"ಅವ್ಳೇನೋ ಯಾವಾಗ್ಲೂ ಅವನ ಜೊತೆನೇ ಓಡಾಡ್ತಿರ್ತಾಳೆ, ಒಂಚೂರು ನಾಚಿಕೆನೇ ಇಲ್ಲಾ ಥೂ".

ಆಕೆಯ ಬಗ್ಗೆ ತಿಳಿದುಕೊಳ್ಳದೇ ಆತನಲ್ಲಿ ಮೂಡಿದ ಮೊದಲ ಅಭಿಪ್ರಾಯವದು. ಬಾಲ್ಯದಿಂದಲೇ ಹುಡುಗಿಯರ ಬಗ್ಗೆ ಕಾರಣವಿಲ್ಲದೆ ಜಿಗುಪ್ಸೆಯನ್ನು ಬೆಳೆಸಿಕೊಂಡಿದ್ದ ಅವನಿಗೆ ಇಂಜಿನಿಯರಿಂಗ್ ಸೇರಿದ ಮೇಲೆ ಅದು ಕಡಿಮೆಯಾಗುವುದಿರಲಿ, ವಿಧ ವಿಧದ ಹುಡುಗಿಯರ ವೇಷ-ಭೂಷಣಗಳನ್ನು ಕಂಡು ಅಗ್ನಿಗೆ ತುಪ್ಪ ಸುರಿದಂತಾಗಿ ಜಿಗುಪ್ಸೆಯಾಗಿದ್ದ ಭಾವನೆ ಮತ್ಸರವಾಗಿ ಮಾರ್ಪಟ್ಟಿತ್ತು. ಹುಡುಗಿಯರೆಲ್ಲಾ ಹುಡುಗರಿಗೆ ಮೋಸ ಮಾಡಲೆಂದೇ ಇದ್ದಾರೆಂದು ಆತ ಯಾವ ಚಿಂತನೆಯನ್ನು ಮಾಡದೇ ಒಪ್ಪಿಕೊಂಡಿದ್ದ. ಆತನ ಜೊತೆಯಿದ್ದ ಹುಡುಗರೂ ಸಹ ಆ ವಿಷಯದಲ್ಲಿ ಆತನಿಗೆ ಸಂಪೂರ್ಣವಾಗಿ ಬೆಂಬಲ ನೀಡಿದ್ದರು.

ಹುಡುಗಿಯರು ಧರಿಸುವ ಬಟ್ಟೆಯ ಆಧಾರದ ಮೇಲೆ ಆ ಹುಡುಗಿಯ ವ್ಯಕ್ತಿತ್ವವನ್ನು ಅಳೆಯುತ್ತಿದ್ದವರ ಗುಂಪಿನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದನು. ಆತನ ಜೊತೆಯಿದ್ದವರ್ಯಾರಿಗೂ ಸಹ ತಾವು ಮಾಡುತ್ತಿರುವುದು ತಪ್ಪು ಎಂದು ಅನ್ನಿಸಿರಲೇ ಇಲ್ಲ, ಆತನಿಗೂ ಸಹ. ಬೇರೆಲ್ಲರ ಅಭಿಪ್ರಾಯದೊಂದಿಗೆ ತನ್ನ ಅಭಿಪ್ರಾಯವನ್ನು ಹೊಂದಿಸಿಕೊಳ್ಳುತ್ತಲೇ ತನಗರಿವಿಲ್ಲದೇ ತನ್ನತನವನ್ನೂ ಹಾಗೂ ಸ್ವಂತವಾಗಿ ಯೋಚಿಸುವ ಶಕ್ತಿಯನ್ನೂ ಕ್ರಮೇಣವಾಗಿ ಕಳೆದುಕೊಳ್ಳುತ್ತಿದ್ದ.

ಮೊದಲ ವರ್ಷ ಮುಗಿದರೂ ಆತ ಯಾವ ಹುಡುಗಿಯರನ್ನು ಸ್ನೇಹಿತೆಯರನ್ನಾಗಿ ಕಾಣಲೇ ಇಲ್ಲ. ಕೇವಲ ತನ್ನ ವಾರಗೆಯ ಹುಡುಗರೊಡನೆ ಬೆರೆಯುತ್ತ ಆಗಾಗ ಹುಡುಗಿಯರನ್ನೂ, ಅವರ ಕುಲವನ್ನೂ ಬೈದು ತನ್ನಲ್ಲಿನ ಅಸಹಾಯಕತೆಯನ್ನೂ, ದುರ್ಬಲತೆಯನ್ನೂ ಮೆರೆಯುತ್ತಿದ್ದ. ತನ್ನಲ್ಲಿನ ದೌರ್ಬಲ್ಯವನ್ನು ಸರಿಪಡಿಸುವುದಿರಲಿ ಅದರ ಅಸ್ತಿತವನ್ನೇ ಒಪ್ಪಲು ಹಲವರು ತಯಾರಿರುವುದಿಲ್ಲ. ಆ ಗುಂಪಿಗೆ ಈತನೂ ಸೇರಿದ್ದು ಆಶ್ಚರ್ಯವೇನಲ್ಲ.

