ಕಾಗದದ ಹೂವು ಕಾಗದದ ದುಂಬಿ

ನಾನು ಶ್ರೀರಾಮ ಚಂದ್ರ ಆಗಬಲ್ಲೆ, ನಿನ್ನಲ್ಲಿ ಸೀತೆ ಆಗೋ ಶಕ್ತಿ ಇದ್ಯಾ? ಸರಳವಾದದ್ದೇ ಪ್ರಶ್ನೆ ಕೇಳಿದ್ದಾ ಅವನು ಅಂದು. ಆದರೆ ನನ್ನ ನಾಲಿಗೆಗೆ ಹೌದು ಎನ್ನೋವಷ್ಟು ಧೈರ್ಯ ಬರಲಿಲ್ಲ. ಹೌದು ಅಂದಿದ್ರೆ ಬಹುಶಃ ಅದು ನನ್ನ ಆಂತರ್ಯಕ್ಕೆ ಮೋಸವಾಗ್ತಿತ್ತೇನೋ! ಆದರೆ ನನ್ನ ಮದುವೆ ಮುರಿದು ಬಿಳ್ತಿರಲಿಲ್ಲ. ಅಂದು ಅವನಿಗೆ ಎಲ್ಲಾ ತಿಳಿದಿತ್ತು. ನೀರು ತುಂಬಿದ ಕಣ್ಗಳು, ಭಾವಗಳು ಸೀದು ಕರಕಲಾದಂತಹ ನಿರ್ಲಪ್ತ ಮುಖ, ನನ್ನೆದುರು ಮಂಡಿಯೂರಿ ನನ್ನ ಕೈ ಹಿಡಿದು, ನಾನೂ ಗಂಡಸು ಎಂಬ ಅಹಂಕಾರವನ್ನೂ ಬಿಟ್ಟು ಚಿಕ್ಕ ಮಗುವಿನಂತೆ ಕುಳಿತಿದ್ದ. ತಪ್ಪು ನನ್ನದಿತ್ತು ಆದರೆ ಮಂಡಿಯೂರಿದ್ದು ಅವನು. ಬಹುಶಃ ಸಂಬಂಧಗಳಿಗೆ ಅವನಿಟ್ಟಿದ್ದ ಮೌಲ್ಯ ನನಗಂದು ತಿಳಿಯಲಿಲ್ಲ.

ಕೈಯನ್ನ ಹಿಡಿದು ಸಣ್ಣದಾಗಿ ಚಿವುಟಿ ನೋವಾಯ್ತಾ ಅಂದ! ನಾನು ಮೌನದಲ್ಲೆ ತಲೆಯಾಡಿಸಿದೆ. ಮತ್ತೆರಡು ನಿಮಿಷ ಬರೀ ಮೌನ, ನೀರು ತುಂಬಿದ ಕಣ್ಣುಗಳಲ್ಲಿ ನನ್ನನ್ನಾ ಹಾಗೆ ದಿಟ್ಟಸ್ತಾ ಇದ್ದ. ಆ ಪ್ರತಿಯೊಂದು ನೋಟವು ನನ್ನನ್ನ ಪಾಪಪ್ರಜ್ಞೆಯಿಂದ ಕೊಲ್ಲಬೇಕಾಗಿತ್ತು. ಆದರೆ ಪ್ರಜ್ಞೆಯೇ ಇಲ್ಲದವರಿಗೆ ಪಾಪಪ್ರಜ್ಞೆಯೆಲ್ಲಿ. ಇನ್ನೂ ನೋವಾಗ್ತಾ ಇದ್ಯಾ? ಕೈಯನ್ನ ಹಿತವಾಗಿ ಸವರಿ ಕೇಳ್ದ. ನಾನು ಇಲ್ಲಾ ಅಂದೆ. ಅವ ಮುಂದುವರೆದ-

'ಈ ಮನುಷ್ಯನ ದೇಹದ ಮೂಳೆ, ಚರ್ಮ ಯಾವದಕ್ಕೂ ನೆನಪು ಅನ್ನೋದಿಲ್ಲ. ಸುಖವಾಗ್ಲಿ, ನೋವಾಗ್ಲಿ ಕ್ಷಣಿಕ ಅಷ್ಟೆ, ಕೆಲ ಕ್ಷಣಗಳ ನಂತರ ಅದು ಮರೆತು ಬಿಡುತ್ತೆ. ಹಾಗೆ ನೀನು ಅವನ ದೇಹದ ಜೊತೆ ಸುಖಿಸಿದ ಯಾವುದೇ ಸುಖಾನೂ ನಿನ್ನ ಈ ಬಿಸಿ ದೇಹದ ಹಸಿ ಚರ್ಮಗಳಿಗೆ ನೆನಪಲಿರೋಲ್ಲ. ದೈಹಿಕವಾದದರ ಬಗ್ಗೆ ನನಗೆ ಬೇಸರವಿಲ್ಲಾ, ಆದರೆ ನಿನ್ನ ಮನಸ್ಸಿನ ಕೋಣೆಯೊಳಗಿರೊ ಅವನನ್ನ ಕಿತ್ತುಹಾಕಿ, ನನಗೆ ನಾಲ್ಕಿಂಚಿನ ಜಾಗ, ಒಂದು ಭೊಗಸೆಯಷ್ಟು ಹಿಡಿ ಪ್ರೀತಿ ಮತ್ತೆ ಸಿಗುತ್ತಾ? '

