ನಿರೀಕ್ಷೆಯ ಬದುಕಿಗೆ ಬೇಕಿದೆ ಉತ್ತರಾಯಣ!

One cup of Tea.

ಇದೊಂದು ಕಾವ್ಯನಾಮ. ಜಾಪಾನಿನ ಹಾಯ್ಕು ಮಾಸ್ಟರ್'ಗಳ ಪೈಕಿ ಒಬ್ಬನಾಗಿರುವ ಕೊಬಾಯಾಶಿ ಇಸ್ಸಾ ಇಂಥದೊಂದು ವಿಚಿತ್ರ ಕಾವ್ಯನಾಮ ಇಟ್ಟುಕೊಂಡು ಹಾಯ್ಕುಗಳನ್ನು ಬರೆದವ. ಅದರಲ್ಲೂ ತನ್ನ ಹಾಯ್ಕುಗಳಿಗೆ ಪ್ರಮುಖವಾಗಿ ಆತ ಆಯ್ದುಕೊಳ್ಳುವದು ಸುಗ್ಗಿ ಕಾಲವನ್ನು. ಹೊಲ, ಹೊಲದಲ್ಲಿನ ಹೆಣ್ಣುಮಕ್ಕಳು, ಅವರೆಲ್ಲರ ಶ್ರಮ, ಬೆವರು, ಪೈರಿನ ರಾಶಿ, ಹೊಲದಲ್ಲಿನ ಹಾಡು ಮತ್ತು ಪಾಡು- ಇವೇ ಆತನ ಸರಕುಗಳು.

ಇಂಥದೊಂದು ಸುಗ್ಗಿಯ ಕಾಲದಲ್ಲಿ ಹೊಲಕ್ಕೆ ಬರುವ ಆತನಿಗೆ ಎಲೆಯ ಮೇಲೆ ಮೂಡಿರುವ ಮಂಜಿನ ಹನಿಯೊಂದರ ಮೇಲೆ ದೃಷ್ಟಿ ಬೀಳುತ್ತದೆ. ಅದೊಂದು ತಿಳಿಹಸಿರಿನ ಎಲೆಯ ಮೇಲೆ ಈಗಷ್ಟೇ ಜನಿಸಿರುವ ಶುಭ್ರ ಬಿಂದು. ಕ್ಷಣಿಕ ಆಯಸ್ಸು ಹೊಂದಿರುವ ಈ ಹನಿಗೇನೋ ತಾನಿರುವ ಎಲೆಯಿಂದ ಬಿಡುಗಡೆ ಪಡೆಯುವ ಉತ್ಸಾಹ. ಹೀಗಾಗಿ ಜಾರುತ್ತಲಿದೆ. ಆದರೆ ಎಲೆಯ ಮೇಲಿನ ಧೂಳು ಹನಿಯ ಉತ್ಸಾಹಕ್ಕೆ ಭಂಗ ತರುತ್ತಲಿದೆ. ಶಿಖರದ ತುದಿಯಿಂದ ಇಳಿಜಾರಿನೆಡೆಗೆ ಜಾರುತ್ತಿರುವ ಈ ಉತ್ಸಾಹದ ಬುಗ್ಗೆಗೆ ಕ್ಷಣಕ್ಷಣಕ್ಕೂ ಅಡೆತಡೆಗಳು. ಅಖಿಲಾಂಡ ಜಗತ್ತಿನ ರೂಪವನ್ನೇ ಬಿಂಬಿಸುತ್ತಿರುವ ಈ ದುಂಡುಹನಿ ತನ್ನ ಪಯಣದಲ್ಲಿ ಅಲ್ಲಲ್ಲಿ ರೂಪ ಕೆಡಿಸಿಕೊಳ್ಳುತ್ತಿದೆ. ಚಲಿಸುತ್ತಿರುವ ಈ ಹನಿಯ ವೇಗಕ್ಕೆ ಧಕ್ಕೆ ಮಾಡಿ ದುಂಡು ಆಕೃತಿಯನ್ನು ಹಿಗ್ಗಿಸಿ, ಕುಗ್ಗಿಸಿ ಅಲ್ಲಲ್ಲಿ ನಿಲ್ಲಿಸಿಬಿಡುವ ಧೂಳನ್ನು ನೋಡಿ ಇಸ್ಸಾ ಮುಗುಳ್ನಗುತ್ತಿದ್ದಾನೆ. ಕೊನೆಗೊಮ್ಮೆ ಎಲೆಯ ಇಳಿಜಾರನ್ನು ತಲುಪಿರುವ ಹನಿ ಇದ್ದಕ್ಕಿದ್ದಂತೆ ಆಶ್ರಯದಾತನ ಮೇಲೆ ಅಚಾನಕ್ ಬಾಂಧವ್ಯ ಬೆಳೆಸಿಕೊಂಡಂತಿದೆ. ಹೀಗಾಗಿ ಎಲೆಯಿಂದ ಇನ್ನೇನು ಕೆಳಗೆ ಬೀಳುವಾಗಲೂ ಎಲೆಯ ತುದಿಯನ್ನು ಬಿಡುವದೋ ಬೇಡವೋ ಅಂತ ಕೊನೆಯ ಬಾರಿಗೆ ತನ್ನ ರೂಪವನ್ನು ಹಿಗ್ಗಿಸಿಕೊಂಡಿರುವ ಬಿಂದುವನ್ನು ನೋಡುತ್ತ ಇಸ್ಸಾ ಬರೆದುಕೊಳ್ಳುತ್ತಾನೆ:

