ಗಿರಾಕಿ

ಅವಳು ಕವಿಯಿತ್ರಿ. ಸ್ನೇಹ ಮಾಡಿಕೊಳ್ಳಬೇಕೆನಿಸಿತು. ಪತ್ರಮಿತ್ರಳಾಗಲು ತಡವಾಗಲಿಲ್ಲ. ಬೆಂಗಳೂರಿನವರ 'ಮಧು ಕುಂಭ' ಎಂಬ ಕವನ ಸಂಕಲನದಲ್ಲಿ ಅವಳ ವಿಳಾಸವಿತ್ತು. ಹೆಸರು ಆಕರ್ಷಕವಾಗಿರಲಿಲ್ಲ. ಮಹಾಭಾರತದ ಹೆಸರು...! ಖಾಸಗಿ ಇಂಗ್ಲಿಷ್ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿದ್ದಳು. ಕವನದಲ್ಲಿ ಎತ್ತಿದ ಕೈ. ಪತ್ರದ ಶೈಲಿ ಮೆದುಳಿಗೆ ಕಿಕ್ ಕೊಡುತ್ತಿತ್ತು. ಒಂದು ಪತ್ರದಲ್ಲಿ ಅವಳಿಗೆ ಬಹಳ ಹೊಗಳಿದೆ. ಸಂಕೋಚ ವ್ಯಕ್ತಪಡಿಸಿ, "ಹೊಗಳುವುದನ್ನು ನಿಲ್ಲಿಸಿ ಇಲ್ಲದಿದ್ದರೆ ಶಿಖರ ಏರಿ ಕುಳಿತೆನು" ಎಂದು ಬರೆದಳು. ಮಿನಿಗವನ ಭಾವ ಅದರಲ್ಲಿ ಇಣುಕಿತ್ತೆನೋ...! ಅವಳ ಶಬ್ದಗಳನ್ನು ಜೋಡಿಸಿ ಮಿನಿಗವನ ಮಾಡಿದೆ. ಹೀಗೆ....,

ನಿಲ್ಲಿಸು ಪ್ರಿಯಾ ಅತಿಯಾಗಿ

ಹೊಗಳುವುದು ಶಿಖರ ಏರಿ ಕುಳಿತೇನು

ಮತ್ತೆ ಇಳಿಯುವುದೇ ಇಲ್ಲ ನೋಡು

ತೆಗಳಿದರೂ ಸಹ

ನಾನು ಊಹಿಸಿದಂತೆ ಪ್ರಿಯಾ ಶಬ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದಳು. ನನ್ನ ದೌರ್ಬಲ್ಯ ತೋರಿಸಬಾರದು ಎನ್ನುವುದಕ್ಕೆ 'ಹುಚ್ಚು ಹುಡುಗಿ' ಎಂದು ಅವಳನ್ನೇ ದೂರಿ ಸರಿಪಡಿಸಿದೆ.

"ಕೆಲವರು ವೇಷ್ಯರಲ್ಲಿ ಹೋಗುವುದಕ್ಕಿಂತ ಮುಂಚೆ ರೋಗ ತಗುಲದಿರಲಿ ಎಂದು ಯಂಟಿ ಬಯಾಟಿಕ್ಸ್ ಗುಳಿಗೆ ನುಂಗಿ ಬಿಡುತ್ತಾರೆ. ಹಾಗಾಯಿತು ನಿಮ್ಮ ಪತ್ರ ಓದಿದ ನನಗೆ.." ಎಂದೆ. ಎಂ.ಎ. ತತ್ವಶಾಸ್ತ್ರ ಅಭ್ಯಾಸ ಮಾಡುತ್ತಿರುವುದರಿಂದ ನನ್ನ ವಿಚಾರ ಸರಣಿಯನ್ನು ಪರಿಚಯಿಸಲು ಒಂದು ಮಾತು ಸಹ ಬರೆದೆ.

"ವ್ಯಕ್ತಿ ಇನ್ನೊಬ್ಬರ ಪರಿಚಯ ಮಾಡಿಕೊಳ್ಳಬೇಕೆಂಬ ಬಯಕೆ ಹೊಂದಿರುತ್ತಾನಲ್ಲ..ಯಾಕೆ...? ಒಮ್ಮೆ ಅರ್ಥ ಮಾಡಿಕೊಂಡರೆ ಅವರ ಅವಶ್ಯಕತೆ ಬೀಳದಿರಲಿ ಎಂದೇ...?" ನನ್ನ ಈ ಸ್ವಗತ ಭಾವಕ್ಕೆ ಅವಳ ಕೋಪ ಇಳಿಯಿತು. ಕನ್ನಡಿಗ ಎನ್ನುವ ಸಂಬಂಧ ಮುಂದೆ ಮಾಡಿ ತನ್ನ ಅಭಿಮಾನ ಕಳಕಳಿ ವ್ಯಕ್ತಪಡಿಸಿದಳು. 'ಸ್ವಾಭಿಮಾನಿ' ಪತ್ರಿಕೆಯಲ್ಲಿ ಕವನದೊಂದಿಗೆ ಭಾವಚಿತ್ರ ಬಂದಿರುವುದಾಗಿ ಬರೆದಳು. ' ಪರಿಮಳ' ದಲ್ಲಿ ಕಥೆ ಬಂದಿದೆ ಓದಿ' ಎಂದಳು. ಮರು ಪತ್ರವೇ ಬರಲಾರದು ಎಂದುಕೊಂಡ ನನಗೆ ಅವಳ ಪತ್ರ ಮೈತ್ರಿ, ಶೈಲಿ, ಭಾವ ಸಂವೇದನೆಗಳು ಬೆರಗುಗೊಳಿಸಿದವು.

