ಮಧ್ಯವಯಸ್ಸಿನ ಹೆಣ್ಣುಮಕ್ಕಳು ಮಂಕಾಗೋದ್ಯಾಕೆ?ಈ ಪ್ರಶ್ನೆ ಬಹಳ ದಿನದಿಂದ ನನ್ನ ಕಾಡ್ತಿದೆ.


ನಿಮ್ಮದೇ ಬದುಕಿನಲ್ಲೋ ಅಥವ ನಿಮ್ಮ ಸುತ್ತಮತ್ತಲಲ್ಲೋ ನೋಡಿರಬೇಕು; ಮನೆಕೆಲಸದಲ್ಲಿ ಮಾತ್ರ ಎಷ್ಟು ಬೇಕೋ ಅಷ್ಟು ತಮ್ಮನ್ನು ತೊಡಗಿಸಿಕೊಂಡು ಬೇರೆ ಯಾವುದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಬದುಕಿರೋರನ್ನ ಅಥವ ಹಾಗೇ ಹೋಗಿಬಿಟ್ಟವರನ್ನ, ಹೌದಾ?


ಅವರ ಬದುಕಿನ ಒಳಹೊಕ್ಕು ನೋಡಿದಾಗ ಗೋಚರಿಸೋದು ಅವರ ಈ ಬಾಹ್ಯ ಮುಖಕ್ಕೆ ತಾಳೆಯಾಗದ ರೂಪಗಳು! ಅವರೂ ಕೂಡ ಒಮ್ಮೆ ಚೈತನ್ಯದ ಚಿಲುಮೆಯಾಗಿದ್ದರು, ಅವರ ಆಸಕ್ತಿಗಳೂ ಹಲವಾರಿದ್ದವು, ಅವರಿಗೂ ಬೆಟ್ಟದಷ್ಟು ಕನಸುಗಳಿದ್ದವು, ಆ ಕನಸುಗಳನ್ನು ನಮಸಾಗಿಸುವ ಸಾಮರ್ಥ್ಯವು ಅವರಿಗಿತ್ತು, ಈಗ ಅವಕಾಶ ಸಿಕ್ಕರೂ ತಮ್ಮ ಮೈ-ಕೈ ಕೊಡವಿಕೊಂಡು ಎದ್ದು ಅಸೆಗಳನ್ನು ಪೂರೈಸಲು ಹೊರಟಾರು ಅನ್ನಿಸುವಂತಹ ಚೇತನಗಳು ಎನ್ನುವುದು ತಿಳಿಯುತ್ತದೆ.


ಈ ಮಾತು ಗೃಹಿಣಿಯಾಗಿಯೇ ಗುರುತಿಸಿಕೊಂಡ. ಹೆಣ್ಣುಮಕ್ಕಳಿಗೆ ಮಾತ್ರವಲ್ಲ, ಮನೆಯ ಆಚೆಯೂ ದುಡಿದು ಸಂಸಾರ ತೂಗಿಸುವ ಹೆಣ್ಣುಮಕ್ಕಳಿಗೂ ಅನ್ವಯವಾಗುತ್ತದೆ ಅಂತ ನನ್ನ ಭಾವನೆ.


ಒಟ್ಟಾರೆಯಾಗಿ, ಮೂಲದಲ್ಲಿ ಅವರು ಒಂದು ಸೀಮಿತವಾದ, ಕುಟುಂಬಕ್ಕಷ್ಟೇ ಮೀಸಲಾದ ವಲಯವೊಂದನ್ನು ಸೃಷ್ಟಿಸಿಕೊಂಡು ಅದರೊಳಗೇ ಇದ್ದುಬಿಡುವ ಪರಿಸ್ಥಿತಿ ನಿರ್ಮಾಣವಾಗಿರೋದು ಗೋಚರಿಸುತ್ತದೆ.


"ವೀಣೆ ಕಲೀಬೇಕು ಅಂತ ತುಂಬಾ ಇಷ್ಟ, ಹುಂ ಆಗ್ಲೇ ಇಲ್ಲ"

"ಪೈಂಟಿಂಗ್ ಎಷ್ಟು ಚೆನ್ನಾಗಿ ಮಾಡ್ತಿದ್ದೆ ಗೊತ್ತಾ? ಈಗ ಕನಸು ಬಿಡು"

"ಜಿಮ್ ಗೆ ಹೋಗೋಣ ಅಂದ್ಕೋತೀನಿ, ಕೆಲಸದಿಂದ ಬರೋ ಅಷ್ಟರಲ್ಲಿ ಸಾಕಾಗಿರತ್ತೆ"

"ಆರೋಗ್ಯ ಕೆಡ್ತಿದೆ, ಗಮನ ಕೊಡೋಕೆ ಆಗ್ತಿಲ್ಲ!"


