ಡಿಂಪಲ್ ಹುಡುಗನ ಸಿಂಪಲ್ ಮಾತು

`ರೀ ಸನ್ನಿಧಿ..' ಅಂತ ತುಂಟತನದಿಂದ ಮಾತಾಡುತ್ತ, ಏನಾದರೂ ತರಲೆ ಮಾಡುತ್ತ, ಸದಾ ಹೆಂಡತಿಯ ಹಿಂದೆಮುಂದೆ ಸುತ್ತೋ ಈ ಹುಡುಗ ಅಂದ್ರೆ ಮಕ್ಕಳಿಂದ ಅಜ್ಜಿಯರವರೆಗೆ ಎಲ್ಲರಿಗೂ ಇಷ್ಟ. ಹೀರೋ ಆಗಲು ಪರ್ಫೆಕ್ಟ್ ಎನಿಸುವಂತಹ ಹೈಟ್, ಒಳ್ಳೆಯ ಪರ್ಸನಾಲಿಟಿ ಇರೋ ಸಿಲಿಕಾನ್‍ಸಿಟಿಯ ವಿಜಯ್ ಸೂರ್ಯ , ಅಗ್ನಿಸಾಕ್ಷಿ ಧಾರಾವಾಹಿಯ `ಸಿದ್ಧಾರ್ಥ್' ಪಾತ್ರದ ಮೂಲಕ ಮನೆ-ಮನಸುಗಳನ್ನು ತಟ್ಟಿದೋರು. ಇದೀಗ `ಇಷ್ಟಕಾಮ್ಯ'ದ ಮೂಲಕ ಎಲ್ಲರಿಗೂ ಇಷ್ಟವಾದವರು. ಡಿಂಪಲ್ ಕೆನ್ನೆಯ ಸಿಂಪಲ್ ಹುಡುಗನ ಒಂದಷ್ಟು ಮಾತುಗಳು ನಿಮಗಾಗಿ ಇಲ್ಲಿದೆ ನೋಡಿ.....

1. ಸೆಲೆಬ್ರಿಟಿ ಆಗಿದ್ದೀರಾ.. ಮೊದಲಿನ ಲೈಫ್‍ಗೂ ಈಗಿನ ಲೈಫ್‍ಗೂ ಏನು ವ್ಯತ್ಯಾಸ ಅನಿಸ್ತಿದೆ?

ಮೊದಲೆಲ್ಲ ಎಲ್ಲಿ ಬೇಕಾದ್ರೂ ಓಡಾಡ್ಕೊಂಡು ಆರಾಮಾಗಿರ್ತಿದ್ದೆ. ಆದರೆ ಈಗ ಎಲ್ಲೂ ಮುಖ ತೋರಿಸಿಕೊಂಡು ಓಡಾಡಾಕಾಗಲ್ಲ! ಎಲ್ಲೇ ಹೋದ್ರೂ ಜನ `ಹೇಯ್ ಸಿದ್ಧಾರ್ಥ್..' ಅಂತ ಮಾತಾಡಿಸ್ತಾರೆ. ನಂಗೆ ಮೊದಲಿಂದ್ಲೂ ಟ್ರಾಫಿಕ್ ಅಂದ್ರೆ ಆಗಲ್ಲ, ಜೋರಾಗಿ ರೇಗಾಡಿಬಿಡ್ತಿದ್ದೆ. ಆದ್ರೆ, ಈಗ ಹಾಗೆ ಮಾಡೋಕಾಗಲ್ಲ. ಕಷ್ಟಪಟ್ಟು ಸಿಟ್ಟು ಕಂಟ್ರೋಲ್ ಮಾಡ್ಕೊಂಡು ಕೂತಿರ್ತೀನಿ. ವಿಚಿತ್ರ ಅಂದ್ರೆ, ನೈಸ್ ರೋಡಲ್ಲಿ ಹೋಗೋವಾಗ ಅಲ್ಲಿನವರು ನನ್ನ ನೋಡಿ ಟೋಲ್ ದುಡ್ಡು ಕೊಡೋದು ಬೇಡ ಅಂತಾರೆ. ಪೊಲೀಸ್‍ನೋರು, ಪಾರ್ಕ್‍ಗೆ ಹೋದಾಗ ವಯಸ್ಸಾದವರು ಮಾತ್ರ ಅಲ್ಲದೆ ಮಕ್ಕಳೂ ನನ್ನ ಗುರುತು ಹಿಡೀತಾರೆ. ನನ್ನ ಪಾತ್ರ ಪ್ರತಿಯೊಂದು ವರ್ಗಕ್ಕೂ ಕನೆಕ್ಟ್ ಆಗ್ತಿದ್ಯಲ್ಲ ಅಂತ ಖುಷಿ ಆಗುತ್ತೆ.

2. ಮೊದಲು ಹಿರಿತೆರೆಯಲ್ಲಿ ನಟಿಸಿ ಕಿರುತೆರೆಗೆ ಬಂದಿದೀರ. ಎರಡರ ಅನುಭವ ಏನು?

ಸಿನಿಮಾದಲ್ಲಿ ದಿನಕ್ಕೆ ಒಂದೋ ಎರಡೋ ಸೀನ್ ಇರುತ್ತೆ, ಹಾಗಾಗಿ ಬೇಕಾದಷ್ಟು ಸಮಯ ಸಿಗುತ್ತೆ. ಆದ್ರೆ ಸೀರಿಯಲ್‍ನಲ್ಲಿ ದಿನಕ್ಕೆ 10-12 ಸೀನ್ ಇರುತ್ತೆ. ನಮಗೆ ಹೆಚ್ಚು ಟೇಕ್ ತಗೊಳೋಕೆ ಅವಕಾಶ ಇರಲ್ಲ. ಇದ್ದುದರಲ್ಲೇ ಬೆಸ್ಟ್ ಪರ್ಫಾರ್ಮೆನ್ಸ್ ಕೊಡ್ಬೇಕು. ಹಾಗಾಗಿ ಇಲ್ಲಿ ಕಲಿಯೋಕೆ ಸಾಕಷ್ಟು ಅವಕಾಶ ಇರುತ್ತೆ.

3. ಧಾರಾವಾಹಿಯ ನಟರೆಲ್ಲ ಸಿನಿಮಾದಲ್ಲಿ ಗೆಲ್ಲೋದಿಲ್ಲ ಯಾಕೆ?

ಇತ್ತೀಚೆಗೆ ಬಂದ ರಂಗಿತರಂಗ ಸಿನಿಮಾ ನೋಡಿದ್ರೆ.. ಅದರಲ್ಲಿ ಯಾವುದೇ ಕಮರ್ಷಿಯಲ್ ಅಂಶಗಳು ಕಾಣೋದಿಲ್ಲ. ಹಾಗಂತ ಅದೇನೂ ಆರ್ಟ್ ಸಿನಿಮಾ ಅಲ್ಲ. ಧಾರಾವಾಹಿಯಲ್ಲೂ ಹಾಗೇ. ಅಲ್ಲಿ ಕಮರ್ಷಿಯಲ್ ಮತ್ತು ಆರ್ಟ್ ಎರಡೂ ಅಲ್ಲದ ನೈಜ ಅನುಭವ ಕೊಡೋ ಅಂಶಗಳಿರುತ್ತೆ. ನಮ್ಮಲ್ಲಿ ಸಿನಿಮಾ ನೋಡೋರು ಧಾರಾವಾಹಿ ನೋಡಲ್ಲ. ಯಾವಾಗ ಧಾರಾವಾಹಿ ನೋಡೋರು ಚಿತ್ರಮಂದಿರದ ಕಡೆಗೆ ಹೋಗ್ತಾರೋ ಆಗ ಸಿನಿಮಾ ಯಶಸ್ವಿಯಾಗುತ್ತೆ ಅಂತ ನನಗನ್ಸುತ್ತೆ.

