ಆ ಒಂದು ಸ್ಪರ್ಶದ ಅಸ್ಪರ್ಶ ನಿವೇದನೆಶಿಮ್ಲಾದಿಂದಾ ರಾತ್ರಿ ೧೦:೪೫ ಕ್ಕೆ ರೈಲು. off season ಆಗಿದ್ದರಿಂದಾ reservation ಮಾಡಬೆಕಾದಿದ್ದಿಲ್ಲಾ. ಕನಿಷ್ಠ ಪಕ್ಷ ೧೦ ಗಂಟೆಗಾದ್ರೂ ನಾನು ಇಲ್ಲಿಂದ ಹೊರಡಬೆಕಾಗಿತ್ತು. ಅವಳು ಬರಲು ಇನ್ನೂ ಕಾಲು ಗಂಟೆಯಾದೀತು. ಅವಳ ನಿರ್ಧಾರ ಏನೇ ಇದ್ದರು ಕನಿಷ್ಠ ೨ ಗಂಟೆ ಅವಳ ಜೊತೆ ಕಳೆಯಬೇಕೆಂಬುದು ನನ್ನ ಆಸೆಯಾಗಿತ್ತು. ಅವಳ ನಿರ್ಧಾರವನ್ನು ನನ್ನಿಂದ ಊಹಿಸಲು ಸಾಧ್ಯವಿರಲಿಲ್ಲ. ಅವಳ ಹೃದಯದ ಪ್ರತಿ ಬಡಿತವನ್ನ ಬಲ್ಲೆನೆಂದೆಂದುಕೊಂಡರೂ ಅವಳೊಬ್ಬ ಅಪರಿಚಿತೆ ನನಗೆ, ಮನಸ್ಸು ಯಾಕೋ ಇಲ್ಲ ಸಲ್ಲದ್ದನ್ನ ಯೋಚಿಸುತ್ತತ್ತು. ಅವಳ ಉತ್ತರ ಯಾವುದೇ ಇದ್ದರು ಸಮನಾಗಿ ಸ್ವೀಕರಿಸಬೇಕೆಂದು ಸಿದ್ದವಿಲ್ಲದ ಮನಸ್ಸಿಗೆ ಬುದ್ದಿಹೇಳುವ ನಾಟಕವಾಡುತ್ತಿದ್ದೆ. I was little nerves! ಇನ್ನತ್ತು ನಿಮಿಷದಲ್ಲಿ ನನ್ನ ಜೀವನ ಚಿಕ್ಕ ತಿರುವೋಂದನ್ನ ಅಪೇಕ್ಷಿಸುತ್ತಿತ್ತು. ಕೇವಲ ಹದಿನೈದು ದಿನ, ನನ್ನ ಮನದಾಳದಲ್ಲಿ ಕುಳಿತವಳ ಎದುರಿಗೆ ಹೋಗಿ ಧೈರ್ಯವಾಗಿ ಹೇಳಿದ್ದೆ, ನೀವೆಂದರೆ ನನಗಿಷ್ಟಾ, ಪ್ರೀತಿಯೆಂದು ವ್ಯಾಖ್ಯಾನಿಸಿದರೆ ತಪ್ಪಿಲ್ಲ, ಒಂಟಿ ಹೆಣ್ಣೆಂಬ ಅನುಕಂಪವಲ್ಲ, ನೊಂದ ಮನದ ಲಾಭಪಡೆವ ಹುನ್ನಾರವೂ ಅಲ್ಲ, ಯಾವ ಒತ್ತಾಯ, ಆಮಿಷವಿಲ್ಲ ಕೇವಲ ನೀವೆಂದರೆ ನನಗಿಷ್ಟಾ, ಜೀವನದ ಸಂಜೆಯವರೆಗೊಂದು ಸಂಗಾತಿಯ ಸಂಗ ಬೇಕು, ಆ ಸಾಂಗತ್ಯವನ್ನ ನಿಮ್ಮಲ್ಲಿ ಕಾಣಬಹಸುತ್ತೆನೆಂದು ಹೇಳಿ ಇವತ್ತಿನ dinnerಗೆ ಆಹ್ವಾನಿಸಿ ಬಂದಿದ್ದೆ. ಶಿಮ್ಲಾದ ಇಕ್ಕಟ್ಟಿನ ರಸ್ತೆಯ ಸಣ್ಣ ಇಳಿಜಾರಿನ ದಿಬ್ಬದ ಮೇಲೆ ಕಟ್ಟಿದ್ದ ''ಸಾವರಿಯಾ'' restaurantನ ಎದುರಿಗಿದ್ದ ಕಲ್ಲು ಮಂಚದ ಮೇಲೆ ಅವಳ ಬರುವಿಕೆಗಾಗಿ ಕಾದು ಕುಳಿತಿದ್ದೆ. ಚಳಿ ಸ್ವಲ್ಪ ಹೆಚ್ಚೇ ಇತ್ತು. ಶೀತಗಾಳಿ ತೊಟ್ಟ ಸ್ವೆಟ್ಟರ್‌ನ ಒಳ ಹೊಕ್ಕು ಮೈತಾಕುವಷ್ಟು ತೀವ್ರವಾಗಿತ್ತು.