ಈ ರೀತಿಯ ಮಾತುಗಳು ನಮಗೆ ಬಹಳ ಪರಿಚಿತ ಅನ್ನಿಸೋದಿಲ್ವ?!

ನೂರಕ್ಕೆ ತುಂಬತ್ತು ಮಹಿಳೆಯರು ಈ ರೀತಿ ಇದಾರೆ. ನಂಗಂತೂ ಇದು ಒಂದು ದೊಡ್ಡ ಹೋರಾಟ ಅಥವ struggle ಹಾಗೆ ಕಾಣತ್ತೆ.

ಈ ಪರಿಸ್ಥಿತಿಯನ್ನು ಇತರರು ನೋಡೋದು ಹೀಗೆ.

"ಮಾಡ್ಬೇಕು ಅಂದರೆ ಛಲ ಇರ್ಬೇಕು"

"ನೀನೊಬ್ಬಳೇನ ಸಂಸಾರ ನಡ್ಸೋದು, ಕೆಲಸಕ್ಕೆ ಹೋಗೋದು?"

ನಿನ್ನನ್ನ ತಡೆದಿರೋರು ಯಾರು?


ಈ ಎಲ್ಲಾ ಮಾತುಗಳು ಅವರ ಪ್ರಯತ್ನಗಳನ್ನೆಲ್ಲಾ ಅಲ್ಲಗೆಳೆಯುವ, ನಂಬಿಕೆನ್ನು ಕುಗ್ಗಿಸುವ ಪ್ರಯತ್ನದಂತೆ ಕಾಣಿಸುತ್ತದೆ.

" ನೀನು ಪ್ರಯತ್ನ ಪಟ್ಟಿದ್ದೀಯ, ಮನೆಯ—ಕೆಲಸದ ಜವಾಬ್ದಾರಿಯಲ್ಲಿ ನಿಂಗೆ ಮಾಡೋಕೆ ಸಾಧ್ಯ ಆಗಿಲ್ಲದೇ ಹೋಗಿರಬಹುದು. ಈಗ ಬಿಡುವಿದೆ, ಮಾಡು, ನಿಂಗೆ ಸಾಧ್ಯ ಆಗತ್ತೆ" ಅಂತ ಹೇಳಬಹುದೇ? ಅದೇ ನಿಜ ಕೂಡ, ಅಲ್ವ?


ಇದರಾಚೆಗೆ ಅವಳು ಹೆಂಡತಿ, ತಾಯಿ, ಉದ್ಯೋಗಸ್ಥೆಯಾಗಿಯೂ ಯಾವುದೋ ಮೇಲಾಟಕ್ಕೆ ಬಿದ್ದಂತೆ ತೋರುತ್ತದೆ. ಮಹಿಳೆಗೆ ತಾನು ತನ್ನ ತಾಯಿಯಂತೆಯೋ, ಅತ್ತೆಯಂತೆಯೋ ಆಗಬೇಕು ಎನ್ನುವ ಅಮೂರ್ತ ಒತ್ತಡ ಒಂದೆಡಯಾದರೆ, ಉದ್ಯೋಗದಲ್ಲಿ ಪುರುಷನಿಗೆ ಸಸಮಳಾಗಬೇಕು ಎನ್ನುವ ಒತ್ತಡ ಇನ್ನೊಂದೆಡೆ. ಇವು ಅವಳ ಆತ್ಮವಿಶ್ವಾಸವನ್ನು ಕಿತ್ತುಕೊಳ್ಳುವ ಪ್ರಮುಖ ಅಂಶಗಳು ಅನ್ನಿಸುತ್ತದೆ.


ಈ ಮೇಲಾಟಕ್ಕೆ ನಾವು ನಮ್ಮನ್ನು ನಾವು ಕೊಟ್ಟುಕೊಳ್ಳಬೇಕೆ? ಅಥವ, "ನಾನು ನನ್ನ ತಾಯಿಯೋ, ಅತ್ತೆಯೋ ಅಥವ ಪುರುಷನೋ ಅಲ್ಲ, ನನಗೆ ಸಾಧ್ಯವಾದಷ್ಟು ಚೆನ್ನಾಗಿ ನನ್ನ ಕರ್ತವ್ಯಗಳನ್ನು ನಿಭಾಯಿಸಿದ್ದೇನೆ" ಅನ್ನುವ ಸಮಾಧಾನಕ್ಕೆ ನಮ್ಮನ್ನು ಕೊಟ್ಟುಕೊಳ್ಳಬೇಕೆ?

