ಮೆ ನನ್ನಮ್ಮ‌ನಿಗೆ ಹೇಳಿದ್ದೆ. ಅವಳಿಗೆ ಅವಳ ಅಣ್ಣನ ಮಗಳ ವಿನಹ ಯಾವ ಸಂಬಂಧವೂ ಬೇಡವೆಂದು ಕಡ್ಡಿ ಮುರಿದಂತೆ ಹೇಳಿದ್ದಳು. ನಾನೊಬ್ಬ ಪುಕ್ಕಲು ಸ್ವಭಾವದವನೆಂದು ಎಲ್ಲರೂ ತಮಾಷೆ ಮಾಡುವುದಕ್ಕೂ, ನನ್ನ ಜೀವನದಲ್ಲಿ ಹೀಗಾಗಲೂ ಸರಿಯಾಯಿತು.

ನಾಳೆ ಬೆಳಿಗ್ಗೆ ಎಂದರೆ ನನ್ನ ಮದುವೆ. ಆದರೆ ನನ್ನಲ್ಲಿ ಮದುವೆಯ ಕಳೆಯಾಗಲಿ, ಹುಮ್ಮಸ್ಸಾಗಲಿ ಯಾವುದೂ ಇರಲಿಲ್ಲ. ಅವಳಿಲ್ಲದ ಮೇಲೆ ಏನಿದ್ದರೆ ಏನು ಪ್ರಯೋಜನ.
ಈ ಹಳ್ಳಿ ಹುಡುಗಿ ಪ್ರೇಮಳನ್ನು ಕಟ್ಟಿಕೊಂಡು ನನ್ನ ಬದುಕು ಅಷ್ಟೇ ಎಂದುಕೊಂಡೆ. ಗಂಟೆ ನೋಡುತ್ತೇನೆ ಆಗಲೇ ಹನ್ನೆರಡು ದಾಟಿಯಾಗಿತ್ತು. ನಿದ್ದೆ ಬರುವ ಯಾವುದೇ ಲಕ್ಷಣಗಳೇ ಕಾಣಲಿಲ್ಲ. ನನ್ನ ಮನದೆನ್ನೆಯನ್ನು ನನ್ನವಳಾಗಿಸಿಕೊಂಡು ಸಂತಸದ ಜೀವನ ಹೊಂದಬೇಕೆಂದು ಕೊಂಡವನಿಗೆ ಹಳ್ಳಿ ಗಮಾರಳನ್ನು ಮದುವೆಯಾಗುವಂತಾಗುತ್ತಿದೆ. ನನ್ನ ಅದೃಷ್ಟಕ್ಕೆ ನಾನೇ ಹಳಿಯುತ್ತಾ ಹಾಗೆ ಕಣ್ಣು ಮುಚ್ಚಿದೆ. ನಿದ್ದೆ ಯಾವಾಗ ಬಂತೆಂದು ತಿಳಿಯಲೇ ಇಲ್ಲ.

ಅಮ್ಮ ಬೆಳಿಗ್ಗೆ ಬಂದು ಬಾಗಿಲು ಬಡಿದಾಗಲೇ ಎಚ್ಚರಗೊಂಡೆ. ಅಮ್ಮನ ಅಣತಿಯಂತೆ ಬೇಗ ಬೇಗನೇ ಸ್ನಾನಮಾಡಿ ರಾಹುಕಾಲ ಆರಂಭಗೊಳ್ಳುವುದಕ್ಕಿಂತ ಮುಂಚೆ ಮನೆಯನ್ನು ಬಿಟ್ಟೇವು. ಇವರಿಗೆಲ್ಲ ಹೇಗೆ ಹೇಳುವುದು‌, ನನಗೆ ಈಗ ನಿಜ ಅರ್ಥದ ರಾಹುಕಾಲ ಆರಂಭಗೊಂಡಿದೆ ಎಂದು. ಮನಸ್ಸು ಭಾರವಾಗಿತ್ತು. ಕಣ್ಣು ತುಂಬಿ ಬರುತ್ತಿತ್ತು.