"ನೀವು ಪತ್ರ ಬರೆಯದಿದ್ದರೂ ನಾನು ಬಿಡಲ್ಲ. ನಿಮ್ಮಂಥ ಲೇಖಕರನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ನಾನು" ಎಂದು ಬರೆದು ಭಾವಚಿತ್ರವಿರಿಸಿದ್ದಳು. ಮೊದಲ ದೃಷ್ಟಿಗೆ ಮೆಚ್ಚಿಕೆ ಆಗುವಂತಿರಲಿಲ್ಲ. ನನ್ನ ಪರಿಚಯ ಕೋರಿ ಬರೆದಿದ್ದಳು. ನನ್ನ ಸ್ವಭಾವ ತಿಳಿದುಕೊಳ್ಳುವುದು ಅವಳಿಗೆ ಮುಖ್ಯವಾಗಿತ್ತು. ನನ್ನದು ಸಂಸ್ಕಾರವಿಲ್ಲದ ವಿಕೃತ ಸ್ವಭಾವ ಎಂದು ತಿಳಿಸಲೇ...? ಅವಳ ಇನ್ನೊಂದು ಪತ್ರ ಬಂತು. ಅವಳಾಗಿಯೇ ನನ್ನ ಇಡೀ ವ್ಯಕ್ತಿತ್ವವನ್ನು ಊಹಿಸಿ ಬರೆದಿದ್ದಳು. ವಿಸ್ಮಯವಾಯಿತು. ಪ್ರತಿಶತ: ನನ್ನನ್ನು ಅಳೆದಿದ್ದಳು. ಏನೋ ಅವಮಾನ ಅನ್ನಿಸಿದರೂ ನನ್ನನ್ನು ಅರಿತು ಕೊಂಡಳಲ್ಲಾ ಎಂದು ಖುಷಿಯಾಯಿತು. ನನಗೆ ಒಂದು ಹೆಣ್ಣು ಬೇಕಾಗಿತ್ತು. ನನ್ನ ವಿಕೃತ ಸ್ವಭಾವವನ್ನು ಪ್ರೀತಿಸುವವಳಾಗಿರಬೇಕು. ದ್ರೌಪದಿಯನ್ನೇ ಮಡದಿಯಾಗಿ ಸ್ವೀಕರಿಸಿದರೆ ಹೇಗೆ...? ಎಂಬ ಆಲೋಚನೆಗಳು ತೇಲಾಡಿದವು. ಸೂಕ್ಷ್ಮವಾಗಿ ಆ ಭಾವನೆಯನ್ನು ತೋರ್ಪಡಿಸಿದೆ. ಸ್ವಾಗತಿಸಿದಳು. ತುಂಬಾ ನಾಚಿದಂತೆ ಮಾಡಿ,

"ನನ್ನೊಡೆಯ ಇದೇನು ಮಾಡಿ ಬಿಟ್ರಿ.., ಏನು ಕರೆಯಲಿ ನಿಮಗೆ...? ಏನೂ ಕರೆಯಲು ನಾಚಿಕೆ...! ಭಾರಿ ಕಲ್ಪನೆಯಲ್ಲಿ ಬರೆಯುತ್ತಿದ್ದವಳಿಗೆ ಮೂರ್ತ ರೂಪ ಸಿಕ್ಕಿತೇ...!? ನನ್ನ ದೇವರು ನೀವೇ ಆಗಿ ಬಿಟ್ರಿ.. ಈ ವಿರಹ ವೇದನೆ ಹೇಗೆ ಸಹಿಸಿಕೊಳ್ಳಲಿ..." ಎಂದು ಸ್ವೇಚ್ಛೆಯಾಗಿ ಪ್ರೇಮ ಕಾರಂಜಿ ಉಕ್ಕಿಸಿದಳು. ಇದೆಲ್ಲಾ ಶಬ್ದಗಳ ಜೋಡಣೆಯೋ ಪ್ರದರ್ಶನವೋ ಅಥವಾ ನಿಜವಾದ ಪ್ರೀತಿಯೊ ಅರ್ಥವಾಗಲಿಲ್ಲ..

" ನಾಟಕದ ಹೆಂಗಸರಪ್ಪಾ. ನಂಬಿಸಿ ಬಿಡುತ್ತಾರೆ ." ಎಂದು ಆರತಿ ಬಗ್ಗೆ ಪುಟ್ಟಣ್ಣ ಕಣಗಾಲ ಒಂದೆಡೆ ಹೇಳಿದ್ದರಲ್ಲಾ...!? ಇವಳು ಹಾಗೆ ಮಾಡುತ್ತಿದ್ದಾಳೆಯೇ..? ಈಗಿನ ಕವಿಯಿತ್ರಿಯರು ಬರೆದಂತೆ ಎಲ್ಲಿರುತ್ತಾರೆ...? ಬರೀ ಹಿಪೋಕ್ರೆಟ್ ಗಳು...!' ಮುಂದುವರೆದವರು' ಎಂದು ಹೇಳಿಕೊಂಡು ಏನೆಲ್ಲ ಮಾಡಿ ನಂತರ ಪಶ್ಚಾತ್ತಾಪ ಪಟ್ಟುಕೊಳ್ಳುತ್ತಾರೆ. ದ್ರೌಪದಿ ತನ್ನ ಹೆಸರನ್ನು ಸಾರ್ಥಕ ಪಡಿಸಲು ಹೊರಟಿದ್ದಾಳೆಯೇ...? ಅನುಮಾನದೊಂದಿಗೆ ಎಲ್ಲಾ ವಿಷಯವೂ ಗೀಚಿದೆ.

