ಅಪಾಕೃತ

( ಅರಿಕೆ : ವ್ಯಕ್ತಿಗೆ ವಾಸ್ತವದಲ್ಲಿ ಬದುಕಿನ ಗಳಿಕೆ ಏನು..? ಮುಖ್ಯವಾಗಿರುವುದೇನು...?ಮೌಲ್ಯ ಹೊಂದಿದವರಿಗೆ ಅದರ ಪರಿಜ್ಞಾನವಿರುವುದಿಲ್ಲವೇ...? ನನಗೆ ಕಾಡಿದ ಒಂದು ಅಂಶದ ಬಗ್ಗೆ ಕತೆ ಬರೆಯಬೇಕೆನಿಸಿದಾಗ ಕೆಳಗಿನ ಕಥಾ ಹಂದರ ಸೃಷ್ಟಿಸಿದೆ.ಇದು ಚಿಂತನೆಗೆ ಗ್ರಾಸವಾಗಿದ್ದರೆ ತಿಳಿಸಿ.)

*** **** *** ***

ದೀಪ್ತಿ ಬಾಲ್ಯದಿಂದಲೂ ತಾಯಿಯ ಶಿಸ್ತಿಗೆ ಒಳಪಟ್ಟವಳು. ಸಾಮಾನ್ಯವಾಗಿ ಪಾಲಕರು ಮೊದಲ ಮಗುವಿಗೆ ಹೆಚ್ಚಿನ ಕಾಳಜಿ ತೋರ್ಪಡಿಸಿ ತಮ್ಮ ಕನಸಿನಂತೆ ರೂಪಿಸಲು ಬಲವಂತದ ಶಿಸ್ತಿನ ಹೇರಿಕೆಗೆ ಒಳಪಡಿಸುತ್ತಾರೆ. ಮತ್ತೆ ಮಕ್ಕಳು ಹುಟ್ಟಿದರೆ ಮೊದಲಿರುವ ಕಾಳಜಿ ಮಾಯವಾಗಿ ಬಿಡುತ್ತದೆ. ಅದರಲ್ಲೂ ಗಂಡು ಹುಡುಗರಾಗಿದ್ದರೆ ಮಾತ್ರ ಪ್ರೀತಿಸುವ ಸ್ವಾರ್ಥ ಭಾವನೆ ತೋರ್ಪಡಿಸುತ್ತಾರೆ. ದೀಪ್ತಿ ದೊಡ್ಡವಳಾದಂತೆ ತಂದೆ ತಾಯಿ ತಾತ್ಸಾರಕ್ಕೆ ಒಳಗಾದಳು. ಗಂಡು ಮಕ್ಕಳು ಮಾತ್ರವೇ ವಂಶದ ಕುಡಿ ಎಂದು ನಂಬಿದ್ದ ಸಮಾಜ....! ಅದರಂತೆ ಸಾವಿತ್ರಮ್ಮನ ವಿಚಾರಗಳು...! ಗಂಡು ಮಕ್ಕಳೇ ಅವಳಿಗೆ ಹೆಚ್ಚಿನವರಾಗಿ ಬಿಟ್ಟರು.

ಸಮಾಜದಲ್ಲಿ ಸ್ಥಾನಮಾನವಿಲ್ಲದ ಕೂಲಿಯವನು ಎನ್ನುವ ಭಾವನೆ ಮಗಳಲ್ಲಿ ಬರಬಾರದು ಎಂದು ತಂದೆ ಶರಣಪ್ಪ ದೀಪ್ತಿಯ ಬಗ್ಗೆ ಅತಿ ಹೆಚ್ಚಿನ ಪ್ರೀತಿ ವಾತ್ಸಲ್ಯ ತೋರ್ಪಡಿಸುತ್ತಿದ್ದರು. ಕಾಲೇಜಿಗೆ ಹೋಗಲು ಸಾಲ ಮಾಡಿ ಸೈಕಲ್ ಕೊಡಿಸಿದರು. ಅದಕ್ಕಾಗಿ ತಮ್ಮಂದಿರ ಕಚ್ಚಾಟ ಬೇರೆ...! ಹುಡುಗರ ಪಾಲಿಗೆ ಅವಳು ಕಾಲು ಕಸ...! ಗಂಡು ಹುಡುಗರ ಪರವಾಗಿ ತಾಯಿ ಸಾವಿತ್ರಮ್ಮ ವಾದಿಸಿ ಅವರನ್ನು ರಮಿಸುತ್ತಾ ದೀಪ್ತಿಯ ಮೇಲೆ ವಿಷ ಕಾರುವುದು ಇತ್ತೀಚೆಗೆ ಮಾಮೂಲಾಗಿ ಬಿಟ್ಟಿತ್ತು. ಮನೆಗೆ ತಡವಾಗಿ ಬಂದರೆ ಕಿಡಿ ಕಾರುತ್ತಿದ್ದಳು.

"ಯಾಕೆ ಲೇಟು...? ನಿನಗೆ ಹೇಳೋರು ಕೇಳೋರು ಯಾರೂ ಇಲ್ಲವಾ...?"

