ವೀರೂ (ಸಣ್ಣ ಕಥೆ)

ಅದೇಕೋ ಗೊತ್ತಿಲ್ಲ . ಕೆಲವರು ಮಾತ್ರ ತುಂಬಾ ತುಂಬಾ ಆತ್ಮೀಯರಾಗಿಬಿಡುತ್ತಾರೆ . ಜಗದ ಕಣ್ಣಿಗೆ ಒಂದು ರೀತಿ ಕಂಡವರು ಅದೇಕೋ ನಮಗೆ ಬೇರೆಯೇ ಆಗಿ ಕಾಣುತ್ತಾರೆ . ಈ ಸಂಭಂದಗಳೇ ಹೀಗೆ . ಈ ಸಾಲುಗಳು ಬರೆಯುವಾಗ ನನಗೆ "ವೀರೂ " ನೆನಪಾಗುತ್ತಾನೆ . ನನ್ನ ಕಥೆಗೆ ಅವನೇ ನಾಯಕನಾಗುತ್ತಾನೆ.

ನಾನು ವೀರೂವನ್ನು ಮೊದಲಬಾರಿ ಭೇಟಿಯಾಗಿದ್ದು ಅವನು ರಾತ್ರಿ ೧೨ಗಂಟೆಗೆ ನನ್ನ ರೂಮ್ ಬಾಗಿಲು ತಟ್ಟಿದಾಗ .ಇಂಜಿನಿಯರಿಂಗ್ ಮೊದಲ ವರ್ಷ ಕಾಲೇಜಿನ ಹಾಸ್ಟೆಲ್ ಇಷ್ಟವಾಗದೇ ಒಂದು ರೂಮ್ ಬಾಡಿಗೆಗೆ ತೆಗೆದುಕೊಂಡಿದ್ದೆ . ಆ ಮನೆಯ ಯಜಮಾನ "ಗಿರೀಶ " . ಅವನು ಕಿರಾಣಿ ಅಂಗಡಿ ನಡೆಸುತ್ತಿದ್ದ . ಅವನ ಹೆಂಡತಿ ಮಾದೇವಿ ನನ್ನ ಪಾಲಿಗೆ "ವೈನಿ " ಆಗಿದ್ದಳು . ತಾಯಿ ನೀಲಮ್ಮ , ಕೆಲವೇ ದಿನಗಳಲ್ಲಿ ನನಗೂ ಅಮ್ಮಳಾದಳು . "ವಿರೇಶನ" ಹೆಸರು ಕೇಳಿದ್ದೆ . ಅವನು ದಾವಣಗೆರೆ ಹುಬ್ಬಳ್ಳಿ ಅಂತ ಓಡಾಡುತ್ತಾ ಇರುತ್ತಾನೆ . ಸ್ವಲ್ಪ ನಾಟಕದ ಖಯಾಲಿ ಅಂತೆ . ತಿಂಗಳಿಗೋ ೨ ತಿಂಗಳಿಗೊ ಮನೆಗೆ ಬರುತ್ತಿದ್ದನಂತೆ .ನೀಲಮ್ಮನ ದೃಷ್ಟಿಯಲ್ಲಿ ವೀರು ಉಡಾಳ . ಗಿರೀಶನ ದೃಷ್ಟಿಯಲ್ಲಿ ಜವಾಬ್ದಾರಿಯಿಲ್ಲದವನು .

