ಹೀಗೊಂದು ದೆವ್ವದ ಕಥೆ..‌

'ಚೇತನ್'ನನ್ನು ಗೆಳೆಯ 'ಪ್ರೀತಮ್' ತನ್ನ ಅಕ್ಕನ ನಿಶ್ಚಿತಾರ್ಥಕ್ಕೆ ಆಹ್ವಾನಿಸಿದ್ದರಿಂದ ಅವನು 'ಪ್ರೀತಮ್'ನ ಊರಿಗೆ ಹೋಗಿದ್ದ. ಮಾದಾಪುರ ಎನ್ನುವ ಹಳ್ಳಿ ಪ್ರೀತಮ್ ನದು. ನಿಶ್ಚಿತಾರ್ಥ ಮುಗಿಸಿ ರಾತ್ರಿ ಹತ್ತು ಗಂಟೆಗೆ ತನ್ನ ಬೈಕ್ ಮೇಲೆ ಒಬ್ಬನೇ ಹೊರಟಿದ್ದಾನೆ ಚೇತನ್.. ನಿರ್ಜನ ಪ್ರದೇಶದಲ್ಲಿರುವ ಪಾಳು ಬಿದ್ದಿರುವ ಕಟ್ಟಡ ದೆವ್ವದ ಮನೆಯೆಂದೇ ಪ್ರಸಿದ್ಧಿ.. ಚೇತನ್ ಗೆ ಸ್ವಲ್ಪ ಭಯವೆನಿಸಿತು‌. ಸ್ವಲ್ಪ ದೂರದಲ್ಲಿರುವ ಬಸ್ ಸ್ಟ್ಯಾಂಡ್ ಮುಂಬಾಗದಲ್ಲಿ ಹುಡುಗಿಯೊಬ್ಬಳು ನಿಂತಿದ್ದಾಳೆ. ತುಂಬಾ ಭಯಗೊಂಡಂತೆ ಕಾಣುತ್ತಿದ್ದಾಳೆ. ಆಕಡೆ ಈಕಡೆ ನೋಡುತ್ತಿದ್ದಾಳೆ. ಚೇತನ್ ಬೈಕ್ ಬಸ್ ಸ್ಟ್ಯಾಂಡ್ ಹತ್ತಿರ ಬಂದಾಗ ಬೈಕ್ ನಿಲ್ಲಿಸಲು ಅಡ್ಡಲಾಗಿ ಕೈ ಹಿಡಿದಳು. ಬೈಕ್ ನ ವೇಗ ಜೋರಾಗಿದ್ದನ್ನು ಕಂಡ ಆ ಹುಡುಗಿಗೆ ಅವನು ಬೈಕ್ ನಿಲ್ಲಿಸುವುದಿಲ್ಲವೆಂದು ಗೊತ್ತಾಯಿತು. ಬೈಕ್ ಗೆ ಅಡ್ಡಲಾಗಿ ರಸ್ತೆಗೆ ಬಂದು ನಿಂತಳು. ಚೇತನ್ ಗೆ ಬಾಯಿಯ ಪಸೆ ಆರಿದಂತಾಯಿತು. ಬೈಕ್ ನಿಲ್ಲಿಸಿದ. ಆ ಹುಡುಗಿ ಚೇತನ್ ಗೆ "ಪ್ಲೀಸ್ ಮುಂದಿನ ಹಳ್ಳಿ ನಂದು..ರಿಲೇಶನ್ ಮನೆಗೆ ಹೋಗಿದ್ದೆ. ಲಾಸ್ಟ್ ಬಸ್ ತಪ್ಪಿ ಹೋಯಿತು. ಮನೆಯಲ್ಲಿ ಅಪ್ಪ ,ಅಮ್ಮ ಇಬ್ರೆ ಇರೋದು.. ನಾನು ಮನೆಗೆ ಹೋಗುವುದು ಸ್ವಲ್ಪ ತಡವಾದರೂ ಭಯಗೊಳ್ಳುತ್ತಾರೆ.. ದಯವಿಟ್ಟು ಡ್ರಾಪ್ ಕೊಡಿ.." ಎಂದು ಅವನ ಒಪ್ಪಿಗೆ ಕೇಳದೇ ಬೈಕ್ ಹತ್ತಿ ಕುಳಿತಳು. ಬಸ್ ಸ್ಟ್ಯಾಂಡ್ ಮುಂದಿನ ಬೀದಿ ದೀಪದಲ್ಲಿ ಅವಳ ಮುಖ ಸ್ಪಷ್ಟವಾಗಿ ಕಾಣುತ್ತಿತ್ತು.. ಕಣ್ಣುಗಳೆರಡೂ ಊದಿಕೊಂಡಿದ್ದವು. ತುಂಬಾ ಅತ್ತಿದ್ದಾಳೆನಿಸಿತು. ಚೇತನ್ ಮಾತನಾಡದೇ ಬೈಕ್ ಓಡಿಸಿದ. ಹಳ್ಳಿಯ ಮೊದಲ ಮನೆಯೇ ಅವಳದು. ಅವಳು ಬೈಕ್ ನಿಲ್ಲಿಸಲು ಹೇಳಿದಳು. "ಥ್ಯಾಂಕ್ಯೂ ಸರ್ ಈ ಒಳದಾರಿಯಲ್ಲಿ ಹೋದರೆ ನಮ್ಮ ಮನೆ ಇರೋದು..