ಈ ಹುಡುಗ ಬಾಲುವನ್ನು ಶ್ರೀರಂಗಪಟ್ಟಣದ ಪ್ರ‍ೇಕ್ಷಣೀಯ ಸ್ಥಳಗಳ ಬಳಿ ಎಲ್ಲಿಯಾದರೂ ನೋಡೇ ಇರುತ್ತೀರಿ. ಇವತ್ತು ಬಸ್‍ಸ್ಟಾಂಡ್ ಸಮೀಪದ ಕೋಟೆಯ ಪ್ರವೇಶದ್ವಾರದ ಬಳಿ ಕಂಡರೆ, ನಾಳೆ ರಂಗನಾಥಸ್ವಾಮಿ ದೇವಸ್ಥಾನದ ಬಳಿಯೋ, ನದಿಯ ಸ್ನಾನಘಟ್ಟದಲ್ಲಿಯೋ, ಜುಮ್ಮಾ ಮಸೀದಿಯ ಬಳಿಯೋ ಇದ್ದಾನು. ಕೆಲವೊಮ್ಮೆ ಟಿಪ್ಪೂವಿನ ಬೇಸಗೆ ಅರಮನೆ- ದರಿಯಾ ದೌಲತ್- ಬಳಿ; ರಂಗನತಿಟ್ಟಿನಲ್ಲಿಯೂ ಇರುವುದುಂಟು.

ಆತ್ಮವಿಶ್ವಾಸ ಸೂಸುವ ಕಣ್ಣುಗಳು, ಎಣ್ಣೆಗೆಂಪು ಬಣ್ಣದ ದುಂಡುಮುಖ, ಎತ್ತರಕ್ಕೆ ತಕ್ಕ ಗಾತ್ರ, ಒಮ್ಮೆ ನೋಡಿದರೆ ಮರೆಯದ ರೂಪ. ಬೆನ್ನಹಿಂದೆ ಶಾಲೆಗೆ ಒಯ್ಯುವಂತ ಬ್ಯಾಗು, ಎಡಗೈಯಲ್ಲಿ- ಆ ಪುಟ್ಟ ಕೈ ಹಿಡಿವಷ್ಟು- ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳಿರುವ ಲಕೋಟೆಗಳು, ಮಾಹಿತಿ ನೀಡುವ ಕಿರುಪುಸ್ತಕಗಳು; ನಿಮ್ಮೆಡೆಗೆ ಚಾಚಿದ ಬಲಗೈಯಲ್ಲಿ ಒಂದು ಲಕೋಟೆಯೋ ಪುಸ್ತಕವೋ ನಿಮ್ಮ ಗಮನ ಸೆಳೆದೀತು. ನಿಮ್ಮನ್ನು ನೋಡಿ ನಿಮ್ಮದೇ ಭಾಷೆಯಲ್ಲಿ ಮಾತನಾಡಿಸುವ ಅವನ ಚಾಕಚಕ್ಯತೆಗೆ ಬೆರಗಾಗಿಯೇ ಇರುತ್ತೀರಿ. ವಿದೇಶೀಯರಿಗೆ ಇಂಗ್ಳೀಷ್; ಕೆಲವು ಫ್ರೆಂಚ್ ಪದಗಳೂ ಅವನಿಗೆ ಗೊತ್ತು.

ನಾನು ಇವನನ್ನು ಮೊದಲ ಸಲ ನೋಡಿದ್ದು ರಂಗನಾಥ ದೇವಾಲಯದ ಬಳಿ, ಮೈಸೂರಿನಿಂದ ಕೆಲವು ವಿದೇಶಿ ಪ್ರವಾಸಿಗರನ್ನು ಶ್ರೀರಂಗಪಟ್ಟಣಕ್ಕೆ ಕರೆದೊಯ್ದಿದ್ದಾಗ. ನಮ್ಮ ವಾಹನವನ್ನು ಪಾರ್ಕ್ ಮಾಡಿ ಬಾಗಿಲು ತೆಗೆದದ್ದೇ ತಡ ನಾಲ್ಕಾರು ಮಂದಿ ಮುತ್ತಿಕೊಂಡು ಫೊಟೋಗಳನ್ನು ಕೊಳ್ಳಿರೆಂದು ದುಂಬಾಲು ಬಿದ್ದರು. ಆಗ ಈ ಹುಡುಗ ನಿಧಾನಕ್ಕೆ ಹೆಜ್ಜೆ ಇಡುತ್ತ ಬಂದವನು, ಇವರೆಲ್ಲರನ್ನು ಕಂಡು, ಸ್ವಲ್ಪ ದೂರದಲ್ಲೇ ನಿಂತ. ಇವನನ್ನು ಕಂಡದ್ದೇ ಮೊದಲು ಬಂದವರೆಲ್ಲರೂ ಜಾಗ ಖಾಲಿ ಮಾಡಿದರು. ನನಗಂತೂ ಆಶ್ಚರ್ಯವಾಯಿತು. "ಹತ್ತು ಹನ್ನೆರಡು ವರ್ಷದ ಈ ಹುಡುಗನಿಗೆ ದಾಂಡಿಗರಂತಿದ್ದ, ವಯಸ್ಸಿನಲ್ಲಿ ಎಷ್ಟೋ ಹಿರಿಯರೂ ಆದವರು ಹೆದರಿ ಹಿಂದೆ ಸರಿದರೇ" ಅನ್ನಿಸಿತು.

