ವರ್ತುಲಅರೇ, ಹೌದಲ್ವಾ!..ಜೀವನದ ಘಟ್ಟಗಳು ಒಂದೊಮ್ಮೆ ಅದಲು ಬದಲಾಗಿದ್ದಿದ್ದರೆ!.. ಹರಿವು ಒಂದೊಮ್ಮೆ ಹಿಮ್ಮುಖವಾಗಿದ್ದಿದ್ದರೆ!.. ಒಂದೇ ಸಾಲಿನಲ್ಲಿರುವ ಬಾಲ್ಯ ಯೌವನ ಮುಪ್ಪುಗಳು ೧೮೦ ಡಿಗ್ರೀ ತಿರುಗಿ ನಿಂತಿದ್ದರೆ!.. ಮುಪ್ಪು ಮೊದಲು ಬಂದು ಆಮೇಲೆ ಅಮ್ಮ ಬರುವ ದಾರಿ ಕಾಯುತ್ತ, ಅವಳಿಡುವ ಕೈತುತ್ತ ರುಚಿಯ ಒಂದೇ ಸೂರಿನಡಿ ನೆನೆಯುತ್ತ ಕಿಟಕಿಗಳಿಗೆ ಜೋತು ಬೀಳುತ್ತ, ಪಿಳಿಪಿಳಿ ಕಣ್ಣು ಬಿಡುವಂತಿದ್ದರೆ.. ಮತ್ತೆ ಕೊನೆಯ ಹಂತದಲ್ಲಿ, ಗರ್ಭದಲ್ಲಿ ಸುಖವಾಗಿ ಕಣ್ಣು ಮುಚ್ಚಬಹುದಿತ್ತು. ಜಗತ್ತು ಕಾಣುವ ಮೊದಲೇ ಭ್ರೂಣವೊಂದು ಬಲವಂತಕ್ಕೆ ತನ್ನುಸಿರ ಮಡಚಿಡುವ ಪ್ರಮೇಯವೇ ಇರುತ್ತಿರಲಿಲ್ಲವೇನೋ!.. ಆದರೆ ಸೃಷ್ಟಿಯ ಗಣಿತದ ಚಿಹ್ನೆಗಳೇ ಬೇರೆ ತರಹ. ಇಲ್ಲಿನ ಜೀವನ ಚಕ್ರದ ಗತಿಗೆ ಒಂದೇ ದಿಕ್ಕು...


ಯೋನಿಯಲ್ಲಿ ಕಂದೀಲು ಹಿಡಿದು ಹೊರಡುವ ವೀರ್ಯ ಒಂಭತ್ತು ತಿಂಗಳ ಅಜ್ಞಾತವಾಸದ ನಂತರ ಒಂದೊಂದು ಪುಟ್ಟ ಪುಟ್ಟ ಆಕಾರಗಳಾಗಿ ಹೊರಬೀಳುವಾಗ ಸ್ತಿತ್ವ ಕೊಡುತ್ತೇವೆಂಬ ಭ್ರಮೆಯಲ್ಲಿ ಹೆಸರುಗಳ ಮೇಲಿನ ಮೋಹಕ್ಕೆ, ಒಂದೊಂದು ಕೊಟ್ಟು, ಉತ್ಸವ ಮಾಡುತ್ತೇವೆ. ಹಾಜರಾತಿ ಪಟ್ಟಿಗೀಗ ಹೊಸ ದಾಖಲೆಯ ಅಂಕಿತ.. ಪುಟ್ಟ ಪುಟ್ಟ ಕಂದಮ್ಮಗಳ ಕೆಂಪು ಕೆಂಪು ಕದಪುಗಳನ್ನು ರಂಗು ಬಿಕ್ಕಿದ ಬಾನಂತೆ, ತಡವಿ ತಡವಿ ಮುದ್ದಾಡುತ್ತೇವೆ. ಅಗೋಚರವಾಗಿದ್ದುಕೊಂಡೇ ಕನಸು ಕಟ್ಟುವ ಕಲೆ ಭ್ರೂಣಕ್ಕೆ ಕರಗತವೇನೋ.. ! ಅಚ್ಚಕಪ್ಪಿನ ಕಣ್ಣುಗಳಲ್ಲಿ ಕಾಮನಬಿಲ್ಲು ಹದವಾಗಿ ಹರಡಿದೆಯೆಂದು