ಒಂದು ಹಕ್ಕಿಯ ಕಥೆ

ಭಾಗ ಒಂದು

***************

ಅಂದು ಆಫೀಸ್ ನಿಂದ ಕೆಲಸ ಮುಗಿಸಿ ಮನೆಗೆ ಬಂದಾಗ ರಾತ್ರಿ ಹತ್ತು ಗಂಟೆಯಾಗಿತ್ತು . ಸೋಫಾ ಮೇಲೆ ರೂಪಿ ಕುಳಿತುಕೊಂಡೇ ನಿದ್ದೆ ಮಾಡುತ್ತಿದ್ದಳು. ಬಹಳ ಸಮಯ ಕಾದಿರಬೇಕು ಮುದ್ದು ಉಕ್ಕಿ ಬಂದು ಮೆಲ್ಲನೆ ಮುದ್ದಿಸಿದೆ. ಕನವರಿಕೆಯಲ್ಲಿ ಪಪ್ಪಾ ಎಂದು ಕುತ್ತಿಗೆಗೆ ಜೋತು ಬಿದ್ದಳು. ಬಲವಂತದಿಂದ ಊಟ ಮಾಡಿಸಿ ರೂಮ್ನಲ್ಲಿ ಮಲಗಿಸಿದೆ . ವಸು ನಮ್ಮನ್ನು ಅಗಲಿ ಆಗಲೇ ೧೦ ವರ್ಷಗಳಾಯಿತೆ ಎನ್ನಿಸಿತು . ಹೌದು ರೂಪಿ ಹುಟ್ಟುವಾಗಲೇ ತಾಯಿಯನ್ನು ಕಳೆದುಕೊಂಡ ನತದ್ರುಷ್ಟೆ . ಅಂದಿನಿಂದ ನಾನೇ ಅವಳಿಗೆ ತಂದೆ ತಾಯಿ ಎಲ್ಲವೂ .

ಬೆಳಗ್ಗೆ ಬೇಗನೆ ಎದ್ದು ಹತ್ತಿರದ ಪಾರ್ಕ್ನಲ್ಲಿ ೧ ಗಂಟೆ ನಡೆದಾಡುವುದು ನನ್ನ ಬಹುದಿನದ ದಿನಚರಿ . ಮನೆಗೆ ಬಂದು ಮುಖಕ್ಕೆ ನೀರೆರೆಚಿಕೊಂಡು ಕನ್ನಡಿಯತ್ತ ನೋಡಿದೆ . ನಿಜ ಪ್ರದೀಪ್ ಹೇಳುವುದು . ೪೫ರ ವಯಸಿನಲ್ಲೇ ಮುಖದಲ್ಲಿ ತಾರುಣ್ಯ ಕರಗಿದೆ . ವಯಸ್ಸು ಆಗಲೇ ಮುಖದ ಮೇಲೆ ದಾಳಿ ಮಾಡಿದೆ . ಅಲ್ಲಲ್ಲಿ ಬಿಳಿಕೂದಲು ಎದ್ದು ಕಾಣುತ್ತಿದೆ ." ಸಾರ್ , ನೀವೇಕೆ ಸನ್ಯಾಸಿ ತರ ಇದ್ದೀರ ? ನನ್ನ ಜೊತೆ ಒಮ್ಮೆ ರತ್ನಕ್ಕನ ಮನೆಗೆ ಬನ್ನಿ ಹೊಸ ಹೊಸ ಹಕ್ಕಿಗಳು " ಅವನ ಮಾತು ಮುಗಿಯುವ ಮುನ್ನವೇ ಅವನನ್ನು ಸುಮ್ಮನಾಗಿಸಿದ್ದೆ. ಪ್ರದೀಪ್ ರಸಿಕ , ಮಾತುಗಾರ , ನನಗಿಂತ ೧೦-೧೨ ವರ್ಷ ಚಿಕ್ಕವನು . ನನ್ನ ಕಂಪನಿಯಲ್ಲಿ ಮಾನೇಜರ್ ಆಗಿ ಸೇರಿಕೊಂಡ ಮೇಲೆ ತುಂಬಾ ಗೆಳೆಯನಾಗಿಬಿಟ್ಟ .
ಅಂದು ಕಂಪನಿಯಲ್ಲಿ ದೊಡ್ಡ ಪಾರ್ಟಿ . ಹೆಚ್ಚಿನ ಲಾಭ ಗಳಿಸಿ "ವಸುಧಾ ಗಾರ್ಮೆಂಟ್ಸ್" ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರು ಮಾಡಿದೆ . ರಾತ್ರಿ ಪ್ರದೀಪ್ ಜೊತೆ ಸ್ವಲ್ಪ ಡ್ರಿಂಕ್ಸ್ ಹೆಚ್ಚಾಯಿತು ಅನ್ನಿಸತ್ತೆ . ಮಾತು ಎಲ್ಲೆಲ್ಲೊ ಹೊರಳಿ ಮತ್ತೆ ರತ್ನಕ್ಕನ ಮನೆಯ ಮೋಜಿನ ಬಗ್ಗೆ ಪ್ರದೀಪ್ ರಸವತ್ತಾಗಿ ವರ್ಣಿಸುತ್ತಿದ್ದ . ವಸು ಅಗಲಿದ ಮೇಲೆ ಜೀವನದಲ್ಲಿ ವಿರಕ್ತಿ ಮೂಡಿತ್ತು . ಇನ್ನೊಂದು ಮದುವೆಗೆ ಮನಸ್ಸು ಒಪ್ಪಲಿಲ್ಲ . ಒಮ್ಮೊಮ್ಮೆ ಹೆಣ್ಣಿ ಸಂಗ ಬೇಕು ಎನ್ನಿಸಿದರೂ ಮತ್ತೆ ಮನಸ್ಸು ಬದಲಾಯಿಸಿ ಕೆಲಸದತ್ತ ಸಾಗುತ್ತಿದ್ದೆ . ರೂಪಿ ನನ್ನ ಜೀವನದ ಏಕೈಕ ಗುರಿಯಾಗಿದ್ದಳು .

ಪ್ರದೀಪ್ ಬಲವಂತದಿಂದ ನನ್ನನ್ನು ರತ್ನಕ್ಕಳ ಮನೆಗೆ ಕರೆದುಕೊಂಡು ಹೋದ. ಅದು ಬೆಲೆವೆಣ್ಣುಗಳ ಬೆಡಗಿನ ಪ್ರಪಂಚ ಎಂದು ಗೊತ್ತಿತ್ತು. ಆದರೆ ಎಂದೂ ಅಂತಹ ಸ್ತಳಗಳಿಗೆ ಹೋಗುವುದು ಘನತೆಗೆ ಕುಂದು ಎನ್ನಿಸುತ್ತಿತ್ತು. ದೊಡ್ಡ ಹಜಾರ. ಅಲ್ಲಲ್ಲಿ ಅರೆನಗ್ನ ಹೆಣ್ಣುಗಳು ಚಿತ್ರಪಟಗಳು. ಪ್ರದೀಪ್ "ರತ್ನಕ್ಕ ನಮ್ಮ ಬಾಸ್'ಗೆ ಒಳ್ಳೆ ಹಕ್ಕಿ ತೋರಿಸು" ಎಂದು ಹೇಳಿ “ಏನು ಹೆದರಬೇಡಿ ಸರ್, ಇದು ಮನೆಯಂತೆ ತುಂಬಾ ಸುರಕ್ಷಿತ" ಹೇಳಿ ಹೊರಟುಹೋದ .

"ಒಳ್ಳೆ ರಸಪೂರಿ ಹುಡುಗಿ ನಮ್ಮ ಹೇಮಾ! ಒಮ್ಮೆ ಬಂದರೆ ಮತ್ತೆ ಮತ್ತೆ ಬರ್ತೀರಾ ನೀವು!!" ರತ್ನಕ್ಕನನ್ನು ಯಾವುದೋ ಮೋಡಿಗೆ ಸಿಕ್ಕವನಂತೆ ಹಿಂಬಾಲಿಸಿದೆ. ಒಂದು ಕೋಣೆಯಲ್ಲಿ ನನ್ನ ಬಿಟ್ಟು ಒಂದು ತರಹ ನಕ್ಕು ರತ್ನಕ್ಕ ಹೊರಟು ಹೋದಳು.

ಮಂದ ಬೆಳಕಿನ ಈ ಕೋಣೆಯ ಮೂಲೆಯಲ್ಲಿ ಆ ಹುಡುಗಿ ಕುಳಿತಿದ್ದಳು. ಸುತ್ತಲೂ ಪುಸ್ತಕಗಳ ರಾಶಿ. ನನ್ನ ಕಂಡೊಡನೆ ನನ್ನ ಬಳಿಬಂದು ಸೆರಗನ್ನು ಜಾರಿಸುತ್ತಾ ಸರ್ ಬೇಗ ಮುಗಿಸಿ ನನಗೆ ಓದುವುದಿದೆ" ಎಂದು ತಬ್ಬಿಕೊಂಡಳು. "ಏನು ಓದಬೇಕು" ನನ್ನ ಪ್ರಶ್ನೆಗೆ "ನಾಳೆ ನನ್ನ ಸೈನ್ಸ್ ಪರೀಕ್ಷೆ ತುಂಬಾ ಓದಬೇಕು" ನನ್ನ ಕುಡಿತದ ಅಮಲು ಒಮ್ಮೆಲೇ ಇಳಿದಂತಾಯಿತು.

ಸುಂದರ ಮುಗ್ದ ಮುಖ. ಅವಳನ್ನು ಮೆಲ್ಲಗೆ ದೂರಸರಿಸಿದೆ. ಅವಳಿಗೆ ತುಂಬಾ ಆಶ್ಚರ್ಯವಾಗಿರಬೇಕು. "ಹೋಗು ನೀ ಓದಿಕೂ" ನನ್ನನ್ನು ತುಂಬಾ ವಿಚಿತ್ರವಾಗಿ ನೋಡಿದಳು.

ಅಲ್ಲಿಯೇ ಸೋಫಾ ಮೇಲೆ ಕುಳಿತು ಸಿಗರೇಟ್ ಹಚ್ಚಿದೆ. ನನ್ನನ್ನೇ ಅನುಮಾನದಿಂದ ನೋಡುತ್ತಾ ಮೂಲೆಯಲ್ಲಿ ಪುಸ್ತಕಗಳ ರಾಶಿಯಲ್ಲಿ ಕುಳಿತಳು . ಮತ್ತೆ ಮತ್ತೆ ನನ್ನ ನೋಡುತ್ತಾ ಓದಿನಲ್ಲಿ ಮುಳುಗಿದಳು .

ಬೆಳಗ್ಗೆ ಎದ್ದಾಗ ಅವಳು ಆಗಲೇ ಸ್ನಾನ ಮುಗಿಸಿ ತಯಾರಾಗಿದ್ದಳು . ನನ್ನನ್ನು ನೋಡಿ ನಮಸ್ಕರಿಸಿ "ಸರ್ ನಿಮ್ಮಿಂದ ಒಂದು ಉಪಕಾರ ಆಗಬೇಕು , ನಾಳೆ ಗಣಿತದ ಪರೀಕ್ಷೆ " ಅವಳ ಮಾತು ಅರ್ಥವಾಗಿ ಹೊರಬಂದೆ.

ಮರುದಿನ ರಾತ್ರಿ ೮ ಗಂಟೆಗೇ ನನ್ನನ್ನು ನೋಡಿ ರತ್ನಕ್ಕಳಿಗೆ ಆಶ್ಚರ್ಯ . ನಾನು ಅದೇ ಹುಡುಗಿ ಬೇಕೆಂದು ಹೇಳಿದಾಗ "ಅದು ಸಾಧ್ಯವಿಲ್ಲ ಸಾರ್ ನಿಮಗೆ ಇನ್ನೂ ಒಳ್ಳೆಯ ಹುಡುಗಿ ಇದೆ" . ನಾನು ಸಾವಿರದ ಹತ್ತು ನೋಟುಗಳನ್ನು ಮುಂದೆ ಚಾಚಿದೆ . ರತ್ನಕ್ಕ ಅನುಮಾನದಿಂದ ನನ್ನ ನೋಡಿ ತಕ್ಷಣ ಮುಖವರಳಿಸಿದಳು . "ಇಂದೇ ಕೊನೆ ಸಾರ್ , ಬೇಕಾದರೆ ದಿನಕ್ಕೊಂದು ಹೊಸ ಹುಡುಗಿ ಕೇಳಿ ಸಾರ್ , ಈ ರೀತಿ ಆಗಲ್ಲ " . ನಾನು ಆ ಕೋಣೆಯೊಳಗೆ ಬಂದಾಗ ಅವಳು ನನ್ನನ್ನೇ ಕಾಯುತಿದ್ದಳು . ನಾನು ಸಿಗರೇಟ್ ಹಚ್ಚಿ ಸೋಫಾ ಮೇಲೆ ಉರುಳಿದೆ . ಅವಳು ಹರಡಿದ್ದ ಪುಸ್ತಕದ ರಾಶಿಯ ಮುಂದೆ ಕುಳಿತಳು . ಒಂದೂ ಮಾತನಾಡದೆ ಓದಿನಲ್ಲಿ ಮುಗ್ನಳಾದಳು .

ರಾತ್ರಿ ೧೦ ಗಂಟೆಯ ಹೊತ್ತಿಗೆ ಸ್ವಲ್ಪ ಹಾಲು ಹಣ್ಣು ತಂದಳು . ಅವಳ ಹಿನ್ನೆಲೆ ವಿಚಾರಿಸಿದೆ ಅದೆಲ್ಲ ದೊಡ್ಡ ಕಥೆ ,ನನ್ನ ಮಾಮ ಮೋಸ ಮಾಡಿ ನನ್ನ ಇಲ್ಲಿ ಸೇರಿಸಿದ . ತಾಯಿಗೆ ಖಾಯಲೆ . ಬಿಡಿ ಸಾರ್ ನನ್ನ ಕಥೆ ಅಂದಳು . ಇಷ್ಟು ಬುದ್ದಿವಂತೆ ಹುಡುಗಿ ಪೊಲೀಸ್ ಸಹಾಯ ಪಡೆಯಬಹುದಿತ್ತು ಎಂದಾಗ ಒಂದು ಪೊಲೀಸ್ ನಾಯಿಯಿಂದ ನನ್ನ ವಿವೇಕ್ ದೂರ ಆದ" ಹೇಳಿ ನಾಲಿಗೆ ಕಚ್ಚಿ ಕೊಂಡಳು . ಕ್ಷಮಿಸಿ “ನೀವು ಮಲಗಿ” ಹೇಳಿ ಮತ್ತೆ ಓದಿನಲ್ಲಿ ತೊಡಗಿದಳು . ನಾನು ಹೇಳಿದೆ "ನನ್ನ ಗೆಳೆಯ ದಿವಾಕರ್ ಇನ್ಸ್ಪೆಕ್ಟರ್ . ನಿನಗೆ ಸಹಾಯ ಆಗಬಹುದು ."ಅವೆಲ್ಲ ಇಲ್ಲಿ ಆಗಲ್ಲ ಸಾರ್ ನಿಮಗೆ ಗೊತ್ತಿಲ್ಲ ಇದು ಒಂದು ವಿಷವರ್ತುಲ . ಒಳಗೆ ಬರೋಕೆ ರಾಜದಾರಿ , ಹೊರಗೆ ಹೋಗೋದು ಹೆಣ ಮಾತ್ರ" ಗಂಭೀರವಾಗಿ ಹೇಳಿ ಮುಂದೆ ಮಾತನಾಡಲು ಅವಕಾಶವಿಲ್ಲದಂತೆ ಓದನ್ನು ಮುಂದುವರಿಸಿದಳು

ಬೆಳಗ್ಗೆ ೩-೪ ಗಂಟೆಯ ಸಮಯ ಇರಬೇಕು . ಯಾರೂ ನನ್ನ ಹಿಡಿದು ಅಪ್ಪಿದಂತೆ ಅನಿಸಿ ದಿಗ್ಗನೆ ಎದ್ದೆ. ಅವಳು ಅಳುತ್ತಾ "ನಿಮ್ಮ ಋಣ ಹೇಗೆ ತೀರಿಸಲಿ , ನನ್ನದು ಅಂತ ಇರೋದು ಈ ದೇಹ ಮಾತ್ರ . ನನ್ನ ಒಪ್ಪಿಸಿಕೊಳ್ಳಿ , ಎಂತಹ ಅಯೋಗ್ಯರಿಗೆ ಮೈ ಒಪ್ಪಿಸಿದ್ದೇನೆ , ನೀವು ದೇವರು "ಆವೇಶದಿಂದ ಅಪ್ಪಿಕೊಂಡಳು . ನಾನು ಮೃದುವಾಗಿ ಅವಳನ್ನು ಪಕ್ಕಕ್ಕೆ ಸರಿಸಿ "ಇದೇನು , ಸುಮ್ಮನೆ ಮಲಗು , ನಾಳೆ ಪರೀಕ್ಷೆ ಇದೆ "ಮೆಲ್ಲನೆ ಕೆನ್ನೆ ತಟ್ಟಿ ಮಲಗಿಸಿದೆ . ಅವಳು ಇನ್ನು ಅಳುತ್ತಿದ್ದಳು . ಅವಳ ತಲೆಯ ಮೇಲೆ ಕೈಯಾಡಿಸಿದೆ . ರೂಪಿ ನೆನಪಿಗೆ ಬಂದಳು, ಬೆಳಗ್ಗೆ ಬೇಗನೆ ಎದ್ದು ಹೊರಟು ನಿಂತೆ . ಅವಳು ಇನ್ನು ಮಲಗಿದ್ದಳು .

