ನಾನೊಬ್ಬಳೇ ಹೋಗಬಲ್ಲೆ!

ಹು ಡುಗಿಯರು ಎಷ್ಟೇ ಧೈರ್ಯಶಾಲಿಯಾಗಿರಲಿ, ಆಕೆಗೆ ಕೆಲವೊಂದಿಷ್ಟು ನಿರ್ಬಂಧಗಳು ಇದ್ದೇ ಇರುತ್ತದೆ. ಆಕೆಗೂ ಹಾಗೇ.. ಮನೆಯಲ್ಲಿ ಗಂಡು ಮಗನಗಂತೆ ಬೆಳೆಸಿದ್ದರೂ ಹೊರಗಿನ ಪ್ರಪಂಚಕ್ಕೆ ಆಕೆ ಪಕ್ಕಾ ಹುಡುಗಿಯ ರೀತಿ ಇರಲೇಬೇಕಾಗಿತ್ತು. ತನ್ನ ಓರಗೆಯ ಹುಡುಗರನ್ನು ನೋಡುವಾಗೆಲ್ಲ ಒಳಗೊಳಗೆ ಕೊರಗುತ್ತಿದ್ದ ಆಕೆಗೆ ಅವರಂತೆ ತಾನೂ ಯಾವುದೇ ಭಯ, ಕಟ್ಟುನಿಟ್ಟುಗಳಿಲ್ಲದೆ ಸ್ವಚ್ಛಂದವಾಗಿ ಬದುಕಬೇಕು, ಸಾಧಿಸಬೇಕೆಂಬ ಹಂಬಲವಿತ್ತು. ಹಾಗಂತ, ಆಕೆ ಅದನ್ನು ಮನಸಲ್ಲೇ ಇಟ್ಟುಕೊಂಡು ಕೂರಲಿಲ್ಲ. ಸಾಧಿಸುವ ದಾರಿಯೂ ಹೊಸತೇ ಆಗಿರಬೇಕು, ಮತ್ತು ಅದು ಇನ್ನಷ್ಟು ಯುವತಿಯರಿಗೆ ಪ್ರೇರಕವಾಗಿರಬೇಕು ಎಂದು ಬೈಕ್ ಏರಿ ಹೊರಟ ರೋಷನಿ ಶರ್ಮಾ ಇದೀಗ ಲಿಮ್ಕಾ ರೆಕಾರ್ಡ್‍ನಲ್ಲಿ ಸ್ಥಾನ ಪಡೆದಿದ್ದಾರೆ.. ಏನವರ ಕಥೆ? ಇಲ್ಲಿದೆ ವಿವರ.