ಸ್ವಯಂ-ವಿಶ್ಲೇಷಣೆಯಿಂದ ಮಾತ್ರ ವ್ಯಕ್ತಿಯೊಬ್ಬ ತನ್ನಲ್ಲಿನ ನ್ಯೂನತೆಯನ್ನು ಒಪ್ಪಿಕೊಂಡು ಅದರಿಂದ ಪಾರಾಗುವ ವಿಧಾನವನ್ನು ಕಂಡುಕೊಳ್ಳಬಲ್ಲ. ಆದರೆ ಈ ವಿಶ್ಲೇಷಣೆಗೆ ಮುಂದಾಗಬೇಕಾದರೆ ವ್ಯಕ್ತಿಯು ತನ್ನ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಎಲ್ಲ ವಿಷಯಗಳಲ್ಲೂ ಬೇರೊಬ್ಬರ ಅಭಿಪ್ರಾಯಗಳ ಮೇಲೆ ಅವಲಂಬಿತರಾಗಿರುವವರಿಗೆ ಈ ಕೆಲಸ ಬಹಳ ಕಷ್ಟವೆನಿಸುತ್ತದೆ. ತನ್ನಲ್ಲಿನ ದೋಷಗಳನ್ನು ಒಪ್ಪಿಕೊಂಡು, ಒಬ್ಬ ಕ್ರಿಟಿಕ್ ಆಗಿ ತನ್ನನ್ನೇ ತಾನು ಗಮನಿಸಬೇಕಾಗುತ್ತದೆ. ಇಂತಹ ಜವಾಬ್ದಾರಿಗಳನ್ನು ಹೊರಲು ಧೈರ್ಯವಿಲ್ಲದವರು (ಧೈರ್ಯ ಎನ್ನುವುದಕ್ಕಿಂತ ಇಚ್ಛಾಶಕ್ತಿ ಎಂದರೆ ಸರಿಯಾಗಿರುತ್ತದೆ) ತಮ್ಮ ಜೀವನವಿಡೀ ಪರಾವಲಂಬಿಗಳಾಗೇ ಬದುಕುತ್ತಾರೆ.