ಸರಿಯಾಗಿ ಒಂದು ತಿಂಗಳ ಹಿಂದೆ ಬೆಂಗಳೂರಿನಿಂದ ಹಿಮ ಪರ್ವತ ಹತ್ತಲೆಂದು ೧೦ ಜನ ಸ್ನೇಹಿತರ ಜೊತೆಗೂಡಿ ಶಿಮ್ಲಾದಿಂದ ಸ್ವಲ್ಪದೂರದ ಹಳ್ಳಿಯಿಂದ ಪರ್ವತಾರೋಹಣವನ್ನ ಪ್ರಾರಂಭಿಸಿದ್ದೆವು. ಎರಡೇ ದಿನಗಳ trekking ನಲ್ಲಿ ಇದ್ದ ಉತ್ಸಾಹವೆಲ್ಲ ಹೆಪ್ಪುಗಟ್ಟಿಹೋಗಿತ್ತು. ಅದೇ ಗಳಿಗೆಯಲ್ಲಿ ೧೫ ಅಡಿ ಅಳದ ತಗ್ಗಿನಲಿ ಕಾಲು ಜಾರಿ ಬಿದ್ದು ಪ್ರಜ್ಞೆ ಕಳೆದುಕೊಂಡ ನೆನಪು. ಮರಳಿ ಪ್ರಜ್ಞೆಬಂದಾಗ ಮೊದಲು ನೋಡಿದ ಮುಖ ಅವಳದ್ದು. ಬಿಳಿ ಸೀರೆ, ಉದ್ದ ತೋಳಿನ ಬ್ಲೌಜ್, ಮುಡಿಕಟ್ಟಿದ್ದ ಕೂದಲು, ಅವಳೊಬ್ಬ nurse ಎಂದು ಹೇಳುತ್ತಿತ್ತು. ಪಕ್ಕದಲ್ಲೇ ಇದ್ದ friend ನಸು ನಕ್ಕು ನನ್ನ ಕೈ ಹಿಡಿದುಕೊಂಡ. ಬಲಗಾಲಿಗೆ ಸ್ವಲ್ಪ ತೀವ್ರವಾಗಿ ಪೆಟ್ಟಾಗಿತ್ತು. ಒಬ್ಬ ಸ್ನೆಹಿತನ ಬಿಟ್ಟು ಉಳಿದವರೆಲ್ಲ ಕೆಲಸ ನಿಮಿತ್ತ ಬೆಂಗಳೂರಿಗೆ ಹೊರಟು ಹೋಗಿದ್ದರು. ಅಂತಹ ಗಂಭೀರ ತೊಂದರೆಯೇನು ಇಲ್ಲಾ ಆದರೆ ಇನ್ನತ್ತು ದಿನ bed rest ಬೇಕು, ಮತ್ತೆ ನಡೆದಾಡಲು ಸ್ವಲ್ಪ ಸಮಯ ಹಿಡಿಯಬಹುದೆಂದು ಡಾಕ್ಟರ್ ಹೇಳಿದಾಗ ನನಗಿಂತ ಹೆಚ್ಚು ಆತಂಕಕ್ಕೊಳಗಾದದ್ದು ನನ್ನ ಸ್ನೇಹಿತ. ಅವನಿಗೆ ನನ್ನ ಬಿಟ್ಟು ಹೋಗುವ ಹಾಗೂ ಇಲ್ಲ, ಇಲ್ಲೇ ಇರುವ ಹಾಗೂ ಇಲ್ಲ. ಅವನ ಅ ಸಂಧಿಗ್ದತೆಯನ್ನ ಅರಿತ ನಾನು ಒತ್ತಾಯ ಮಾಡಿ ಅವನನ್ನ ಅಲ್ಲಿಂದ ಕಳಿಸಿಕೊಟ್ಟಿದ್ದೆ. ಇನ್ನೊಂದೆರಡು ವಾರದಲ್ಲಿ ಗುಣವಾಗಿ ಬರುತ್ತೇನೆ, ಸ್ವಲ್ಪ ಹಣದ ವ್ಯವಸ್ಥೆ ಮಾಡೆಂದಿದ್ದೆ. ಅಪರಿಚಿತ ಊರಿನ ಯಾವುದೋ ಒಂದು