ಮಾತನಾಡದ ನೆನಪುಗಳು

ಮಾತಿಲ್ಲದೇ ಸುಮ್ಮನೇ ಕುಳಿತಿರುವ ಆಕೆಯ ಮನಸು ಅಲ್ಲಿಲ್ಲ. ಮಹಡಿಯ ಮೇಲಿನ ಚಾವಡಿಯಲ್ಲಿ ಉಯ್ಯಾಲೆಗೆ ತಲೆಯಾನಿಸಿ ಕುಳಿತಿರುವ ಆಕೆ ದೂರದಿಂದ ನೋಡುವವರಿಗೆ ಶಾಪಗ್ರಸ್ಥ ಶಾಕುಂತಲೆಯಂತೆ ಕಾಣುತ್ತಿದ್ದಾಳೆ. ಪ್ರತೀ ಭಾನುವಾರದಂತೆ ಇಂದು ಆಕೆ ಬ್ಯುಸಿಯಾಗಿಲ್ಲ. ಎಲ್ಲೂ ಹೊರಗೆ ಹೋಗಬಾರದೆಂದೇ ಗೆಳತಿಯರಿಗೆಲ್ಲಾ ಒಂದೊಂದು ಸಬೂಬು ಹೇಳಿ ತನ್ನ ಅಪಾರ್ಟ್‍ಮೆಂಟಿನ ಒಳಗೆ ತನ್ನನ್ನು ಬಂಧಿಸಿಕೊಂಡಿದ್ದಾಳೆ. ವಿಚಿತ್ರವೆನಿಸುವ ಆಕೆಯ ವ್ಯಕ್ತಿತ್ವದ ಪುಟಗಳು ಆಕೆಯಿಂದಲೇ ತೆರೆದುಕೊಳ್ಳುತ್ತಾ ಹೋಗುತ್ತದೆ.

"ವರ್ಷವೇ ಕಳೆಯಿತೇನೋ ಮನೆಯನ್ನು ಕ್ಲೀನ್ ಮಾಡಿ. ಇರುವುದೊಂದು ಒಂಟಿ ಜೀವ, ಗಲೀಜಾಗಿದ್ದರೂ ಕೇಳುವವರಾರಿಲ್ಲ ಅಂದವಾಗಿಟ್ಟರೂ ನೋಡವರಾರಿಲ್ಲ. ನನ್ನ ಗೆಳತಿಯರಾರಿಗೂ ನನ್ನ ಮನೆಯೊಳಗೆ, ಮನದೊಳಗೆ ಇನ್ನೂ ಜಾಗ ಕಲ್ಪಿಸಿಕೊಟ್ಟಿಲ್ಲ. ಆದರೆ ಅದೇಕೋ ನಿನ್ನೆ ಸಂಜೆ ಆಫೀಸಿನಿಂದ ಬಂದವಳಿಗೆ ನಾಳೆಯ ದಿನವನ್ನು ಮನೆಗಾಗಿ ಮೀಸಲಿಡಬೇಕು ಅನಿಸಿಬಿಟ್ಟಿತ್ತು. ನನಗೆ ಒಂಟಿಯಾಗಿರುವುದೆಂದರೆ ಆಗದ ಕೆಲಸ. ನಾನೆಂದೂ ರಜೆ ತೆಗೆದುಕೊಳ್ಳುವುದಿಲ್ಲ. ಊರಿಗೆ ಹೋಗಿ ಯಾವ ಕಾಲವಾಯಿತೇನೋ.... ಬೆಳಗ್ಗೆ ಮತ್ತು ಸಂಜೆಯ ನಡುವೆ ನನ್ನ ಜೀವನದೊಳಗೆ ಹಲವಾರು ಪಾತ್ರಗಳು, ವಿಷಯಗಳು ಆವರಿಸಿಕೊಂಡಿರುತ್ತದೆ. ಇರುವುದೊಂದು ರಾತ್ರಿಯ ಏಕಾಂತತೆಯೂ ಒಂಥರಾ ಹಿಂಸೆಯೇ ನನಗೆ. ಆದರೆ ಇಂದು ಕುಳಿತಿದ್ದೇನೆ ಏಕಾಂತವಾಗಿ. ಮನೆಯನ್ನೆಲ್ಲಾ ಕ್ಲೀನ್ ಮಾಡಿ, ಅಪರಿಚಿತವೇ ಎನಿಸುವ ಕೈರುಚಿಯ ಊಟಮಾಡಿ ಕುಳಿಇರುವ ನನ್ನ ಮನಸೇಕೋ ಎಂದಿನಂತಿಲ್ಲ. ಮನೆಯನ್ನು ಕ್ಲೀನ್ ಮಾಡುವಾಗ ಸಿಕ್ಕಿದ ಆ ಹಳೆಯ ಡೈರಿಯೇಕೋ ಮನಸನ್ನು ಮತ್ತೆ ಕಲಕಿಬಿಟ್ಟಿದೆ. ನನ್ನ ಬದುಕಿನ ಘಟನೆಗಳು ಕೇವಲ ನನ್ನೊಡನೆ ಮಾತ್ರ ಮಾತಾಡಬಲ್ಲವು. ನನ್ನದು ಬಯಸಿದ ಬದುಕಲ್ಲ; ಬಯಸದೇ ಬಂದ ಭಾಗ್ಯವೂ ಅಲ್ಲ. ವಿಧಿ ಎಂಬುದಿದ್ದರೆ ಅದು ಹೀಗೇ ಇದ್ದೀತು! ಪ್ರೀತಿ-ಪ್ರೇಮ-ಪಾರ್ಕು ಎಂದರೆ ಕಿಡಿಕಾರುತ್ತಿದ್ದ ನನ್ನ ಬದುಕಿನೊಳಗೆ ಆರು ವರ್ಷದ ಹಿಂದೆ ಆತ ಮೊದಲ ಹೆಜ್ಜೆಯನಿರಿಸಿದ್ದ. ಆತನ ಮುಖ ಕಂಡರೂ ಸಿಡಿಮಿಡಿಗೊಳ್ಳುತ್ತಿದ್ದ ನನ್ನ ಧೋರಣೆಯೇ ಆತನಿಗೆ ಇಷ್ಟವಾಯಿತೋ ಅಥವಾ ಒಂದೂ ಮಾತನಾಡದೇ ನಿರ್ಲಿಪ್ತವಾಗಿರುತ್ತಿದ್ದ ನನ್ನ ಮೌನವೇ ಆತನನ್ನು ಸೆಳೆಯಿತೋ ನಾನೆಂದೂ ಕೇಳಲಿಲ್ಲ, ಆತನೂ ಹೇಳಲಿಲ್ಲ. ನನ್ನದು ಮತ್ತು ಆತನದು ತದ್ವಿರುದ್ಧ ಕ್ಯಾರೆಕ್ಟರ್. ನನ್ನದು ತಿರಸ್ಕಾರವಾದರೆ, ಒಪ್ಪದಿದ್ದರೆ ಬಿಡುವವರಾರು ಎಂಬ ಧೋರಣೆ ಅವನದು. ಮೌನದ ಹಠ ನನ್ನದಾದರೆ ಮಾತಿನ ಅಪ್ಪಣೆ ಆತನದು. ಅದು ಹೇಗೋ ಅಂತೂ ಇಂತೂ ನನ್ನ ಡೈರಿಯಲ್ಲಿ ಆತನ ಹೆಸರು ಮೂಡುವಷ್ಟರ ಮಟ್ಟಿಗೆ ಈ ಬದುಕಿನೊಳಗೆ ಆತ ಸ್ಥಾನ ಪಡೆದುಕೊಂಡಾಗಿತ್ತು. ಮುಂದಿನದೆಲ್ಲಾ ಹಾಳೆ ತಿರುವಿದಂತೆಯೇ ನಡೆದುಹೋಗಿತ್ತು. ಆತ ಎಂದೂ ನನ್ನ ಹಿಂದೆ ಸುತ್ತಲಿಲ್ಲ. ಗುಲಾಬಿ ಕೊಟ್ಟು ಮುದ್ದುಗರೆಯಲಿಲ್ಲ. ನಾನು ಇಷ್ಟಪಟ್ಟೋ ಬಲವಂತವಾಗಿಯೋ ಒಪ್ಪಿಗೆ ನೀಡಿದ್ದೆ. ಏಕೆಂದರೆ ಎರಡೂ ಮನೆಯವರನ್ನೂ ಆತ ಒಪ್ಪಿಸಿಯಾಗಿತ್ತು, ನನಗೆ ನಿರಾಕರಿಸಲು ನೆಪವನ್ನೇ ಉಳಿಸಿರಲಿಲ್ಲ ಆತ....