ಅವಳ ಯಾವ ಸ್ಪಷ್ಟೀಕರಣವೂ ಜಯ ಗಳಿಸುತ್ತಿರಲಿಲ್ಲ. ಒಂದೆರಡು ಚಡಿ ಏಟು ನೀಡಿದ ಮೇಲೆಯೇ ಅವಳಿಗೆ ಸಮಾಧಾನ. ಇಂಥ ತಾಯಂದಿರು ಇದ್ದಾರಲ್ಲವೇ...!? ಗಂಡನಿಗಿಂತ ತಾನೇ ಹೆಚ್ಚಿಗೆ ಓದಿದವಳು, ತಿಳಿದವಳು ಎನ್ನುವ ಅಹಂಕಾರ ಇರಬೇಕು. ತನ್ನ ಮೂಗಿನ ನೇರಕ್ಕೆ ಎಲ್ಲರನ್ನು ಅಳೆಯುವಂಥ ದೃಷ್ಟಿ...! ಶ್ರೀಮಂತ ಮನೆತನದಲ್ಲಿ ಬೆಳೆದು ಈ ಕೂಲಿಕಾರನ ಕೈ ಹಿಡಿದಿರುವ ದುರದೃಷ್ಟಕ್ಕೆ ಮರುಗಿ, ಒಣ ದೊಡ್ಡಸ್ತಿಕೆಯಲ್ಲಿ ಎಲ್ಲರ ಮೇಲೆ ಸಿಟ್ಟು ಸೆಡವುಗಳನ್ನು ತೋರ್ಪಡಿಸುವ ಸಾವಿತ್ರಮ್ಮ ಗಂಡನಿಗೆ ಬಿಡಿಸದ ಒಗಟಾಗಿದ್ದಳು. ದಿನ ಕಚ್ಚಾಟ..., ಬೀದಿ ರಂಪಾಟ...! ಇದು ದೀಪ್ತಿಗೆ ಹಿಡಿಸದು. ಮಗಳ ಆಂತರಿಕ ಸ್ಪುರಣ ಅವಳ ಅಂತರಂಗಕ್ಕೆ ತಟ್ಟುತ್ತಿರಲಿಲ್ಲ. ಇಂಥ ತಾಯಿ ಇದ್ದರೂ ತನ್ನ ಸ್ವಂತ ಪರಿಶ್ರಮದಲ್ಲಿ ಕಾಲೇಜ್ ವ್ಯಾಸಂಗ ಮುಂದುವರಿಸಿ, ಹಲವಾರು ಹವ್ಯಾಸಗಳನ್ನು ಬೆಳೆಸಿಕೊಂಡಳು ದೀಪ್ತಿ .

ವಿಶೇಷವಾಗಿ ಭಾಷಣ ಕಲೆ ಅವಳಿಗೆ ಸಿದ್ಧಿಸಿತ್ತು. ವೇದಿಕೆ ಮೇಲೆ ಮಾತಾಡುವ ಧೈರ್ಯವಿದ್ದರೂ ಮನೆಯಲ್ಲಿ ಬಾಯಿ ಬಿಡದ ಸ್ಥಿತಿ. ಕಾಲೇಜಿನ ಗಂಡು ಹುಡುಗರ ಹೆಸರು ಎತ್ತಿದರೂ ಅಪರಾಧ ಎನ್ನುವ ಮಾನಸಿಕ ಬಂದೊಬಸ್ತಿ. ಇದಕ್ಕೆ ತಾಳ ಹಾಕುವ ತಮ್ಮಂದಿರು...! ಅಕ್ಕನ ಹಿಂದೆ ನೆರಳಿನಂತೆ ಸುತ್ತಿ ಪತ್ತೆದಾರಿ ಕೆಲಸ ಮಾಡಿ ತಾಯಿಗೆ ವರದಿ ಒಪ್ಪಿಸಿ ರಾತ್ರಿ ಇನ್ನೊಂದು ಕುರುಕ್ಷೇತ್ರಕ್ಕೆ ಕಾರಣರಾಗಿ ಬಿಡುತ್ತಿದ್ದರು. ಸ್ವಾತಂತ್ರ್ಯ ಪ್ರಿಯಳಾದ ದೀಪ್ತಿಗೆ ಮನೆಯ ಪರಿಸರ ಜೈಲಿನಂತಾಗಿತ್ತು. ಎದ್ದರೂ ತಪ್ಪು , ಕುಳಿತರು ತಪ್ಪು ಎನ್ನುವ ಮಟ್ಟಿಗೆ ಅವಳ ನಡತೆಯನ್ನು ಶಂಕಿಸುತ್ತಿದ್ದರು. ಇದರಿಂದ ದೀಪ್ತಿ ರೋಸಿ ಹೋಗಿದ್ದಳು.

ಕಾಲೇಜ್ ಕೊನೆಯ ವರ್ಷದಲ್ಲಿರುವಾಗಲೇ ಪ್ರಶಾಂತನ ಒಡನಾಟ...! ಅವನು ಕಬಡ್ಡಿ ಚಾಂಪಿಯನ್. ಅವನ ಅಭಿಮಾನಿಯಾಗಿ ಬಿಟ್ಟಳು. ಇವಳು ಖೊ ಖೋ ಚಾಂಪಿಯನ್, ಜೊತೆಗೆ ಭಾಷಣಗಾರ್ತಿ. ಇವಳ ವಾಕ್ಚಾತುರ್ಯಕ್ಕೆ ಪ್ರಶಾಂತ್ ಸೋತು ಬಿಟ್ಟ. ಒಬ್ಬರನ್ನೊಬ್ಬರು ಮೆಚ್ಚಿ ಪತ್ರ ಬರೆದುಕೊಂಡರು.

