ಮಹಿಳೆಯರು ಮರಳಿ ಉದ್ಯೋಗಕ್ಕೆ!

ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತರುವ ಅಭಿಯಾನದ ಮಾದರಿಯ ಕಾರ್ಯಕ್ರಮವಿದು. ಆದರೆ ಇಲ್ಲಿ ಮಹಿಳೆಯರನ್ನು ವೃತ್ತಿಬದುಕಿಗೆ ಮರಳಿ ಕರೆತರಲಾಗುತ್ತಿದೆ. ಕಾರಣಾಂತರಗಳಿಂದ ವೃತ್ತಿಜೀವನಕ್ಕೆ ವಿದಾಯ ಹೇಳಿದ ಮಹಿಳೆಯರನ್ನು ಮರಳಿ ಕರೆತರುವ ಕೆಲಸದಲ್ಲಿ ಗಣನೀಯ ಪಾತ್ರ ವಹಿಸಿದಾಕೆ ಸೌಂದರ್ಯ ರಾಜೇಶ್. ಈಕೆ ತನ್ನ `ಅವತಾರ್’ ಸಂಸ್ಥೆಯ ಮೂಲಕ 8,000 ಮಹಿಳೆಯರನ್ನು ವೃತ್ತಿಗೆ ಮರಳಿ ಕರೆತಂದಿದ್ದಾರೆ.

ವಿರಾಮದ ನಂತರ ಮಹಿಳೆಯರನ್ನು ಉದ್ಯೋಗಕ್ಕೆ ಕರೆತರುವ ಸೌಂದರ್ಯ

ಮಹಿಳೆಯರು ವೃತ್ತಿಬದುಕಿನಲ್ಲಿ ಪಡೆಯುವ ವಿರಾಮದ ನಂತರ ಅವರನ್ನು ಮತ್ತೆ ಕೆಲಸದತ್ತ ಕರೆತರುವಲ್ಲಿ ಸೌಂದರ್ಯ ರಾಜೇಶ್ ಅವರ ಪ್ರಯತ್ನ ಗಮನಾರ್ಹ. ದೇಶದಲ್ಲಿ ಹೊಸ ಸಂಸ್ಥೆ ಆರಂಭಿಸಿ ಸಮುದಾಯಕ್ಕಾಗಿ ವಿಭಿನ್ನ ಕೆಲಸ ಮಾಡಿದ ನೂರು ಮಹಿಳೆಯರನ್ನು ಗುರುತಿಸಿ ಆಯ್ಕೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಫೇಸ್‍ಬುಕ್ ಸಹಯೋಗದೊಂದಿಗೆ ಕೈಗೊಂಡ ಆಭಿಯಾನದಲ್ಲಿ ಸೌಂದರ್ಯ ಕೂಡ ಆಯ್ಕೆಯಾಗಿದ್ದಾರೆ. ಈ ನೂರು ಮಹಿಳೆಯರು ಈಗಾಗಲೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ದೇಶದ ಉದ್ದಗಲಕ್ಕೂ ಮಹಿಳಾ ಸಮುದಾಯಕ್ಕೆ ಗಣನೀಯ ಸೇವೆ ಸಲ್ಲಿಸಿದ ನೂರು ಮಹಿಳಾ ಉದ್ಯಮಿಗಳನ್ನು ಸಾರ್ವಜನಿಕ ನಾಮಿನಿಗಳ ಮೂಲಕ ಸಾಮಾಜಿಕ ತಾಣದಲ್ಲಿ ಆಯ್ಕೆ ಮಾಡುವ ಸ್ಪರ್ಧೆಯಲ್ಲಿ ಸೌಂದರ್ಯ ಓರ್ವ ಸಾಧಕಿಯಾಗಿ ಆಯ್ಕೆಯಾಗಿದ್ದಾರೆ.