ವೃತ್ತಿಯಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದ ರೋಷನಿ ಶರ್ಮಾ ಮೂಲತಃ ಉತ್ತರಪ್ರದೇಶದವರು. ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕೊಂಚ ಸಂಪ್ರದಾಯ ಹೆಚ್ಚಾಗಿರುವ ಕುಟುಂಬದಲ್ಲಿ ಹುಟ್ಟಿದ ಆಕೆಗೆ ಮೊದಲಿನಿಂದಲೂ ಸಾಹಸ ಕ್ರೀಡೆಯೆಂದರೆ ಹುಚ್ಚು. ಹುಡುಗಿಯರಂತೆ ಯೋಚಿಸುವ, ಹುಡುಗರಂತೆ ಕಾರ್ಯರೂಪಕ್ಕೆ ತರುವ ಮನೋಭಾವದ ರೋಷನಿಗೆ ಬೈಕಿಂಗ್‍ನಲ್ಲಿ ಎಲ್ಲಿಲ್ಲದ ಆಸಕ್ತಿ. ಬೇರೆ ಹುಡುಗಿಯರೆಲ್ಲ ಸ್ಕೂಟಿ ಏರಿ ಹೊರಟರೆ ಆಕೆಗೆ ದೊಡ್ಡ ದೊಡ್ಡ ಬೈಕ್ ಮೇಲೆ ಕಣ್ಣು. ತೆಳ್ಳಗೆ, ಬೆಳ್ಳಗೆ, ಮುದ್ದಾಗಿದ್ದ 27 ವರ್ಷದ ರೋಷನಿಯದ್ದು ಮೊದಲಿನಿಂದಲೂ ಕೊಂಚ ಟಾಮ್‍ಬ್ಯಾಯ್ ಕ್ಯಾರೆಕ್ಟರ್. ಆಕೆಯ ಹುಂಬ ಧೈರ್ಯವೇ ಇದೀಗ ಲಿಮ್ಕಾ ರೆಕಾರ್ಡ್ ಸೇರುವಂತೆ ಮಾಡಿದೆ. ರೋಷನಿ ಈಗ ಕನ್ಯಾಕುಮಾರಿಯಿಂದ ಲೆಹ್‍ವರೆಗೆ ಬೈಕ್ ರೈಡ್ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ತಮ್ಮ 16ನೇ ವಯಸ್ಸಿನಲ್ಲಿ ಬೈಕ್ ರೈಡಿಂಗ್ ಆರಂಭಿಸಿದ ರೋಷನಿ ಯುವತಿಯರು ಕೂಡ ಬೈಕಿಂಗ್‍ನಲ್ಲಿ ಕಮ್ಮಿಯಿಲ್ಲ; ಬೈಕ್ ಪುರುಷರಿಗಷ್ಟೇ ಸೀಮಿತವಲ್ಲ ಎಂಬುದನ್ನು ಸಾರಲು ದೇಶಾದ್ಯಂತ ಬೈಕ್‍ನಲ್ಲಿ ಪ್ರವಾಸ ಮಾಡಲು ನಿರ್ಧರಿಸಿದರು. ಒಮ್ಮೆ ಆಕೆಯ ಸ್ನೇಹಿತರೊಂದಿಗೆ ನಾರ್ಥ್ ಇಂಡಿಯಾದಿಂದ ಸೌತ್ ಇಂಡಿಯಾದ ಕಡೆಗೆ ಬೈಕಿಂಗ್ ಮಾಡೋಣ ಎಂದು ಹೇಳಿದಾಗ ಆಕೆಯ ಕನಸಿಗೆ ಮತ್ತಷ್ಟು ಜೀವ ಬಂದಿತು. ಗೆಳೆಯರೊಂದಿಗೆ ಯಾಕೆ? ತಾನೊಬ್ಬಳೇ ಬೈಕಿಂಗ್ ಮಾಡಿ ಯುವತಿಯರನ್ನು ಉತ್ತೇಜಿಸಬೇಕು ಎಂದು ನಿರ್ಧರಿಸಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬೈಕ್ ರೈಡ್ ಹೋಗಲು ನಿರ್ಧರಿಸಿದರು.

12 ರಾಜ್ಯ , 4,100 ಕಿ . ಮೀ !:

