ಕಡಲ ದ್ವೀಪ..!!

ಒಂದು ವಿಶಾಲವಾದ ಸುಂದರವಾದ ಕಡಲು. ದೂರದಲ್ಲಿರುವ ಎಲ್ಲಾ ವಸ್ತುಗಳನ್ನು ತನ್ನ ಒಡಲಲ್ಲಿ ತುಂಬಿಕೊಳ್ಳಬೇಕೆಂಬ ಹಂಬಲವಿರುವಂತೆ ಮುನ್ನುಗ್ಗುತ್ತಿರುವ ಕಡಲು. ಅಂತಹ ಕಡಲ ತಡಿಯಲ್ಲಿರುವ ಒಂದು ಪುಟ್ಟ ಹಳ್ಳಿ “ಹೂ ಮನೆ”. ಹೆಚ್ಚು ಜನರಿರದ ಪುಟ್ಟ ಪ್ರಪಂಚ ಆ ಗ್ರಾಮ. ಸುರೇಶ, ರಮೇಶ, ಮಹೇಶ ಹಾಗು ಸತೀಶನೆಂಬ ನಾಲ್ವರು ಆತ್ಮೀಯ ಗೆಳೆಯರು ಆ ಗ್ರಾಮದ ಶಕ್ತಿ. ಚಿಕ್ಕಂದಿನಿಂದ ಆಟ, ಪಾಟ, ಊಟವು ಜೊತೆಯಲ್ಲೆ ಮಾಡಿ ಒಟ್ಟಿಗೆ ಬೆಳೆದ ಗೆಳೆಯರದು ಬಿಟ್ಟಿರಲಾರದ ನಂಟು. ಸದಾ ಚಟುವಟಿಕೆಯಿಂದಿರುತ್ತಿದ್ದ ಆ ಹುಡುಗರು ಶಾಲಾ ದಿನದಲ್ಲಿ ಶಿಕ್ಷಕರ ಹೊಗಳಿಕೆಗೆ ಪಾತ್ರರಾದವರು.

ಅದೊಂದು ಪ್ರಕೃತಿದತ್ತವಾದ ಸುಂದರ ಗ್ರಾಮ. ಪ್ರಾಕೃತಿಕ ಸೌಂದರ್ಯ ಸಿರಿಯೇ ಅಲ್ಲಿತ್ತು. ಶ್ರಮದಿಂದ ದುಡಿದು ಕಟ್ಟಿದ ಆ ಗ್ರಾಮದಲ್ಲಿ ಯಾವುದಕ್ಕೂ ಕೊರತೆಯಿರಲಿಲ್ಲ. ಆದರೆ, ಆ ಮಾದರಿ ಗ್ರಾಮ ವರ್ಷ ಕಳೆದಂತೆ ತನ್ನ ಕಳೆಯನ್ನೇ ಕಳೆದುಕೊಂಡಿತು. ಮೂಲಭೂತ ಸೌಕರ್ಯಕ್ಕೂ ಕಷ್ಟ ಪಡುವಂತಹ ಸ್ಥಿತಿ. ಬಡತನ ಆವರಿಸತೊಡಗಿತು. ಅಲ್ಲಿನ ಆರ್ಥಿಕ ಹಾಗು ಸಾಮಾಜಿಕ ಬೆಳವಣಿಗೆ ಕನಸಿನ ಮಾತಾಯಿತು. ಯಾವ ಅಭಿವೃದ್ಧಿ ಕಾರ್ಯ ಮಾಡಲು ಹೋದರೂ ಆ ಹಳ್ಳಿಗರಿಗೆ ಅಲ್ಲಿನ ಕುಂದು ಕೊರತೆಯೇ ದೊಡ್ಡದಾಗಿ ಕಾಣುತ್ತಿತ್ತು. ಈ ಹಳ್ಳಿಯಲ್ಲೇ ಏನೋ ತೊಂದರೆ ಇದೆ, ಇದೇ ಹಳ್ಳಿಯಲ್ಲೇ ಉಳಿದರೆ ನಾವೆಂದೂ ಅಭಿವೃದ್ಧಿ ಹೊಂದಲಾರೆವು ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿತ್ತು. ಇಂತಹ ಸಮಯದಲ್ಲಿ ಈ ಮಾತುಗಳಿಗೆ ತುಪ್ಪ ಸುರಿಯುವಂತೆ ಹಳ್ಳಿ ಬಿಡುವ ಕನಸ ಕಟ್ಟಿದವರು ಈ ನಾಲ್ಕು ಗೆಳೆಯರು.