ಆಸ್ಪತ್ರೆಯ ಹಾಸಿಗೆ ಮೇಲೆ ದಿನದ ೨೪ ಗಂಟೆ ಮಲಗಿರುವುದು ಪ್ರಯಾಸವೆನಿಸಿತ್ತು. ಅಕ್ಕ ಪಕ್ಕ ಹಾಸಿಗೆಯಲ್ಲಿದ್ದವರಿಗೆ ಕನ್ನಡ ಬರುತ್ತಿರಲಿಲ್ಲ. ಅವರ ಭಾಷೆ ನನಗೆ ಬರುವುದಿಲ್ಲ. ನನ್ನ ಆರೈಕೆಗೆ ಬರುತ್ತಿದ್ದ nurseಗೆ English ಬರುತ್ತಿರಲಿಲ್ಲ, ನನ್ನ ಹರಕು ಮುರುಕು ಹಿಂದಿ ಅವಳಿಗೆ ಅರ್ಥವಾಗುತ್ತಿರಲಿಲ್ಲ. ಅದಕ್ಕೊಸ್ಕರ ಅವಳು “ಸರ್ ಜಿ ತೊಡಾ ರುಖಿಯೆ, ಇದರ್ ಎಕ್ nurse ಆಫಕಿ state ಸೆ ಹೈ. ಮೆರೆ ಜಗಹಪೆ ಉಸಕೊ ಬೆಚ್ ದೆತಿಹುಂ, ಆಫ್ ಕಾ ಹಿಂದಿ ಮುಜ್ ಸೆ ನಾಹಿ ಹೋಗಾ“ ಎಂದು ಹೊರಟು ಹೋಗಿದ್ದಳು. ಆಗ ಬಂದದ್ದು ಮತ್ತದೆ ಮುಖ. ಎರಡು ದಿನದ ಹಿಂದೆ ನೋಡಿದ್ದ ತಿಳಿಗೆಂಪು ಗಲ್ಲದ ನೀಳ ಮೈಮಾಟದ ಅದೇ ಶ್ವೇತವಸ್ತ್ರಧಾರಿ. ಭಾ‍ಷೆ ಬಾರದ ಊರಲ್ಲಿ ಕನ್ನಡದ ಹುಡುಗಿ ದಿನವಿಡೀ ಮಾತಾನಡಲು ಸಿಗಲು ಸ್ವಲ್ಪ ಪುಣ್ಯಾ ಮಾಡಿರ್ ಬೇಕಾ? ಒಂದೆ ವಾರದಲ್ಲಿ ತುಂಬಾ ಒಳ್ಳೆ ಸ್ನೇಹಿರಾಗಿಬಿಟ್ಟವಿ. ಬಹುಶಃ ಅದು ಅವಳಿಗೆ ಬರಿ ಕರ್ತವ್ಯವಾಗಿತ್ತೇನೋ, ಆದರೆ ನನಗೆ ಅದು ಬೇರೆನೆ ಆಗಿತ್ತು. ಅಪ್ಪ ಅಮ್ಮ, ಮನೆಯ ನಾಯಿ ಟೋನಿ ಯಿಂದ ಹಿಡಿದು ನಾನೇ ಪ್ರೀತಿಸಿ ನಾನೇ ಕೈ ಕೊಟ್ಟ ಹುಡುಗಿಯ ಬಗ್ಗೆಯೂ ಅವಳ ಜೊತೆ ಮಾತನಾಡಿದ್ದೆ. ಎಲ್ಲಕ್ಕು ಮುಗುಳ್ನಗೆಯಿಂದ ಸ್ಪಂದಿಸಿ ನನ್ನ ನಿದ್ದೆಗೆ ಕನ್ನಹಾಕಿ u should sleep more ಅಂದ್ರೆ how can I sleep more...? ನನ್ನ ಬಗ್ಗೆ ಎಲ್ಲವನ್ನ ಹೇಳಿದ್ದೆ. ಅವಳ ಮೇಲೆ ಮೂಡುತ್ತಿದ್ದ ಪ್ರೀತಿಯನ್ನೂ ನೇರವಲ್ಲದ ರೀತಿಯಲ್ಲಿ ಹೇಳಲು ಪ್ರಯತ್ನಿಸಿದ್ದೆ! ಆದರೆ ಈ ನಡುವೆ ಹತ್ತುದಿನಗಳಲ್ಲಿ ದಿನವೂ ಕೇಳಿದ ಪ್ರಶ್ನೆಗೆ ಅವಳು ಏನು ಉತ್ತರವನ್ನೇ ಕೊಟ್ಟಿರಲಿಲ್ಲ. ನನ್ನ ಪ್ರಕಾರ ಪ್ರಶ್ನೆ ಬಹಳ ಸರಳವಾಗಿತ್ತು. ಕನ್ನಡದವರಾದ ನೀವು ಶಿಮ್ಲಾದಲ್ಲಿ ಏನ್ಮಾಡತಾ ಇದ್ದೀರಾ ..?

ಉತ್ತರ ಸಿಕ್ಕಾಗ ಆ ಪ್ರಶ್ನೆಯನ್ನ ಯಾಕೆ ಕೇಳಿದೆನೋ ಎನ್ನುವಷ್ಟು ನೋವಾಯ್ತು. ಆ ಮುಗ್ಧ ಮುಗುಳ್ನಗೆಯ ಹಿಂದಿದ್ದ ನೋವು, ಆ ಜೀವ ಅನುಭವಿಸಿದ ಅವಮಾನ, ಎಲ್ಲಕ್ಕೂ ಹೆಚ್ಚಾಗಿ ಜೀವನದ ಆರಂಭವೇ ಕೊನೆಯಾದಾಗ ಜೀವನ ಪ್ರೀತಿಯನ್ನ ಕಳೆದುಕೊಳ್ಳದೇ ಬದುಕಿ ಗೆದ್ದ ಛಲ ಅವಳ ಮೇಲೆ ನನಗೆ ಪ್ರೀತಿ ಮೂಡದಿರಲು ಕಾರಣಗಳೇ ಇಲ್ಲದಂತೆ ಮಾಡಿತು. ಬಹುಶಃ ೧೫ ನೇ ದಿನ ಸಂಜೆಯ walking ಸಮಯ, ಕುಂಟುತ್ತಾ ನಡೆಯುತ್ತಿದ್ದ ನನಗೆ ಹೆಗಲಿಗೆ ಹೆಗಲಾಗಿ ನಡೆಯುತ್ತಿದ್ದ ಅವಳು ನಾ ದಣಿದೆನೆಂದು ಆ ಚಿಕ್ಕ ಹಿಮ ಝರಿಯ ಪಕ್ಕದ ಹುಲ್ಲು ಹಾಸಿನ ಮೇಲೆ ಕಾಲೊರಗಿ ಕುಳಿತೆವು. ಪ್ರೀತಿಯಲ್ಲಿ ಬಿದ್ದವ ನಾನು, ಮಾತನಾಡಾಲು ಬೇರೆ ವಿಷಯ ಸಿಗದಂತಹ ಪರಿತಾಪ ನಂದು. ಆದರೆ ನನ್ನ ಆರೈಕೆಯ ಕರ್ತವ್ಯನಿಷ್ಠೆ ಬಿಟ್ಟರೆ ಬೇರೇನೂ ಅವಳಲ್ಲಿ ಕಾಣುತ್ತಿಲ್ಲ. ಪ್ರತಿ ಕ್ಷಣವೂ ನಾನೇ ಕೆಣಕಿ ಕೆಟ್ಟವನಾಗುವುದು ಬೇಡವೆಂದು ಸುಮ್ಮನಾದೆ. ಬಹುಶಃ ಅಂದು ಮಾತನಾಡುವ ಸರದಿ ಅವಳದಾಗಿತ್ತು! ಕೇಳುವವ ನಾನಾಗಿದ್ದೆ!! ದೂರದ ಬಿಳಿಪರ್ವತ ತುದಿಯನ್ನ ದಿಟ್ಟಿಸಿ ಅವಳಾಡಿದ ಒಂದೊಂದು ಮಾತು ಇಂದಿಗೂ ಹೃದಯದ ಗೋಡೆಯನ್ನ ತಿವಿದಂತಿದೆ.