ನಾವು ಮದುವೆ ಹಾಲ್ಗೆ ಹೋಗುವಷ್ಟರಲ್ಲಿ ಆಗಲೇ ಎಲ್ಲರ ತಯಾರಿ ಜೋರಾಗಿ ನಡೆದಿತ್ತು. ನಮ್ಮ ಕಂಡೊಡನೆ ಮಾವ, ಅತ್ತೆ , ಅವರ ಕುಟುಂಬ ವರ್ಗದವರು ಬಂದು ನಮ್ಮೆಲ್ಲರನ್ನು ಸ್ವಾಗತಿಸಿದರು. ನನ್ನನ್ನು ಆರತಿ ಎತ್ತಿ ಒಳಗೆ ಬರಮಾಡಿಕೊಂಡರು. ನಾವು ಗಂಡಿನ ಕಡೆಯವರೆಲ್ಲ ನಮಗಾಗಿ ಕಾದಿರಿಸಿದ ವರನ ರೂಮ್ ಗೆ ಹೋದೆವು. ನನ್ನ ಬಂಧು ಮಿತ್ರರು, ಹಿತೈಷಿಗಳು, ಆಫೀಸ್ ಫ್ರೆಂಡ್ಸ್, ಎಲ್ಲರೂ ಬಂದು ಮದುವೆಯ ಶುಭಾಶಯ ಕೊರತೊಡಗಿದರು.

ಮದುವೆಯ ಮುಹೂರ್ತ ಬೆಳಿಗ್ಗೆ 11: 10 ಕ್ಕೆ ಇದ್ದರೂ , ಅಮ್ಮ ನನಗೆ ಗಡಿಬಿಡಿ ಮಾಡುತ್ತಿದ್ದಳು. ಬೇಗ ಹೊರಡು ಎಲ್ಲರೂ ಬಂದಾಗಿದೆ ಎಂದು. ನಾನೋ ಮದುವೆಗೆಂದೂ ತಂದಿದ್ದ ಷೇರ್ವಾನಿ ತೊಟ್ಟು ಸಿದ್ದನಾದೆ. ಅಲ್ಲಿಗೆ ಬಂದ ನನ್ನ ಭಾವ ನನಗೆ ಪೇಟ ತೊಡಿಸಿ ನನ್ನ ಮುಖಕ್ಕೆ ಮದುಮಗನ ಕಳೆಯನ್ನು ತಂದರು.

ನನ್ನ ಅಕ್ಕ ಭಾವ ತೆತ್ತಿಗಾರಿಕೆ ಮಾಡುವುದರಿಂದ ಥೇಟ್ ಮದುವೆ ಹೆಣ್ಣು ಗಂಡಿನ ತರಹ ರೆಡಿಯಾಗಿದ್ದರು. ನನ್ನನ್ನು ಭಾವ ಮಂಟಪಕ್ಕೆ ಕೈಹಿಡಿದು ವಾದ್ಯಘೋಷದೊಂದಿಗೆ ಕರೆ ತಂದರು.ಆಗಲೇ ಪ್ರೇಮಳನ್ನು ಅವಳ ಸಹೋದರತ್ತೆ ವೇದಿಕೆಗೆ ಕರೆತಂದಿದ್ದರು. ಸ್ಯಾಕ್ಸೋಪೋನ್ ವಾದನದಿಂದ ಮದುವೆ ಮಂಟಪ , ಶುಭ ಸಮಾರಂಭದ ಕಳೆಕಟ್ಟಿತ್ತು.

ನಾನು ಮಂಟಪವನ್ನು ಹತ್ತುವುದಕ್ಕಿಂತ ಮುಂಚೆಯೇ, ವರನ ಕಾಲುತೊಳೆಯುವ ಶಾಸ್ತ್ರವನ್ನು ವಧು ಮಾಡಬೇಕು. ಅದರಂತೆ ಪ್ರೇಮನನ್ನು ಕರೆದುಕೊಂಡು ಹೆಣ್ಣಿನ ಕಡೆಯವರು ಮಂಟಪದ ಕೆಳಗೆ ಕಾದಿದ್ದರು. ನಾನು ಬಂದೊಡನೆ ನನ್ನ ಕಾಲುತೊಳೆದ ಪ್ರೇಮಗೆ ಉಂಗುರವನ್ನು ತೊಡಿಸಿದೆ.
ಅವಳು ನನ್ನ ನೋಡಿ ನಸು ನಾಚುತ್ತಿದ್ದರೆ , ನನ್ನ ಮೈಮೇಲೆ ಹಸಿಹಾವು ಹಾಕಿದ ಹಾಗೆ ಕೋಪಬರುತ್ತಿತ್ತು. ' ಯಾರಿಗೆ ಬೇಕಿತ್ತು ಈ ಮದುವೆ ? ನನಗೆ ಈ ಪ್ರೇಮಳನ್ನು ಮದುವೆಯಾಗುವುದು ಸುತಾರಾಂ ಇಷ್ಟವಿಲ್ಲ. ಎಲ್ಲಾ ಅವರವರ ಇಷ್ಟದ ಮದುವೆ ' ,ಎಂದು ಕೂಗಿ ಹೇಳಬೇಕು ಅನಿಸಿತು.

