ಪೂನ, ಬೆಂಗಳೂರು ಬೆಸೆಯುವ ರಾಷ್ಟ್ರೀಯ ಹೆದ್ದಾರಿ ನಾಲ್ಕು, ಚಿತ್ರದುರ್ಗವನ್ನು ಹಾದು ಹೋಗುತ್ತದೆ. ನಾನು ಚಿಕ್ಕವನಾಗಿದ್ದಾಗ, ಅಲ್ಲೆಲ್ಲ ಮನೆಗಳಿರಲಿಲ್ಲ, ಸಣ್ಣಪುಟ್ಟ ಜಮೀನುಗಳಿದ್ದವು. ಅಮಾವಾಸೆ ಹುಣ್ಣಿಮೆಗಳಿರಲಿ ಬೇರೆ ದಿನಗಳಲ್ಲು ಅಲ್ಲಿ ಜನಸಂಚಾರ ಇರಲಿಲ್ಲ. ಹತ್ತಿರದ ಊರಿನವರು ಬಂದರು, ಸಂಜೆಯ ಒಳಗಾಗಿ ಹಿಂದಿರುಗುತ್ತಿದ್ದರು. ಅಲ್ಲದೆ ಹತ್ತಿರದ ಬಹುತೇಕರು ಯಾರದರು ಸತ್ತಾಗ ಆ ರಸ್ತೆಯ ಅಕ್ಕ ಪಕ್ಕದಲ್ಲೆ ಮಣ್ಣು ಮಾಡುತ್ತಿದ್ದರು. ಮತ್ತು ಭೀಕರ ಅಪಘಾತಗಳಿಗೆ ಹೆಸರುವಾಸಿಯಾದ ಜಾಗ. ಹಾಗಾಗಿ ಆ ರಸ್ತೆಯ ಬಗ್ಗೆ ಬಹಳಷ್ಟು ರೋಚಕ ದೆವ್ವದ ಕಥೆಗಳಿದ್ದವು. ಇದನ್ನು ಕೇಳುತ್ತಾ ಬೆಳೆದವನು ನಾನು.

ನಾನು ಪದವಿ ಮುಗಿಸುವ ವೇಳೆಗೆ ಆ ರಸ್ತೆಯ ಹತ್ತಿರದವರೆಗೂ ಮನೆಗಳಾಗಿ, ನಾವು ಅಲ್ಲಿಯೆ ಹತ್ತಿರದ ಮನೆಗೆ ಹೋಗಿದ್ದೆವು.

ಓದು ಮುಗಿಸಿ ಕೆಲಸದ ಬೇಟೆಯಲ್ಲಿದ್ದ ನಾನು, ಅಪ್ಪ ಅಮ್ಮನಿಗೆ ಹೊರೆಯಾಗಬಾರದೆಂದು ಫೋಟೋಗ್ರಾಫರನಾಗಿ ಕೆಲಸ ಮಾಡುತ್ತಿದ್ದೆ. ಚಿತ್ರದುರ್ಗದಿಂದ 20 ಕಿ.ಮೀ. ದೂರದಲ್ಲಿ ಹಾಯ್ಕಲ್ ಎಂಬ ಪುಟ್ಟ ಗ್ರಾಮ. ಅಲ್ಲೊಬ್ಬರ ಮದುವೆ ಅರತಕ್ಷತೆಯ ಕಾರ್ಯಕ್ರಮದ ಫೋಟೋ ತೆಗೆಯಲು ಒಪ್ಪಿಕೊಂಡಿದ್ದೆ. ಈಗಿನಂತೆ ಆಗ ಸ್ವಂತ ವಾಹನಗಳು ಇರದ ಕಾರಣ, ಆಯಾ ಮಾರ್ಗವಾಗಿ ಹೋಗಿ ಬರುವ ಬಸ್ಸುಗಳನ್ನೆ ಅವಲಂಬಿಸಬೇಕಿತ್ತು. ಅರತಕ್ಷತೆ ಸಂಜೆ ಇದ್ದ ಕಾರಣ ನಾನಲ್ಲಿ ಐದು ಗಂಟೆಯೊಳಗಿರಬೇಕು, ಅವರು ಆ ಮಾರ್ಗವಾಗಿ ಚಿತ್ರದುರ್ಗಕ್ಕೆ ಬರುವ ಕೊನೆಯ ಬಸ್ ಸಮಯದೊಳಗೆ ಬಿಡಬೇಕೆಂದು ಮಾತಾಗಿತ್ತು.