ಪ್ರತಿ ಮಂಜಿನ ಹನಿಯಲ್ಲೊಂದು ಜಗತ್ತಿದೆ;

ಅಂಥ ಪ್ರತಿ ಜಗತ್ತಿನಲ್ಲೊಂದು

ಹೋರಾಟದ ಇನ್ನೊಂದು ಜಗತ್ತಿದೆ!

ಇವತ್ತು ಮಕರ ಸಂಕ್ರಾಂತಿ. ಸುಗ್ಗಿ ಮತ್ತು ಹುಗ್ಗಿ ಎರಡೂ ಒಟ್ಟಿಗೇ ಸೇರಿ ಹಬ್ಬ ಆಚರಿಸುವಂಥ ಸಂಕ್ರಮಣದ ಕಾಲ. ಇಡೀ ಭಾರತದಲ್ಲಷ್ಟೇ ಅಲ್ಲ, ಜಗತ್ತಿನಲ್ಲೆಡೆ ಸುಗ್ಗಿಹಬ್ಬವನ್ನು ಬೇರೆಬೇರೆ ಹೆಸರಿನಿಂದ ಆಚರಿಸುತ್ತಾರೆ. ನಮ್ಮಲ್ಲಿ ಸಂಕ್ರಾಂತಿಯಾಗುವ ಈ ಹಬ್ಬ ತಮಿಳಿನಲ್ಲಿ ಪೊಂಗಲ್ ಆಗುತ್ತದೆ. ಪಂಜಾಬಿನಲ್ಲಿ 'ಲೋರಿ'ಯಾಗಿ ಗುಜರಾತಿನಲ್ಲಿ ಉತ್ತರಾಯಣವಾಗಿ, ಆಸಾಮಿಯಲ್ಲಿ 'ಬೋಗಾಲಿ ಬಿಹೂ' ಅಂತೆಲ್ಲ ಕರೆಸಿಕೊಳ್ಳುತ್ತದೆ. ಇಲ್ಲಿ ಸುಖದಿಂದ ಬದುಕಲು ಎಲ್ಲರಿಗೂ ಒಂದು ನೆಪ ಬೇಕು. ಸುಖದಿಂದ ಸಾಯಲೂ. ಇಚ್ಚಾಮರಣದಂಥ ವರ ಪಡೆದುಕೊಂಡು, ಮನಸ್ಸು ಮಾಡಿದ್ದರೆ ಜೀರಂಜೀವಿಯಾಗಬಹುದಾಗಿದ್ದ ಭೀಷ್ಮ ಸಾಯಲೂ ಕೂಡ ಇದೇ ಘಳಿಗೆಯನ್ನು ಆರಿಸಿಕೊಂಡ.