ಆಯ್ಕೆ ನಮ್ಮದೇ ಅಲ್ಲವೇ? ಇದು ನಮಗೆ ಸಮಾಧಾನವನ್ನು ಕೊಡಬಹುದೇ?


ಮಹಿಳೆಯರಲ್ಲಿ ಕಾಣುವ ಇನ್ನೊಂದು preoccupation ಇದು ಅನ್ನಿಸಿದೆ. ತಮ್ಮನ್ನು ಏನೂ ಮಾಡಲಾಗದ ಸ್ಥಿತಿಗೆ ದೂಡಿದ ಅಮೂರ್ತ ವ್ಯವಸ್ಥೆಯನ್ನು ಬಗೆಬಗೆದು ನೋಡಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾ ಇದ್ದಾರೇನೋ ಅನ್ನಿಸುವಂತೆ, ಸಮಯ ಸಿಕ್ಕಾಗಲೆಲ್ಲ ತಮಗಾದ ಅನ್ಯಾಯ, ಮೋಸ, ಎರಡು ಬಗೆದ ಜನ ಎಲ್ಲ ಎಲ್ಲದರ ಬಗ್ಗೆ ಬೈಯುತ್ತಲೋ, ದೂರುತ್ತಲೋ ಇರೋದು. ಅದು ತನ್ನ ಪರಿಸ್ಥಿತಿಯನ್ನು ಯಾರಾದರೂ ಅರ್ಥ ಮಾಡಿಕೊಳ್ಳಬಾರದೆ ಎಂಬ ಅರ್ತನಾದದಂತೆ ಕೇಳಿಸುತ್ತದೆ. ಅರ್ಥ ಆಗುವುದು ಸುಲಭ ಸಾಧ್ಯವೇ? ಅರ್ಥವೇ ಆಗದಿದ್ದರೆ ಏನು ಮಾಡಬೇಕು? ಅರ್ಥವಾದ ಮೇಲೂ ಬದಲಾವಣೆ ಸುಲಭದಲ್ಲಿ ದಕ್ಕಬಲ್ಲದೇ? ಅಲ್ಲಿಯವರೆಗೂ ತನ್ನ ತಾನು ಸಂಭಾಳಿಸಿಕೊಳ್ಳುವುದು ಜರೂರು ತಾನೇ?


ಇನ್ನೊಂದು preoccupation ಇದು. ನಾನು ಅದು ಮಾಡ್ಬೇಕಿತ್ತು, ಇದು ಮಾಡ್ಬೇಕಿತ್ತು, ಹೀಗಿರ್ಬೇಕಿತ್ತು, ಹಾಗಿರ್ಬೇಕಿತ್ತು ಅಂತ ಕಳೆದು ಹೋದ ಅವಕಾಶಗಳಿಗೆ ಯಾರು, ಯಾವ ಸಂದರ್ಭ ಕಾರಣವಾಯಿತು ಅನ್ನುವುದರ ಬಗ್ಗೆ ಬೇಸರಪಟ್ಟುಕೊಳ್ಳುತ್ತಾ ಕೊರಗುವುದು ಕಾಣತ್ತೆ. ನಿಜ, ಅವಕಾಶಗಳನ್ನು ಕದಿಯಲಾಗಿದೆ, ಕಸಿದುಕೊಳ್ಳಲಾಗಿದೆ. ಈಗ ಮುಂದೇನು?

ಹಣ್ಣು ಮುದುಕಿಯರನ್ನೂ ಈ ಹಳಹಳಿಕೆಗಳು ಬಿಟ್ಟಿಲ್ಲ. ನಾವೂ ಕೂಡ ಕೊನೆ ಉಸಿರಿರುವವರೆಗೂ ಕೊರಗುತ್ತಲೇ ಇರಬೇಕೇನು? ಸಾದ್ಯವಿದ್ದರೆ ನಮ್ಮ creativity ಅರಳಲು ಅವಕಾಶವನ್ನು ಕೊಡಬಾರದೇಕೆ?


ಮಹಿಳೆಯರಲ್ಲಿ ಈ preoccupation ಕಾಣುವಷ್ಟು ಸಾಮಾನ್ಯವಾಗಿ, ಅವರು ತಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸುವ, ಅವರ ಕನಸುಗಳಿಗೆ ಬಣ್ಣತುಂಬುವ ಪ್ರಯತ್ನಗಳು ಕಾಣಸಿಗುವುದಿಲ್ಲ.


