ಮೂವರು ಮಕ್ಕಳನ್ನು ದೇಶಕ್ಕೆ ನೀಡಿದ ಮಹಾಮಾತೆ

ತಾಯಿದ್ರೆ ತವರು ಹೆಚ್ಚು| ತಂದೆ ಇದ್ರೆ ಬಳಗ ಹೆಚ್ಚು ಸಾವಿರಕೆ ಹೆಚ್ಚು ಪತಿಪುರುಷ| ಹೊಟ್ಟೆಯ ಮಾಣಿಕ್ಯದ ಹರಳು ಮಗ ಹೆಚ್ಚು||

ಜನಪದರ ಈ ಮಾತು ಸಾರ್ವಕಾಲಿಕ ಸತ್ಯ. ತಾಯಿಯ ತ್ಯಾಗ, ಮಕ್ಕಳ ಕುರಿತಾದ ಅವಳ ಪ್ರೀತಿಗೆ ಇದಕ್ಕಿಂತ ಹೆಚ್ಚಿನ್ನೇನು ಬೇಕು? ಮಕ್ಕಳು ತಾಯಿಯ ಸೆರಗಿನ ಮರೆಯಲ್ಲೇ ಅಂದರೆ ಹೆಚ್ಚಿನ ವಿಷಯಗಳಿಗೆ ತಾಯಿಯನ್ನೇ ಆಶ್ರಯಿಸಿ, ಆಧರಿಸಿ ಬೆಳೆಯುತ್ತಾರಾದರೂ ಬದುಕಲ್ಲಿ ತಂದೆಯ ಪಾತ್ರಕ್ಕೆ ಕಡಿಮೆಯೇನೂ ಇಲ್ಲ. ಹೆಣ್ಣುಮಕ್ಕಳಿಗೆ ತಂದೆ, ಗಂಡುಮಕ್ಕಳಿಗೆ ತಾಯಿ ಕಂಡರೆ ಹೆಚ್ಚು ಪ್ರೀತಿ ಎನ್ನುತ್ತಾರೆ. ಈ ತ್ರಿಪದಿ ಮದುವೆಯಾದ ಹೆಣ್ಣಿನ ಮನಸ್ಥಿತಿ ತಿಳಿಸುತ್ತದೆ. ಪತಿಗೃಹದಲ್ಲಿರುವ ಮಹಿಳೆಗೆ ತಾಯಿ ಇದ್ರೆ ತವರಿನ ವ್ಯಾಮೋಹ ಹೆಚ್ಚು, ತಂದೆ ಇದ್ರೆ ಬಂಧುಬಳಗದ ನಂಟು ಹೆಚ್ಚು. ಬಾಳಸಂಗಾತಿಗೆ ಜೀವನದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇರುವುದರಿಂದ ತಂದೆ-ತಾಯಿಗಿಂತ ಪತಿ ಸಾವಿರಪಟ್ಟು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಾನೆ. ಎಲ್ಲರಿಗೂ ತನ್ನ ಪ್ರೀತಿಯನ್ನು ನೀಡುವ ಹೆಣ್ಣಿಗೆ ತಾನು ಜನ್ಮ ನೀಡಿದ ಕರುಳ ಕುಡಿ ಮಾಣಿಕ್ಯಕ್ಕಿಂತ ಹೆಚ್ಚು. ಒಂಬತ್ತು ತಿಂಗಳು ಹೊತ್ತು, ತನ್ನ ಉಸಿರನ್ನೇ ಪಣವಾಗಿಸಿ ಹೆತ್ತ ಒಡಲ ಕುಡಿಯ ಮುಂದೆ ಜಗತ್ತಿನಲ್ಲಿ ಯಾರೂ ಇಲ್ಲ. ಅದಕ್ಕಿರುವಷ್ಟು ಪ್ರಾಮುಖ್ಯತೆ ಬೇರಾವುದಕ್ಕೂ ಇಲ್ಲ. ಯಾರಿಗೆಷ್ಟೇ ನಿಷ್ಠುರವಾಗಿ ಮಾತನಾಡುವ ತಾಯಿಯ ಬಾಯಿ ಮಕ್ಕಳೆದುರು ಕಟ್ಟಿಹೋಗುತ್ತದೆ. ಎಲ್ಲರಿಗೆ ಘಟ್ಟಿಸಿ ಹೇಳಿದಷ್ಟು ಸಲೀಸಾಗಿ ಮಕ್ಕಳಿಗೆ, ಅದರಲ್ಲೂ ಬೆಳೆದ ಮಕ್ಕಳಿಗೆ ಹೇಳಲಾರದೆ ಒಳಗೇ ತಳಮಳಿಸುತ್ತಾಳೆ. ಬದುಕಿನಲ್ಲಿ ಸಾಗುವ ಹಾದಿಯಲ್ಲಿ ಒಂದಿಂಚು ಅತ್ತಿತ್ತ ಸರಿದರೂ ಹನಿಗಣ್ಣಾಗುತ್ತಾಳೆ. ನನ್ನ ಕರುಳಕುಡಿಯ ಜೀವನ ಏನಾಗುತ್ತದೋ? ಎಲ್ಲಿ ದಾರಿ ತಪ್ಪುತ್ತದೋ ಎಂಬ ಅಧೀರಳಾಗುತ್ತಾಳೆ. ಮಕ್ಕಳು ಮಳೆಗೆ ನೆನೆದರೆ, ಬಿಸಿಲಿಗೆ ಬಾಡಿದರೆ, ಚಳಿಗೆ ನಲುಗಿದರೆ ತಾನೂ ಮುಮ್ಮಲ ಮರುಗುತ್ತಾಳೆ. ಮನೆಗೆ ಬರುವುದು ಒಂದಿಷ್ಟು ತಡವಾದರೂ ಹಸಿವು-ನಿದ್ರೆ ಬಿಟ್ಟು ಕಾಯುತ್ತಾಳೆ. ಒಳಿತಿಗಾಗಿ ಜಪಿಸುತ್ತಾಳೆ. ಹೊರಗೆ ಹೋದ ಮಗ/ಳು ಮನೆಗೆ ಬರುವವರೆಗೂ ಅಂಗೈಯಲ್ಲಿ ಜೀವ ಹಿಡಿದು ಕಾಯುತ್ತಾಳೆ; ತಡವಾದರೆ ಕಂಗೆಡುತ್ತಾಳೆ. ಸದಾ ತನ್ನ ಕಣ್ಣೆದುರೇ ಇರಬೇಕೆಂದು ಹಂಬಲಿಸುತ್ತಾಳೆ. ಮಗ/ಳ ಒಳಿತಿಗಾಗಿ ಜೀವ ಹಿಡಿದಿಡುವ ಅಮ್ಮಂದಿರ ನಡುವೆ ಕೆಲವು ಗಟ್ಟಿಗಿತ್ತಿ ಅಮ್ಮಂದಿರಿದ್ದಾರೆ. ಅಂತಹ ಅಮ್ಮಂದಿರಿರುವುದರಿಂದಲೇ ನಮ್ಮ ಭಾರತ ಮಾತೆ ರಕ್ಷಣೆಯಾಗುತ್ತಿದ್ದಾಳೆ. ಎಷ್ಟೋ ಗಟ್ಟಿಗಿತ್ತ ಅಮ್ಮಂದಿರು ತಮ್ಮ ಮಗ/ಳನ್ನು ದೇಶ ಕಾಯುವ ಕೆಲಸಕ್ಕೆ ಕಳಿಸಿರುವುದರಿಂದಲೇ ಕೋಟ್ಯಾನುಕೋಟಿ ಜನ ನೆಮ್ಮದಿಯ ನಿದ್ರೆ ಮಾಡುತ್ತಿದ್ದಾರೆ. ಬೆಳಿಗ್ಗೆ ಹೋಗಿ ಸಂಜೆ ತನ್ನೆದರು ಹಾಜರಾಗಬೇಕು; ಬೇರೆ ಊರು/ದೇಶದಲ್ಲಿದ್ದರೂ ಸದಾ ತನ್ನ ಸಂಪರ್ಕದಲ್ಲಿರಬೇಕು; ಅವರ ದಿನನಿತ್ಯದ ಆಗುಹೋಗುಗಳೆಲ್ಲವೂ ತನಗೆ ತಿಳಿದಿರಬೇಕು ಎಂದು ಮಕ್ಕಳ ಬದುಕನ್ನು ಪೂರ್ಣ ಆವರಿಸಿಕೊಳ್ಳುವ ಬಹುತೇಕ ಅಮ್ಮಂದಿರ ಪೈಕಿ ಸೈನ್ಯಕ್ಕೆ ಮಕ್ಕಳನ್ನು ಕಳಿಸಿಕೊಡುವ ಅಮ್ಮಂದಿರು ಭಿನ್ನವಾಗಿ ನಿಲ್ಲುತ್ತಾರೆ. ಹೆತ್ತಮ್ಮನಷ್ಟೇ ಭಾರತಮಾತೆಯೂ ಮುಖ್ಯ ಎಂದು ಪರಿಗಣಿಸುವ ಈ ಅಮ್ಮಂದಿರು ನಿಜಕ್ಕೂ ಗ್ರೇಟ್! ಕಚೇರಿಗೆ ಹೋದ ಮಗ ಮನೆಗೆ ಬರುವುದು ತಡವಾದರೆ ತಲ್ಲಣಿಸುವ ಅಮ್ಮಂದಿರ ನಡುವೆ ಯುದ್ಧ, ಶತ್ರುಗಳ ಅಕ್ರಮಣ, ಭಯೋತ್ಪಾದನೆ ಮುಂತಾದ ಹಾವಳಿಗಳಲ್ಲಿ ಸೈನ್ಯಕ್ಕೆ ಹೋದ ಮಗ ವಾಪಸ್ಸು ಬರುವ ಖಾತರಿಯೇ ಇಲ್ಲದಿದ್ದರೂ ಗಟ್ಟಿ ಮನಸ್ಸಿನಿಂದ ಅದನ್ನೆಲ್ಲ ಎದುರಿಸಲು ಸಿದ್ಧವಾಗುವ ಹೆತ್ತ ಕರುಳಿಗೆ ಎಷ್ಟು ನಮನ ಸಲ್ಲಿಸಬೇಕು? ಉತ್ತರಾಖಂಡ ಚಮೋಲಿ ಜಿಲ್ಲೆಯ ಸಣ್ಣ ಹಳ್ಳಿ ಕರೋಲಿ. ಇಲ್ಲಿಯ ಜಮುನಾದೇವಿ ಮಹಾಮಾತೆ. ಆಕೆ ತನ್ನ ಮೂವರು ಗಂಡು ಮಕ್ಕಳನ್ನು ಸೈನ್ಯಕ್ಕೆ ಕಳಿಸಿಕೊಟ್ಟಿದ್ದಾಳೆ. ಬಹುಕಾಲದಿಂದಲೂ ಉತ್ತರಕಾಂಡ ಇಂತಹ ವೀರ ಪುತ್ರರಿಗಷ್ಟೇ ಅಲ್ಲ ವೀರಮಾತೆಯರಿಗೂ ಜನ್ಮವಿತ್ತಿದೆ. ಈ ಮಕ್ಕಳು ನನ್ನ ಅಮೂಲ್ಯ ರತ್ನಗಳು. ಬರುವ ದಿನಗಳಲ್ಲಿ ಗಡಿಯಲ್ಲಿ ದೇಶ ರಕ್ಷಿಸುವ ನಂಬಿಕೆ, ವಿಶ್ವಾಸ ನನಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇವರು ನನ್ನ ಮಕ್ಕಳಷ್ಟೇ ಅಲ್ಲ, ಭಾರತಮಾತೆಯ ಸುಪುತ್ರರು. ದೇಶರಕ್ಷಣೆಗಾಗಿ ವಹಿಸುವ ಎಲ್ಲ ಕೆಲಸಗಳನ್ನು ಅಷ್ಟೇ ಗೌರವದಿಂದ ನಿರ್ವಹಿಸುತ್ತಾರೆ’ ಎನ್ನುತ್ತಾಳೆ ಈ ಮಹಾಮಾತೆ. ಆಕೆಯ ಮನದ ಸ್ಥೈರ್ಯ, ದೇಶಕ್ಕಾಗಿ ತನ್ನದೆಲ್ಲವನ್ನೂ ನೀಡುವ ನಿರ್ವಾಜ್ಯ–ಎಣೆಯಿಲ್ಲದ ಪ್ರೀತಿ, ಅಭಿಮಾನಕ್ಕೆ ಕೈ ಜೋಡಿಸೋಣ.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.