" ಇಲ್ಲ ನನ್ನೊಡೆಯಾ...ನಮ್ಮದು ನಿಜವಾದ ಪ್ರೀತಿ, ನಂಬಿ ನನ್ನ...ಬೇಗ ಸಂಬಂಧ ಕುದುರಿಸಿ. ನಿಮ್ಮ ಪತ್ರ ಬರುವವರೆಗೂ ನಾನು ಸತ್ತಿರುತ್ತೇನೆ. ಬಂದು ಜೀವ ಕೊಡಿ .."

ರಾತ್ರಿ ಬಸ್ಸು ಹತ್ತಿದೆ. ದೂರದ ಪ್ರದೇಶದಲ್ಲಿ ನನಗಾಗಿ ಒಂದು ಜೀವ ಕಾದು ಕೊಂಡಿರುವುದು ನಿಜಕ್ಕೂ ಅಚ್ಚರಿಯಲ್ಲವೆ...? ಸಾವಿರಾರು ರೂಪಸಿಯರು ನಮ್ಮ ಸುತ್ತ ಮುತ್ತಲಿದ್ದರೂ ವ್ಯರ್ಥ ಅನ್ನಿಸಿ ಬಿಡುತ್ತಾರಲ್ಲಾ..! ಪ್ರೀತಿಯ ಟ್ರ್ಯಾಕಿಗೆ ಅಂಥ ಶಕ್ತಿ ತುಂಬಿದವರಾರೋ...!?

ಬೆಳಗ್ಗೆ ಊರು ಸೇರಿದೆ.ವಸತಿ ಗೃಹದಲ್ಲಿ ಕೋಣೆ ಹಿಡಿದು ತಿಂಡಿ ತಿಂದು ಅವಳ ಶಾಲೆಯೆಡೆಗೆ ಹೆಜ್ಜೆ ಹಾಕಿದೆ. ಮನದಲ್ಲಿ ಉಲ್ಲಾಸ... ಬಾಳ ಗೆಳತಿಯ ಕನಸು.. ಹೊಸ ಚೈತನ್ಯ ...ಪ್ರೀತಿಯ ಆವೇಶ... ಭಾವುಕತೆ...!

ಅರಳಿ ಗಿಡದ ಕೆಳಗಿನ ಹೂ ಅಂಗಡಿಯಲ್ಲಿ ಪೊಟ್ಟಣ ಕಟ್ಟಿಸಿಕೊಂಡೆ. ಹೂವಾಡಗಿತ್ತಿ ಅನುಮಾನದ ದೃಷ್ಟಿ ಬೀರಿ ಮುಗುಳ್ನಕ್ಕಳು. ಚಿಲ್ಲರೆ ಹಣವೂ ಪಡೆಯದೆ ಹೆಜ್ಜೆ ಹಾಕಿದೆ. ಶಾಲೆಯ ಬೋರ್ಡ್ ಕಾಣಿಸಿತು. ನೇರವಾಗಿ ಕಚೇರಿಯೊಳಗೆ ಹೋದೆ. ಮುಖ್ಯ ಅಧ್ಯಾಪಕಿ ಪುಸ್ತಕ ಓದುತ್ತಿದ್ದವಳು ಮುಖ ಮೇಲೆತ್ತಿದಳು.

" ಇಲ್ಲಿ ದ್ರೌಪದಿ ಇದ್ದಾರೆಯೇ...?" ಕೇಳಿದೆ.

" ಇದ್ದಾರೆ .., ಬರುತ್ತಾರೆ ಇರಿ." ಎಂದು ಹೇಳಿ ಎದ್ದು ಹೊರಗೆ ಹೋದಳು.ಅಲ್ಲಿ ಇದ್ದ ಇಂಗ್ಲಿಷ್ ಪತ್ರಿಕೆ ಕೈಗೆತ್ತಿಕೊಂಡೆ. ದ್ರೌಪದಿ ನನ್ನನ್ನು ಗುರ್ತಿಸಬಹುದೇ..? ಅವಳು ನನಗಿಂತ ಎತ್ತರವಾಗಿದ್ದರೆ...?

ಪತ್ರ ಮುಖಾಂತರವೇ ಸ್ವಭಾವಗಳ ಪರಿಚಯವಾಗಿತ್ತು. ತುಂಬಾ ಭಾವುಕಳಾಗಿ ಪತ್ರ ಬರೆಯುವ ಅವಳನ್ನು ಎದೆಗೆ ಆನಿಸಿಕೊಂಡು ಸಮಾಧಾನಪಡಿಸಬೇಕು ಎನ್ನುವಷ್ಟು ಸೂಕ್ಷ್ಮತೆ ನನ್ನಲ್ಲಿ ಮೂಡಿಸಿ ಬಿಟ್ಟಿದ್ದಳು. ' ಪೆದ್ದಪ್ಪ ' ಎಂದು ಕರೆದು ಬದುಕುವ ವಿಧಾನ ತಿಳಿಯ ಪಡಿಸಿದ್ದಳು.

" ಇಪ್ಪತ್ತೈದು ವರ್ಷವಾಗಿದ್ದರೂ ಮದುವೆ ಯಾಕಾಗಲಿಲ್ಲ...?" ಎಂದು ಬರೆದ ನನ್ನ ಪ್ರಶ್ನೆಗೆ,

" ಆಟ ಪಾಠಗಳಲ್ಲಿ ಮದುವೆ ವಿಚಾರವೇ ಬರಲಿಲ್ಲ. ನನ್ನ ಗೆಳತಿ ಕವಿಯತ್ರಿಯರಿಗೆ ೩೫ ವರ್ಷವಾಗಿದ್ದರೂ ಮದುವೆಯಾಗಿಲ್ಲ. ನಾನೇನು ಮಹಾ ದೊಡ್ಡವಳು. ಆದರೆ ಈಗ ಆ ಕಾಲ ಕೂಡಿ ಬಂತೇ..? ಏನು ಮಾಡುವುದು ಪ್ರೇಮ ಬೀಜ ಬಿತ್ತಿದ ಈ ಒಡೆಯನಿಗೆ ...?" ಎಂದು ಸಮರ್ಥಿಸಿಕೊಂಡಿದ್ದಳು.

ಯುವತಿಯೊಬ್ಬಳು ಒಳಗೆ ಬಂದಳು. ತೀರಾ ತೆಳ್ಳಗಿನ ಕಪ್ಪು ಮುಖದ ಹತಾಶೆಗೊಂಡ ದೃಷ್ಟಿ...! ಇವಳೆ ಇರಬಹುದೇ...? ನನ್ನೆಡೆಗೆ ಒಮ್ಮೆ ನೋಡಿ,

"ಪ್ರಶಾಂತ್ ಅಲ್ವಾ..?" ಎಂದಳು. ನಾನು ನಕ್ಕೆ. ಮುಗುಳ್ನಗುತ್ತಾ ಪಕ್ಕದ ಕುರ್ಚಿಯಲ್ಲಿ ಕುಳಿತು ಕೊಂಡಳು. ಕಪ್ಪು ಮುಖದಲ್ಲಿ ಹೊಳೆಯುವ ಬಿಳಿ ಹಲ್ಲುಗಳೇ ಅವಳನ್ನು ಬದುಕಿಸಲು ಹೋರಾಡುತ್ತಿದ್ದವು. ಟೀ ಬಂತು. ಅವಳು ದಿಢೀರ್ ನಾಚಿಕೆ ನಟಿಸಿ ಟೀ ಕುಡಿದಳು. ಕಣ್ಣಲ್ಲಿ ಮಿಂಚು ಹಾಯಿಸಿ ಹಲ್ಲು ಪ್ರದರ್ಶಿಸಿ, ರಜೆ ಬರೆದು ಮೇಲೆದ್ದಳು. ನಾನು ಹಿಂಬಾಲಿಸಿದೆ.

ರೈಲ್ವೆ ಹಳಿಯ ನಿರ್ಜನವಾದ ರಸ್ತೆಯಲ್ಲಿ ಇಬ್ಬರೇ ಜತೆಯಾಗಿ ಹೆಜ್ಜೆ ಹಾಕುತ್ತಿದ್ದಂತೆ ಹೂವಿನ ಪೊಟ್ಟಣ ಕೈಗಿಟ್ಟೆ. ಬಿಚ್ಚಿ ನಿರ್ಲಕ್ಷಿಸಿದಂತೆ ಮಾಡಿ ಮುಡಿಗೆ ಸೇರಿಸಿಕೊಂಡಳು. ಗರಿಗೆದರಿದ ನವಿಲಿನಂತೆ ನನ್ನೊಡನೆ ಹೆಜ್ಜೆ ಹಾಕಿದಳು. ನಾನು ತೀರಾ ತರುಣ ಮತ್ತು ಲಕ್ಷಣವಾಗಿರುವುದಕ್ಕೆ ಹೆಮ್ಮೆ ಪಟ್ಟಂತಿದ್ದಳು.

"ಬೇಗ ಬನ್ರಿ...ಅಕ್ಕಪಕ್ಕದವರು ನಮ್ಮನ್ನೇ ನೋಡುತ್ತಿದ್ದಾರೆ. ಅವರೆಲ್ಲ ನಮ್ಮ ನೆಂಟರು ಕಣ್ರೀ..." ಎಂದು ಸಂಭ್ರಮದಲ್ಲಿ ಭುಜಕ್ಕೆ ಭುಜ ತಾಗಿಸಿ ಅಡಗಿ ಕೊಳ್ಳುವಂತೆ ಹೆಜ್ಜೆ ಹಾಕಿದಳು.

ಹೋಟೆಲ್ಲೊಂದಕ್ಕೆ ಕರೆತಂದಳು. ಸ್ಪೆಷಲ್ ಕೋಣೆ ಹೊಕ್ಕೆವು. ಅಲ್ಲಿಯ ಸಪ್ಲಾಯರ್ ಜೊತೆ ಚೆಲ್ಲು ಚೆಲ್ಲಾಗಿ ಮಾತಾಡಿ ಸಿಹಿ ಹೇಳಿದಳು.

" ಸಿಟಿ ಹೇಗೆನ್ನಿಸುತ್ತದೆ...? ನಿಮ್ಮೂರಲ್ಲಿದ್ದಂತೆ ಇದ್ಯಾ...?"

ಕೇಳುವ ಧಾಟಿಯಲ್ಲಿ ಅಹಂ ಇತ್ತು., ತೀರಾ ಅಬ್ನಾರ್ಮಲ್ ತರಹ.

" ಇಡೀ ಕರ್ನಾಟಕವೇ ನನ್ನದು ಎನ್ನುವವರಿಗೆ ಎಲ್ಲಿದ್ದರೂ ಒಂದೇ.."

ಮುಖ ಕಪ್ಪಾಯಿತು.ಸಿಹಿ ಬಂತು.

" ಕರ್ನಾಟಕದ ಸುಮಾರು ಮುನ್ನೂರು ಜನ ಯುವಕ ಲೇಖಕರ ವಿಳಾಸಗಳು ನನ್ನಲ್ಲಿವೆ."

ಇದ್ದರೆ ನಾನೇನು ಮಾಡಬೇಕು ಎಂದೆನಿಸಿ ಉಸಿರು ಕಟ್ಟಿದಂತಾಯಿತು.ನನ್ನನ್ನು ಅವಮಾನ ಮಾಡಬೇಕೆಂದು ಪ್ರಶ್ನಿಸುತ್ತಿದ್ದಾಳೆಯೇ..? ಹಲವರ ವೈಯಕ್ತಿಕ ಬದುಕಿನ ಬಗ್ಗೆ ಮಾತಾಡಿದಳು. ಅಲ್ಲಿಯೇ ನಿಂತ ಸಪ್ಲಾಯರ್ ನೊಂದಿಗೆ ದಬಾಯಿಸಿ ಅವನ ಊರು ಇತಿಹಾಸ ಕೇಳತೊಡಗಿದಳು. ಪಾಪ, ಅವನು ಕೇಳುವ ಮೋಡಿಗೆ ಪಟ ಪಟನೆ ಬಾಯಿಬಿಟ್ಟ.' ಇದೆಂಥ ಬಜಾರಿ ಹೆಣ್ಣು 'ಎಂದು ಒಂದು ಕ್ಷಣ ಹೊಳೆದು ಮಾಯವಾಯಿತು. ಟೀ ಕುಡಿದು ಹೊರಬಂದೆವು.

ಯಾರೋ ಮುದ್ದು ದ್ರೌಪದಿ ಎಂದು ಪತ್ರ ಬರೆದಿರುವುದನ್ನು ಕೊಚ್ಚುತ್ತಾ ಜಿಲ್ಲಾ ಆಸ್ಪತ್ರೆಯ ಬಯಲಿಗೆ ಕರೆತಂದಳು.

" ಕವಿತಾ ಗೊತ್ತಾ ನಿಮಗೆ..? ಅವಳು ಅಂತರ್ಜಾತಿ ವಿವಾಹವಾಗಿದ್ದಾಳೆ." ಎಂದಳು.

" ಗೊತ್ತಿಲ್ಲ , ಆದರೆ ಅಂತರ್ಜಾತಿ ವಿವಾಹ ಸಫಲವಾಗುವುದಿಲ್ಲ. ಪ್ರಾರಂಭಕ್ಕೆ ಗೊತ್ತಾಗದಿದ್ದರೂ ಮಕ್ಕಳಾದ ಮೇಲೆ ಸಮಸ್ಯೆ ತಿಳಿಯುತ್ತದೆ."

" ಆದರೆ ನಮ್ಮದು ಸಫಲವಾಗುತ್ತಲ್ಲಾ..? ಅಪ್ಪನಿಗೆ ಬೇಗ ಪತ್ರ ಬರೆಯಿರಿ."

"ಏನೆಂದು..?"

" ಹೇಳುತ್ತೇನೆ, ಬರೆದುಕೊಳ್ಳಿ."

ಮತ್ತೆ ಅವಮಾನ ಮಾಡುವ ದಾಟಿ...! ಸ್ವಾಭಿಮಾನ ಅಡ್ಡ ಬಂತು. ಚಿಕ್ಕಮಕ್ಕಳಿಗೆ ಹೇಳುವಂತೆ ಮಾತಾಡುತ್ತಿದ್ದಾಳೆ ಈಡಿಯಟ್... ಎಂದುಕೊಂಡೆ.

" ಇರಲಿ, ನೀವೇ ಹೇಳಿ .ಬೇರೆ ಯಾರನ್ನು ಮದುವೆಯಾಗಲಾರೆ ಅಂತ."