3. ಧಾರಾವಾಹಿಗಳಲ್ಲಿ ಹೊಸಮುಖಗಳು ಹೆಚ್ಚಾಗುತ್ತಿವೆಯಲ್ಲ..

ಹೌದು.. ನಾನು ಅಗ್ನಿಸಾಕ್ಷಿ ಧಾರಾವಾಹಿಗೆ ಆಯ್ಕೆಯಾದಾಗ ಹೆಚ್ಚು ಹೊಸಮುಖಗಳು ಇರಲಿಲ್ಲ. ಆದರೆ ಈಗ ಪ್ರತಿ ಧಾರಾವಾಹೀಲೂ ಫ್ರೆಶ್ ಅನಿಸುವ ಮುಖಗಳು ಕಾಣ್ತಾ ಇವೆ. ಇದು ಒಳ್ಳೆಯ ಬೆಳವಣಿಗೆ. ಸಿನಿಮಾದಷ್ಟೇ ಇಲ್ಲೂ ಅವಕಾಶಗಳು ಸೃಷ್ಟಿಯಾಗ್ತಾ ಇದೆ. ಈಗ ಕಥೆಯಷ್ಟೇ ನಟ-ನಟಿಯರೂ ಮುಖ್ಯವಾಗ್ತಿದ್ದಾರೆ.

4. ನಿಮ್ಮ ಡಯಟ್ ಹೇಗಿರುತ್ತೆ?

ಡಯಟ್? ಇಲ್ಲಪ್ಪಾ.. ನನಗೇನು ಬೇಕೋ ಅದನ್ನೆಲ್ಲ ತಿಂತೀನಿ. ನನ್ನಮ್ಮನೇ ನನ್ನ ಡಯಟಿಷಿಯನ್. ನನ್ನ ಆಹಾರದಲ್ಲಿ ತರಕಾರಿ, ಹಣ್ಣು ಎಲ್ಲವೂ ಸಾಕಷ್ಟಿರೋ ಹಾಗೆ ಅವರು ನೋಡಿಕೊಳ್ತಾರೆ. ನಾನೇನೇ ತಿಂದ್ರೂ ಸ್ವಲ್ಪ ಲಿಮಿಟ್‍ನಲ್ಲಿ ಇರ್ತೀನಿ. ಹಾಗೇ ವರ್ಕ್‍ಔಟ್ ಮಾಡೋದನ್ನು ತಪ್ಪಿಸೋದಿಲ್ಲ.

5. ನಿಮ್ಮ ಬಗ್ಗೆ ಬಹಳಷ್ಟು ಜನಕ್ಕೆ ಗೊತ್ತಿಲ್ಲದ ಯಾವುದಾದರೂ ವಿಷಯ ಇದೆಯಾ?

ನಟನೆಗೆ ಇಳಿಯುವವರೆಗೂ ಒಂದೇ ಒಂದು ಧಾರಾವಾಹಿ ನೋಡಿರದ ನನಗೆ ಸಿಕ್ಕಾಪಟ್ಟೆ ಸಿನಿಮಾ ಹುಚ್ಚು. ಅದು ಯಾವ ಭಾಷೆಯೇ ಇರಲಿ, ಮಧ್ಯರಾತ್ರಿ ಎದ್ದು ಸಿನಿಮಾ ನೋಡಿದ್ದೂ ಇದೆ. ಶೂಟಿಂಗ್ ಇಲ್ದೇ ಇರೋವಾಗ ಮನೆಯಲ್ಲೇ ಇರೋಕೆ ಬಹಳ ಇಷ್ಟ. ಬೋರ್ ಆಯ್ತು ಅಂದ್ರೆ ಕಾರ್ ತಗೊಂಡು ಮೈಸೂರಿಗೆ ಹೋಗ್ತೀನಿ. ಮೊದಲಿಂದ್ಲೂ ಲಾಂಗ್ ಡ್ರೈವ್ ಅಂದ್ರೆ ತುಂಬ ಇಷ್ಟ. ಆಗೆಲ್ಲ ಫ್ರೆಂಡ್ಸ್ ಜೊತೆ ರಾತ್ರಿ ಡ್ರೈವ್ ಹೋಗ್ತಿದ್ದೆ. ಈಗ ಅವರೆಲ್ಲ ಹೈಯರ್ ಸ್ಟಡಿಗೆ ಯುಎಸ್‍ಎಗೆ ಹೋಗಿದ್ದಾರೆ. ಹಾಗಾಗಿ, ಇಲ್ಲಿ ನಾನೊಂಥರಾ ಒಂಟಿ ಪಿಶಾಚಿ ಆಗ್ಬಿಟ್ಟಿದ್ದೀನಿ ನೋಡಿ..