ಸಾಕಷ್ಟು ಬಾರಿ ಬೆಂಗಳೂರಿನಿಂದ ತಮಿಳುನಾಡು, ಕೇರಳ ಮುಂತಾದ ದಕ್ಷಿಣಭಾರತದ ಪ್ರವಾಸಿ ಸ್ಥಳಗಳಿಗೆ ಬೈಕಿಂಗ್ ನಡೆಸಿದ್ದ ರೋಷನಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 12 ದಿನಗಳ ಒಟ್ಟು 4,100 ಕಿ.ಮೀ. ಪ್ರವಾಸ ಕೈಗೊಂಡಾಗ ಅಲ್ಲಿನ ವಾತಾವರಣ, ತನ್ನ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಬೇಕಾಗಿತ್ತು. ಅದಕ್ಕೆಂದೇ ಸ್ನೇಹಿತರ ಸಹಾಯ ಪಡೆದು, ಒಂದು ವಾರದ ಕಾಲ ಗೂಗಲ್‍ನಲ್ಲಿ ಸರ್ಚ್ ಮಾಡಿದ ಬಳಿಕ ಮೇ ತಿಂಗಳಾಂತ್ಯದಲ್ಲಿ ಬೈಕಿಂಗ್ ನಡೆಸಲು ಯೋಚಿಸಿದರು. ಜೂನ್‍ನಲ್ಲೂ ಕೇರಳದಲ್ಲಿ ಮಳೆ ಆಗುವುದರಿಂದ ತನ್ನ ಮಾರ್ಗಕ್ಕೆ ಅಡ್ಡಿಯಾಗಬಹುದಾದ ರಾಜ್ಯಗಳನ್ನು ತಪ್ಪಿಸಿ ಆಕೆ ಬೈಕ್ ರೈಡ್ ಮಾಡಬೇಕಿತ್ತು. ಇದರ ಜತೆಗೆ 12 ದಿನಗಳ ಪ್ರಯಾಣದಲ್ಲಿ ಉಳಿದುಕೊಳ್ಳಲು ಸುರಕ್ಷಿತವಾದ ನೆಲೆ ಬೇಕಾಗಿತ್ತು. ಅದಕ್ಕಾಗಿ ಅಲ್ಲಿನ ಸ್ಥಳೀಯರ ಸಹಾಯ ಪಡೆದು ಮುಂದೆ ಸಾಗಬೇಕಾಯಿತು.

ದಾರಿಯಲ್ಲಿ ಹೋಗುವಾಗ ಸಾಕಷ್ಟು ಕಡೆ ದಟ್ಟ ಅರಣ್ಯದ ಹಾದಿ ಇರುವುದರಿಂದ ಸಹಾಯಕ್ಕೆ ಬೇಕಾಗುತ್ತದೆ ಎಂದು ಪೆಪ್ಪರ್ ಸ್ಪ್ರೇ, ಚಾಕು ಮುಂತಾದ ಅಗತ್ಯ ವಸ್ತುಗಳನ್ನು ಇಟ್ಟುಕೊಂಡಿದ್ದ ರೋಷನಿಗಿಂತ ಹೆಚ್ಚು ಭಯಭೀತರಾಗಿದ್ದವರು ಆಕೆಯ ಕುಟುಂಬದವರು ಹಲವೆಡೆ ನೆಟ್‍ವರ್ಕ್ ಇಲ್ಲದೆ ಪರದಾಡಿದ ಘಟನೆಯೂ ಇದೆಯಂತೆ. ಹಾಗೇ, ಸಂಜೆ ಹೊತ್ತಿಗೆ ದಟ್ಟ ಅರಣ್ಯದ ಹಾದಿ ಹೊಕ್ಕು, ಭಯದಿಂದ ಅತ್ತಿದ್ದೂ ಇದೆಯಂತೆ. ಅಷ್ಟಾದರೂ ನದಿ, ಕಾಲುವೆ, ಗುಡ್ಡಗಾಡು, ಬಿರುಬಿಸಿಲಿನ ದುರ್ಗಮ ಹಾದಿ ಸವೆಸಿ ಗುರಿ ಮುಟ್ಟಿ ಬಂದಿದ್ದಾರೆ ರೋಷನಿ.ಬುಲೆಟ್ ಬೈಕ್‍ನಲ್ಲಿ, ಹಿಂದೊಂದು ದೊಡ್ಡ ಬ್ಯಾಗ್ ಕಟ್ಟಿಕೊಂಡು ಹೋಗುತ್ತಿದ್ದ ಈ ಚೆಲುವೆಯನ್ನು ನೋಡಿ ಹಳ್ಳಿಯ ಅನೇಕರು ಹುಬ್ಬೇರಿಸಿ, ವಿಚಾರಿಸಿ, ಆಕೆಯ ಬೈಕಿಂಗ್ ವಿಷಯ ತಿಳಿದು ಉಪಚರಿಸಿ ಕಳಿಸಿಕೊಟ್ಟಿದ್ದೂ ಇದೆಯಂತೆ.