" ನಮ್ಮ ಮದುವೆ ಕಾರ್ಡ್ ಹೊಸ ನಮೂನೆಯದಾಗಿರಬೇಕ್ರೀ... ನಾನೇ ಕವನ ಬರೆಯುತ್ತೇನೆ. ಇಲ್ಲಿಯ ಛತ್ರದಲ್ಲಿಯೇ ಮದುವೆ ಇಟ್ಟುಕೊಳ್ಳೋಣ.ಅಪ್ಪ ಊರಿಗೆ ಬಂದರೆ ಗಂಭೀರವಾಗಿ ಮಾತಾಡಿ, ಹುಡುಗ ಒಳ್ಳೆಯವನು ಅಂತ ಅನ್ನಿಸ್ಕೊ ಬೇಕು. ನೀವು ವರದಕ್ಷಿಣೆ ಕೊಡಿ ಅಂತ ಕೇಳಲು ಹೋಗಬೇಡಿ. ನಿಮ್ಮ ಕಡೆಯಿಂದ ಒಂದೈವತ್ತು ಜನರನ್ನು ಕರೆತನ್ನಿ ಸಾಕು.."

ಅವ್ಯಾಹತವಾಗಿ ಸಾಗಿತ್ತು ಅವಳ ಮಾತು...! ನನಗೆ ಬಾಯಿ ಕಟ್ಟಿದಂತಾಯಿತು. ಸ್ವಾಭಿಮಾನದ ಪರಮಾವಧಿಯನ್ನು ಕಂಡುಹಿಡಿಯಲು ಒಂದು ಸಣ್ಣ ಪ್ರಯೋಗ ಮಾಡಬೇಕೆನಿಸಿತು. ಹಾಳೆಯೊಂದು ತೆಗೆದು ಹುಲ್ಲಿನ ಮೇಲೆ ಇಟ್ಟೆ. ಅದು ಗಾಳಿಗೆ ಹಾರಿ ಸಮೀಪದಲ್ಲಿಯೇ ಬಿತ್ತು.

" ಕೊಡು ಅದು" ಎಂದೆ.

ಬದುಕಿನಲ್ಲಿ ಎದುರಾಗುವ ಕ್ಲೈಮ್ಯಾಕ್ಸ್ ಹೇಗೆ ಎದುರಿಸುತ್ತಾಳೋ ಎಂದು ಪರೀಕ್ಷಿಸುವುದು ನನಗೆ ಮುಖ್ಯವಾಗಿತ್ತು.

" ಎದ್ದು ಕೊಡು ಪ್ಲೀಜ್.." ಪುನಃ ಹೇಳಿದೆ. ಕೊಡಲಿಲ್ಲ ಅವಳು.

" ಆಮೇಲೆ ತೆಗೆದು ಕೊಂಡರಾಯಿತು" ಎಂದಳು. ಇನ್ನೂ ಜೋರಾಗಿ ಗಾಳಿ ಬೀಸಿದರೆ ಅದು ಹಾರಿ ಹೋಗುವುದಿತ್ತು. ಅವಳು ಮೇಲೇಳಲಿಲ್ಲ. ನಾನೇ ಎದ್ದು ತೆಗೆದುಕೊಂಡೆ.

" ನನಗೆ ಪ್ರತಿಯೊಂದು ಸಾಹಿತ್ಯ ಸಮ್ಮೇಳನದಲ್ಲಿ ಬಹುಮಾನ ಬಂದಿದೆ. ನಿಂತ ನಿಂತಲ್ಲಿಯೇ ನಾನು ಕವನಗಳನ್ನು ಹೇಳಬಲ್ಲೆ." ಎಂದಳು. ಮುಗುಳ್ನಕ್ಕೆ.

" ಪರ್ವಾ ಇಲ್ಲ. ಆದರೆ ನೆನಪಿಡಿ , ಭಾವನೆಗಳು ವಾಸ್ತವ ಲೋಕದಿಂದ ಭಿನ್ನವಾಗಿರುತ್ತವೆ. ಭಾವನಾ ಜೀವಿಯಾದವರೂ ಬದುಕನ್ನು ದೂರ ನಿಲ್ಲಿಸಿ ಬಂದಿರುತ್ತಾರೆ."

" ಇರಬಹುದು, ನೀವು ಮಾತನಾಡುವುದಕ್ಕಿಂತ ಪತ್ರ ಚೆನ್ನಾಗಿ ಬರೆಯುತ್ತೀರಾ. ನನಗೆ ಒಳ್ಳೆ ಶಿಕ್ಷಕಿ ಎಂದು ಪ್ರಶಸ್ತಿ ಕೊಟ್ಟದ್ದಾರೆ ..."

ಅವಳ ಮಾತಿಗೆ ವಿಷಾದವಾಯಿತು. ಮೊದಲು ಬದುಕು ಮುಖ್ಯ. ಬದುಕುವ ಕಲೆಯೇ ಗೊತ್ತಿಲ್ಲದಿದ್ದರೆ ಪ್ರಶಸ್ತಿ ಬಹುಮಾನ ಯಾಕೆ...? ಎಂದುಕೊಂಡೆ. ನೋಡಲು ಅವಳ ಮುಖ ಅಸಹ್ಯವಾಗಿತ್ತು. ಮುದ್ದಿಸಿದರೆ ಕಪ್ಪು ಪೇಂಟ್ ತುಟಿಗೆ ಅಂಟಿ ಕೊಳ್ಳುತ್ತೇನೋ ಎಂಬ ಭಾವನೆ ತರಿಸುವಂತಿತ್ತು. ಅಸ್ತಿಪಂಜರದ ವ್ಯಕ್ತಿತ್ವ ನನ್ನಲ್ಲಿಯ ಕಾಮವನ್ನು ಉದ್ರೇಕಿಸಲೇ ಇಲ್ಲ.ಪ್ರೀತಿಗೆ ಕಾಮವು ಗುಪ್ತ ಅಜೆಂಡಾ ಎನ್ನುವುದು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ.ಇದ್ದಕ್ಕಿದ್ದಂತೆ ,

