ತೆರಿಗೆ ಕಟ್ಟುವ ಸಮಯ

ಕೆಲಸದಿಂದ ಹಿಂದಿರುಗಿದ ಅವನು ಆಗಲಿಂದ ಅವಳನ್ನು ಗಮನಿಸುತ್ತಲೇ ಇದ್ದ.. ಹೊರಗಡೆ ಜಿನುಜಿನುಗಿ ಸುರಿಯುತಿಹ ಸೋನೆಮಳೆ, ಮುಂಗುರಳ ನೇವರಿಸುತ್ತಿದ್ದ ತಂಗಾಳಿ, ಅವಳಿಗಿಷ್ಟದ ಭಾವಗೀತೆಯ ಗುನುಗು ಯಾವುದರ ಪರಿವೆಯಿಲ್ಲದೇ, ಒಂದೇ ಸಮನೆ ಹಾಳೆಯಲ್ಲೆನೋ ಗೀಚುತ್ತಿದ್ದಳು.. ಅವಳನ್ನು ಅವಳ ಭಾವಕ್ಕೆ ಬಿಟ್ಟು ತಾನು ಚಹಾ ಮಾಡಿಕೊಳ್ಳಲು ಅಡುಗೆಮನೆ ಕಡೆ ಹೊರಟ. ತಮ್ಮಿಬ್ಬರಿಗೆ ಚಹಾ ತಯಾರಿಸಿ ಮತ್ತೆ ಅವಳ ಬಳಿ ಬರುವಷ್ಟರಲ್ಲಿ ಅವಳ ಕೈ ಅದರುತ್ತಿತ್ತು, ಕಣ್ಣೀರು ಧಾರಾಕಾರವಾಗಿ ಕೆನ್ನೆ ತೋಸುತ್ತಿತ್ತು. ಬೆಚ್ಚಗಿನ ಕೈ ಹೆಗಲ ಬಳಸಿದಾಗ ಅವಳು ತನ್ನ ಭಾವನಾಲೋಕದಿಂದ ಹೊರಬಂದು, ಅವನ ತಬ್ಬಿಕೊಂಡು ಬಿಕ್ಕತೊಡಗಿದಳು.. ಅವನಿಗೆನೆಂದು ಅರ್ಥವಾಗದಿದ್ದರೂ ಕೈ ಅವಳ ತಲೆ ನೇವರಿಸುತ್ತಲೇ ಇತ್ತು, ಮನ ಕರಗಿ ನೀರಾಗುತ್ತಲಿತ್ತು. ಅತ್ತು-ಅತ್ತು ಸುಸ್ತಾದ ಅವಳು ಅವನೆದೆಯಲ್ಲಡಗಿ ಮಲಗಿದಳು ಮಗುವಿನಂತೆ. ಅವಳ ಅಳುವಿಗೆ ಕಾರಣ ತಿಳಿಯದ ಅವನು ಕುತೂಹಲದಿಂದಲೇ ಅವಳು ಗೀಚುತ್ತಿದ್ದ ಹಾಳೆಯನ್ನೆತ್ತಿಕೊಂಡು ಕಣ್ಣಾಡಿಸತೊಡಗಿದ..