ಆ ಪರಾವಲಂಬಿಯಾಗುವ ಪ್ರಾಥಮಿಕ ಹಂತದಲ್ಲಿದ್ದ ಈತನಿಗೆ ಪುಸ್ತಕಗಳ ಸಂಪರ್ಕವಾಗದೇ ಇದ್ದಲ್ಲಿ ಅವನೂ ಸಹ ವ್ಯಕ್ತಿತ್ವರಹಿತ ಒಂದು ಜೀವಿಯಾಗುತ್ತಿದ್ದ. ಪುಸ್ತಕಗಳನ್ನು ಅರ್ಥಮಾಡಿಕೊಳ್ಳುತ್ತಲೇ ತನ್ನ ಸುತ್ತಲಿನ ಪರಿಸರವನ್ನೂ ಅದರ ಭಾಗವಾಗಿದ್ದ ವೈವಿಧ್ಯಮಯ ವ್ಯಕ್ತಿತ್ವಗಳನ್ನೂ ಅರ್ಥಮಾಡಿಕೊಳ್ಳಲು ಯತ್ನಿಸುತ್ತಿದ್ದ. ಈ ಪ್ರಕ್ರಿಯೆಯಲ್ಲಿ ಆತ ತನ್ನ ಯೋಚನಾಶಕ್ತಿಯನ್ನು ಬಳಸಲು ಪ್ರಾರಂಭಿಸಿದ. ಈ ಬೆಳವಣಿಗೆಗಳ ಪ್ರತಿಫಲದಿಂದ ತಾನು ಇತ್ತೀಚಿನವರೆಗೂ ನಂಬಿದ್ದೆಲ್ಲವೂ ಬೇರೆಯವರು ನಂಬು ಎಂದು ಹೇಳುತ್ತಿದ್ದ ವಿಷಯಗಳನ್ನು ಎಂದು ಆತನಿಗೆ ತಿಳಿಯಿತು. ತನ್ನ ಹಿಂದಿನ ಜೀವನಶೈಲಿಯನು ನೆನೆದು ಆತನಿಗೆ ನಾಚಿಕೆಯಾಯಿತು. ಇನ್ನುಮುಂದಾದರೂ ಬೇರೆಯವರ ಕೈ ಗೊಂಬೆಯಾಗಿರಲಾರೆನು ಎಂದು ತನ್ನಲ್ಲೇ ಹೇಳಿಕೊಂಡನು. ಸ್ನೇಹಿತರ ಯಾವುದೇ ಮಾತುಗಳನ್ನು ಒಪ್ಪಿಕೊಳ್ಳುವುದಕ್ಕೂ ಮುನ್ನ ಯೋಚಿಸಲು ಆರಂಭಿಸಿದ. ಆಗ ಆತನಿಗೆ ತಿಳಿಯಿತು ತನ್ನ ಗೆಳೆಯರು ಹೇಳುತ್ತಿದ್ದ ಮಾತುಗಳಿಗೆ ಯಾವುದೇ ಪುರಾವೆಯಿಲ್ಲವೆಂದು, ಯಾರೋ ಹೇಳಿದ ಮಾತನ್ನೇ ಇಲ್ಲಿ ಗುಂಪಿನೊಡನೆ ಹಂಚಿಕೊಳ್ಳುತ್ತಿದ್ದರು. ಅವಳು ಹಾಗೆ ಮಾಡಿದಳಂತೆ, ಅವಳು ಅಂತವಳಂತೆ, ಅವಳು ಸರಿಯಿಲ್ಲವಂತೆ, ಎಲ್ಲವೂ ಬರೀ ಅಂತೆ ಕಂತೆ.

ಇಷ್ಟು ದಿನ ತಾನು ಇದನ್ನು ನಂಬಿ ಎಲ್ಲರ ಬಗ್ಗೆ ತಪ್ಪಾಗಿ ಯೋಚಿಸುತ್ತಿದ್ದನೆಂದು ತಿಳಿದು ತಾನೆಷ್ಟು ಮೂರ್ಖನಾಗಿದ್ದೆ ಎಂದೆನಿಸಿತು, ಅಂತಹ ಕತೆಗಳನ್ನು ಹೇಳುವವರ ಮೇಲೆ ಕೋಪಿಸಿಕೊಳ್ಳುವುದರ ಬದಲು ಅಯ್ಯೋ! ಇವರೆಷ್ಟು ಅಸಹಾಯಕರಾಗಿದ್ದಾರೆ ಬೇರೆಯವರು ಹೇಳಿದ ಮಾತನ್ನು ಪರೀಕ್ಷಿಸದೇ ಅದನ್ನು ಹರಡುತ್ತಿದ್ದಾರೆ ಎಂದು ವ್ಯಥೆ ಪಟ್ಟನು, ಕೆಲ ದಿನಗಳ ಹಿಂದೆ ತಾನೂ ಸಹ ಆ ಗುಂಪಿನವನೇ ಆಗಿದ್ದು ನೆನಪಾಗಿ ಮನದಲ್ಲೇ ನಕ್ಕನು.

"ಈ ಜಗತ್ತು ಕನ್ನಡಿ ಇದ್ದಂಗೆ, ನೀನು ಅದನ್ನು ನೋಡಿ ನಕ್ರೆ ಅದೂ ನಿನ್ನ ನೋಡಿ ನಗುತ್ತೆ, ನೀನು ಅದನ್ನ ನೋಡಿ ಅತ್ತರೆ ಅದೂ ನಿನ್ನ ನೋಡಿ ಅಳುತ್ತೆ." ಗೆಳೆಯರೊಂದಿಗೆ ಫಿಲ್ಮ್ ನೋಡುತ್ತಿರುವಾಗ, ರಿಯಲ್‍ ಸ್ಟಾರ್ ಉಪೇಂದ್ರ ತನ್ನನ್ನೇ ಕುರಿತು ಹೇಳುತ್ತಿದ್ದಾರೇನೋ ಎಂದು ಅನ್ನಿಸುತ್ತಿತ್ತು. ತನ್ನ ಸುತ್ತಲಿನವರೆಲ್ಲರನ್ನೂ ಒಳ್ಳೆಯ ಭಾವನೆಯಿಂದ ಕಾಣಲು ಪ್ರಾರಂಭಿಸಿದ. ಹೀಗೆ ತನ್ನ ವ್ಯಕ್ತಿತ್ವದಲ್ಲಿ ಮಹತ್ತರ ಬದಲಾವಣೆಗಳು ಆಗಿ ಆತನ ಮನಸಿನೊಂದಿಗೆ ಅವನ ಬುದ್ದಿಯೂ ಮಾಗಿತ್ತು.ಹಿಂದೊಮ್ಮೆ ಹುಡುಗಿಯರನ್ನು ಕಾರಣವಿಲ್ಲದೇ ತೆಗಳುತ್ತಿದ್ದವ ಇಂದು ಅವರನ್ನು ಹೊಗಳದಿದ್ದರೂ, ತೆಗಳುತ್ತಿರಲಿಲ್ಲ.