ಬರ್ತಿನಿ.." ಎಂದು ಸೌಜನ್ಯಕ್ಕೂ ಅವನ ಉತ್ತರ ಕಾಯದೇ ಹೊರಟು ಹೋದಳು.. ಚೇತನ್ ಗೆ ಏನೊಂದು ತಿಳಿಯಲಿಲ್ಲ. ಕತ್ತಲ ದಾರಿಯಲ್ಲಿ ಅವಳು ನಡೆದು ಹೋದಳು. ಚೇತನ್ ಬೈಕ್ ಓಡಿಸಿದ. ಅಲ್ಲಿಂದ ಸ್ವಲ್ಪ ದೂರದ ಪಟ್ಟಣ ಅವನದು. ವೇಗವಾಗಿ ಓಡಿಸಿ ಮನೆ ಸೇರಿದ. ಹಾಸಿಗೆಗೆ ಸೇರಿದ ಚೇತನ್ ಗೆ ಯಾವಾಗ ನಿದ್ದೆಯಾವರಿಸಿತೋ ತಿಳಿಯಲಿಲ್ಲ...

ಮರುದಿನ ಸ್ವಲ್ಪ ತಡವಾಗಿಯೇ ಎದ್ದ ಚೇತನ್ ಹಾಸಿಗೆಯಲ್ಲಿಯೇ ಕುಳಿತು ಆ ದಿನದ ಮತ್ತು ಹಿಂದಿನ ದಿನದ ಪೇಪರ್ ತರುವಂತೆ ತನ್ನ ತಂಗಿಗೆ ಕೂಗಿ ಹೇಳಿದನು. ಅವನು ಗೆಳೆಯ ಪ್ರೀತನ್ ಮನೆಗೆ ಹೋದ ದಿನದ ಪೇಪರ್ ಓದಿರಲಿಲ್ಲ. ದಿನವೂ ಪೇಪರ್ ಓದಿಯೇ ಮುಖ ತೊಳೆಯುವುದು ಅವನ ಅಭ್ಯಾಸವಾಗಿತ್ತು. ಚೇತನ್ ತಂಗಿ ಚಂದನಾ ಅವನಿಗೆ ಬೈದುಕೊಳ್ಳುತ್ತಲೇ ಪೇಪರ್ ತಂದು ಕೊಟ್ಟು ಹೋದಳು. ಚೇತನ್ ಮುಖಪುಟ ನೋಡಿ ಥತ್ ! ಅದೇ ಹಾಳು ರಾಜಕೀಯ ಎಂದು ಮುಂದಿನ ಪೇಜ್ ತೆಗೆದಾಗ ನಿದ್ದೆಯಲ್ಲಾ ಹಾರಿ ಹೋಯಿತು. "ಪ್ರಸಿದ್ಧ ಭರತನಾಟ್ಯ ಕಲಾವಿದೆ ಆತ್ಮಹತ್ಯೆ" ಎಂಬ ತಲೆಬರಹದಡಿ ಅವನು ರಾತ್ರಿ ನೋಡಿದ ಹುಡುಗಿಯ ಫೋಟೋ ಹಾಕಿದ್ದರು. ಚೇತನ್ ಹೌಹಾರಿದ.. ಹೇಗೆ ಸಾಧ್ಯ ? ಎನಿಸಿತವನಿಗೆ. ರಾತ್ರಿ ತಾನು ಅವಳನ್ನು ಮನೆ ಹತ್ತಿರ ಬಿಟ್ಟಾಗ ಹತ್ತೂವರೆ.. ಅವಳೇನಾದರೂ ಹತ್ತೂವರೆ ನಂತರ ಆತ್ಮಹತ್ಯೆ ಮಾಡಿಕೊಂಡರೆ ಈ ದಿನ ಪೇಪರ್ ಲಿ ಬರಲು ಸಾಧ್ಯವಿಲ್ಲ.. ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡರೆ ಸಂಜೆ ದೆವ್ವವಾಗುತ್ತಾರಾ?! ಅವನು ಸಣ್ಣಗೆ ನಡುಗಿದ. ಆ ದಿನ ಅವನ ತಲೆ ಸಿಡಿದಂತಾಗಿತ್ತು..ಎಲ್ಲೂ ಹೊರಗೆ ಹೋಗದೇ ಮನೆಯಲ್ಲಿಯೇ ತಲೆನೋವಿನ ಮಾತ್ರೆ ತೆಗೆದುಕೊಂಡು ಮಲಗಿದ..

