ಖಾರಾಬಾತು - 2 (ಕೃಷ್ಣಾ .... ಎನಬಾರದೇ?)

ಪರ ಸ್ತ್ರೀ ವ್ಯಾಮೋಹ ಏನು ಇಂದು, ನಿನ್ನೆಯದೇ? ತ್ರೇತಾಯುಗದ ಕಾಲಾದಿಂದಲೂ ಇದೆ. ನನ್ನನ್ನು ಹೆಚ್ಚಾಗಿ ಕಾಡುವ ಪಾತ್ರಗಳು ಕೃಷ್ಣ, ರಾಮ ಅಲ್ಲ! ಸೀತೆ, ದ್ರೌಪದಿ, ಗಾಂಧಾರಿ, ಮಂಡೋದರಿ. ಇವರೆಲ್ಲರ ಪಾತ್ರಕ್ಕೆ ಅತಿ ಹೆಚ್ಚಿನ ಒತ್ತು ಕೊಟ್ಟಿದ್ದರೂ ಹೆಚ್ಚಿನ ಜನಗಳಿಗೆ ಆ ಪಾತ್ರಗಳ ಮಹತ್ವ ತಿಳಿಯುವುದೇ ಇಲ್ಲ. ಅತಿ ಸೂಕ್ಷ್ಮವಾಗಿ ಗಮನಿಸಿದರೆ ಪುರುಷ ಪ್ರಧಾನ ಸಮಾಜದ ವಿರಾಟ್ ರೂಪ ನಮಗೆ ಅರ್ಥವಾಗುತ್ತದೆ.