ಕೆಲವರು ತಾವು ಇದೇ ಆಗಬೇಕೆಂದು ನಿರ್ಧರಿಸಿಕೊಂಡಿದ್ದರೆ, ಕೆಲವರು ಕ್ರಮೇಣ ನಿರ್ಧಾರಕ್ಕೆ ಬರುತ್ತಾರೆ. ಮತ್ತೆ ಕೆಲವರು ಅವಕಾಶಗಳ ಮೂಲಕ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ತಂದೆ ಔಷಧೀಯ ಕ್ಷೇತ್ರದಲ್ಲಿ ಉದ್ಯಮಿಯಾಗಿದ್ದರೂ ಉದ್ಯಮಿಯಾಗುವ ಕನಸು ಕಾಣದ ಮಗಳಲ್ಲಿ ಅವರು ಓರ್ವ ಉದ್ಯಮಿಯನ್ನು ಕಂಡಿದ್ದರು. ಇಂಗ್ಲೀಷ್ ಸಾಹಿತ್ಯ ಓದುತ್ತಿದ್ದಾಗ ಮಗಳಲ್ಲಿರುವ ಸುಪ್ತಪ್ರತಿಭೆ ಕಂಡು ಆಕೆಯನ್ನು ಎಂಬಿಎ ಓದಲು ಪ್ರೇರೇಪಿಸಿದರು. ಪದವಿಗಾಗಿ ಎಂಬಿಎ ಓದಲು ಹೊರಟ ಸೌಂದರ್ಯರಿಗೆ ಅಲ್ಲಿ ಪತಿ ಕೂಡ ದೊರೆತರು. ನಂತರ ಮದುವೆ, ಮಗು ಇದರ ನಡುವೆ ತಮ್ಮ 1993-1996ರವರೆಗೂ ವೃತ್ತಿಬದುಕಿನಿಂದ ವಿರಾಮ ಪಡೆದರು. ನಂತರ ನಗರದ ಕಾಲೇಜಿನ ಆಡಳಿತ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ತರಬೇತಿ ಯೋಜನೆ, ವ್ಯಾಪಾರ ಯೋಜನೆಗಳ ಸೃಷ್ಟಿ ಮುಂತಾದ ವಿಷಯಗಳ ಕುರಿತು ಕಾರ್ಪೊರೇಟ್ ಸಂಸ್ಥೆಗಳಿಗೆ ಪ್ರಾಜೆಕ್ಟ್ ಮಾಡುತ್ತಿದ್ದರು. ಕೆಲಸದ ಸ್ಥಳಗಳಲ್ಲಿ ಎದುರಿಸಿದ ಸಮಸ್ಯೆಗಳು, ಅವಶ್ಯಕತೆಗಳು ಸೌಂದರ್ಯಾರನ್ನು ಉದ್ಯಮಿಯನ್ನಾಗುವಂತೆ ಮಾಡಿತು. ಉದ್ಯಮಿಯಾಗಿ ಸೌಂದರ್ಯ ಪಯಣ ಆರಂಭಿಸಿದ್ದು 2000ರಲ್ಲಿ. ಕೆ.ಉಮಾಶಂಕರ್ ಅವರೊಂದಿಗೆ `ಅವತಾರ್’ ಆರಂಭಿಸಿದಾಗ ಜೊತೆಗಿದ್ದುದ್ದು ಕೇವಲ ಐದೇ ಜನ. ಮಹಿಳೆಯರು ವಿರಾಮದ ನಂತರ ವೃತ್ತಿ ಆರಂಭಿಸಲು ಸಹಾಯ ಮಾಡಲು 2005ರಲ್ಲಿ ಅವತಾರ್ ಆರಂಭಿಸಿದರು. ಹತ್ತು ವರ್ಷದ ನಂತರ ಸಂಸ್ಥೆಯ ನೆಟ್‍ವರ್ಕ್ ನಲವತ್ತು ಮಹಿಳಾ ವೃತ್ತಿಪರರ ನೆಟ್‍ವರ್ಕ್ ಹೊಂದಿದೆ. ಸೌಂದರ್ಯ ಹಾಗೂ ತಂಡದ ಪರಿಶ್ರಮದಿಂದ ಎಂಟುಸಾವಿರಕ್ಕೂ ಹೆಚ್ಚು ಮಹಿಳೆಯರು ತಮ್ಮ ವೃತ್ತಿಜೀವನಕ್ಕೆ ಮರಳಿದ್ದಾರೆ. ಬಿಡುವಿರದ ಕೆಲಸದ ನಡುವಲ್ಲೇ ಸೌಂದರ್ಯ `ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆ’(ವುಮೆನ್ ವರ್ಕ್‍ಫೋರ್ಸ್ ಪಾರ್ಟಿಸಿಪೇಷನ್) ಕುರಿತು ತಮ್ಮ ಪಿಎಚ್‍ಡಿ ಮುಗಿಸಿದ್ದಾರೆ. ಮದುವೆ, ಮಕ್ಕಳ ನಂತರ ನನ್ನಿಂದೇನೂ ಸಾಧ್ಯವಿಲ್ಲ ಎನ್ನುವವರನ್ನು ಮರಳಿ ದುಡಿಮೆಯ ಕ್ಷೇತ್ರಕ್ಕೆ ಕರೆತಂದಿರುವ ಸೌಂದರ್ಯ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವೆಂಬ ಮಾತಿಗೆ ನಿದರ್ಶನ. ಹಲವಾರು ನೇಮಕಾತಿ ಏಜೆನ್ಸಿಗಳಿಗೆ ಪ್ರಾಜೆಕ್ಟ್ ವರ್ಕ್ ಮಾಡಿದ ನಂತರ ಡಿಸೆಂಬರ್ 2000ರಲ್ಲಿ ಸೌಂದರ್ಯ ಮಾನವ ಸಂಪನ್ಮೂಲ(ಎಚ್‍ಆರ್) ಕ್ಷೇತ್ರದಲ್ಲಿ ಸಂಸ್ಥೆ ಆರಂಭಿಸಿದಾಗ ಸ್ನೇಹಿತ ಉಮಾಶಂಕರ್ ಸಹಸಂಸ್ಥಾಪಕರಾದರು. "ಪವರ್ ಆಫ್ ಚೇಂಜ್" ಎಂಬ ಅಡಿಬರಹದ `ಅವತಾರ್’ ರೂಪಾಂತರದ ಆಯಾಮಗಳನ್ನೊಳಗೊಂಡಿದ್ದು ಸಮಯಕ್ಕನುಗುಣವಾಗಿ ವ್ಯಕ್ತಿತ್ವ, ವೃತ್ತಿಪರತೆ, ಆಧ್ಯಾತ್ಮಿಕವಾಗಿ ವಿಭಿನ್ನ ಅವತಾರಗಳನ್ನು ತೆಗೆದುಕೊಳ್ಳಬಹುದು. ಮೊದಲ ಹೂಡಿಕೆದಾರರಾಗಿ ಅತ್ತೆ ನೀಡಿದ 60,000 ಚೆಕ್‍ನಿಂದ ಸೌಂದರ್ಯ ಕಚೇರಿಗಾಗಿ ಫ್ಲಾಟೊಂದನ್ನು ಬಾಡಿಗೆಗೆ ಹಿಡಿದರು. ಈ ಮಧ್ಯೆ 2008ರಲ್ಲಿ ಮೂರು ಘಟಕಗಳನ್ನು ಆರಂಭಿಸಿದ್ದು, 2008ರಲ್ಲಿ ಆರಂಭವಾದ `ಅವತಾರ್ ಹ್ಯೂಮನ್ ಕ್ಯಾಪಿಟಲ್ ಟ್ರಸ್ಟ್’, 2011ರಲ್ಲಿ `ಅವತಾರ್ ಫ್ಲೆಕ್ಸಿ ಕೆರೀರ್ ಇಂಡಿಯಾ’ ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೂ ಹೊರಗಿನಿಂದ ಯಾವುದೇ ಹೂಡಿಕೆ ಪಡೆಯದಷ್ಟು ಸಂಸ್ಥೆ ಬಲಿಷ್ಠವಾಗಿದೆ ಎನ್ನುತ್ತಾರೆ ಸೌಂದರ್ಯ. ಅಮೆರಿಕನ್ ದೂತಾವಾಸ ಪ್ರಾಯೋಜಕತ್ವದ ಅಮೆರಿಕಾದ ಅಂತಾರಾಷ್ಟ್ರೀಯ ಪ್ರವಾಸಿಗರ ಲೀಡರ್‍ಶಿಪ್ ಕಾರ್ಯಕ್ರಮ ಹಾಗೂ ಯುಕೆ ವಿದ್ಯಾರ್ಥಿವೇತನ ಪಡೆದು 2005ರಲ್ಲಿ ಮಾಡಿದ ಪ್ರವಾಸ ಕಣ್ಣು ತೆರೆಸುವಂತಿತ್ತು. ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿ ಮಹಿಳೆಯರ ಶಕ್ತಿ-ಸಾಮರ್ಥ್ಯವನ್ನು ಅನುಕೂಲಕ್ಕೆ ಬಳಸಿಕೊಳ್ಳುವ ರೀತಿಯನ್ನು ಸೌಂದರ್ಯ ಕಣ್ಣಾರೆ ಕಂಡರು. ಅಲ್ಲಿನ ಯಶಸ್ವಿ ಮಹಿಳೆಯರೊಂದಿಗೆ ನಡೆಸಿದ ಸಂವಾದದಿಂದ ವಿಶ್ವದೆಲ್ಲೆಡೆ ಮಹಿಳೆಯರು ಇದೇ ತೆರನಾದ ಸಮಸ್ಯೆ ಎದುರಿಸುತ್ತಿರುವುದು ಮನವರಿಕೆಯಾಯಿತು. ಭಾರತದ ಓರ್ವ ತಾಯಿಯಷ್ಟೇ ಕಷ್ಟ ಅಮೆರಿಕನ್ ತಾಯಿಗೂ ಇದೆ. ಆದರೆ ಫ್ಲೆಕ್ಸಿ ಸಮಯ, ಅರೆಕಾಲಿಕ ಮುಂತಾದ ಬದಲಿ ಬೆಂಬಲಿತ ವ್ಯವಸ್ಥೆಯೊಂದಿಗೆ ಅಲ್ಲಿನ ಕಾರ್ಪೊರೇಟ್ ಸಂಸ್ಥೆಗಳು ಮಹಿಳೆಯರನ್ನು ಸಕ್ರಿಯವಾಗಿಸಲು ನೆರವಾಗುತ್ತವೆ. ಕಾರ್ಪೊರೇಟ್ ಸಂಸ್ಥೆಗಳ ಈ ರೀತಿಯ ತೊಡಗಿಸಿಕೊಳ್ಳುವಿಕೆ ಉದ್ಯೋಗಿಗಳ ಬದುಕನ್ನು ಮೌಲ್ಯಯುತವನ್ನಾಗಿಸುತ್ತದೆ. ಇದು ಮಹಿಳೆ-ಪುರುಷ ಇಬ್ಬರಿಗೂ ಅನ್ವಯವಾಗಿದ್ದು, ಅದ್ಭುತಗಳ ಸೃಷ್ಟಿಗೆ ಕಾರಣವಾಗುವ ಈ ವ್ಯವಸ್ಥೆ ಭಾರತದ ಕಾರ್ಪೊರೇಟ್‍ಗಳಲ್ಲಿ ಏಕಿಲ್ಲ ಎಂದು ಪ್ರಶ್ನಿಸುತ್ತಾರೆ ಸೌಂದರ್ಯ. ವಿದೇಶದಿಂದ ಬಂದ ನಂತರ ಮಹಿಳೆಯರ ವೃತ್ತಿ ವಿರಾಮದ ನಂತರ ಕೆಲಸ ಕುರಿತು 25 ಕಾರ್ಪೊರೇಟ್ ಸಂಸ್ಥೆಗಳಲ್ಲಿ ಅಧ್ಯಯನ ಕೈಗೊಂಡು, ಪ್ರತಿಭಾನ್ವಿತ ಮಹಿಳೆಯರ ದೊಡ್ಡ ಸಮೂಹವನ್ನು ಪರಿಗಣನೆಗೆ ತೆಗೆದುಕೊಳ್ಳದಿರುವ ಕಾರಣವನ್ನೂ ಪ್ರಶ್ನಿಸಿದ್ದಾರೆ. ಈಗಲೂ ಸಹ ವೃತ್ತಿ ವಿರಾಮ ಅಕ್ಷಮ್ಯ ಅಪರಾಧವಾಗಿದೆಯೇ ವಿನಃ ಅವರ ಸಮಸ್ಯೆಗಳನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲವೆಂಬ ಕೊರಗಿದೆ. ವಿರಾಮದ ನಂತರ ಕಾರ್ಯಕ್ಷೇತ್ರಕ್ಕೆ ಕಾಲಿರಿಸುವ ಮಹಿಳೆಯರು ಹೆಚ್ಚು ಪರಿಶ್ರಮಿಗಳು, ಶಕ್ತಿಯುತ ಹಾಗೂ ವಿಶ್ವಾಸಾರ್ಹರೂ ಆಗಿದ್ದು, ಕಾರ್ಪೊರೇಟ್ ಜಗತ್ತಿಗೆ ಪರಿಚಿತರಾಗಿರುತ್ತಾರೆ ಎಂಬುದನ್ನು ಸಂಸ್ಥೆಗಳಿಗೆ ಮನದಟ್ಟು ಮಾಡಿಕೊಡಲು ಯತ್ನಿಸಿದ್ದಾರೆ.

ವೃತ್ತಿಜೀವನದ ಎರಡನೇ ಕಾರ್ಯಕ್ರಮ

2005ರಲ್ಲಿ ಸೌಂದರ್ಯ ಮಹಿಳೆಯರಿಗಾಗಿ ಭಾರತದಲ್ಲೇ ಮೊದಲನೇ ಬಾರಿಗೆ ಎರಡನೇ ವೃತ್ತಿಬದುಕಿನ ಕಾರ್ಯಕ್ರಮ ಆರಂಭಿಸಿ, ಅದರ ಭಾಗವಾಗಿ www.avatariwin.com ಆರಂಭಿಸಲಾದ ಪೋರ್ಟಲ್‍ಗೆ ಕೆಲವೇ ದಿನಗಳಲ್ಲಿ 40,000 ಮಹಿಳೆಯರು ಹೆಸರು ದಾಖಲಿಸಿದ್ದು, ಇದೀಗ ಈ ನೆಟ್‍ವರ್ಕ್‍ನಲ್ಲಿ 42,000 ಮಹಿಳೆಯರಿದ್ದಾರೆ. ಇದೊಂದು ಜಾಬ್‍ಸೈಟ್ ಅಲ್ಲವೆಂದು ಸ್ಪಷ್ಟಪಡಿಸುವ ಸೌಂದರ್ಯ ಕೆಲಸದಿಂದ ವಿಶ್ರಾಂತಿ ಪಡೆದಿರುವ ಮಹಿಳೆಯರಿಗೆ ಸಹಾಯ ಮಾಡಿ, ಉದ್ಯೋಗದತ್ತ ಕರೆತರುವುದು ಇದರ ಗುರಿ. ಅವತಾರ್ ಭೇಟಿ ಮಾಡಿದ ಸಾಕಷ್ಟು ಮಹಿಳೆಯರು ವೃತ್ತಿಬದುಕಿನ ಮರುಆರಂಭದ ವಿಷಯದಲ್ಲಿ ಗೊಂದಲ, ಒತ್ತಡದಿಂದಿದ್ದು ಈ ತಂಡವು ಅವರನ್ನು ಸಮಾಲೋಚನೆಯಿಂದ ಸದೃಢಗೊಳಿಸುತ್ತಿದೆ. ಗರ್ಭಿಣಿಯಾದೊಡನೆ ಮಹಿಳೆಯರು ತೆಗೆದುಕೊಳ್ಳುವ ವಿರಾಮ ಕುರಿತು ಕಾರ್ಪೊರೇಟ್ ವಲಯ ಆತಂಕಕ್ಕೊಳಗಾಗಿದೆ. ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ ಮನಸ್ಥಿತಿ ಹಾಗೇ ಇದ್ದು, ಗರ್ಭಾವಸ್ಥೆ ನಂತರ ತಮ್ಮಲ್ಲಿ ಕೆಲಸದ ಸಾಮರ್ಥ್ಯವಿಲ್ಲವೆಂದು ಯೋಚಿಸುವ ಮಹಿಳೆಯರನ್ನು ಭಿನ್ನವಾದ ಚಿಂತನೆಗೆ ಹಚ್ಚಿ, ಅವರನ್ನು ಕೆಲಸದತ್ತ ಮರಳಿ ತರುವುದೇ `ಅವತಾರ್’ ಗುರಿ. ಪ್ರತಿಭಾನ್ವಿತ ಮಹಿಳೆ ತಾನು ಹೋದಲ್ಲಿ ಉತ್ತಮ ಅವಕಾಶಗಳ ಮೂಲಕ ಏಳಿಗೆ ಪಡೆಯುತ್ತಾಳೆ. ಈ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ `ಅವತಾರ್’ ಉದ್ಯೋಗ ಕ್ಷೇತ್ರಕ್ಕೆ ಮಹಿಳೆಯರನ್ನು ಮರಳಿ ತರುವ ಕಾರ್ಯದಲ್ಲಿ ಅತಿ ದೊಡ್ಡ ಸಂಸ್ಥೆ ಎನಿಸಿದೆ. ವಿರಾಮದ ನಂತರ ಉದ್ಯಮಕ್ಕೆ ಕಾಲಿಟ್ಟು ಸಾಧಕಿಯಾಗಿ ಹೊರಹೊಮ್ಮಿರುವ ಸೌಂದರ್ಯರ ಅಪಾರ ಪರಿಶ್ರಮ ಇದರಲ್ಲಿದೆ.

ಹೀಗೆನ್ನುತ್ತಾರೆ ಸೌಂದರ್ಯ

ವೃತ್ತಿಯಲಿ ಎರಡನೇ ಬ್ರೇಕ್ ಪಡೆಯುವುದು ಸುಲಭವಲ್ಲ. ಸಂದರ್ಭ ಹಾಗಿದ್ದರೂ ಹಾಗೆ ಮಾಡದಿರಲು ಯತ್ನಿಸಿ. ಬದಲಾಗಿ ವೃತ್ತಿಯಲ್ಲಿ ಫ್ಲೆಕ್ಸಿಬಲಿಟಿ, ಅರೆಕಾಲಿಕ ಕೆಲಸದ ಆಯ್ಕೆ ಮಾಡಿಕೊಳ್ಳುವುದರಿಂದ ವಿರಾಮದಿಂದ ದೂರವುಳಿಯುತ್ತೀರಿ. ಬ್ರೇಕ್ ತೆಗೆದುಕೊಂಡಿದ್ದರೂ ನಿಮ್ಮ ಕೌಶಲ್ಯದಲ್ಲಿ ಅಪ್‍ಡೇಟ್ ಆಗಿರಿ. ಏಕೆಂದರೆ ಮಹಿಳೆ ಗೃಹಿಣಿ, ತಾಯಿ ಆದೊಡನೆ ಹೊರಜಗತ್ತಿನಿಂದ ದೂರವುಳಿದು ತನ್ನ ಕ್ರಿಯಾಶೀಲತೆಯನ್ನೇ ಮರೆಯುತ್ತಾಳೆ. ಬ್ರೇಕ್ ನಂತರ ದೊರೆಯುವ ಕೆಲಸದಲ್ಲಿ ಇಂತಹುದೇ ಬೇಕೆಂಬ ಹಠ ಬೇಡ. ನಿಮ್ಮ ಆಯ್ಕೆಯ ಬಗ್ಗೆ ತೆರೆದ ನೋಟ ಹಾಗೂ ಫ್ಲೆಕ್ಸಿಬಲ್ ಭಾವನೆ-ಅಭಿಪ್ರಾಯಗಳಿದ್ದರೆ ಉತ್ತಮ ವೃತ್ತಿಪರರು, ಉದ್ಯಮಿಗಳು ಆಗಲು ಸಾಧ್ಯವಿದೆ.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.