" ನಿಮಗೆ ಕಚೇರಿಯಲ್ಲಿ ಪ್ರಿಸ್ಟೇಜ್ ಇದೆಯೇ...? " ಎಂದಳು. ಉತ್ತರಿಸಲು ತಡವರಿಸಿದೆ. ಏನೆಂದು ಹೇಳುವುದು...? ನನ್ನ ಪ್ರಿಸ್ಟೇಜ್ ಮಾತ್ರವೇ ಮುಖ್ಯವೇ...? ಅವಳ ಮುಂದಿನ ಮಾತುಗಳು ನನ್ನ ಕಿವಿ ಸೇರಲಿಲ್ಲ. ಅವಳ ಒಂದೇ ಪ್ರಶ್ನೆ ಇಡೀ ನನ್ನ ಸ್ವಾಭಿಮಾನದ ವ್ಯಕ್ತಿತ್ವವನ್ನು ಕಿತ್ತು ಅಲ್ಲಾಡಿಸಿತು. ಹರಾಜಿಗಿಟ್ಟಂತಾಯಿತು. . ಮರೆಯಲು ಯತ್ನಿಸಿದಷ್ಟು ಪ್ರಶ್ನೆ ಮನಸ್ಸನ್ನು ಆವರಿಸಿ ನಿರ್ವೀರ್ಯ ಗೊಳಿಸಿತು.ಕಚೇರಿಯ ಮುಖ್ಯ ಆಫೀಸರ್ ತಾನು ಎನ್ನುವುದು ಇವಳಿಗೆ ತಿಳಿದಿಲ್ಲ.ಆದರೆ ಇಂಥ ಪ್ರಶ್ನೆ....!??

" ಶಾಲೆ ಬಿಡುವ ಹೊತ್ತಾಯಿತು. ಈಗ ನಾನು ಮನೆಗೆ ಹೋಗಬೇಕು. ಅಪ್ಪನಿಗೆ ಕಳುಹಿಸುತ್ತೇನೆ. ದಿನಾಂಕ ನಿರ್ಧರಿಸುತ್ತಾರೆ.ಬೇಗ ಮದುವೆಯಾಗೋಣಪ್ಪ .." ಎಂದು ಮೇಲೆದ್ದಳು. ಲಾಡ್ಜ್ನ ಕಡೆ ಹೆಜ್ಜೆ ಹಾಕಿದಳು. ರೂಮಿನೊಳಗೆ ಕರೆದೊಯ್ಯುವಂತೆ ವರ್ತಿಸಿದಳು. ನನಗೆ ನೈತಿಕತೆ ಕಾಡಿತು. ಹಿಂಜರಿದೆ. ಅವಳು ನಿರಾಶಳಾಗಿ ಆಟೋ ಕರೆದು ಮೂಲೆ ಸೇರಿದಳು. ನಾನು ನಿರುತ್ಸಾಹನಾಗಿ ಹಿಂತಿರುಗಿದೆ.

ತಲೆ ತುಂಬಾ ವಿಚಿತ್ರ ಗೊಂದಲ...! ಅಸ್ಪಷ್ಟ ಭಾವ ಲಹರಿ...! ಬರೀ ಪ್ರಶ್ನಾರ್ಥಕ ಚಿಹ್ನೆಗಳು..??

" ನಿಮಗೆ ಪ್ರಿಸ್ಟೇಜ್ ಇದೆಯಾ...? ನಿಮಗೆ ಗಂಡಸುತನ ಇದೆಯಾ..? " ಎಂಬ ಮಾತುಗಳೇ ಕಾಡಿದವು. ಅವಮಾನಗೊಂಡ ಮಾನಸಿಕ ಹಿಂಸೆ...! ಆಕ್ರೋಶ ..! ವಿಕೃತ ಭಾವನೆಗಳ ತಳಮಳ...!? ಅವಳಿಗೆ ಕೇವಲ ಸಮಾಜದ ದೃಷ್ಟಿಯಲ್ಲಿ ಮಾತ್ರ ಮದುವೆ ಬೇಕಾಗಿದೆಯೇನೋ..!? ಮನಸ್ಸು ಸ್ಥಿರವಿಲ್ಲದೆ ಹೊಯ್ದಾಡಿತು. ನಿರ್ದಿಷ್ಟ ನಿರ್ಧಾರ ಹೊಳೆಯದೆ ಕಂಗಾಲಾದೆ. ಎಲ್ಲಿಯೋ ಕಣಿವೆಯಲ್ಲಿ ಜಾರಿ ಹೋಗುತ್ತಿರುವ ಅನುಭವ...! ಅವಳ ಎತ್ತರಕ್ಕೆ ಬೆಳೆಯಲಾಗದ ಕುಸಿತ...! ಜಿಗಿದು ಮಟ್ಟ ಕಾಯ್ದುಕೊಳ್ಳುವ ಹೋರಾಟ...! ಏನೋ ಪ್ರಯಾಸ..ವಿಚಿತ್ರ ಭಾವಾಂದೋಲನ...! ಇಂಥ ಬಂಧನ ಯಾಕೆ...? ಬಿಡುಗಡೆ ಹೇಗೆ...? ಇಡೀ ರಾತ್ರಿ ಚಿಂತಿಸಿದೆ. ಸ್ವಾಭಿಮಾನ ಪುಟಿದೇಳುತ್ತಿತ್ತು. ಮನಸ್ಸಿಗೆ ಬೇಡವಾದ ಒಡನಾಡಿಗಿಂತ ಒಂಟಿ ಬದುಕೇ ವಾಸಿ ಎನಿಸಿತು. ಲೇಖನಿ ಎತ್ತಿದೆ. ವಾಕ್ಯವೊಂದು ಬರೆದೆ.