ಪ್ರಶಾಂತ್ ಬದುಕುವ ರೀತಿ ಅವನ ಅಪ್ಪನಿಗಿಂತ ಭಿನ್ನ ರೀತಿಯದು. ಅವನನ್ನು ಮಂತ್ರಿಯ ಮಗ ಎಂದು ಯಾರೂ ಹೇಳುತ್ತಿರಲಿಲ್ಲ. ತುಂಬಾ ಸಿಂಪಲ್. ಅಷ್ಟೇ ನಿಗರ್ವಿ ಕೂಡಾ...! ಯಾರ ತಂಟೆಗೂ ಹೋಗದೆ ತನ್ನ ಪಾಡಿಗೆ ತಾನಿರುವ ಸಂಕೋಚ ಸ್ವಭಾವದ ಭಾವನಾ ಜೀವಿ. ಮುಟ್ಟಿದರೆ ಮುದುಡುತ್ತಾನೇನೋ ಎನ್ನುವಂಥ ವ್ಯಕ್ತಿತ್ವ...! ಮಂತ್ರಿಯ ಮಗ ಎಂದು ಈವರೆಗೆ ಅವನು ಯಾರಲ್ಲೂ ಹೇಳಿಕೊಂಡಿಲ್ಲ. ಅವರಪ್ಪ ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿದರೆ ಅಲ್ಲಿ ಹೋಗದೇ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಆರಿಸಿಕೊಂಡು ಜನಸಾಮಾನ್ಯರಂತೆ ಬದುಕಲು ಮುಂದಾದವನು. ವರದಕ್ಷಿಣೆ ಪಡೆದು ಭವ್ಯವಾಗಿ ಮದುವೆ ಮಾಡಬೇಕೆನ್ನುವ ತಂದೆಯ ಕನಸು ಕೂಡ ನೆರವೇರಲಿಲ್ಲ. ತಂದೆಗೆ ದೀಪ್ತಿ ವಿಷಯ ತಿಳಿಸಿದ. ಕೆಂಡವಾದರು. ಒಪ್ಪಿಗೆ ನೀಡಲಿಲ್ಲ.

"ಬಡವರ ಹುಡುಗಿ, ವರದಕ್ಷಿಣೆ ನೀಡಲು ಸಾಧ್ಯವಿಲ್ಲದ ಕೂಲಿಕಾರನ ಜೊತೆ ಬಾಂಧವ್ಯ...!? ಛಿ..." ಎಂದು ಹಂಗಿಸಿ ಮಗನನ್ನು ಮನೆಯಿಂದ ಹೊರಗೆ ಅಟ್ಟಿದರು. ತನ್ನ ದುಃಖವನ್ನು ದೀಪ್ತಿಯಲ್ಲಿ ತೋಡಿಕೊಂಡ. ಅವಳ ಪ್ರೀತಿ ಇನ್ನೂ ದ್ವಿಗುಣಗೊಂಡಿತು. ಅವನಿಗಾಗಿ ಪ್ರಾಣವನ್ನೇ ತೊರೆಯಲು ಮುಂದಾದಳು. ಡಿಗ್ರಿ ಮುಗಿದ ತಕ್ಷಣ ನೌಕರಿ ಸಿಕ್ಕಿರುವುದು ಪ್ರಶಾಂತನ ಅದೃಷ್ಟವೇ ಎನ್ನಬೇಕು. ಅದೇ ಊರಿನಲ್ಲಿ ಕೆಲಸಕ್ಕೆ ಸೇರಿಕೊಂಡ. ಸ್ವಾವಲಂಬಿಯಾದ.

ಆ ದಿನ ಅವಳಿಗೆ ಹೇಳಿದ,

" ನನಗೆ ನೌಕರಿ ಸಿಕ್ಕಿತಲ್ಲ ದೀಪ್ತಿ, ಮನೆ ನೋಡಿದ್ದೇನೆ. ಮದುವೆ ದೇವಸ್ಥಾನದಲ್ಲಿ....ಓ..ಕೆ...? "

ಅವಳು ಚಿಂತಿಸಿದಳು. ಬಹಳ ಹೊತ್ತಿನ ನಂತರ ಹೇಳುವುದೊ ಬಿಡುವುದೊ ಎನ್ನುವ ಸಂಕೋಚದಲ್ಲಿ ಉಸುರಿದಳು.

"ನಮ್ಮಪ್ಪನಿಗೆ ಮದುವೆ ಮಾಡಿಕೊಡಲು ಇಷ್ಟವಿಲ್ಲ. ಕೆಲಸ ಮಾಡಿಕೊಂಡು ಮನೆಯಲ್ಲಿಯೇ ಕೊಳೆಯಬೇಕೆನ್ನುವುದು ನಮ್ಮಮ್ಮನ ಇಂಗಿತ. ಅವರ ದಿನದ ಕಿತ್ತಾಟ ನೋಡಿ ನನಗೆ ಬೇಸರವಾಗಿದೆ. ನಿಮ್ಮ ಪ್ರೀತಿ ಸಿಗದಿದ್ದರೆ ನಾನೆಂದೋ ಸತ್ತು ಹೋಗುತ್ತಿದ್ದೆ. ನೀವು ಹೇಗೆ ಹೇಳ್ತಿರೋ ಹಾಗೆ..." ಎಂದು ತನ್ನ ಮನವನ್ನು ಅವನಿಗೆ ಅರ್ಪಿಸಿದಳು.

ಒಂದೊಂದು ಅಂಶದ ಕೊರತೆ ಅಥವಾ ಹೆಚ್ಚುವರಿ ಸಂಗತಿ ವ್ಯಕ್ತಿಯ ಸ್ವಭಾವವನ್ನೇ ಬದಲಿಸಿಬಿಡುತ್ತದೆ. ನಮ್ಮ ಎಷ್ಟೋ ವರ್ತನೆಗಳಿಗೆ ಸ್ಪಷ್ಟವಾದ ಅರ್ಥಗಳೇ ಸಿಗುವುದಿಲ್ಲ. ಅವಳ ಮಾತುಗಳಿಗೆ ಪ್ರಶಾಂತ್ ಖುಷಿಯಾದ.

"...ಹಾಗಾದರೆ ನಾವಿಬ್ಬರೇ ದೇವಸ್ಥಾನದಲ್ಲಿ ಮದುವೆಯಾಗಿ ಬಿಡೋಣ. ಯಾರೂ ಬರೋದು ಬೇಡ. ನೀನು ನನ್ನ ಜೊತೆ ಬರಲು ಸಿದ್ಧಳಿದ್ದಿಯಾ...?"

"ಹ್ಞುಂ..."

"ಹಾಗಲ್ಲ, ಪರ್ಮನೆಂಟಾಗಿ..., ತಿರುಗಿ ನಿನ್ನ ಮನೆಗೆ ಹೋಗುವಂತಿಲ್ಲ. ನಿಮ್ಮಮ್ಮ ಅಪ್ಪನನ್ನು ನೆನೆಸುವಂತಿಲ್ಲ..., ಯೋಚಿಸಿ ಹೇಳು..."

"ಯೋಚಿಸುವುದೇನು ಬಂತು..? ನೀವೇ ನನ್ನ ಪ್ರಾಣ ಆಗಿರುವಾಗ ನನಗೆ ಬೇರೆ ಮನೆ ಯಾಕೆ...? ನೀವೇ ನನ್ನ ಸರ್ವಸ್ವ..! ನಿಮಗಾಗಿ ಈ ಜೀವ ಮುಡಿಪು. ನಿಮ್ಮ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುತ್ತೇನೆ."

ಭಾವಪೂರ್ಣವಾಗಿ ಉಲಿದು ಅವನ ಬಾಹುಗಳಲ್ಲಿ ಸೇರಿಕೊಂಡಳು. ಮನೆಯ ಪರಿಸರಕ್ಕೆ ರೋಸಿ ಪ್ರೀತಿಯ ಸೆಲೆ ಕಂಡಿದೆಡೆ ವಾಲಿ ತನ್ನ ಬದುಕನ್ನು ರೂಪಿಸಿಕೊಳ್ಳಲು ಸಿದ್ಧಗೊಂಡಿರುವುದು ಅವಳ ಬೌದ್ಧಿಕ ಮಟ್ಟಕ್ಕೆ ಅನುಗುಣವಾಗಿಯೇ ಇತ್ತು. ಒಬ್ಬ ಕೂಲಿಕಾರ ತನ್ನ ಮಗಳಿಗೆ ವರದಕ್ಷಿಣೆ ನೀಡಿ ಮದುವೆ ಮಾಡಿ ಕೊಡುವುದಂತೂ ಅಸಾಧ್ಯದ ಮಾತಾಗಿತ್ತು. ಅವಳಿಗೆ ತನ್ನ ಹಣೆಬರಹ ಎಂದೋ ತಿಳಿದು ಹೋಗಿತ್ತು. ಪ್ರಶಾಂತ್ ಆಸರೆಯಾದದ್ದು ಅವಳಲ್ಲಿ ಬದುಕು ಸಾರ್ಥಕವಾಯಿತು ಎಂಬ ಧನ್ಯತೆಯ ಭಾವನೆ ತರಿಸಿತ್ತು. ಅವನ ಇರಾದೆಗೆ ತಕ್ಕಂತೆ ಮನೆಯಿಂದ ಓಡಿ ಬರಲು ಸಿದ್ಧಳಾದಳು ಕೂಡ. ಯಾರಿಗೂ ತಿಳಿಸದೆ ಮನೆಯಿಂದ ಹೊರ ಬಂದಳು.

ಪ್ರಶಾಂತನೊಡನೆ ಮದುವೆಯಾಗಿ ಸಂಸಾರ ಹೂಡಿದಳು. ವಿಷಯ ತಿಳಿದು ಸಾವಿತ್ರಮ್ಮ ಬೊಬ್ಬೆ ಹಾಕಿದಳು. ಶರಣಪ್ಪ ಮೌನವಾಗಿ ನೋವನ್ನು ನುಂಗಿಕೊಂಡ. ಗಂಡು ಹುಡುಗರು ಮನಸ್ಸಿಗೆ ಬಂದಂತೆ ಮಾತಾಡಿ ನಾಲಿಗೆ ಚಪಲ ತೀರಿಸಿಕೊಂಡರು.