ನಯನ ಮನೋಹರವಾದ ಸಾಗರದ ಮಧ್ಯೆ ಒಂದು ಸುಂದರ ದ್ವೀಪವಿತ್ತು. ಆ ಹಳ್ಳಿ ಜನರ ಆಕರ್ಶಣೆಯ ಕೇಂದ್ರ ಬಿಂದು ಆ ದ್ವೀಪ. ಆದರೆ ಆ ದ್ವೀಪ ತಲುಪುವ ಸಾಹಸಕ್ಕೆ ಆ ಯಾರೋಬ್ಬರೂ ಮನಸು ಮಾಡಿರಲಿಲ್ಲ. ಗೆಳೆಯರ ಪಾಲಿಗೆ ಅದೇ ಒಂದು ಸವಾಲಾಗಿ ಪರಿಣಮಿಸಿತು. ಅವರ ದೈನಂದಿನ ಕಾರ್ಯವನ್ನೆಲ್ಲ ಬದಿಗಿಟ್ಟು ಒಂದು ದಿನ ಆ ಕಡಲ ಮಡಿಲಲ್ಲಿರುವ ಸ್ವರ್ಗಕ್ಕೆ ಹೊರಡುವ ಮನಸು ಮಾಡಿಯೇ ಬಿಟ್ಟರು. ಅವರ ಹಳ್ಳಿಯ ತೊರೆದು ಎಲ್ಲರನ್ನೂ ಆ ದ್ವೀಪಕ್ಕೆ ಕರೆದೊಯ್ಯಬೇಕೆಂಬುದು ಅವರ ಕನಸು. ಹೀಗೆ ಮಾಡಿದರೆ ನಾವು ಸಂತಸದಿಂದಿರಬಹುದೆಂಬ ಕಲ್ಪನೆ ಅವರದಾಗಿತ್ತು. ಪೂರ್ವಾಪರ ಯೋಚಿಸದೆ ಅವರೇ ಮುಂದೆ ನಿಂತು ಇಡೀ ಹಳ್ಳಿಯನ್ನೇ ಸ್ಥಳಾಂತರಿಸುತ್ತೇವೆಂದು ಹೇಳಿ ಆ ದ್ವೀಪಕ್ಕೆ ತಲುಪಲು ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಲು ತಮ್ಮ ಮನೆ ತಲುಪಿದರು.

ಈ ಸುದ್ದಿ ಇಡೀ ಗ್ರಾಮದಲ್ಲಿ ಮಿಂಚಿನ ವೇಗದಲ್ಲಿ ಹರಡಿತು. ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡಲು ಆರಂಭಿಸಿದರು. ಹೂ ಮನೆಯ ಹಿರಿಯ ಜೀವಗಳು ಇದನ್ನು ಒಪ್ಪಲಿಲ್ಲ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ, ಇರುವುದನ್ನೇ ಸರಿಯಾಗಿ ಬಳಸಿ ಶ್ರಮ ಜೀವನದಿಂದ ಸುಖವ ಕಾಣಿರೆಂದು ಬುದ್ದಿ ಮಾತು ಹೇಳಿದರೆ ಯಾರೊಬ್ಬರೂ ಕಿವಿಗೊಡಲಿಲ್ಲ. ಅಸಹಾಯಕ ಸ್ಥಿತಿಯಿಂದ ಸುಮ್ಮನಾದರು ಆ ಊರಿನ ಹಿರಿಯರು.