"ನನ್ನ ಮಲ್ಲಿಗೆ ಹೂವೇ, ನೀ ನಮ್ಮ ಬಾಳಿಗೆ ಬರುವ ವಿಷಯ ನಮಗೆಲ್ಲರಿಗೂ ಎಷ್ಟು ಸಂತಸ ತಂದಿತ್ತು ಗೊತ್ತಾ? ನೂರಾರು ಕನಸ ಕಟ್ಟಿ, ನಿನ್ನನ್ನ ನನ್ನ ಹೊಟ್ಟೆಯಲ್ಲಿ ಮುದ್ದು ಗುಮ್ಮನಂತೆ ಅವಿತಿರಿಸಿದ್ದೆ ಯಾರ ದೃಷ್ಟಿಗೂ ತೋರದಂತೆ. ನಾನು-ನಿನ್ನಪ್ಪ ಪ್ರತಿಕ್ಷಣವೂ ನಿನ್ನ ನೇವರಿಸುತ್ತಾ ನಿನ್ನೊಡನೆ ನಡೆಸುತ್ತಿದ್ದ ಸಂಭಾಷಣೆ ಮನಸ್ಸಿಗೆ ಮುದಕೊಡುತ್ತಿತ್ತು. ನಿನ್ನ ಹೊತ್ತ ಮರುಗಳಿಗೆ ಎಂತೆಂತಹ ಬಯಕೆಗಳು, ಕನಸು ಕನವರಿಕೆಗಳು. ಪ್ರತಿ ಹೆಜ್ಜೆಗೂ ನಿನ್ನ ಜೋಪಾನ ಮಾಡುತ್ತ ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿದ್ದ ನಮಗೆ ನೀನ್ಯಾಕೆ ಹೀಗೆ ಮಾಡಿದೆ ಕಂದಾ? ನಮ್ಮಿಬ್ಬರ ಹೃದಯ ಬಡಿತ ಸೇರಿಸಿ ನಿನಗೀಯುತ್ತಿದ್ದೆವು, ಆದರೂ ನಿನ್ನ ಹೃದಯ ಮಿಡಿಯಲೇ ಇಲ್ಲವಾ? ಇಷ್ಟವಿಲ್ಲದಿದ್ದರೂ ಅವಧಿ ಮುಗಿಯುವ ಮುನ್ನವೇ ನಿನ್ನ ಧರೆಗಿಳಿಸಾಯ್ತು. ರಕ್ತ ಮಾಂಸದ ಮುದ್ದೆಯಾಗಿ ನೀ ಜಾರಿಹೋದೆ ಮತ್ತೆಂದೂ ಮರಳಿ ಬಾರದ ಲೋಕಕ್ಕೆ. ನಿನ್ನ ಜೊತೆಗೆ ನಾನೂರ ಕನಸ ಹೆಣೆದು ಪುಟ್ಟ ಕಾಲುಚೀಲವೇ ರಚಿಸಿದ್ದೆ. ನನ್ನ ಮಡಿಲಲ್ಲಿ ನಿನ್ನಿಟ್ಟುಕೊಂಡು ನನ್ನೆದೆಯ ಅಮೃತವನ್ನೆಲ್ಲಾ ಧಾರೆಯೆರೆಯಬೇಕೆಂದಿದ್ದೆ ಗೊತ್ತಾ ನಿನಗೇ ನನ್ನ ಬಂಗಾರದ ತುಂಡೆ.

ನಿನ್ನ ಕೇಕೇ ಕೇಳಿ ಆನಂದಿಸುವ ಯಾವ ಭಾಗ್ಯವೂ ನಮಗಿಲ್ಲವಾಯ್ತಲ್ಲಾ ಮುದ್ದು ಮಗುವೇ. ನಿನ್ನನ್ನುಳಿಸಿಕೊಳ್ಳೋ ಯಾವ ಅವಕಾಶವನ್ನು ನಮಗೀಯದೆ ತನ್ನೆಡೆಗೆ ಮರಳಿ ಕರೆದುಕೊಂಡ ಆ ಭಗವಂತ ಅವನಿಛ್ಛೆಯೆಂತೋ ನಾ ತಿಳಿಯೇ ಕಂದಾ. ನಿನ್ನ ಹೊತ್ತು ಹೆರಲಾರದೇ ದಿನವೂ ಕಟ್ಟುತ್ತಿರುವೆ ಕಣ್ಣೀರೆಂಬ ತೆರಿಗೆ.. ನೋಡ್ತಾ ಇದ್ಯೇನೇ ನನ್ನ ಬಂಗಾರಿ ನಿನ್ನಮ್ಮನನ್ನ. ಮರಳಿ ಬಾ ನನ್ನ ಮಡಿಲಿಗೆ ನನ್ನ ಮುದ್ದು ಗೊಂಬೆ. ಆದರೆ ಈ ಸಲ ಅವಧಿ ಮುಗಿಯುವ ಮುನ್ನವೇ ಬಂದು ಅಮ್ಮನ ಜೀವನ ಪರ್ಯಂತ ಕಾಡದಿರು.. ನಿನಗೋಸ್ಕರ ಪ್ರತಿದಿನ ಪ್ರತೀ ಕ್ಷಣ ಕಾಯುತ್ತಲೇ ಇರುವ ನಿನ್ನಮ್ಮ.. ಬರುವೆಯಲ್ಲಾ ಕಂದಾ? ಮತ್ತೆ ಬರುವಾಗ ಜೋಪಾನ ಕಂದಾ.. ನಿನಗೆಂದೂ ಅಮ್ಮನಾಗದ ಅಮ್ಮ.." ಪತ್ರವನ್ನೋದಿ ಮುಗಿಸಿದಾಗ ಹಿಂದಿನ ವರುಷವಷ್ಟೇ ಕಳೆದುಕೊಂಡ ಮಗುವಿನ ನೆನೆದು ಅವನೂ ಕೂಡ ಬಿಕ್ಕುತ್ತಿದ್ದ ನಿಶ್ಶಭ್ದವಾಗಿ..


kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.