ಪ್ರಶಾಂತನಿಗೆ ದೂರದ ಊರಿಗೆ ವರ್ಗವಾಯಿತು. ಕೈತುಂಬ ಸಂಬಳ...! ಯಾವುದಕ್ಕೂ ಕೊರತೆ ಇಲ್ಲ. ವಿಶಾಲವಾದ ಮನೆಯನ್ನು ಬಾಡಿಗೆಗೆ ಹಿಡಿದ. ಮನೆಯ ಅಂಗಳ ದೀಪ್ತಿಗೆ ತುಂಬಾ ಹಿಡಿಸಿತು. ಬಹಳ ದಿನಗಳಿಂದ ಹೂ-ಗಿಡ ಬೆಳೆಸಬೇಕೆಂಬ ಆಸೆ ಈಗ ಕೈ ಗೂಡುವಂತಾಗಲು ಹರ್ಷಗೊಂಡಳು. ಪಾತಿಗಳನ್ನು ನಿರ್ಮಿಸಿ ಇಷ್ಟವಾದ ಹೂ ಗಿಡಗಳನ್ನು ತಂದು ನೆಟ್ಟಳು. ಇದರೊಂದಿಗೆ ಇಡೀ ದಿನ ಮನೆ ಕೆಲಸ ಕೂಡಾ...! ಅವಳ ಪರಿಶ್ರಮಕ್ಕೆ ಗಂಡ ಮುರುಗಿ,

"ದೀಪ್ತಿ ಯಾಕೆ ತೊಂದರೆ ತಗೋತಿಯಾ....? ಮನೆ ಕೆಲಸದವರನ್ನು ನೋಡಬಾರದೇ..?" ಎಂದ.

"ಅದರ ಅವಶ್ಯಕತೆ ಇಲ್ಲ. ಕೂಲಿಗೆ ಕೊಡುವ ಹಣ ನನಗೇ ಕೊಡಿ... ಆಯ್ತಾ...?"

"ನಿನ್ನಂಥ ಭಾಷಣಗಾರ್ತಿ ಜತೆ ಮಾತಾಡಿ ಗೆದ್ದವರುಂಟೆ....? ಅದೆಷ್ಟು ದುಡಿಯುತಿಯೋ ದುಡಿ..." ಎಂದು ಕೈಚೆಲ್ಲಿ ಕುಳಿತ. ಇಂಥವುಗಳಿಗೆ ಅವಳು ಹೇಳುವ ಮಾತೇ ಬೇರೆ..!

"ಒಂದು ಕಾಫಿ ಕುಡಿದರೂ ಅದರಷ್ಟು ಕೆಲಸ ಮಾಡಬೇಕೆನ್ನುವವಳು ನಾನು. ನನಗೆ ಯಾರ ಋಣವು ಬೇಕಾಗಿಲ್ಲ" ಅವಳ ಮಾತು ಅವನಿಗೆ ಒಗಟಾಯಿತು.

"ಗಂಡನೂ ಋಣದ ವಸ್ತುವೇ...?"

ದಿನಗಳು ಉರುಳಿದವು. ದಿನಾಲು ಗಂಡ ಬಸ್ಸಿನಲ್ಲಿ ಹೋಗಿ ಬರೋದು ಅವಳಿಗೆ ಇಷ್ಟವಾಗಲಿಲ್ಲ. ಅಪ್ಪ ಕಾರಿನಲ್ಲಿ, ಮಗ ಬಸ್ಸಿನಲ್ಲಿ...!? ಇದಾವ ನ್ಯಾಯ....?

"ನಿಮ್ಮ ತಂದೆಯವರು ಮಂತ್ರಿಗಳು ಅಂತೀರಾ..! ? ನಿಮಗೊಂದು ಬೈಕ್ ಕೊಡಿಸಲು ಶಕ್ತರಾಗಿಲ್ಲವೇ...?"

"ನಮ್ಮಪ್ಪನ ಋಣ ನನಗೇನೂ ಬೇಕಾಗಿಲ್ಲ ದೀಪ್ತಿ. ನನಗೂ ನಿನ್ನ ಗುಣಗಳೇ ಬರುತ್ತಿವೆ. ಸಾಲ ಮಾಡಿ ಬೈಕ್ ತಗೋತ್ತೀನೆ ಹೊರತು ನಮ್ಮ ಅಪ್ಪನಿಂದ ಬೇಡಿ ಪಡೆಯುವುದಿಲ್ಲ..."

"ಶಹಬ್ಬಾಸ್.." ಎಂದು ಅವನಿಗೆ ಪ್ರೋತ್ಸಾಹ ನೀಡಿದಳು.

ವಾರದಲ್ಲಿ ಮನೆಗೆ ಬೈಕ್ ಬಂತು. ಊರೆಲ್ಲ ಸುತ್ತಿದ. ದೀಪ್ತಿಯನ್ನು ಸುತ್ತಾಡಿಸಿದ. ಮನೆಗೆ ಬೇಕಾದ ಸಾಮಾನುಗಳನ್ನು ದೀಪ್ತಿ ಒಂದೊಂದಾಗಿ ಜೋಡಿಸಿ ಕೊಳ್ಳತೊಡಗಿದಳು. ಸಭೆ ಸಮಾರಂಭಕ್ಕೆ ಭಾಷಣಕ್ಕಾಗಿ ಆಹ್ವಾನಗಳು ಬರತೊಡಗಿದವು. ಪ್ರಶಾಂತನನ್ನು ದೀಪ್ತಿಯ ಗಂಡ ಎಂದು ಗುರುತಿಸುವಂತಾಯಿತು. ಅವಳ ಬಾಹ್ಯ ಚುಟುವಟಿಕೆಗಳು ಹೆಚ್ಚಾದಂತೆ ಪ್ರಶಾಂತ್ ಮಂಕಾದ.