ಹುಡುಗ ಮುಂದೆ ಬಂದ. ‘ನಾನು ಬಾಲು, ಬಾಲಕೃಷ್ಣ ಅಂತ. ನಿಮಗೆ ಬೇಕಾದರೆ ನನ್ನಿಂದ ಈ ಫೋಟೋಗಳನ್ನು, ಮಾಹಿತಿ ಪುಸ್ತಕಗಳನ್ನೂ ಕೊಳ್ಳಬಹುದು ಸರ್’ ಎಂದು ಸ್ಫುಟವಾದ ಇಂಗ್ಳೀಷಿನಲ್ಲಿ ಹೇಳಿದ. ಅವನ ವಿನಯಪೂರ್ವಕ, ಕೃತ್ರಿಮತೆಯಿಲ್ಲದ, ಆತ್ಮವಿಶ್ವಾಸದ ಮಾತುಗಳಿಂದಾಗಿಯೇ ಬಹುಶಃ ಎಲ್ಲರೂ ಅವನಿಂದ ಚಿತ್ರಗಳನ್ನು ಮಾಹಿತಿ ಪುಸ್ತಕಗಳನ್ನೂ ಕೊಂಡರೆಂದು ನನಗನ್ನಿಸಿತು.

ಬಾಲು ದೂರ ಹೋದ ನಂತರ ಅಲ್ಲೆ ಹತ್ತಿರದಲ್ಲಿ ಹೊಂಚುಹಾಕುತ್ತಿದ್ದ ಹಿರಿಯನೊಬ್ಬನನ್ನು ಕರೆದು ಕೇಳಿದೆ ‘ಆ ಪುಟ್ಟ ಹುಡುಗ ಬಂದಿದ್ದೇ ತಡ ನೀವೆಲ್ಲ ಯಾಕೆ ಹಿಂದೆ ಸರಿದಿದ್ದು, ನೀವೂ ಪೈಪೋಟಿ ನಡೆಸಬಹುದಿತ್ತಲ್ಲಾ?’

ಆತ ಹೇಳಿದ ‘ಇಲ್ಲಾ ಸರ್, ಬಾಲು ಇದ್ದ ಕಡೆ ಅದು ಸಾಧ್ಯವಿಲ್ಲ. ತುಂಬಾ ನಿಯತ್ತಿನ ಹುಡುಗ, ಎಲ್ಲರ ಹಾಗೆ ಪ್ರವಾಸಿಗರನ್ನು ಸುಲಿಯಲ್ಲ. ಅದ್ರಲ್ಲೂ ಫಾರಿನರ‍್ಸ್ ಹತ್ರ ವ್ಯಾಪಾರ ಮಾಡೋಕೆ ಅವನೇ ಸರಿ. ವಿದೇಶೀಯರ ಮುಂದೆ ನಮ್ಮ ದೇಶದ ಮಾನ ಹರಾಜು ಹಾಕಬಾರ‍್ದು ಅಂತ ಹೇಳ್ತಾನೆ ಇರ‍್ತಾನೆ. ಹಾಗಂತ ನಮ್ಮ ವ್ಯಾಪಾರಕ್ಕೇನೂ ಅವನು ತೊಂದ್ರೆ ಮಾಡಲ್ಲ. ಅವನ ಬಗ್ಗೆ ನಮಗೆಲ್ಲ ಪ್ರೀತಿ ಮತ್ತು ಅಭಿಮಾನ, ಜತೆಗೆ ಸ್ವಲ್ಪ ಭಯ ಕೂಡಾ!’

ಬಾಲು ಬಗ್ಗೆ ಕುತೂಹಲ ಮೂಡಲು ನನಗೆ ಇಷ್ಟೇ ಸಾಕಾಯ್ತು. ಅವತ್ತೆಲ್ಲಾ ಅವನು ಮತ್ತೆ ಸಿಗಲೇ ಇಲ್ಲ. ಇನ್ನೊಂದು ಸಾರಿ ರಂಗನತಿಟ್ಟಿಗೆ ಹೋಗಿದ್ದಾಗ ಕಣ್ಣಿಗೆ ಬಿದ್ದ. ನಮ್ಮ ಪ್ರವಾಸಿಗರನ್ನು ದೋಣಿವಿಹಾರಕ್ಕೆ ಕಳಿಸಿ ನಾನು ಸುಮ್ಮನೆ ಒಂದು ಬೆಂಚಿನ ಮೇಲೆ ಕುಳಿತಿದ್ದೆ. ಅಲ್ಲೆ ಇನ್ನೊಂದು ಬೆಂಚಿನ ಮೇಲೆ ಕೂತಿದ್ದ ಬಾಲುವನ್ನು ಕರೆದೆ. ‘ನಮಸ್ಕಾರ ಸರ್’ ಎಂದು ಮುಗುಳ್ನಗುತ್ತಾ ಬಂದು, ನಾನು ಕುಳಿತಿದ್ದ ಬೆಂಚಿನ ಇನ್ನೊಂದು ಬದಿಯಲ್ಲಿ ಕುಳಿತ. ಸೊಗಸಾದ ಮನಸೆಳೆಯುವ ಮುಗ್ಧ ನಗುವದು.