ನನ್ನ ಕಣ್ಣು ಮಾತ್ರ ನನ್ನ ಕನಸಿನ ಕನ್ಯೆ ಬರುವಳೇನೋ ಎಂದು ಕಾದು ಕುಳಿತಿತ್ತು. ಅವಳ ಸೌಂದರ್ಯ, ಅವಳ ಮಾತಿನ ಶೈಲಿ, ನಡಿಗೆಯ ಬಿಂಕ, ಮುಂಗುರುಳಿನ ನಾಟ್ಯ, ಆಹಾಹಾ.. ಆ ಸೌಂದರ್ಯದ ಗಣಿಯೆಲ್ಲಿ? ಈ ಹಳ್ಳಿಯ ಪ್ರೇಮಳೆಲ್ಲಿ?. ಮನ ಅವಳಿಗಾಗಿ ಕಾದಿತ್ತು.

ಯಾಂತ್ರಿಕವಾಗಿ ಮದುವೆಯಲ್ಲಿನ ಶಾಸ್ತ್ರ ಮಾಡುತ್ತಿದ್ದೆ. ಹುಡುಗಿಯ ತಮ್ಮ ನಮ್ಮಿಬ್ಬರಿಗೆ ಹೊದಳು ಹಾಕುತ್ತಿದ್ದ. ನನ್ನ ಕೈಯ ಬೊಗಸೆಯ ಮೇಲೆ ಅವಳ ಕೈಯ ಬೊಗಸೆ ಇರಿಸಿ ಅದರಲ್ಲಿ ಹಾಕಿದ್ದ ಹೊದಳನ್ನು ನಾವಿಬ್ಬರು ಸೇರಿ ಅಗ್ನಿಕುಂಡಕ್ಕೆ ಹಾಕುವಾಗಲಂತೂ , ನನಗೆ ಅವಳ ಸ್ಪರ್ಶ, ಬಿಸಿ ಉಸಿರು , ಎಂದೂ ಅನುಭವಿಸದ ಆ ಸಾಮೀಪ್ಯಕ್ಕೆ ಉಸಿರುಗಟ್ಟಿದಂತಾಗುತ್ತಿತ್ತು.

ಲಗ್ನಿ ಕುಂಡಕ್ಕೆ ಅವಳ ಕೈ ಹಿಡಿದು ಮೂರು ಬಾರಿ ಪ್ರದಕ್ಷಿಣೆ ಮಾಡಿದೆ. ಪುರೋಹಿತರು ಜೋರಾಗಿ ಅರ್ಥೇಚ, ಧರ್ಮೇಚ, ಕಾಮೇಚ,ನಾತಿಚರಾಮಿ ಎನ್ನುವ ಮಂತ್ರದ ಅರ್ಥ ವಿವರಿಸುವಾಗಲೂ ನನ್ನ ಮನಸು ಮಾತ್ರ ಅವಳಿಗಾಗಿ ಹಾತೊರೆಯುತ್ತಿತ್ತು. ಪ್ರೇಮಳ ಕೈಹಿಡಿದು ಸಪ್ತಪದಿ ತುಳಿದೆ. ಎಲ್ಲವೂ ಯಾಂತ್ರಿಕ ವೆಂದು ಮತ್ತೆ ಹೇಳುವ ಅಗತ್ಯವಿಲ್ಲ.

ಅವಳ ಅಮ್ಮ , ಅಪ್ಪ ,ಕಳಶದ ಮೇಲಿರಿಸಿದ್ದ ತೆಂಗಿನ ಕಾಯಿಯ ಮೇಲೆ ಕರಿಮಣಿ ಸರವನ್ನು ಇಟ್ಟು ಎಲ್ಲ ಮುತ್ತೈದೆಯರಿಗೆ ಮುಟ್ಟಿಸಿ , ನಮಸ್ಕರಿಸಿ ಬಂದರು. ನಂತರ ನಮ್ಮಿಬ್ಬರ ಕೈಯನ್ನು ಸೇರಿಸಿ , ಅಲ್ಲಿ ತೆಂಗಿನ ಕಾಯಿಯಿರಿಸಿ ಅದರ ಮೇಲೆ ಧಾರೆ ಉಂಗುರವನ್ನು ಇಟ್ಟು ಹಾಲು ಎರೆಯುವ ಮೂಲಕ ಪ್ರೇಮಳ ಅಪ್ಪ ಅಮ್ಮ ನನಗೆ ಅವಳನ್ನು ಧಾರೆ ಎರೆದುಕೊಟ್ಟರು. ಧಾರೆ ಕಾಯಿಯ ಮೇಲಿರಿಸಿದ ಉಂಗುರವನ್ನು ನನ್ನ ಕೈ ಬೆರಳಿಗೆ ತೊಡಿಸಿದರು.

ಅವರೆಲ್ಲರ ಮುಖದಲ್ಲಿ ಎದ್ದು ಕಾಣುತ್ತಿದ್ದ ಆ ಸಂತೋಷವನ್ನು ನನ್ನಿಂದ ವಿವರಿಸಿ ಹೇಳಲು ಸಾಧ್ಯವಿಲ್ಲ. ಮಗಳನ್ನು ಒಳ್ಳೆಯ ಕಡೆಗೆ ಮದುವೆ ಮಾಡಿಕೊಟ್ಟ ತೃಪ್ತಿ ಎದ್ದು ಕಾಣುತ್ತಿತ್ತು. ಪ್ರೇಮಳಂತೂ ಕದ್ದು , ಕದ್ದು ನನ್ನ ನೋಡುತ್ತಿದ್ದರೆ ನನಗೆ ಅಲ್ಲಿಂದ ಓಡಿಹೋಗಬೇಕೆನಿಸಿತು. ಇನ್ನೇನು ನಾವು ಮದುವೆಯ ಕೊನೆಯ ಘಟ್ಟಕ್ಕೆ ಬಂದೆವು. ಪುರೋಹಿತರು ಮಂತ್ರಗಳನ್ನು ಜೋರಾಗಿ ಹೇಳುತ್ತಾ , ವಾದ್ಯದವರಿಗೆ 'ಗಟ್ಟಿಮೇಳ ,ಗಟ್ಟಿಮೇಳ ', ಎನ್ನುತ್ತಿದ್ದಾರೆ. ನನಗೆ ಇದಾವುದರ ಪರಿವೇ ಇಲ್ಲ.

ಅರೇ ಅದ್ಯಾರು ? ಇತ್ತ ಬರುತ್ತಿದ್ದಾರಲ್ಲ. ಅದೇ ವಯ್ಯಾರದ ನನ್ನ ಕನಸಿನ ಕನ್ಯೆ ನಡೆದಂತೆ ನಡೆಯುತ್ತಾ ನನ್ನ ಕಡೆಗೆ ಬರುತ್ತಿದ್ದಾಳಲ್ಲ ?. ಹೌದು , ಸಂದೇಹವೇ ಇಲ್ಲ. ಇದು ನನ್ನ 'ಮೋಹ'.

‌ .....ಮುಂದುವರಿಯುತ್ತದೆ.

- ಶ್ರೀಮತಿ ಶೈನಾ ಶ್ರೀನಿವಾಸ್ ಶೆಟ್ಟಿ.

( ಮೋಹನನು ಹೇಳುತ್ತಿರುವ ಅವನ ಮನದೆನ್ನೆ ಇವರ ಮದುವೆಗೆ ಬಂದಳೇ ?, ಅವಳು ಪ್ರೇಮ ಮೋಹನನ ಮದುವೆಯನ್ನು ನಿಲ್ಲಿಸುತ್ತಾಳೆಯೇ?, ಪಾಪದ ನಮ್ಮ ಪ್ರೇಮಳ ಪಾಡೇನು? .....ನಿರೀಕ್ಷಿಸಿ ).

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.