“ಅಂತಹ ಸಂಪ್ರದಾಯಸ್ಥ ಕುಟುಂಬವಲ್ಲದಿದ್ದರೂ ಗೌರವಯುತ ಮನೆತನದಲ್ಲಿ ಬೆಳೆದವಳು ನಾನು. ಮಂಗಳೂರಿನ nursing ಕಾಲೇಜಿನಲ್ಲಿ ಓದು. ಕೆಂಚು ಕೂದಲಿನ ಚಿಗುರು ಗಡ್ಡದ ಅವನ ನೋಟಕ್ಕೆ ಮನಸೋತವಳೂ ನಾನೇ, ಏನೋ ದೊಡ್ಡ ಸಂಭಾವಿತಳಂತೆ ಹಿಂದೆ ಬಂದು ಕಾಡುತ್ತಿದ್ದ ಅವನಿಗೆ ಬೈಯ್ಯಹೋಗಿ, ನಡುವಲ್ಲಿ ನಕ್ಕು ಪ್ರೀತಿಯ ಮೊದಲ ಪುಟ ತೆರದವಳೂ ನಾನೇ. ಅವನೊಬ್ಬ ಮೋಡಿಗಾರ ರೂಪದಲ್ಲೂ, ಮಾತಿನಲ್ಲೂ ಆದರೆ ನನ್ನ ತಂದೆಗೆ ಅವನೊಬ್ಬ ಬರಿ ಕ್ರಿಶ್ಚಿಯನ್. ಪದವಿ ಮುಗಿಸಿ ನನ್ನ ಕಾಲ ಮೇಲೆ ನಾನಿಂತಿದ್ದ ನನಗೆ ಸ್ವಾತಂತ್ರದ ಕನಸು. ಅದು ಸ್ವಾತಂತ್ರ್ಯ ಅಲ್ಲ ಮಗಳೆ ಸ್ವೆಚ್ಚಾಚಾರ ಎಂದ ಅಪ್ಪನನ್ನ ನೀನೊಬ್ಬ ಅನಕ್ಷರಸ್ಥ ಎಂದಿದ್ದೆ. ಮದುವೆಯಾದರೆ ಅವನನ್ನೆ ..! ಇಲ್ಲವೆಂದರೆ ನಿಮ್ಮ ಮಗಳು ಹುಟ್ಟು ವಿಧವೆಯೆಂದುಕೊಳ್ಳಿ ಎಂದು ಮನೆಬಿಟ್ಟು PG ಸೇರಿದ್ದೆ. ೨೮/೦1/೨೦೦೮ ಇವತ್ತಿಗೆ ಸರಿಯಾಗಿ ೫ ವರ್ಷ ಹಿಂದೆ; ನನಗೆ ಮದುವೆಯ ಸಂಭ್ರಮ. ಮಂಗಳೂರಿನ ಸೈಂಟ್ ಮೇರಿ ಚರ್ಚಿನಲ್ಲಿ ಕೈಯಲ್ಲೊಂದು ಹೂ ಬೊಕ್ಕೆ ಹಿಡಿದು ಉದ್ದನೆಯ ನಿಲುವಂಗಿತೊಟ್ಟು ಅವನಿಗೋಸ್ಕರ ಕಾದು ನಿಂತಿದ್ದೆ. ಆದರೆ ಅವ ಬರಲಿಲ್ಲ..! ಹೆತ್ತ ಜೀವಗಳ ತೊರೆದೆ, ಹುಟ್ಟಿ ಬೆಳೆದ ಧರ್ಮವ ಬಿಟ್ಟೆ that too for a ..? ಅವನ ಹೆಸರೆಳೋಕು ನನಗಿಷ್ಟವಿಲ್ಲ. he was just a flirt..! ಮರುಳಾದವ ನಾನು ಪಾಪಿ. ಹೆತ್ತವರಿಗೆ ಮುಖ ತೋರಿಸುವ ಧೈರ್ಯವಿರಲಿಲ್ಲ. ಊರಿನಲ್ಲಿ ಅವನೊಡನೆ ಸುತ್ತಿ ಹರಟಿದ್ದ ಜಾಗಗಳೆಲ್ಲ ಎದುರಾದಾಗ ಅಪರಾಧಪ್ರಜ್ಞೆ ಕುಕ್ಕಿ ತಿನ್ನುವಂತಾಗುತ್ತಿತ್ತು. ಅದಕ್ಕೆ ಆ ಊರು ಬಿಟ್ಟೆ. ಕೈಯಲ್ಲಿ ಕಾಸಿರಲಿಲ್ಲ. ಒಂಟಿ ಚಂದದ ಹೆಣ್ಣಿಗೆ ಕೆಲಸಕ್ಕೆ ವಿದ್ಯಾರ್ಹತೆಯ ಪ್ರತೀಕ್ಷೆಯೇ ಇಲ್ಲಾ. ನಿರೀಕ್ಷೆಗಳೆ ಬೇರೆ. ನನ್ನವರನ್ನ ತೊರೆದಿದ್ದೆ, ಊರ ತೊರೆದಿದ್ದೆ, ಕೊನೆಗೆ ರಾಜ್ಯವನ್ನೆ ತೊರೆದು ಹೊರಟೆ. ನನ್ನತನವನ್ನ ಸಂಪೂರ್ಣ ತೊರೆದು ಹೊಸ ಜೀವನ ಹುಡುಕಿ ಬಂದದ್ದು ಇಲ್ಲಿಗೆ. ಇಲ್ಲಿಯವರಿಗೆ ಪರಭಾಷಾ ಜನರ ಮೇಲೆ ಪ್ರೀತಿ ಸ್ವಲ್ಪ ಜಾಸ್ತಿ. ಏರು ಪೇರಿಲ್ಲದ, ತಿರುವು ಮುರುವುಗಳಿಲ್ಲದ ಈ ೫ ವರ್ಷದ ಪಯಣದ ಪುಟಕ್ಕೆ ನೀನೊಬ್ಬ ಅಲ್ಪವಿರಾಮ“ ಎಂದು ನಸು ನಕ್ಕಿದ್ದು ಅವಳು, ತಿರುಗಿ ಕಣ್ಣ್ ಒರಸಿಕೊಂಡವ ನಾನು.

ನೆನಪುಗಳ ಸುರುಳಿಯಲ್ಲಿ ಸಿಲುಕಿ ಕುಳಿತಿದ್ದ ನನಗೆ ಒಮ್ಮೆ ಎಚ್ಚರವಾದದ್ದು ಆ ಇಕ್ಕಟ್ಟಿನ ರಸ್ತೆಯ ತಿರುವಲ್ಲಿ, ಬೀದಿದೀಪದ ಬೆಳಕ ನಡುವೆ ಅವಳು ಹಾದು ಬಂದಾಗ. ಮುಡಿ ಬಿಚ್ಚಿ ಇಳಿ ಬಿಟ್ಟಿದ್ದ ಆ ಕೂದಲು ತಿಳಿ ಗಾಳಿಗೆ ಹಾರಿ ಅವಳ ಕಣ್ಣ್ ರೆಪ್ಪೆಗಳ ಮೇಲೆ ಬಂದು ಕಿರಿ ಕಿರಿ ಮಾಡುತಿದ್ದವು. ಆ ನೀಳ ದೇಹಕ್ಕೆ ತಿಳಿ ಗುಲಾಬಿ ಸಾರಿಯೇ ಚಂದ.! ಚೂರ ಎತ್ತರದ ಚಪ್ಪಲಿ ತೊಟ್ಟು ಇಡುತ್ತಿದ್ದ ಆ ನಾಜೂಕು ಹೆಜ್ಜೆಗಳು ನನ್ನ ಎದೆಯೆ ಮೇಲೆ ಹಚ್ಚೆಯನ್ನಿಟ್ಟಂತಿತ್ತು.

ನಾನು: ‘ಆಫಕಿ ಬಾಲ ಖುಲೆ ಬಹುತ್ ಅಚ್ಚೆ ಲಗತೆ ಹೆ ‘

ಅವಳು: ‘ಅರೆ ಆಫ ಬಡೆ ಹಿಂದಿ ಬೋಲನೆ ಲಗೆ ಆಜ್ ’ ಎಂದು ಮುಗುಳ್ನಕ್ಕಿದ್ದಳು.

ನಂತರದ ಒಂದು ತಾಸು ಹೇಗೆ ಕಳೆಯಿತೆಂಬುದು ಅರಿವಿಲ್ಲ. ಊಟ ಮುಗಿಸಿ ನಾ ಹೊರಡಲು ತಯಾರಾಗಿದ್ದೆ. ಇನ್ನೂ ಯಾವ ಸುಳಿವು ಇಲ್ಲಾ. ಇನ್ನರ್ಧ ತಾಸಲ್ಲಿ ರೈಲು. ನಾನಾಗೆಯೆ ಆ ವಿಷಯ ಮತ್ತೆ ಪ್ರಸ್ಥಾಪಿಸಲು ಇಷ್ಟವಿರಲಿಲ್ಲ. ಹೇಗೂ ಹೇಳಬೆಕಾದ್ದನ್ನ ನಾನು ಹೇಳಿದ್ದೆ. ಒತ್ತಾಯದ ಪ್ರೀತಿಗೆ ಆಯಸ್ಸು ಕಮ್ಮಿ. ಗೌರವವೂ ಕಮ್ಮಿ. ನಿರಾಸೆಯ ಕಾರ್ಮೋಡ ಮನವನ್ನ ಕವಿಯಲಾರಂಭಿಸಿತ್ತು. ಬ್ಯಾಗನ್ನ ಬೆನ್ನಿಗೆ ಹಾಕಿ ಅವಳೆಡೆ ತಿರುಗಿ ಅಲ್ವಿದಾ ಎನ್ನುವಷ್ಟರಲ್ಲಿ "ರೈಲ್ವೆ ನಿಲ್ದಾಣದವರೆಗೆ ಬಂದ್ರೆ ಅಭ್ಯಂತರವಿಲ್ಲ ತಾನೆ" ಎಂದು ಅವಳೆಂದಾಗ ಮತ್ತೆ ಗೊಂದಲ. ಊರ ಹೊರಗೆ ಸುಮಾರು ೧ ಮೈಲಿ ಆಚೆ ರೈಲ್ವೆ ನಿಲ್ದಾಣ. ನಿರ್ಜನ ರಸ್ತೆಯಲಿ ನಾನು ಅವಳು ಇಬ್ಬರೆ, ಹೆಜ್ಜೆಯ ಸಪ್ಪಳ ಬಿಟ್ಟರೆ ರಸ್ತೆ ಬದಿಯ ಹಿಮ ಝರಿಯ ಗಲಾಟೆ. ಆ ಮೌನದ ಮೆರವಣಿಗೆಯಲ್ಲಿ ಪ್ರೇಮಪಲ್ಲಕ್ಕಿ ಹೊತ್ತು, ಅವಳಿಂದ ಭಗ್ನನಾದವನಂತೆ ಭಾರವಾದ ಹೆಜ್ಜೆಯನಿಡುತ್ತಿದ್ದೆ ನಾನು. ದಾರಿಯ ಮಧ್ಯದಲ್ಲೊಂದು ಚಿಕ್ಕ ಸೇತುವೆ, ಸಮೀಪದಲ್ಲೆ ಒಂದು ಒಂಟಿ ಮನೆ, ಅಲ್ಲಿಂದ "ಎ ಮೆರಾ ಪ್ರೇಮ ಪತ್ರ ಪಡಕರ್ ತುಮ್ ನಾರಾಜ ನಾ ಹೊನಾ, ಕಿ ತುಮ ಮೆರಿ ಜಿಂದಜಿ ಹೊ, ಕಿ ತುಮ ಮೆರಿ ಬಂದಗಿ ಹೊ" ಎಂಬ ಹಳೆ ಹಿಂದಿ ಹಾಡು ತಿಳಿಯಾಗಿ ಕೇಳಿಬರ್ತಾ ಇತ್ತು. ಆ ಕ್ಷಣಕ್ಕೆ ಬಂಧಿಯಾದಂತೆ ಅಲ್ಲೆ ಸ್ತಬ್ಧಳಾಗಿ ನಿಂತು ಬಿಟ್ಟಳು ಅವಳು. ಒಂದು ಪಕ್ಕದಲ್ಲಿ ನಾನು ನನ್ನ ಪಕ್ಕದಲ್ಲಿ ಅವಳು. ನಾನು ಅವಳನ್ನ ದಿಟ್ಟಿಸುತ್ತಿದ್ದರೆ, ಅವಳು ನನಗೆ ಬೆನ್ನು ಹಾಕಿ ದಿಗಂತವನ್ನ ದಿಟ್ಟಿಸುತ್ತದ್ದಳು. ಅವಳು ಈಗಲಾದರೂ ಉತ್ತರಿಸಬಹುದೇನೋ ಎಂಬ ಕಿರುದಾಸೆ ನನಗೆ ಎಲ್ಲಿಲ್ಲದ ಸಹನೆ ನೀಡಿತ್ತು.

ಆಗಲೆ ಬೀಸಿಬಂದ ತಿಳಿಗಾಳಿಗೆ ಅವಳ ಉದ್ದನೆಯ ಸೆರಗು ನನ್ನ ಮುಖಕ್ಕೆ ಬಡಿಯಿತು. ಸಿಹಿ ಸುವಾಸನೆ ಭರಿತವಾಗಿದ್ದ ಸೆರಗನ್ನ ಸರಿಸುವ ಗೋಜಿಗೆ ಹೋಗದೆ ಅದರ ಆಹ್ಲಾದವನ್ನ ಹಾಗೆ ಸವಿಯುತ್ತಿದ್ದೆ. ನಿಧಾನವಾಗಿ ಸೆರಗು ಜಾರಲಾರಂಭಿಸಿತು. ಅದು ನನ್ನ ಕಣ್ಣಂಚನ್ನ ಜಾರಿದಾಗು ಎದುರಿಗೆ ಅವಳ ಮುಖ. ಅವಳ ಕಣ್ಣಿಗೆ ಕಣ್ಣ ಕೊಟ್ಟು ನೊಡಲಾಗಲಿಲ್ಲ, ಮುಜುಗರವಾಯಿತು. ಆದರೆ ಅವಳು ೨ ರೈಲ್ವೆ ಟಿಕೆಟ್ ತೆಗೆದು ಕೈಯಲ್ಲಿಟ್ಟಳು. ಖುಶಿಯಿಂದ ಏನೆನ್ನುವಷ್ಟರಲ್ಲಿ ಅವಳ ಕೆಂದುಟಿಗಳು ನನ್ನ ತುಟಿಗಳ ನಡುವೆ ಬಂಧಿಯಾಗಿತ್ತು. ಆ ಅಧ್ಬುತ ಸ್ಪರ್ಶದಲ್ಲಿ ಒಂದು ನಿವೇದನೆಯಿತ್ತು. ಆ ಸ್ಪರ್ಶದ ಅಸ್ಪರ್ಶ ನಿವೇದನೆಯನ್ನ ನಾ ಅರಿತಿದ್ದೆ!


kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.