‘ಹಲೋ, ನಾನು ವಾಸು, ಟೂರ್ ಆರ‍್ಗನೈಸರ್. ಮೈಸೂರು ನನ್ನ ಊರು.’ ನನ್ನ ಪರಿಚಯ ಹೇಳಿಕೊಳ್ಳುತ್ತಾ, ಕೇಳಿದೆ ‘ಬಾಲಕೃಷ್ಣ ಅಲ್ವಾ ನಿನ್ನ ಹೆಸರು? ಸ್ಕೂಲಿಗೆ ಹೋಗ್ತಿದೀಯಲ್ವಾ? ಯಾವ ಕ್ಲಾಸು? ಈ ಥರ ವ್ಯಾಪಾರಕ್ಕೆ ಹೊರಟ್ರೆ ನಿನ್ನ ಓದಿಗೆ ತೊಂದ್ರೆ ಆಗಲ್ವಾ?’ ನನ್ನ ಪ್ರಶ್ನೆಗಳ ಸರಮಾಲೆಯನ್ನು ಕಂಡು ನನಗೇ ಆಶ್ಚರ್ಯವಾಯ್ತು. ಅವನ ಬಗ್ಗೆ ತಿಳಿದುಕೊಳ್ಳೊ ಕುತೂಹಲ, ಪಾಪ ಚಿಕ್ಕ ಹುಡುಗ ಏನು ತೊಂದರೆಯಲ್ಲಿದ್ದಾನೋ ಎಂಬ ಕಳಕಳಿ, ಅವನಂಥ ಚೂಟಿಯಾದ ಹುಡುಗರು ಚೆನ್ನಾಗಿ ಓದಿ ಮುಂದೆ ಬರಬೇಕು ಎಂಬ ಕಾಳಜಿ, ಇವೆಲ್ಲ ನನ್ನ ಪ್ರಶ್ನೆಗಳ ಹಿಂದೆ ಇದ್ದವೇನೋ ಅನ್ನಿಸಿತು. ಅಲ್ದೆ ಸರಿಯಾಗಿ ಪರಿಚಯವೇ ಇಲ್ಲದ ಇವನ ಬಗ್ಗೆ ನನಗೆ ಯಾಕಿಷ್ಟು ಕಕ್ಕುಲಾತಿ ಎಂಬ ಅಲೋಚನೆಯೂ ಬಂತು. ಆದರೆ ಪ್ರಶ್ನೆ ಕೇಳಿಯಾಗಿತ್ತು. ಉತ್ತರದ ನಿರೀಕ್ಷೆಯಲ್ಲಿ ಅವನ ಮುಖವನ್ನೇ ನೋಡುತ್ತ ಕುಳಿತೆ.

ಬಾಲು ಮತ್ತೆ ನಕ್ಕ. ನನ್ನ ಪ್ರಶ್ನೆಗಳನ್ನು ಕೇಳಿ ಅವನಿಗೇನೂ ಆಶ್ಚರ್ಯವಾದಂತೆ ಅನ್ನಿಸಲಿಲ್ಲ. ಹೀಗೆ ಬಹಳಷ್ಟು ಜನ ಕೇಳಿಯೂ ಇರಬಹುದೇನೋ.

‘ಹೌದು ಸರ್, ನನ್ನ ಹೆಸರು ಬಾಲಕೃಷ್ಣ. ಎಲ್ರೂ ಬಾಲು ಅಂತ ಕರೀತಾರೆ, ಆದರೆ ಅಮ್ಮನಿಗೆ ಮಾತ್ರ ನಾನು ಕೃಷ್ಣ. ಸಿಕ್ಸ್ತ್ ಸ್ಟಾಂಡರ‍್ಡ್ ಓದ್ತಾ ಇದೀನಿ. ದಿನಾ ಸಾಯಂಕಾಲದ ಹೊತ್ತು, ರಜಾ ಇದ್ದಾಗ ಮಾತ್ರ ಎರ‍ಡು ಹೊತ್ತು ಇವನ್ನ ಮಾರ‍್ತೀನಿ ಸರ‍್. ಓದೋಕೆ ತೊಂದ್ರೆ ಮಾಡ್ಕೊಳಲ್ಲ, ಮೊದಲಿಂದ್ಲೂ ನಮ್ಮ ಕ್ಲಾಸಿಗೆ ನಾನೇ ಫಸ್ಟು. ಅಮ್ಮ ನಂಗೋಸ್ಕರ ತುಂಬಾ ಕಷ್ಟಪಡ್ತಾಳೆ. ಬೆಳಿಗ್ಗೆ ಐದು ಘಂಟೆಗೆ ಎದ್ರೆ ಮಲಗೋದು ರಾತ್ರಿ ಹನ್ನೊಂದಿಕ್ಕೆ. ನಾನೂ ಸ್ವಲ್ಪ ಸಂಪಾದ್ನೆ ಮಾಡಿದ್ರೆ ಒಳ್ಳೇದಲ್ವಾ ಅನ್ನಿಸಿ ಒಂದು ವರ್ಷದಿಂದ ಈ ಕೆಲ್ಸ ಮಾಡ್ತಿದೀನಿ ಸರ್.’