ಇಲ್ಲೀಗ ಕೊಬಾಯಾಶಿ ಇಸ್ಸಾ ಮತ್ತದೇ ಹೊಲದಲ್ಲಿ ನಡೆಯುತ್ತಿದ್ದಾನೆ. ಸುಗ್ಗಿಕಾಲವಾದ್ದರಿಂದ ಜನರೆಲ್ಲ ಹೊಲದಲ್ಲಿ ಕಾರ್ಯಮಗ್ನ. ಒಂದೆಡೆ ಕಲ್ಲಿನಿಂದ ಮಾಡಿರುವ ನೀರಿನ ಟಂಕಿ. ಅದರಲ್ಲೊಂದು ಪುಟ್ಟ ಮೀನು. ಮುಂಜಾನೆಯ ಎಳೆಬಿಸಿಲಿನಲ್ಲಿ ಮಿಂಚುತ್ತಿರುವ ಈ ಮರಿಮೀನು ಹೇಗೆ ಜಾಲಿಯಾಗಿ ಮಲಗಿಕೊಂಡಿದೆ ನೋಡಿ. ಮುಂಬರುವ ಅಪಾಯದ ಅರಿವಿಲ್ಲದ ಈ ಮರಿಮೀನು ಟಂಕಿಯ ನೀರನ್ನು ಖಾಲಿಮಾಡುವಾಗ ಬಳಸುವ ತೂತಿನಡಿಯಲ್ಲಿಯೇ ಅದು ಹೇಗೆ ನಿರುಮ್ಮಳವಾಗಿ ವಿಶ್ರಮಿಸುತ್ತಲಿದೆ ನೋಡಿ.

ಹೊಲದಲ್ಲಿನ ಹೆಂಗಸರು ಕಳೆ ಕೀಳುತ್ತಲಿರುವರು. ಬೆನ್ನಿಗೆ ಬೆನ್ನು ತಾಗಿಸಿಕೊಂಡೇ ಕೆಲಸ ಮುಂದುವರೆಸಿರುವ ಈ ಹೆಂಗಳೆಯರು ಪರಸ್ಪರ ಮುಖ ನೋಡದೇ ಮಾತುಕೃತಿ ಮುಂದುವರೆಸಿರುವರು. ಅಷ್ಟರಲ್ಲಿ ಅನಾಮಿಕ ದಾರಿಹೋಕನೊಬ್ಬ ಹೊಲದಲ್ಲಿ ಕೆಲಸ ಮಾಡುತ್ತಿರುವ ಶ್ರಮಿಕನೊಬ್ಬನಿಗೆ ಯಾವುದೋ ವಿಳಾಸದ ಹಾದಿಯನ್ನು ಕೇಳುತ್ತಿದ್ದಾನೆ. ಈ ಶ್ರಮಿಕನಿಗೋ ನಯನಾಜೂಕಿನ ಭಿಡೆಯಿದ್ದಂತಿಲ್ಲ. ಹೀಗಾಗಿ ಇಂಥ ಚೌಕಟ್ಟುಗಳನ್ನೆಲ್ಲ ಇಸ್ಸಾ ತನ್ನ ಹಾಯ್ಕುಗಳಲ್ಲಿ ಸೆರೆ ಹಿಡಿಯುವದನ್ನು ನೋಡುವದೇ ಒಂದು ಮಜ.

ಮೂಲಂಗಿ ಕೀಳುತ್ತಿರುವ ಮನುಷ್ಯ

ಮೂಲಂಗಿಯಿಂದಲೇ ದಾರಿ ತೋರಿಸುತ್ತಿದ್ದಾನೆ..

ಕೆಲಸ ಮುಗಿಸಿ ಇಳಿಸಂಜೆಯಲ್ಲಿ ಹೊಲದಿಂದ ಮನೆಗೆ ಮರಳಿರುವ ಈ ಹೆಂಗಸು ಅಡುಗೆಗೆ ನಿಂತಿದ್ದಾಳೆ. ದೈನಂದಿನ ಕಷ್ಟದ ಬದುಕು ಮತ್ತು ಎಂದೂ ಬತ್ತಲಾರದ ಉತ್ಸಾಹ ಹೊಂದಿರುವ ಈಕೆಗೆ ಹಸಿವು ಅಂತನ್ನುವದೆಲ್ಲ ಚಿರಪರಿಚಿತ. ಆದರೆ ಮಗನಿಗೆ? ಈ ಪುಟ್ಟ ಪೋರ ಯಾವತ್ತೂ ಸರಿಯಾಗಿ ಊಟ ಮಾಡುವದಿಲ್ಲ. ಹೀಗಾಗಿ ಇದೇ ಕಾರಣಕ್ಕೆ ನಿನ್ನೆಯಷ್ಟೇ ಆತನಿಗೆ ನಾಲ್ಕಾರು ಏಟು ಬಿದ್ದಿವೆ. ಅದಕ್ಕೆ ಪರಿಹಾರವೆಂಬಂತೆ ಇವತ್ತು ಈ ಹೆಂಗಸು ಎಂಥದ್ದೋ ಸಿಹಿ ಪಾಯಸ ಮಾಡಿದ್ದಾಳೆ. ಈ ಪೋರನಿಗೆ ಕಾಣಿಸುವಂತೆ ಕಣ್ಣರಳಿಸಿ ಸದ್ದು ಮಾಡುತ್ತ ಬಾಯಿ ಚಪ್ಪರಿಸುತ್ತ ಪಾತ್ರೆಗೆ ಸುರಿಯುತ್ತಿದ್ದಾಳೆ. ಒಂದು ಅಬೋಧ ಪ್ರೀತಿಯನ್ನು ಇಸ್ಸಾ ಬಣ್ಣಿಸುವದು ಹೀಗೆ:

ಹೀಗೆ ಹೋಗತ್ತೆ ಹಾಗೆ ಬರುತ್ತೆ

ಪ್ರೀತಿ, ಬೆಕ್ಕಿನಂತೆ!

ಆಮೇಲೇನಾಯಿತು? ಹುಡುಗ ಆವತ್ತಾದರೂ ಸರಿಯಾಗಿ ಊಟ ಮಾಡಿದನೇ? ಆ ಹೆಂಗಳೆ ಆವತ್ತಾದರೂ ನೆಮ್ಮದಿಯಿಂದ ನಿದ್ರಿಸಿದಳೇ? ಇಷ್ಟಕ್ಕೂ ಅವಳೇಕೆ ಒಬ್ಬಳೇ ಮಗನೊಂದಿಗೆ ಇರುವಳು? ಆಕೆಯ ಗಂಡನೆಲ್ಲಿ? ಕವಿ ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವದಿಲ್ಲ. ಅದನ್ನೆಲ್ಲ ನಾವೇ ತಲೆಕೆಡಿಸಿಕೊಳ್ಳಬೇಕು. ಕಲ್ಪಿಸಿಕೊಳ್ಳಬೇಕು. ಆಕೆಯ ಗಂಡನೆಲ್ಲೋ ಯುದ್ಧಭೂಮಿಯಲ್ಲಿರುವನು. ಆತ ತನ್ನ ವಿಶ್ರಾಂತಿಯ ಸಮಯದಲ್ಲಿ ಟ್ರಂಕಿನಿಂದ ಈ ಹೆಂಗಳೆಯ ಬಿಂಬಕ್ಕಾಗಿ ತಡಕಾಡುತ್ತಿರುವನು. ಇವಳಿಗೆ ಕಾಡಿದ ಸುಖದ ರಾತ್ರಿಯೊಂದು ಅವನಿಗೂ ಕಾಡುತ್ತಲಿದೆ. ಅಂತೆಯೇ, ಪ್ರೀತಿಯೆಂಬ ಬೆಕ್ಕು ಠಳಾಯಿಸುತ್ತಿದೆ ಇಲ್ಲಿಂದಲ್ಲಿಗೆ. ಅವಳಿಗೋ, ಚಳಿಗಾಲವೆಂಬುದು ಯುದ್ಧಕ್ಕೆಂದೇ ಬಂದಿರುವ ರಾತ್ರಿಯಂತೆ ಭಾಸವಾಗುತ್ತದೆ. ಅವಳ ವದನವೇ ಅದನ್ನೆಲ್ಲವನ್ನೂ ಒಂದು ತೆರೆದಿಟ್ಟ ಕೃತಿಯಂತೆ ಬಿಡಿಸಿ ಹೇಳುತ್ತಲಿದೆ. ಹೀಗಾಗಿ ಆಗಸದಲ್ಲಿ ತಾರೆಯೊಂದು ಬೀಳುವಾಗಲೆಲ್ಲ ಈಕೆ ಕೋರಿಕೆಯ ಹಾಡು ಹೇಳುತ್ತಾಳೆ.