ನಾನು ಬಾಗಿಲು ತೆರೆದೊಡನೆ ಆರಡಿಯ ಕೆಂಪನೆಯ ವ್ಯಕ್ತಿ ಕಾಣಿಸಿದ . ವ್ಹಾ . ಒಳ್ಳೆಯ ರೂಪವಂತ ಅನ್ನಿಸಿತು . ಕಣ್ಣಗಳಲ್ಲಿ ಏನೂ ಹೊಳಪು . ಬಾಗಿಲು ತಳ್ಳಿಕೊಂಡು ಒಳಗೆ ಬಂದ . ಕ್ಲಾಸ್ ನಲ್ಲಿ ಪರೀಕ್ಷೆಗಳು ಪ್ರಾರಂಭವಾಗುತ್ತಿತ್ತು . ಅದಕ್ಕೆ ಪುಸ್ತಕ ಹರಡಿಕೊಂಡು ಓದುತಿದ್ದೆ . ಚಿಕ್ಕ ರೂಮ್. ರೂಮಿನ ಮೂಲೆಯಲ್ಲಿ ಕುಳಿತು ಚೀಲದಿಂದ ಬಾಟೆಲ್ ತೆಗೆದ . ಜೊತೆಗೆ ಒಂದು ಗಾಜಿನ ಲೋಟ . ಮೆಲ್ಲನೆ ಲೋಟ ತುಂಬಿಕೊಂಡ . ನನ್ನನ್ನೇ ನೋಡುತ್ತಾ "ನನಗೇನೂ ನೀರು ಸೋಡಾ ಬೇಡ , ಹಾಗೆ ಕುಡಿದರೆ ಮಜಾ " ಜೋರಾಗಿ ನಕ್ಕ .ಜೊತೆಗೆ ಕಡಲೆ ಬೀಜ . "ನಾನಾರು ನಿನಗೆ ಗೊತ್ತ " ದರ್ಪದಿಂದ ಕೇಳಿದ . "ನಿನಗೆ ಹೇಗೆ ಗೊತ್ತಾಗಬೇಕು "ವೀರೂ ",ವಿರೇಶ ನಾನು . ಈ ಊರಿನಲ್ಲಿ ನನ್ನ ಹೆಸರು ಹೇಳಿದರೆ ಎಲ್ಲರು ಬಾಲ ಮುದುರಿ ತಲೆ ತಗ್ಗಿಸುತ್ತಾರೆ . "ಅಮ್ಮ ಇನ್ನೂ ಮಲಗಿರಲ್ಲ . ಅದಕ್ಕೆ ಹೀಗೆ . ಗ್ಲಾಸ್ ಖಾಲಿ ಮಾಡಿ "ಇದು ಗೋವಾ ಫೆನ್ನಿ " ನಿನ್ನ ನೋಡಿದರೆ ಬಚ್ಚ ತರಾ ಇದ್ದೀಯ ಮತ್ತೆ ಜೋರಾಗಿ ನಕ್ಕ . ಸರಸರನೆ ಹೊರಗೆ ಹೊರಟು ಹಿಂಬಾಗಿಲಿನಿಂದ ಮನೆ ಸೇರಿದ .

ಅಂದು ಪರೀಕ್ಷೆ ಮುಗಿದಿತ್ತು. ಸಂಜೆ ಕಾಫಿ ಕುಡಿಯಲು ರೂಮ್ ಬೇಗ ಹಾಕಿ ಹೊರಗೆ ಹೊರಟಿದ್ದೆ. ವೀರೂ ಎದರಿಗೆ ಬಂದು "ಏನ್ ಇಂಜಿನಿಯರ್ ಸಾಹೇಬರೇ " ಎಂದ. ನಾನು "ಇನ್ನು ಇಂಜಿನಿಯರ್ ಆಗಿಲ್ಲ ನಾನು "ಎಂದೆ . ಬನ್ನಿ ನನ್ನ ಜೊತೆ .ಈ ಊರಲ್ಲಿ ನನ್ನ ಹವಾ ನೋಡಿ . ಎಂದ . ನಿಜಕ್ಕೂ ಅವನ ಜೊತೆ ನಡೆವಾಗ ಹತ್ತಾರು ಜನರು ನನ್ನತ್ತ ನೋಡಿ ತಲೆ ತಗ್ಗಿಸಿಕೊಂಡು ಹೋಗುತ್ತಿದ್ದರು . ವೀರೂ ಮೀಸಿಯಂಚಿನಲ್ಲೇ ನಗುತ್ತಿದ್ದ .