ನನ್ನ ಮೊದಲ ಪ್ರಶ್ನೆಗಳಿಗೇನೋ ಉತ್ತರ ಸಿಕ್ಕಿತ್ತು. ಆದರೆ ಅವನ ಉತ್ತರದಿಂದ ಮತ್ತಷ್ಟು ಪ್ರಶ್ನೆಗಳು ನನ್ನಲ್ಲಿ ಹುಟ್ಟಿಕೊಂಡವು. ಕೇಳ್ಬೇಕೋ ಬೇಡ್ವೋ, ಕೇಳಬಹುದೇ...

ನಾನು ಸುಮ್ಮನಾದುದನ್ನು ನೋಡಿ ‘ಸಾರಿ ಸರ್, ನೀವು ಕೇಳಿದ್ದಕ್ಕಿಂತ ಹೆಚ್ಚಿಗೆ ಹೇಳಿ ನಿಮಗೆ ಬೇಜಾರು ಮಾಡ್ದೇಂತ ಅನ್ಸುತ್ತೆ. ನಿಮ್ಮನ್ನ ನೋಡ್ದಾಗ ಏನೋ ನಮ್ಮೋರು ಅನ್ನಿಸ್ತು, ಹೇಳ್ಬಿಟ್ಟೆ’ ಕ್ಷಮಾಪಣೆಯ ದನಿಯಲ್ಲಿ ಬಾಲು ಹೇಳ್ದ.

‘ಛೆ , ಛೇ ಹಾಗೇನಿಲ್ಲಪ್ಪಾ. ನಾನು ಬೇರೇನೋ ಯೋಚ್ನೆ ಮಾಡ್ತಿದ್ದೆ’ ಅವನ ಮಾತು ನನ್ನ ದಾರಿಯನ್ನು ಸುಗಮಗೊಳಿಸಿತ್ತು. ನನಗೆ ಅವನಲ್ಲಿ ಮೂಡಿದ ಆತ್ಮೀಯತೆಯಂತೆಯೇ, ಅವನಿಗೂ ನನ್ನ ಬಗ್ಗೆ ವಿಶ್ವಾಸ ಮೂಡಿದ್ದು ಸಂಕೋಚದ ತೆರೆಯನ್ನು ಸರಿಸಿತ್ತು. ‘ಅಲ್ಲಾ ಬಾಲು, ಅಮ್ಮನ ಬಗ್ಗೆ ಮಾತ್ರ ಹೇಳ್ದೆ. ಅಪ್ಪನ ಬಗ್ಗೆ ಏನೂ ಹೇಳ್ಲೇ ಇಲ್ವಲ್ಲ?’ ಕೇಳಿದೆ.

ಬಾಲುವಿನ ಮುಖ ಸ್ವಲ್ಪ ಕಳೆಗುಂದಿತು. ಕ್ಷಣ ಹೊತ್ತು ಬಿಟ್ಟು ಹೇಳಿದ. ‘ಅವರೀಗ ನಮ್ಮ ಜತೆ ಇಲ್ಲ ಸರ್. ನಾನು ಆರು ವರ್ಷದವನಾಗಿದ್ದಾಗ ಒಂದಿವ್ಸ ಮನೆಯಿಂದ ಹೊರಗೆ ಹೋದವರು ಮತ್ತೆ ಬರಲೇ ಇಲ್ವಂತೆ. ಆವಾಗ್ನಿಂದ ನಾನು ಅಮ್ಮ ಇಬ್ಬರೆ. ಅಮ್ಮ ಒಂದು ಪ್ರೈವೇಟ್ ಸ್ಕೂಲಲ್ಲಿ ಟೀಚರ್ ಕೆಲ್ಸ ಮಾಡ್ತಾಳೆ. ಜತೆಗೆ ಮನೇಲೂ ಸಂಜೆ ನಾಲ್ಕರಿಂದ ಏಳರವರೆಗೆ ಕೆಲವು ಮಕ್ಳಿಗೆ ಟ್ಯೂಷನ್ ಹೇಳ್ತಾಳೆ. ಆಗ ಮನೇಲಿದ್ರೂ ನಾನು ಓದ್ಕಳಕ್ಕೆ ಆಗಲ್ಲ, ಮನೆ ಚಿಕ್ದು ನೋಡಿ. ಆವಾಗ ಎಲ್ಲೋ ಕೂತು ಟೈಮ್ ವೇಸ್ಟ್ ಮಾಡೋ ಬದ್ಲು, ಈ ರೀತಿ ಸಂಪಾದ್ನೆ ಮಾಡಣ ಅನ್ನಿಸ್ತು. ನನ್ನ ಸ್ಕೂಲ್ ಫೀಸು ಪುಸ್ತಕ ಇದ್ರಿಂದ ನಡಿಯುತ್ತೆ.’

ಆ ವೇಳೆಗೆ ನಮ್ಮ ಪ್ರವಾಸಿಗರ ಗುಂಪು ವಾಪಸ್ಸು ಬಂದಿತ್ತು. ‘ಭೇಷ್ ಮಗು. ನಿಂಗೆ ಖಂಡಿತಾ ಒಳ್ಳೆ ಭವಿಷ್ಯವಿದೆ. ಮತ್ತೆ ಸಿಗೋಣ. ಅಂದ ಹಾಗೆ ನಿನ್ನ ಅಮ್ಮನ ಹೆಸರೇನಪ್ಪಾ?’

‘ಸರ್, ಯಶೋದ’ ಅನ್ನುತ್ತಾ ಆಗ ತಾನೆ ಬಂದಿದ್ದ ಬಸ್ಸೊಂದರತ್ತ ಬಾಲು ನಡೆದ.

‘ಯಶೋದ’ ತುಂಬಾ ಪರಿಚಿತ ಹೆಸರಲ್ವೇ. ನಾವು ಅಗ್ರಹಾರದಲ್ಲಿದ್ದಾಗ ಅಲ್ಲೇ ಇದ್ದ ಕಡೇಮನೆ ಶಾಸ್ತ್ರಿಗಳ ಮಗಳು, ನಮ್ಮ ಅನ್ನಪೂರ್ಣೆ ಜತೆದೊಂದು ಹುಡುಗಿ ಇತ್ತಲ್ಲಾ, ಅದರ ಹೆಸರೂ ಯಶೋದ ಅಂತ್ಲೆ. ‘ವಾಸಣ್ಣ, ವಾಸಣ್ಣ’ ಅಂತ ಸದಾ ನನ್ನ ಹಿಂದೆ ಮುಂದೆ ಸುತ್ತುತ್ತಾನೆ ಇರೋದು. ನಾವು ಅಗ್ರಹಾರದ ಮನೆ ಬಿಟ್ಟು ಹತ್ತತ್ರ ಮುವ್ವತ್ತು ವರ್ಷವೇ ಆಯ್ತಲ್ಲ. ಆಗ ನಮ್ಮ ಅನ್ನಪೂರ್ಣೆಗೆ ಏಳೋ ಎಂಟೋ ವರ್ಷ, ನಂಗೆ ಹದಿನಾರು. ಆ ಯಶೋದಾನೆ ಈ ಬಾಲು ಅಮ್ಮ ಇರ‍್ಬಹುದೇ? ಅದರಿಂದ್ಲೆ ಬಾಲುವನ್ನು ಕಂಡರೆ ನನಗೆ ಇಷ್ಟೊಂದು ಅಕ್ಕರೆಯೆ? ಮತ್ತೊಮ್ಮೆ ಸಿಕ್ಕಾಗ ಬಾಲುವನ್ನು ಕೇಳಬೇಕು.....

ಅಷ್ಟರಲ್ಲಿ ನಮ್ಮ ವಾಹನ ಶ್ರೀರಂಗಪಟ್ಟಣಕ್ಕೆ ಬಂದಿತ್ತು. ಶ್ರೀರಂಗನ ದರ್ಶನವಾದ ನಂತರ, ‘ಒಂದು ಗಂಟೆ ಟೈಮ್ ಕೊಡ್ತೀನಿ. ಶಾಪಿಂಗ್ ಮಾಡೋರು ಮಾಡಿ, ಇಲ್ಲ ನದಿ ಹತ್ರ ಹೋಗ್ಬರೋರು ಹೋಗ್ಬನ್ನಿ. ಆದ್ರೆ ದಯವಿಟ್ಟು ಯಾರೂ ತಡ ಮಾಡ್ಬೇಡಿ’ ಎಂದು ನಮ್ಮ ಪ್ರವಾಸಿಗರಿಗೆ ಹೇಳಿ ಅಲ್ಲೇ ಅಂಗಡಿಯೊಂದರ ಮುಂದೆ ಒಂದು ಸ್ಟೂಲ್ ಹಾಕಿಕೊಂಡು ಕುಳಿತೆ. ‘ಏಯ್ ವಾಸು ನೀನೇನಿಲ್ಲಿ?’ ಯಾರೋ ಕರೆದಂತಾಯ್ತು.

‘ಅರೆ ಶಾರದಕ್ಕ! ಚೆನ್ನಾಗಿದೀರಾ?’

‘ಹೂಂ ಕಣೋ, ನಿಮ್ಮನೇಲಿ ಎಲ್ಲಾ ಚೆನ್ನಾಗಿದಾರಾ? ಅಮ್ಮ ಹೇಗಿದಾರೆ? ಇದ್ಯಾವಾಗ ಇಲ್ಲಿ ಅಂಗಡಿ ಇಟ್ಯೋ? ನಂಗೆ ಗೊತ್ತೇ ಇಲ್ಲಾ!’