ನಿಧಾನಕ್ಕೆ ಮನಸ್ಸು ತಿಳಿಯಾದಂತೆ ಶಾಂತ ಭಾವನೆ ರೂಪುಗೊಂಡಿತು. ಇದ್ದಕ್ಕಿದ್ದಂತೆ ಮಿದುಳಿಗೆ ಸ್ವಾತಂತ್ರ್ಯ ಸಿಕ್ಕ ಅನುಭವ...! ದೊಡ್ಡ ಪ್ರಪಾತದಿಂದ ಪಾರಾಗಿ ಜೀವ ಉಳಿಸಿಕೊಂಡಂಥ ಮಾನಸಿಕ ಸ್ಥಿತಿ..! ಭಯಂಕರ ಸಂಕೋಲೆಯಿಂದ ಬಿಡುಗಡೆಯಾದ ಭಾವ...! ನಿರ್ವಾಣ ಭಾವ..! ಒಂದು ವಾಕ್ಯದಲ್ಲಿ ಇಂಥ ಶಕ್ತಿ ಇದೆಯೇ...? ನನ್ನ ನಾನೇ ಗುರುತಿಸಿಕೊಂಡ ಅರಿವು...! ಆರೋಗ್ಯ ಪೂರ್ಣ ತಿಳಿವಳಿಕೆಯ ಭಾವ..! ಚೈತನ್ಯ ಮೈ ತುಂಬಿತು. ಹೆಣ್ಣಿಗೆ ಶೋಭಿಸದ ದುರಭಿಮಾನದ ಕೊಲೆಗೈದ ಸಂತೃಪ್ತಿ...! ಪತ್ರದಲ್ಲಿ ಮೂಡಿಸಿದ ಪ್ರಣಯ, ರಸಿಕ ಭಾವಕ್ಕೆ ಅವಳು ಈಡಾಗದೆ ಕೇವಲ ಶಬ್ದಗಳ ಚಮತ್ಕಾರ ತೋರಿಸಿದ್ದಳು. ಭಾವನೆಗಳ ಜೊತೆ ಚೆಲ್ಲಾಟವಾಡುವ , ಬರೀ ಸ್ವಾಭಿಮಾನದ ಮುದ್ದೆಯಾಗಿ ಹೆಣ್ತನದ ಧರ್ಮ ಅನುಸರಿಸದೆ ಚಾಣಾಕ್ಷೆ ಎಂಬ ಅಹಂನಲ್ಲಿ ಸ್ವೇಚ್ಛಾಚಾರಿಯಾಗಿ ವರ್ತಿಸುವ ಹುಡುಗಿ ಮುಂದೆ ನನಗೆ ಶನಿಯಾಗಿ ಕಾಡುವುದು ನಿರ್ವಿವಾದವೇ...ಅನುಮಾನವೇ ಇಲ್ಲ.ಇಲ್ಲಿ ಸ್ತ್ರೀ ಶೋಷಣೆ ಎನ್ನುವುದು ಅಪ್ರಸ್ತುತ...!  ನನ್ನ ಹುಡುಗಿ ಸೀತೆಯಾಗಿರಬೇಕೆಂಬ ನಿಲುವಿನಲ್ಲಿ ತಾನು ರಾಮನಂತಿರದಿದ್ದರೆ ಹುಚ್ಚಾಗುವ ಸಂಭವವಿತ್ತು. ನಾನು ಸತ್ಯದ ಅನ್ವೇಷಕನಾಗಿರುವುದರಿಂದ ಬದುಕಿಕೊಂಡೆ.

ಒಬ್ಬ ಗಿರಾಕಿ ಸಿಗದೆ ಹೋಗಿರುವುದಕ್ಕೆ ಅವಳಿಗೆ ಹೇಳಿಕೊಳ್ಳುವ ನಷ್ಟವೇನೂ ಆಗಿರಲಾರದು. ವ್ಯಾಪಾರಿಗಳಿಗೆ ಭಾವನೆಗಳು ಮುಖ್ಯವಾಗಲಾರವು. mercy one may not have merchant ಎಂಬ ಮಾತೇ ಇದೆಯಲ್ಲಾ...!? ನಿಮ್ಮ ದೃಷ್ಟಿಯಲ್ಲಿ ನಾನು ಮಾಡಿದ್ದು ಅಪರಾಧವೇ...? *#.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.