ಸೀತಾ ಸ್ವಯಂವರದಲ್ಲಿ ರಾಮನ ಬದಲು ಯಾರಾದರು ಮುದುಕ ಶಿವ ಧನಸ್ಸನ್ನು ಎತ್ತಿದ್ದರೆ? ದ್ರೌಪದಿಯ ಸ್ವಯಂವರದಲ್ಲಿ ಯಾರಾದರೂ ದುಷ್ಟ, 'ಮತ್ಸ್ಯಯಂತ್ರ' ಭೇದಿಸಿದ್ದರೆ? ಎಷ್ಟಾದರೂ ಆತ ಅಪ್ರತಿಮ ವೀರ ತಾನೇ? ಅವನಿಗೆ ವಯಸ್ಸಿನ ಮಿತಿ ಇಲ್ಲ. ವಧುವಿಗೆ ಆಯ್ಕೆಯೇ ಇಲ್ಲದಿದ್ದರೆ ಅದು ಸ್ವಯಂವರ ಹೇಗಾದೀತು? ದ್ರೌಪದಿಯ ಇಷ್ಟ ಕಷ್ಟಗಳನ್ನು ಕೇಳಿದವರ್ಯಾರು? ದ್ರೌಪದಿಗೆ ಪಂಚ ಪಾಂಡವರ ಮೇಲೂ ಸಮನಾದ ಪ್ರೀತಿ ಇತ್ತು ಎಂದು ನಿಮಗೆ ಅನಿಸಿದರೆ, ನೀವು ಮಹಾಭಾರತವನ್ನು ಸರಿಯಾಗಿ ಓದಿಲ್ಲವೆಂದು ಅರ್ಥ. ದ್ರೌಪದಿಗೆ ಮಧ್ಯಮ ಪಾಂಡವ ಅರ್ಜುನನ ಮೇಲೆ ಹೆಚ್ಚು ಒಲವಿತ್ತು. ಗಾಂಧಾರಿಯ ಪಾಡೂ ಇದೇ. ಗಾಂಧಾರಿ ಈಗೀನ ಅಫ಼್ಗನ್ ಪ್ರದೇಶಕ್ಕೆ ಸೇರಿದವಳು. ಅವಳನ್ನು ಧೃತರಾಷ್ಟ್ರನಿಗೆ ಕೊಟ್ಟು ಮದುವೆ ಮಾಡುವಾಗ ಅವಳ ಅಭಿಪ್ರಾಯ ಕೇಳಿದ್ದರೆ? ಇಡೀ ಜೀವನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕತ್ತಲಲ್ಲೇ ಉಳಿದು ಬಿಟ್ಟಳು. ಕೆಟ್ಟ ಮಕ್ಕಳು, ಕುರುಡು ಗಂಡ, ಯುಧ್ದ. ಅವಳ ಮುಂದೆಯೇ ಕೌರವರನ್ನು ಸಾಯಿಸಿದರು. ಅದು ಹೇಗೆ ದುಃಖ ಸಹಿಸಿಕೊಂಡಳೋ? ಮಂಡೋದರಿಯಂತ ಹೆಂಡತಿಯನ್ನು ಇಟ್ಟುಕೊಂಡು ಸಹ ರಾವಣ ಸೀತೆಯನ್ನು ಮೋಹಿಸಿದ. ಮಂಡೋದರಿ ಪ್ರತಿಭಟಿಸಬಹುದಿತ್ತು, ಯಾವ ಹೆಂಡತಿ ತಾನೇ ಒಪ್ಪಿಯಾಳು? ಇಲ್ಲ ಆಕೆಗೆ ಆ ಹಕ್ಕಿಲ್ಲ, ಅವಳು ಹೆಣ್ಣು. ರಾಮ ಮಾಡಿದ್ದೇನು ಸಣ್ಣ ತಪ್ಪೇ? ಸೀತೆಯ ಪಾವಿತ್ರ್ಯತೆಯನ್ನು ಪರೀಕ್ಷಿಸುವ ಕೆಟ್ಟ ಚಾಳಿ ಅವನಿಗೆ ಯಾಕೆ ಬಂತೋ? ಸೀತೆ ತಿರುಗಿ ರಾಮನ ಪಾವಿತ್ರ್ಯತೆಯನ್ನೇ ಪ್ರಶ್ನಿಸಬಹುದಿತ್ತು, ಆತನೂ ಒಂಟಿಯಾಗೇ ಇದ್ದನಲ್ಲವೇ? ಹುಡುಕುತ್ತಾ ಹೋದರೆ ಇಂತಹ ಸಾವಿರ ಉದಾಹರಣೆಗಳನ್ನು ಕೊಡಬಹುದು. ಪಗಡೆಯಾಟದಲ್ಲಿ ಹೆಂಡತಿಯನ್ನೇ ಅಡವಿಡುವುದು ಕ್ರೌರ್ಯವಲ್ಲವೆ? ದ್ರೌಪದಿಯನ್ನು ನೋಡಿದರೆ ದುರ್ಯೋಧನನಿಗೆ ತೊಡೆ ಕುಣಿಸಬೇಕೆನಿಸುತ್ತದೆ, ಕೀಚಕನಿಗೆ ಕಣ್ಣು ಹೊಡೆಯಬೇಕೆನಿಸುತ್ತದೆ, ದುಶ್ಯಾಸನನಿಗೆ................ ಛೀ!!!!!!!!ನನಗಿರುವ ಜಿಜ್ಞಾಸೆ ಅದಲ್ಲ, ವಸ್ತ್ರಾಪಹರಣ ಪ್ರಕರಣದಲ್ಲಿ ನಿಜವಾಗಿಯೂ ಕೃಷ್ಣ ಅಕ್ಷಯ ವಸ್ತ್ರದ ವರ ನೀಡಿದನೇ? ಮಹಾಭಾರತವನ್ನು ಸರಿಯಾಗಿ ಓದಿದರೆ ನಿಮಗೂ ಈ ಅನುಮಾನ ಬರಬಹುದು. ಓದಿದ್ದರೆ ಸನ್ನಿವೇಶವನ್ನು ನೆನಪಿಸಿಕೊಳ್ಳಿ. ದುರ್ಯೋಧನ ವಸ್ತ್ರಾಪಹರಣದ ಆದೇಶ ನೀಡುತ್ತಾನೆ, ಆಗ ದುಶ್ಯಾಸನ ದ್ರೌಪದಿಯನ್ನು ಕೂದಲು ಹಿಡಿದು ಎಳೆದುಕೊಂಡು ಬರುತ್ತಾನೆ. ಆಗ ಆಕೆ ರಜಸ್ವಲೆಯಾಗಿರುತ್ತಾಳೆ. ವ್ಯಾಸರು ಸ್ಪಷ್ಟವಾಗಿ ಬರೆದಿದ್ದಾರೆ. ದ್ರೌಪದಿ ರಕ್ತದ ಕಲೆಯ ಒಂಟಿ ವಸ್ತ್ರವನ್ನು ಧರಿಸಿದ್ದಳು. ಕೃಷ್ಣ ಅಕ್ಷಯ ವಸ್ತ್ರ ಕೊಟ್ಟನೆಂದೇ ಭಾವಿಸಿ, ಆದರೆ ವಸ್ತ್ರಾಪಹರಣದ ನಂತರವೂ ದ್ರೌಪದಿ ಅದೇ ವಸ್ತ್ರದಲ್ಲಿ ಇರುವ ಉಲ್ಲೇಖವಿದೆ. ನಿಜವಾಗಿಯೂ ಅಕ್ಷಯ ವಸ್ತ್ರ ನೀಡಿದ್ದರೆ ಅದು ಹೇಗೆ ಸಾಧ್ಯ?