‘ಹೋಲ್ಡಾನ್ ಶಾರದಕ್ಕ. ಮನೇಲಿ ಅಮ್ಮ ಸಮೇತ ಎಲ್ಲ ಚೆನ್ನಾಗಿದಾರೆ. ನಾನು ಟೂರಿಸಂ ಡಿಗ್ರಿ ಮಾಡ್ಕೊಂಡು ಟೂರಿಸ್ಟ್ ಏಜೆನ್ಸಿ ನಡೆಸ್ತಾ ಇದೀನಿ. ನಂದೇ ಸ್ವಂತ ವೆಹಿಕಲ್ ಇದೆ. ಡ್ರೈವರ್ ಇಟ್ಕೊಂಡಿದೀನಿ. ಪ್ರವಾಸಿಗರನ್ನ ಮೈಸೂರು ಸುತ್ತಮುತ್ತ ಇರೋ ಊರುಗಳಿಗೆ ಕರ‍್ಕೊಂಡು ಹೋಗ್ತಾ ಇರ‍್ತೀನಿ, ಹಾಗೆ ಶ್ರೀರಂಗಪಟ್ಣಕ್ಕೂ ಬರ‍್ತಿರ‍್ತೀನಿ.’

‘ಮತ್ತೆ, ನಾನಿಲ್ಲಿದೀನಿ ಅಂತ ಗೊತ್ತಿದ್ದೂ ಯಾಕೋ ಒಂದ್ಸಲಾನು ಮೀಟ್ ಮಾಡ್ಲಿಲ್ಲ?’ ಆಕ್ಷೇಪಿಸುವಂತೆ ಕೇಳಿದರು ಶಾರದಕ್ಕ. ನೆಂಟರಲ್ಲದಿದ್ದರೂ ಒಂದೇ ಬೀದಿಯಲ್ಲಿ ಸುಮಾರು ವರ್ಷ ಇದ್ದಿದ್ರಿಂದ ಮನೆಯವರಿಗಿಂತ ಹೆಚ್ಚು ಸಲಿಗೆ ಅವರಿಗೆ ನನ್ನಲ್ಲಿ. ‘ಶಾರದಕ್ಕಾ, ಬರ‍್ಬಾರ‍್ದೂಂತಲ್ಲ. ಟೂರಿಸ್ಟುಗಳ ಜತೆ ಬಂದಿರ‍್ತೀನಿ ನೋಡಿ, ಸದಾ ಅವರ ಬಗ್ಗೆ ಕೇರ್ ತಗೋಳೋದು, ಗೈಡ್ ಮಾಡೋದು ಇರತ್ತೆ. ಮತ್ತೆ ಅವರ ಜತೇನೆ ವಾಪಸ್ ಹೋಗ್ಬೇಕಲ್ಲ. ಇನ್ನೊಂದ್ಸಲ ನಿಮ್ಮನೆಗೇಂತ್ಲೆ ಬರ‍್ತೀನಿ ಬಿಡಿ.’ ಸಮಜಾಯಿಷಿ ಕೊಟ್ಟೆ.

‘ಸರಿ ಹಾಗೆ ಮಾಡು. ನಾನು ಬರ‍್ಲಾ?’

‘ಶಾರದಕ್ಕ, ಒಂದ್ನಿಮ್ಷ. ನಾವು ಅಗ್ರಹಾರದಲ್ಲಿದ್ವಲ್ಲ. ಅಲ್ಲಿ ಕಡೇಮನೆ ಶಾಸ್ತ್ರಿಗಳು ಇದ್ರು ನೋಡಿ. ಅವರ ಮಗಳು ಯಶೋದ ಅಂತ ಇದ್ಲಲ್ಲಾ, ಜ್ಞಾಪ್ಕ ಇದ್ಯಾ? ನಾವು ಅಗ್ರಹಾರ ಬಿಟ್ಮೇಲೆ ಅವರ ಬಗ್ಗೆ ಏನೂ ಗೊತ್ತೇ ಆಗ್ಲಿಲ್ಲ. ಇಲ್ಲಿ ಬಾಲು ಅನ್ನೋ ಹುಡ್ಗನ ಪರ‍ಿಚಯ ಆಯ್ತು. ಅವನ ಅಮ್ಮನ ಹೆಸರು ಯಶೋದ ಅಂತೆ. ಯಾಕೋ ಆಕೇನೇ ಶಾಸ್ತ್ರಿಗಳ ಮಗ್ಳಿರ‍್ಬೇಕು ಅನ್ನಿಸ್ತಿದೆ. ಆಕೆ ಇಲ್ಲೇ ಟೀಚರ್ ಆಗಿದಾಳಂತೆ. ನೀವೂ ಟೀಚರ್ ಆದ್ರಿಂದ ಗೊತ್ತೇನೋ ಅಂತ ಕೇಳ್ತಿದೀನಿ. ಗೊತ್ತಾ ಶಾರದಕ್ಕ?’