ತಪ್ಪು ಮಾಡಿದ್ದು ನಾನು, ಅಂಗಲಾಚಿದ್ದು ಅವನು. ಅಂದು ನನಗೆ ಇದಾವದರ ಪ್ರಾಮುಖ್ಯತೆ ಅರ್ಥವಾಗಲಿಲ್ಲ. ಪಾಪಪ್ರಜ್ಞೆಯಿಲ್ಲದ ಮನುಷ್ಯ ಮೃಗಕ್ಕೆ ಸಮ. ನನ್ನನ್ನ ದೈಹಿಕವಾಗಿ ತೃಪ್ತಿಪಡಿಸಲಾಗದ ಪಾಪಪ್ರಜ್ಞೆಯಿಂದ ಅವನು ತಪ್ಪು ನನ್ನದಿದ್ದರೂ ಅಂಗಲಾಚುತ್ತಿರಬೇಕೆಂದು ನನ್ನಲ್ಲೊಂದು ಅಹಂಕಾರದ ಭಾವ ಹಾಗೆಯೇ ಉಳಿದುಬಿಟ್ಟಿತ್ತು. ಹೆಣ್ಣಿಗೆ ಅಂದ ಶಾಪ. ಅಂದವಾದ ಹೆಣ್ಣು ತನ್ನ ವ್ಯಕ್ತಿತ್ವ, ಅಸ್ತಿತ್ವ ಎಲ್ಲವನ್ನ ಅಂದದ ಮೇಲೆಯೆ ಕಟ್ಟುತ್ತಾ ಹೊಗ್ತಾಳೆ. ವಯಸ್ಸಲ್ಲಿ ಪ್ರಪಂಚ ಅದನ್ನ ಪುರಸ್ಕರಿಸುತ್ತೆ ಕೂಡಾ. ಅಂದದ ಹೊರತಾಗಿ ಅವಳು ವ್ಯಕ್ತಿತ್ವವಿಲ್ಲದ ಒಂದು ಅಸ್ತಿಪಂಜರವಷ್ಟೆ.

ಈ ಗಂಡು ಹೆಣ್ಣಿನ ನಡುವಿನ ದೈಹಿಕ ಸುಖವೆಂಬುದು ಸಂಪೂರ್ಣ ಮನೋಗ್ರಾಹ್ಯ. ಆದರೆ ಈ ಪ್ರಾಪಂಚಿಕ ಹಾವ ಭಾವ, ಕಥೆಗಳಲ್ಲಿ ಬರುವಂತಹ ಅತಿಶಯೋಕ್ತ ಪ್ರಣಯ ಪ್ರಸಂಗಗಳು, ಮನಸ್ಸಿನ ಮೂಲೆಯಲ್ಲೆಲ್ಲೋ ದೈಹಿಕ ಸುಖದ ಪರಿಕಲ್ಪನೆಯನ್ನ ವಾಸ್ತವಕ್ಕಿಂತ ಹೆಚ್ಚಾಗಿಯೇ ನಿರೀಕ್ಷಿಸುವಂತೆ ಕಟ್ಟಿಕೊಟ್ಟು ಬಿಡುತ್ತವೆ. ಸೌಂದರ್ಯದ ಮತ್ತು ತಲೆಗೇರಿದ್ದ ವಯಸ್ಸಲ್ಲಿ ಇವನನ್ನ ಮದವೆಯಾದೆ. ಮೊದಲಿನಿಂದ್ಲೂ ಇವ ನನ್ನ ಚಂದಕ್ಕೆ ಕಮ್ಮಿ ಎಂಬ ಸಣ್ಣ ಭಾವ ಮನಸ್ಸಿನ ಮೂಲೆಯಲ್ಲಿತ್ತು. ಭಾವನೆಗಳು ಬೆಳೆದು ಸಂಬಂಧ ಗಟ್ಟಿಯಾಗುವ ಮೊದಲೇ ನನ್ನ ನಿರೀಕ್ಷೆಗಳ ಶಿಖರದ ಪಾದವನ್ನೂ ತಲುಪದ ನನ್ನ ಗಂಡನಮೇಲೆ ಅತೃಪ್ತಿ ಭುಗಿಲೆದ್ದಿತ್ತು. ಅತೃಪ್ತ ಹೆಣ್ಣಿಗೆ, ಅದರಲ್ಲೂ ಮಾದಕತೆ ತುಟಿಯಂಚಿನಲ್ಲಿರುವ ಹೆಣ್ಣಿಗೆ ಕಾಮವನ್ನ ಹುಡುಕಿ ಹೋಗುವ ಅವಶ್ಯಕತೆಯಿಲ್ಲ. ಇಲ್ಲಿ ಸಿಗದ್ದನ್ನು ಮತ್ತೇಲ್ಲೋ ಹುಡುಕಿ ಹೊರಟೆ. ಆಧುನಿಕ ಹೆಣ್ಣಿಗೆ ವಿಚ್ಛೆದನವೊಂದು ಸಮಸ್ಯೆಯೆ ಅಲ್ಲವೆಂಬ ಭಾವದಲ್ಲಿದ್ದೆ. ಕೈಹಿಡಿದು ಅಂಗಲಾಚಿದ್ದವನ ಕೈಬಿಟ್ಟು ಹೊರನಡೆದಿದ್ದೆ ಅಂದು. ಕಾಮ ಕೇವಲ ದೈಹಿಕವಲ್ಲ ಎಂದು ಅರಿಯುವಷ್ಟರಲ್ಲಿ ಸಂಬಂಧಗಳು ಸತ್ತುಹೋಗಿದ್ದವು.