ಕೃಷ್ಣನ ಪ್ರವೇಶವಾಗುವುದು ಸಭಾಪರ್ವದಲ್ಲಿ, ನಂತರ ಆತ ಮಹಾಭಾರತದ ಅನಭಿಷಿಕ್ತ ದೊರೆಯಾಗಿ ಮೆರೆಯುವುದು ನಿಸ್ಸಂದೇಹ. ಆದರೆ ವಸ್ತ್ರಾಪಹರಣದ ಸಮಯದಲ್ಲಿ ಕೃಷ್ಣನಿಗೂ, ಪಾಂಡವರಿಗೂ ಅಷ್ಟೇನೂ ಪರಿಚಯವಿರುವುದಿಲ್ಲ. ಒಂದು ಸಂಧರ್ಭದಲ್ಲಿ ಬಲರಾಮನೆ ಕೃಷ್ಣನನ್ನು ಪಾಂಡವರಿಗೆ ಪರಿಚಯಿಸುವ ಸನ್ನಿವೇಶ ವಸ್ತ್ರಾಪಹರಣದ ನಂತರ ಬರುತ್ತದೆ. ನಂತರವೂ ಸಹ ದ್ರೌಪದಿ ಎಲ್ಲಿಯೂ ಕೃಷ್ಣನನ್ನು ಅಣ್ಣ ಎಂದು ಸ್ವೀಕರಿಸಿಲ್ಲ. ಹಾಗೆ ನೋಡಿದರೆ ದ್ರೌಪದಿಗೂ, ಕೃಷ್ಣನಿಗೂ ಅಷ್ಟಕಷ್ಟೇ. ಕಾರಣ, ಮೊದಲೇ ಹೇಳಿದಂತೆ ದ್ರೌಪದಿಗೆ ಹೆಚ್ಚಿನ ಒಲವಿದ್ದದ್ದು ಅರ್ಜುನನ ಮೇಲೆ. ಆದರೆ ಕೃಷ್ಣ ಅರ್ಜುನನ ತಲೆ ಕೆಡಿಸಿದ್ದು ನಿಜ, ಅಷ್ಟಲ್ಲದೇ ತನ್ನ ತಂಗಿ ಸುಭದ್ರೆಯನ್ನೇ ಕೊಟ್ಟು ಮದುವೆ ಮಾಡಿದ. 'ಕೀಚಕ ವಧೆ' ಸನ್ನಿವೇಶದಲ್ಲೂ ದ್ರೌಪದಿ ಕೃಷ್ಣನನ್ನು ಸಹಾಯ ಬೇಡುವುದಿಲ್ಲ. ವಸ್ತ್ರಾಪಹರಣ ಸಂಧರ್ಭದಲ್ಲಿ ಮಾತ್ರ 'ಅಣ್ಣಾ' ಎಂದು ಬೇಡುತ್ತಾಳೆ. ಇದು ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ.

ವಸ್ತ್ರಾಪಹರಣ ಪ್ರಕರಣವು ಸುಮಾರು ಇಪ್ಪತ್ತೆರಡು ಪುಟಗಳಷ್ಟು ದೊಡ್ಡದಿದೆ, ಆದರೆ ಅಕ್ಷಯವಸ್ತ್ರ ನೀಡುವ ಸನ್ನಿವೇಶ ಕೇವಲ ಒಂದೇ ಪುಟದಲ್ಲಿ ಮುಗಿದು ಹೋಗುತ್ತದೆ. ಕಥೆಯ ಒಂದು ಮುಖ್ಯ ಘಟ್ಟವನ್ನು ವ್ಯಾಸರು ಇಷ್ಟು ಬೇಗ ಮುಗಿಸುವುದು ಸಾಧ್ಯವೇ ಇಲ್ಲ. ಹಾಗಾದರೆ ನಂತರದ ದಿನಗಳಲ್ಲಿ ಕೃಷ್ಣನ ಭಕ್ತರು ಇದನ್ನು ಕಲ್ಪಿಸಿಕೊಂಡು ಮಹಾಭಾರತಕ್ಕೆ ಸೇರಿಸಿದರೆ? ಉತ್ತರ ಸ್ಪಷ್ಟವಾಗಿ ಸಿಗುವುದು ಕಷ್ಟ.