ಬೈಕಿಂಗ್ ಆತ್ಮವಿಶ್ವಾಸದ ಸಂಕೇತ :

ಕನ್ಯಾಕುಮಾರಿಯಿಂದ ಹೊರಟು, ಬೆಂಗಳೂರು- ಹೈದರಾಬಾದ್-ನಾಗಪುರ್-ಜಾನ್ಸಿ-ಆಗ್ರಾ- ದೆಹಲಿ- ಮನಾಲಿ ಮೂಲಕ ಕಾಶ್ಮೀರದ ತಪ್ಪಲಿನವರೆಗೆ ಹೋಗಿ ಗುರಿ ಮುಟ್ಟಿ ಬಂದಿದ್ದಾರೆ ರೋಷನಿ. 12 ದಿನಗಳಲ್ಲಿ 12 ರಾಜ್ಯಗಳ ಜನರನ್ನು ನೋಡಿ, ಮಾತನಾಡಿಸಿರುವ ರೋಷನಿಗೆ ಮಹಿಳೆಯೊಬ್ಬಳು ಏಕಾಂಗಿಯಾಗಿ ಪಯಣಿಸುವಾಗ ಯಾವೆಲ್ಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ಅನುಭವವೂ ಆಗಿದೆಯಂತೆ. ಆದರೂ, ಪುರುಷರಂತೆ ಮಹಿಳೆಯೂ ಏಕಾಂಗಿಯಾಗಿ ಎಲ್ಲಿ ಬೇಕಾದರಲ್ಲಿ ಹೋಗಬಹುದು ಎಂಬುದನ್ನು ಸಾಬೀತುಪಡಿಸಿರುವ ಬಗ್ಗೆ ಹೆಮ್ಮೆಯಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದಕ್ಕೂ ಮೊದಲು ಸುಮಾರು 7-8 ತಿಂಗಳು ತಾಲೀಮು ನಡೆಸಿದ್ದ ಅವರು ಬೈಕಿಂಗ್ ಕೇವಲ ಪ್ಯಾಷನ್ ಅಲ್ಲ. ಬದಲಾಗಿ ಅದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಹೆಣ್ಣುಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಅತ್ಯಂತ ದುರ್ಗಮ ಮತ್ತು ಲಾಂಗ್‍ರೂಟ್‍ನಲ್ಲಿ ಬೈಕಿಂಗ್ ಮಾಡಿದ್ದೇನೆ ಎನ್ನುತ್ತಾರೆ ರೋಷನಿ.

ಹೆಣ್ಣುಮಕ್ಕಳು ರಾತ್ರಿಯಾಗುವುದರೊಳಗೆ ಮನೆ ಸೇರಬೇಕು, ಜೊತೆಗೆ ಬೇರೆಯವರಿಲ್ಲದೆ ಏಕಾಂಗಿಯಾಗಿ ಎಲ್ಲೂ ಹೋಗಬಾರದು ಎಂಬೆಲ್ಲ ಕಟ್ಟುಪಾಡನ್ನು ದಾಟಿ 12 ಹಗಲು, 13 ರಾತ್ರಿಗಳನ್ನು ಏಕಾಂಗಿಯಾಗಿ ಕಂಡು ಕೇಳರಿಯದ ಜನರ ನಡುವೆ ಕಳೆದು, ಜೀವನಪಾಠ ಕಲಿತಿರುವ ರೋಷನಿ ಸ್ವಲ್ಪ ಯುವತಿಯರಿಗಾದರೂ ಮಾದರಿಯಾದಾರು. ಅವರ ಈ ಜರ್ನಿ ಕೆಲವರಲ್ಲಾದರೂ ಸ್ಫೂರ್ತಿ ತುಂಬೀತು.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.