ಹುಡುಗರ ಪಾಲಿಗೆ ಆ ದ್ವೀಪ ಒಂದು ಕನಸಿನ ಲೋಕದಂತೆ ಕಂಡಿತು. ಆ ದ್ವೀಪಕ್ಕೆ ಹೋಗಿಯೇ ತೀರುವ ಮನಸು ಮಾಡಿದರು. ಒಂದು ದೋಣಿಗೂ ಗತಿಯಿರದ ಸ್ಥಿತಿಯಿತ್ತಾದರೂ, ಕಾಡು ಮೇಡು ಸುತ್ತಾಡಿ ದೋಣಿಯ ನಿರ್ಮಿಸಲು ಬೇಕಾದ ಸಾಮಾಗ್ರಿಗಳನ್ನು ತಾವೇ ಒಟ್ಟುಗೂಡಿಸಿ ಕೆಲವರ ಸಹಾಯ ಪಡೆದು, ಅತೀ ಉತ್ಸಾಹದಿಂದ ಎಲ್ಲವನ್ನೂ ಬದಲಿಸುವ ಕನಸ ಹೊತ್ತು, ಒಂದು ದೋಣಿಯನ್ನು ಸಿದ್ಧ ಮಾಡಿಯೇ ಬಿಟ್ಟರು. ಮರುದಿನ ಮುಂಜಾನೆ ಬೇಗನೆ ಎದ್ದು ಸ್ನಾನಾದಿ ಕಾರ್ಯವನ್ನು ಮಾಡಿ ದೇವರಿಗೆ ವಂದಿಸಿ ಒಂದಿಷ್ಟು ತಿಂಡಿಯನ್ನು ಕಟ್ಟಿಕೊಂಡು ಅವರೇ ನಿರ್ಮಿಸಿದ ಹೊಚ್ಚ ಹೊಸ ದೋಣಿಯಲ್ಲಿ ಕುಳಿತು ಹೊರಟೇ ಬಿಟ್ಟರು. ಹಳ್ಳಿಯವರೆಲ್ಲರು ಸೇರಿ ಅವರನ್ನು ಬೀಳ್ಕೊಟ್ಟರು. ಬದಲಾವಣೆಯ ಬೆಳಕು ಕೆಲವರ ಕಣ್ಣಲ್ಲಿ ಕಂಡರೆ, ಬೇಕೆ ಇಂತಹ ವ್ಯರ್ತ ಪ್ರಯತ್ನ ಎಂಬ ಭಾವ ಕೆಲವರ ಮನದಲ್ಲಿತ್ತು. ಹಿರಿಯ ಜೀವಗಳು ಇವರ ಕಾಯಕವನ್ನೆಲ್ಲಾ ನೋಡಿ ನಿಟ್ಟುಸಿರು ಬಿಟ್ಟರು.
ನವ ಚೈತನ್ಯ ಬಂದಂತೆ ನಾಲ್ವರು ಗೆಳೆಯರು ಸಾಹಸ ಪ್ರವೃತ್ತಿಯಿಂದ ದೋಣಿಯಲ್ಲಿ ಮುಂದೆ ಸಾಗಿದರು. ಒಬ್ಬೊಬ್ಬರದ್ದು ಒಂದೊಂದು ಕಲ್ಪನೆ. ಸುರೇಶನಿಗೆ ತಿಂಡಿ-ತಿನಿಸುಗಳಲ್ಲಿ ಅತಿಯಾದ ಪ್ರೀತಿ. ಅವನು ಆ ದ್ವೀಪದಲ್ಲಿ ತಿನ್ನಲು ಏನೇನು ಸಿಗಬಹುದು ಎಂದು ಚಿಂತಿಸುತಿದ್ದನು. ಮಹೇಶ ಜೀವನವನ್ನು ಎಂದೂ ಗಂಭೀರವಾಗಿ ಪರಿಗಣಿಸಿದ್ದೆ ಇಲ್ಲ. ಅವನು ಅಲ್ಲೇನಿರಬಹುದೆಂಬ ಕುತೂಹಲವನ್ನಷ್ಟೆ ಉಳಿಸಿಕೊಂಡಿದ್ದನು. ಅದರ ಬಗ್ಗೆಯೇ ಯೋಚಿಸುತ್ತಿದ್ದನು. ಸತೀಶನು ಪ್ರಕೃತಿಯ ಆರಾಧಕನಾಗಿದ್ದನು. ಕಡಲ ಸೌಂದರ್ಯವನ್ನು, ಆ ದ್ವೀಪದ ನಿಗೂಢತೆಯನ್ನು ತನ್ನ ಕಲ್ಪನಾ ಕಣ್ಣಿನಿಂದ ನೋಡಿ ಕವಿಯಾದನು. ತೋಚಿದ ಕವಿತೆಯನ್ನು ಹೇಳುತ್ತಾ ಮುಂದೆ ಸಾಗಿದನು. ರಮೇಶನದು ತುಸು ಪುಕ್ಕಲು ಸ್ವಭಾವ. ಅದಕ್ಕೆ ಪುಷ್ಟಿ ನೀಡುವಂತೆ ಅವನಿಗೆ ಭೂತ-ಪ್ರೇತದ ಕಥೆಯನ್ನು ಗೇಲಿ ಮಾಡಲೆಂದು ಹೇಳಿ ಎಲ್ಲರೂ ಅವನನ್ನು ಹೆದರಿಸಿಟ್ಟಿದ್ದರು. ಆ ದ್ವೀಪದಲ್ಲಿ ಏನಿರಬಹುದೋ ಎಂಬ ಭಯದಲ್ಲೇ ಮುಳುಗಿದ ರಮೇಶ ಆ ದ್ವೀಪವನ್ನೇ ದಿಟ್ಟಿಸಿ ನೋಡುತ್ತಿದ್ದ. ಅವನಿಗೆ ಆ ದ್ವೀಪ ಭಯಾನಕವಾಗಿ ಕಂಡಿತು. ಅಲ್ಲೇನಿರಬಹುದೆಂಬ ಚಿಂತೆಯಲ್ಲೇ ತಲ್ಲೀನನಾದ ಅವನಿಗೆ ಆ ದ್ವೀಪ ಒಂದು ಚಿದಂಬರ ರಹಸ್ಯದಂತಾಯಿತು. ಆ ಭಯದಿಂದ ಸೋತು ಸುಸ್ತಾಗಿ ತುಸು ನಿದ್ದೆಗೆ ಜಾರಿದ ರಮೇಶ.

ನಾಲ್ವರು ಗೆಳೆಯರು ದ್ವೀಪವ ತಲುಪಿದರು. ಸುಂದರ ನಿಸರ್ಗ ಆ ದ್ವೀಪದ ಸ್ವತ್ತಾಗಿತ್ತು. ಎತ್ತ ನೋಡಿದರೂ ಹಸಿರು, ಕಣ್ಣು ಹಾಯಿಸಿದಷ್ಟು ಪ್ರಕೃತಿ ಮಾತೆಯ ಸಿರಿವಂತಿಕೆಯೇ ಅಲ್ಲಿ ಕಾಣುತ್ತಿತ್ತು. ಪಕ್ಷಿ ಸಂಕುಲವು ಸ್ವಾಗತ ಗೀತೆಯ ಹಾಡಿದಂತೆ, ಪ್ರಕೃತಿ ಮಾತೆಯು ಕೈ ಬೀಸಿ ಕರೆದಂತೆ ಅವರಿಗೆ ಭಾಸವಾಯಿತು. ಒಂದು ನಿಮಿಷ ನಿಂತಲ್ಲೇ ನಿಂತು ತಮ್ಮನ್ನೇ ತಾವು ಮರೆತು ಹಿಂದೆಂದೂ ನೋಡಿರದ ಸ್ವರ್ಗ ಸಮಾನವಾದಂತಿದ್ದ ದ್ವೀಪವನ್ನು ಕಣ್ತುಂಬಾ ತುಂಬಿಕೊಂಡರು. ಉತ್ಸಾಹದಿಂದ ಕುಣಿದು ಕುಪ್ಪಳಿಸಿದರು. ರುಚಿಯಾದ ಹಣ್ಣುಗಳನ್ನು ಹುಡುಕಿಕೊಂಡು ಸುರೇಶನು ಒಂದೆಡೆ ಹೊರಟನು. ಸತೀಶನಿಗೆ ಪ್ರಕೃತಿ ಮಾತೆಯು ವಶೀಕರಿಸಿಕೊಂಡಂತೆ ಬೆಟ್ಟ, ಗುಡ್ಡ, ಜಲಪಾತದೆಡೆಗೆ ಪ್ರಾಕೃತಿಕ ಸೊಬಗ ಸವಿಯುತ್ತಾ ಹೊರಟುಹೋದನು. ಮಹೇಶನು ದ್ವೀಪದ ನಿಗೂಢತೆಯನ್ನು ಭೇದಿಸಲು ಮಂದಾಗಿ ಇಡೀ ದ್ವೀಪದಲ್ಲಿ ಏನಿದೆಯೆಂದು ತಿಳಿಯಲು ಕುತೂಹಲದಿಂದ ಹೊರಟನು. ರಮೇಶನು ನಿಸರ್ಗದ ಶಾಂತತೆಯನ್ನು ನೋಡಿ ತನ್ನ ಭಯವ ಬದಿಗಿಟ್ಟು ಅವನೂ ಆ ದ್ವೀಪದ ಮೋಡಿಗೆ ಸಿಲುಕಿದಂತಾದನು. ಹೀಗೆ ಎಂದೂ ಬಿಟ್ಟಿರದ ಗೆಳೆಯರು ಒಬ್ಬೊಬ್ಬರು ಒಂದೊಂದು ಕಡೆ ನಡೆದರು.

ರಮೇಶನಿಗೆ ದೂರದಲ್ಲಿ ಒಂದು ಮನೆ ಕಾಣಿಸಿತು. ಅಲ್ಲಿ ಯಾರಿರಬಹುದೆಂದು ತಿಳಿಯಲು ಆ ಮನೆಯ ಬಳಿ ತೆರಳಿದ. ಅಲ್ಲಿ ಅವನಿಗೊಂದು ಅಚ್ಚರಿ ಕಾದಿತ್ತು. ಅದು ಬೃಹದಾಕಾರವಾಗಿ ಆಕಾಶವನ್ನು ಮುಟ್ಟುವಂತೆ ತಲೆ ಎತ್ತಿ ನಿಂತಿದ್ದ ಒಂದು ದೊಡ್ಡ ಬಂಗಲೆ. ಹೊರಗೆ ನಿಂತು ಒಳಗೆ ಯಾರಿದ್ದೀರಿ ಎಂದು ಕೂಗಿದ. ಆದರೆ ಯಾರೊಬ್ಬರೂ ಅವನ ಮಾತಿಗೆ ಉತ್ತರಿಸಲಿಲ್ಲ. ಹತ್ತಿರ ಹೋಗಿ ನೋಡಿದ, ಬಾಗಿಲು ತೆರೆದಂತೆ ಕಂಡಿತು. ಒಳಗೆ ಹೋಗುವ ಕುತೂಹಲ ಉಂಟಾದರೂ ಧೈರ್ಯ ಸಾಲಲಿಲ್ಲ. ಏನು ಮಾಡುವುದೆಂದು ಚಿಂತಿಸಿ ತನ್ನಲ್ಲಿದ್ದ ಸುಪ್ತ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ ಆ ಮನೆಯ ಒಳಹೊಕ್ಕುವ ಮನಸು ಮಾಡಿಯೇ ಬಿಟ್ಟ.

ಅದೊಂದು ಸುಂದರ ಅರಮನೆ. ಎಲ್ಲೆಡೆ ಅಲಂಕಾರಿಕ ದೀಪ ಜಿನುಗುತ್ತಿತ್ತು. ಗೋಡೆಯ ತುಂಬಾ ಚಿತ್ರಪಟಗಳು ತೂಗಾಡುತ್ತಾ ಒಂದೊಂದು ಚಿತ್ರವೂ ಒಂದೊಂದು ಕಥೆಯ ಹೇಳುವಂತಿತ್ತು. ಇದ್ದಕ್ಕಿದ್ದಂತೆ ಒಮ್ಮೆಲೆ ಮನೆಯ ಒಳಗೆ ಕತ್ತಲು ತುಂಬಿತು. ನಕಾರಾತ್ಮಕ ಛಾಯೆ ಸುತ್ತಲೂ ಹರಡಿತು. ಸ್ವಭಾವತಃ ಹೆದರಿಕೆ ಇದ್ದ ರಮೇಶನಿಗೆ ಭಯ ಆವರಿಸಿತು. ಮನೆಯಲ್ಲಿ ಯಾರಿದ್ದೀರೆಂದು ಕೂಗಿದ. ಬೆಳಕಿಗಾಗಿ ಬೇಡಿದ. ಒಳಗಿನಿಂದ ಯಾರೋ ಅಳುವ ದನಿ, ಚೀತ್ಕಾರದ ದನಿ ಕೇಳಿತು. ಆ ಆರ್ತನಾದ ಕೇಳುತ್ತಿದ್ದಂತೆಯೇ ದಿಗ್ಬ್ರಾಂತನಾದ ರಮೇಶ. ಹೆದರಬೇಡ ಬಾ ಎಂದು ನಗುವ ದನಿ ಕೇಳಿತು. ಅಲ್ಲಿಂದ ಓಡಲು ಬಯಸಿ ಹಿಂದಿರುಗಿದರೆ ಒಂದು ಅಸ್ತಿ ಪಂಜರ ಎದುರಾಯಿತು. ಸತ್ತೆನೋ, ಕೆಟ್ಟೇನೋ ಎಂದು ಮರು ಯೋಚಿಸದೆ ಅಲ್ಲಿಂದ ಕಾಲ್ಕಿತ್ತ. ಗೆಳೆಯರನ್ನು ಸಂಧಿಸುವ ಸಲುವಾಗಿ ಅವರಿಗಾಗಿ ಹುಡುಕಾಟ ನಡೆಸಿದ. ಹಣ್ಣು ತಿನ್ನಲು ಹೋದ ಸುರೇಶನನ್ನು ನೋಡಿ ಸಂತಸಗೊಂಡು ಅವನನ್ನು ಮಾತನಾಡಿಸಿದರೆ, ಅವನು ನಿಶ್ಚಲವಾಗಿ ಕುಳಿತಿದ್ದ. ಅವನ ಕೈಯಲ್ಲಿ ಹಣ್ಣುಗಳಿದ್ದವು. ಅದನ್ನು ಪರೀಕ್ಷಿಸಿ ನೋಡಿದಾಗ ಅವು ವಿಷದ ಹಣ್ಣಾಗಿರಬಹುದೆಂಬ ಸಂದೇಹ ಉಂಟಾಯಿತು. ಗೆಳೆಯನನ್ನು ಕಳೆದುಕೊಳ್ಳುವ ಸ್ಥಿತಿ ಬಂತೇ ಎಂದು ದುಃಖದಿಂದ ಸತೀಶನನ್ನು ಹುಡುಕುತ್ತಾ ಹೊರಟ. ಆಗ ದೂರದಲ್ಲಿ ಜಲಪಾತದ ಸದ್ದಾಯಿತು. ಆ ಶಬ್ದದೆಡೆಗೆ ನಡೆದಾಗ ಒಂದು ಸುಂದರ ಜಲಪಾತ ಎದುರಾಯಿತು. ಬಳಲಿದ್ದ ಅವನಿಗೆ ಆ ಜಲಪಾತದ ನೀರು ಅಮೃತ ಪಾನವಾಯಿತು. ನೀರು ಕುಡಿಯುತ್ತಿದ್ದ ಅವನಿಗೆ ಆ ಕ್ಷಣದಲ್ಲಿ ಕಂಡಿದ್ದು ದೂರದಲ್ಲಿ ತೇಲುತ್ತಿದ್ದ ಸತೀಶನ ದೇಹ! ತನ್ನ ಕಣ್ಣನ್ನೇ ನಂಬದವನಾಗಿ ಅದು ಭ್ರಮೆಯೆಂದು ಭಾವಿಸಿ ಅಲ್ಲಿಂದ ಹೊರಟನು.

