ಮುಕ್ತಾಯಕ್ಕನ ವಚನಗಳು

ಅಹುದಹುದು ಶಿವಶರಣರ ಮಹಿಮೆ ಆರಿಗೆಯೂ ಕಾಣಬಾರದು. ಕಬ್ಬುನ ಉಂಡ ನೀರಿನಂತೆ, ಕಬ್ಬಿಸಿಲುಂಡ ಅರಿಸಿನದಂತೆ, ಉರಿಯೊಳಡಗಿದ ಕರ್ಪುರದಂತೆ, ಬಯಲನಪ್ಪಿದ ವಾಯುವಿನಂತೆ ಇಪ್ಪ ನಿಲವು ನುಡಿದು ಹೇಳಿಹೆನೆಂಬ ಮಾತಿಂಗೆ ಅಳವಡುವುದೆ ? ಅರಿವಡೆ ಮತಿಯಿಲ್ಲ, ನೆನೆವಡೆ ಮನವಿಲ್ಲ ಎನ್ನ ಅಜಗಣ್ಣ ತಂದೆಯನೊಳಕೊಂಡಿಪ್ಪ ನಿಮ್ಮ ಮಹಿಮೆಗೆ ನಮೋ ನಮೋ ಎನುತಿರ್ದೆನು.

ಎನ್ನ ಭಾವಕ್ಕೆ ಗುರುವಾದನಯ್ಯಾ ಬಸವಣ್ಣನು. ಎನ್ನ ನೋಟಕ್ಕೆ ಲಿಂಗವಾದನಯ್ಯಾ ಚೆನ್ನಬಸವಣ್ಣನು. ಎನ್ನ ಜ್ಞಾನಕ್ಕೆ ಜಂಗಮವಾದನಯ್ಯಾ ಪ್ರಭುದೇವರು. ಎನ್ನ ಪರಿಣಾಮಕ್ಕೆ ಪ್ರಸಾದವಾದನಯ್ಯಾ ಮರುಳಶಂಕರದೇವರು. ಎನ್ನ ಹೃದಯಕ್ಕೆ ಮಂತ್ರವಾದನಯ್ಯಾ ಮಡಿವಾಳಯ್ಯನು. ಇಂತೀ ಐವರ ಕಾರುಣ್ಯಪ್ರಸಾದವ ಕೊಂಡು ಬದುಕಿದೆನಯ್ಯಾ ಅಜಗಣ್ಣತಂದೆ.

ಗುರುವಚನದಿಂದಲ್ಲದೆ ಲಿಂಗವನರಿಯಬಾರದು. ಗುರುವಚನದಿಂದಲ್ಲದೆ ಜಂಗಮವನರಿಯಬಾರದು. ಗುರುವಚನದಿಂದಲ್ಲದೆ ಪ್ರಸಾದವನರಿಯಬಾರದು. ಗುರುವಚನದಿಂದಲ್ಲದೆ ತನ್ನ ತಾನರಿಯಬಾರದು. ಹಿಂದಣ ಜನ್ಮದಲ್ಲಿ ಲಿಂಗವ ಪೂಜಿಸಿ ಇಂದು ಜ್ಞಾನೋದಯವಾದಡೆ ಗುರುವಿಲ್ಲದ ಮುನ್ನ ಆಯಿತ್ತೆನ್ನಬಹುದೆ ? ತನ್ನಲ್ಲಿ ತಾನು ಸನ್ನಹಿತನಾದೆಹೆನೆಂದಡೆ ಗುರುವಿಲ್ಲದೆ ಆಗದು ಕೇಳಾ. ಎನ್ನ ಅಜಗಣ್ಣನೆಂಬ ಗುರುವಿಲ್ಲದೆ ಆರೂಡಿಯ ಕೂಟ ಸಮನಿಸದು ಕೇಳಾ.

ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ ? ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ ? ಮಾಡ ಬನ್ನಿ ದಿನ ಶಿವರಾತ್ರಿಯ, ಕೇಳ ಬನ್ನಿ ಶಿವಾನುಭವವ, ನೋಡ ಬನ್ನಿ ಅಜಗಣ್ಣನಿರವ ಬಸವಣ್ಣತಂದೆ.

ನುಡಿಯಲುಬಾರದು ಕೆಟ್ಟನುಡಿಗಳ. ನಡೆಯಲುಬಾರದು ಕೆಟ್ಟನಡೆಗಳ. ನುಡಿದಡೇನು ನುಡಿಯದಿರ್ದಡೇನು ? ಹಿಡಿದವ್ರತ ಬಿಡದಿರಲು, ಅದೆ ಮಹಾಜ್ಞಾನದಾಚರಣೆ ಎಂಬೆನು ಅಜಗಣ್ಣ ತಂದೆ.

******************************************

ಗ್ರಂಥ ಋಣ : http://lingayatreligion.com

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.