ಕಾಡಿನ ದಾರಿ ಕಗ್ಗತ್ತಲ ರಾತ್ರಿ

‘ಮಾದಪ್ಪ ಪ್ಯಾಟೀಗ್ ಹೋಗಿದ್ಯ.. ಯಾಕಪ್ಪ ಲೇಟು...? ದಟ್ಟ ಕತ್ತಲ ಕಾಡಿನ ದಾರಿಯಲ್ಲಿ ಧ್ವನಿಯೊಂದು ಕೇಳಿತ್ತು. ‘ಯಾಕ್ ಯೋಚ್ನೆ ಮಾಡ್ತಿದ್ಯ... ನಾನ್ ಕಣಪ್ಪ ಭಾಗಕ್ಕ... ಗೊತ್ತಾಗ್ಲಿಲ್ವ...? ಪ್ರಶ್ನೆ ಮುಂದುವರಿದಿತ್ತು. ಮಾದಪ್ಪ ಅಗಸನಹಳ್ಳಿಯ ಬಡಮಾಂತ್ರಿಕ. ಜೀವನೋಪಾಯಕ್ಕಾಗಿ ಭೂತ,ದೆವ್ವ ಬಿಡಿಸುವ ಕಾಯಕದಲ್ಲಿ ತೊಡಗಿದ್ದವನಾತ. ಅಂದು ರಾತ್ರಿ ಎಂದಿನಂತಿರಲಿಲ್ಲ. ಅಮಾವಾಸ್ಯೆಯ ರಾತ್ರಿ ಬೇರೆ... ಬಿಟ್ಟು ಬಿಡದೇ ಹೊಯ್ಯುತ್ತಿರುವ ಮಳೆ... ಕೈಯಲ್ಲಿದ್ದ ಕೊಡೆಯನ್ನೂ ಕೈ ತಪ್ಪಿಸುವಷ್ಟು ಗಾಳಿ... ಘೋರ ಕತ್ತಲ ಕಾಡಿನ ದಾರಿಯ ನಡುವೆ ನಡೆದೇ ಹೋಗಬೇಕಾದ ಅನಿವಾರ್ಯತೆ ಮಾದಪ್ಪನಿಗಿತ್ತು. ಆ ಮಾರ್ಗದ ಕೊನೆಯ ಬಸ್ ಮಾದೇಪುರದವರೆಗೆ ಮಾತ್ರವಿತ್ತು. ಅಲ್ಲಿಂದ ಅಗಸನಹಳ್ಳಿಗೆ ಮೂರು ಕಿ.ಮಿ. ರಾತ್ರಿ ಒಂಭತ್ತು ಘಂಟೆ... ಸುಮಾರು ಒಂದು ಕಿ.ಮಿ ಕ್ರಮಿಸಿದ ಮಾದಪ್ಪನಿಗೆ ಕಂಡ ಈ ಅಸ್ಪಷ್ಟ ಆಕೃತಿ ಹೆಣ್ಣು ಎಂಬುದಂತೂ ಸ್ಪಷ್ಟವಾಗಿತ್ತು. ಕತ್ತಲ ನಡುವೆ ಬಿಳಿಯ ಸೀರೆ ಉಟ್ಟಿದ್ದ... ಆ ಹೆಣ್ಣು ಭಾಗಕ್ಕ ತಾನು ಎಂದರೂ ಯೋಚನೆಗೆ ಬಿದ್ದಿದ್ದ ಮಾದಪ್ಪ... ಯಾರೀ ಭಾಗಕ್ಕ ?... ಟ್ಯೂಬ್ ಲೈಟನಂತೆ ತಟ್ಟನೆ ಫ್ಲಾಶ್ ಆಗಿತ್ತು... ‘ಓ ನಮ್ಮ ಶಾಲೆ ಭಾಗೀರಥಿ ಅಕ್ಕೋರು ಅಲ್ವಾ... ಮರೆತೇ ಬಿಟಿದ್ದೆ ಕ್ಷಮಿಸಿ... ‘ಮಾದಪ್ಪ ... ನಿನ್ನ ಮಗನಿಗೆ ಮದ್ವೆ ಮಾಡಿದ್ಯ... ? ತುಂಬ ಒಳ್ಳೆ ಹುಡುಗ... ಹೆಣ್ಣಿನಿಂದ ಬಂದಿತ್ತು ಪ್ರಶ್ನೆ ಮಾದಪ್ಪನಿಗೋ ಪ್ರಶ್ನೆ ಕೇಳಲು ಅವಕಾಶವೇ ಇರಲಿಲ್ಲ. ಪ್ರಶ್ನೆಗೆ ಉತ್ತರಿಸುವುದಷ್ಟೇ ಕೆಲಸವಾಗಿತ್ತು. ‘ಇಲ್ಲ ಭಾಗಕ್ಕ... ಕನ್ಯೆ ಎಲ್ಲಿ ಸಿಗ್ತದೆ... ಮೊದಲು ಓಕೆ ಎಂದಿದ್ದ ಹುಡುಗಿಯರು ಇಲ್ಲ ಅಂದಿದ್ದು ಯಾಕೆ ?... ಗೊತ್ತಾಗೊದೇ ಇಲ್ಲ... ‘ಯಾವ ಹುಡುಗಿ ಅವನ ಹಣೇಲಿ ಬರೆದಿದೆಯೋ ಯಾರಿಗ್ಗೊತ್ತು... ಅವರವರ ಹಣೇಲಿ ಹೆಂಗ್ ಬರೆದಿದೆಯೋ ಹಂಗೇ ಆಗ್ತದೆ...ಮಾದಪ್ಪ ಅಲವತ್ತುಕೊಂಡಿದ್ದ. ‘ಯಾಕೆ ನಾನಿಲ್ವ...? ಅರೆಕ್ಷಣಕ್ಕೆ ಬಂದ ಪ್ರಶ್ನೆಗೆ ಮಾದಪ್ಪ ದಂಗಾಗಿದ್ದ. ಮಾದಪ್ಪನ ಮಗನಿಗೆ ಇಪ್ಪತ್ತೊಂಭತ್ತು ಪಾಸು... ಭಾಗಕ್ಕಳಿಗೋ ನಲವತ್ತರ ಆಸುಪಾಸು... ಹೇಗೆ ಸಾಧ್ಯ...? ‘ಅದು ಹೇಗೆ ಸಾಧ್ಯ ಭಾಗಕ್ಕ...? ನಿನ್ನ ವಯಸ್ಸೇನು... ಅವನ ವಯಸ್ಸೇನು... ಪ್ರಶ್ನಿಸಿದ್ದ ಮಾದಪ್ಪ. ‘ಏನ್ ಮಾತಾಡ್ತಿದ್ದೀಯ... ನಾನ್ ಯಾರ್ ಗೊತ್ತಾ...? ನಿನ್ನ ಮಗನ್ನ ನನಗೇ ಕೊಡು ಇಲ್ಲಾ ಅಂದ್ರೆ... ಇವತ್ತೇ ನಿನ್ನ ಮುಗಿಸ್ಬಿಡ್ತೀನಿ... ಅಲ್ಲಿಯವರೆಗೆ ಸರಿಯಾಗಿಯೇ ಮಾತನಾಡುತ್ತಿದ್ದ ಭಾಗಕ್ಕಳ ಧ್ವನಿ ಕರ್ಕಶವಾಗಿ ಭೀಕರವಾಗತೊಡಗಿತ್ತು... ಒಂದೇ ಸಮನೆ ಹೊಯ್ಯುತ್ತಿರುವ ಮಳೆಯ ನಡುವೆ ಆಗಾಗ ಮಿಂಚುತ್ತಿತ್ತು. ಮಿಂಚಿನ ನಡುವೆ ಕಂಡಿತ್ತು ಭಾಗಕ್ಕಳ ಆಕೃತಿ... ಶುಭ್ರ ಬಿಳಿಯದಾದ ಸೀರೆ... ನೀಳವಾಗಿ ಬಿಟ್ಟ ಅಲ್ಲಲ್ಲಿ ಕೆದರಿದ ಕೂದಲು...ಹ..ಹ್ಹ„„ಹ್ಹಾ„„ ಎನ್ನುವ ಭೀಕರ ನಗು... ಕೈಯಲ್ಲೊಂದು ಕತ್ತಿ... ಮಾದಪ್ಪ ಬೆವರತೊಡಗಿದ್ದ. ‘ರ್ರೀ.. ರಾತ್ರಿ ಒಂಭತ್ತರ ನಂತರ ಆ ದಾರಿ ಸರಿಯಿಲ್ಲ ಸ್ವಲ್ಪ ಬೇಗ ಬಂದ್ಬಿಡ್ರಿ..’ ಪತ್ನಿ ಸುಶೀಲಮ್ಮಳ ಮಾತು ಮಾದಪ್ಪನಿಗೆ ಹೌದೆನಿಸತೊಡಗಿತ್ತು. ಬರೀ ದೆವ್ವಗಳೇ ತುಂಬಿಕೊಂಡಿರುವ ಅಗಸನಹಳ್ಳಿಯ ಆ ರಸ್ತೆಯಲ್ಲಿ ಸಿಕ್ಕಿದ್ದು... ದೆವ್ವವೆಂಬುದು ಸ್ಪಷ್ಟವಾಗಿತ್ತು... ದೆವ್ವಗಳಿಗೆ ಕಾಲು ತಿರುವು ಮುರುವಾಗಿರುತ್ತದೆಯಲ್ಲವೇ ಅಂದುಕೊಂಡ ಮಾದಪ್ಪ ಭಯದಿಂದ ನಡುಗುತ್ತಿದ್ದರೂ... ಕಾಲಿನಿಂದ ಮೇಲಿನವರೆಗೂ...