ನಂತರ ಅವನಿಗೆ ಸಿಕ್ಕಿದ್ದು ಮಹೇಶ. ಅವನಿಗೆ ನಡೆದ ಘಟನೆಯನ್ನೆಲ್ಲಾ ಹೇಳಿದರೆ ಅವನು ಅರೆ ಹುಚ್ಚನಂತೆ ವರ್ತಿಸಿದ. ಯಾವ ಮಾತಿಗೂ ಉತ್ತರಿಸಲಾಗದ ಸ್ಥಿತಿ ಅವನದಾಗಿತ್ತು. ಮರಳಿ ಹಳ್ಳಿಗೆ ಹೋಗಿ ಅಲ್ಲಿನ ಜನರಿಗೆ ವಿಷಯ ತಿಳಿಸಿ ಅವರನ್ನು ಕರೆತರುವಂತೆ ಯೋಚಿಸಿ ತಮ್ಮ ದೋಣಿಯಿದ್ದ ಕಡೆಗೆ ನಡೆದ. ಆದರೆ ಅಲ್ಲಿ ಅವರ ದೋಣಿ ಇರಲಿಲ್ಲ. ಅಸಹಾಯಕ ಸ್ಥಿತಿಯಿಂದ ನೊಂದು ಬೆಂದು ಬಳಲಿದ. ತನ್ನ ಕೈ ಕಾಲುಗಳು ಹಿಡಿತ ತಪ್ಪಿ ನಡುಗಲಾರಂಭಿಸಿದವು. ಭಯದಿಂದ ಮೈ ನೀರಿನಲ್ಲಿ ನೆನೆದಂತೆ ಒದ್ದೆಯಾಯಿತು. ಆ ಸಮಯದಲ್ಲಿ ರಮೇಶ ಎದ್ದೇಳು, ರಮೇಶ ಎದೇಳು! ಎಂಬ ಸತೀಶನ ದನಿ ಕೇಳಿತು. ಎಚ್ಚೆತ್ತ ಅವನಿಗೆ ವಾಸ್ತವದ ಅರಿವಾಯಿತು. ಇಷ್ಟು ಸಮಯ ಅವನು ಕಂಡಿದ್ದು ಕೇವಲ ಒಂದು ಭಯಾನಕ ಕನಸೆಂದು ಅರಿವಾಯಿತು.