ಇನ್ನು ಆರು ತಿಂಗಳಲ್ಲಿ ನಮ್ಮ ಮದುವೆಯಿತ್ತು. ಅಪ್ಪ ಅಮ್ಮಂದಿರಿಗೆ ಮಗಳು ಒಂದು ದಡ ಸೇರಿದಳಲ್ಲ ಎಂಬ ತೃಪ್ತಿ. ಈನಡುವೆ ನಮ್ಮಿಬ್ಬರ ನಡುವೆ ಸಣ್ಣ ಭಿನ್ನಾಭಿಪ್ರಾಯಗಳು ಮೂಡಲಾರಂಭಿಸಿದ್ದವು. ಒಬ್ಬಳೇ ಮಗಳಾದ ನಾನು ಅಪ್ಪ ಅಮ್ಮನನ್ನು ಬಿಟ್ಟು ಮದುವೆಯಾಗಿ ಆತನ ಮನೆಗೆ ಹೋಗಿಬಿಟ್ಟರೆ ಅವರಿಗೆ ಯಾರು ದಿಕ್ಕು ಎಂಬ ಯೋಚನೆ ತುಂಬಾ ಕಾಡುತ್ತಿತ್ತು. ಮುಂದೆ ಎಲ್ಲರಿಂದಲೂ ದೂರವಾಗಿ ನನ್ನ ಸ್ವಾತಂತ್ರ್ಯವನ್ನೂ ಕಳೆದುಕೊಂಡು ಆತನೊಂದಿಗೆ ಬದುಕಬೇಕಾದೀತು ಎಂದೆನಿಸಿದ್ದೇ ತಡ ರಾತ್ರಿಯೇ ಆತನಿಗೆ ಫೋನ್ ಮಾಡಿ, ಮದುವೆಯಾದ ನಂತರವೂ ನಾನು ಅಪ್ಪ ಅಮ್ಮನೊಡನೆ ಇರಲು ಒಪ್ಪಿದರೆ ಮಾತ್ರ ಮದುವೆಯಾಗುವುದಾಗಿ ಹೇಳಿದ್ದೆ. ಆದರೆ ನನ್ನ ಹುಡುಗ ಅದು ಸಾಧ್ಯವಿಲ್ಲವೆಂದು ಕಡ್ಡಿತುಂಡುಮಾಡಿದಂತೆ ಹೇಳಿ ಫೋನ್ ಇಟ್ಟಿದ್ದ. ಆದರೆ ಆತ ಬಿಡುವ ಸ್ವಭಾವದವನಲ್ಲ ಎಂದು ನನಗೂ ಗೊತ್ತಿತ್ತು. ಎಷ್ಟು ಹೇಳಿದರೂ ಕೇಳದ ಆತ ನನ್ನನ್ನು ಕಳೆದುಕೊಳ್ಳಲೂ ಸಿದ್ಧನಿರಲಿಲ್ಲ. ನನಗಾಗಿ, ನನ್ನ ಪ್ರೀತಿಗಾಗಿ ಆತ ಏನೇನೋ ಸಮಸ್ಯೆಗಳನ್ನು ಎದುರಿಸಿದ್ದನೆಂಬುದು ನನಗಾಗ ತಿಳಿದಿರಲಿಲ್ಲ. ಇನ್ನು ನಮ್ಮ ಮದುವೆಗೆ ಬಾಕಿಯಿದ್ದುದು ಕೇವಲ ನಾಲ್ಕು ತಿಂಗಳು! ಆತನ ಬಗ್ಗೆ ನಾನು ಸರಿಯಾಗಿ ತಿಳಿದುಕೊಳ್ಳಲೇ ಇಲ್ಲ, ಅಲ್ಲೇ ತಪ್ಪಾಗಿದ್ದು. ನನ್ನ ಮಾತನ್ನು ಆತ ಬಹಳ ಗಂಭೀರವಾಗಿ ತೆಗೆದುಕೊಂಡಿದ್ದ. ಬಹುಶಃ ನಾನು ಸಿಗಲಾರೆನೆಂಬ ಭಯ ಆತನನ್ನು ಕಾಡುತ್ತಲೇ ಇತ್ತು. ಅವನು ಹಾಗೆ ಮಾಡಬಹುದೆಂಬ ಒಂದು ಚಿಕ್ಕ ನಿರೀಕ್ಷೆಯೂ ನನಗಿರಲಿಲ್ಲ. ಒಪ್ಪದಿದ್ದರೆ ಸಾಯುವುದಾಗಿ ಅಂದು ಹೇಳಿದಾಗ ನಾನಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇದರಿಂದ ಯೋಚನೆಗೀಡಾದ ಆತ ರಾತ್ರಿಯಿಡೀ ಪ್ಲಾನ್ ಮಾಡಿ ಆತ್ಮಹತ್ಯೆಯ ನಾಟಕವೊಂದನ್ನು ರೂಪಿಸಿ, ಅದಕ್ಕಾಗಿ ಸಿದ್ಧತೆಯನ್ನೂಮಾಡಿಕೊಂಡ. ವಿಪರ್ಯಾಸವೆಂದರೆ, ಏನೆಲ್ಲಾ ತಂತ್ರವನ್ನು ಉಪಯೋಗಿಸಿ ಹಗ್ಗವನ್ನು ಫ್ಯಾನಿಗೆ ಬಿಗಿದು ಕೊನೆಯದಾಗಿ ನನಗೆ ಕಾಲ್ ಮಾಡಿದಾಗ ನಾನು ರಿಸೀವ್ ಮಾಡಲಿಲ್ಲ. ಇನ್ನು ಕೆಲವೇ ಗಂಟೆಗಳಲ್ಲಿ ನನ್ನ ಬಳಿ ನೀನೇ ಓಡಿ ಬಂದು ಕ್ಷಮೆ ಕೇಳಬೇಕು ಎಂದು ಮನಸಿನಲ್ಲೇ ಯೋಚಿಸುತ್ತಾ, ತನ್ನ ಯೋಜನೆಗೆ ತಾನೇ ಹೆಮ್ಮೆಪಡುತ್ತಾ ಮೇಜಿನ ಮೇಲೆ ಹತ್ತಿ ಕುಣಿಕೆಯೊಂದಿಗೆ ಆಟವಾಡಿದ ಆತ ಮತ್ತೆ ಕೆಳಗಿಳಿಯಲಿಲ್ಲ! ಆತನ ಲೆಕ್ಕಾಚಾರ ವಿಫಲವಾಗಿತ್ತು. ಎಷ್ಟೇ ಪ್ರಯತ್ನಿಸಿದರೂ ಕೊಂಚ ಆಚೆಗೆ ಸರಿದ ಮೇಜು ಆತನ ಕಾಲಿಗೆಟುಕಲೇ ಇಲ್ಲ. ಆತನ ಬದಲು ನನ್ನ ಜೀವನದಲ್ಲಿ ವಿಧಿ ಆಟವಾಡಿತ್ತು. ಕೇವಲ ನನ್ನ ಜೀವನದಲ್ಲಷ್ಟೇ ಅಲ್ಲ ನನ್ನ ಹುಡುಗನ ಜೀವನದಲ್ಲೂ! ಹ್ಞುಂ, ಅಂದು ಅವನೆಣಿಕೆಯಂತೆಯೇ ನಾನು ಅಲ್ಲಿಗೆ ಹೋಗಿದ್ದೆ. ಆದರೆ ನೋಡಿ ಸಂಭ್ರಮಿಸಲು ಅವನೇ ಇರಲಿಲ್ಲ. ಅವನ ಅಗಲಿಕೆಯೊಂದಿಗೆ ನನ್ನ ಬದುಕೇ ಮತ್ತೊಂದು ತಿರುವು ಪಡೆದಿತ್ತು. ಅವನೊಂದಿಗೆ ನನ್ನ ಕನಸುಗಳೂ ಸತ್ತು ಹೋಗಿತ್ತು. ನನ್ನ ನಿರ್ಲಿಪ್ತವಾದ ಬದುಕಿನಲ್ಲಿ ನನಗೇ ಗೊತ್ತಾಗದಂತೆ ಪ್ರೀತಿಯ ಮೊಳಕೆಯೊಡೆದು ಅಲ್ಲೇ ಕೊಳೆತುಹೋಯಿತು.

ಇಗೋ ಈಗ ನಾನು ಅಪ್ಪ- ಅಮ್ಮನನ್ನೂ ಬಿಟ್ಟು ದೂರದ ಊರಿನಲ್ಲಿ ಏಕಾಂಗಿ ಜೀವನಕ್ಕೆ ಒಗ್ಗಿಬಿಟ್ಟಿದ್ದೇನೆ. ನೆನಪುಗಳು ನನ್ನನ್ನು ಆವರಿಸಲು ಅವಕಾಶವನ್ನೇ ಕೊಡದಷ್ಟು ಬ್ಯುಸಿಯಾಗಿರುತ್ತೇನೆ. ಕಾರಣವೇ ಅಲ್ಲದ ಬಹಳ ಚಿಕ್ಕ ಕಾರಣವೊಂದು ನನ್ನ ಜೀವನಪೂರ್ತಿ ಮರೆಯಲಾಗದಂತಹ ಪಶ್ಚಾತ್ತಾಪವೊಂದನ್ನು ನೀಡಿ ಹೋಯಿತು. ಯಾರಿಗೂ ಉತ್ತರ ನೀಡಲಾಗದೇ ಮತ್ತದೇ ಮೌನದ ಸೆರಗು ಹೊದ್ದು ನಾಲ್ಕು ವರ್ಷಗಳಿಂದ ಮತ್ತೊಂದು ಮುಖವಾಡ ಧರಿಸಿ ಬದುಕುತ್ತಿದ್ದೇನೆ. ಈ ನನ್ನ ಮೌನದ ಹಿಂದೆ ಆತನಿದ್ದಾನೆಂಬ ಚಿಕ್ಕ ಸುಳಿವನ್ನೂ ಸಹ ನಾನು ಬಿಟ್ಟುಕೊಟ್ಟಿಲ್ಲ. ಟೆರೇಸಿನಲ್ಲಿ ಇಳಿಸಂಜೆಯಲ್ಲಿ ತನ್ನ ನೆನಪುಗಳನ್ನು ಹರವಿ ಕುಳಿತ ಆಕೆಯ ಮನಸು ಮಾತನಾಡುತ್ತಲೇ ಇದೆ. ಆದರೆ ಕೇಳುವವರು ಮಾತ್ರ ಯಾರೂ ಇಲ್ಲ". ಹೇಳುವ ಹಂಬಲ ಆಕೆಗೂ ಇಲ್ಲ. ಈ ದಿನ ಅದೇಕೋ ಡೈರಿ ತೆಗೆದಿದ್ದಾಳೆ. ಸುಟ್ಟು ಹಾಕಲಾಗದ ನೆನಪುಗಳಿವೆ ಅಲ್ಲಿ; ಆಕೆಯೆಂದೂ ಹೇಳಿಕೊಂಡಿರದ ಗುಪ್ತ ಪ್ರೀತಿಯಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಕೊನೆಯ ಪುಟದವರೆಗೂ ಪ್ರತೀ ಸಾಲಿನಲ್ಲೂ ಅವನಿದ್ದಾನೆ. ಆದರೆ ಇದನ್ನು ನೋಡಿ ಹುಚ್ಚೆದ್ದು ಕುಣಿಯಲು ಆತನೇ ಇಲ್ಲ. ಆತನ ಹೊರತಾಗಿ ಇನ್ನಾರೂ ಅವಳ ನೆನಪನ್ನು, ಬದುಕನ್ನು ಇಷ್ಟರ ಮಟ್ಟಿಗೆ ಕಲಕಲು ಸಾಧ್ಯವೇ ಇಲ್ಲ. ನೆನಪುಗಳ ಮೆರವಣಿಗೆ ಹೊರಟು ಅದಾಗಲೇ ಸಂಜೆ ಕಳೆದು ರಾತ್ರಿಯಾಗಿದೆ. ಹಾರಾಡುತ್ತಿರುವ ಮುಂಗುರುಳನ್ನು ಹಿಂದಕ್ಕೆ ಸರಿಸಿ ನಿಟ್ಟುಸಿರುಗರೆಯುತ್ತಿರುವ ಶೈಲಿ ಆಕೆಯ ಮನಸ್ಥಿತಿಯನ್ನು ಬಿಂಬಿಸುತ್ತಿದೆ. ಮತ್ತೆ ಬೆಳಗಾಗುವ ವೇಳೆಗೆ ಎಲ್ಲವನ್ನೂ ಕೊಡವಿ ನಿರ್ಲಿಪ್ತವಾಗಿಯೇ ತನ್ನನ್ನು ತೊಡಗಿಸಿಕೊಳ್ಳುತ್ತಾಳೆ ಆಕೆ. ಬೇಡವೆಂದರೂ ಕಾಡುವ ಆತನ ನೆನಪಿನೊಂದಿಗೆ ಕುಳಿತಿರುವ ಆಕೆಯ ತುಂಬಿದ ಕಂಗಳಲ್ಲಿ ಬೆಳ್ಳನೆಯ ಚಂದ್ರ ಪ್ರತಿಬಿಂಬಿಸುತ್ತಿದ್ದಾನೆ. ಆ ಚಂದ್ರನೊಳಗಿನಿಂದ ಮುಗ್ಧವಾದ ನಗುವಿನೊಂದಿಗೆ ಇಣುಕುತ್ತಿರುವ ಆಕೆಯ ಹುಡುಗ ಒಂದು ಮುಗುಳ್ನಗುವಿಗಾಗಿ ಚಿಕ್ಕದೊಂದು ನಿರೀಕ್ಷೆಯಿಂದ ಕಾಯುತ್ತಲೇ ಇದ್ದಾನೆ. ಅವನ ನೆನಪಿನಲ್ಲಿ ಈ ದಿನವನ್ನು ಕಳೆದಿರುವ ಆಕೆ ಚಂದ್ರ ಮರೆಯಾಗಿ ಬೆಳಕು ಮೂಡುವಷ್ಟರಲ್ಲಿ ಮಾಮೂಲಿ ಜೀವನಕ್ಕೆ ಒಗ್ಗಿಕೊಂಡು ಬಿಡುತ್ತಾಳೆ. ಬಹುಶಃ ಇನ್ನೆಂದೂ ಆಕೆಯ ಡೈರಿಯ ಪುಟಗಳು ತೆರೆಯುವುದಿಲ್ಲ... ಆತನ ನೆನಪುಗಳು ಮಾತನಾಡುವುದಿಲ್ಲ... ಅವು ಇನ್ನೆಂದೂ ಮಾತನಾಡುವುದಿಲ್ಲ.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.