ಕಾರ್ಯಕ್ರಮದ ದಿನ ಒಪ್ಪಿಕೊಂಡ ಸಮಯಕ್ಕೆ ಸರಿಯಾಗಿ ಆ ಊರಿಗೆ ಹೋಗಿ ನನ್ನ ಕೆಲಸ ಮುಗಿಸಿದೆ. ಅವರು ಹೇಳಿದ ಸಮಯಕ್ಕಿಂತ ಸ್ವಲ್ಪ ಮುಂಚೆಯೇ ಫೋಟೋ ತೆಗೆಯುವ ಕೆಲಸ ಮುಗಿದು ಊಟವೂ ಆಗಿತ್ತು. ಆದರೆ ರಾತ್ರಿ ಒಂಬತ್ತು ಗಂಟೆಗೆ ಆ ಮಾರ್ಗವಾಗಿ ಬರುವ ಕೊನೆಯ ಬಸ್ಸಿನ ಸುಳಿವೆ ಇಲ್ಲ. ವಿಚಾರಿಸಿದಾಗ, ಬಸ್ಸು ಬರುವುದಿಲ್ಲ ಕೆಟ್ಟುನಿಂತಿದೆ ಎಂದು ತಿಳಿದು, ಆಕಾಶ ಕಳಚಿ ಮೈಮೇಲೆ ಬಿದ್ದಂತಾಯಿತು. ಕಾರಣ ಮರು ದಿನ ಮುಂಜಾನೆ ಐದು ಗಂಟೆಯ ಬಸ್ ಹಿಡಿದು ಮತ್ತೊಂದು ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಅದೂ ತುಂಬ ಹತ್ತಿರದವರ ದೊಡ್ಡ ಸಮಾರಂಭ. ಹೇಗಾದರೂ ಸರಿ ರಾತ್ರಿಯೆ ಚಿತ್ರದುರ್ಗ ತಲುಪಬೇಕಿತ್ತು. ನನ್ನ ಒದ್ದಾಟ ನೋಡಿ, ಸುವೇಗದಲ್ಲಿ ಬಂದಿದ್ದ ವ್ಯಕ್ತಿಯನ್ನು ಕರೆದು ಊರಿಗೆ ಬಿಡುವ ವ್ಯವಸ್ಥೆ ಮಾಡಿದರು. ನನ್ನ ಗ್ರಹಚಾರಕ್ಕೆ ಅದು ಊರು ಎರಡು ಕಿ.ಮೀ. ಇದೆ ಎನ್ನುವಾಗ ಕೆಟ್ಟು ನಿಂತಿತು. ಜೊತೆಗೆ ಕರೆತಂದಿದಾತ ಇನ್ನೇನು ಎರಡು ಕಿ.ಮೀ. ಅಷ್ಟೇ ಅಲ್ವಾ, ನಡೆದುಕೊಂಡು ಹೋಗಿ, ನಾನು ಸ್ವಲ್ಪ ದೂರದಲ್ಲಿರುವ ಹಳ್ಳಿಯಲ್ಲಿ ಉಳಿದುಕೊಂಡು ಬೆಳಿಗ್ಗೆ ಹೊರಡುವುದಾಗಿ ಹೇಳಿದ.