ಅಷ್ಟರಲ್ಲಿ ಎಲ್ಲರೂ ಆ ದ್ವೀಪವನ್ನು ತಲುಪಿದರು. ಆದರೆ, ಆ ದ್ವೀಪದಲ್ಲಿದ್ದಿದ್ದು ಕೇವಲ ದೊಡ್ಡ ದೊಡ್ಡ ಬಂಡೆಗಳು, ಕಣ್ಣು ಹಾಯಿಸಿದಷ್ಟು ದೂರವೂ ಮರಳಿನ ರಾಶಿ. ಎಷ್ಟು ನಡೆದರೂ ಒಂದು ಹನಿಯಷ್ಟೂ ನೀರಿನ ಸೆಲೆ ಸಿಗಲಿಲ್ಲ. ಅಲ್ಲೊಂದು ಇಲ್ಲೊಂದು ಮುಳ್ಳಿನ ಗಿಡ, ಮರಗಳು ಇವರನ್ನು ಹೀಯಾಳಿಸುವಂತೆ ತೋರುತ್ತಿತ್ತು. ಹೀಗಿರುವಾಗ ಇಲ್ಲಿ ನಿತ್ಯ ಜೀವನ ನಡೆಸುವ ಮಾತು ದೂರವೇ ಉಳಿಯಿತು. ತಿಂಡಿ ಪೋತ ಸುರೇಶನಿಗೆ ತನ್ನ ಹಳ್ಳಿಯಲ್ಲಿರುವ ಮಾವು-ಹಲಸು ಮುಂತಾದ ಹಣ್ಣಿನ ಮರಗಳು ನೆನಪಾಗಿ ಬಾಯಿಯಲ್ಲಿ ನೀರೂರಿತು. ಸತೀಶನಿಗೆ ತನ್ನ ಮನೆಯ ಹಿತ್ತಲಿನ ಕಾಡು, ಅಲ್ಲಿ ಕೇಳುವ ಹಕ್ಕಿಗಳ ಚಿಲಿ-ಪಿಲಿ ಕಲರವ ನೆನಪಾಯಿತು. ಇಲ್ಲಿ ಏನೋ ಒಂದು ಹೊಸ ಲೋಕವಿದೆಯೆಂದು ಕಲ್ಪಿಸಿಕೊಂಡಿದ್ದ ಮಹೇಶನಿಗೆ ನಿರಾಸೆಯಾಯಿತು. ಕನಸಿನಿಂದ ಭಯಗೊಂಡಿದ್ದ ರಮೀಶನಿಗೆ ಎಷ್ಟು ಬೇಗ ತನ್ನೂರು ತಲುಪುತ್ತೇನೋ ಎಂದೆನಿಸುತ್ತಿತ್ತು. ಬಂದ ದಾರಿಗೆ ಸುಂಕವಿಲ್ಲವೆಂದು ಎಲ್ಲರೂ ತಮ್ಮ ಹಳ್ಳಿಗೆ ಹೊರಟರು. ದಾರಿಯುದ್ದಕ್ಕೂ ಮೌನ ಆವರಿಸಿತ್ತು. ಹೂ ಮನೆಯ ಹಿರಿಯ ಜೀವಗಳ ಮಾತುಗಳು ಕಿವಿಯಲ್ಲಿ ಗುಯ್ಗುಡುತ್ತಿತ್ತು. ತಮ್ಮ ತಪ್ಪಿನ ಅರಿವಾಗಿ ಹಳ್ಳಿಗೆ ಮರಳಿ ಅಲ್ಲಿಯವರಿಗೆ ನಡೆದ ವಿಷಯವನ್ನೆಲ್ಲಾ ಸವಿಸ್ತಾರವಾಗಿ ತಿಳಿಸಿ, ತಾವೊಂದು ಭ್ರಮಾ ಲೋಕದಲ್ಲಿದ್ದೆವೆಂದು, ಶ್ರಮದಿಂದ ದುಡಿದು ಹಳ್ಳಿಯನ್ನು ಬೆಳೆಸುವ ಸಂಕಲ್ಪ ಮಾಡಿದ್ದೇವೆಂದು ತಿಳಿಸಿದರು. ಅಂತೆಯೇ, ಅವರ ಕನಸಿನ ದ್ವೀಪಕ್ಕಿಂತ ಸುಂದರವಾಗಿ ಆ ಹಳ್ಳಿಯನ್ನು ಕಟ್ಟಿ ಒಂದು ಮಾದರಿ ಗ್ರಾಮವನ್ನಾಗಿಸಿದರು. ಇದರಿಂದ ಆ ಗ್ರಾಮದ ಎಲ್ಲಾ ಜನರು ಸುಖದಿಂದ, ನೆಮ್ಮದಿಯ ಬದುಕನ್ನು ಪಡೆದು, ನಾಲ್ವರು ಗೆಳೆಯರನ್ನು ಪ್ರಶಂಸಿಸುತ್ತಾ ಜೀವನ ಸಾಗಿಸಿದರು. “ಹೂ ಮನೆ”ಯಲ್ಲಿ ನಗುವು “ಹೂವಿನಂತೆ ಅರಳಿತು”.

-ನೈದಿಲೆ

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.