ಮರುದಿನ ಕಾಲೇಜಿನಲ್ಲಿ ಮತ್ತು ರಸ್ತೆಯಲ್ಲಿ ನಾನು ನಡೆದುಕೊಂಡು ಹೋಗುವಾಗ ಜನರು ನನ್ನನ್ನು ನೋಡುವ ದೃಷ್ಟಿ ಬದಲಾಗಿದೆ ಅನಿಸಿತು . ನನ್ನ ಗೆಳೆಯ ಸುರೇಶ " ಆ ರೌಡಿ ಒರಟನ ಹತ್ತಿರ ನಿನ್ನ ಸ್ನೇಹವೇ ? ಸ್ವಲ್ಪ ಹುಷಾರು "ಎಂದ . ವೀರೂ ಅದೇಕೋ ಕಾರಣ ಮಾಡಿಕೊಂಡು ನನ್ನ ಜೊತೆ ಸೇರುತ್ತಿದ್ದ . ರಾತ್ರಿ ನನ್ನ ರೂಮ್ನಲ್ಲಿ ಅವನ ಸಾಹಸ ಕಥೆಗಳನ್ನು ಹೇಳುತ್ತಿದ್ದ .ಜೊತೆಗೆ ಗೋವಾ ಫೆನ್ನಿ .

ಆ ದಿನ ರಾತ್ರಿ ತಡವಾಗಿ ಬಂದ . ಮನೆಗೆ ಹೋಗದೆ ನನ್ನ ರೂಮ್ ಗೆ ಬಂದ . ಮುಖ ಕೈ ಕಾಲುಗಳಲ್ಲಿ ರಕ್ತ .ಯಾವುದೂ ಜಗಳ ಮಾಡಿಕೊಂಡು ಬಂದಿದ್ದ ಅನಿಸತ್ತೆ . "ಇವತ್ತು ಇಲ್ಲೇ ಮಲಗುತ್ತೇನೆ ,ಅಮ್ಮ ನೋಡಿದರೆ ಕಷ್ಟ "ಎಂದ .

ಅವನೇ ಹೇಳಿದ . ಅವನ ಸ್ನೇಹಿತನ ತಂಗಿಗೆ ಯಾರೋ ಹುಡುಗ ಕೀಟಲೆ ಮಾಡಿದನಂತೆ . ಅವನನ್ನು ಚನ್ನಾಗಿ ಬಾರಿಸಿ ಬಂದೆ .ಅಂದ . ನಾನು ಸುಮ್ಮನೆ ತಮಾಷೆಗೆ "ಅಂದರೆ ಆ ಹುಡುಗಿ ಮೇಲೆ ಮನಸ್ಸು ಬಿತ್ತ " ಅಂದೆ . ಅವನ ಕಣ್ಣುಗಳು ಕೆಂಪಾದವು. ಈ ಮಾತು ನೀವು ಹೇಳಿದಿರ ಅಂತ ಸುಮ್ಮನೆ ಬಿಟ್ಟಿದ್ದೇನೆ . ನನ್ನ ಸ್ನೇಹಿತನ ತಂಗಿ ಅಂದ್ರೆ ನನ್ನ ತಂಗಿ . ನಾನೇನು ಹುಡುಗಿಯರ ಹಿಂದೆ ತಿರುಗೋ ಲೋಫರ್ ಅನ್ಕೊಂಡ್ರಾ " ಎಂದ. ನನಗೆ ತಲೆ ತಗ್ಗಿಸುವಂತೆ ಆಯಿತು . ಮತ್ತು ಮಾತು ಬೆಳಸದೆ ಮಲಗಿಕೊಂಡ .