‘ಗೊತ್ತಿಲ್ದೆ ಏನು. ಆ ಶಾಸ್ತ್ರಿಗಳ ಮಗಳು ಯಶೋದಾನೆ ಇವ್ಳು. ನಮ್ಮ ಸ್ಕೂಲಲ್ಲೇ ವರ‍್ಕ್ ಮಾಡ್ತಾಳೆ. ಪಾಪ ಅವಳದ್ದೇ ಒಂದು ಕಥೆ. ಅಂಥಾ ಒಳ್ಳೆ ಮನೇಲಿ ಹುಟ್ಟಿ, ಅಷ್ಟು ಸಂಸ್ಕಾರ ಇರೋ ಹುಡ್ಗೀಗೆ ದೇವ್ರು ಅನ್ಯಾಯ ಮಾಡ್ಬಿಟ್ಟ. ಒಂದೊಂದ್ಸಲ ಅನ್ಸುತ್ತೆ, ಅವಳ ಅತಿ ಒಳ್ಳೇತನಾನೆ ಅವಳಿಗೆ ಮುಳುವಾಯ್ತೇನೋ ಅಂತ’ ಶಾರದಕ್ಕ ಬೇಜಾರು ಮಾಡ್ಕೊಂಡ್ರು.

‘ಅಯ್ಯೋ ನಮ್ ಯಶೋದಾನೆ ಅವ್ಳು? ಅನ್ಯಾಯ ಶಾರದಕ್ಕ. ಇದೆಲ್ಲಾ ಹೇಗಾಯ್ತು?’ ಕಾತರದಿಂದ ಕೇಳ್ದೆ.

‘ಮದ್ವೆ ಆಗಿ ಇಲ್ಲಿಗೆ ಬಂದ್ಮೇಲೆ ಏಳೆಂಟು ವರ್ಷ ಚೆನ್ನಾಗೇ ಸಂಸಾರ ಮಾಡಿದ್ರಪ್ಪ. ಒಂದಿನ ಇದ್ದಕ್ಕಿದ್ದ ಹಾಗೆ ಅವಳ ಗಂಡ ಎಲ್ಲೋ ಹೋದ. ಇವತ್ತು ಬರ‍್ತಾನೆ, ನಾಳೆ ಬರ‍್ತಾನೆ ಅಂತ ಕಾದಿದ್ದೂ ಆಯ್ತು. ಅಮೇಲೆ ಪೇಪರ‍್ನಲ್ಲಿ ಹಾಕ್ಸಿ, ಪೋಲಿಸ್ ಕಂಪ್ಲೇಂಟ್ ಕೂಡಾ ಕೊಟ್ರು. ಏನೂ ಪ್ರಯೋಜನ ಆಗ್ಲಿಲ್ಲ. ಅವನು ಬದ್ಕಿದಾನೋ ಇಲ್ವೋ ಅದೂ ಗೊತ್ತಿಲ್ಲ. ಹಂಗಾಗಿ ಅವನು ಕೆಲ್ಸ ಮಾಡ್ತಿದ್ದ ಶುಗರ್ ಫ್ಯಾಕ್ಟ್ರ‍ಿಯೋರು ಪರಿಹಾರ ಕೊಡೋಕೂ ಆಗ್ಲಿಲ್ಲ, ಅದೆಷ್ಟೋ ವರ್ಷ ಕಳೀಬೇಕಂತಲ್ಲ.

ಈ ಹುಡ್ಗಿ ಮಾತ್ರ ಅವನು ಬದ್ಕಿದಾನೆ ಅಂತ್ಲೆ ಅಂದ್ಕೊಂಡಿದೆ. ಪಾಪ ಆ ಸಣ್ಣ ಮಗೂನ ಕಟ್ಕೊಂಡು ಒದ್ದಾಡುತ್ತೆ. ಮನ್ಯೋರು ಬಂದು ಕರುದ್ರೂ ಹೋಗ್ಲಿಲ್ಲ, ನಾನು ಯಾರಿಗೂ ಹೊರೆ ಆಗ್ಬಾರ‍್ದು ಅಂತ. ತುಂಬಾ ಸ್ವಾಭಿಮಾನಿ. ತಾನು ಬೇರ‍್ಯೋರಿಗೆ ಸಹಾಯ ಮಾಡ್ತಾಳೆ ಹೊರ‍್ತು, ತನ್ನ ಕಷ್ಟ ಇನ್ನೊಬ್ರ ಹತ್ರ ಹೇಳ್ಕಳಲ್ಲ. ತಾನೇ ತೊಂದ್ರೇಲಿದ್ರೂ ಕೆಲವು ಬಡಮಕ್ಕಳಿಗೆ ಫ್ರೀಯಾಗೇ ಪಾಠ ಹೇಳ್ಕೊಡ್ತಾಳೆ. ಮಗನ ಓದಿನ ಕಡೇನೂ ಗಮನ ಹರಿಸ್ತಾಳೆ. ಒಳಗೆ ಲಾವಾರಸ ಕುದೀತಾ ಇದ್ರೂ ಹೊರಗೆ ಏನೂ ಕಾಣದ ಬೆಟ್ಟದ ಹಾಗೆ, ಯಾವಾಗ್ಲೂ ಪ್ರಶಾಂತವಾಗಿರ‍್ತಾಳೆ. ಎಲ್ರ‍ಿಗೂ ಅವಳನ್ನ ಕಂಡ್ರೆ ಅಭಿಮಾನ, ಗೌರವ. ಅದಕ್ಕೆ ತಕ್ಕ ಹಾಗೆ ಆ ಮಗೂನೂ ತುಂಬಾ ಬುದ್ಧಿವಂತ, ಅಜ್ಜಿ-ತಾತನ, ಅಮ್ಮನ ಗುಣಾನೂ ಅದಕ್ಕೆ ಬಂದಿದೆ ಅನ್ಸತ್ತೆ. ಅಯ್ಯೋ, ನಿನ್ನ ಹತ್ರ ಮಾತಾಡ್ತಾ ಟೈಮ್ ಆಗಿದ್ದೇ ಗೊತ್ತಾಗ್ಲಿಲ್ಲ ನೋಡು. ಮನೇಲಿ, ಎಲ್ಲಿ ಹೋದ್ಲೋ ಅಂದ್ಕೋತಾರೆ. ನಾನು ಬರ‍್ತೀನಿ. ಒಂದ್ಸಲ ಮನೆಗೆ ಬಾ, ಹಂಗೆ ಯಶೋದನ್ನೂ ನೋಡ್ಬಹುದು’ ದುಡುದುಡು ಹೆಜ್ಜೆ ಹಾಕುತ್ತಾ ಮನೆಯ ಕಡೆ ನಡೆದರು ಶಾರದಕ್ಕ.