ನಮ್ಮ ಸಮಾಜದಲ್ಲಿ ಹಳಹಳಿಸುವುದಕ್ಕೆ ಇರುವಷ್ಟು ಮುಕ್ತ ಅವಕಾಶ ಅರಳಿ ನಗುವುದಕ್ಕೆ ಇಲ್ಲ ಎನ್ನುವುದು ಸ್ಪಷ್ಟವಲ್ಲವೆ?


ಇದು ಯಾಕೆ ಹೀಗೆ ಎನ್ನುವುದು ನನ್ನ ಪ್ರಶ್ನೆ.

ಅದನ್ನು ಹೀಗೆ ಅರ್ಥಮಾಡಿಕೊಳ್ಳಲು ಸಾಧ್ಯವೇ ನೋಡೋಣ.

ನಮ್ಮ ಜನಪದ ಕಥೆಗಳಲ್ಲಿ ಸಾಮಾನ್ಯವಾಗಿ ಅಲ್ಲಲ್ಲಿ, ಮತ್ತೆ—ಮತ್ತೆ, ಬೇರೆ—ಬೇರೆ ರೂಪಗಳಲ್ಲಿ ಬರುವ ಈ ಭಾಗ ನೆನಪಾಗುತ್ತದೆ. ಅದು ಹೀಗಿದೆ.

ರಾಜಕುಮಾರಿಯನ್ನು ಹೊತ್ತುಕೊಂಡು ಬರುವ ರಾಕ್ಷಸ, ಅವಳಿಗಾಗಿ ಅರಮನೆಯನ್ನೆಲ್ಲಾ ಸಿಂಗರಿಸಿ ಅವಳನ್ನು ಸ್ವಾಗತಿಸುತ್ತಾನೆ. ಆದರೆ ಮೇಲಿನ ಒಂದು ಕೋಣೆಗೆ ಮಾತ್ರ ಹೋಗಬಾರದೆಂದು ತಿಳಿಸುತ್ತಾನೆ. ಆದರೆ ಅವಳಿಗೆ ಆಗಾಗ ಅ ಕೋಣೆಯಲ್ಲಿ ಏನಿದೆಯೋ ನೋಡಬೇಕೆನಿಸುತ್ತದೆ. ಅವಳು ಆ ಕೋಣೆಯನ್ನು ಸಮೀಪಿಸುವಷ್ಟರಲ್ಲಿ ರಾಕ್ಷಸ ಬಂದು ಅವಳನ್ನು ಮೊದಲು ಎಚ್ಚರಿಸಿ, ನಂತರ ಹೆದರಿಸಿ, ಕೊನೆಗೆ ಶಿಕ್ಷಿಸಿ ವಾಪಸ್ಸು ಅಟ್ಟುತ್ತಾನೆ.


ಕಥೆಯ ಈ ಭಾಗದಲ್ಲಿ ಬರುವ ಮುಚ್ಚಿದ ಕೋಣೆಯು ಹೆಣ್ಣಿನ creativity ಯನ್ನು ಅರಳಗೊಡದ ವ್ಯವಸ್ಥೆಯಾಗಿ ಕಾಣುತ್ತದೆ. ತನ್ನ ಕ್ರಿಯಾಶೀಲತೆಯನ್ನು ಯಾಕೆ ಬಂಧಿಸಿಡಲಾಗಿದೆಯೋ ಅರ್ಥವಾಗದೇ, ಅದನ್ನು ತಿಳಿಯಲೇಬೇಕೆಂದು ಮೇಲಿಂದ ಮೇಲೆ ಪ್ರಯತ್ನಿಸಿ ಸೋಲುವ ರಾಜಕುಮಾರಿಯಂತೆ ನಮ್ಮ ಹೆಣ್ಣುಮಕ್ಕಳು ನನಗೆ ಕಾಣುತ್ತಾರೆ.


ಇದರ ಪರಿಣಾಮ ವ್ಯಕ್ತಿತ್ವದ ಮೇಲೆ ಬೀರಿರೋದರಲ್ಲಿ ಸಂಶಯವೇ ಇಲ್ಲ. ತನ್ನನ್ನು, ತನ್ನ ಪರಿಸ್ಥಿತಿಯನ್ನು ಹಳಿದುಕೊಳ್ಳುತ್ತಾ ಕೂರುವುದು, ತಾನು ಸೋತೆನೆಂದು ತನ್ನನ್ನು ತಾನೆ ನಂಬಿಸಿಕೊಳ್ಳುವುದು ಇದರ ಒಟ್ಟಾರೆ ಪರಿಣಾಮ ಇರಬಹುದಲ್ಲವೇ?