ಇಂತಿಪ್ಪ ಸಮಯದಲ್ಲಿ ಕವಿ ಏನು ಮಾಡಿಯಾನು? ಆತ ಪ್ರವಾದಿಯಲ್ಲ. ಕೇವಲ ಆಶಾವಾದಿ. ಹಾಗಾಗಿ ಎಲ್ಲೆಲ್ಲೋ ಚದುರಿ ಹೋಗಿರುವ ಆ ಹೆಂಗಳೆ ಮತ್ತು ಮತ್ತವಳ ಗಂಡ- ಇಬ್ಬರ ಆತ್ಮವನ್ನೂ ತನ್ನ ಕವಿತೆಯಲ್ಲಿನ ಸಾಗರದಂಚಿಗೆ ಕರೆತರುತ್ತಾನೆ. ದಂಡೆಯಲ್ಲಿನ ಮರಳಿಗೆ ಬೆಂಕಿ ಹಚ್ಚುತ್ತಾನೆ. ಅಲ್ಲಿರುವ ಅಲೆಗಳಿಗೆ ಉನ್ಮತ್ತತೆಯನ್ನು ಉದ್ರೇಕಿಸಿ ಅಲೆಗಳಲ್ಲಿದ್ದ ಚಂದಿರನನ್ನೂ ಛಿದ್ರಗೊಳಿಸುತ್ತಾನೆ. ಗಂಡ ಹೆಂಡತಿ ಇಬ್ಬರೂ ಕವಿಯ ಮುಲಾಜಿನಲ್ಲಿ ಬಂಧಿತರಾಗಿರುವ ಈ ಸಮಯದಲ್ಲಿ ಒಂದು ನಿಜವಾದ ಕ್ಯಾನ್ವಾಸ್ ಮೂಡುತ್ತಲಿದೆ: ಇಲ್ಲೀಗ ಬೆಂಕಿಯ ಸುತ್ತಲೂ ನರ್ತಿಸುತ್ತಿರುವ ಹೆಂಗಸರೆಲ್ಲರ ಕಾಲುಗಳೂ ಗಾಳಿಯಲ್ಲಿವೆ; ಮೂಡಿದ ದಾಸವಾಳ ಹೂಗಳೂ ಗಾಳಿಯಲ್ಲಿವೆ..

ನಿಜಕ್ಕೂ ಇಂಥದೊಂದು ಜಗತ್ತು ಇದ್ದಿರಬಹುದೇ? ಹಾಗಂತ ಯೋಚಿಸುತ್ತಿರುವಾಗ ನೆನಪಾಗಿದ್ದು ಚೈನೀ ಫಿಲಾಸಫರ್ ಲಾವೋ ತ್ಸು ಕವಿತೆ. ಅದನ್ನು ಕವಿಮಿತ್ರರಾದ ಚಿದಂಬರ ನರೇಂದ್ರರು ಅನುವಾದಿಸಿದ್ದು ಇಲ್ಲಿದೆ:

ಕೆಲವೇ ಕೆಲವು ಜನರಿರುವ ಇಂಥದೊಂದು ದೇಶವಿದ್ದರೆ ಎಷ್ಟು ಚೆನ್ನ. ಎಲ್ಲ ಐಷಾರಾಮಿ ಇದ್ದರೂ ಜನ ಅವನ್ನು ಬಳಸುವುದಿಲ್ಲ. ದೂರದ ಪ್ರಯಾಣ ಇಷ್ಟಪಡದ ಸಾವಿಗಂಜುವ ಸಾಧಾರಣ ಮನುಷ್ಯರು. ಅಲ್ಲಿ ಸಾಕಷ್ಟು ಹಡಗುಗಳು, ಗಾಡಿಗಳಿದ್ದರೂ ಹೋಗಲು ಯಾವ ಜಾಗವೂ ಇಲ್ಲ. ಪ್ರತಿಯೊಬ್ಬರ ಕೈಯಲ್ಲೂ ಆಯುಧಗಳು, ಆದರೆ ಯಾರಿಗೂ ಯುದ್ಧದ ಮನಸಿಲ್ಲ. ಜನರಿಗೆ ಕಥೆ ಕವನ ಬರೆಯುದಕ್ಕಿಂತ ಭತ್ತದ ಗದ್ದೆಯಲ್ಲಿ ಹಾಡಿ ಕುಣಿಯೋದು ಇಷ್ಟ. ಮನೆಗಳನ್ನು ಸಿಂಗರಿಸಿ ಗರಿಗರಿಯಾದ ಬಟ್ಟೆ ಧರಿಸಿ ರುಚಿ ರುಚಿಯಾದ ಊಟ ಮಾಡಿ ಹಬ್ಬಗಳಲ್ಲಿ ಮೈಮರೆಯುವದು ಅಂದರೆ ಪಂಚಪ್ರಾಣ. ಕೆಲವೇ ಕೆಲವು ಜನರಿರುವ ಇಂಥದೊಂದು ದೇಶ ಇದ್ದರೆ ಎಷ್ಟು ಚೆನ್ನ!

ನಾಲ್ಕು ವಾರಗಳಿಂದ ಮನೆ ಹತ್ತಿರದ ಮಕ್ಕಳಿಗೆ ನನ್ನ ಮೇಲೆ ಸಿಟ್ಟಿತ್ತು. "ಮ್ಯಾಜಿಕ್ ಮಾಡೋಣ, ಗಾಳಿಪಟ ಹಾರಿಸೋಣ ಅಂತ ಹೇಳುತ್ತಲೇ ಇದೀರ. ಏನೂ ಮಾಡುತ್ತಲೇ ಇಲ್ಲ.." ಅಂತ ಅವುಗಳ ದೂರು. ತಮಾಷೆ ನೋಡಿ: ಇವಕ್ಕೆಲ್ಲ ಸ್ಕೇಟಿಂಗ್ ಗೊತ್ತಿದೆ. ಕಂಪ್ಯೂಟರ್ ಗೊತ್ತಿದೆ. ಸ್ಮಾರ್ಟಫೋನಿನಲ್ಲಿ ಝೂಮಿಂಗ್, ಸ್ವೈಪಿಂಗ್ ಎಲ್ಲ ಗೊತ್ತು. ಆದರೆ ತುಂಬ ಹೊತ್ತು ಆಕಾಶದಲ್ಲಿ ಹಾರಾಡಬಲ್ಲ ಕಾಗದದ ರಾಕೆಟ್ ತಯಾರಿಸುವದು ಗೊತ್ತಿಲ್ಲ. ಯಾವುದೇ ಕಡ್ಡಿ ಉಪಯೋಗಿಸದೇ ಕಡಿಮೆ ಗಾಳಿಯಲ್ಲೂ ಆಗಸಕ್ಕೇರಬಲ್ಲ ಗಾಳಿಪಟ ತಯಾರಿಸುವದು ಗೊತ್ತಿಲ್ಲ. ಯಾವತ್ತೋ ಖರೀದಿಸಿದ್ದ ರಾವುಗಾಜು (magnifying lense) ಹಿಡಿದುಕೊಂಡು ಅವರ ನುಣುಪು ತ್ವಚೆಯ ಮೇಲೆ ಸೂರ್ಯನ ಬೆಳಕನ್ನು ಕೇಂದ್ರೀಕರಿಸಿ ಸಣ್ಣದೊಂದು ಬಿಂದುವಾಗಿಸಿದಾಗ ಉಂಟಾದ ಶಾಖಕ್ಕೆ ಖುಶಿಯಿಂದ ಕಿರುಚಿದವು. ಹಾಳೆಯ ಮೇಲೆ ಬೆಳಕನ್ನು ಗುರಿಯಿಟ್ಟು ಹಾಳೆ ಸುಡುವದನ್ನು ನೋಡಿ ರೋಮಾಂಚನಗೊಂಡವು. ಹಾಳೆಯ ತುಂಬ ಸಂಭ್ರಮದ ತೂತುಗಳು. ಅದೇ ಹಾಳೆಯಲ್ಲಿ ನನ್ನ ಹಳೇ ಪದ್ಯವೊಂದು ಸಾಯುತ್ತಲಿತ್ತು.

ಆದರೆ ಆ ಪುಟಾಣಿಗಳಲ್ಲಿದ್ದ ದಕ್ಷಿಣದ ಹಳೇ ಜಗಳವೊಂದು ಉತ್ತರಾಯಣದ ಹೊಸ ನಗುವಿನಲ್ಲಿ ಮಿಂಚಿ ಮರೆಯಾಗುತ್ತಲಿತ್ತು..

************************************************

(ಸೌಜನ್ಯ: ವಿಜಯ ಕರ್ನಾಟಕ-ಮಾಯಾಲಾಂದ್ರ)

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.