ನಮ್ಮ ಡ್ರೈವರ್ ಹಾರ‍್ನ್ ಮಾಡ್ತಿದ್ದ, ನಾನೂ ವಾಹನವನ್ನೇರಿದೆ. ತಲೆಯ ತುಂಬಾ ಯಶೋದಾಳ ವಿಚಾರಗಳನ್ನು ತುಂಬಿಕೊಂಡು, ಅನ್ಯಮನಸ್ಕನಾಗಿಯೇ ಊರು ಸೇರಿದೆ.

ಮಳೆ ಹಿಡಿದಿದ್ದರಿಂದ ಪ್ರವಾಸಿಗರು ಅಷ್ಟಾಗಿ ಇರಲಿಲ್ಲ. ಒಂದು ಭಾನುವಾರ ಒಬ್ಬನೇ ಶ್ರೀರಂಗಪಟ್ಟಣಕ್ಕೆ ಹೋದೆ. ಶಾರದಕ್ಕನ ಮನೆಗೆ ಹೋಗಿ, ಹಾಗೆ ಯಶೋದಳನ್ನೂ ನೋಡಿ ಬರಬಹುದು ಅಂತ. ಬಸ್ಟಾಂಡಿನಲ್ಲಿ, ನಾನು ಬಸ್ಸು ಇಳಿಯುವುದನ್ನೇ ಕಾಯ್ತಿದ್ದವನ ಹಾಗೆ, ಬಾಲು ಕೂಗಿದ ‘ವಾಸುಮಾಮಾ, ವಾಸುಮಾಮಾ...’ ಇದ್ಯಾರಪ್ಪಾ ಅನ್ನುವಷ್ಟರಲ್ಲಿ ‘ಅಮ್ಮ ಹೇಳಿದಾರೆ ನೀವೊಂದ್ಸಲ ನಮ್ಮನೇಗೆ ಬರ‍್ಬೇಕಂತೆ, ವಾಸುಮಾಮಾ’ ಮತ್ತೆ ಅವಸರದಲ್ಲಿ ಹೇಳಿದ. ಯಾವಾಗ್ಲೂ ‘ಸರ್.. ಸರ್..’ ಅಂತಿದ್ದವನು ವಾಸುಮಾಮಾ ಅಂದಿದ್ದ!

ಕಣ್ಣು ಒದ್ದೆಯಾಯಿತು, ನಮ್ಮ ಪುಟ್ಟ ಯಶುವನ್ನು ಮತ್ತೆ ಭೇಟಿಯಾಗ್ತಿದೀನಿ ಅನ್ನುವ ಭಾವನೆಯಿಂದಲೇ ಪುಳಕಿತಗೊಂಡೆ. ಕೃಷ್ಣ ಚಾಚಿದ ಕೈಯನ್ನು ಹಿಡಿದುಕೊಂಡು ಅವನೊಡನೆ ಹೆಜ್ಜೆ ಹಾಕಿದೆ.

******************************

{ ಮೈಸೂರು ಬ್ಯಾಂಕಿನ ‘ಸಣ್ಣ ಕಥಾಸ್ಪರ್ಧೆ ೨೦೧೦’ ರಲ್ಲಿ ಬಹುಮಾನ ಪಡೆದ ಕಥೆ}
ಕರ್ಮವೀರ ದೀಪಾವಳಿ ವಿಶೇಷಾಂಕ - ೨೦೧೫ ರಲ್ಲಿ ಪ್ರಕಟವಾಗಿದೆ

ಕೆ.ಪಿ.ಸತ್ಯನಾರಾಯಣ
`ತುಷಾರ’, ನಂ.522
ಅಂಚೇಕಛೇರಿ ರಸ್ತೆ
ಹೇಮಾವತಿನಗರ
ಹಾಸನ - 573202


sathyakp57@gmail.com
Mob : 9449248355

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.