ಬೀಗುತ್ತೇವೆ. ಆ ಕಣ್ಣುಗಳು ಮಾತ್ರ ಮುಚ್ಚುತ್ತ ತೆರೆಯುತ್ತಲೇ ಇರುತ್ತವೆ. ಬೆಳೆಯುತ್ತ ಬೆಳೆಯುತ್ತ ನಮ್ಮ ನಮ್ಮಲ್ಲೇ ಗೋಡೆ ಕಟ್ಟಿ ಮಕ್ಕಳನ್ನು ಬಂಧಿಸಿಬಿಡುತ್ತೇವೆ. ಯಾರೋ ಬೆಳೆಸಿದ ಮಕ್ಕಳು ಬಯಲ ಪೊದೆಗಳಲ್ಲಿ ದಪ್ಪ ದಪ್ಪ ಹುಲ್ಲುಗಳಲ್ಲಿ ಅವಿತು ಕಣ್ಣುಮುಚ್ಚಾಲೆ ಆಡುವಾಗ, ಮುಗಿಲ ಎದೆಯ ಸೀಳಿ ಸೀಳಿ ಹೆಜ್ಜೆ ಬಿಟ್ಟು ಹಾರುವ ಉಕ್ಕಿನ ಹಕ್ಕಿಗಳ ನೋಡಿ ಕೈಯಗಲಿಸಿ ಹೊರಟಾಗ, ಚೋಟುದ್ದದ ಲಂಗೋಟಿಯಲ್ಲಿದ್ದಾಗ ಪರಿಚಯದ ಹುಡುಗಿಯೊಬ್ಬಳು ನೋಡಿ ನಕ್ಕಾಗ ಭೂಮಿಯೆದೆಯ ತುಂಬಾ ನಾಚಿಕೆಯಿಂದ ಕೋಲು ಹಿಡಿದು ಪೋರ ಗೀಚುವಾಗ, ತೂತಾದ ಮುಗಿಲಿಂದ ದಪ್ಪ ದಪ್ಪ ಹನಿಗಳು ಓಟದ ಸ್ಪರ್ಧೆಯಲ್ಲಿ ಜಂಟಿ ಜಂಟಿಯಾಗಿ ಪಾಲ್ಗೊಂಡಾಗ, ಕಾಗದದ ದೋಣಿಗಳ ತುಂಬ ಪುಟ್ಟ ಪುಟ್ಟ ಬಳೆಗಳ ಮಿಣುಕುಗಳು ಅಂಟಿ ಕೂತು ನಕ್ಷತ್ರಗಳಂತಾದಾಗ, ಹಸು ಹೋರಿ ಎಮ್ಮೆ ಕರುಗಳ ಬೊಬ್ಬಿರಿದು ಓಡಿಸುವಾಗ, ಆಗಷ್ಟೇ ಚಿಗುರಿದ ಬೇಲಿತುದಿಯ ಟೊಂಗೆಯೊಂದಿಷ್ಟು ಚಿಟ್ಟೆಗಳ ಬಿಟ್ಟಾಗ, ಅದರ ರೆಕ್ಕೆಯ ಬಣ್ಣ ತೊಳೆವ ಮಳೆಯಲ್ಲಿ ಕಳ್ಳ ಹೆಜ್ಜೆಗಳು ಕೊಯ್ಯಲೆಂಬಂತೆ ಬಂದಾಗ, ನಮ್ಮ ಮಕ್ಕಳು ಕಿಟಕಿ ಸರಳುಗಳ ಹಿಂದೆ ನಿಂತಿರುತ್ತಾರೆ. ಬಾಲ್ಯದೆಷ್ಟೋ ನೆನಪುಗಳಿಗೆ ಜೋತುಬೀಳಬೇಕಾದವರು ಗೋಡೆಗಳ ಅಡ್ಡಡ್ಡ ಕಂಬಿಗಳ ನೆರಳಿಗೆ ಸುಕ್ಕಾಗುತ್ತಾರೆ. ಸೋಸಿಬಿಟ್ಟ ಬಿಸಿಲನ್ನೂ ಹಚ್ಚಿಕೊಳ್ಳದ ನತದೃಷ್ಟರು. ಅವ್ವ ಬರುತ್ತಾಳೆ ಎಂದು ಅವಳನ್ನೇ ಕಾಯುತ್ತಾ ಕಣ್ಣುಗಳ ಇಷ್ಟಗಲ ಅರಳಿಸಿ ಹೊರಳಿಸಿ ನೋಡುವಾಗ, ಚೌಕಟ್ಟಿನಲ್ಲಿನ ಕಾಡುವ ಗೊಂಬೆಗಳಿಗೆ ಜೀವ ಬಂದಂತಾಗುತ್ತದೆ. ಅದರೂ ಆಗಷ್ಟೇ ಪರದೆಯೀಚೆ ಇಣುಕಬೇಕೆಂದಿದ್ದ ಹಲ್ಲುಗಳು ಬಿಳಿಯ ನಗೆಯನ್ನ ತೊಡಲು ಹೆದರುತ್ತವೆ. ಅಲ್ಲಿಂದಿಲ್ಲಿಗೂ ಮಕ್ಕಳ ಬದುಕಿಗೆ ರಂಗು ತುಂಬಿದ ಅವ್ವನ ಬದುಕು ಮಾತ್ರ ಕಪ್ಪು ಬಿಳುಪು ಇಲ್ಲಾ ಅರೆಗಂದು ಬಣ್ಣದ ಛಾಪು.. ಬಹುಶಃ ಅವಳು ಈ ಬಣ್ಣದ ಪ್ರಪಂಚದಿಂದ ದೂರವೇ ಉಳಿದುಬಿಟ್ಟಿದ್ದಾಳೇನೋ!.. ಒಬ್ಬಂಟಿಯಾಗಿ ತನ್ನ ಮಕ್ಕಳಿಗಾಗಿ ಸೌಧ ಕಟ್ಟುವಾಗ ಹಾಕಿದ್ದ ಇಟ್ಟಿಗೆಗಳು ಮಾತ್ರವೇ ಲೆಕ್ಕ ಹಾಕಿರಬಹುದು ಅವಳ ಬೆವರ ಹನಿಗಳನ್ನು ತಮ್ಮ ಮೇಲೆ ಬಿದ್ದಾಗ; ಒಂದಷ್ಟು ಕೆ.ಜಿ.ಗಳಲ್ಲಿ!.. ಅವಳು ಕಟ್ಟುವ ಮನೆಯಿಂಡ ಯಾರೂ ಹೊರಗೆ ಬರಲೇ ಇಲ್ಲ; ಅವಳು ನೆರಳಿರಲೆಂದು ಅಂದುಕೊಂಡರೆ ನಾವು ಬಿಸಿಲೇ ಬೇಡ ಎಂದೆವು. ಅವಳು ಮಾತ್ರ ಕಟ್ಟುತ್ತಲೇ ಇರುತ್ತಾಳೆ. ಮಕ್ಕಳು ಹತ್ತಿರ ಇದ್ದಾಗ ಮಾತ್ರ ಅವಳ ಜಗತ್ತಿಗೆ ಬಣ್ಣ ಬರುತ್ತದಂತೆ.. ಅವಳು ಹೇಳುತ್ತಾಳೆ; ಮಕ್ಕಳೆಂದರೆ ಪ್ರೀತಿಯ ಸಲಿಗೆಯಲ್ಲಿ ಖುಷಿಯ ಮಾರುವವರು; ಹೆದರದಿರಿ ಇದು ಮುಗ್ಧ ವ್ಯಾಪಾರ!.. ಹೊರಬರಬಹುದು, ಒಂದೆರಡು ಲೋಟ ನೀರು ಬೇಕಾ ಎಂದಾದರೂ ಕೇಳಬಹುದು, ದುಡಿದು ದಣಿದು ಸಣ್ಣಗಾಗಿದ್ದೀಯ; ತೊಗೋ ಇಂತಿಷ್ಟು ಬಾಳೆಹಣ್ಣು ತಿನ್ನೆಂದು ಸಿಪ್ಪೆ ತೆಗೆದಿಟ್ಟು ಕೊಡಬಹುದು ಅಂತ ಇಟ್ಟಿಗೆಗಳ ಜೊತೆ ಅವಳು ಮಾತನಾಡುವಾಗ, ತಾನು ಬೆಂದು ಗಟ್ಟಿಯಾದುದರ ಬಗೆಗೆ ಇಟ್ಟಿಗೆ ಯೋಚಿಸುತ್ತಿತ್ತಂತೆ!.. ಅದೂ ಒಮ್ಮೊಮ್ಮೆ ಅಂದುಕೊಳ್ಳುತ್ತದಂತೆ,"ನಾನು ಮನೆ ಕಟ್ಟುತ್ತೇನೆ; ಆದರೆ ಮನಸ್ಸುಗಳನ್ನು?"..!