ಅಂದು "ನಿಮಗೆ ಭಯ ಆಗಲ್ವ ,ಯಾರಾದರೂ ನಿಮ್ಮನ್ನು ಹೊಡೆದರೆ "ಎಂದೆ . ನನ್ನನ್ನು ಹೊಡೆಯುವ "ಗಂಡು" ಭೂಮಿ ಮೇಲೆ ಹುಟ್ಟಿಲ್ಲ ಅಂದ . ಅಂದು ರಾತ್ರಿ ಕೆಳಗಡೆ ಅವರ ಮನೆಯಲ್ಲಿ ಏನೋ ಗಲಾಟೆ ಆಗುತ್ತಿತ್ತು . ಮೆಲ್ಲನೆ ಕೆಳಗೆ ಬಂದೆ . ನೀಲಮ್ಮ ರೌದ್ರಾವತಾರ ತಾಳಿದ್ದರು . ಕೈಯಲ್ಲಿ ಪೊರಕೆ ಹಿಡಿದುಕೊಂಡು ವೀರೂ ಗೆ ಹೊಡೆಯುತ್ತಿದ್ದರು . ವೈನಿ ಅವರಿಗೆ ಸಮಾಧಾನ ಮಾಡಲು ಯತ್ನಿಸುತ್ತಿದ್ದರು . ಗಿರೀಶ್ ಇನ್ನು ಮನೆಗೆ ಬಂದಿರಲಿಲ್ಲ . ನನ್ನ ನೋಡಿ ನೀಲಮ್ಮ " ಇವನಿಗೆ ಯಾವಾಗ ಜವಾಬ್ದಾರಿ ಬರತ್ತೋ. ಅಲ್ಲಿ ಹೊರಗಡೆ ಯಾರ ಯಾರ ಅಂಗಡಿಯಲ್ಲೋ ಸಾಲ ಮಾಡ್ತಾನೆ . ದುಡ್ಡು ಕೇಳಿದ್ರೆ ಹೆದರಿಸುತ್ತಾನಂತೆ . ಅವರು ಮನೆಗೆ ಬಂದು ದುಡ್ಡ ತೆಗೆದುಕೊಂಡು ಹೋಗುತ್ತಾರೆ . "ಮತ್ತೆ ಆವೇಶ ಬಂದವರಂತೆ ಕೋಲು ಹಿಡಿದು ಅವನನ್ನು ಹೊಡೆಯಲು ಪ್ರಾರಂಭಿಸಿದರು . ಆರು ಅಡಿ ವೀರೂ ದೇಹವನ್ನು ಕುಗ್ಗಿಸಿ ಮುದುಡಿ ಹೊಡೆತ ತಿನ್ನುತಿದ್ದ . ಹಾಗೆ ಗೋಡೆಗೆ ಒರಗಿ ಕುಳಿತ . ನೀಲಮ್ಮನ ಆವೇಶ ಕಡಿಮೆಯಾಯಿತು .ಅಡುಗೆ ಮನೆಗೆ ಹೋಗಿ ತಟ್ಟೆಯಲ್ಲಿ ಏನನ್ನೋ ಹಾಕಿಕೊಂಡು ಬಂದರು ."ಹಾಳದವನು ,ನನ್ನ ಜನ್ಮಕ್ಕೆ ಅಂಟಿದವನು "ಬೈಯುತ್ತಾ ಅವನ ಪಕ್ಕದಲ್ಲಿ ಕುಳಿತರು . ಅವನ ಕೈಯಲ್ಲಿ ಗಾಯ ನೋಡಿ ತುತ್ತು ಮಾಡಿ ಬಾಯಲ್ಲಿ ಇಟ್ಟರು . ಅವನ ಕಣ್ಣಲ್ಲಿ ಅವಮಾನ ಇಣುಕಿತ್ತು .ಎರಡು ತುತ್ತು ತಿಂದು "ನನಗೆ ಗೊತ್ತು ಇದು ಯಾರ ಕೆಲಸ ಅಂತ , ಅವನಿಗೆ ಗತಿ ಕಾಣಿಸ್ತೀನಿ "ಕೋಪದಿಂದ ಎದ್ದು ಹೊರ ನಡೆದ .

ಇದೆಲ್ಲ ಆಗಿ ಹಲವು ವರ್ಷಗಳೇ ಆಗಿದೆ .ನನ್ನದೇ ಕೆಲಸ ,ಸಂಸಾರ ಎಂದಾಗಿದೆ . ಆದರೆ ನನಗೆ "ವೀರೂ "ನ ಮರೆಯಲು ಸಾಧ್ಯವಾಗುತ್ತಿಲ್ಲ . ಅದೇಕೋ ಮತ್ತೆ ಮತ್ತೆ ನೆನಪಿಗೆ ಬರುತ್ತಾನೆ . ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ .

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.