ಆ ದಿನ ದಿವಾಕರ್ ಗೆ ಫೋನ್ ಮಾಡಿ ವಿಷಯ ಹೇಳಿದೆ . ದಿವಾಕರ್ "ಇವೆಲ್ಲ ಮಾಮೂಲಿ , ಅದರ ಹಿಂದೆ ಕಾಣದ ಕೈಗಳು ಕೆಲಸ ಮಾಡತ್ತೆ , ಬಿಟ್ಟುಬಿಡು ಅಂದ . ಮತ್ತೊಬ್ಬ ಗೆಳೆಯ ಶ್ರೀಕಾಂತ್ ಬಳಿಯೂ ಮಾತಾಡಿದೆ . "ನಾನು ಲಾಯರ್ ಆದರೂ ಇಂತ ವಿಚಾರದಲ್ಲಿ ಕೈ ಹಾಕಲ್ಲ ಎಲ್ಲರ ಸಮಸ್ಯೆ ಬಗೆಹರಿಸಕ್ಕೆ ಸಾಧ್ಯಾನಾ ? " . ಆದರೂ ನನ್ನ ಮನಸ್ಸು ಅವಳ ಬಗ್ಗೆಯೇ ಯೋಚಿಸುತಿತ್ತು

***************

ಭಾಗ ಎರಡು

ರತ್ನಕ್ಕನ ಕಣ್ಣು ತಪ್ಪಿಸಿ ರೈಲ್ವೆ ಸ್ಟೇಷನ್ ನಲ್ಲಿ ಕಾಯುತ್ತಿದ್ದೆ . ವಿವೇಕ್ ಇನ್ನೇನು ಬರಬಹುದು . ಗಂಟೆ ಎಂಟಾಗಿತ್ತು . ಕಾಯುತ್ತ ನಡೆದುಹೋದ ಘಟನೆಗಳು ಕಣ್ಣ ಮುಂದೆ ಬಂದವು . ಒಂದು ವರ್ಷದ ಹಿಂದೆ ನಾನೆಷ್ಟು ಮುಗ್ದೆಯಾಗಿದ್ದೆ . ಈ ಬದುಕು , ಈ ಅನುಭವಗಳು ಕಲಿಸುವ ಪಾಠ ಅಪಾರ . ಅಮ್ಮನಿಗೆ ಯಾವಾಗಲೂ ಏನೋ ಖಾಯಲೆ . ವಿಪರೀತ ಕೆಮ್ಮು . ಅಪ್ಪ ನಮ್ಮನ್ನು ಬಿಟ್ಟು ಬೇರೆ ಮದುವೆಯಾಗಿ ಹೋಗಿದ್ದ . ಅಮ್ಮನ ತಮ್ಮ ನಂಜುಂಡ ಮಾವನೇ ಮನೆಯ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದ . ನಾನಾಗ ೧೦ನೇ ತರಗತಿ ಪಾಸ್ ಆಗಿದ್ದೆ ."ಈ ಹಳ್ಳಿಯಲ್ಲಿ ನೀನೇನು ಮಾಡ್ತೀಯ ,ನಡಿ ಬೆಂಗಳೂರಿಗೆ ನೀನು ಕೆಲಸ ಮಾಡಬಹುದು ,ಓದಲೂ ಬಹುದು , ಅಮ್ಮನಿಗೆ ಹಣ ಬೇಕಲ್ಲ " ಮಾಮನ ಮಾತು ಕೇಳಿ ತುಂಬಾ ಖುಷಿಯಾಗಿದ್ದೆ .

ಮಾಮ ನನ್ನನ್ನು ರತ್ನಕ್ಕಳ ಮನೆಯಲ್ಲಿ ಇರುವ ಏರ್ಪಾಡು ಮಾಡಿದ್ದ. ಮೊದ ಮೊದಲು ರತ್ನಕ್ಕ ತುಂಬಾ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದಳು. ಆ ದಿನ "ನಿನ್ನ ಕೆಲಸಕ್ಕೆ ಹೇಳಿದ್ದೇನೆ ಸದಾಶಿವ ನಗರದಲ್ಲಿ ದೊಡ್ಡ ಬಂಗ್ಲೆಯವರು ಹೇಳಿ ಕಳಿಸಿದ್ದಾರೆ, ಅವರು ಹೇಳಿದಂತೆ ಕೇಳು, "ದೊಡ್ಡ ಕಾರಿನಲ್ಲಿ ಒಬ್ಬಳೇ ಕುಳಿತು ಹೋಗುವಾಗ ಜಂಬದಿಂದ ಅತ್ತಿತ್ತ ನೋಡುತಿದ್ದೆ. ದೊಡ್ಡ ಬಂಗ್ಲೆ ತಲುಪಿದಾಗ ಅಲ್ಲಿ ಬಹಳ ಜನರಿದ್ದರು. ಊಟ ತಿಂಡಿ ನಾನಿದ್ದ ಕೊಠಡಿಗೆ ಬಂದಿತ್ತು. ಸಂಜೆಯವರಿಗೂ ಯಾರೂ ಮಾತನಾಡಿಸಲಿಲ್ಲ. ಒಳ್ಳೆಯ ಊಟ ಮಾಡಿ ಮಲಗಿದ್ದೆ. ರಾತ್ರಿ ಯಾರೋ ನನ್ನ ಪಕ್ಕ ಮಲಗಿದಂತೆ ಅನಿಸಿತು. ಕಣ್ಣು ಬಿಡುವಷ್ಟರಲ್ಲಿ ಯಾರದೋ ಬಿಗಿ ಅಪ್ಪುಗೆಯಲ್ಲಿ ಹೆಣಗಾಡುತ್ತಿದ್ದೆ. ಯಾರದೋ ಪೈಶಾಚಿಕ ಆಕ್ರಮಣಕ್ಕೆ ಬಲಿಯಾಗಿದ್ದೆ. ಬಾಲಕಿಯಾಗಿದ್ದ ನಾನು ಹೆಣ್ಣಾಗಿದ್ದೆ. ಬೆಳಗ್ಗೆ ಎದ್ದ ತಕ್ಷಣ ಒಬ್ಬ ನನ್ನನ್ನು ಮನೆಯಿಂದ ಬೇಗ ಬೇಗ ಹೊರಡಿಸಿದ. ರಸ್ತೆಯಲ್ಲಿ ಆಟೋ ನಿಲ್ಲಿಸಿ ವಿಳಾಸ ಹೇಳಿ ನನ್ನ ಕೈಗೆ ದುಡ್ಡಿನ ಕಂತೆ ಕೊಟ್ಟು ಹೊರಟುಹೋದ. ಕಾಲುಗಳು ವಿಪರೀತ ನೋಯುತ್ತಿದ್ದವು. ನನ್ನ ಮುಖ ನೋಡಿ ಆಟೋ ಡ್ರೈವರ್ "ಲೋಫರ್ ನನ್ನ ಮಗ ದಿನವೂ ಹೊಸ ಹೆಣ್ಣು ಬೇಕು" ಎಂದ. ದೊಡ್ಡ ಬಂಗ್ಲೆ ಯತ್ತ ತಿರುಗಿ ನೋಡಿದೆ. “ಮುನಿರಾಜು ಶಾಸಕರು“ ದೊಡ್ಡ ನಾಮ ಫಲಕ ಕಾಣಿಸಿತು.
ಕ್ರಮೇಣ ನನಗೆ ರತ್ನಕ್ಕನ ವ್ಯವಹಾರ ಅರ್ಥವಾಗಿತ್ತು. ಮಾಮ ಈಚೆಗೆ ಬರುತ್ತಲೇ ಇರಲಿಲ್ಲ. ನನ್ನ ಕಾವಲಿಗೆ ಯಾವಾಗಲೂ ಯಾರಾದರೂ ಇರುತ್ತಿದ್ದರು. ತಿಂಗಳಿಗೊಮ್ಮೆ ಪೊಲೀಸ್ ಒಬ್ಬ ಹಣ ವಸೂಲು ಮಾಡಿಕೊಂಡು ಹೋಗುತ್ತಿದ್ದ. ನಾನು ಹೊರ ಬರಲಾಗದ ಪಂಜರದ ಬಂಧಿಯಾಗಿದ್ದೆ.

ರತ್ನಕ್ಕ ನನ್ನ ಬಗ್ಗೆ ವಿಪರೀತ ಕಾಳಜಿ ತೋರುತ್ತಿದ್ದಳು . ಓದಲು ಅನುಕೂಲ ಮಾಡಿಕೊಟ್ಟಿದ್ದಳು . ಜೊತೆಗೆ ಸರ್ಪಕಾವಲು . ಮನಸ್ಸು ಇದರಿಂದ ತಪ್ಪಿಸಿಕೊಳ್ಳಲು ದಾರಿ ಹುಡುಕುತ್ತಿತ್ತು . ಆಗ ಭರವಸೆ ತುಂಬಿದವನೇ ವಿವೇಕ್ . ನಮ್ಮೂರಿನವನೇ .

ವಿವೇಕ್ ಸುಂದರ ಮುಖದ ತರುಣ . ತಲೆತುಂಬ ಕೂದಲು ,ಕಣ್ಣಿಗೆ ವಿದೇಶಿ ಕನ್ನಡಕ . ಹಿಂದಿ ಹೀರೊ ತರ ಕಾಣ್ತಾಇದ್ದ . ಸ್ವಲ್ಪ ಶೋಕಿ ಹೆಚ್ಚು . ಹುಚ್ಚು ಕನಸುಗಳು.ಬೆಂಗಳೂರಿಗೆ ಒಂದು ವರ್ಷದ ಮುಂಚೆ ಬಂದಿದ್ದ . ಆಕಸ್ಮಿಕವಾಗಿ ಒಮ್ಮೆ ಭೇಟಿಯಾಗಿದ್ದ . "ಇನ್ನು ಒಂದು ತಿಂಗಳು . ನಂತರ ದುಬೈ ಗೆ ಹಾರಿಹೋಗೋಣ . ಎಲ್ಲ ಸಿದ್ಧತೆ ಮಾಡುತ್ತಿದ್ದೇನೆ " ಅವನ ಮಾತು ಬದುಕಿಗೆ ಹೊಸ ದಾರಿ ಕಾಣುತಿತ್ತು

ರೈಲ್ವೆ ಸ್ಟೇಷನ್ ಗಂಟೆ ೧೦ ಬಾರಿಸಿತು . ಇದೇನು ವಿವೇಕ್ ಬರಲೇ ಇಲ್ಲ ಗಾಬರಿಯಾಯಿತು . ಮೊದಲೇ ಮಾತಾಡಿದಂತೆ ಮುಖಕ್ಕೆ ಸೆರಗು ಹಾಸಿ ಮುಚ್ಚಿಕೊಂಡು ಕುಳಿತಿದ್ದೆ . ಎದುರಿಗೆ ಬಂದ ಆ ಪೊಲೀಸ್ ನೋಡಿ ನಡುಕ ಬಂತು . ಜೊತೆಗೆ ಇಬ್ಬರು ದಾಂಡಿಗರು . ತಲೆ ತಿರುಗಿದಂತಾಯಿತು . ಮತ್ತೆ ಪಂಜರದ ಪಕ್ಷಿಯಾದೆ . ಎರಡು ದಿನ ಕತ್ತಲೆಯ ಕೊಠಡಿಯಲ್ಲಿ ಸೆರೆಯಾಗಿದ್ದೆ . ರತ್ನಕ್ಕ ನೀರು ಕೂಡ ಕೊಟ್ಟಿರಲಿಲ್ಲ . ಹೊಟ್ಟೆಯಲ್ಲಿ ಅಸಾಧ್ಯ ಹಸಿವು . ಮೂರನೇ ದಿನ ಅನ್ನ ನೀರು ನೋಡಿ ಜೀವಬಂತು . ಹಸಿವಿಗೆ ಇರುವ ಶಕ್ತಿ ಅಂದೇ ನನಗೆ ಅರ್ಥವಾಗಿದ್ದು