ಚೇತನ್ ಸ್ವಲ್ಪ ದಿನಗಳು ಕಳೆದ ನಂತರ ತರಕಾರಿ ತರಲೆಂದು ಮಾರ್ಕೆಟ್ ಹೋಗಿದ್ದ. ಅಷ್ಟೊತ್ತಿಗೆ ಆ ಹುಡುಗಿಯ ವಿಷಯ ಸ್ವಲ್ಪ ಮರೆತಂತಾಗಿತ್ತು. ತರಕಾರಿ ತುಂಬಿದ ಚೀಲ ಹಿಡಿದುಕೊಂಡು ತನ್ನ ಬೈಕ್ ಹತ್ತಿರ ಬಂದು ಬೈಕ್ ಮೇಲೆ ಚೀಲವನ್ನಿಟ್ಟು ಉಸ್ಸಪ್ಪಾ! ಎಂದು ತಲೆ ಎತ್ತಿದ.. ಮುಂದೆ ಜನರ ನಡುವೆ ಮತ್ತದೇ ಹುಡುಗಿಯ ಮುಖ.. ಆ ದಿನ ರಾತ್ರಿ ತಾನು ನೋಡಿದ ಹುಡುಗಿ, ಪೇಪರ್ ನಲ್ಲಿ ಬಂದಿದ್ದ ಆತ್ಮಹತ್ಯೆ ಮಾಡಿಕೊಂಡ ಹುಡುಗಿ..! ಸಣ್ಣಗೆ ಬೆವರಿದ ಚೇತನ್.‌. ಆ ಹುಡುಗಿ ಚೇತನ್ ನನ್ನು ನೋಡಿ ಮುಗುಳ್ನಗು ಬೀರಿದಳು. ಮತ್ತೆ ಅತ್ತ ತಿರುಗಿ ಯಾರಿಗೋ ನಿಲ್ಲುವಂತೆ ಸೂಚಿಸುತ್ತ ಮುನ್ನಡೆದಳು. ಚೇತನ್ ಧೈರ್ಯ ಮಾಡಿ ಆ ಹುಡುಗಿಯತ್ತ ಹೆಜ್ಜೆ ಇಡತೊಡಗಿದ.. ಮಧ್ಯ ಬಸ್ಸೊಂದು ಬಂದು ನಿಂತಿದ್ದರಿಂದ ನಿಂತುಕೊಂಡ. ಬಸ್ ಹೊರಟುಹೋದ ಮೇಲೆ ನೋಡಿದರೆ ತನ್ನಿಂದ ಸ್ವಲ್ಪ ಮುಂದೆ ನಡೆಯುತ್ತಿದ್ದ ಹುಡುಗಿ ಕಾಣಲೇ ಇಲ್ಲ.. ಈಗ ಚೇತನ್ ನಿಜವಾಗಿಯೂ ಹೆದರಿಕೊಂಡ.. ಇದು ದೆವ್ವ ಎನ್ನುವ ಯೋಚನೆ ಬಂದಿತು. ಛೇ! ತಾನು ಎಂದಿಗೂ ದೆವ್ವವಿದೆ ಎಂದು ನಂಬಿದವನಲ್ಲ, ತನಗೇಕೆ ಹೀಗಾಗುತ್ತಿದೆ ಎಂದು ತನ್ನನ್ನು ಪ್ರಶ್ನಿಸಿಕೊಂಡು ತನ್ನ ಬೈಕ್ ನತ್ತ ಧಾವಿಸಿದ..