6. ನಿಮ್ಮ ಜೀವನದ ತಮಾಷೆಯ ಕ್ಷಣ ಯಾವುದಾದ್ರೂ ಇದ್ಯಾ?

ನಾನು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅಭಿನಯಿಸೋಕೆ ಶುರು ಮಾಡಿದ ಮೇಲೆ ಸಾಕಷ್ಟು ಜನ ನಾನು ಸನ್ನಿಧಿ (ವೈಷ್ಣವಿ) ನಿಜವಾದ ಗಂಡ-ಹೆಂಡತಿ ಅಂದುಕೊಂಡಿದ್ದಾರೆ. ಯಾವುದಾದ್ರೂ ಪ್ರೋಗ್ರಾಂಗೆ ಹೋದ್ರೆ `ನಿಮ್ಮ ಹೆಂಡತಿ ಎಲ್ಲಿ?' ಅಂತ ಕೇಳ್ತಾರೆ. ನಮ್ಮ ಧಾರಾವಾಹಿಯಲ್ಲಿ ನಡೆಯೋ ಪ್ರತಿಯೊಂದನ್ನೂ ಸೀರಿಯಸ್ ಆಗಿ ತಗೋತಾರೆ. ಇನ್ನೊಂದು ತಮಾಷೆಯ ವಿಷಯ ಅಂದ್ರೆ, ಮೊದಲಿನ ಹಾಗೆ ಈಗಿನವರು ಆಟೋಗ್ರಾಫ್ ಕೇಳೋದಿಲ್ಲ. ಕೆಲವರು ಹುಡುಗಿಯರು ಫೋಟೋ, ಸೆಲ್ಫೀಗೆ ಸೀಮಿತವಾದ್ರೆ ಇನ್ನು ಕೆಲವರು `ನಿಮ್ಮನ್ನ ಒಂದು ಸಲ ಹಗ್ ಮಾಡಿಕೊಳ್ಬೇಕು' ಅಂತ ಡೈರೆಕ್ಟ್ ಆಗಿ ಬಂದು ಹಗ್ ಮಾಡಿಬಿಡ್ತಾರೆ. ನನ್ನ ಅಮ್ಮನ ಮುಂದೆ ಬಹಳ ಸಲ ಹೀಗೇ ಆಗಿದೆ. ಆಗೆಲ್ಲ ಸ್ವಲ್ಪ ಮುಜುಗರವೂ ಆಗುತ್ತೆ.

7. ಎಂದಿಗೂ ಮರೆಯೋಕೆ ಆಗದ ದಿನ ಅಂತ ಯಾವ್ದಾದ್ರೂ ಇದೆಯಾ?

ಬಹಳ ಚಿಕ್ಕವನಿದ್ದಾಗಲೇ ನಟನಾಗಬೇಕು ಅಂತ ಆಸೆ ಇತ್ತು. ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಡಿಗ್ರಿ ಮುಗಿಸಿಕೊಂಡ ನಂತರ ಮುಂಬೈನ ಸುಭಾಷ್ ಘಾಯ್ ಅವರ ವಿಸ್ಟ್‍ಲಿಂಗ್ ವುಡ್ಸ್ ಟ್ರೈನಿಂಗ್ ಸೆಂಟರ್‍ಗೆ ಅರ್ಜಿ ಹಾಕಿದೆ. ಆದರೆ ಅಲ್ಲಿ ತರಬೇತಿ ಪಡೆಯೋಕೆ 21 ವರ್ಷ ಆಗಿರಬೇಕಿತ್ತು. ನಾನು ಬಹಳ ಚಿಕ್ಕವನಿದ್ದೆ, ಹಾಗಾಗಿ ಸೆಲೆಕ್ಟ್ ಆಗೋದು ಡೌಟು ಅಂದಿದ್ರು. ಎರಡು ತಿಂಗಳ ಬಳಿಕ ನಾನು ಸೆಲೆಕ್ಟ್ ಆಗಿದ್ದೀನಿ ಅಂದ್ರು. ಎರಡು ವರ್ಷ ಅಲ್ಲಿ ತರಬೇತಿ ಪಡೆದೆ. ದಟ್ ವಾಸ್ ಮೋಸ್ಟ್ ಮೆಮೊರಬಲ್ ಡೇ ಇನ್ ಮೈ ಲೈಫ್.

8. ನಿಮ್ಮಲ್ಲಿ ನಿಮಗೆ ಇಷ್ಟವಾಗೋ ಗುಣ ಮತ್ತು ಇಷ್ಟವಾಗದ ಗುಣ ಯಾವುದು?

ನಾನು ಯಾವುದೇ ಕೆಲಸ ಮಾಡೋದಾದ್ರೂ ಅದು ಮುಗಿಯೋವರೆಗೆ ಬೇರೆ ಯಾವುದರ ಬಗ್ಗೆಯೂ ಯೋಚನೆ ಮಾಡಲ್ಲ. ಊಟ, ನಿದ್ರೆ ಬಿಟ್ಟು ಮಾಡಿದ್ದೂ ಇದೆ. ಆದರೆ, ನಾನು ಸ್ವಲ್ಪ ಹೆಚ್ಚೇ ಸೋಮಾರಿ. ಕೂತರೆ ಏಳಲ್ಲ, ಮಲಗಿದ್ರೆ ಕೂರಲ್ಲ! ನನ್ನಿಂದ ಕೆಲಸ ಶುರು ಮಾಡಿಸೋದು ಕಷ್ಟ. ಆಮೇಲೆ ಕಮಿಟ್‍ಮೆಂಟ್ ಇರುತ್ತೆ.

9. ನಿಮ್ಮ ರೋಲ್ ಮಾಡೆಲ್ ಯಾರು?

ನನಗೆ ರೋಲ್ ಮಾಡೆಲ್ ಅಂದ್ರೆ ನಮ್ಮಮ್ಮ. ಅವರು ಬಹಳ ಶ್ರದ್ಧೆಯಿಂದ, ಪ್ರೀತಿಯಿಂದ ನಮ್ಮನ್ನು ಬೆಳೆಸಿದ್ದಾರೆ. ನೈತಿಕತೆ, ನಿಯಮಗಳನ್ನಿಟ್ಟುಕೊಂಡು ಬದುಕಿದ್ದಾರೆ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಅವರ ಸಲಹೆ ಇರುತ್ತೆ. ಅವರು ನನ್ನ ಮೇಲೆ ನಂಬಿಕೆ ಇಟ್ಟು, ಲಕ್ಷಾಂತರ ರೂ. ಖರ್ಚು ಮಾಡಿ ಮುಂಬೈಗೆ ಕಳುಹಿಸದಿದ್ರೆ ನಾನು `ಸಿದ್ಧಾರ್ಥ್' ಆಗ್ತಾ ಇರ್ಲಿಲ್ಲ; ವಿಜಯ್ ಸೂರ್ಯ ಆಗೇ ಉಳಿದಿರ್ತಿದ್ದೆ..

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.