ಇದಾದ ಮೇಲೆ ನಾನು ರತ್ನಕ್ಕನನ್ನು ವಿರೋಧಿಸುತ್ತಿರಲಿಲ್ಲ . ಅಂದು ರಾತ್ರಿ ಸೈನ್ಸ್ ಪರೀಕ್ಷೆ ಗೆ ಓದುತಿದ್ದೆ . ನನ್ನ ಕೊಠಡಿಯ ಬಾಗಿಲು ತೆರೆಯಿತು . ಮೆಲ್ಲನೆ ಒಬ್ಬ ವ್ಯಕ್ತಿ ಒಳಗೆ ಬಂದ . ತುಂಬಾ ಹೊಸಬನಂತೆ ಕಂಡ . ವಯಸ್ಸು ೫೦ ಇರಬಹುದು ಅನಿಸಿತು . ಹೆಣ್ಣು ಕೊಂಡೊಡನೆ ರಾಕ್ಷಸರಂತೆ ಆಕ್ರಮಿಸುವ ಗಂಡು ಮೃಗಗಳನ್ನು ನೋಡಿದ್ದ ನನಗೆ ಆಶ್ವರ್ಯವಾಯಿತು . "ಪಂಚರ್ ಗಾಡಿನಾ " ಅಂದುಕೊಂಡು ತಕ್ಷಣ ನನ್ನ ಯೋಚನೆಗೆ ನನಗೇ ನಾಚಿಕೆಯಾಯಿತು . ನನ್ನ ಓದಿಗೆ ಸಹಾಯ ಮಾಡಿದವನ ಬಗ್ಗೆ ಅಭಿಮಾನ ಮೂಡಿ ಬಾವುಕಳಂತೆ ಅಪ್ಪಿಕೊಂಡೆ . ಅವನು ದೂರ ಸರಿಸಿ ನನ್ನ ತಲೆಯ ಮೇಲೆ ಕೈಯಾಡಿದಾಗ ತುಂಬು ರಕ್ಷಣೆಯ ಭಾವ ಬಂತು .ಮರುದಿನ ಬೆಳಗ್ಗೆ ಎದ್ದಾಗ ಅವನು ಹೊರಟು ಹೋಗಿದ್ದ . ಅಂದು ಅನಾಥ ಭಾವದಿಂದ ಅತ್ತಿದ್ದೆ .

*****************

ಭಾಗ ಮೂರು

"ವಿವೇಕ್ ನೀನು ಹೆಸರಿಗೆ ತಕ್ಕಂತೆ ಇರದ ಅವಿವೇಕಿ " ಗೆಳೆಯ ಸಾದಿಕ್ ಯಾವಾಗಲೂ ಹೇಳುತಿದ್ದ . ಆಟೋ ಗ್ಯಾರೇಜ್ ನಲ್ಲಿ ಕೆಲಸ ಮಾಡುತಿದ್ದ . ಎಸ್ ಎಸ್ ಎಲ್ ಸಿ ಫೇಲಾದ ನನಗೆ ಅವನೇ ಗುರು. ಒಂದು ದಿನ "ವಿವೇಕ್ ಅಣ್ಣ ಅನ್ವರ್ ಬೆಂಗಳೂರಿಗೆ ಬಾ ಅಂತ ಹೇಳಿದ್ದಾನೆ. ನಿನ್ನ ವಿಚಾರಾನೂ ಹೇಳಿದ್ದೇನೆ . ಒಳ್ಳೆ ಕೆಲಸ ಇದೆ ಅಂತ ಅಣ್ಣ ಹೇಳಿದ " ಎಂದಾಗ ಹಿಂದೆ ಮುಂದೆ ನೋಡದೆ ಒಪ್ಪಿಕೊಂಡಿದ್ದೆ . ಮಾಡುವ ಕೆಲಸದಿಂದ ಹಣವೂ ಸಿಕ್ಕಿತ್ತು . ಅಂದು ಹೇಮಾಳನ್ನು ನೋಡಿದ ಮೇಲೆ ಬದುಕಲ್ಲಿ ಆಸೆಗಳು ಚಿಗುರಿದವು . ಅನ್ವೇರ್ ಹೇಳುತ್ತಿದ್ದ " ನಿನ್ನ ಟ್ರೈನಿಂಗ್ ಇನ್ನು ಸ್ವಲ್ಪ ದಿನಗಳು ನಿನಗೆ ದುಬೈಗೆ ಹೋಗೋ ಅವಕಾಶ ಇದೆ ಅಂತ . ಎಲ್ಲ ಪ್ಲಾನ್ ಮಾಡಿ ಹೇಮಾಳನ್ನು ಒಪ್ಪಿಸಿದ್ದೆ . ದುಬೈಗೆ ಹೊರಡುವ ಮುನ್ನ ಒಂದು ಮುಖ್ಯವಾದ ಕೆಲಸವಿತ್ತು . ಸೇಡಿನ ಜ್ವಾಲೆ ಸುಡುತಿತ್ತು ಅಂದು ಎಲ್ಲವೂ ನಾನು ಅಂದುಕೊಂಡಂತೆ ಆಗಬೇಕಿತ್ತು . ಅತ್ಯಂತ ಗುಪ್ತವಾಗಿ ಸಾದಿಕ್ , ಹುಸೇನ್, ಪಾಷಾ ಜೊತೆ ಕೆಲಸ ಮುಗಿಸಿ ರೈಲ್ವೆ ಸ್ಟೇಷನ್ ಗೆ ಹೊರಟಿದ್ದೆ ಮಿಂಚಿನಂತೆ ಇನ್ಸ್ಪೆಕ್ಟರ್ ದಿವಾಕರ್ ನಮ್ಮನ್ನು ಅಡ್ಡ ಗಟ್ಟಿ ಜೀಪ್ನಲ್ಲಿ ಠಾಣೆಗೆ ಎಳೆದುತಂದರು .