ನೋಡುವ ಧೈರ್ಯ ಮಾಡಿದ್ದ. ನೋಡ ನೋಡುತ್ತಿದ್ದಂತೆ... ಆ ಆಕೃತಿ ಸುಯ್ಯ„„„„ ಎಂದು ಮಾಯವಾಗಿತ್ತು. ತಕ್ಷಣವೇ ನೆನಪಾಗಿತ್ತು ಭಾಗಕ್ಕ ಸತ್ತು ಒಂದು ವರ್ಷವಾಗಿದ್ದು... ಊರವರೆಲ್ಲ ಸೇರಿ ಹೆಣವನ್ನು ಸುಟ್ಟಿದ್ದು... ಹೆದರಿ ಕಂಗಾಲಾದ ಮಾದಪ್ಪ ಮನೆ ಸೇರಿದ್ದ... ಭಯ ಮಿಶ್ರಿತ ನಡುಗುವ ಧ್ವನಿಯಲ್ಲಿ ಪತ್ನಿಗೆ ಘಟನೆಯನ್ನು ವಿವರಿಸಿದ್ದ. ‘ರ್ರೀ ಹೆದರ್ಕೊಬೇಡ್ರಿ ಏನೂ ಆಗಲ್ಲ...’ ಪತ್ನಿಯ ಸಾಂತ್ವನದ ನಡುವೆಯೂ ಮೈಯೆಲ್ಲಾ ಬಿಸಿಯಾಗಿತ್ತು ಜ್ವರ ಏರತೊಡಗಿತ್ತು... ಮರುದಿನ ಊರಲ್ಲೆಲ್ಲ ಸುದ್ದಿಯೋ... ಸುದ್ದಿ ಮಾದಪ್ಪನಿಗೇ ದೆವ್ವ ಬಡಿದಿದೆಯಂತೆ ಕಣ್ರೋ... ಸುದ್ದಿಗೆ ಕಾಲು, ಬಾಲ ಸೇರಿಕೊಂಡಿತ್ತು. ಅದಾದ ಒಂದೆರಡು ದಿನ ಕಳೆದಿತ್ತು. ಮಾದಪ್ಪ ಚೇತರಿಸಿಕೊಳ್ಳತೊಡಗಿದ್ದ. ಮಾದೇಪುರದ ರಾಚಪ್ಪ ತನ್ನ ಮಗಳು ದ್ಯಾಮವ್ವಳ ಜೊತೆ ಮಾದಪ್ಪನ ಮನೆಗೆ ಬಂದ. ‘ಮಾದಪ್ಪನೋರೆ... ನಮ್ಮ ಮಗಳೀಗ ದೆವ್ವ ಬಡಿದೈತ್ರಿ... ಈಕಿಗಿನ್ನೂ ಮದವಿ ಆಗಿಲ್ಲ್ರಿ ಬಂದ ಬಂದ ವರಗಳೆಲ್ಲ.. ನೋಡಿ ನೋಡಿ ಬಿಟ್ಟು ಹೋಗಾಕ್ ಹತ್ಯರ್ರೀ ... ಈಕಿ ಅಗಸನಹಳ್ಳಿ ರೋಡ್ನಾಗ್ ರಾತ್ರಿಹೊತ್ತು ಕೂತು ಬಂದ ಬಂದೋರ್ನೆಲ್ಲ ಕಾಡಾಕ್ ಹತ್ಯಾಳ್ರಿ... ನೀವೇ ನಮ್ಮ ಮಗೀನ ಕಪಾಡಬೇಕ್ರಿ... ರಾಚಪ್ಪನ ಮಾತು ಕೇಳಿ ಆಲೋಚನೆಗೆ ಬಿದ್ದಿದ್ದ ಮಾದಪ್ಪ... ಹಾಗಾದ್ರೆ ಕಾಡಿನ ದಾರಿಯ ಕಗ್ಗತ್ತಲ ರಾತ್ರಿ ತನ್ನನ್ನು ಕಾಡಿದ್ದು...? ಬಾಗಿಲ ಸಂದಿಯಲ್ಲಿ ನಿಂತ ಪತ್ನಿ ಸುಶೀಲಮ್ಮ ಮುಸಿ ಮುಸಿ ನಗುತ್ತಿದ್ದಳು..

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.