ಮನೆಗೆ ಬಂದ ಚೇತನ್ ಮಂಕಾಗಿದ್ದಿದ್ದನ್ನು ಕಂಡು ಚೇತನ್ ಅಮ್ಮ ಏನಾಯಿತೆಂದು ಕೇಳಿದರು. ಚೇತನ್ ತನ್ನ ತಾಯಿಯ ಹತ್ತಿರ ನಡೆದ ವಿಷಯವನ್ನು ಹೇಳಿಕೊಂಡ.ಮೊದಲೇ ದೆವ್ವ, ಭೂತ, ಪಿಶಾಚಿಗಳು, ಮಾಟ, ಮಂತ್ರ ನಂಬುತ್ತಿದ್ದ ಚೇತನ್ ತಾಯಿ ಯಾವುದೋ ದೆವ್ವವೇ ತನ್ನ ಮಗನ ಹಿಂದೆ ಬಿದ್ದಿದೆ ಎಂದುಕೊಂಡು ಭೀತರಾದರು.. "ಪಾದ ನೆಲದ ಮೇಲೆ ಇದ್ವಾ ಇಲ್ವಾ?" ಎಂದು ಪ್ರಶ್ನಿಸಿದರು. ಚೇತನ್ ಆ ದಿನ ರಾತ್ರಿ ತಡವಾಗಿದ್ದರಿಂದ ಮತ್ತು ಮಾರ್ಕೆಟ್ ನಲ್ಲಿ ಹುಡುಗಿಯ ಮುಖ ನೋಡಿ ಹೆದರಿದ್ದರಿಂದ ಏನನ್ನೂ ಸರಿಯಾಗಿ ಗಮನಿಸಲಿಲ್ಲವೆಂದ.. ಚೇತನ್ ಅಮ್ಮ ಏನಾದರಾಗಲಿ ಎಂದು ತಮಗೆ ಗೊತ್ತಿದ್ದ ಒಬ್ಬರು ಸ್ವಾಮಿಗಳ ಹತ್ತಿರ ತಾಯತ ಮಾಡಿಸಿಕೊಂಡು ಬಂದು ಚೇತನ್ ಗೆ ಕಟ್ಟಿದರು..

ಚೇತನ್ ಗೆ ಇಪ್ಪತ್ತೊಂಭತ್ತು ವಯಸ್ಸಾಗಿದ್ದರಿಂದ ಚೇತನ್ ತಾಯಿ ಅವನಿಗೆ ಮದುವೆ ಮಾಡಬೇಕೆಂದು ಯೋಚಿಸಿದರು. ತಮಗೆ ಪರಿಚಯದ ಜೋಯಿಸರಿಗೆ ಚೇತನ್ ಗೆ ಒಳ್ಳೆಯ ಮನೆತನದ ಹೆಣ್ಣುಗಳಿದ್ದರೆ ತಿಳಿಸಲು ಹೇಳಿದರು. ಚೇತನ್ ಗೆ ಈ ವಿಷಯ ತಿಳಿಸಿದಾಗ ಅಲ್ಲಿಯೇ ಇದ್ದ ಅವನ ತಂಗಿ "ಈ ಪುಕ್ಕಲನಿಗೆ ಮದುವೆಯಾ?ಬಂದವಳ ಗತಿ ಅಷ್ಟೇ " ಎಂದು ರೇಗಿಸಿದಳು. ಚೇತನ್ ಅವಳನ್ನು ಬೆನ್ನಟ್ಟಿಕೊಂಡು ಹೋಗಿ ಕಿವಿ ಹಿಂಡಿದ..