ನಾವು ನಾಲ್ವರು ಸಾಲಾಗಿ ಕುಳಿತಿದ್ದೆವು . ದಿವಾಕರ್ ಎಲ್ಲರ ಹೆಸರು ಕೇಳುತ್ತಾ ಮುಖವನ್ನು ಗಮನಿಸುತ್ತಾ ನನ್ನನ್ನು ಎಳೆದುಕೊಂಡು ಸೆಲ್ ಒಳಗೆ ನಡೆದರು . ಆ ಗುಂಪಿನಲ್ಲಿ ನಾನೇ ಎಲ್ಲರಿಗಿಂದ ಚಿಕ್ಕವನು . ನನ್ನ ಮುಂದೆ ಕುಳಿತುಕೊಂಡು ನನ್ನ ಕಥೆ ಎಲ್ಲ ವಿವರಗಳನ್ನು ಕೇಳಿದರು . ಬಿದ್ದ ಹೊಡೆತಗಳಿಗೆ ಹೆದರಿ ಸತ್ಯ ಹೇಳಬೇಕಾಗಿ ಬಂತು . ತಕ್ಷಣ ಪೊಲೀಸರ ಒಂದು ಗುಂಪು ಸದಾಶಿವನಗರದ ದೊಡ್ಡ ಬಂಗ್ಲೆ ಯತ್ತ ಸಾಗಿತು . ದಿವಾಕರ್ ಗಡಸು ದನಿಯಲ್ಲಿ "ಬಾಂಬ್ ಇಟ್ಟವರು ಯಾರು " ಎಂದಾಗ ನಾನೇ ಎಂದು ಒಪ್ಪಿಕೊಂಡೆ . ಆ ರಾತ್ರಿ ನನ್ನನ್ನು ಅದೇ ಸೆಲ್ ನಲ್ಲಿ ಇರಿಸಿದ್ದರು . ಉಳಿದವರು ಏನಾದರೋ ತಿಳಿಯಲಿಲ್ಲ . ಬೆಳಗ್ಗೆ ದಿವಾಕರ್ ಮತ್ತೆ ನನ್ನ ಪ್ರಶ್ನೆಸಲು ಪ್ರಾರಂಭಿಸಿದರು . ನನ್ನ ಬ್ಯಾಗ್ನಲ್ಲಿದ್ದ ನನ್ನ ,ಹೇಮಾಳ ಫಾಸ್ಸ್ಪೋರ್ಟ್ ವಶಕ್ಕೆ ತೆಗೆದುಕೊಂಡರು . ಫಾಸ್ಸ್ಪೋರ್ಟ್ ತೆರೆದು ನೋಡಿ "ಅಮೀರ್" "ರಶೀದಾ ಭಾನು" ಹೆಸರು ಓದಿ "ರಾಸ್ಕಲ್ ನಕಲಿ ಫಾಸ್ಸ್ಪೋರ್ಟ್ ಮಾಡ್ಸಿದೀಯಾ , ಈ ಹುಡುಗಿ ಹೆಸರು ಹೇಮಾ ಅಂತ ಅಲ್ವಾ ?" . ನಾನು ಮೌನವಾಗಿ ತಲೆಯಾಡಿಸಿದೆ ಮತ್ತೆ ಹೊಡೆತ ನೋವು . "ಆ ಮನೆ ಎಲ್ಲಿದೆ " ಎಂದಾಗ ಕೋಣದ ಕುಂಟೆಯ ಒಂಟಿ ಮನೆಯ ಬಗ್ಗೆ ಹೇಳಿದೆ . ಅಲ್ಲಿ ನಡೆಯುತ್ತಿದ್ದ ತರಬೇತಿ , ಮುಂದಿನ ಪ್ಲಾನ್ ಗಳನ್ನು ಬರೆದು ಕೊಂಡರು. "ನನ್ನನ್ನು ಬಿಡುಗಡೆ ಮಾಡಿ" ನನ್ನ ಮಾತಿದೆ ದಿವಾಕರ್ "ನಾನು ನಿನ್ನನ್ನು ಬಿಡಬಹುದು ಆದರೆ ಅವರು ನಿನ್ನನ್ನು ಬಿಡುವುದಿಲ್ಲ " . ಮುಂದೆ ದಾರಿ ಕಾಣದೆ "ದಯವಿಟ್ಟು ನನ್ನ ಕೊಂದು ಬಿಡಿ ,ಮತ್ತೆ ಆ ಪಾಪ ಕೂಪಕ್ಕೆ ಹೋಗಲಾರೆ " ನನ್ನ ಮಾತು ಮುಗಿಯುವ ಮುನ್ನ ದಿವಾಕರ್ ಅವರ ರಿವಾಲ್ವರ್ ನನ್ನ ಹಣೆಯ ಮೇಲಿತ್ತು .