ಗತಿ ಇಲ್ಲದೆ ಧೈರ್ಯ ಮಾಡಿ ಊರಿನ ಕಡೆ ಹೆಜ್ಜೆ ಹಾಕಿದೆ. ಅದು ಡಿಸೆಂಬರ್ ತಿಂಗಳು, ಗದಗುಟ್ಟಿಸುವ ಚಳಿ, ಜೊತೆಗೆ ಅಮಾವಾಸ್ಯೆ ಹತ್ತಿರ ಇದದ್ದರಿಂದ ಹತ್ತು ಹೆಜ್ಜೆ ದೂರದ್ದು ಕಾಣುತ್ತಿರಲಿಲ್ಲ. ಅಸ್ಪಷ್ಟವಾಗಿ ಕಾಣುತ್ತಿದ್ದ ರಸ್ತೆಯಲ್ಲಿ ಒಬ್ಬನೇ ಜೀವ ಕೈಯಲ್ಲಿ ಹಿಡಿದು, ಮನಸ್ಸಲ್ಲೆ ಗಾಯಿತ್ರಿ ಮಂತ್ರವನ್ನು ಪಟಿಸುತ್ತ ನಡೆದಿದ್ದೆ. ರಾಷ್ಟ್ರೀಯ ಹೆದ್ದಾರಿ ಹತ್ತಿರ ಬಂದಂತೆಲ್ಲ ನನ್ನ ಹಿಂದೆ ಯಾರೋ ನಡೆದು ಬರುತ್ತಿರುವ ಸದ್ದು, ನೋಡಲು ಹೆದರಿಕೆ. ಹೆಜ್ಜೆ ಹಾಕುವುದನ್ನು ಜೋರು ಮಾಡಿದೆ ಆಗ ಏಯ್ ನಿಲ್ಲೋ ಎಂದು ಕರೆದಂತಾಯಿತು. ತಿರುಗಿ ನೋಡಿದರೆ ಯಾರೆಂದರೆ ಯಾರು ಇಲ್ಲ. ಹೆದರಿಕೆಯಾಗಿ ಓಡುವ ಅಂದುಕೊಳ್ಳುವಷ್ಟರಲ್ಲಿ ಕಡುಕತ್ತಲ್ಲಲ್ಲು ಕಣ್ಣು ಕೋರೈಸುವ ಬಿಳಿ ಆಕೃತಿಯೊಂದು ರಭಸವಾಗಿ ನನ್ನನ್ನು ರಸ್ತೆಯ ಪಕ್ಕಕ್ಕೆ ತಳ್ಳಿತು. ನನಗಷ್ಟೆ ನೆನಪು. ಬೆಳಿಗ್ಗೆ ನಾಲ್ಕುವರೆ ಐದು ಗಂಟೆಗೆ ಪೋಲೀಸರು ನೀರು ಹಾಕಿ ಎಚ್ಚರಿಸಿದಾಗ ನೋಡುತ್ತೇನೆ, ಅಂದಷ್ಟೆ ಮಣ್ಣು ಮಾಡಿದ ಗೋರಿಯ ಮೇಲೆ ಕ್ಯಾಮೆರಾ ಸಮೇತ ಮಲಗಿದ್ದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಲಾರಿಯೊಂದು ತಗ್ಗಿಗೆ ಬಿದ್ದು ಅದರಲ್ಲಿದ್ದ ಚಾಲಕ ಮತ್ತು ಸಹಾಯಕ ಇಬ್ಬರು ಸ್ಥಳದಲ್ಲೆ ಸಾವನಪ್ಪಿದ್ದರು.

ಅದರ ವಿಚಾರ ತಿಳಿದು ಪೋಲೀಸರು ಬಂದಿದ್ದರು, ನಾನು ಅದರಿಂದಲೆ ಹೊರ ಬಿದ್ದಿರಬೇಕೆಂದು ಎಚ್ಚರ ಮಾಡಿದ್ದರು ಆದರೆ ನನಗೆ ಆ ಅಪಘಾತ ಹೇಗಾಯಿತು, ಯಾವಗಾಯಿತು ಯಾವುದು ತಿಳಿದಿರಲಿಲ್ಲ. ಆಗಿಂದ ಈಗಲೂ ಕಾಡುತ್ತಿರುವ ಯಕ್ಷಪ್ರಶ್ನೆಗಳು, ಎಚ್ಚರ ತಪ್ಪಿ ಬೀಳುವಂತೆ ತಳ್ಳಿದ ಬಿಳಿಯ ಆಕೃತಿ ಯಾವುದು, ಆ ಲಾರಿ ಅಪಘಾತ ಹೇಗಾಯಿತು, ನಾನು ಹೇಗೆ ಗೋರಿಯ ಮೇಲೆ ಮಲಗಿದೆ......

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.