ಗೆಳೆಯರೆಲ್ಲರೂ ಬಂಕ್ ಮಾಡಿದ್ದರಿಂದ ಅಂದು ಅವರ ಗುಂಪಿನಲ್ಲಿ ಆವನೊಬ್ಬನೇ ಇದ್ದ. ಕ್ಲಾಸ್ ಮುಗಿಸಿ ಬಸ್‍ಸ್ಟ್ಯಾಂಡ್‍ಗೆ ಬಂದಾಗ, ಹಿಂದೆ ತಾನು ಯಾವ ಹುಡುಗಿಯನ್ನು ಬೈದಿದ್ದನೋ ಅದೇ ಹುಡುಗಿ ಅಲ್ಲಿ ನಿಂತಿದ್ದಳು, ಎರಡೂ ಕೈಗಳಲ್ಲಿ ಮೆಹೆಂದಿ ಮಿರಮಿರನೆ ಮಿಂಚುತ್ತಿತ್ತು. ಆಕೆಯಿಂದ ಬಂದ ಮುಗುಳುನಗೆಯ ಸ್ವಾಗತಕ್ಕೆ ತನ್ನ ನಗೆಯಿಂದಲೇ ಮರು ಉತ್ತರಿಸಿದ್ದ. ಮೊದಲು ಆಕೆಯೇ ಮೌನವನ್ನು ಮುರಿದಳು. ಆತ ಆಕೆಯನ್ನು ಮಾತನಾಡಿಸಿದ್ದು ಅದೇ ಮೊದಲು, ಆದರೆ ಆಕೆ ಮಾತ್ರ ಈತನನ್ನು ಹಳೆಯ ಸ್ನೇಹಿತನಂತೆ ಮಾತನಾಡಿಸಿದ್ದಳು. ಆ ಸಲುಗೆಯೇ ಆತನಿಗೆ ಆಕೆಯ ಮೇಲೆ ಗೌರವ ಮೂಡುವಂತೆ ಮಾಡಿತ್ತು. ನಂತರ ಆಕೆ ನೀಡಿದ ಹೇಳಿಕೆಯಿಂದ ಆತನಿಗೆ ಆಶ್ಚರ್ಯವನ್ನುಂಟುಮಾಡಿತು. ಆಕೆಯ ಬಗ್ಗೆ ಹುಡುಗರು ಆಡುತ್ತಿದ್ದ ಮಾತುಗಳೆಲ್ಲವೂ ಆಕೆಗೆ ತಿಳಿದಿತ್ತು, ಆದರೂ ಅದಕ್ಕೆ ಉತ್ತರ ಕೊಡದೆ ನಿರ್ಲಕ್ಷಿಸಿದ್ದಳು, ಇದನ್ನೆಲ್ಲಾ ಆತನ ಬಳಿ ಆಕೆ ಏಕೆ ಹೇಳುತ್ತಿದ್ದಳೆಂದು ಆತನಿಗೂ ತಿಳಿಯಲಿಲ್ಲ. ಆಕೆಯೊಡನೆ ಮಾತಾಡುತ್ತಲೇ ಬಸ್‍ಗೆ ಹತ್ತಿ ಕೂತರು. 25 ನಿಮಿಷದ ಅವಧಿಯ ಪ್ರಯಾಣದಲ್ಲಿ ಆಕೆಯ ವ್ಯಕ್ತಿತ್ವದ ಪರಿಚಯ ಆತನಿಗಾಯಿತು. ಎಲ್ಲರೊಡನೆಯೂ ಸ್ನೇಹದಿಂದ ವರ್ತಿಸುವ ಅವಳಿಗೆ ಆ ಸ್ನೇಹವೇ ಆಕೆಯ ಬಗ್ಗೆ ಇನ್ನಿಲ್ಲದ ಗುಸು ಗುಸು ಸಂಗತಿಗಳು ಹರಡಲು ಕಾರಣವಾಗಿದ್ದವು. ತನ್ನ ಸ್ಟಾಪ್ ಬಂದಾಗ ಅವನನ್ನು ನಗುಮುಖದಿಂದಲೇ ಬೀಳ್ಕೊಟ್ಟಳು. ಮನೆಗೆ ಬಂದು ನಡೆದ ಸಂಗತಿಗಳನ್ನು ಪರಾಮರ್ಶಿಸುತ್ತಿದ್ದಾಗ ತಾನು ಎಂತಹ ತಪ್ಪು ಮಾಡಿದ್ದೆ ಎಂಬುದು ಆತನಿಗೆ ಅರ್ಥವಾಗಿತ್ತು. ಯಾವುದೇ ಕಾರಣವಿಲ್ಲದೇ ಆಕೆಯನ್ನು ನಿಂದಿಸುತ್ತಿದ್ದುದು ಮಹಾಪರಾಧವಾಗಿ ತೋರಿತು.