****************

ಭಾಗ –ನಾಲಕ್ಕು

ಮರುದಿನ "ಮುನಿರಾಜು ಅವರ ಮನೆಯ ಬಾಂಬ್ ಪ್ರಕರಣ" ದಿನವಾಹಿನಿಯಲ್ಲಿ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಅಚ್ಚಾಗಿತ್ತು . ಜೊತೆಯಲ್ಲಿ ವಿವೇಕ್ ನ ಫೋಟೋ ಮತ್ತು ಎನಕೌಂಟರ್ನಲ್ಲಿ ಸತ್ತ ಸುದ್ದಿಯ ವಿವರ ವಿತ್ತು . ಇನ್ಸ್ಪೆಕ್ಟರ್ ದಿವಾಕರ್ ಅವರ ದಳ ಬಾಂಬ್ ನಿಷ್ಕ್ರಿಯ ಗೊಳಿಸಿದ ಸಾಹಸದ ವಿವರವಿತ್ತು ರತ್ನಕ್ಕನ ಮನೆಯಲ್ಲಿ ಇದೇ ವಿಷಯ ಚರ್ಚೆಯಾಗುತಿತ್ತು . ದಿನವಾಹಿನಿ ನೋಡಿ ನನ್ನ ಎದೆ ನಡುಗಿತು . ಕಣ್ತುಂಬ ನೀರು .
ಇದಾದ ಒಂದು ವಾರದಲ್ಲಿ ರತ್ನಕ್ಕನ ಮನೆಯ ಮೇಲೆ ಪೊಲೀಸ್ ರೈಡ್ ಆಯಿತು . ನನ್ನ ಜೊತೆ ಇನ್ನೂ ನಾಲ್ವರು ಹುಡುಗಿಯರು . ಕೋರ್ಟ್ನಲ್ಲಿ ತಪ್ಪು ಒಪ್ಪಿಕೊಂಡು ದಂಡ ಕಟ್ಟಿದೆವು . ಅಂದು ಕೋರ್ಟ್ನಲ್ಲಿ ಇನ್ಸ್ಪೆಕ್ಟರ್ ಜೊತೆ ಆ ವ್ಯಕ್ತಿಯನ್ನು ನೋಡಿ ಆಶ್ವರ್ಯವಾಯಿತು . ಅವನೇ , ಆ ಎರಡು ದಿನ ಬಂದವನು. ಜೊತೆಯಲ್ಲಿ ಪುಟ್ಟ ಹುಡುಗಿ "ಶಾಸಕ ಮುನಿರಾಜು ಪದವಿ ಕಳೆದುಕೊಂಡಿದ್ದು , ರತ್ನಕ್ಕನನ್ನ ಅವಳ ಚೇಲಗಳೊಂದಿಗೆ ಬಂಧಿಸಿದ್ದು " ನಂತರ ತಿಳಿಯಿತು . ಇನ್ಸ್ಪೆಕ್ಟರ್ ಜೊತೆ ಆ ವ್ಯಕ್ತಿ ಬಂದು ನನ್ನನ್ನು ತಾಯಿಯ ಮನೆಗೆ ಬಿಟ್ಟರು . ನಂಜುಂಡ ಮಾಮ ಹೆದರಿಕೆಯಿಂದ ಊರು ಬಿಟ್ಟು ಹೋದ ಎಂದು ಅಮ್ಮ ಹೇಳಿದಳು .

ಈಗ ಹೇಮಾ "ವಸುಧಾ ಗಾರ್ಮೆಂಟ್ಸ್ " ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಚಿಕ್ಕಮನೆ ಮಾಡಿ ತಾಯಿಯನ್ನು ಕರೆಸಿಕೊಂಡಿದ್ದಾಳೆ . ಅಂದು ಮೈಸೂರ್ ರೋಡ್ ಮೆಟ್ರೋ ಬಳಿ ಟ್ರೈನಿಗೆ ಕಾಯುತ್ತಿದ್ದಳು . ಒಬ್ಬ ಮೆಟ್ರೋ ಸೆಕ್ಯುರಿಟಿ "ಹೇಮಾ" ಎಂದು ಕರೆದ . ಅವಳು ಅತ್ತ ತಿರುಗಿ ತನ್ನ ಕಣ್ಣನ್ನೇ ತಾನು ನಂಬದಾದಳು
. ದೊಗಳೆಪ್ಯಾಂಟ್ ,ಸೆಕ್ಯುರಿಟಿ ಕ್ಯಾಪ್ ಹಾಕಿದ್ದ ಅವನನ್ನು ನೋಡಿ ವಿವೇಕ್ ಎಂದು ಚೀರಿದಳು ."ನಾನು ವಿವೇಕ್ ಅಲ್ಲ . ಅವನು ಸತ್ತು ನಾನು "ಸತ್ಯ" ಆಗಿದ್ದೇನೆ. ಇನ್ಸ್ಪೆಕ್ಟರ್ ದಿವಾಕರ್ ಅವರ ಕೃಪೆಯಿಂದ ಇಲ್ಲಿ ಕೆಲಸ ಸಿಕ್ಕಿದ್ದು ಅವರಿಂದಲೇ, ಆದರೆ ನಾನು ನಿನ್ನ ಪ್ರೀತಿಯ ಹುಡುಗನೇ " . ಅವಳು ದಿಬ್ರಮೆಯಲ್ಲಿ ಅವನನ್ನೇ ನೋಡುತ್ತಿದ್ದಳು. "ಪ್ರತಿ ತಿಂಗಳೂ ಪೊಲೀಸ್ಸ್ಟೇಷನ್ ನಲ್ಲಿ ಸೈನ್ ಮಾಡಬೇಕು , ನಿನ್ನ ವಿಚಾರ ಅವರೇ ಹೇಳಿದರು " . ಹೇಮಾಗೆ ಇನ್ನು ತಡೆಯಲಾಗದೆ ಬಳಿ ಬಂದು ಅವನ್ನನ್ನು ಅಪ್ಪಿಕೊಂಡಳು ."ಇದೇನಿದು ನಾನು ಡ್ಯೂಟಿನಲ್ಲಿದ್ದೇನೆ "ಹೇಳಿ ಗಡಿಯಾರ ನೋಡಿದ . ಅಲ್ಲಿ ೨ ನಿಮಿಷ ತೋರಿಸುತ್ತಿತ್ತು . ತಕ್ಷಣ ವಿಸಿಲ್ ಊದಿ , ಜನರನ್ನು ಸಾಲಿನಲ್ಲಿ ನಿಲ್ಲಲು ಹೇಳಿದ . ಹೇಮಾ ಸಾಲಿನಲ್ಲಿ ಮೆಟ್ರೋ ಹತ್ತಿದಳು . ಅವನು ಮೆಲ್ಲಗೆ "ನಾಳೆ ನಿಮ್ಮ ಅಮ್ಮನ್ನ ನೋಡಕ್ಕೆ ಬರ್ತೀನಿ " ಮೆಟ್ರೋ ಮೆಲ್ಲನೆ ಚಲಿಸಿತು . ಹೇಮಾ ಮರೆಯಾಗುವವರೆಗೂ ಕೈ ಬೀಸುತ್ತಲೇ ಇದ್ದಳು . ಕಣ್ಣಲಿ ನೀರು ತುಂಬಿತ್ತು

-----------

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.