ವಯಸ್ಸು ಮೀರಿ ಮುಖದ ಮಾದಕತೆ ನೆರಿಗೆಗಳಲ್ಲಿ ಮಾಸಿ ಹೋಗಿ, ಮೋದಲಿನಂತೆಯೇ ಕನ್ನಡಿಯ ಮುಂದೆ ನಿಂತು ನನ್ನ ವ್ಯಕ್ತಿತ್ವವನ್ನ ಹುಡುಕಿದಾಗ ಕಾಣುತ್ತಿರುವುದು ಬರೀ ಅಸ್ತಿಪಂಜರ. ಮಾನಸಿಕವಾಗಿ ಬೆಳೆವ ವ್ಯಕ್ತಿತ್ವಕ್ಕೆ ಹೆಣ್ಣು ಗಂಡೆಂಬ ವ್ಯತ್ತಾಸವಿಲ್ಲ. ದೈಹಿಕ ಅಸ್ತಿತ್ವ ಕಾಲದ ಜೊತೆ ಬದಲಾಗಬಹುದು, ಆದರೆ ಮಾನಸಿಕ ಅಸ್ತಿತ್ವ ಕಾಲದ ಪರಿಧಿಯನ್ನ ಮೀರಿದ್ದು. ಮಹಿಳೆ ಪುರು‍ಷನಾಗ ಹೊರಟರೆ ಅವಳು ಸೋಲ್ತಾಳೆ. ಕೇವಲ ದೈಹಿಕವಾಗಿ ಮಹಿಳೆಯಾಗಿ ಉಳಿದ್ರೂ ಸೋಲ್ತಾಳೆ. ಹೆಣ್ತನವನ್ನ ಅಪ್ಪಿಕೊಂಡು ಹೆಣ್ತನದ ಹೊರತಾಗಿ ಅಸ್ತಿತ್ವವನ್ನ ಅರೆಸಿ ವ್ಯಕ್ತಿಯಾಗ ಹೊದ್ರೆ ಮಾತ್ರ ಗೆಲ್ತಾಳೆ. ನನ್ನ ಈಗಿನ ಪರಿಸ್ತಿತಿ ಅಸ್ತಿತ್ವವಿಲ್ಲದ ಕಾಗದದ ಹೂವಿನಂತೆ. ದುಂಬಿ ಸಖ್ಯ ಮನಸ್ಸಿಗೆ ಬಂದರೂ ಕಾಗದದ ಹೂವನ್ನ ಅರಸಿ ಯಾವ ದುಂಬಿಯೂ ಬರಲಾರರು . ಹೂವಿನ ಅಸ್ತಿತ್ವದ ಪಾಲಲ್ಲಿ ದುಂಬಿಯದೂ ಸಣ್ಣ ಪಾತ್ರವಿದೆ. ಆದರೆ ಕಾಗದದ ಹೂವಿಗೆ ಅಸ್ತಿತ್ವದ ಭಾವ ತುಂಬಲು ಕಾಗದದ ದುಂಬಿಗೇ ಅಸ್ತಿತ್ವವಿಲ್ಲ.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.