ಇನ್ನು ಮುಂದೆ ಯಾರ ಬಗ್ಗೆಯೂ ಅಲ್ಪವಾಗಿ ಮಾತನಾಡಬಾರದೆಂಬ ತೀರ್ಮಾನಕ್ಕೆ ಬಂದ. ನಂತರದ ದಿನಗಳಲ್ಲಿ ಅವರಿಬ್ಬರ ಸ್ನೇಹ ಮತ್ತಷ್ಟು ಗಟ್ಟಿಯಾಗಿ ರೂಪುಗೊಂಡಿತು. ಆದರೆ ಕ್ಲಾಸ್‍ನಲ್ಲಿ ಆಕೆಯ ಜೊತೆ ಮಾತನಾಡಿದ್ದನ್ನು ಕಂಡ ಅವನ ಗೆಳೆಯರು ಅವರಿಬ್ಬರ ಬಗ್ಗೆ ಕುಹಕವಾಡಿದರು. ಅವರ ಆ ವರ್ತನೆಗೆ ಇವರು ಯಾವುದೇ ಸೊಪ್ಪು ಹಾಕಲಿಲ್ಲ. ಆಕೆಯನ್ನು ತನ್ನ ತಂಗಿಯಂತೆ ಕಾಣುತ್ತಿದ್ದ. ಆಕೆಯೂ ಸಹ ಈತನನ್ನು ಅಣ್ಣನೆಂದೇ ಸಂಭೋಧಿಸುತ್ತಿದ್ದಳು. ಆಕೆಯ ಮನೆಯ ಪರಿಸರದ ಬಗ್ಗೆ ತಿಳಿದಮೇಲಂತು ಆಕೆಯ ಬಗೆಗಿದ್ದ ಅಭಿಮಾನ ಮತ್ತಷ್ಟು ಹೆಚ್ಚಾಯ್ತು.

ಯಾವುದೇ ಸ್ತ್ರೀತತ್ವವನ್ನು ಭೋದಿಸದೆ, ತನ್ನನ್ನು ಹಗುರವಾಗಿ ಕಾಣುತ್ತಿದ್ದವರ ಬಗ್ಗೆ ಯಾವುದೇ ಕೋಪವಿಲ್ಲದೇ ತನ್ನ ಪಾಡಿಗೆ ತಾನು ಎಂಬಂತಿದ್ದು, ಹೆಣ್ಣಿನ ಬಗೆಗೆ ಗೌರವ ಮೂಡುವಂತೆ ಮಾಡಿದ ಆ ತಂಗಿಯನ್ನು ಸದಾ ನೆನೆಯುತ್ತಿದ್ದಾನೆ. ಯಾವುದಾದರು ಹುಡುಗಿ ಕಣ್ಣ ಮುಂದೆ ಹಾದುಹೋದರೆ ಆಕೆಯ ಬಗ್ಗೆ ಯಾವುದೇ ನಿಲುವು ತಾಳುವುದಕ್ಕೆ ಮುನ್ನ ಆ ತಂಗಿಯ ಪ್ರತಿರೂಪ ಇವನ ಕಣ್ಣಿನಲ್ಲಿ ಮೂಡುತ್ತಿತ್ತು.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.