ಅಂದು ಚೇತನ್ ಗೆ ಹೆಣ್ಣು ನೋಡಲು ಚೇತನ್, ಅವನ ತಂಗಿ, ತಾಯಿ, ಜೋಯಿಸರು ಕಾರಿನಲ್ಲಿ ಹೊರಟರು. ಕಾರಿನ ಡ್ರೈವರ್ ಜೋಯಿಸರು ಹೇಳಿದ ಅಡ್ರೆಸ್ ಇರುವ ದಾರಿಯತ್ತ ಕಾರು ಚಲಾಯಿಸಿದ. ಚೇತನ್ ಆ ದಿನ ರಾತ್ರಿ ಆ ಹುಡುಗಿಯನ್ನು ಇಳಿಸಿದ್ದ ಊರಿನತ್ತ ಸಾಗುತ್ತಿತ್ತು. ಚೇತನ್ ಗೆ ನಡುಕ ಶುರುವಾಯಿತು."ಅಮ್ಮ ಇಲ್ಲಿಗ್ಯಾಕಮ್ಮ...ಬೇರೆ ಕಡೆ ಹುಡುಗೀನೇ ಸಿಗ್ತಿರ್ಲಿಲ್ವೇನಮ್ಮ.. ಈ ಕಡೆ ಬೇಡ ನಡಿಯಮ್ಮ" ಎಂದ ಭಯದಿಂದ. ಆಗ ಜೋಯಿಸರು "ಒಳ್ಳೆ ಮನೆತನದ ಹುಡುಗಿ, ನಮಗೆ ಪರಿಚಯದವರು.. ನೀನು ಸುಮ್ಮನಿರು, ಹುಡುಗಿ ನೋಡಿದ ಮೇಲೆ ಮಾತಾಡು.." ಎಂದು ಅವನ ಬಾಯ್ಮುಚ್ಚಿಸಿದರು. ಕಾರು ಆ ಹುಡುಗಿ ಅಂದು ಹೋದ ಒಳದಾರಿಯತ್ತ ಹೋದಾಗಲಂತೂ ಚೇತನ್ ಚಡಪಡಿಸತೊಡಗಿದ. ಒಂದು ಮನೆಯ ಮುಂದೆ ಡ್ರೈವರ್ ಕಾರು ನಿಲ್ಲಿಸಿದ. ಕಾರಿನಿಂದ ಎಲ್ಲರೂ ಇಳಿದರು. ಚೇತನ್ ಇಳಿಯದೇ ಕೂತಿರುವುದನ್ನು ನೋಡಿ ಅವನ ಅಮ್ಮ "ಲೋ, ಇಳಿಯೋ.. ನಿನಗೇ ಕಣೋ ಹೆಣ್ಣು ನೋಡಲು ಬಂದಿರುವುದು.." ಎಂದಾಗ ಅವನ ತಂಗಿ ಮುಸಿ ಮುಸಿ ನಗುತ್ತಿದ್ದಳು. ಎಲ್ಲರೂ ಒಳನಡೆದರು.. ಸೋಫಾ ಮೇಲೆ ಕುಳಿತ ಚೇತನ್ ತಲೆ ಎತ್ತದೇ ಭಯದಿಂದ ಕುಳಿತಿದ್ದ.. ಹುಡುಗಿ ಚಹ ಕಪ್ ನೊಂದಿಗೆ ಬಂದಳು. ಮೊದಲು ಹಿರಿಯರಿಗೆ ಚಹ ಕೊಟ್ಟು ಚೇತನ್ ಗೆ ಚಹ ಕೊಡಲು ಬಂದಾಗ ಅವಳಿಗೆ ಆಶ್ಚರ್ಯ.. ಅದೇ ಹುಡುಗ.. ತನನ್ನು ಆ ದಿನ ರಾತ್ರಿ ಬೈಕಿನಲ್ಲಿ ಕರೆದುಕೊಂಡು ಬಂದು ಮನೆ ಹತ್ತಿರ ಬಿಟ್ಟವನು.. ಅವಳ ಮುಖದಲ್ಲಿ ಮಂದಹಾಸ ಕಾಣಿಸಿತು. ಚಹ ತೆಗೆದುಕೊಳ್ಳಲು ಮುಖ ಮೇಲಿತ್ತಿದ ಚೇತನ್ "ದೆವ್ವ! ಅಮ್ಮ ಇವಳೇ ನಾನು ಅವತ್ತು ಹೇಳಿದ್ನಲ್ಲ.. ಅದೇ ದೆವ್ವ!.." ಇವಳು ಸತ್ತು ಹೋಗಿ ಆರು ತಿಂಗಳಾಯಿತು. ಸ್ವತಃ ನಾನೇ ಪೇಪರ್ ನಲ್ಲಿ ಓದಿದೀನಿ.. ನಡೀ ಅಮ್ಮ ಏಳು.. ಎಂದ. ಏಳಲೂ ಆಗುತ್ತಿಲ್ಲ. ಕಾಲುಗಳು ನಡುಗುತ್ತಿವೆ.. ಎಲ್ಲರೂ ಏನೂ ತಿಳಿಯದೇ ಮುಖ ಮುಖ ನೋಡಿಕೊಳ್ಳತೊಡಗಿದರು. ಆ ಹುಡುಗಿ ಅವನ ಭಯ ನೋಡಿ ನಗತೊಡಗಿದಳು. ಮತ್ತೇಕೋ ಕಣ್ಣಲ್ಲಿ ನೀರು ತಂದುಕೊಂಡು ಮಾತನಾಡಲು ಪ್ರಾರಂಭಿಸಿ.. "ನೀವು ಪೇಪರ್ ನಲ್ಲಿ ಓದಿದ್ದು ನಿಜ. ಆದರೆ ಸತ್ತದ್ದು ನಾನಲ್ಲ.. ನನಗಿಂತ ಐದು ನಿಮಿಷ ಮುಂಚೆ ಹುಟ್ಟಿದ ನನ್ನ ಅಕ್ಕ ಸೌಂದರ್ಯ.. ಅವಳು ಫೇಮಸ್ ಭರತನಾಟ್ಯ ಡ್ಯಾನ್ಸರ್.. ಅವಳು ಲವ್ ಮಾಡಿದ ಹುಡುಗ ಬೇರೆಯವಳನ್ನ ಮದ್ವೆ ಆದ ಅಂತ ಆತ್ಮಹತ್ಯ ಮಾಡಿಕೊಂಡಳು.. ನಾವೀಬ್ರೂ ಅವಳಿ ಸಹೋದರಿಯರು ಅಂತ ಗೊತ್ತಿಲ್ದಿರೋರು ನನ್ನ ನೋಡಿದ್ರೆ ನಿಮ್ ತರಾನೇ ಆಡ್ತಾರೆ. ಅವಳು ಆತ್ಮಹತ್ಯ ಮಾಡಿಕೊಂಡ ದಿನ ಹೈದರಾಬಾದ್ ನಲ್ಲಿನ ಚಿಕ್ಕಮ್ಮನ ಮನೆಲಿದ್ದೆ. ವಿಷಯ ತಿಳಿದು ಬಸ್ ಹತ್ತಿದೆ. ಆದರೆ ನಮ್ಮೂರಿನ ಲಾಸ್ಟ್ ಬಸ್ ಹೊರಟುಹೋಗಿತ್ತು. ಅದೇ ಟೈಮಿಗೆ ನೀವು ಬಂದ್ರಿ.‌. ಇನ್ನು ಮಾರ್ಕೆಟ್ ನಲ್ಲಿ ಸಿಕ್ಕಾಗ ಮಾತನಾಡಿಸೋಣವೆಂದುಕೊಂಡೆ. ಆದರೆ ನನ್ನ ಜೊತೆ ಬಂದಿದ್ದ ಪಕ್ಕದ ಮನೆ ಆಂಟಿ ಬಾಯಿ ಸರಿ ಇಲ್ಲ‌. ಯಾವುದಾದ್ರೂ ಹುಡುಗನ ಜೊತೆ ಮಾತಾಡಿದ್ರೆ ಸಂಬಂಧ ಕಟ್ಟಿ ಮಾತಾಡ್ತಾಳೆ.ಅದಕ್ಕೆ ಸುಮ್ಮನಾದೆ. ನೀವು ಹಿಂದೆ ಬರ್ತಿರುವಾಗ ಅಡ್ಡ ಬಂತಲ್ಲಾ ಆ ಬಸ್ ಗೆ ನಾವು ಹತ್ತಿದ್ದು. ಅದು ನಮ್ಮೂರಿಗೆ ಹೋಗುವ ಬಸ್ ಆಗಿತ್ತು. ಕಿಟಕಿಯಲ್ಲಿ ನಾನು ನಿಮ್ಮನ್ನು ನೋಡಿದೆ‌. ಆದರೆ ನೀವು ನನ್ನ ಗಮನಿಸಲಿಲ್ಲ‌. ದೆವ್ವ ಮಾಯಾ ಆಯ್ತು ಅನ್ಕೊಂಡಿರ್ತಿರಾ"ಎಂದು ನಡೆದದ್ದನ್ನು ವಿವರಿಸಿ ನಕ್ಕಳು..

ಎಲ್ಲರಿಗೂ ಸ್ವಲ್ಪ ಸಮಾಧಾನವೆನಿಸಿತು. ಆ ಹುಡುಗಿ ಐಶ್ವರ್ಯ ಚೇತನ್ ಗೂ ಹಿಡಿಸಿದ್ದಳು. ಚೇತನ್ ಮಡದಿಯಾಗಿ ಬಂದು ಅವನ ಮನೆ,ಮನ ತುಂಬಿದ್ದಳು. ಆ ದೆವ್ವದ ಪ್ರಸಂಗ ನೆನಪಾದಾಗ ಮನೆಯಲ್ಲಿ ನಗು ತುಂಬುತ್ತಿತ್ತು.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.