ಹುಚ್ಚು ಮನಸ್ಸಿಗೆ ಮುಖಗಳು ಹತ್ತಾರು. ನಂಬಿದ್ದ ಮೌಲ್ಯವು ಶಾಶ್ವತವಲ್ಲ..! ಆಯಾ ಸನ್ನಿವೇಶಕ್ಕೆ ಒಂದೊಂದು ತರಹ...! ಈಗ ಸರಿ ಅನಿಸಿದ್ದು ಇನ್ನೊಮ್ಮೆ ಹುಸಿಯಾಗಿ ತೋರುತ್ತದೆ. ಮನಸ್ಸಿಗೆ ಕಿರಿಕಿರಿ ಆದಾಗ ಏನೂ ಬೇಡವಾಗುತ್ತದೆ. ಶಾಂತಿಯೊಂದೇ ಇಲ್ಲಿ ಪ್ರಮುಖ ಅಂಶ...! ಮನಸ್ಸಿನ ನೆಮ್ಮದಿಗಾಗಿಯೇ ಇಡೀ ಬದುಕಿನ ಚಟುವಟಿಕೆಗಳು...! ನಿತ್ಯ ಸಂಘರ್ಷ...! ವ್ಯಕ್ತಿ ಮುಳುಗಿ ಏಳುವ ಈ ಹೋರಾಟ ಕೇವಲ ಮನಸ್ಸಿನ ಸುಖಕ್ಕಾಗಿ ಶಾಂತಿಗಾಗಿ ಅಲ್ಲವೇ...? ಅನುಭವದ ಪ್ರಕ್ರಿಯೆಯಲ್ಲಿ ತೆರೆದುಕೊಳ್ಳುವ ಸತ್ಯಗಳು ಬದುಕಿನ ಒಂದೊಂದು ತತ್ವ ಸಾರಕ್ಕೆ ಕನ್ನಡಿ ಹಿಡಿದಂತಿಲ್ಲವೇ...!?

ಸಾವಿತ್ರಿಯ ಮೈ ಹುಷಾರಿಲ್ಲವೆಂಬ ಸುದ್ದಿ ಊರಿನಿಂದ ಬಂತು. ಸಂಜೆ ಕಚೇರಿಯಿಂದ ಬಂದ ಗಂಡನಿಗೆ ಆತಂಕದಲ್ಲಿ ದೀಪ್ತಿ ವಿಷಯ ತಿಳಿಸಿದಳು.

"ನಾನು ಹೋಗಬೇಕ್ರಿ, ಅಮ್ಮನಿಗೆ ಹುಷಾರಿಲ್ಲ ಎಂದ ಮೇಲೆ ನಾನು ಹೋಗದಿದ್ದರೆ ಜನ ಏನೆಂದಾರು...? ಕೊನೆಗಾಲಕ್ಕೆ ಮಗಳು ಹತ್ತಿರ ಇಲ್ಲ ಎನ್ನುವಂತಾಗಬಾರದು..." ಎಂದಳು. ಅವನ ಸ್ವಾಭಿಮಾನ ಭುಗಿಲೆದ್ದಿತು..

"ಬೇಡ, ನಿಮ್ಮಮ್ಮ ಕೆಟ್ಟವಳು ಅಂತ ನೀನೇ ಹೇಳಿದಿಯಲ್ಲ. ಮತ್ತೆ ಯಾಕೆ ಹೋಗ್ತಿಯಾ...? ಬೇಡ..." ತನ್ನ ನಿರ್ಧಾರ ತಿಳಿಸಿದ.

"ಅವಳು ಹೇಗಿದ್ದರೂ ನನ್ನ ತಾಯಿ ತಾನೇ..?"

"ಇರಬಹುದು. ಆದರೆ ನನಗೆ ಇಷ್ಟವಿಲ್ಲ. ನಿನಗೆ ಅಮ್ಮ ಮುಖ್ಯನೋ... ಗಂಡ ಮುಖ್ಯನೋ...? ಯೋಚಿಸಿ ಹೇಳು." ಎಂದವನೇ ಧಡ ಧಡ ಬಚ್ಚಲು ಕೋಣೆಗೆ ಹೋಗಿ ಕೈಕಾಲು ಮುಖ ತೊಳೆದು ಟಿವಿ ಮುಂದೆ ಬಂದು ಕುಳಿತ. ದೀಪ್ತಿ ಮರುಗುತ್ತಾ ಕಂಬನಿ ಹರಿಸಿ ಸಮಾಧಾನ ಪಟ್ಟುಕೊಂಡಳು. ಅವಳಿಗೆ ಗಂಡನೇ ಮುಖ್ಯ ಎಂದು ತಿಳಿದ ಪ್ರಶಾಂತ್ ಖುಷಿ ಪಟ್ಟ. ಆದರೆ ಗಂಡ ತನ್ನನ್ನು ಮನಃಪೂರ್ವಕವಾಗಿ ಪ್ರೀತಿಸುತ್ತಿಲ್ಲವೆಂಬ ಅನುಮಾನ ಬಂದು ಮಂಕಾದಳು.

ದಿನನಿತ್ಯವು ವಿಚಿತ್ರ ಅನಿಸಿಕೆಗಳು...!? ಯಾಕೆ ಹೀಗೆ...? ಸೂಕ್ಷ್ಮವಾಗಿ ಬದುಕು ನಿರ್ವಹಿಸುವವರಿಗೆ ಪ್ರೀತಿಯು ಸಾಕ್ಷಾತ್ಕಾರವಾಯಿತೆಂದು ಕೊಂಡರೆ ವರ್ತನೆಗಳು ಒಬ್ಬರಿಂದ ಒಬ್ಬರಿಗೆ ಸಡಿಲುಗೊಂಡವಲ್ಲಾ...!? ಪ್ರೀತಿ ವ್ಯಾಪಾರದ ವಸ್ತುವಾಯಿತೇ...? ಸ್ವಾರ್ಥಕ್ಕೆ ಬಳಸಿಕೊಂಡರೆ...? ಅಮರ ಪ್ರೇಮಿಗಳಾಗಲು ಹಾತೊರೆದವರು ಎಂದೇನಲ್ಲ..! ಪ್ರಾಯದವರನ್ನು ಒಂದು ಗೂಡಿಸುವ ಅದ್ಭುತ ಶಕ್ತಿಗೆ 'ಪ್ರೀತಿ ಪ್ರೇಮ' ಹೆಸರು ಕೇವಲ ನೆವ ಮಾತ್ರವೇನೋ...! ವಾಸ್ತವ ಸಂಗತಿ ಬೇರೆಯೇ ಇರಬೇಕು...! ಈ ನಿಗೂಢ ಸತ್ಯ ಎಷ್ಟು ಜನಕ್ಕೆ ಅರ್ಥವಾದೀತು...!? ಮೂಲವಾಗಿ ಅಸ್ಥಿರ ಹೃದಯಕ್ಕೆ, ಕಾಮಕ್ಕೆ ಬೇಕಾಗಿದ್ದು ಸಂಗಾತಿ.... ಜೊತೆಗಾತಿ ಮಾತ್ರ..! ಬೌದ್ಧಿಕ ಮಟ್ಟದಲ್ಲಿ ಇದು ಅನಿವಾರ್ಯವಾದರೆ ಮಾನಸಿಕವಾಗಿ ಹೊಂದಿಕೊಳ್ಳಲು ಹೊಯ್ದಾಡುವ ಸ್ವರೂಪವೇ ಬೇರೆ. ಇದರಲ್ಲಿ ಯಶಸ್ವಿಯಾದವರು ತುಂಬಾ ವಿರಳ. ಪ್ರೀತಿಯೂ ಒಂದು ಮೌಲ್ಯ. ಯಾರಿಗೆ ಯಾವುದು ಮುಖ್ಯ ಎನ್ನುವುದೇ ಹಲವರಿಗೆ ಗೋಜಲು. ನಾನು ಅರಿಕೆಯಲ್ಲಿ ತಿಳಿಸಿರುವಂತೆ ಈಗ ಒಂದು ಪ್ರಸಂಗ ಹೇಳಿ ಕತೆ ಮುಗಿಸುತ್ತೇನೆ.

ದಿನನಿತ್ಯದಂತೆ ಪ್ರಶಾಂತ್ ಬೈಕ್ ತಳ್ಳುತ್ತಾ ಅಂಗಳದ ಪಾರ್ಶ್ವಕ್ಕೆ ತಂದು ನಿಲ್ಲಿಸಿದ. ವಾಹನ ಅರ್ಧ ಬಿಸಿಲಿನಲ್ಲಿ ಒಣಗಿ ಹೋಗುತ್ತಿರುವುದು ಅವನಿಗೆ ಕಸಿವಿಸಿಯ ಸಂಗತಿಯಾಗಿತ್ತು. ಪ್ರಾರಂಭದಲ್ಲಿ ಮನೆಯೊಳಗೆ ಇಡುತ್ತಿದ್ದವನು, ಈಗ ನೆರಳು ಬಂದೆಡೆ ಹೊರಗೆ ನಿಲ್ಲಿಸುತ್ತಿದ್ದ. ಆಗಾಗ ಸ್ಥಳ ಬದಲಾಯಿಸುತ್ತಿದ್ದ. ಈ ದೊಂಬರಾಟಕ್ಕೆ ಅಕ್ಕ ಪಕ್ಕದವರು ನಗುತ್ತಿದ್ದರು. ಬಿಸಿಲಿನಿಂದ ತಪ್ಪಿಸುವ ಹುನ್ನಾರ ಅವನದು.

ಗೋಡೆಯ ಪಕ್ಕದ ಗುಲಾಬಿ ಗಿಡವು ಗಾಡಿಯ ನಿಲ್ದಾಣಕ್ಕೆ ಅಡ್ಡಿಯಾಯಿತು. ಅದನ್ನು ನಿರ್ದಯಿಯಾಗಿ ಕಿತ್ತು ಬಿಸಾಡಿದ. ಕಂಬ ನೆಟ್ಟು ತಾತ್ಕಾಲಿಕವಾಗಿ ಬೈಕಿಗೆ ನೆರಳು ಮಾಡಲು ಶಾಮಿಯಾನನ್ನು ಸಿದ್ಧಗೊಳಿಸಿದ. ಮನೆಯೊಳಗೆ ಬಂದ. ತನ್ನ ಕಾರ್ಯಕ್ಕೆ ಖುಷಿಗೊಂಡು,

"ಏನು ಮಾಡ್ತಿದ್ದೀಯಾ..? ಹೊರಗೆ ನೋಡು, ಸದ್ಯ ಬಿಸಿಲಿನ ಸಮಸ್ಯೆ ಬಗೆಹರಿಯಿತಪ್ಪಾ..." ಎಂದ.

ದೀಪ್ತಿ ಹೊರಗೆ ಬಂದು ನೋಡಿದಳು. ಅಲ್ಲಿ ತಾನು ನೆಟ್ಟ ಗುಲಾಬಿ ಗಿಡ ಕಾಣದಾಯಿತು. ಇನ್ನೂ ಹತ್ತಿರಕ್ಕೆ ಹೋಗಿ ಆ ಜಾಗವನ್ನು ಕೈಯಿಂದ ಸವರಿ ನೋಡಿದಳು. ಇದ್ದಕ್ಕಿದ್ದಂತೆ ಕೆಂಡವಾದಳು.

"ನೀವೇನು ಮನುಷ್ಯರಾ...? ನನ್ನ ಗುಲಾಬಿ ಗಿಡ ಕೀಳಲು ಮನಸ್ಸಾದರೂ ಹೇಗೆ ಬಂತು...? ಯಾಕೆ ಕಿತ್ತಿರಿ..? ಗಾಡಿ ಒಯ್ದು ತಿಪ್ಪೆಗೆ ಬಿಸಾಡಿ. ನಾಳೆ ಹೂವು ಬಿಡುತ್ತಿತ್ತು... ಸ್ವಲ್ಪವಾದರೂ ಜ್ಞಾನ ಬೇಡವಾ...?" ಆವೇಶದ ಮಾತುಗಳು. ಒಮ್ಮೆಯೂ ದೀಪ್ತಿ ಇಷ್ಟೊಂದು ಕೀಳಾಗಿ ಮಾತಾಡಿರಲಿಲ್ಲ. ಪ್ರಶಾಂತ್ ಒಂದು ಕ್ಷಣ ತಲ್ಲಣಗೊಂಡ. ಅಪ್ರತಿಭನಾದ.

"ಅದು ಮುಳ್ಳಿನ ಗಿಡ, ಈಗೇನು ಆಗಬಾರದಾಯಿತು....? ಅದರ ಅವಶ್ಯಕತೆ ಏನಿತ್ತು...?, ಅದು ಇಲ್ಲದಿದ್ದರೆ ಬೇರೆ ಕಡೆ ಇನ್ನೊಂದು ನೆಡು..."

"ನನಗೆ ಅದೇ ಮುಖ್ಯ. ನೀವೇನು ಹೂ ತಂದು ಕೊಡ್ತೀರಾ...? ನಾನೇ ಬೆಳೆಸಬೇಕು. ನಾನೇ ಮುಡಿಯ ಬೇಕು. ನನ್ನ ಹೂವಿನ ಗಿಡ ಕೀಳಲು ನಿಮಗೇನು ಅಧಿಕಾರ...? ನೀನು ಮನುಷ್ಯನಾ...?"

ಅವಳ ಸಿಡುಕಿನ ನೇರ ಮಾತುಗಳು ನಿರ್ಭಯದ ಸಂಕೇತವಾಗಿದ್ದವು. ಅವನು ತನಗೆ ಸಂಬಂಧಿಸಿಲ್ಲ ಎನ್ನುವ ರೀತಿಯಲ್ಲಿ ಅಭಿವ್ಯಕ್ತಗೊಂಡ ವಾಕ್ಜರಿ...! ಇದೆಂಥ ಹೂ ಪ್ರೀತಿಯೋ...! ಮನುಷ್ಯನಿಗಿಂತ ಅದೇ ಶ್ರೇಷ್ಠವೇ...? ಗೊಂದಲಕ್ಕೊಳಗಾದ. ಪ್ರೀತಿ ಏನಾಯಿತು...?

ಆ ಕ್ಷಣ ಅವನಿಗೆ ದೀಪ್ತಿ ಒಗಟಾಗಿ ತೋರಿದಳು. ಪ್ರಾಣಕ್ಕೆ ಪ್ರಾಣ ಕೊಡುತ್ತೇನೆಂದವಳು ಒಂದು ಹೂ ಗಿಡಕ್ಕೆ ತನ್ನನ್ನು ಕಾಲಕಸವಾಗಿ ಕಾಣುತ್ತಿದ್ದಾಳಲ್ಲಾ....!? ಇಲ್ಲಿ ಯಾವುದು ಮುಖ್ಯ ಇವಳಿಗೆ...?

"ನಾನು ಮುಖ್ಯವಲ್ಲವೇ...? ನಿನಗೆ ಹೂವೇ ಮುಖ್ಯವೇ...?" ಪ್ರೀತಿಯ ಕ್ಷಣ ಜ್ಞಾಪಿಸುವ ರೀತಿಯಲ್ಲಿ ಕೇಳಿದ. ಅವಳು ಪ್ರತಿಯಾಗಿ ಅಷ್ಟೇ ಜೋರಿನಿಂದ ಚೀರಿದಳು.

"ಹೌದು... ಹೌದು... ನನಗೆ ಹೂವೇ ಮುಖ್ಯ... ನನಗೆ ಹೂವೇ ಮುಖ್ಯ ...." *#.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.