ಕಂಡೂಕಾಣದ ಭಯ ಅವರನ್ನು ತಡೆಯುತ್ತಿರಬಹುದೇ? ಅದರಿಂದ ಮಂಕಾಗಿ, ಮಾತ್ರೆಗಳನ್ನು ನುಂಗುತ್ತಾ, ಮನೆಯಲ್ಲಿಯೇ ಮಲಗಿ ಆಕಾಶ ದಿಟ್ಟಿಸುತ್ತಿದ್ದರೂ ಪರವಾಗಿಲ್ಲ, ನನ್ನ ಕ್ರಿಯಾಶೀಲತೆಯನ್ನು ಅರಳಿಸುವ ಪ್ರಯತ್ನ ಮತ್ತೊಮ್ಮೆ ಮಾಡಲಾರೆ ಎಂದು ತೀರ್ಮಾನಿಸಿ ಸ್ವ--ಶಾಪಗ್ರಸ್ತ ಜೀವಿಗಳಾಗಿಬಿಟ್ಟಿದ್ದಾರೆಯೆ?

ಅಥವಾ ಈ ಸ್ಥಿತಿಯೇ ಸುಖ ಎಂಬ ಭ್ರಮೆಯನ್ನು ಅವರಲ್ಲಿ ತುಂಬಿರಬಹುದೇ?


ಇವೆಲ್ಲದರ ಆಳದಲ್ಲಿ ಕಾಣುವ ಇನ್ನೊಂದು ಅಂಶವಿದೆ. ಹೆಂಗಸರಿಗೆ ಬೇಕಿರೋದು " ಸಮಯದ ಬಿಡುವಲ್ಲ" "ಅಂತರಿಕ ಬಿಡುವು" ಅನ್ನೋದು. ಅವರ ಮನಸ್ಸನ್ನು ಯಾವುದೋ ಒಂದು ಕೌಟುಂಬಿಕ ಆಲೋಚನೆ ಸದಾ ಹಿಡಿದಿಟ್ಟಿರುತ್ತದೆ. ಇದು ಅವರ ಶಕ್ತಿಯನ್ನು ಹೀರಿಬಿಡುತ್ತದೆ.

ಆದರೆ ಯಾವುದೇ ಸಮಸ್ಯೆಯನ್ನೇ ಆಗಲಿ ಅರ್ಥಮಾಡಿಕೊಳ್ಳಲು, ಪರಿಹಾರ ಹುಡುಕಲು ಸಾಧ್ಯ ಆಗಬೇಕಾದರೆ ಆಗಾಗ ಆ ಸಮಸ್ಯೆಯಿಂದ ನಮ್ಮನ್ನು ನಾವು ದೂರ ಇಟ್ಟುಕೊಳ್ಳಬೇಕಗುತ್ತದೆ. ಆಗ ಮಾತ್ರ ಹೊಸ ಹೊಳಹು ಸಾಧ್ಯ. ಇಲ್ಲದಿದ್ದರೆ ಮನಸ್ಸು ಮಂಕಾಗುತ್ತದೆ. ಸಮಸ್ಯೆಯೂ ಹಾಗೆ ಉಳಿಯುತ್ತದೆ.


ತಮ್ಮ ಜವಾಬ್ದಾರಿಗಳಾಚೆಗೆ ಪ್ರತಿದಿನವೂ ಸ್ವಲ್ಪ ಸಮಯವನ್ನು ತಮ್ಮ ಆಸಕ್ತಿಗಳಿಗಾಗಿ, ತಿಂಗಳಿಗೊಂದೆರೆಡು ದಿನ ನಿತ್ಯದ ಕೆಲಸಗಳಿಂದ , ಕುಟುಂಬದಿಂದ ದೂರವಾಗಿ ತಮ್ಮದೇ ಸ್ಸೇಹಿತವಲಯದ ಜೊತೆ ಸಮಯ ಕಳೆಯಲು ಉಪಯೋಗಿಸೋದು ಆಂತರಿಕ ಬಿಡುವನ್ನು ತಂದುಕೊಡಬಹುದೆ? ಇದು ನಮ್ಮ ತುರ್ತು ಕೂಡ ಅಲ್ಲವೇ?


ನಮಗಾಗಿಯೂ ನಾವು ಬದುಕಿದಾಗ ಜೀವಂತಿಕೆಯ ವೃಕ್ಷ ನಮ್ಮೊಳಗೆ ಬಲವಾಗಿ ಬೆಳೆಯಬಹುದಲ್ಲವೇ?


ಏನಂತೀರಿ?

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.