ತನ್ನನ್ನು ಕೇಳಿಕೊಂಡು ಯಾರಾದರೂ ಬಂದಾರು ಅನ್ನುತ್ತಾ ಕಾಯುವ ಅವಳ ಮನಸ್ಸು ಕೂಡ ಥೇಟ್ ಮಗುವಿನಂತೆಯೇ!.. ತನ್ನ ನಂಬಿಕೆಯ ಗಟ್ಟಿತನಕ್ಕೆ ಅವಳೂ ಜೋತುಬೀಳುತ್ತಾಳೆ. ನಿರೀಕ್ಷೆಗಳ ಭಾರ ಜಾಸ್ತಿಯಾಗಿ ಕೈಸೋತಾಗ, ಸುಳ್ಳು ಸಮಜಾಯಿಷಿಗಳನ್ನು ಹುಟ್ಟುಹಾಕುತ್ತಾ ಬಾಳ ಮುಸ್ಸಂಜೆಯಲ್ಲಿಯೂ ಅವಳ ತಾಯ್ತನ ಮತ್ತೆ ಜಾಗೃತವಾಗುತ್ತದೆ. ಒಂದಷ್ಟು ಸಬೂಬುಗಳನ್ನು ಹೊಟ್ಟೆಯಲ್ಲಿಟ್ಟುಕೊಂಡು ಸವರುತ್ತಾ, ಸಂಜೆ ಸನಿಹದಲ್ಲಿದೆ; ಬೆಳಕು ತುಂಬಿಕೊಳ್ಳುವವರು ಚೀಲ ಹಿಡಿದು ಬರುತ್ತಾರೋ ಇಲ್ಲಾ, ಕತ್ತಲೆಯ ಮೂಲೆಗಳಿಂದೇನಾದರೂ ಮಿಂಚುಹುಳುಗಳು ಹುಟ್ಟುತ್ತವೆಯೋ ಎಂದು ಹುಡುಕುತ್ತಾ ಅಳಿದುಳಿದ ಇಟ್ಟಿಗೆಗಳ ಪೇರಿಸುವಾಗ ನೋಡುತ್ತಾಳೆ ಅಂಗಳ ಮತ್ತು ಒಳ.. ಖಂಡಿತವಾಗಿಯೂ ಹೇಳುತ್ತೇನೆ, ಅದೆಷ್ಟೋ ಚೌಕಟ್ಟುಗಳ ಮಧ್ಯ ಅವಳೊಂದು ಪರಿಧಿಯೇ ಇರದ ವರ್ತುಲ.. ಈಗೀಗ ಅರ್ಥವಾಗುತ್ತಿದೆ, ಬದುಕಿನ ಹರಿವು ಏಕಮುಖವಾಗಿದ್ದರೂ ಭೂಮಿಯಾಕೆ ಗೋಳ!..


~‘ಶ್ರೀ’

ತಲಗೇರಿ


kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.