ಅಕ್ಷಯವಸ್ತ್ರ ನೀಡಿಲ್ಲವೆಂದಾದರೆ, ದ್ರೌಪದಿ ಪಾರಾದದ್ದು ಹೇಗೆ? ಕೆಲವು ಸಂಶೋಧನೆಗಳ ಪ್ರಕಾರ ದ್ರೌಪದಿಯೇ ಕೌರವರನ್ನು ಹೆದರಿಸಿದಳು. ಅಂದು ನಿಜವಾಗಿಯೂ ವಸ್ತ್ರಾಪಹರಣ ನಡೆದು ಹೋಗಿದ್ದರೆ, ಬೆತ್ತಲಾಗುತ್ತಿದದು ದ್ರೌಪದಿಯಲ್ಲ. ಹೆಂಡತಿಯನ್ನು ಅಡವಿಟ್ಟ ಜಗತ್ತಿನ ಅಪ್ರತಿಮ ವೀರರ ಪುರುಷತ್ವ ಬೆತ್ತಲಾಗುತಿತ್ತು, ಅತ್ತಿಗೆಯನ್ನು ಕೆಟ್ಟ ದೃಷಿಯಲ್ಲಿ ನೋಡಿದ ಕೌರವರ ದುಷ್ಟ ಗುಣ ಬೆತ್ತಲಾಗುತಿತ್ತು, ಇಡೀ ಸಮಾಜವೇ ಬೆತ್ತಲಾಗುತಿತ್ತು. ಅಕ್ಷಯವಸ್ತ್ರ ಹೇಗೆ ಗೊಂದಲಮಯವೋ ಅಷ್ಟೇ ಇದೂ ಗೊಂದಲಮಯ.

(ಭೈರಪ್ಪನವರೂ ಸಹ ಈ ವಿಷಯದ ಮೇಲೆ ಬರೆದಿದ್ದಾರೆ. ಅದನ್ನು ಓದಿ ಕುತೂಹಲಗೊಂಡು ನಾನೂ ಸಹ ಇನ್ನಷ್ಟು ಮಾಹಿತಿ ಓದತೊಡಗಿದೆ. ವಸುಧೇಂದ್ರ ಅವರೂ ಕೂಡ ಈ ವಿಷಯದ ಮೇಲೆ ಒಂದು ಲೇಖನ ಬರೆದಿದ್ದಾರೆ. 'ವ್ಯಾಸಭಾರತ'ದಲ್ಲಿ ಇನ್ನೂ ಹೆಚ್ಚಿನ ವಿವರಗಳು ನನಗೆ ದೊರೆತವು. ದ್ರೌಪದಿ ಕುಪ್ಪಸ ಹಾಕಿರಲಿಲ್ಲ ಎಂದು ವ್ಯಾಸರು ಬರೆದಿದ್ದಾರೆ, ಇಲ್ಲಿ ಅದು ಅನಗತ್ಯವಾದ್ದರಿಂದ ಉಲ್ಲೇಖಿಸಿಲ್ಲ, ಮೈಸೂರಿನ ಜಗನ್ಮೋಹನ ಆರ್ಟ್ ಗ್ಯಾಲರಿಯಲ್ಲಿ ನೀವು ವಸ್ತ್ರಾಪಹರಣದ ವರ್ಣ ಚಿತ್ರ ನೋಡಬಹುದು. ಪುರಾಣಗಳ ಮೇಲೆ ನನಗೆ ಯಾವ ದ್ವೇಷವೂ ಇಲ್ಲ, 'ಕೃಷ್ಣಂ ವಂದೇ ಜಗದ್ಗುರುಂ' ಎಂದು ಭಾವಿಸಿದ್ದೇನೆ. ಈ ಲೇಖನವನ್ನು ಕೇವಲ ಸಂಶೋಧನೆಯ ದೃಷ್ಟಿಯಿಂದ ಓದಿಕೊಂಡರೆ ಒಳ್ಳೆಯದು. ಇದನ್ನು ಓದಿ ನಿಮಗೂ ನಮ್ಮ ಪುರಾಣಗಳನ್ನು ಓದುವ ಹಂಬಲ ಬಂದರೆ ನನ್ನ ಬರಹಕ್ಕೊಂದು ಸಾರ್ಥಕತೆ. ಮರೆತು ಹೋಗಿದ್ದ ಈ ವಿಷಯ ನನಗೆ ಮತ್ತೆ ನೆನಪಾಗಿದ್ದು 'ಛದ್ಮವೇಷ' ಎಂಬ ಕಿರುಚಿತ್ರವನ್ನು ನೋಡಿ, ಕಿರುಚಿತ್ರ ನೋಡಲು ಕೆಳಗಿನ ಕೊಂಡಿ ಬಳಸಿ.

https://www.youtube.com/watch?v=cmopC1L76Qw )


kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.